‘ನಾವು ಕ್ರಾಂತಿಕಾರಿಗಳ ಉತ್ಕಟ ರಾಷ್ಟ್ರಭಕ್ತಿಯ ಉತ್ತರಾಧಿಕಾರಿಗಳಾಗಿದ್ದೇವೆ’, ಎಂಬ ಬಗ್ಗೆ ಸಾರ್ಥಕವಾದ ಅಭಿಮಾನವಿರಬೇಕು !

ಜನವರಿ ೨೬ ರಂದು ಇರುವ ಪ್ರಜಾಪ್ರಭುತ್ವ ದಿನದ ನಿಮಿತ್ತ…

ಶ್ರೀ. ದುರ್ಗೇಶ ಪರುಳಕರ

ನಮ್ಮ ದೇಶದಲ್ಲಿ ಅಹಿಂಸಾವಾದದ ಅತಿರೇಕವಾಗಿದೆ. ಅದರ ಪರಿಣಾಮದಿಂದ ಶಸ್ತ್ರಗಳ ವಿಷಯದಲ್ಲಿ ಜಿಗುಪ್ಸೆಯನ್ನು ಹುಟ್ಟಿಸಲು ಪ್ರಯತ್ನಿಸುವುದು ಎಂಬ ಒಮ್ಮುಖ ಕಾರ್ಯಕ್ರಮವೇ ಆಗಿಬಿಟ್ಟಿತು. ಸಶಸ್ತ್ರ ಕ್ರಾಂತಿಕಾರಿಗಳ ಬಗ್ಗೆ ಅಭಿಮಾನವನ್ನಿಟ್ಟುಕೊಳ್ಳುವ ಮಾನಸಿಕತೆ ಉಳಿದಿಲ್ಲ. ಅವರನ್ನು ಕೊಲೆಗಾರರು, ಅಮಾನವೀಯರೆಂದು ಹೇಳಿ ಅವರನ್ನು ದೂರುವುದರಲ್ಲಿಯೇ ಧನ್ಯರೆನಿಸಿಕೊಳ್ಳುವ ವಿದ್ಯಾವಂತರ ವರ್ಗವು ಮುಂದೆ ಬಂತು. ದೇಶದ ಕ್ಷಾತ್ರವೃತ್ತಿ, ಕ್ಷಾತ್ರತೇಜವು ಮಬ್ಬಾಗಿ ಹೋಯಿತು. ಇಂದು ಪೊಲೀಸ್ ದಳದ ಹಾಗೂ ಸೈನ್ಯದಳದ ವೀರರಿಗೆ ಶೌರ್ಯವನ್ನು ಪ್ರದರ್ಶಿಸಲು ಸಾಧ್ಯವಿಲ್ಲದಂತಹ ಅವಸ್ಥೆ ಮತ್ತು ವ್ಯವಸ್ಥೆ ಉದ್ಭವಿಸಿದೆ. ಉಗ್ರವಾದಿಗಳಿಗೆ ಮಟ್ಟ ಹಾಕುವವರನ್ನು ಗೂಂಡಾಗಳು ಹಾಗೂ ಅಪರಾಧಿಗಳಲ್ಲಿ ಭಯವುಂಟು ಮಾಡುವವರನ್ನು ದೋಷಿಗಳೆಂದು ನಿರ್ಧರಿಸಿ ಅವರನ್ನು ಸೆರೆಮನೆಗೆ ಸಾಗಿಸಲಾಯಿತು. ಶೌರ್ಯಪದಕವನ್ನು ಗಳಿಸುವವರೆ ಶತ್ರುವಿಗೆ ಬಿರ್ಯಾನಿಯ ತಟ್ಟೆಯನ್ನು ನೀಡುವ ಪ್ರಸಂಗ ಉಂಟಾಯಿತು.

