ಪಿತೃಸೇವೆ ಮತ್ತು ಆಜ್ಞಾಪಾಲನೆಯ ವ್ರತಾಚರಣೆಯ ರಹಸ್ಯ

ಶ್ರವಣ ಕುಮಾರ

ನ ಹಯತೋ ಧರ್ಮಚರಣಂ ಕಿಂಚಿದಾಸ್ತಿ ಮಹತ್ತರಮ್ | ಯಥಾ ಪಿತರಿ ಶುಶ್ರೂಷಾ ತಸ್ಯ ವಾ ವಚನಕ್ರಿಯಾ ||
– ವಾಲ್ಮೀಕಿ ರಾಮಾಯಣ, ಅಯೋಧ್ಯಾಕಾಂಡ, ಸರ್ಗ ೧೯, ಶ್ಲೋಕ ೨೨

ಅರ್ಥ : ಧರ್ಮಾಚರಣೆಗಳಲ್ಲಿ ತಂದೆಯ ಆರೈಕೆಯನ್ನು ಮಾಡುವುದು ಅಥವಾ ಅವರ ಆಜ್ಞೆಯಂತೆ ವರ್ತಿಸುವುದು, ಎಲ್ಲಕ್ಕಿಂತ ಶ್ರೇಷ್ಠ ಧರ್ಮಾಚರಣೆಯಾಗಿದೆ. ಇದಕ್ಕಿಂತ ಶ್ರೇಷ್ಠ ಧರ್ಮಾಚರಣೆ ಇನ್ನೊಂದಿಲ್ಲ. ವನವಾಸಕ್ಕೆ ಹೊರಡುವಾಗ ಪಿತೃಸೇವೆ ಮತ್ತು ಪಿತೃಆಜ್ಞೆಯ ಬಗ್ಗೆ ಶ್ರೀರಾಮನ ಉದ್ಗಾರ ಮೇಲಿನ ಶ್ಲೋಕದಲ್ಲಿ ವ್ಯಕ್ತವಾಗಿವೆ. ಈ ಸಂದರ್ಭ ದಲ್ಲಿ ಭಕ್ತ ಪುಂಡಲಿಕನ ಕಥೆಯಂತೂ, ಎಲ್ಲೆಡೆ ಪ್ರಸಿದ್ಧವಾಗಿದೆ.

ನಮ್ರತೆ ಮತ್ತು ನಮಸ್ಕಾರದ ಸಂಸ್ಕಾರಗಳು ಬಾಲ್ಯದಲ್ಲಿಯೇ ಆಗುವುದು ಆವಶ್ಯಕ !

ಹಿಂದೆ ಸಾಯಂಕಾಲದ ಸಮಯದಲ್ಲಿ ದೇವರ ಬಳಿ ದೀಪವನ್ನು ಹಚ್ಚಿ ಪ್ರಾರ್ಥನೆಯನ್ನು ಹೇಳಿದ ನಂತರ, ಮನೆಯಲ್ಲಿನ ಚಿಕ್ಕ ಮಕ್ಕಳು ಎಲ್ಲ ಹಿರಿಯರಿಗೆ ಬಗ್ಗಿ ನಮಸ್ಕಾರ ಮಾಡುತ್ತಿದ್ದರು. ಪ್ರತಿದಿನ ಬಗ್ಗಿ ನಮಸ್ಕಾರ ಮಾಡುವ ಸಂಸ್ಕಾರವನ್ನು ಬಾಲ್ಯದಿಂದಲೇ ಒತ್ತಾಯ ಪೂರ್ವಕವಾಗಿ ಮಾಡಬೇಕಾಗುತ್ತದೆ. ಇಂತಹ ಸಂಸ್ಕಾರ ಸಂಪನ್ನ ಬಾಲಮನಸ್ಸು ಮುಂದಿನ ಜೀವನದಲ್ಲಿ ದೊಡ್ಡವರೆದುರು ಎಂದಿಗೂ ಅಹಂಕಾರದಿಂದ ವರ್ತಿಸುವುದಿಲ್ಲ. ಬಾಲ್ಯದಲ್ಲಿ ನಮ್ರತೆಯ ಸಂಸ್ಕಾರವು ಆಗ್ರಹಪೂರ್ವಕವಾಗಿ ಆಗದಿದ್ದರೆ ಮತ್ತು ಮಕ್ಕಳು ಯುವಕರಾಗಿ ಅವರ ಮನಸ್ಸು ಒಂದು ಸಲ ಕಠೋರವಾಯಿತೆಂದರೆ ಅವರ ಬುದ್ಧಿಗೆ ನಮ್ರತೆಯು ಮನವರಿಕೆಯಾದರೂ, ಅಹಂಕಾರಿ ಮನಸ್ಸು ಕೆಳಗೆ ಬಗ್ಗಿ ನಮಸ್ಕಾರ ಮಾಡಲು ಹೆಚ್ಚಾಗಿ ಸಿದ್ಧವಾಗುವುದಿಲ್ಲ. ಇಲ್ಲಿ ಅಹಂಕಾರವು ಅಡ್ಡ ಬರುತ್ತಿರುತ್ತದೆ; ಆದ್ದರಿಂದ ನಮ್ರತೆಯ ಮತ್ತು ನಮಸ್ಕಾರದ ಸಂಸ್ಕಾರವನ್ನು ಬಾಲ್ಯದಲ್ಲಿಯೇ ಮಾಡಬೇಕಾಗುತ್ತದೆ.

