ಸನಾತನದ ‘ಮನೆಮನೆಗಳಲ್ಲಿ ಕೈದೋಟ ಅಭಿಯಾನ ಮಾಲಿಕೆ ೧೧
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/58349.html |
ಗುಜರಾತನಲ್ಲಿ ನೈಸರ್ಗಿಕ ಕೃಷಿ ಸಂಬಂಧಿತ ರಾಷ್ಟ್ರೀಯ ಪರಿಷತ್ತು ನೆರವೇರಿತು. ಈ ಪರಿಷತ್ತಿನಲ್ಲಿ ಗುಜರಾತನ ಮಾ. ರಾಜ್ಯಪಾಲ ಆಚಾರ್ಯ ದೇವವ್ರತ ಇವರು ನೈಸರ್ಗಿಕ ಕೃಷಿಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಪ್ರತಿಯೊಬ್ಬರೂ ಇದರಿಂದ ಬಹಳಷ್ಟನ್ನು ಕಲಿಯುವಂತಿದೆ. ಈ ಲೇಖನದಲ್ಲಿ ಆಚಾರ್ಯ ದೇವವ್ರತ ಇವರ ಭಾಷಣದ ಸಾರಾಂಶವನ್ನು ನೀಡಲಾಗಿದೆ !
೧. ಆಚಾರ್ಯ ದೇವವ್ರತ ಇವರು ಆರಂಭದಲ್ಲಿ ಗುರುಕುಲದ ಒಂದೂವರೆ ಸಾವಿರ ನಿವಾಸಿ ವಿದ್ಯಾರ್ಥಿಗಳಿಗಾಗಿ ಇತರರ ಹಾಗೆಯೇ ರಾಸಾಯನಿಕ ಕೃಷಿ ಮಾಡುತ್ತಿದ್ದರು
ಸ್ವತಃ ನಾನೊಬ್ಬ ಶಿಕ್ಷಕನಾಗಿದ್ದೇನೆ. ಅದರ ಜೊತೆಗೆ ನಾನು ಕೃಷಿಕನೂ ಆಗಿದ್ದೇನೆ. ಕೃಷಿಗಾಗಿ ನನ್ನ ನಿಯಮ ಏನಿದೆಯೋ, ಅದೇ ನಿಯಮಗಳು ಭಾರತದ ಪ್ರತಿಯೊಬ್ಬ ಕೃಷಿಕರ ಕೃಷಿಗೆ ಅನ್ವಯವಾಗುತ್ತದೆ. ನಾನು ಹರ್ಯಾಣದ ಕುರುಕ್ಷೇತ್ರದಲ್ಲಿನ ಗುರುಕುಲದಲ್ಲಿ ೩೫ ವರ್ಷ ಪ್ರಾಚಾರ್ಯನಾಗಿದ್ದೆನು. ಅಲ್ಲಿ ಒಂದೂವರೆ ಸಾವಿರ ಮಕ್ಕಳು ನಿವಾಸಿ ಪದ್ಧತಿಯಲ್ಲಿ ಶಿಕ್ಷಣ ಪಡೆಯುತ್ತಾರೆ. ಅವರ ಭೋಜನಕ್ಕಾಗಿ ಆಹಾರಧಾನ್ಯಗಳನ್ನು ಬೆಳೆಸುವ ವ್ಯವಸ್ಥೆಯನ್ನು ನಮ್ಮ ಗುರುಕುಲದ ೨೦೦ ಎಕರೆ ಹೊಲದಲ್ಲಿ ಮಾಡಲಾಗಿದೆ. ನಾನು ಸ್ವತಃ ೯೦ ಎಕರೆ ಕೃಷಿ ಮಾಡಿ ಅದರಿಂದ ಆ ಮಕ್ಕಳಿಗೆ ಗೋದಿ, ಇತರ ದವಸಧಾನ್ಯ ಹಾಗೂ ತರಕಾರಿಗಳ ವ್ಯವಸ್ಥೆ ಮಾಡುತ್ತಿದ್ದೆ. ನನ್ನಲ್ಲಿರುವ ಹೆಚ್ಚುವರಿ ಭೂಮಿಯನ್ನು ನಾನು ಇತರ ರೈತರಿಗೆ ಕೃಷಿ ಮಾಡಲು ಬಾಡಿಗೆಗೆ ಕೊಟ್ಟಿದ್ದೆನು.
