ಹಿಂದೂಗಳ ಹಬ್ಬಗಳ ಬಗ್ಗೆ ಸರಕಾರ ಮತ್ತು ನ್ಯಾಯವ್ಯವಸ್ಥೆ ಮಾಡಿದ ಪಕ್ಷಪಾತ !

ಹಿಂದೂಗಳ ಹಬ್ಬಗಳಂದು ಅನೇಕ ಬಂಧನಗಳು ಮತ್ತು ಇತರ ಧರ್ಮೀಯರ ಹಬ್ಬಗಳಂದು ಯಾವುದೇ ಬಂಧನಗಳಿಲ್ಲ, ಇದೇನಾ ಸರಕಾರದ ಸರ್ವಧರ್ಮಸಮಭಾವ ?

ಕಳೆದ ಒಂದೂವರೆ ವರ್ಷಗಳಿಂದ ಕೊರೊನಾ ಸೋಂಕಿನಿಂದಾಗಿ ವಿವಿಧ ರಾಜ್ಯ ಸರಕಾರಗಳು, ಜನರು ಒಟ್ಟಿಗೆ ಸೇರಲು ಅನೇಕ ಬಂಧನಗಳನ್ನು ವಿಧಿಸಿದೆ. ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಈ ಬಂಧನಗಳನ್ನು ಕಡೆಗಣಿಸಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಅಲ್ಪಸಂಖ್ಯಾತರೂ ತಮ್ಮ ಹಬ್ಬಗಳನ್ನು, ಹಾಗೆಯೇ ಮುಶಾಯರಾಗಳಂತಹ (ಕವ್ವಾಲಿಗಳ) ಕಾರ್ಯಕ್ರಮಗಳನ್ನು ಸಾವಿರಾರು ಜನಸಂಖ್ಯೆಯಲ್ಲಿ ಯಾವುದೇ ಅಡ್ಡಿ ಅಡಚಣೆಗಳಿಲ್ಲದೇ ನಡೆಸುತ್ತಾರೆ. ಹೀಗಿರುವಾಗ ಸರಕಾರ ಮತ್ತು ನ್ಯಾಯವ್ಯವಸ್ಥೆಗಳು ಹಿಂದೂಗಳ ಹಬ್ಬಗಳ ಮೇಲೆಯೇ ವಿವಿಧ ನಿಷೇಧಗಳನ್ನು ಹೇರುತ್ತದೆ. ಆದುದರಿಂದ ಎಲ್ಲ ‘ಕಾನೂನುಗಳು ಹಿಂದೂಗಳಿಗಾಗಿ ಮತ್ತು ಲಾಭಗಳು ಅಲ್ಪಸಂಖ್ಯಾತರಿಗಾಗಿ’, ಎಂಬ ಸ್ಥಿತಿ ಉಂಟಾಗಿದೆ.

೧. ಪ್ರಾಚೀನ ಪರಂಪರೆಯಿರುವ ಹಿಂದೂಗಳ ಕಾವಡ ಯಾತ್ರೆಗೆ ನಿಷೇಧ ಹೇರುವಂತೆ ಉತ್ತರಪ್ರದೇಶ ಸರಕಾರಕ್ಕೆ ನೋಟಿಸ್ ಕಳಿಸಿದ ಸರ್ವೋಚ್ಚ ನ್ಯಾಯಾಲಯ