೧. ರಾಜಕಾರಣಿಗಳಿಂದ ಛತ್ರಪತಿ ಶಿವಾಜಿ ಮಹಾರಾಜರನ್ನು ‘ಜಾತ್ಯತೀತ’ರೆಂದು ನಿರ್ಧರಿಸುವ ಪ್ರಯತ್ನ

ಇಂದು ಪಠ್ಯಪುಸ್ತಕಗಳಲ್ಲಿ ಪರಕೀಯ ಆಕ್ರಮಣಕಾರರನ್ನು ಅತ್ಯಾಚಾರಿ, ಆಡಳಿತಗಾರರನ್ನು ಸಹಿಷ್ಣು, ನ್ಯಾಯವಾದಿ, ಮಾನವತಾವಾದಿಗಳೆಂದು ಗೌರವಿಸಲಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ಹಾಗೆ ಶೌರ್ಯವನ್ನು ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ. ಅವರ ರಣನೀತಿಯನ್ನು ಅವರ ವೀರತ್ವವನ್ನು ಮನಸಾರೆ, ಅಭಿಮಾನದಿಂದ ಸ್ವೀಕರಿಸುವ ಮಾನಸಿಕತೆ ಹಾಗೂ ವೈಚಾರಿಕ ಸಾಮರ್ಥ್ಯವಿಲ್ಲ ಮತ್ತು ಶಿವಾಜಿ ಮಹಾರಾಜರ ರಾಜನೀತಿಯನ್ನು ಟೀಕಿಸಲೂ ಸಾಧ್ಯವಾಗುವುದಿಲ್ಲ; ಆದ್ದರಿಂದ ಇಂದಿನ ರಾಜಕಾರಣಿಗಳು ಛತ್ರಪತಿ ಶಿವಾಜಿ ಮಹಾರಾಜರನ್ನೇ ‘ಜಾತ್ಯತೀತವಾದಿಯೆಂದು ನಿರ್ಧರಿಸಿ ಅವರ ಇತಿಹಾಸಕ್ಕೆ ಗೊತ್ತಿಲ್ಲದ ನಿರರ್ಥಕವಾದ ಬಣ್ಣಬಳಿಯುವ ಪ್ರಯತ್ನವನ್ನು ಆರಂಭಿಸಿದ್ದಾರೆ.

೨. ಕಳೆದ ೬೬ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣದ ಪಾಠವನ್ನು ಕಲಿಸದಿರುವುದು

ಸ್ವಾತಂತ್ರ್ಯಪೂರ್ವ ಕಾಲದ ಯುವಕರ ಮುಂದೆ ವೀರ ಸಾವರಕರರು ದೇಶದ ಸ್ವಾತಂತ್ರ್ಯದ ಧ್ಯೇಯವನ್ನಿಟ್ಟರು. ಅದಕ್ಕಾಗಿ ತೀವ್ರ ರಾಷ್ಟ್ರಭಕ್ತಿಯನ್ನು ಬೇರೂರಿಸಿದರು. ಅವರ ನಂತರ ಲೋಕಮಾನ್ಯ ತಿಲಕರು ಸಶಸ್ತ್ರ ಕ್ರಾಂತಿಕಾರಿಗಳ ಪೀಳಿಗೆಯ ಬೆಂಬಲಕ್ಕೆ ದೃಢವಾಗಿ ನಿಂತು ಅವರನ್ನು ಪ್ರೋತ್ಸಾಹಿಸಿದರು. ಅದೇ ಪದ್ಧತಿಯನ್ನು ನಂತರ ಸಾವರಕರ ಸಹೋದರರು ಅನುಸರಿಸಿದರು.