೨. ಹೊಲದಲ್ಲಿ ಒಬ್ಬ ಕೆಲಸಗಾರನು ಕೀಟನಾಶಕದ ವಾಸನೆಯಿಂದ ಮೂರ್ಛೆ ಹೋದಾಗ ರಾಸಾಯನಿಕ ಕೃಷಿಯು ವಿಷಯುಕ್ತ ಕೃಷಿಯಾಗಿದ್ದು ಅದು ಅಯೋಗ್ಯ ಪದ್ಧತಿಯೆಂದು ಅರಿವಾಗುವುದು
ಒಂದು ದಿನ ಘಟನೆಯೊಂದು ಸಂಭವಿಸಿತು. ನನಗೆ ನನ್ನ ಹೊಲದಿಂದ ಒಂದು ಸುದ್ದಿ ಬಂದಿತು, ‘ಹೊಲದಲ್ಲಿ ಒಬ್ಬ ಕೆಲಸಗಾರನು ಕೀಟನಾಶಕವನ್ನು ಸಿಂಪಡಿಸುತ್ತಿದ್ದನು. ಬೇಸಿಗೆಯ ಕಾಲವಾಗಿತ್ತು. ಕೀಟನಾಶಕದ ವಾಸನೆಯಿಂದ ಅವನು ಹೊಲ ದಲ್ಲಿಯೇ ಮೂರ್ಛಿತನಾಗಿದ್ದನು. ನಾವು ಅವನನ್ನು ಆಸ್ಪತ್ರೆಗೆ ದಾಖಲಿಸಿದೆವು. ೨-೩ ದಿನಗಳಲ್ಲಿ ಅವನು ಸಾಮಾನ್ಯ ಸ್ಥಿತಿಗೆ ಬಂದನು. ಇಂತಹ ಘಟನೆಗಳು ಪದೇ ಪದೇ ಘಟಿಸುತ್ತವೆ, ಇದು ಎಲ್ಲ ರೈತರಿಗೂ ತಿಳಿದಿದೆ. ಆ ದಿನ ನನ್ನ ಮನಸ್ಸಿನಲ್ಲಿ ಒಂದು ವಿಚಾರ ಬಂತು, ನಾನು ಮಕ್ಕಳಿಗೆ ಉಣಿಸುವ ಅನ್ನಕ್ಕೆ ಅಂದರೆ ಗೋದಿ, ಅಕ್ಕಿ, ಬೇಳೆ, ತರಕಾರಿ ಇತ್ಯಾದಿಗಳಿಗೆ ಕೀಟನಾಶಕವನ್ನು ಸಿಂಪಡಿಸುತ್ತಿದ್ದೇನೆ. ಕೇವಲ ವಾಸನೆಯಿಂದಲೇ ಕೆಲಸಗಾರನಿಗೆ ಮೂರ್ಛೆ ತಪ್ಪುವಂತಹ ಆ ಕೀಟನಾಶಕವನ್ನು ನಾನು ಆಹಾರದಲ್ಲಿ ಬೆರೆಸಿ ಮುಗ್ಧ ಮಕ್ಕಳಿಗೆ ಕೊಡುತ್ತಿದ್ದೇನೆ. ಇದರ ಅರ್ಥ ನಾನು ದೊಡ್ಡ ಅಪರಾಧವನ್ನು ಮಾಡುತ್ತಿದ್ದೇನೆ. ಆ ದಿನದಿಂದ ನಾನು ‘ಇನ್ನು ಹೀಗೆ ಮಾಡುವುದಿಲ್ಲ, ಎಂದು ನಿರ್ಧರಿಸಿದೆನು.