‘ಶ್ರಾವಣದಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಇತರ ಕೆಲವು ರಾಜ್ಯಗಳಲ್ಲಿ ‘ಕಾವಡ ಯಾತ್ರೆ’ ಅನೇಕ ವರ್ಷಗಳ ಹಿಂದಿನಿಂದಲೂ ನಡೆಯುತ್ತ ಬಂದಿರುವ ಬಹಳ ಪ್ರಾಚೀನ ಪರಂಪರೆಯಾಗಿದೆ. ಭಕ್ತರು ಗಂಗೆಯ (ಗಂಗಾ ನದಿಯ) ಪವಿತ್ರ ಜಲವನ್ನು ತಂದು ತಮ್ಮ ಊರಲ್ಲಿನ ಅಥವಾ ನಗರಗಳಲ್ಲಿನ ದೇವತೆಗಳಿಗೆ ಗಂಗಾಭೀಷೇಕವನ್ನು ಮಾಡುತ್ತಾರೆ. ವಿಶೇಷವೆಂದರೆ ಈ ಸಂಪೂರ್ಣ ಯಾತ್ರೆಯನ್ನು ಬರಿಗಾಲಿನಲ್ಲಿ ಕಾಲ್ನಡಿಗೆಯಲ್ಲಿ ಭಕ್ತಿಭಾವದಿಂದ ಮಾಡಲಾಗುತ್ತದೆ. ಕೆಲವು ದಿನಗಳ ಹಿಂದೆ ಈ ಕಾವಡ ಯಾತ್ರೆಯ ಮೇಲೆ ಸರ್ವೋಚ್ಚ ನ್ಯಾಯಾಲಯವು ಸ್ವಯಂಪ್ರೇರಿತ (ಸುಮೊಟೊ) ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿತು. ಹಾಗೆಯೇ ಕೇಂದ್ರ ಮತ್ತು ಉತ್ತರಪ್ರದೇಶ ಸರಕಾರಕ್ಕೆ ನೋಟಿಸ್ ಕಳುಹಿಸಿತು. ನ್ಯಾಯಾಲಯಕ್ಕೆ ಈ ಅಧಿಕಾರವಿದೆ. ನ್ಯಾಯಾಲಯವು ಈ ನೋಟಿಸ್‌ನಲ್ಲಿ, ‘ಕೊರೊನಾದ ಎರಡನೇಯ ಅಲೆ ಇತ್ತೀಚಿಗಷ್ಟೇ ನಿಯಂತ್ರಣಕ್ಕೆ ಬರುತ್ತಿರುವಾಗ ಮತ್ತು ಮೂರನೇಯ ಅಲೆಯ ದೊಡ್ಡ ಭೀತಿ ಇರುವಾಗ ಉತ್ತರಪ್ರದೇಶ ಸರಕಾರವು ಕಾವಡ ಯಾತ್ರೆಗೆ ಹೇಗೆ ಅನುಮತಿ ನೀಡಿತು ?’ ಎಂದು ಕೇಳಿತು. ಇದಕ್ಕೆ ಉತ್ತರಪ್ರದೇಶ ಸರಕಾರವು ನ್ಯಾಯಾಲಯದಲ್ಲಿ ಪ್ರಮಾಣಪತ್ರವನ್ನು ಸಲ್ಲಿಸಿತು. ಅದರಲ್ಲಿ ಗೃಹ ವಿಭಾಗದ ಕಾರ್ಯದರ್ಶಿಗಳು, ನಾವು ‘ಕಾವಡ ಯಾತ್ರೆಯ ಕೆಲವು ಸಂಘಟನೆಗಳೊಂದಿಗೆ ಚರ್ಚಿಸಿದ್ದೇವೆ ಮತ್ತು ಈ ಚರ್ಚೆಯಲ್ಲಿ ಕಾವಡ ಯಾತ್ರೆಯ ಮೇಲೆ ನಿಷೇಧವಿರಬೇಕು’, ಎಂದು ನಿಶ್ವಯಿಸಿದ್ದೇವೆ’; ಆದರೂ ಕೆಲವು ಅಪವಾದಾತ್ಮಕ ಧಾರ್ಮಿಕ ಪರಿಸ್ಥಿತಿಯಲ್ಲಿ ಕಾವಡ ಯಾತ್ರೆಯನ್ನು ತಡೆಗಟ್ಟುವುದು ಸಾಧ್ಯವಿಲ್ಲದಿದ್ದರೆ, ಜಿಲ್ಲಾಧಿಕಾರಿಗಳ ಅನುಮತಿಯಿಂದ ಕಾವಡ ಯಾತ್ರೆಯನ್ನು ಮಾಡಬಹುದು. ಅದಕ್ಕಾಗಿ ಕೆಲವು ನಿಯಮಗಳನ್ನು ಹಾಕಿಕೊಡಲಾಗಿದೆ. ಯಾರು ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆಯೋ, ಹಾಗೆಯೇ ಯಾರ ಕೊರೊನಾದ ಆರ್.ಟಿ.ಪಿ.ಸಿ.ಆರ್. ಪರೀಕ್ಷಣೆಯಾಗಿದೆಯೋ, ಅಂತಹ ಜನರಿಗೆ ಅಪವಾದಾತ್ಮಕ ಸ್ಥಿತಿಯಲ್ಲಿ ಕಾವಡ ಯಾತ್ರೆಯನ್ನು ಮಾಡಲು ಅನುಮತಿಯನ್ನು ನೀಡಬಹುದು ಎಂದು ಹೇಳಿದರು; ಆದರೆ ಸರ್ವೋಚ್ಚ ನ್ಯಾಯಾಲಯವು ‘ನಮಗೆ ಯಾವುದೇ ಕಾವಡ ಯಾತ್ರಿಕನು ರಸ್ತೆಯ ಮೇಲೆ ಕಾಣಿಸಬಾರದು’, ಎಂದು ಸ್ಪಷ್ಟವಾಗಿ ಉತ್ತರಿಸಿತು.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೨. ೭ ನೇ, ೮ ನೇ ಶತಮಾನದಿಂದ ನಡೆದುಕೊಂಡು ಬಂದ ಪಂಢರಾಪುರ ಯಾತ್ರೆಯ ಮೇಲೆ ನಿರ್ಬಂಧ ಹೇರಿದ ಮಹಾರಾಷ್ಟ್ರ ಸರಕಾರ

