ಬೆಳಗಾವಿ – ರಾಜ್ಯದಲ್ಲಿ ಕೆಲವು ದಿನಗಳಿಂದ ಅನಧಿಕೃತ ದೇವಸ್ಥಾನಗಳ ಹೆಸರಿನಲ್ಲಿ ಪ್ರಾಚೀನ ದೇವಸ್ಥಾನಗಳನ್ನು ಅನಧಿಕೃತವೆಂದು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿ ಸರಕಾರವು ನೆಲಸಮ ಮಾಡುತ್ತಿದೆ. ಸರಕಾರವು ಪ್ರಕಟಿಸಿದ ಅನಧಿಕೃತ ದೇವಸ್ಥಾನಗಳ ಪಟ್ಟಿಯಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಸಾವಿರಾರು ಹಿಂದೂ ಧಾರ್ಮಿಕ ಸ್ಥಳಗಳು ಅನಧಿಕೃತವೆಂದು ತಪ್ಪಾದ ಪಟ್ಟಿಯನ್ನು ತಯಾರಿಸಲಾಗಿದೆ. ಆದ್ದರಿಂದ ಅನಧಿಕೃತವೆಂದು ತಯಾರಿಸಿದ ದೇವಸ್ಥಾನಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ಪ್ರಾಚೀನ ದೇವಸ್ಥಾನಗಳ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಇವರಿಗೆ ದೇವಸ್ಥಾನ ಹಾಗೂ ಧಾರ್ಮಿಕ ಮಹಾಸಂಘ ಇದರ ವತಿಯಿಂದ ಮನವಿ ನೀಡಲಾಗಿದೆ.
ಈ ಸಮಯದಲ್ಲಿ ನ್ಯಾಯವಾದಿ ಪ್ರವೀಣ ಕರೋಶಿ, ನ್ಯಾಯವಾದಿ ರಮೇಶ ಗುಡ್ಡೊಡಗಿ, ನ್ಯಾಯವಾದಿ ಪರಶುರಾಮ ತಾರಿಹಾಳ, ನ್ಯಾಯವಾದಿ ಎಸ್.ಆರ್. ಜಯಿ, ಧರ್ಮಪ್ರೇಮಿ ಶ್ರೀ. ಸದಾನಂದ ಮಾಸೇಕರ, ಹಿಂದುತ್ವನಿಷ್ಠ ಶ್ರೀ. ಮಾರುತಿ ಸುತಾರ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುಧೀರ ಹೇರೇಕರ ಮತ್ತು ಶ್ರೀ. ಋಷಿಕೇಶ ಗುರ್ಜರ ಇವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಇವರಿಗೆ ನೀಡಿರುವ ಮನವಿಯಲ್ಲಿ ಮುಂದಿನ ಅಂಶಗಳನ್ನು ಹೇಳಲಾಗಿದೆ.
1. ನಂಜನಗೂಡಿನ ಅಧಿಕಾರಿಗಳು ಚೋಳ ರಾಜರ ಕಾಲದ 800 ವರ್ಷಗಳಷ್ಟು ಪುರಾತನ ಶ್ರೀ ಆದಿಶಕ್ತಿ ದೇವಸ್ಥಾನವನ್ನು ಕೆಡವಿದ್ದಾರೆ. ಸರಕಾರದ ಅನಧಿಕೃತ ಪಟ್ಟಿಯಲ್ಲಿ 6 ಸಾವಿರದ 395 ಕ್ಕಿಂತ ಹೆಚ್ಚು ಧಾರ್ಮಿಕ ಸ್ಥಳಗಳಿವೆ. ಮಂಗಳೂರಿನ ಶಕ್ತಿನಗರ ಇಲ್ಲಿಯ 800 ವರ್ಷಗಳ ಇತಿಹಾಸವಿರುವ ವೈದ್ಯನಾಥ ದೇವಸ್ಥಾನ ಸಹ ಅನಧಿಕೃತ ಪಟ್ಟಿಯಲ್ಲಿ ಸೇರಿದೆ. ರಾಜ್ಯಮಟ್ಟದಲ್ಲಿ ಎಲ್ಲಾ ಜಿಲ್ಲೆಯಲ್ಲಿನ ಅಧಿಕಾರಿಗಳು ತರಾತುರಿಯಿಂದ ಸ್ಥಳಗಳ ವೀಕ್ಷಣೆ ಮಾಡದೆ ಸದೋಷ ಧಾರ್ಮಿಕ ಸ್ಥಳಗಳ ಪಟ್ಟಿ ತಯಾರಿಸಿದ್ದಾರೆ
2. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 57 ಹಿಂದೂ ಧಾರ್ಮಿಕ ಸ್ಥಳಗಳನ್ನು ಖಾಲಿ ಮಾಡುವ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪಟ್ಟಿಯಲ್ಲಿರುವ ಎಲ್ಲಾ ಧಾರ್ಮಿಕ ಸ್ಥಳಗಳು ಕೇವಲ ಹಿಂದೂಗಳದ್ದಾಗಿದ್ದು ಇತರ ಧರ್ಮೀಯರ ಯಾವುದೇ ಧಾರ್ಮಿಕ ಸ್ಥಳವನ್ನು ಪಟ್ಟಿಯಲ್ಲಿ ಸೇರಿಸಿಲ್ಲ.
3. ಮೈಸೂರು ಜಿಲ್ಲೆಯ 315 ಧಾರ್ಮಿಕ ಸ್ಥಳಗಳನ್ನು ಅನಧಿಕೃತವೆಂದು ನಿರ್ಧರಿಸಲಾಗಿದೆ. ಇದರಲ್ಲಿ 93 ಹಿಂದೂ ಧಾರ್ಮಿಕ ಸ್ಥಳಗಳು ಒಳಗೊಂಡಿವೆ.