೩. ಕೃಷಿ ತಜ್ಞರ ಹೇಳಿಕೆಗನುಸಾರ ಸಾವಯವ ಕೃಷಿಯನ್ನು ಆರಂಭಿಸಿದೆನು, ಆದರೆ ಅದರಿಂದ ರಾಸಾಯನಿಕ ಕೃಷಿಯಷ್ಟು ಉತ್ಪನ್ನ ಬರದೇ ಅದರಿಂದ ನಷ್ಟವಾಯಿತು
ನಾನು ಕೃಷಿ ತಜ್ಞರನ್ನು ಹಾಗೂ ಕೃಷಿ ಇಲಾಖೆಯ ಜನರನ್ನು ಭೇಟಿಯಾದೆನು. ಅವರು ‘ನಿಮಗೆ ಸಾವಯವ ಕೃಷಿಯ ಪರ್ಯಾಯವಿದೆ. ನೀವು ಸಾವಯವ ಕೃಷಿ ಮಾಡಬಹುದು ಎಂದು ಹೇಳಿದರು. ನಾನು ತಕ್ಷಣ ಹೊಂಡವನ್ನು ತೋಡಿಸಿದೆನು. ಅದರಲ್ಲಿ ಸೆಗಣಿಯನ್ನು ಹಾಕಿದೆನು. ಸೆಗಣಿಯನ್ನು ತಿನ್ನುವ ಎರೆಹುಳಗಳನ್ನು ತರಿಸಿದೆನು ಹಾಗೂ ಪದ್ಧತಿಗನುಸಾರ ಸಾವಯವ ಕೃಷಿಯನ್ನು ಆರಂಭಿಸಿದೆನು. ಮೊದಲನೆಯ ವರ್ಷ ೫ ಎಕರೆಯಲ್ಲಿ ನಾನು ಈ ಕೆಲಸ ಮಾಡಿದೆನು. ನನಗೆ ಏನೂ ಉತ್ಪನ್ನ ಬರಲಿಲ್ಲ. ಕೀಟಗಳು ಎಲ್ಲ ಉತ್ಪನ್ನವನ್ನು ತಿಂದುಹಾಕಿದವು. ಮುಂದಿನ ವರ್ಷವೂ ನಾನು ಅದನ್ನು ಹಾಗೆಯೇ ಮುಂದುವರಿಸಿದೆನು. ನನಗೆ ರಾಸಾಯನಿಕ ಕೃಷಿಯಿಂದ ಸಿಗುತ್ತಿದ್ದ ಉತ್ಪನ್ನದ ಶೇ. ೫೦ ರಷ್ಟು ಉತ್ಪನ್ನ ಸಿಕ್ಕಿತು. ಮೂರನೆಯ ವರ್ಷವೂ ನಾನು ಪುನಃ ಪ್ರಯತ್ನಿಸಿದೆನು. ಎಡೆಬಿಡದೆ ಪರಿಶ್ರಮಪಟ್ಟ ನಂತರ ನನಗೆ ಸುಮಾರು ಶೇ. ೮೦ ರಷ್ಟು ಉತ್ಪನ್ನವನ್ನು ಗಳಿಸಲು ಸಾಧ್ಯವಾಯಿತು.
೪. ಸಾವಯವ ಕೃಷಿಯು ಕೇವಲ ತೋರಿಕೆಗಾಗಿ ಇದೆ. ಸಾಮಾನ್ಯ ರೈತನಿಗೆ ಇದು ದುಬಾರಿಯಾಗುತ್ತದೆ, ಎಂದು ಅರಿವಾಗುವುದು
ಆದ್ದರಿಂದ ನಾನು ವಿಚಾರ ಮಾಡಿದೆ, ನನ್ನಲ್ಲಿ ೨೦೦ ಎಕರೆ ಭೂಮಿಯಾದರೂ ಇದೆ. ಯಾವ ರೈತರಲ್ಲಿ ಕೇವಲ ೨-೩ ಎಕರೆಭೂಮಿ ಇದೆಯೋ, ಅವರು ಈ ಸಾವಯವ ಕೃಷಿ ಮಾಡಿದರೆ, ಅವರಿಗೆ ನಷ್ಟವೇ ಆಗುವುದು. ಹಾಗಾದರೆ ಅವರ ಮಕ್ಕಳುಮರಿಗಳು ಹೇಗೆ ಬದುಕುವರು ? ಈ ಸಾವಯವ ಪದ್ಧತಿಯಿಂದ ನನ್ನ ಖರ್ಚು ಸ್ವಲ್ಪವೂ ಕಡಿಮೆಯಾಗಲಿಲ್ಲ. ನನ್ನ ಶ್ರಮವೂ ಕಡಿಮೆಯಾಗಲಿಲ್ಲ. ಉತ್ಪನ್ನ ಮಾತ್ರ ಕಡಿಮೆಯಾಯಿತು. ಈ ಕೃಷಿಯನ್ನು ಹೀಗೆ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಪುನಃ ರಾಸಾಯನಿಕ ಕೃಷಿಯನ್ನೇ ಮಾಡಬೇಕೇ ? ಎನ್ನುವ ವಿಚಾರ ಬರಲು ಆರಂಭವಾಯಿತು.
