ದೇಶದ ಸ್ಥಿತಿಯನ್ನು ಬದಲಾಯಿಸಲು ಸ್ವದೇಶಿ ಆಂದೋಲನದ ಪುನರುತ್ಥಾನ ಆವಶ್ಯಕ !

ಸ್ವದೇಶಿ ಚಳುವಳಿಯ ಹರಿಕಾರ ದಿ. ರಾಜೀವ ದೀಕ್ಷಿತ ಪುಣ್ಯಸ್ಮರಣೆ (೩೦.೧೧.೨೦೨೧) ರ ನಿಮಿತ್ತ…

ಸ್ವದೇಶಿ ಚಳುವಳಿಯ ಹರಿಕಾರ ದಿ. ರಾಜೀವ ದೀಕ್ಷಿತ

‘ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಒಂದು ಈಸ್ಟ್ ಇಂಡಿಯಾ ಕಂಪನಿ ಹೋಯಿತು; ಆದರೆ ದುರ್ಬಲ ಹಾಗೂ ಭ್ರಷ್ಟ ಜನಪ್ರತಿನಿಧಿಗಳ ಸಹಾಯದಿಂದ ಇಂದು ಸಾವಿರಾರು ವಿದೇಶಿ ಕಂಪನಿಗಳು ಭಾರತವನ್ನು ಲೂಟಿ ಮಾಡುತ್ತಿವೆ. ರಾಷ್ಟ್ರ ಮತ್ತು ಧರ್ಮದ ಅಭಿಮಾನದ ಪಾಠವನ್ನು ಕಲಿಸದಿರುವುದರಿಂದ ಇಂದು ಭಾರತೀಯ ಸಮಾಜದ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ವರ್ಚಸ್ಸು ಬಹಳವಿದೆ. ಇದನ್ನು ದುರುಪಯೋಗಿಸಿಕೊಂಡು ವಿದೇಶಿ ರಾಷ್ಟ್ರಗಳು ಭಾರತವನ್ನು ತಮ್ಮ ಮಾರುಕಟ್ಟೆಯನ್ನಾಗಿಸಿಕೊಂಡು ಆರ್ಥಿಕದೃಷ್ಟಿಯಲ್ಲಿ ಭಾರತವನ್ನು ದುರ್ಬಲಗೊಳಿಸುತ್ತಿವೆ. ಇಲ್ಲಿನ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳ ಈ ಪಾರತಂತ್ರ್ಯದಿಂದ ಮುಕ್ತವಾಗಲು ಸ್ವದೇಶಿ ಆಂದೋಲನದ ಹರಿಕಾರ ದಿ. ರಾಜೀವ ದೀಕ್ಷಿತರು ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದರು. ಅವರ ಪುಣ್ಯಸ್ಮರಣೆ ನಿಮಿತ್ತ ಈ ಲೇಖನ ದಿ. ರಾಜೀವ ದೀಕ್ಷಿತರ ವ್ಯಾಖ್ಯಾನದ ಕೆಲವು ಅಂಶಗಳನ್ನು ಪ್ರಕಟಿಸುತ್ತಿದ್ದೇವೆ.

೧. ಭಾರತದ ಸ್ವದೇಶಿ ಆಂದೋಲನದ ಪ್ರಾರಂಭ ಮತ್ತು ಅದಕ್ಕೆ ಸಿಕ್ಕಿದ ಪ್ರೋತ್ಸಾಹ !

೧೯೦೫ ರಲ್ಲಿ ಆಂಗ್ಲರು ಬಂಗಾಲವನ್ನು ವಿಭಜಿಸಿದಾಗ ಅದರ ವಿರುದ್ಧ ಭಾರತದಲ್ಲಿ ಸ್ವದೇಶಿ ಆಂದೋಲನವನ್ನು ನಡೆಸಲಾಯಿತು. ಈ ಆಂದೋಲನವು ದೇಶದ ಎಲ್ಲ ಜನರನ್ನು ಜಾಗೃತಗೊಳಿಸಿತು. ಅದರ ಪರಿಣಾಮದಿಂದ ೧೯೧೧ ರಲ್ಲಿ ಬಂಗಾಲದ ವಿಭಜನೆಯನ್ನು ರದ್ದುಗೊಳಿಸಲಾಯಿತು. ಈ ಸ್ವದೇಶಿ ಆಂದೋಲನದ ಅಡಿಪಾಯದಲ್ಲಿಯೇ ಭಾರತೀಯ ಸ್ವಾತಂತ್ರ್ಯದ ಅನೇಕ ಆಂದೋಲನಗಳಾದವು. ಈ ಆಂದೋಲನದ ಕೆಲವು ವೈಶಿಷ್ಟ್ಯಪೂರ್ಣ ಕ್ಷಣಚಿತ್ರಗಳು ಈ ಮುಂದಿನಂತಿವೆ.