ತಂದೆ ಮತ್ತು ತಾಯಿಯರ ಋಣದ ಚಿಂತನೆ ಮಾಡುವುದು ಆವಶ್ಯಕ !

ಇಹಲೋಕದಲ್ಲಿ ಮನುಷ್ಯನಿಗೆ ತಾಯಿ-ತಂದೆಯಿಂದಾಗಿ ಜನ್ಮ ಸಿಗುತ್ತದೆ. ಎಲ್ಲ ಜಗತ್ತನ್ನು ನೋಡಲು ಎರಡು ಕಣ್ಣುಗಳು, ತಿರುಗಾಡಲು ಎರಡು ಕಾಲುಗಳು, ಸತ್ಕಾರ್ಯಕ್ಕಾಗಿ ಎರಡು ಕೈಗಳು, ಶುಭ ಸಂದೇಶವನ್ನು ಕೇಳಲು ಎರಡು ಕಿವಿಗಳು, ಮಂಗಲವನ್ನು ಮಾತನಾಡಲು ನಾಲಿಗೆ, ಉತ್ತಮವಾದದ್ದನ್ನು ತಿನ್ನಲು ಹಲ್ಲು ಮತ್ತು ಬಾಯಿ, ಹಾಗೆಯೇ ಉಚ್ಚ ವಿಚಾರಗಳನ್ನು ಮಾಡಲು ಮನಸ್ಸು ಇಷ್ಟೊಂದು ಸಾಧನಗಳು ಕೇವಲ ತಾಯಿ-ತಂದೆಯರಿಂದಾಗಿಯೇ ಸಿಗುತ್ತವೆ. ಆದ್ದರಿಂದ ಪ್ರತಿಯೊಬ್ಬರ ದೇವರು ಅವರ ಮನೆಯಲ್ಲಿಯೇ ಇರುತ್ತಾರೆ. ನಮ್ಮ ಮನೆಯಲ್ಲಿನ ಅಥವಾ ಅಕ್ಕಪಕ್ಕದ ಚಿಕ್ಕ ಮಕ್ಕಳು ಮತ್ತು ಅವರ ಪಾಲನೆ ಪೋಷಣೆಯನ್ನು ಮಾಡುವ ಅವರ ತಂದೆ-ತಾಯಂದಿರು ಎಷ್ಟು ಕಷ್ಟಪಟ್ಟು, ವಿವಿಧ ರೀತಿಯಲ್ಲಿ ಪಾಲನೆ ಪೋಷಣೆ ಮಾಡುತ್ತಿರುತ್ತಾರೆ, ಎಂಬುದರ ಕಡೆಗೆ ಒಂದು ಬಾರಿ ಸರಿಯಾಗಿ ಗಮನಕೊಟ್ಟು ನೋಡಬೇಕು, ಅದರಿಂದ ಯಾರಿಗೂ ತಮ್ಮ ಸಂಪೂರ್ಣ ಜೀವನದಲ್ಲಿ ತಮ್ಮ ತಾಯಿ-ತಂದೆಯರ ಋಣದಿಂದ ಎಂದಿಗೂ ಮುಕ್ತರಾಗಲು ಬರುವುದಿಲ್ಲ, ಎಂಬುದು ಗಮನಕ್ಕೆ ಬರುತ್ತದೆ.