೫. ಪದ್ಮಶ್ರೀ ಸುಭಾಷ ಪಾಳೆಕರ ಇವರ ಮಾರ್ಗದರ್ಶನಕ್ಕನುಸಾರ ೫ ಎಕರೆ ಭೂಮಿಯಲ್ಲಿ ನೈಸರ್ಗಿಕ ಕೃಷಿ ಮಾಡಿ ನೋಡಲು ನಿರ್ಧರಿಸಿದೆನು
ಇದೇ ಸಮಯದಲ್ಲಿ ನನಗೆ ಸುಭಾಷ ಪಾಳೆಕರ ಇವರ ಪರಿಚಯವಾಯಿತು. ಶ್ರೀ. ಸುಭಾಷ ಪಾಳೆಕರ ಇವರು ‘ನೈಸರ್ಗಿಕ ಕೃಷಿಯ ವಿಷಯದಲ್ಲಿ ಅಗಾಧ ಸಂಶೋಧನೆಯನ್ನು ಮಾಡಿದ್ದಾರೆ. ನಾನು ಅವರನ್ನು ನನ್ನ ಗುರುಕುಲಕ್ಕೆ ಕರೆದು ೫೦೦ ರೈತರಿಗಾಗಿ ೫ ದಿನಗಳ ಶಿಬಿರವನ್ನು ಇಟ್ಟುಕೊಂಡೆನು. ಅದರಲ್ಲಿ ನಾನು ಸ್ವತಃ ಭಾಗವಹಿಸಿ ನೈಸರ್ಗಿಕ ಕೃಷಿಯ ಎಲ್ಲ ಮಾಹಿತಿಗಳನ್ನು ತಿಳಿದುಕೊಂಡೆನು ಹಾಗೂ ನನ್ನ ೫ ಎಕರೆ ಭೂಮಿಯಲ್ಲಿ ‘ನೈಸರ್ಗಿಕ ಕೃಷಿಯನ್ನು ಆರಂಭಿಸಿದೆನು.
೬. ನೈಸರ್ಗಿಕ ಕೃಷಿಯಿಂದ ಹಂತಹಂತವಾಗಿ ರಾಸಾಯನಿಕ ಕೃಷಿಗಿಂತಲೂ ಹೆಚ್ಚು ಉತ್ಪನ್ನ ಸಿಗುವುದು
ನನಗಾದ ಒಂದು ಒಳ್ಳೆಯ ಅನುಭವವೆಂದರೆ, ನೈಸರ್ಗಿಕ ಕೃಷಿಯಿಂದ ಮೊದಲ ವರ್ಷದಲ್ಲಿಯೇ ನನಗೆ ರಾಸಾಯನಿಕ ಕೃಷಿಯಿಂದ ಸಿಗುವ ಉತ್ಪನ್ನದಷ್ಟೇ ಉತ್ಪನ್ನವನ್ನು ಪಡೆಯಲು ಸಾಧ್ಯವಾಯಿತು. ಅದರ ಮುಂದಿನ ವರ್ಷ ನಾನು ೧೦ ಎಕರೆ ಭೂಮಿಯಲ್ಲಿ ನೈಸರ್ಗಿಕ ಪದ್ಧತಿಯ ಕೃಷಿ ಮಾಡಿದೆನು. ಅದರಲ್ಲಿಯೂ ಒಳ್ಳೆಯ ಅನುಭವವಾಯಿತು. ಅನಂತರ ನಾನು ನೇರವಾಗಿ ೯೦ ಎಕರೆ ಭೂಮಿಯಲ್ಲಿ ನೈಸರ್ಗಿಕ ಕೃಷಿ ಮಾಡಿದೆನು, ಅದರಲ್ಲಿಯೂ ನನಗೆ ರಾಸಾಯನಿಕ ಕೃಷಿಯಲ್ಲಿ ಎಷ್ಟು ಉತ್ಪನ್ನ ಬರುತ್ತಿತ್ತೋ, ಅಷ್ಟೇ ಉತ್ಪನ್ನ ಬಂತು. ಈಗ ನನಗೆ ರಾಸಾಯನಿಕ ಕೃಷಿಗಿಂತಲೂ ಹೆಚ್ಚು ಉತ್ಪನ್ನ ಬರುತ್ತಿದೆ.
