ಜ್ವಾಜಲ್ಯಮಾನ ರಾಷ್ಟ್ರಭಕ್ತಿಯ ಪ್ರತೀಕ : ನೇತಾಜಿ ಸುಭಾಷಚಂದ್ರ ಬೋಸ್

ನೇತಾಜಿ ಸುಭಾಷಚಂದ್ರ ಬೋಸ್ ಇವರ ಜನ್ಮದಿನದ ನಿಮಿತ್ತ (ಜನವರಿ ೨೩)

ಸ್ವಾತಂತ್ರ್ಯಕ್ಕಾಗಿ ಆಝಾದ ಹಿಂದ್ ಸೇನೆ ಸ್ಥಾಪಿಸಿದ
ನೇತಾಜಿ ಸುಭಾಷಚಂದ್ರ ಬೋಸ್

ಭಾರತೀಯ ಸ್ವಾತಂತ್ರ್ಯದ ಇತಿಹಾಸದಲ್ಲಿ ಅನೇಕ ಕ್ರಾಂತಿಕಾರರು ತಮ್ಮ ಬಲಿದಾನದಿಂದ ಸ್ವಂತದ್ದೇ ಆದ ವಿಶಿಷ್ಟವಾದ ಸ್ಥಾನಮಾನವನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಈ ಎಲ್ಲ ಕ್ರಾಂತಿಕಾರರಲ್ಲಿ ಕೇವಲ ಭಾವನೆಗಳಿಗೆ ಬಲಿಯಾಗದೇ ವಿವೇಕಬುದ್ಧಿಯ ಸಹಾಯದಿಂದ ‘ನೀವು ನನಗೆ ರಕ್ತವನ್ನು ಕೊಡಿರಿ ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡುವೆನು’ ಎಂಬ ಕರೆಯನ್ನು ನೀಡುತ್ತಾ ತಮ್ಮಲ್ಲಿರುವ ತೇಜೋಮಯ ಕ್ಷಾತ್ರತೇಜಸ್ಸು ಮತ್ತು ಕೌಶಲ್ಯಪೂರ್ಣ ಸಂಘಟನೆಯ ದರ್ಶನವನ್ನು ನೀಡಿದವರೇ ನೇತಾಜಿ ಸುಭಾಷಚಂದ್ರ ಬೋಸ್. ಭಾರತೀಯರನ್ನು ಸಂಘಟಿಸಿ ಅವರನ್ನು ಬಲಾಢ್ಯ ಬ್ರಿಟಿಶ ಸಾಮ್ರಾಜ್ಯದ ವಿರುದ್ಧ ಸಶಸ್ತ್ರಕ್ರಾಂತಿಯ ದಿಕ್ಕಿನಲ್ಲಿ ಹೊರಳಿಸಿದಂತಹ ಮಹಾನ್ ನೇತಾರರೆಂದು ಸುಭಾಷಚಂದ್ರರ ಸ್ಥಾನವು ಇತಿಹಾಸದಲ್ಲಿ ಅಮರವಾಗಿದೆ. ಈ ನೇತಾರರ ಜನ್ಮದಿನದಂದು ಅವರ ಕ್ರಾಂತಿಕಾರ್ಯದ ಕಿರುಪರಿಚಯವನ್ನು ಮಾಡಿಕೊಳ್ಳುವಂತಹ ಲೇಖನವನ್ನು ಇಲ್ಲಿ ಕೊಡುತ್ತಿದ್ದೇವೆ.