ಆಷಾಢ ಏಕಾದಶಿಯಂದು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣಾ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಿಂದ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಪಂಢರಾಪುರಕ್ಕೆ ಬರುತ್ತಾರೆ. ಮಹಾರಾಷ್ಟ್ರದಿಂದ ನೂರಾರು ಭಕ್ತರ ಮೆರವಣಿಗೆಗಳು (ದಿಂಡಿಗಳು) ಕಾಲ್ನಡಿಗೆಯಿಂದ ವಿಠ್ಠಲನ ದರ್ಶನಕ್ಕೆ ಹೋಗುತ್ತಿರುತ್ತವೆ. ಅವುಗಳ ಪೈಕಿ ೧೦ ದಿಂಡಿಗಳು ಗೌರವಾನ್ವಿತವಾಗಿರುತ್ತವೆ. ೨೦೨೦ ರಲ್ಲಿ ಕೊರೊನಾದ ಗಾಂಭೀರ್ಯವನ್ನು ಗಮನದಲ್ಲಿಟ್ಟುಕೊಂಡು ಸಂತರು ಮತ್ತು ಅನೇಕ ವಾರಕರಿಗಳು (ವಿಠ್ಠಲನ ಭಕ್ತರು) ತಾವಾಗಿಯೇ ‘ಮೆರವಣಿಗೆಗಳನ್ನು ತೆಗೆಯುವುದಿಲ್ಲ’, ಎಂದು ನಿಶ್ಚಯಿಸಿದರು ಮತ್ತು ಸರಕಾರದ ಆದೇಶವನ್ನು ಸಂಪೂರ್ಣ ಪಾಲಿಸಿದರು. ಈ ವರ್ಷ ಮಾತ್ರ ಸಂತವೀರ ಹ.ಭ.ಪ. ಬಂಡಾತಾತ್ಯಾ ಕರಾಡಕರ ಇವರಂತಹ ಕೆಲವು ಹಿರಿಯ ವಾರಕರಿಗಳು ಈ ಆದೇಶವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಈ ಎಲ್ಲ ಹಿರಿಯ ವಾರಕರಿಗಳ ಹೇಳಿಕೆ ಏನಿತ್ತೆಂದರೆ, ‘ಮಹಾರಾಷ್ಟ್ರದಲ್ಲಿ ಸರಾಯಿ ಅಂಗಡಿಗಳು, ಮನೋರಂಜನೆಯ ಎಲ್ಲ ಸಾಧನಗಳು, ಉಪಹಾರಗೃಹಗಳು, ವ್ಯಾಯಾಮಶಾಲೆ, ಮೈದಾನಗಳು, ಈಜುಕೊಳ, ವ್ಯಾಪಾರ ಎಲ್ಲವೂ ನಿತ್ಯದಂತೆ ನಡೆದಿವೆ. ವಿವಿಧ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ‘ಇವೆಲ್ಲ ವಿಷಯಗಳ ಮೇಲೆ ನಿಷೇಧ ಇಲ್ಲದಿರುವಾಗ ಕೇವಲ ಧಾರ್ಮಿಕ ಕೃತಿಗಳ ಮೇಲೆ ಸರಕಾರವು ಏಕೆ ನಿಷೇಧ ಹೇರುತ್ತದೆ ?’, ಎಂದು ಹೇಳುತ್ತಾ ಅವರು ನಿಷೇಧದ ಆದೇಶವನ್ನು ಕಡೆಗಣಿಸಿದರು. ಇದಕ್ಕೆ ಸರಕಾರವು ಮೊಗಲಾಡಳಿತದಂತೆ ಹ.ಭ.ಪ. ಬಂಡಾತಾತ್ಯಾ ಕರಾಡಕರರೊಂದಿಗೆ ಅನೇಕ ವಾರಕರಿಗಳನ್ನು ಬಂಧಿಸಿತು. (ಹ.ಭ.ಪ. ಅಂದರೆ ಹರಿಭಕ್ತ ಪಾರಾಯಣ, ಪ್ರತಿನಿತ್ಯ ಹರಿಯ (ವಿಠ್ಠಲನ) ಪಾರಾಯಣವನ್ನು ಮಾಡುವವರು.)