ಇಂದಿನ ನಮ್ಮ ಸ್ವತಂತ್ರ ಹಿಂದುಸ್ಥಾನದ ಯುವಕರ ಮುಂದೆ ರಾಷ್ಟ್ರಹಿತದ ದೃಷ್ಟಿಯಲ್ಲಿ ಯಾವುದೇ ಭವ್ಯ ಧ್ಯೇಯ ಅಥವಾ ಕನಸನ್ನು ಇಡಲು ನಮಗೆ ಸಾಧ್ಯವಾಗಿಲ್ಲ. ನಮ್ಮ ಶಾಲೆಗಳ ಅಥವಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ನಾವು ಕಳೆದ ೬೬ ವರ್ಷಗಳಲ್ಲಿ ರಾಷ್ಟ್ರೀಯ ಶಿಕ್ಷಣದ ಪಾಠವನ್ನು ಕಲಿಸಲು ಸಾಧ್ಯವಾಗಿಲ್ಲ. ‘ನಮ್ಮ ದೇಶ ಯಾವುದೇ ರಕ್ತಪಾತವಿಲ್ಲದೆ, ಶಸ್ತ್ರಗಳಿಲ್ಲದೆ ಸ್ವತಂತ್ರವಾಯಿತು’, ಎನ್ನುವ ಅಪ್ಪಟ ಸುಳ್ಳನ್ನು ಹೇಳಲಾಗುತ್ತದೆ ಹಾಗೂ ಅದರ ವಿಷಯದಲ್ಲಿ ಯಾರಿಗೂ ದುಃಖ ಅಥವಾ ನಾಚಿಕೆ ಆಗುವುದಿಲ್ಲ. ಪಠ್ಯಪುಸ್ತಕದ ಮೂಲಕ ಪಾಶ್ಚಾತ್ಯರು ಬರೆದಿರುವ ಇತಿಹಾಸವನ್ನು ನಾವು ಮಕ್ಕಳಿಗೆ ಕಲಿಸುತ್ತೇವೆ ಹಾಗೂ ೬೬ ವರ್ಷಗಳಲ್ಲಿ ನಮ್ಮ ಮಕ್ಕಳ ಪ್ರತಿಕಾರದ ಶಕ್ತಿಯನ್ನು ನಾವೇ ಚಿವುಟಿ ಹಾಕಿದೆವು.

೩. ಇತಿಹಾಸವನ್ನು ಓದುವುದರಿಂದ ರಾಷ್ಟ್ರೀಯ ಕರ್ತವ್ಯದ ಅರಿವು ಹೆಚ್ಚು ತೀಕ್ಷ್ಣವಾಗುತ್ತದೆ

ನಮ್ಮ ದೇಶದ ಯುವ ಪೀಳಿಗೆಯಲ್ಲಿ ಜಾಣತನವಿದೆ. ವಿದೇಶಕ್ಕೆ ಹೋಗಿ ಈ ಯುವಕರು ಅಲ್ಲಿಯೇ ನೆಲೆಸುತ್ತಾರೆ. ಅವರಿಗೆ ಸ್ವದೇಶದ ವಿಷಯದಲ್ಲಿ ಒಲವು ಇದೆಯೆಂದು ಹೇಳಲು ಧೈರ್ಯ ಬರುವುದಿಲ್ಲ. ನಮ್ಮ ಮಕ್ಕಳ ಮನಸ್ಸಿನಲ್ಲಿ ದೇಶಭಕ್ತರ ಮಹತ್ವದ ಕಾರ್ಯಗಳ, ತ್ಯಾಗದ, ರಾಷ್ಟ್ರನಿಷ್ಠೆಯ ಆದರ್ಶ ಸಂಸ್ಕಾರವನ್ನು ಮೂಡಿಸಬೇಕು. ಅವರಿಗೆ ದೇಶಭಕ್ತರ ಜೀವನ ಚರಿತ್ರೆಯ ಪರಿಚಯ ಮಾಡಿಕೊಡಬೇಕು. ಅದಕ್ಕಾಗಿ ಅವರಿಗೆ ಇತಿಹಾಸವನ್ನು ಪರಿಚಯಿಸಬೇಕು. ಇತಿಹಾಸವನ್ನು ಓದಿದರೆ ಹಿಂದಿನ ಕಾಲದ ಘಟನೆಗಳ ಅಭ್ಯಾಸವಾಗುತ್ತದೆ; ಅವರಲ್ಲಿ ತಮ್ಮ ರಾಷ್ಟ್ರೀಯ ಕರ್ತವ್ಯದ ಅರಿವನ್ನು ಹೆಚ್ಚು ತೀಕ್ಷ್ಣಗೊಳಿಸುವುದು ಅತೀ ಆವಶ್ಯಕವಾಗಿದೆ. ಅದರ ಮಹತ್ವವನ್ನು ಮನದಟ್ಟು ಮಾಡಬೇಕು. ಯಾವ ಸಮಾಜದಲ್ಲಿ ಇತಿಹಾಸವನ್ನು ಅಭ್ಯಾಸ ಮಾಡುವ ವೃತ್ತಿ ನಾಶವಾಗುತ್ತದೊ, ಆ ಸಮಾಜದ ಅವನತಿಯಾಗುತ್ತದೆ. ಆ ರಾಷ್ಟ್ರವು ಶವಸಮಾನವಾಗುತ್ತದೆ. ಕೇವಲ ಭೌತಿಕ ಹಾಗೂ ಆರ್ಥಿಕ ವಿಕಾಸದಿಂದ ರಾಷ್ಟ್ರ ಬಲಿಷ್ಠವಾಗುವುದಿಲ್ಲ. ಅದಕ್ಕಾಗಿ ಅವ್ಯಭಿಚಾರಿ ರಾಷ್ಟ್ರನಿಷ್ಠೆ ಇರಬೇಕಾಗುತ್ತದೆ. ದೃಢನಿಶ್ಚಯದ ಮನಸ್ಸಿರಬೇಕು. ರಾಷ್ಟ್ರರಕ್ಷಣೆಗಾಗಿ ಹೋರಾಡಲು ಬೇಕಾಗುವ ಪ್ರತಿಕಾರ ನಿಷ್ಠೆ ಇರಬೇಕು. ಇವೆಲ್ಲ ವಿಷಯಗಳು ಇತಿಹಾಸದ ಅಭ್ಯಾಸ ಮಾಡುವುದರಿಂದಲೇ ಪ್ರಾಪ್ತಿಯಾಗುತ್ತದೆ.