ಅ. ಸ್ವದೇಶಿ ಆಂದೋಲನದ ಪ್ರೇರಣೆಯಿಂದ ಊರೂರುಗಳಲ್ಲಿ ವಿದೇಶಿ ಬಟ್ಟೆಗಳನ್ನು ಸುಟ್ಟುಹಾಕಲಾಯಿತು. ಈ ಆಂದೊಲನವು ಜನರಲ್ಲಿ ಎಷ್ಟು ಸ್ಪೂರ್ತಿಯನ್ನು ಮೂಡಿಸಿತೆಂದರೆ, ಮಹಿಳೆಯರು, ಸಣ್ಣಮಕ್ಕಳು ಮತ್ತು ವಿದ್ಯಾರ್ಥಿಗಳು ಸಹ ಈ ಆಂದೋಲನದಲ್ಲಿ ಭಾಗಿಯಾದರು.

ಆ. ವಿದೇಶಿ ಸಾಹಿತ್ಯಗಳನ್ನು ಮಾರಾಟ ಮಾಡುವ ಅಂಗಡಿಗಳ ಮುಂದೆ ನಿಂತು ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಸತ್ಯಾಗ್ರಹ ಮಾಡುತ್ತಿದ್ದರು. ಯುವಕರು ಅಂಗಡಿಗಳ ಮುಂದೆ ನಿಂತು ವಿದೇಶಿ ಸಾಹಿತ್ಯಗಳನ್ನು ಖರೀದಿಸಲು ಬರುವವರಿಗೆ ಪ್ರಬೋಧನೆ ಮಾಡುತ್ತಿದ್ದರು ಮತ್ತು ಯಾರಾದರೂ ಸಾಹಿತ್ಯಗಳನ್ನು ಖರೀದಿಸಿದರೆ, ಯುವಕರು ಅವುಗಳನ್ನು ಸುಡುತ್ತಿದ್ದರು.

ಇ. ಸ್ವದೇಶಿಯ ಆಗ್ರಹ ಎಷ್ಟು ತೀವ್ರವಾಗಿತ್ತೆಂದರೆ, ಜನರು ಸಕ್ಕರೆ ತಿನ್ನುವುದನ್ನು ನಿಲ್ಲಿಸಿದರು; ಏಕೆಂದರೆ ಅದು ಇಂಗ್ಲೆಂಡ್‌ನಿಂದ ಬರುತ್ತಿತ್ತು. ಬಂಗಾಲದ ಹೆಚ್ಚಿನ ಮಿಠಾಯಿ ಅಂಗಡಿಯವರು ಸಕ್ಕರೆಯಿಂದ ಮಿಠಾಯಿಗಳನ್ನು ತಯಾರಿಸುವುದನ್ನು ನಿಲ್ಲಿಸಿದರು.

ಈ. ಹೆಚ್ಚಿನವರು ವಿದೇಶಿ ಉಪ್ಪು ಬಳಸುವುದನ್ನು ನಿಲ್ಲಿಸಿದರು.

ಉ. ಗಡ್ಡ ತೆಗೆಯಲು ಆಂಗ್ಲರು ಉತ್ಪಾದನೆ ಮಾಡಿದ ಬ್ಲೇಡ್ ಉಪಯೋಗಿಸುವುದನ್ನು ನಿಲ್ಲಿಸಿದರು.

ಊ. ಪಂಡಿತರು ಮತ್ತು ಪುರೋಹಿತರು ವಿವಾಹದಲ್ಲಿ ವಧು-ವರರು ವಿದೇಶಿ ವಸ್ತ್ರಗಳನ್ನು ಧರಿಸಿದ್ದರೆ ಅಂತಹವರ ವಿವಾಹ ವಿಧಿ ಮಾಡುವುದನ್ನು ನಿಲ್ಲಿಸಿದರು.

೨.  ಕೇವಲ ತಮ್ಮ ಆರ್ಥಿಕ ಲಾಭಕ್ಕಾಗಿ ರಾಷ್ಟ್ರವನ್ನು ಮುಳುಗಿಸುವ ಬಹುರಾಷ್ಟ್ರೀಯ ಕಂಪನಿಗಳ ಜಾಹೀರಾತು