ಇಂದು ಭಾರತವು ಸ್ವತಂತ್ರವಾಗಿದ್ದರೂ ಸಹ ಇಂದಿಗೂ ಚೀನಾ, ಪಾಕಿಸ್ತಾನದಂತಹ ಬಾಹ್ಯಶತ್ರುಗಳು ಮತ್ತು ಸ್ವಕೀಯರೇ ಆಗಿರುವಂತಹ ರಾಷ್ಟ್ರ ಮತ್ತು ಧರ್ಮ ದ್ರೋಹಿ ಶಕ್ತಿಗಳು ಅದನ್ನು ಕೊರೆದು ಹಾಕಿವೆ. ಆದುದರಿಂದ ಇಂದಿಗೂ ಈ ದೇಶದಲ್ಲಿ ದೇಶವಾಸಿಗಳು ಸಂಘಟಿತರಾಗಿ ಅವರಲ್ಲಿ ರಾಷ್ಟ್ರತೇಜಸ್ಸನ್ನು ಜಾಗೃತಗೊಳಿಸುವ ಆವಶ್ಯಕತೆಯಿದೆ. ಸುಭಾಷಚಂದ್ರರನ್ನು ಒಬ್ಬ ವ್ಯಕ್ತಿಯೆಂದು ನೋಡುವುದಕ್ಕಿಂತ ರಾಷ್ಟ್ರಭಕ್ತಿಯ ಒಂದು ಸಾಕಾರ ಮೂರ್ತಿಯ ಉದಾಹರಣೆಯೆಂದು ನೋಡುವುದು ಹೆಚ್ಚು ಯೋಗ್ಯವಾಗಿರುತ್ತದೆ. ಸುಭಾಷಚಂದ್ರರು ಎಂದರೆ ರಾಷ್ಟ್ರಜಾಗೃತಿಗಾಗಿ ಆವಶ್ಯಕವಿರುವಂತಹ ದೈವೀಗುಣಗಳ ಸಂಗ್ರಹವೇ ಆಗಿದ್ದರು. ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಲು ಈ ಗುಣಗಳನ್ನು ಅಧ್ಯಯನ ಮಾಡಿ ಅವುಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದೇ ಅವರ ಚರಣಗಳಿಗೆ ಅರ್ಪಿಸುವಂತಹ ಗೌರವದ ಶ್ರದ್ಧಾಂಜಲಿಯಾಗಿರುತ್ತದೆ.

೧. ಉತ್ತುಂಗ ರಾಷ್ಟ್ರಭಕ್ತಿಯ ಧ್ಯೇಯ ಮತ್ತು ಅದರಲ್ಲಿದ್ದ ಅಚಲ ಶ್ರದ್ಧೆ

ನೇತಾಜಿ ಸುಭಾಷಚಂದ್ರ ಬೋಸ್‌ರ ಜೀವನದಲ್ಲಿ ಒಂದೇ ಒಂದು ಧ್ಯೇಯವಿತ್ತು ಅದುವೇ ಭಾರತದ ಸ್ವಾತಂತ್ರ್ಯ. ಜೀವನದ ಕೊನೆಯ ವರೆಗೆ ಅನೇಕ ರೀತಿಯ ಅಡಚಣೆಗಳು ಬಂದರೂ ಅವರು ತಮ್ಮ ಧ್ಯೇಯದಿಂದ ಯಾವತ್ತೂ ವಿಚಲಿತರಾಗಲಿಲ್ಲ. ಈ ಸಂದರ್ಭದಲ್ಲಿ ತಮ್ಮ ೧೯ ನೆಯ ವಯಸ್ಸಿನಲ್ಲಿ ತಮ್ಮ ಮಿತ್ರರಿಗೆ ಬರೆದ ಒಂದು ಪತ್ರದಲ್ಲಿ ಅವರು, ‘ನನ್ನ ಜೀವನದಲ್ಲಿ ಅಚಲವಾದ ಧ್ಯೇಯವೊಂದಿದೆ ಎಂದು ನನಗೆ ದಿನ ಹೋದಂತೆ ಅನಿಸುತ್ತದೆ. ಜನರ ಮತಪ್ರವಾಹದಲ್ಲಿ ಕೊಚ್ಚಿಹೋಗುವವನು ನಾನಲ್ಲ. ಜನರು ನನ್ನನ್ನು ಒಳ್ಳೆಯವನು ಎನ್ನಬಹುದು ಅಥವಾ ಕೆಟ್ಟವನು ಎನ್ನಬಹುದು. ಅದು ಜಗತ್ತಿನ ನ್ಯಾಯವೇ ಆಗಿದೆ. ಆದರೆ ನನ್ನ ಸದ್ವಿವೇಕಬುದ್ಧಿಯಿಂದ ನಾನು ಮುಂದುವರಿಯುವುದರಿಂದ ನಾನು ವಿಚಲಿತನಾಗುವುದಿಲ್ಲ’ ಎಂದು ಹೇಳಿದ್ದಾರೆ.