೪. ವೀರ ಸಾವರಕರರ ಭಾವನೆ ದೇಶದ ಪ್ರತಿಯೊಬ್ಬ ಯುವಕನಲ್ಲಿ ಮೂಡುವುದು ಆವಶ್ಯಕವಾಗಿದೆ !

ಇಂದು ನಮ್ಮ ದೇಶವು ಅನೇಕ ಸಮಸ್ಯೆಗಳಿಂದ ಸುತ್ತುವರಿದಿದೆ. ನಮ್ಮ ದೇಶವು ಅಭದ್ರ ದೇಶವೆಂದು ಜಗತ್ತಿನಾದ್ಯಂತ ಗುರುತಿಸಲ್ಪಡುತ್ತದೆ. ನಮ್ಮದೇ ದೇಶಬಾಂಧವರು ನಮ್ಮ ದೇಶದಲ್ಲಿ ‘ಶಿಸ್ತು ಮತ್ತು ಸ್ವಚ್ಛತೆಯ ಅಭಾವವಿದೆ’, ಎಂದು ಕಾರಣವನ್ನು ಹೇಳಿ ವಿದೇಶದಲ್ಲಿ ನೆಲೆಸುತ್ತಾರೆ. ತದ್ವಿರುದ್ಧ ದೇಶವು ಸಂಕಟಕ್ಕೀಡಾಗಿರುವಾಗ, ಶಿಸ್ತಿಲ್ಲದಿರುವಾಗ, ಅಸ್ವಚ್ಛವಾಗಿರುವಾಗ ನಾವು ಇನ್ನೆಲ್ಲಿಯೋ ಹೋಗಿ ನೆಲೆಸುವುದು ರಾಷ್ಟ್ರಾಭಿಮಾನವಲ್ಲ. ತದ್ವಿರುದ್ಧ ‘ಸ್ವಯಂಶಿಸ್ತು ಮತ್ತು ರಾಷ್ಟ್ರಾಭಿಮಾನದ ಪಾಠವನ್ನು ನಮ್ಮ ಬಾಂಧವರಿಗೆ ನೀಡಲು ನಿಷ್ಠೆಯೊಂದಿಗೆ ಕಾರ್ಯ ಮಾಡಲು ಬೇಕಾಗುವ ವೃತ್ತಿಯನ್ನು ನಾನು ನನ್ನ ಬಾಂಧವರಲ್ಲಿ ಮೂಡಿಸುವೆನು’, ಎನ್ನುವ ಧ್ಯೇಯವನ್ನಿಟ್ಟುಕೊಳ್ಳುವ ಯುವಕರ ಸೇನೆ ಬೇಕಾಗಿದೆ. ‘ಇಲ್ಲಿ ಅನೇಕ ಬಂಗಲೆಗಳಿದ್ದರೂ, ನನಗೆ ನನ್ನ ದೇಶದ ನನ್ನ ತಾಯಿಯ ಗುಡಿಸಲೆ ಹೆಚ್ಚು ಪ್ರಿಯವಾಗಿದೆ’, ಎನ್ನುವ ಆರ್ತಭಾವನೆಯೊಂದಿಗೆ ಜೀವಿಸುತ್ತಿದ್ದ ವೀರ ಸಾವರಕರರನ್ನು ಇಂದು ಎಷ್ಟು ಯುವಕರು ಸ್ಮರಿಸುತ್ತಿದ್ದಾರೆ ?