೭. ಕೃಷಿಯಲ್ಲಿನ ರಾಸಾಯನಿಕದಿಂದ ಭೂಮಿ ಬರಡಾಗಿರುವುದರಿಂದ ರೈತರು ಭೂಮಿಯನ್ನು ಬಾಡಿಗೆಗೆ ತೆಗೆದುಕೊಳ್ಳಲು ನಿರಾಕರಿಸುವುದು
೨೦೧೭ ರಲ್ಲಿ ಇನ್ನೊಂದು ಘಟನೆ ಘಟಿಸಿತು. ನನ್ನ ಗುರುಕುಲದ ೧೧೦ ಎಕರೆ ಭೂಮಿಯನ್ನು ನಾನು ಕಳೆದ ೩೫ ವರ್ಷಗಳಿಂದ ರೈತರಿಗೆ ಬಾಡಿಗೆಗೆ ಕೊಡುತ್ತಿದ್ದೆನು, ಆ ರೈತರು ನನ್ನ ಭೂಮಿಯನ್ನು ವಾಪಾಸು ಬಿಟ್ಟುಕೊಟ್ಟರು. ಆ ಭೂಮಿಯಲ್ಲಿ ಏನೂ ಬೆಳೆ ಬರುವುದಿಲ್ಲ. ಅದರಲ್ಲಿ ನಮ್ಮ ಖರ್ಚು ಕೂಡ ದಕ್ಕುವುದಿಲ್ಲ. ಆದ್ದರಿಂದ ನಾವು ನಿಮ್ಮ ಭೂಮಿಯನ್ನು ಬಾಡಿಗೆಗೆ ತೆಗೆದು ಕೊಳ್ಳುವುದಿಲ್ಲ, ಎಂದು ಹೇಳಿ ಅವರು ಹೊಲವನ್ನು ಬಿಟ್ಟುಕೊಟ್ಟರು. ನನ್ನ ಚಿಂತೆ ಹೆಚ್ಚಾಯಿತು; ಏಕೆಂದರೆ ನಾನು ಅವರಿಗೆ ಫಲವತ್ತಾದ ಭೂಮಿಯನ್ನು ಕೊಟ್ಟಿದ್ದೆನು ಹಾಗೂ ಅವರು ಅದರಲ್ಲಿ ಏನೂ ಬೆಳೆಯುವುದಿಲ್ಲ ! ಎಂದು ಹೇಳುತ್ತಿದ್ದರು.
೮. ಕೃಷಿಯಲ್ಲಿ ಹಾನಿಕರ ರಾಸಾಯನಿಕಗಳ ಉಪಯೋಗದಿಂದ ಭೂಮಿಯಲ್ಲಿನ ಕಾರ್ಬನ್‌ನ ಪ್ರಮಾಣ ತುಂಬಾ ಕಡಿಮೆಯಾಗಿರುವುದು
ನಾನು ಹಿಸ್ಸಾರ್, ಹರ್ಯಾಣದ ಕೃಷಿ ವಿದ್ಯಾಪೀಠದ ಹಿರಿಯ ಕೃಷಿ ತಜ್ಞರು ಮತ್ತು ಕೃಷಿ ವಿಜ್ಞಾನ ಕೇಂದ್ರದ ಪ್ರಮುಖರಾಗಿರುವ ಡಾ. ಹರಿ ಓಮ್ ಇವರನ್ನು ಭೇಟಿಯಾಗಿ ಈ ಸಮಸ್ಯೆಯನ್ನು ಅವರ ಮುಂದಿಟ್ಟೆನು. ಅವರು, ‘ಮಣ್ಣಿನ ಮಾದರಿಯನ್ನು ಪರೀಕ್ಷಣೆ ಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಿ. ಅದರಿಂದ ಭೂಮಿಯ ಸ್ಥಿತಿ ಹೇಗಿದೆಯೆಂಬುದು ತಿಳಿಯುತ್ತದೆ ಎಂದು ಹೇಳಿದರು. ನಾವು ಭೂಮಿಯ ವಿವಿಧ ಭಾಗದ ನೂರಾರು ಮಾದರಿಗಳನ್ನು ವಿದ್ಯಾಪೀಠಕ್ಕೆ ಕಳುಹಿಸಿದೆವು. ನನ್ನ ಭೂಮಿಯಲ್ಲಿನ ಕಾರ್ಬನ್‌ನ ಪ್ರಮಾಣ ೦.