೨. ಅಗಮ್ಯ ಆಶಾವಾದ ಮತ್ತು ಛಲವಾದಿ

ದ್ವಿತೀಯ ಮಹಾಯುದ್ಧದಲ್ಲಿ ಜರ್ಮನ್ ಮತ್ತು ಜಪಾನ್ ಸೋತ ಬಳಿಕ ಹತಾಶರಾಗದೇ ಅವರು ತಮ್ಮ ಸಹಚರರಿಗೆ, ‘ಮಿತ್ರರೇ, ಈ ತುರ್ತು ಪರಿಸ್ಥಿತಿಯಲ್ಲಿ ನಾನು ಆಜ್ಞೆಯ ಒಂದೇ ಶಬ್ದವನ್ನು ನಿಮಗೆ ಹೇಳುತ್ತೇನೆ. ಒಂದು ವೇಳೆ ನೀವು ಪರಾಜಯಗೊಂಡರೆ ಸ್ವಾಭಿಮಾನದಿಂದ ಮತ್ತು ಶಿಸ್ತಿನಿಂದ ಅದನ್ನು ಸ್ವೀಕರಿಸಿರಿ. ಹಿಂದೂಗಳ ಭಾವೀ ಪೀಳಿಗೆಯು ನಿಮ್ಮ ಈ ಅನುಪಮ ತ್ಯಾಗದಿಂದ ಸ್ವತಂತ್ರರಾದಾಗ ಅವರು ನಿಮಗೆ ಧನ್ಯವಾದವನ್ನು ನೀಡುವುದು ಮತ್ತು ಅತ್ಯಂತ ಗೌರವದಿಂದ ಜಗತ್ತಿಗೆ, ನಮ್ಮ ಪೂರ್ವಜರು ಅಸ್ಸಾಮ, ಮಣಿಪುರ, ಬ್ರಹ್ಮದೇಶಗಳಲ್ಲಿ ಹೋರಾಡಿದರು. ಆಗ ಅವರು ಸೋತು ಹೋಗಿದ್ದರೂ ಆ ತಾತ್ಕಾಲಿಕ ಪರಾಭವದಿಂದ ಅವರು ಅಂತಿಮ ಯಶಸ್ಸು ಮತ್ತು ಕೀರ್ತಿಯ ಮಾರ್ಗವನ್ನು ನಮಗೆ ತೋರಿಸಿದ್ದರು ಎಂದು ಹೇಳುವರು. ಭಾರತದ ಸ್ವಾತಂತ್ರ್ಯದ ಕುರಿತಾದ ನನ್ನ ಶ್ರದ್ಧೆಯು ಅಚಲವಾಗಿದೆ. ಭಾರತದ  ಮುಂಚೂಣಿಯಲ್ಲಿರುವ ಸ್ವಾತಂತ್ರ್ಯ ಸೈನಿಕರು ತಮ್ಮ ಪ್ರಾಣಗಳ ಬೆಲೆ ತೆತ್ತು ರಾಷ್ಟ್ರದ ಮಾನವನ್ನು ಶಾಶ್ವತವಾಗಿ ಕಾಪಾಡಬಹುದು ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ’ ಎಂದು ಹೇಳಿದ್ದರು. ಇದರಿಂದ ನೇತಾಜಿಯವರಲ್ಲಿ ಪರಾಭವದಲ್ಲಿಯೂ ವಿಜಯವನ್ನು ಕಾಣುವ ಸಕಾರಾತ್ಮಕವೃತ್ತಿಯು ಕಾಣಿಸುತ್ತದೆ.