ದೇಶದ ವಿಷಯದಲ್ಲಿ ಒಲವು, ಉತ್ಕಟ ಭಾವನೆ ಇಲ್ಲದಿದ್ದರೆ, ಆ ದೇಶದ ಉತ್ಕರ್ಷಕ್ಕಾಗಿ ಏನಾದರೂ ಮಾಡಬೇಕೆಂದು ಯುವಕರಿಗೆ ಅನಿಸಲಿಕ್ಕಿಲ್ಲ. ‘ನಾನು ಸಂಪಾದಿಸಿದ ಜ್ಞಾನ, ಗಳಿಸಿದ ವಿದ್ಯೆಯು ದೇಶಕ್ಕಾಗಿಯೇ ಉಪಯೋಗವಾದರೆ ಮಾತ್ರ ಅದು ಸಾರ್ಥಕವಾಗುವುದು, ಇಲ್ಲದಿದ್ದರೆ, ಆ ಭಾರ, ಆ ಹೊರೆಯನ್ನೇ ನಾವು ಜೀವಮಾನವಿಡೀ ಜೋಪಾನ ಮಾಡಬೇಕಾಗುತ್ತದೆ’, ಈ ವೀರಸಾವರಕರರ ಭಾವನೆಯು ದೇಶದ ಪ್ರತಿಯೊಬ್ಬ ಯುವಕರಲ್ಲಿಯೂ ಇರಬೇಕು; ದೇಶಭಕ್ತ ಕ್ರಾಂತಿಕಾರಿಗಳ ಸೇವಾಭಾವಿ ವೃತ್ತಿ, ಕೃತಜ್ಞತೆಯ ಭಾವ ಹಾಗೂ ಪರಾಕಾಷ್ಠೆಯ ತ್ಯಾಗದ ವೃತ್ತಿ, ಹೋರಾಡುವ ಕೆಚ್ಚೆದೆ ಇತ್ಯಾದಿಗಳ ಉತ್ತರಾಧಿಕಾರ ನಮ್ಮದಾಗಿದೆ, ಎಂದು ಇಂದಿನ ಪೀಳಿಗೆಯು ತಿಳಿದು ಹಾಗೆ ವರ್ತಿಸಿದರೆ, ದೇಶದ ಎಲ್ಲ ಸಮಸ್ಯೆಗಳು ನಿವಾರಣೆಯಾಗುವವು ಹಾಗೂ ದೇಶವು ಬಲಿಷ್ಠವಾಗುವುದು.

೫. ದೇಶವಿಘಾತಕ ವಿಷಯಗಳನ್ನು ತಡೆಗಟ್ಟಲು ಪೂರ್ವಜರ ಪರಾಕ್ರಮದ ಪರಿಚಯವು ಆವಶ್ಯಕವಾಗಿದೆ !