೩ ಕ್ಕಿಂತಲೂ ಕಡಿಮೆಯಾಗಿದೆ ಎಂದು ವರದಿ ಬಂತು. ನಾನು ‘ಇದರ ಅರ್ಥವೇನು, ಎಂದು ಕೇಳಿದಾಗ ಡಾ. ಹರಿ ಓಮ್ ಇವರು “ನಿಮ್ಮ ಭೂಮಿ ಬರಡಾಗಿದೆ, ರೈತರು ಹೇಳುತ್ತಿದ್ದ ವಿಷಯ ನಿಜವಾಗಿದೆ. ನಿಮ್ಮ ಭೂಮಿಗೆ ಏನೂ ಉತ್ಪನ್ನ ಕೊಡುವ ಕ್ಷಮತೆಯಿಲ್ಲ ಎಂದು ಹೇಳಿದರು.
೯. ಹೊಲದಲ್ಲಿ ಬಳಸಿದ ಹಾನಿಕರ ರಾಸಾಯನಿಕಗಳು ಕಾರ್ಬನ್ ಉತ್ಪತ್ತಿ ಮಾಡುವ ಜೀವಾಣುಗಳನ್ನು ಕೊಂದು ಹಾಕುತ್ತಿದ್ದ ಕಾರಣ ಭೂಮಿ ಬರಡಾಗುತ್ತಿದೆ
ನಾನು ಸಂಪೂರ್ಣ ಭಾರತದ ಕೃಷಿಕರಲ್ಲಿ ವಿನಂತಿಸುವುದೆಂದರೆ ‘ಈ ಪರಿಸ್ಥಿತಿ ಉದ್ಭವಿಸಲು ಕಾರಣವೇನೆಂದು, ನೀವು ವಿಚಾರ ಮಾಡಬೇಕು. ರೈತರು ನನ್ನ ಭೂಮಿಯನ್ನು ಬಾಡಿಗೆಗೆ ತೆಗೆದುಕೊಂಡರು. ಅವರು ಹೆಚ್ಚೆಚ್ಚು ಬೆಳೆ ಬರಬೇಕೆಂದು ಹೆಚ್ಚೆಚ್ಚು ಯೂರಿಯಾ, ಡಿಎಪಿ ಹಾಗೂ ಕೀಟನಾಶಕಗಳನ್ನು ಉಪಯೋಗಿಸಿದ ಕಾರಣ ನನ್ನ ಫಲವತ್ತಾದ ಭೂಮಿಯು ಬರಡುಭೂಮಿಯಾಯಿತು. ಇಡೀ ದೇಶದ ಭೂಮಿಯ ಅವಸ್ಥೆ ಇದೇ ರೀತಿಯಾಗಿದೆ. ರಾಸಾಯನಿಕ ಕೃಷಿಯಲ್ಲಿನ ಯೂರಿಯಾ, ಡಿಎಪಿ ಹಾಗೂ ಕೀಟನಾಶಕ ಇತ್ಯಾದಿಗಳಿಂದಾಗಿ ಹೊಲದಲ್ಲಿನ ಕಾರ್ಬನ್ ಉತ್ಪತ್ತಿ ಮಾಡುವ ಎರೆಹುಳಗಳು ಮತ್ತು ಜೀವಾಣುಗಳು ಸತ್ತು ಹೋಗುತ್ತವೆ. ನನ್ನ ಹೊಲದಲ್ಲಿನ ಉಪಯುಕ್ತ ಜೀವಾಣುಗಳು ನಾಶವಾಗಿರುವುದರಿಂದ ನನ್ನ ಭೂಮಿ ಬರಡುಭೂಮಿಯಾಗಿತ್ತು.
ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ !ತಮಗೆ ಆವಶ್ಯಕವಿರುವ ತರಕಾರಿಗಳನ್ನು ಮನೆಯಲ್ಲಿಯೇ ಬೆಳೆಸಿ ! ರಾಸಾಯನಿಕ ಕೃಷಿ ಆರೋಗ್ಯಕ್ಕೆ ಎಷ್ಟು ಹಾನಿಕರವಾಗಿದೆ, ಎಂಬುದು ಈ ಲೇಖನದಿಂದ ಅರಿವಾಗುತ್ತದೆ. ಪೇಟೆಯಲ್ಲಿ ಸಿಗುವ ತರಕಾರಿಗಳಿಗೆ ವಿಷಯುಕ್ತ ರಾಸಾಯನಿಕಗಳನ್ನು ಸಿಂಪಡಿಸಿರುವುದರಿಂದ ಪ್ರತಿಯೊಬ್ಬರೂ ತಮಗೆ ಬೇಕಾಗುವಷ್ಟು ತರಕಾರಿಗಳನ್ನು ಮನೆಯಲ್ಲಿಯೇ ಬೆಳೆಸುದು ಲಾಭದಾಯಕವಾಗಿದೆ. ಮನೆಯಲ್ಲಿಯೇ ಅತೀ ಕಡಿಮೆ ಸ್ಥಳದಲ್ಲಿಯೂ ದಿನನಿತ್ಯ ತಮಗೆ ಬೇಕಾಗುವಷ್ಟು ತರಕಾರಿಗಳನ್ನು ಬೆಳೆಸಬಹುದು. ಅದಕ್ಕಾಗಿ ಸನಾತನ ಸಂಸ್ಥೆ ‘ಮನೆ ಮನೆಯಲ್ಲಿ ಕೈದೋಟ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಮೂಲಕ ಸನಾತನದ ಅನೇಕ ಸಾಧಕರು ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಸಲು ಆರಂಭಿಸಿದ್ದಾರೆ. – ಸಂಕಲನಕಾರರು |
ಕೈದೋಟಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕ ಲೇಖನ ಕಳುಹಿಸಿ‘ಗಿಡಗಳನ್ನು ಬೆಳೆಸುವುದು (ಕೃಷಿ ಮಾಡುವುದು) ಇದು ಒಂದು ಪ್ರಾಯೋಗಿಕ ವಿಷಯವಾಗಿದೆ. ಇದರಲ್ಲಿ ಚಿಕ್ಕ ಚಿಕ್ಕ ಅನುಭವಗಳಿಗೂ ಬಹಳ ಮಹತ್ವವಿರುತ್ತದೆ. ಯಾವ ಸಾಧಕರು ಇಲ್ಲಿಯವರೆಗೆ ಕೃಷಿಯನ್ನು ಮಾಡಿಲ್ಲವೋ, ಅವರು ಕೃಷಿಯನ್ನು ಮಾಡುವಾಗ ತಮಗೆ ಬಂದ ಅನುಭವ, ಆದ ತಪ್ಪುಗಳು, ಆ ತಪ್ಪುಗಳಿಂದ ಕಲಿಯಲು ಸಿಕ್ಕಿದ ಅಂಶಗಳು, ಕೃಷಿಗೆ ಸಂಬಂಧಿಸಿದಂತೆ ಮಾಡಿದ ವೈಶಿಷ್ಟ್ಯಪೂರ್ಣ ಪ್ರಯೋಗ ಇವುಗಳ ಬಗೆಗಿನ ಬರವಣಿಗೆಯನ್ನು ತಮ್ಮ ಛಾಯಾಚಿತ್ರದೊಂದಿಗೆ ಕಳುಹಿಸಬೇಕು. ಈ ಬರವಣಿಗೆಯನ್ನು ‘ಸನಾತನ ಪ್ರಭಾತದಲ್ಲಿ ಪ್ರಕಟಿಸಲಾಗುತ್ತದೆ. ಇದರಿಂದ ಇತರರಿಗೂ ಕಲಿಯಲು ಸಿಗುತ್ತದೆ. ಬರವಣಿಗೆಯನ್ನು ಕಳುಹಿಸಲು ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401 ಗಣಕೀಯ ವಿಳಾಸ : [email protected] |