೩. ರಾಜಕೀಯ ಪಕ್ಷ ಮತ್ತು ಅದರ ಕಾರ್ಯಕರ್ತರಿಗೆ ಬಂಧನಗಳನ್ನು ಸಡಿಲಿಸಲು ದೊರಕಿದ ವಿವಿಧ ರಿಯಾಯಿತಿಗಳು

ಅ. ೧೯ ಜೂನ್ ೨೦೨೧ ರಂದು ಪುಣೆಯಲ್ಲಿ ರಾಷ್ಟ್ರವಾದಿ ಕಾಂಗ್ರೆಸ್‌ನ ಕಾರ್ಯಾಲಯದ ಉದ್ಘಾಟನೆಗಾಗಿ ಉಪಮುಖ್ಯಮಂತ್ರಿಗಳೊಂದಿಗೆ ಅವರ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಅವರು ಕೊರೊನಾದ ಯಾವುದೇ ನಿರ್ಬಂಧವನ್ನು ಪಾಲಿಸಲಿಲ್ಲ. ಇದರ ಬಗ್ಗೆ ಯಾರಾದರೂ ಆಕ್ಷೇಪವನ್ನೆತ್ತಿದರೆ, ಪೊಲೀಸರು ಹೆಸರಿಗಾಗಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಮಾಡುತ್ತಿದ್ದೇವೆ ಎಂಬುದರ ತೋರಿಕೆ ಮಾಡುತ್ತಾರೆ; ಆದರೆ ಯಾರಿಂದಾಗಿ ಜನಸಂದಣಿಯಾಗುತ್ತದೆಯೋ, ಆ ಮುಖಂಡರ ಮೇಲೆ ಯಾವುದೇ ಕಾರ್ಯಾಚರಣೆ ಆಗುವುದಿಲ್ಲ.