ಮನೆಯಲ್ಲಿನ ವೃದ್ಧ ತಾಯಿತಂದೆಯರ ರೂಪದಲ್ಲಿರುವ ದೇವತೆಗಳ ಕಡೆಗೆ ಸಂಪೂರ್ಣ ದುರ್ಲಕ್ಷ ಮಾಡಿ ಅಥವಾ ಅವರ ಬಗ್ಗೆ ಮನಸ್ಸಿನಲ್ಲಿ ಸಿಟ್ಟು ಅಥವಾ ತಿರಸ್ಕಾರವಿರುವಾಗ ಮಾಡಿದ ದೇವರಭಕ್ತಿ, ತೀರ್ಥಯಾತ್ರೆ, ದಾನಧರ್ಮ, ಪೂಜೆ, ಅರ್ಚನೆ, ಜಪತಪ ಮತ್ತು ಸಮಾಜಕಾರ್ಯ ಇವೆಲ್ಲವುಗಳ ಬೆಲೆ ಒಂದು ದೊಡ್ಡ ಶೂನ್ಯವಾಗಿರುತ್ತದೆ; ಆದರೆ ಇವುಗಳಲ್ಲಿನ ಏನೂ ಮಾಡದೇ ಕೇವಲ ಹಗಲು-ರಾತ್ರಿ ತಮ್ಮ ತಾಯಿ ಅಥವಾ ತಂದೆಯ ಪೂರ್ಣ ಶ್ರದ್ಧೆಯಿಂದ, ಸದ್ಭಾವನೆಯಿಂದ ಸೇವೆಯನ್ನು ಮಾಡಿದರೆ, ಒಂದು ವ್ರತಾಚರಣೆಯೆಂದು ಶುಶ್ರೂಷೆಯನ್ನು ಮಾಡಿದರೆ ಅಥವಾ ಅವರ ಆಜ್ಞೆಯನ್ನು ತಲೆಬಾಗಿ ಒಪ್ಪಿಕೊಂಡರೆ, ಇತರ ಯಾವುದೇ ಬೇರೆ ಪುಣ್ಯಕರ್ಮ ಅಥವಾ ಬೇರೆ ಧರ್ಮಾಚರಣೆ ಮಾಡುವುದರ ಆವಶ್ಯಕತೆಯೇ ಇಲ್ಲ.

ಪ್ರಭು ಶ್ರೀರಾಮನು ತಂದೆಯ ಆಜ್ಞೆಯನ್ನು ಒಪ್ಪಿಕೊಂಡು ವನವಾಸಕ್ಕೆ ಹೋಗುವುದು, ಒಂದು ಅದ್ವಿತೀಯ ಘಟನೆ !