ದೇಶದ ನಕ್ಸಲವಾದ, ಉಗ್ರವಾದಿ ಕಾರ್ಯಾಚರಣೆ, ಚೀನಾದ ನುಸುಳುವಿಕೆ, ಬಾಂಗ್ಲಾದೇಶ, ಪಾಕಿಸ್ತಾನದ ವೈರತ್ವ ಇವೆಲ್ಲ ದೇಶದ ಅರ್ಥವ್ಯವಸ್ಥೆಗೆ ಆಘಾತ ಮಾಡುತ್ತಿವೆ. ಆ ದೇಶಗಳ ನಾಗರಿಕರು ದೇಶದಲ್ಲಿ ನುಸುಳಿ ಕೋಲಾಹಲವೆಬ್ಬಿಸುತ್ತಿದ್ದಾರೆ. ಭೂಮಿಯನ್ನು ಕಬಳಿಸುತ್ತಿದ್ದಾರೆ. ದೇಶದ ಬೆನ್ನುಹುರಿಯನ್ನೇ ಮುರಿಯುವ ಉದ್ಯೋಗ ನಡೆಯುತ್ತಿದೆ. ಸರಕಾರದಿಂದ ಇವೆಲ್ಲದಕ್ಕೂ ಕಡಿವಾಣ ಹಾಕಲು ಸಾಧ್ಯವಾಗುವುದಿಲ್ಲ. ನಾಗರಿಕರು ಉದಾಸೀನರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಪೂರ್ವಜರ ಪರಾಕ್ರಮದ ಕಥನಗಳನ್ನು ಮತ್ತು ಅವರ ವಿಜಿಗೀಷು ವೃತ್ತಿಯ ಪರಿಚಯ ನಮಗಾಗುವ ಅವಶ್ಯಕತೆಯಿದೆ.

೬. ಕುವಿಚಾರಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಅವಶ್ಯಕತೆಯಿದೆ !

ಇಂದು ಅಭಿವ್ಯಕ್ತಿಸ್ವಾತಂತ್ರ್ಯ, ವಿಚಾರಸ್ವಾತಂತ್ರ್ಯಗಳ ಹೆಸರಿನಲ್ಲಿ ಅಪಶಬ್ದ, ಅನ್ಯಾಯ ಹಾಗೂ ಅಸತ್ಯದ, ಕುವಿಚಾರಗಳ ಪ್ರಸಾರವಾಗುತ್ತಿದ್ದರೆ, ಆ ವಿಚಾರ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಸ್ವಾತಂತ್ರ್ಯವು ದೇಶಕ್ಕೆ, ಸಮಾಜಕ್ಕೆ ಹಾನಿಕರವಾಗಿದೆ; ಆದ್ದರಿಂದ ಅದಕ್ಕೆ ನಿರ್ಬಂಧವನ್ನು ಹಾಕಲೇಬೇಕು. ಇಂತಹ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಸರಕಾರವು ಧೈರ್ಯ ತೋರಿಸುವುದಿಲ್ಲ. ಅದರ ಪರಿಣಾಮದಿಂದ ದೇಶದಲ್ಲಿ ವೈಚಾರಿಕ ಗೊಂದಲಕ್ಕೆ, ಆಕ್ರೋಶಕ್ಕೆ ಮಾರ್ಗ ಸಿಗುತ್ತದೆ. ಇತಿಹಾಸದ ಅಭ್ಯಾಸವಿಲ್ಲದೇ ಐತಿಹಾಸಿಕ ಘಟನೆಗಳ ಬಗ್ಗೆ ವ್ಯಾಖ್ಯಾನ ಮಾಡಿ ಅಯೋಗ್ಯ ಪದ್ಧತಿಯಲ್ಲಿ ಅವುಗಳ ವಿಶ್ಲೇಷಣೆ ಮಾಡುವ ವಿದ್ವಾಂಸರ ಸಮೂಹ ನಮ್ಮ ದೇಶದಲ್ಲಿದೆ.