೩. ಆತ್ಮಸಮರ್ಪಣೆಯ ಹಿಂದಿನ ತತ್ತ್ವಜ್ಞಾನ

ಸ್ವಾತಂತ್ರ್ಯಪ್ರಾಪ್ತಿಗಾಗಿ ಆತ್ಮಸಮರ್ಪಣೆಯನ್ನು ಸತತ ಸಿದ್ಧತೆಯಿರುವಂತಹ ಸುಭಾಷಚಂದ್ರರ ವಿಚಾರಗಳು ಮುಂದಿನಂತಿವೆ. ಆತ್ಮಯಜ್ಞವು ಯಾವತ್ತೂ ನಿಷ್ಫಲವಾಗುವುದಿಲ್ಲ. ಎಲ್ಲ ಕಾಲಗಳಲ್ಲಿ ಎಲ್ಲ ರಾಷ್ಟ್ರಗಳಲ್ಲಿ ಒಂದೇ ಒಂದು ನಿಯಮವು ಶಾಶ್ವತವಾಗಿ ವಿಜಯಿಯಾಗಿರುವುದು ಕಂಡುಬರುತ್ತದೆ. ಹುತಾತ್ಮರ ರಕ್ತ ಮಾಂಸದಿಂದಲೇ ಯಶಸ್ಸಿನ ಮಂದಿರಗಳನ್ನು ಕಟ್ಟಲಾಗುತ್ತದೆ ಎನ್ನುವುದೇ ಆ ನಿಯಮವಾಗಿದೆ. ಈ ನಶ್ವರವಾದ ಜಗತ್ತಿನಲ್ಲಿ ಪ್ರತಿಯೊಂದು ವಿಷಯವು ನಾಶವಾಗುವಂತಹದ್ದಾಗಿದೆ. ಕೇವಲ ವಿಚಾರಗಳು ಮತ್ತು ಧ್ಯೇಯಗಳು ಮಾತ್ರ ನಾಶವಾಗುವುದಿಲ್ಲ. ಒಬ್ಬ ವಿಚಾರವಂತರ ಹಿಂದೆ ಬಿದ್ದು ಯಾವುದಾದರೊಬ್ಬ ವ್ಯಕ್ತಿಯು ಮೃತ್ಯುವಾಗಬಹುದು, ಆದರೆ ಅವರ ಮೃತ್ಯುವಿನ ನಂತರ ಅದೇ ವಿಚಾರವು ಜನರಲ್ಲಿ ಅವತರಿಸುವುದು. ಇದೇ ರೀತಿ ವಿಶ್ವಚಕ್ರವು ತಿರುಗುತ್ತದೆ. ಒಂದು ಪೀಳಿಗೆಯ ತತ್ತ್ವಜ್ಞಾನವನ್ನು ಅಳವಡಿಸಿಕೊಂಡು ಇನ್ನೊಂದು ಪೀಳಿಗೆಯು ಯಶಸ್ವಿಯಾಗುತ್ತಿರುತ್ತದೆ. ನಮ್ಮ ತತ್ತ್ವಗಳ ಪುನರ್ಜನ್ಮವಾಗುವುದು ಎನ್ನುವುದಕ್ಕಿಂತ ಹೆಚ್ಚು ಸಮಾಧಾನವು ಬೇರೊಂದು ಇರಲಾರದು. ಆದುದರಿಂದ ತ್ಯಾಗ ಮಾಡಿದಾಗ ನಾವು ಯಾವುದೇ ವಿಷಯವನ್ನು ಕಳೆದುಕೊಂಡು ಕುಳಿತುಕೊಳ್ಳುವುದಿಲ್ಲ, ಏಕೆಂದರೆ ಅದರ ಫಲವು ದುಪ್ಪಟ್ಟಾಗಿ ಸಿಗುತ್ತದೆ. ವ್ಯಕ್ತಿಯು ಮೃತ್ಯುವನ್ನು ಸ್ವೀಕರಿಸುವುದರಿಂದ ಒಂದು ವೇಳೆ ರಾಷ್ಟ್ರವು ಜೀವಂತವಾಗುವುದಾದರೆ ಅದನ್ನು ಅತ್ಯಗತ್ಯವಾಗಿ ಸ್ವೀಕರಿಸಬೇಕು. ಹಿಂದುಸ್ಥಾನವು ಸ್ವತಂತ್ರವಾಗಬೇಕು ಎಂದು ಇಂದು ನಾನು ಮೃತ್ಯು ಕುಂಡದಲ್ಲಿ ಹಾರುತ್ತಿದ್ದೇನೆ. ಇದು ಅವರ ತತ್ತ್ವಜ್ಞಾನವಾಗಿತ್ತು ಅವರ ದೃಷ್ಟಿಯಿಂದ ರಾಷ್ಟ್ರಕ್ಕಾಗಿ ಮೃತ್ಯು ಎಂದರೆ ಒಂದು ಅವಕಾಶವೇ ಆಗಿತ್ತು.

ಕಾರ್ಯಕ್ಕೆ ಈಶ್ವರೀ ಅಧಿಷ್ಠಾನವಿರುವುದು ಮತ್ತು ಅದರಿಂದಲೇ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯವು ಉಂಟಾಗುವುದು.

(ಆಧಾರ : ಸುಭಾಷ, ಲೇಖಕರು : ಭಾ.ಕೃ. ಕೆಳಕರ, ಕಾಂಟಿನೆಂಟಲ್ ಪ್ರಕಾಶನ, ಪುಣೆ, ಪ್ರಥಮಾವೃತ್ತಿ ೧೯೪೬, ಸಂಕಲನಕಾರರು : ಡಾ. ಮಂಗಲ ಕುಮಾರ ಕುಲಕರ್ಣಿ, ಪುಣೆ.)