ಪ್ರಭು ಶ್ರೀರಾಮನು ಮಹರ್ಷಿ ವಿಶ್ವಾಮಿತ್ರರಿಂದ ವಿದ್ಯೆಯನ್ನು ಕಲಿತನು, ದಂಡಕಾರಣ್ಯದಲ್ಲಿನ ತ್ರಾಟಿಕಾ, ಖರ, ದೂಷಣ ಮುಂತಾದ ರಾಕ್ಷಸರನ್ನು ವಧಿಸಿದನು, ಜನಕರಾಜನ ಮಿಥಿಲಾ ನಗರದಲ್ಲಿ ಶಿವಧನುಸ್ಸನ್ನು ಭಂಗ ಮಾಡಿ ಜಾನಕಿಯನ್ನು ಪತ್ನಿಯೆಂದು ಪ್ರಾಪ್ತಮಾಡಿಕೊಂಡನು, ಸುಗ್ರೀವನೊಂದಿಗೆ ಮೈತ್ರಿ, ಕುಂಭಕರ್ಣ ಮತ್ತು ರಾವಣನ ವಧೆ ಮಾಡಿ ಲಂಕೆಯ ಸಿಂಹಾಸನದ ಮೇಲೆ ವಿಭೀಷಣನನ್ನು ಕುಳ್ಳಿರಿಸಿದನು ಮತ್ತು ಕೊನೆಗೆ ಭರತನ ಭೇಟಿಯ ನಂತರ ಅಯೋಧ್ಯೆಯ ಸಿಂಹಾಸನದ ಮೇಲೆ ಸಾಮ್ರಾಟನೆಂದು ರಾಜ್ಯಾಭಿಷೇಕ ಮಾಡಿಸಿಕೊಂಡನು. ಇದರಲ್ಲಿನ ಪ್ರತಿಯೊಂದು ಘಟನೆಯು ಶ್ರೀರಾಮನ ಪರಾಕ್ರಮ, ಪುರುಷಾರ್ಥ, ಸಾಹಸ, ಧೈರ್ಯ ಮುಂತಾದ ಸದ್ಗುಣಗಳನ್ನು ತೋರಿಸುತ್ತದೆ; ಆದರೆ ಈ ಎಲ್ಲ ಘಟನೆಗಳಲ್ಲಿ ಮುಖ್ಯವಾದ ಅದ್ವಿತೀಯ ಘಟನೆ ಎಂದರೆ ಅವನು ತನ್ನ ತಂದೆ ರಾಜಾ ದಶರಥನ ಆಜ್ಞೆಯನ್ನು ಪ್ರಮಾಣವೆಂದು ಸ್ವೀಕರಿಸಿ ಸಿಂಹಾಸನವನ್ನು ತ್ಯಜಿಸಿ ೧೪ ವರ್ಷಗಳ ಕಾಲ ವನವಾಸಕ್ಕೆ ಹೋಗುವ ನಿರ್ಣಯವನ್ನು ತೆಗೆದುಕೊಳ್ಳುವುದಾಗಿದೆ. ಶ್ರೀರಾಮನು ದಶರಥನ ಆಜ್ಞೆಯನ್ನು ತಿರಸ್ಕರಿಸಿದ್ದರೆ ಏನಾಗುತ್ತಿತ್ತು ? ಅವನಿಗೆ ರಾಜ್ಯಭಿಷೇಕವಾಗುತ್ತಿತ್ತು ಅಥವಾ ಅವನ ವನವಾಸವು ತಪ್ಪುತ್ತಿತ್ತು! ಆದರೆ ಅವನು ಮಾಡಿದ ಇತರ ಪುರುಷಾರ್ಥಗಳು ಎಷ್ಟೇ ದೊಡ್ಡ ಯೋಗ್ಯತೆಯದ್ದಾಗಿದ್ದರೂ, ತಂದೆಯ ಆಜ್ಞೆಯನ್ನು ಭಂಗಗೊಳಿಸಿದುದರಿಂದ ಅವನಿಗೆ ಎಂದಿಗೂ ಪ್ರತಿಷ್ಠೆ ಮತ್ತು ದೇವತ್ವವು ಪ್ರಾಪ್ತವಾಗುತ್ತಿರಲಿಲ್ಲ, ಇದು ನಿಶ್ಚಿತ.

ಭಕ್ತ ಪುಂಡಲೀಕನ ಕಡೆಗಾದರೂ ಇಂತಹ ಯಾವ ಗೌರವದ ವಿಷಯವಿತ್ತು? ವಿದ್ವಾನ, ಜ್ಞಾನಮೂರ್ತಿ, ಪ್ರಸಿದ್ಧ ಪಂಡಿತ, ಪ್ರತಿಭಾವಂತ, ಗ್ರಂಥಕಾರ, ಸಂಗೀತಕಾರ ಅಥವಾ ಬಹಳ ದೊಡ್ಡ ಶ್ರೀಮಂತ ಅಥವಾ ಶ್ರೇಷ್ಠ ತಪಸ್ವಿ ಇವುಗಳಲ್ಲಿನ ಯಾವ ಗುಣಕ್ಕಾಗಿ ಪುಂಡಲೀಕನು ಪ್ರಸಿದ್ಧನಾಗಿದ್ದನು? ಅವನ ಕಡೆಗೆ ತಾಯಿ-ತಂದೆಯರ ಸೇವೆಯ ಶಸ್ತ್ರವಿತ್ತು ! ಆದ್ದರಿಂದ ಆ ಸಾಮಾನ್ಯ ಮನುಷ್ಯನು ಐತಿಹಾಸಿಕನಾದನು.

ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವವನು ಅಹಂಕಾರದಿಂದಾಗಿ ತಾಯಿ-ತಂದೆಗೆ ಸಾಮಾನ್ಯ ನಮಸ್ಕಾರವನ್ನೂ ಮಾಡುವುದಿಲ್ಲ! 