೭. ಯುವಕರಲ್ಲಿ ವೀರತ್ವ, ಶೌರ್ಯ ಹಾಗೂ ವಿಜಿಗೀಷು ವೃತ್ತಿಯಿಂದ ರಾಷ್ಟ್ರ ಉನ್ನತವಾಗುತ್ತದೆ

ಯುವಕರು ತಾರುಣ್ಯದ ಜೀವನವನ್ನು ಮೋಜುಮಜಾ, ಮಸ್ತಿ ಇತ್ಯಾದಿಗಳಲ್ಲಿ ವ್ಯರ್ಥಗೊಳಿಸಲಿಕ್ಕಲ್ಲ, ಅದನ್ನು ರಾಷ್ಟ್ರಕಾರ್ಯಕ್ಕಾಗಿ ವ್ಯಯಿಸಬೇಕು. ಕೇವಲ ವಿಲಾಸಮಯ ಜೀವನವು ಮನುಷ್ಯನ ಹಾಗೂ ಸಮಾಜದ ಜೀವನವನ್ನು ಅವನತಿಗೆ ತಳ್ಳುತ್ತದೆ. ಕಳಂಕಿತಗೊಳಿಸುತ್ತದೆ. ತಾರುಣ್ಯದಲ್ಲಿನ ವೀರತ್ವವು, ಶೌರ್ಯ, ಕ್ಷಾತ್ರತೇಜ, ವಿಜಿಗೀಷುವೃತ್ತಿಯು ಸಮಾಜವನ್ನು ಮತ್ತು ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಒಯ್ಯುತ್ತದೆ. ಇದು ಸ್ವಾತಂತ್ರ್ಯಪೂರ್ವದ ೨೦ ರಿಂದ ೨೫ ವರ್ಷ ವಯಸ್ಸಿನ ಯುವ ದೇಶಭಕ್ತರಿಗೆ ಅರಿವಾಗಿತ್ತು ಹಾಗೂ ಅವರು ಅಂತಹ ಕೃತಿಗಳನ್ನು ಮಾಡಿದ್ದಾರೆ.

೮. ವಸ್ತು ಮತ್ತು ಇಂದ್ರಿಯಗಳ ಗುಲಾಮನಾಗದಿರುವುದೇ ನಿಜವಾದ ಪುರುಷಾರ್ಥ !

ಇಂದಿನ ಯುವಕರು ವಾಸನಾವಿಕಾರವನ್ನು ಜಯಿಸಿ ತಮ್ಮ ಹಾಗೂ ಸಮಾಜದ ಮಾನಸಿಕ, ವೈಚಾರಿಕ ಆರೋಗ್ಯವನ್ನು ಜೋಪಾನ ಮಾಡುತ್ತಾ ಸಂಯಮದ ಜೀವನ ನಡೆಸುವ ಸಂಸ್ಕಾರವನ್ನು ಮಾಡಿಕೊಳ್ಳಬೇಕು. ರಾಷ್ಟ್ರಭಕ್ತಿಯ ಅಮಲೇರಿದರೆ, ಭೌತಿಕ ಸುಖದ ಒಲವು ಕೂಡ ಇರುವುದಿಲ್ಲ. ವಿಷಯಾಂಧರಾಗಿ ಶರೀರಸುಖದಲ್ಲಿ ಹೊರಳಾಡುವವರಲ್ಲಿ ಯಾರಿಗೂ ರಾಷ್ಟ್ರನಿರ್ಮಾಣದ ಸಂಸ್ಕಾರ ಮಾಡಿಸಲು ಸಾಧ್ಯವಿಲ್ಲ ಈ ಲಂಪಟತನವೇ ಗುಲಾಮಗಿರಿ !