ಆ. ೪ ಜುಲೈ ೨೦೨೧ ರಂದು ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ದೇವಗಿರಿ ಕಿಲ್ಲೆಯ ಬುಡದಲ್ಲಿ ಓರ್ವ ಮತಾಂಧ ಪಕ್ಷದ ಕಾರ್ಯಕರ್ತನು ‘ಮುಶಾಯರಾ’ವನ್ನು (ಕವ್ವಾಲಿ) ಆಯೋಜಿಸಿದ್ದನು. ಈ ಕಾರ್ಯಕ್ರಮವು ರಾತ್ರಿ ೧೨ ಗಂಟೆಯವರೆಗೆ ನಡೆಯಿತು. ಈ ಸ್ಥಳದಲ್ಲಿ ಉಪಸ್ಥಿತರಿದ್ದ ಸಂಸದರ ಮೇಲೆ ಅವರ ಕಾರ್ಯಕರ್ತರು ಸಾವಿರಾರು ರೂಪಾಯಿಗಳ ದುಂದುವೆಚ್ಚ ಮಾಡಿದರು, ಕಾರ್ಯಕ್ರಮದಲ್ಲಿ ಕೊರೊನಾದ ಎಲ್ಲ ನಿಯಮಗಳನ್ನು ಬದಿಗೊತ್ತಲಾಯಿತು. ಪೊಲೀಸರು ಕೇವಲ ಮೂಕ ಪ್ರೇಕ್ಷಕರಾಗಿ ನಿಂತುಕೊಂಡು ನೋಡುತ್ತಿದ್ದರು. ಇಲ್ಲಿಯೂ ೩-೪ ಜನ  ಆಯೋಜಕರ ಮೇಲೆ ಹೆಸರಿಗಾಗಿ ಪ್ರಕರಣವನ್ನು ನೋಂದಾಯಿಸಿರಬಹುದು.

ಇ. ಮಾರ್ಚ್-ಏಪ್ರಿಲ್ ೨೦೨೧ ರಲ್ಲಿ ಕೊರೊನಾದ ಎರಡನೆಯ ಅಲೆ ಬರುವ ಸಾಧ್ಯತೆ ಇರುವಾಗ ಬಂಗಾಲ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಚುನಾವಣೆಗಳಾದವು. ಈ ನಿಮಿತ್ತ ಎಲ್ಲ ಪಕ್ಷಗಳ ಲಕ್ಷಗಟ್ಟಲೇ ಜನರು ರಸ್ತೆಯಲ್ಲಿ ಸೇರಿದರು ಮತ್ತು ಮೆರವಣಿಗೆ ನಡೆಸಿದರು. ಇದರಿಂದ ಕೊರೊನಾ ಸೋಂಕು ಎಲ್ಲೆಡೆ ಹರಡಿತು.

ಈ. ದೆಹಲಿಯಲ್ಲಿ ಕಳೆದ ಒಂದು ವರ್ಷದಿಂದ ರೈತರ ಆಂದೋಲನ ನಡೆಯುತ್ತಿದೆ. ಸರ್ವೋಚ್ಚ ನ್ಯಾಯಾಲಯವು ಆಂದೋಲನವನ್ನು ನಿಲ್ಲಿಸಲು ಹೇಳಿದೆ. ಕೇಂದ್ರ ಸರಕಾರವು ‘೨ ವರ್ಷಗಳ ಕಾಲ ಕೃಷಿ ಕಾಯದೆಯನ್ನು ಅನ್ವಯಗೊಳಿಸುವುದಿಲ್ಲ’, ಎಂದು ಹೇಳಿದೆ, ಆದರೂ ಅವರ ಆಂದೋಲನ ಹಾಗೇ ನಡೆದಿದೆ.