ಮೂರ್ತಿಗಳ ಪೂಜೆಅರ್ಚನೆ ಮಾಡುವುದು ತುಲನೆಯಲ್ಲಿ ತುಂಬಾ ಸುಲಭವಾಗಿರುತ್ತದೆ; ಆದರೆ ಜೀವಂತ ಮನುಷ್ಯನನ್ನು ಸೇವೆಯಿಂದ ವಶಪಡಿಸಿಕೊಳ್ಳುವುದು ಮಾತ್ರ ತುಂಬಾ ಕಠಿಣವಾಗಿರುತ್ತದೆ. ಈ ಅರ್ಥದಿಂದಲೇ ‘ಸೇವಾಧರ್ಮಃ ಪರಮ ಗಹನೋ ಯೋಗಿನಾಮ್ ಅಪಿ ಅಗಮ್ಯಃ |’ (ನೀತಿಶತಕ, ಶ್ಲೋಕ ೪೨) ಅಂದರೆ ‘ಸೇವೆಯ ಧರ್ಮವನ್ನು ಆಚರಿಸುವುದು ಬಹಳ ಕಠಿಣ ಮತ್ತು ಯೋಗಿಗಳಿಗೂ ಅಗಮ್ಯವಾಗಿದೆ’, ಎಂದು ಭರ್ತುಹರಿಯು ಹೇಳಿದ್ದಾನೆ. ದೇವಸ್ಥಾನದಲ್ಲಿನ ಮೂರ್ತಿಗೆ ಸಾಷ್ಟಾಂಗ ನಮಸ್ಕಾರ ಮಾಡುವ ಮನುಷ್ಯನು ಮನೆಯಲ್ಲಿರುವ ತಾಯಿ-ತಂದೆಯ ರೂಪದಲ್ಲಿನ ದೇವರಿಗೆ ಬಗ್ಗಿ ನಮಸ್ಕಾರ ಮಾಡುವುದಂತೂ ದೂರದ ಮಾತಾಯಿತು, ಸಾಮಾನ್ಯ ನಮಸ್ಕಾರವನ್ನು ಮಾಡಲೂ ತಯಾರಿರುವುದಿಲ್ಲ, ಇದು ಸಹ ನಿತ್ಯದ ಅನುಭವವಾಗಿದೆ; ಏಕೆಂದರೆ ಕಲ್ಲಿನ ಮೂರ್ತಿಯೆದುರು ಬಗ್ಗುವಾಗ ಅಹಂಕಾರಕ್ಕೆ ಪೆಟ್ಟು ಬೀಳುವ ಪ್ರಶ್ನೆ ಬರುವುದಿಲ್ಲ; ಆದರೆ ಜೀವಂತ ವ್ಯಕ್ತಿಯೆದುರು ಬಗ್ಗುವಾಗ ಅಹಂಕಾರದ ಮೊನೆ ಮುರಿಯುತ್ತದೆ. ಅದರಿಂದ ಮಾನಸಿಕ ತೊಂದರೆಯಾಗುತ್ತದೆ, ಆದ್ದರಿಂದ ಮನುಷ್ಯನು ಚಿಕ್ಕಂದಿನಿಂದಲೇ ನಮ್ರನಿಲ್ಲದಿದ್ದರೆ, ಮನೆಯಲ್ಲಿ ತಾಯಿ-ತಂದೆ ಇದ್ದರೂ ಅವನು ಅವರ ಸೇವೆಯನ್ನು ಮಾಡುವುದಿಲ್ಲ ಅಥವಾ ಅವರೆದುರು ಬಗ್ಗುವುದೂ ಇಲ್ಲ.