ನಾನು ವಸ್ತು ಮತ್ತು ಇಂದ್ರಿಯಗಳ ಗುಲಾಮನಾಗುವುದಿಲ್ಲ. ಇದರಲ್ಲಿ ನಿಜವಾದ ಪುರುಷಾರ್ಥವಿದೆ. ಐತಿಹಾಸಿಕ ಹಾಡುಗಳನ್ನು ವೀರರ ಬಗ್ಗೆ ಹಾಡಲಾಗುತ್ತದೆ, ವಿಷಯಾಂಧತೆಯದ್ದಲ್ಲ ಎಂಬುದನ್ನು ಮರೆಯಬಾರದು. ಇಂದು ನಮ್ಮ ಸಮಾಜದಲ್ಲಿ ಸ್ತ್ರೀಯರ ಮೇಲಾಗುವ ಬಲಾತ್ಕಾರದ ಘಟನೆಗಳಿಂದ ಮನಸ್ಸಿಗೆ ನೋವಾಗುತ್ತದೆ. ಪರಸ್ತ್ರೀ ಮಾತೆಗೆ ಸಮಾನವೆಂದು ನಂಬುವುದು ನಮ್ಮ ಸಂಸ್ಕೃತಿಯಾಗಿದೆ, ಆದರೂ ಸ್ತ್ರೀಯನ್ನು ಉಪಭೋಗಿಸುವ ವಸ್ತುವೆಂದು ನೋಡುವ ಜನರ ವಿಷಯದಲ್ಲಿ ಆಕ್ರೋಶವುಂಟಾಗುತ್ತದೆ.

೯. ಕ್ರಾಂತಿಕಾರಿಗಳ ಬಲಿದಾನವನ್ನು ಪರಿಗಣಿಸದಿರುವುದೆಂದರೆ ಕೃತಘ್ನತೆ !

ಇಂದಿನ ಚಾಡಿಕೋರ, ದಿಕ್ಕಿಲ್ಲದ, ಭ್ರಷ್ಟ ನೇತಾರರ ಕೃತಕ ರಾಷ್ಟ್ರಪ್ರೇಮವನ್ನು ನೋಡಿ ಜಿಗುಪ್ಸೆಯುಂಟಾಗುತ್ತದೆ. ಕ್ರಾಂತಿಕಾರರ ಈ ಉತ್ಕಟ ರಾಷ್ಟ್ರಭಕ್ತಿಯನ್ನು ನೋಡಿ ನಾವು ಇವರದ್ದೆ ಉತ್ತರಾಧಿಕಾರಿಗಳಾಗಿದ್ದೇವೆ, ಎನ್ನುವಾಗ ಸಾರ್ಥಕತೆಯ ಅಭಿಮಾನವೆನಿಸುತ್ತದೆ. ಮಸ್ತಕವು ಗೌರವಭಾವದಿಂದ ಬಾಗುತ್ತದೆ.

ಇಂದು ಭ್ರಷ್ಟ ನೇತಾರರ ಜಯಜಯಕಾರದೊಂದಿಗೆ ಅವರ ಹುಟ್ಟುಹಬ್ಬದ ದಿನ ಶುಭಾಶಯವನ್ನು ನೀಡುವ ಫಲಕಗಳು ನಗರಗಳಲ್ಲಿ ರಾರಾಜಿಸುತ್ತವೆ; ಆದರೆ ಕ್ರಾಂತಿಕಾರಿಗಳ ಜಯಂತಿಯಂದು ಅವರ ಸ್ಮರಣೆಯೂ ಆಗುವುದಿಲ್ಲ. ಅವರ ಬಲಿದಾನವನ್ನು ಸಹ ನಾವು ದಾಖಲಿಸಿಕೊಳ್ಳುವುದಿಲ್ಲ. ಇದು ಕೃತಘ್ನತೆಯಲ್ಲವೇ ?

– ಸುಪ್ರಸಿದ್ಧ ವ್ಯಾಖ್ಯಾನಕಾರರು ಹಾಗೂ ಲೇಖಕ ಶ್ರೀ. ದುರ್ಗೇಶ ಪರುಳಕರ (ಆಧಾರ : ‘ಧರ್ಮಭಾಸ್ಕರ’, ಜೂನ್ ೨೦೧೪)