ಅನೇಕ ಸುಪ್ರಸಿದ್ಧ ಆಟಗಾರರ ಸಹಿತ, ಕ್ರಿಕೆಟ್ ಆಟಗಾರರು, ಅನೇಕ ನಟ-ನಟಿಯರು ಈ ವಿದೇಶಿ ಕಂಪನಿಗಳ ಜಾಹೀರಾತುಗಳನ್ನು ಮಾಡುತ್ತಾರೆ. ಅವರಲ್ಲಿ ಕೋಟಿಗಟ್ಟಲೆ ಸಂಪತ್ತು ಇರುವಾಗಲೂ ಅವರು ಇನ್ನೂ ವಿದೇಶಿ ಕಂಪನಿಗಳ ಜೊತೆಗೆ ಕೋಟಿ ಕೋಟಿಗಳ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಭಾರತೀಯರು ಇವರೆಲ್ಲರಿಗೂ, ಅಮೇರಿಕಾದಂತಹ ವಿದೇಶಿ ರಾಷ್ಟ್ರಗಳು ಭಾರತಕ್ಕೆ ಆರ್ಥಿಕ ನಿರ್ಬಂಧ ಹೇರಿದ್ದರೂ ನೀವು ಅವರ ಉತ್ಪಾದನೆಗಳ ಜಾಹೀರಾತುಗಳನ್ನು ಏಕೆ ಮಾಡುತ್ತೀರಿ ? ಎಂದು ಕೇಳಬೇಕು. ಹೀಗೆ ಸ್ಪಷ್ಟೀಕರಣ ಕೇಳಿದರೆ, ಅವರಿಗೆ ಸಮಾಜದಲ್ಲಿರಲು ಕಠಿಣವಾಗುವುದು ಹಾಗೂ ಅವರು ವಿದೇಶಿ ಕಂಪನಿಗಳ ಜಾಹೀರಾತುಗಳಿಗೆ ಬಹಿಷ್ಕಾರ ಹಾಕುವರು; ಏಕೆಂದರೆ ಅವರಿಗೆ ಭಾರತೀಯರು ನೀಡಿರುವ ಪ್ರೇಮ ಮತ್ತು ಸನ್ಮಾನವು ಅಮೇರಿಕಾದಲ್ಲಿ ಅಥವಾ ಇತರ ಎಲ್ಲಿಯೂ ಸಿಗುವುದಿಲ್ಲ.

೩. ಭಾರತೀಯ ವಸ್ತುಗಳಿಗಿಂತ ವಿದೇಶಿ ವಸ್ತುಗಳು ಅಗ್ಗವಾಗಿರಲು ಕಾರಣವೇನು ?

ಭಾರತೀಯ ವಸ್ತುಗಳಿಗಿಂತ ವಿದೇಶಿ ವಸ್ತುಗಳು ಕಡಿಮೆ ಬೆಲೆಗೆ ಏಕೆ ಸಿಗುತ್ತವೆ ? ಏಕೆಂದರೆ ಅವುಗಳ ಉತ್ಪಾದನೆಯ ಖರ್ಚು ಕಡಿಮೆಯಿರುತ್ತದೆ. ಈ ವಸ್ತುಗಳನ್ನು ಸೆರೆಮನೆಯಲ್ಲಿರುವ ಕೈದಿಗಳಿಂದ ಉಚಿತವಾಗಿ ಉತ್ಪಾದನೆ ಮಾಡಿಸಿಕೊಳ್ಳುತ್ತಾರೆ. ಅಲ್ಲಿ ಕಾರ್ಮಿಕ ಸಂಘಟನೆಯ ನಿಯಮವಿಲ್ಲ. ಅವರು ಯಾವಾಗ ಬೇಕಾದರೂ ಯಾರನ್ನಾದರೂ ಕೆಲಸದಿಂದ ತೆಗೆಯಬಹುದು. ಅವರಿಗೆ ಅದರ ಬಗ್ಗೆ ಏನೂ ಅನಿಸುವುದಿಲ್ಲ; ಏಕೆಂದರೆ, ಅವರಿಗೆ ಸ್ಪರ್ಧೆಯಲ್ಲಿ ಬಾಳಿಬದುಕಬೇಕಾಗುತ್ತದೆ. ಅವರಿಗೆ ವ್ಯವಸಾಯಕ್ಕಾಗಿ ೯೦ ಪೈಸೆ ಪ್ರತಿ ಯುನಿಟ್ ವಿದ್ಯುತ್ ಪೂರೈಕೆಯಾಗುತ್ತದೆ. ಆದ್ದರಿಂದ ಅವರು ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಭಾರತೀಯರಿಗೆ ಉದ್ಯೋಗದ ವಿದ್ಯುತ್‌ಗಾಗಿ ಬಹಳಷ್ಟು ಹಣ ಖರ್ಚು ಮಾಡಬೇಕಾಗುತ್ತದೆ; ವಿವಿಧ ತೆರಿಗೆಗಳನ್ನು ತುಂಬಬೇಕಾಗುತ್ತದೆ. ಆದ್ದರಿಂದ ಭಾರತೀಯ ಸಾಮಾನುಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ನಾವು ಸಹಕಾರದ ಭಾವನೆಯಿಂದ ಸ್ವದೇಶಿ ವಸ್ತುಗಳನ್ನು ಖರೀದಿಸಿದರೆ, ಸರಕುಗಳ ಮಾರಾಟ ಹೆಚ್ಚಾಗುತ್ತದೆ. ಬೇಡಿಕೆ ಹೆಚ್ಚಾದಾಗ ಪೂರೈಕೆಯೂ ಹೆಚ್ಚಾಗುತ್ತದೆ, ನಂತರ ಈ ವಸ್ತುಗಳು ಕ್ರಮೇಣ ಕಡಿಮೆ ಬೆಲೆಯಲ್ಲಿ ಸಿಗಲು ಸಾಧ್ಯವಾಗುವುದು.

– ಸ್ವದೇಶಿ ಚಳುವಳಿಯ ಹರಿಕಾರ ದಿ. ರಾಜೀವ ದೀಕ್ಷಿತ