ತಾಯಿ-ತಂದೆಯ ಮನಃಪೂರ್ವಕ ಆಶೀರ್ವಾದವು ಅವರ ಮಕ್ಕಳಿಗೆ ಸಿಕ್ಕಿರುತ್ತದೆ. ಆ ಸಹಜ ಕ್ರಿಯೆಯು ಪ್ರೇಮದಿಂದ ಮತ್ತು ರಕ್ತದ ಸಂಬಂಧದಿಂದ ಘಟಿಸುತ್ತಲೇ ಇರುತ್ತದೆ. ಯಾವುದೇ ತಾಯಿ-ತಂದೆ ಸಾಮಾನ್ಯವಾಗಿ ತಮ್ಮ ಮಕ್ಕಳಿಗೆ ಕೆಟ್ಟದ್ದಾಗಬೇಕೆಂದು ಎಂದಿಗೂ ಆಲೋಚಿಸುವುದಿಲ್ಲ; ಇದಾಯಿತು ಮಾತೃ-ಪಿತೃಧರ್ಮ; ಆದರೆ ಎಲ್ಲಿಯವರೆಗೆ ಪುತ್ರಧರ್ಮದಿಂದ, ಸೇವಾ ಆರೈಕೆಯ ಮಾರ್ಗದಿಂದ ಮಕ್ಕಳು ತಮ್ಮ ತಾಯಿ-ತಂದೆಯನ್ನು ಮನಃಪೂರ್ವಕ ಪ್ರಸನ್ನಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಅವರ ಆಶೀರ್ವಾದವು ಒಮ್ಮುಖವಾಗಿರುತ್ತದೆ. ಅದಕ್ಕೆ ತುಂಬಾ ಅರ್ಥವಿರುವುದಿಲ್ಲ. ಆ ಆಶೀರ್ವಾದದಿಂದ ಮಕ್ಕಳ ಅಕಲ್ಯಾಣವಾಗದಿದ್ದರೂ, ಆ ಆಶೀರ್ವಾದದಿಂದ ಮಕ್ಕಳಿಗೆ ಬಹಳಷ್ಟು ಯಶಸ್ಸು ಸಿಗುವುದಿಲ್ಲ ಎಂಬುದೂ ನಿಜ, ಎಂಬುದನ್ನು ಮರೆಯಬೇಡಿರಿ.

ಅಹಂಕಾರ ಕಡಿಮೆಯಾಗದ ಹೊರತು ಆಜ್ಞಾಪಾಲನೆಯಾಗುವುದು ಸಾಧ್ಯವಿಲ್ಲ !

ಆಜ್ಞಾಪಾಲನೆ ಮಾಡುವುದು ಎಷ್ಟು ಸುಲಭವೆನಿಸುತ್ತದೆಯೋ, ಅದು ಅಷ್ಟು ಸುಲಭವಾಗಿಲ್ಲ. ತಂದೆಯ ಆಜ್ಞೆಯನ್ನು ಪ್ರಮಾಣವೆಂದು ತಿಳಿದುಕೊಳ್ಳುವುದು, ಅದನ್ನು ಒಂದು ವ್ರತವೆಂದು ಅಥವಾ ಶ್ರೇಷ್ಠ ಧರ್ಮಾಚರಣೆ ಎಂದು, ತಿಳಿದುಕೊಳ್ಳುವ ವೃತ್ತಿ ಆ ಪುತ್ರನಲ್ಲಿ ಮೂಲದಲ್ಲಿಯೇ ಇರಬೇಕಾಗುತ್ತದೆ. ಯಾರದ್ದಾದರೂ ಆಜ್ಞೆಯನ್ನು ಆಚರಣೆಯಲ್ಲಿ ತರಬೇಕಾದರೆ ಮನಸ್ಸಿಗೆ ಆಜ್ಞೆಯನ್ನು ಕೇಳುವ ಅಭ್ಯಾಸ ಮತ್ತು ಅದರ ಸಂಸ್ಕಾರ ಇರಬೇಕಾಗುತ್ತದೆ. ಇತರರಿಗೆ ಆಜ್ಞೆಯನ್ನು ಮಾಡಲು ಮನುಷ್ಯನು ತುಂಬಾ ಆಸಕ್ತನಾಗಿರುತ್ತಾನೆ, ಆದರೆ, ಅದರ ತುಲನೆಯಲ್ಲಿ ಆಜ್ಞಾಧಾರಕನಾಗುವುದರ ಬಗೆಗಿನ ಆಸಕ್ತಿ ತುಂಬಾ ಕಡಿಮೆ ಇರುತ್ತದೆ ಮತ್ತು ಅದು ಅಷ್ಟು ಸುಲಭವೂ ಆಗಿರುವುದಿಲ್ಲ. ಯಾರದ್ದಾದರೂ ಆಜ್ಞೆಯನ್ನು ಪಾಲಿಸಬೇಕಾದರೆ ಮೊದಲು ಆ ಆಜ್ಞೆಗೆ ಮಹತ್ವವನ್ನು ನೀಡಬೇಕಾಗುತ್ತದೆ. ಆದ್ದರಿಂದ ನಮ್ಮ ಅಹಂಕಾರ ಮತ್ತು ನಮ್ಮ ಮಹತ್ವವನ್ನು ದೂರವಿಡಬೇಕಾಗುತ್ತದೆ. ಹಾಗೆಯೆ ದೊರಕಿದ ಆಜ್ಞೆ ಯಾವಾಗಲೂ ಪ್ರಿಯವಾಗಿರುತ್ತದೆ ಎಂದೇನಿಲ್ಲ. ಅದು ಕೆಲವೊಮ್ಮೆ ಅಪ್ರಿಯವೂ ಆಗಿರಬಹುದು. ಆಜ್ಞೆಯು ಯಾವುದೇ ಆಗಿರಲಿ, ಮುಂದಿನ ಭವಿಷ್ಯದ ವಿಚಾರ ಮಾಡದೇ ಆ ಆಜ್ಞೆಯನ್ನು ಕೇಳಿದ ತಕ್ಷಣವೇ ಕೃತಿಯಲ್ಲಿ ತರಲು, ಒಂದು ಪವಿತ್ರ ಕರ್ತವ್ಯವೆಂದು, ತತ್ಪರರಾಗಿರಬೇಕಾಗಿರುತ್ತದೆ, ಇದು ಅತ್ಯಂತ ಅಪರೂಪದ ಮತ್ತು ತುಂಬಾ ಭಾಗ್ಯದ ಮತ್ತು ಐತಿಹಾಸಿಕಗುಣವಾಗಿರುತ್ತದೆ.