ಉ. ಅಲ್ಪಸಂಖ್ಯಾತರಿಗೆ ಈದ್ ಹಬ್ಬವನ್ನು ಆಚರಿಸಲು ಸಾಧ್ಯವಾಗಬೇಕೆಂದು, ಕೇರಳದ ಸಾಮ್ಯವಾದಿ ಸರಕಾರವು ೩ ದಿನ ಕೋರೋನಾದ ನಿಷೇಧವನ್ನು ಸಡಿಲಗೊಳಿಸಿತು. ಅದರಿಂದ ಕೇರಳದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೊನಾದ ಸೋಂಕು ಹೆಚ್ಚಾಯಿತು.

೪. ನ್ಯಾಯವ್ಯವಸ್ಥೆಯು ಕೇರಳದಲ್ಲಿಯೂ ತನ್ನ ಅಧಿಕಾರವನ್ನು ಉಪಯೋಗಿಸಿದ್ದರೆ, ಅನೇಕರ ಜೀವವನ್ನು ಉಳಿಸಬಹುದಾಗಿತ್ತು !

ಮಾಸ್ಕ್ ಹಾಕಲಿಲ್ಲವೆಂದು ಪೊಲೀಸರು ದ್ವಿಚಕ್ರವಾಹನ ಸವಾರರ ಮೇಲೆ ಕ್ರಮಕೈಗೊಳ್ಳಬಹುದು, ಅವರಿಂದ ದಂಡವನ್ನು ವಸೂಲಿ ಮಾಡಿ ಪ್ರಕರಣವನ್ನು ದಾಖಲಿಸುತ್ತಾರೆ; ಆದರೆ ಇಂತಹ ಅಪರಾಧವನ್ನು ಎಂದಿಗೂ ರಾಜಕೀಯ ಮುಖಂಡರ ಮೇಲೆ ದಾಖಲಿಸುವುದಿಲ್ಲ. ಆದುದರಿಂದ ‘ಕಾನೂನು ಕೇವಲ ಬಡವರಿಗಾಗಿ ಅಥವಾ ಸರ್ವಸಾಮಾನ್ಯರಿಗಾಗಿ ಮಾತ್ರ ಇದೆಯೇ ?’, ಎಂದು ಜನರಿಗೆ ಅನಿಸಿದರೆ ಅದರಲ್ಲಿ ತಪ್ಪೇನಿದೆ ?

ಕಾರ್ಯಾಲಯದ ಉದ್ಘಾಟನೆ, ಮುಶಾಯರ (ಕವ್ವಾಲಿ) ಕಾರ್ಯಕ್ರಮ, ರೈತರ ಆಂದೋಲನ, ಚುನಾವಣೆಗಳನ್ನು ತೆಗೆದುಕೊಳ್ಳುವುದು ಇಂತಹ ವಿವಿಧ ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಗಂಭೀರ ವಿಚಾರ ಮಾಡಿ ಸರ್ವೋಚ್ಚ ನ್ಯಾಯಾಲಯವು ಸ್ಬಯಂಪ್ರೇರಿತ (ಸ್ಯುಮೊಟೊ) ನಿರ್ಣಯವನ್ನು ನೀಡುತ್ತಿದ್ದರೆ, ಎರಡನೇಯ ಅಲೆಯಿಂದಾದ ಭಯಂಕರ ಪರಿಣಾಮವನ್ನು ತಡೆಗಟ್ಟಬಹುದಾಗಿತ್ತು ಮತ್ತು ಇದರಿಂದ ಜನರಿಗೂ ಆನಂದವಾಗುತ್ತಿತ್ತು; ಏಕೆಂದರೆ ೧೦೦ ಕೋಟಿಗಳಿಗಿಂತ ಹೆಚ್ಚು ಜನರ ವಿಶ್ವಾಸ ಇನ್ನೂ ನ್ಯಾಯಾಲಯಗಳ ಮೇಲಿದೆ.’

|| ಶ್ರೀಕೃಷ್ಣಾರ್ಪಣಮಸ್ತು ||

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷದ್ ಮತ್ತು ನ್ಯಾಯವಾದಿ, ಮುಂಬೈ ಉಚ್ಚ ನ್ಯಾಯಾಲಯ