ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ !

೨೦ ಜನವರಿ, ಗುರವಾರದಂದು ಬೆಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನಾ. ರಾ ಜಯಂತ, ಶ್ರೀ. ನಾರಾಯಣ ಗೌಡ, ಶ್ರೀ. ನೀಲೇಶ್ವರ ಮುಂತಾದವರು ಉಪಸ್ಥಿತರಿದ್ದರು.

ಮನವಿಯಲ್ಲಿ ಕರ್ನಾಟಕ ಸರಕಾರವು ರಾಮನಗರದ ಬಳಿ ೧೦೦ ಎಕರೆ ಜಮೀನಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ೩೫೯ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಸಂಸ್ಕೃತವು ಭಾರತದ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಕನ್ನಡ, ತೆಲಗು, ತಮಿಳು ಸೇರಿ ಎಲ್ಲ ಭಾರತೀಯ ಭಾಷೆಗಳ ಜನನಿ ಸಂಸ್ಕೃತವಾಗಿದೆ. ಅತ್ಯಂತ ವೈಜ್ಞಾನಿಕ, ಸಾತ್ತ್ವಿಕ, ಸರಳ ಮತ್ತು ಸುಂದರ ಭಾಷೆ ಸಂಸ್ಕೃತ ಭಾಷೆಯಾಗಿದೆ. ಭಾರತ ರತ್ನ ಅಂಬೇಡ್ಕರ್ ರವರು ಸಹ ಭಾರತದ ಸಂವಿಧಾನದ ರಚನಾ ಸಭೆಯಲ್ಲಿ ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕೆಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದರು. ಅದಕ್ಕೆ ಅನೇಕ ಕಾಂಗ್ರೆಸ್ ಮುಸ್ಲಿಂ ಸಂಸದರು ಕೂಡ ಸಹಮತ ವ್ಯಕ್ತಪಡಿಸಿದ್ದರು. ಕರ್ನಾಟಕದ ರಾಷ್ಟ್ರಕವಿ ಕುವೆಂಪುರವರು ಸಹ ಸಂಸ್ಕೃತವನ್ನು ಹಾಡಿ ಹೊಗಳಿದ್ದರು. ಆದರೆ ಇಂದು ಕಾಂಗ್ರೆಸ್ ನಾಯಕರು ರಾಜಕೀಯ ಕಾರಣಕ್ಕಾಗಿ ಪೂರ್ವಗ್ರಹ ಪೀಡಿತವಾಗಿ ಸಂಸ್ಕೃತವನ್ನು ದ್ವೇಷಿಸುತ್ತಿರುವುದು ಅತ್ಯಂತ ಖಂಡನೀಯವಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಇದನ್ನು ತೀವ್ರವಾಗಿ ಖಂಡಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮದುವೆ, ಉಪನಯನ, ಹಬ್ಬ-ಉತ್ಸವಗಳಲ್ಲಿ ಹೀಗೆ ಪ್ರತಿ ದಿನವು ಸಂಸ್ಕೃತ ಭಾಷೆಯನ್ನು ಉಪಯೋಗ ಮಾಡಲಾಗುತ್ತದೆ. ಇಂತಹ ಪವಿತ್ರ ಭಾಷೆಯನ್ನು ಪ್ರತಿಯೊಬ್ಬರೂ ಕಲಿಯುವುದು ಅತ್ಯಂತ ಅನಿವಾರ್ಯವಾಗಿದೆ. ಅದಕ್ಕಾಗಿ ಪ್ರತ್ಯೇಕ ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆಯ ನಿರ್ಣಯವನ್ನು ವಾಪಾಸು ಪಡೆಯಬಾರದು, ಆದಷ್ಟು ಬೇಗ ವಿಶ್ವವಿದ್ಯಾಲಯ ನಿರ್ಮಾಣವಾಗಬೇಕು ಮತ್ತು ಕನ್ನಡ ಶಾಲೆಯಲ್ಲಿ ಸಹ ಸಂಸ್ಕೃತ ಕಲಿಸಬೇಕು ಎಂದು ಸಮಿತಿಯು ಆಗ್ರಹ ಮಾಡುತ್ತಿದೆ.