ಪ್ರಿಯವಾದದ್ದನ್ನು ಬಿಟ್ಟು ಅಪ್ರಿಯವಾದದ್ದನ್ನು ಯಾರಿಗೆ ಸ್ವೀಕರಿಸಲು ಬರುವುದಿಲ್ಲವೋ, ಅವನಿಗೆ ಆಜ್ಞಾಪಾಲನೆಯನ್ನು ಮಾಡಲು ಬರುವುದಿಲ್ಲ. ಅಹಂಕಾರ ನಮ್ಮ ದೇಹದಿಂದ ಸಂಪೂರ್ಣ ಹೋಗದ ಹೊರತು ಯಾರಿಗೂ ಆಜ್ಞಾಪಾಲನೆ ಮಾಡುವುದು ಸಾಧ್ಯವಾಗುವುದಿಲ್ಲ. ತಮ್ಮ ದೊಡ್ಡಸ್ತಿಕೆ, ತಮ್ಮ ವಿದ್ಯೆ ಮತ್ತು ತಮ್ಮ ಸಾಮಾಜಿಕ ಪ್ರತಿಷ್ಠೆ, ಇವೆಲ್ಲವುಗಳನ್ನು ಸಂಪೂರ್ಣವಾಗಿ ಮರೆಯದ ಹೊರತು ಯಾರಿಗೂ ಆಜ್ಞಾಪಾಲನೆ ಮಾಡಲು ಸಾಧ್ಯವಾಗುವುದಿಲ್ಲ. ಆಜ್ಞಾಪಾಲನೆಯೇ ಈಶ್ವರನ ಸೇವೆ, ಆಜ್ಞಾಪಾಲನೆಯೇ ಪ್ರಧಾನ ಕರ್ತವ್ಯ ಮತ್ತು ಪಿತೃ ಆಜ್ಞಾಪಾಲನೆಯೇ ಶ್ರೇಷ್ಠ ಧರ್ಮಾಚರಣೆ, ಎಂದು ಎಲ್ಲ ರೀತಿಯಲ್ಲಿಯೂ ಸ್ವೀಕರಿಸದೇ ಯಾರಿಗೂ ಆಜ್ಞಾಪಾಲನೆ ಪೂರ್ಣಾರ್ಥದಿಂದ ಮಾಡಲು ಸಾಧ್ಯವಿಲ್ಲ.

ಪಿತೃಸೇವೆ ಮತ್ತು ಆಜ್ಞಾಪಾಲನೆಯ ವ್ರತಾಚರಣೆಯ ರಹಸ್ಯ ಮತ್ತು ಸಾಮರ್ಥ್ಯ !

ಪ್ರಭು ಶ್ರೀರಾಮನು ಆಜ್ಞಾಪಾಲನೆ ಮಾಡುವಾಗ, ಭಗವಾನ ಶ್ರೀಕೃಷ್ಣನು ಸಾಂದೀಪನಿ ಋಷಿಗಳ ಆಶ್ರಮದಲ್ಲಿ ಸೇವೆಯನ್ನು ಮಾಡುವಾಗ, ಭಕ್ತ ಪುಂಡಲೀಕನು ತಾಯಿ-ತಂದೆಯರ ಸೇವೆಯನ್ನು ಮಾಡುವಾಗ ಅಥವಾ ತರುಣ ನರೇಂದ್ರನು (ಸ್ವಾಮಿ ವಿವೇಕಾನಂದ) ರಾಮಕೃಷ್ಣ ಪರಮಹಂಸರ ಸೇವೆಯನ್ನು ಮಾಡುವಾಗ ಭವಿಷ್ಯದ ಬಗ್ಗೆ ಎಂದಿಗೂ ವಿಚಾರ ಮಾಡಿರಲಿಲ್ಲ. ತಂದೆಯ ಸೇವೆಯನ್ನು ಮಾಡುವುದು ಅಥವಾ ತಂದೆಯ ಆಜ್ಞಾಪಾಲನೆ ಮಾಡುವುದು, ಸರ್ವಶ್ರೇಷ್ಠ ವ್ರತಾಚರಣೆಯಾಗಿದೆ. ಶ್ರೀರಾಮನು ಒಂದು ಆಜ್ಞಾಪಾಲನೆಗಾಗಿ ತನ್ನ ನಾಯೋಜಿತ ಅಧಿಕಾರದ (ಹಕ್ಕು) ರಾಜಸಿಂಹಾಸನವನ್ನು ನಿರಾಕರಿಸಿದನು; ಆದರೆ ಅದರಿಂದಲೇ ಅವನು ಮನುಕುಲದ ಹೃದಯಸಿಂಹಾಸನದ ಮೇಲೆ ಶಾಶ್ವತವಾಗಿ ಆರೂಢನಾದನು. ಅವನು ಸಿಂಹಾಸನವನ್ನು ತ್ಯಜಿಸಿದನು. ಆದ್ದರಿಂದ ‘ಶ್ರೀರಾಮನ ಸಿಂಹಾಸನತ್ಯಾಗ’ ವಿಶ್ವದ ಒಂದು ಅಲಂಕಾರವಾಯಿತು. ಒಂದು ಪಿತೃ ಆಜ್ಞಾಪಾಲನೆಯಿಂದ ಶ್ರೀರಾಮನು ವಿಶ್ವವಂದ್ಯನೆನಿಸಿಕೊಂಡನು. ವಿಶ್ವದ ಪ್ರೇರಣಾಸ್ತ್ರೋತನೆನಿಸಿಕೊಂಡನು ಮತ್ತು ಮಹಾಮಹಿಮನಾದನು. ಪಿತೃಸೇವೆ ಮತ್ತು ಆಜ್ಞಾಪಾಲನೆಯ ವ್ರತಾಚರಣೆಯ ರಹಸ್ಯ ಮತ್ತು ಸಾಮರ್ಥ್ಯವು ಗಮನಕ್ಕೆ ಬಂದರೆ, ವೃದ್ಧಾಶ್ರಮದ ವ್ಯರ್ಥಸ್ತುತಿಯು ಕಡಿಮೆಯಾಗುವುದು. ವೃದ್ಧಾಶ್ರಮವು ಒಂದು ಸಾಮಾಜಿಕ ಕಲಂಕವಾಗಿದ್ದು ಅದು ಸುಶಿಕ್ಷಿತ ವಿಜ್ಞಾನಯುಗದಲ್ಲಿನ ಮಾನವರ ದುಃಖಾಂತವಾಗಿದೆ, ಎಂಬುದು ಗಮನಕ್ಕೆ ಬಂದರೆ ಸ್ವಂತ ಮನೆಯೇ ‘ದೇವಮಂದಿರ’ವಾಗುವುದು.

ಮಾತೃದೇವೋ ಭವ | ಪಿತೃದೇವೋ ಭವ |
– ದಾಜೀ ಪಣಶೀಕರ 

(ಆಧಾರ : ಸಾಮನಾ, ೬.೬.೨೦೧೦)