ಅಮೇರಿಕದ ಕೆಟ್ಟ ಕಣ್ಣು ಬಿದ್ದರೆ ಏನಾಗಬಹುದು ? ಎನ್ನುವುದಕ್ಕೆ ವೆನಿಜುವೆಲಾ ಜೀವಂತ ಉದಾಹರಣೆ, ಈಗ ಉಕ್ರೇನ್‌ ಸರದಿ !

ಎಡದಿಂದ ಉಕ್ರೇನ್‌ ಅಧ್ಯಕ್ಷ ವ್ಲೊದಿಮಿರ್‌ ಝೆಲೆನ್‌ಸ್ಕಿ ಹಾಗೂ ಅಮೇರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್‌

ಅಮೇರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹಾಗೂ ಉಕ್ರೇನ್‌ ಅಧ್ಯಕ್ಷ ವ್ಲೊದಿಮಿರ್‌ ಝೆಲೆನ್‌ಸ್ಕಿ ನಡುವಿನ ಬಹಿರಂಗ ಮಾತುಕತೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಮಾಧ್ಯಮಗಳ ಮುಂದೆ ಉಭಯ ದೇಶಗಳ ನಾಯಕರ ಗಂಭೀರ ಮಾತುಕತೆಯ ಬೆನ್ನಲ್ಲೇ, ಜಾಗತಿಕ ಮಟ್ಟದಲ್ಲಿ ಅಮೇರಿಕ ಪ್ರಾಬಲ್ಯದ ಕುರಿತು ಚರ್ಚೆ ನಡೆಯುತ್ತಿದೆ. ಅಮೇರಿಕ ಕಣ್ಣು ಬಿದ್ದ ದೇಶಗಳು ಅಷ್ಟು ಸುಲಭದಲ್ಲಿ ಮೇಲೇಳಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ಅಭಿಪ್ರಾಯ. ಹಿಂದೆ ವೆನೆಜುವೆಲಾ ಎಂಬ ಸಣ್ಣ ದೇಶವು, ತಲಾದಾಯದ ಲೆಕ್ಕಾಚಾರದಲ್ಲಿ ಶ್ರೀಮಂತ ದೇಶ ಎನಿಸಿಕೊಂಡಿತ್ತು. ಆದರೆ ಈ ದೇಶದ ಸದ್ಯದ ಸ್ಥಿತಿ ಹೇಳತೀರದಾಗಿದೆ. ಇವೆಲ್ಲಾ ಒಂದಕ್ಕೊಂದು ಸಂಬಂಧ ಹೊಂದಿವೆ. ಈ ಕುರಿತು ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದಿರುವ ಲೇಖನ ಇಲ್ಲಿದೆ.

೧. ಅತ್ಯಂತ ಶ್ರೀಮಂತ ದೇಶವಾಗಿರುವ ವೆನೆಜುವೆಲಾ ದೇಶದ ಇಂದಿನ ಸ್ಥಿತಿ

ವೆನೆಜುವೆಲಾ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಅಮೇರಿಕ ಮತ್ತು ಸ್ಪೇನ್‌ ದೇಶಗಳಿಗೆ ಸದಾ ಸೆಟೆದು ನಿಂತ ಆ ದೇಶದ ದಿವಂಗತ ನಾಯಕ ಹುಗೊ ಚಾವೇಸ್. ಬಹುತೇಕ ದಕ್ಷಿಣ ಅಮೇರಿಕದ ಅಧ್ಯಕ್ಷರು ನಿಗೂಢ ಸಾವನ್ನಪ್ಪಿದವರೇ. ಗಟ್ಟಿಮುಟ್ಟಾಗಿದ್ದ ಚಾವೇಸ್‌ ಕೂಡ ಅದೇ ದಾರಿಯಲ್ಲಿ ಸವೆದು ಹೋದ ನಾಯಕ. ಆತನ ಸಾವಿನ ನಂತರ ಸೋಷಿಯಲಿಸ್ಟ್ ಪಾರ್ಟಿಯ ಮೇಲೆ ಹಿಡಿತ ಹೊಂದಿದ್ದ ಆತನ ಪರಮಾಪ್ತ ನಿಕೋಲಸ್‌ ಮದುರೋ ವೆನೆಜುವೆಲಾದ ಆಡಳಿತ ಚುಕ್ಕಾಣಿ ಹಿಡಿದ. ಅಂದಿನಿಂದ ವೆನೆಜುವೆಲಾದ ಜನರ ಬದುಕು ಅತ್ಯಂತ ದುರ್ಬರವಾಗಿ ಹೋಗಿದೆ. ಚಾವೇಸ್‌ ಇದ್ದಾಗ ಎಲ್ಲವೂ ತುಂಬಾ ಚೆನ್ನಾಗಿತ್ತು ಎನ್ನುವ ಹಾಗೇನು ಇರಲಿಲ್ಲ. ಅಂದರೆ ಇಂದಿನ ಸ್ಥಿತಿಗಿಂತ ಚೆನ್ನಾಗಿತ್ತು. ಇವತ್ತು ವೆನೆಜುವೆಲಾ ಆರ್ಥಿಕವಾಗಿ ದಿವಾಳಿ ಎದ್ದು ಹೋಗಿದೆ.

ನಿಮಗೆ ಗೊತ್ತೇ ? ವೆನೆಜುವೆಲಾ ೧೯೫೦ ರಿಂದ ೧೯೮೦ ರ ವರೆಗೆ ಅತ್ಯಂತ ಶ್ರೀಮಂತ ದೇಶವಾಗಿತ್ತು. ಅದರ ಆರ್ಥಿಕ ಅಭಿವೃದ್ಧಿಯ ದರ ಕೂಡ ಅತ್ಯಂತ ಚೆನ್ನಾಗಿಯೇ ಇತ್ತು. ಲ್ಯಾಟಿನ್‌ ಅಮೇರಿಕ ದೇಶಗಳ ಆರ್ಥಿಕತೆಯಲ್ಲಿ ವೆನಿಜುವೆಲಾ ಪ್ರಥಮ ಸ್ಥಾನದಲ್ಲಿತ್ತು. ೧೯೫೦ ರ ತಲಾದಾಯ ವಾರ್ಷಿಕ ೭೫೦೦ ಅಮೇರಿಕನ್‌ ಡಾಲರ್‌ ಇತ್ತು. ಅಮೇರಿಕ ವಿಶ್ವದ ಹಿರಿಯಣ್ಣನ ಪ್ರಜೆಗಳ ಅಂದಿನ ತಲಾದಾಯ ವಾರ್ಷಿಕ ೯೫೦೦ ಡಾಲರ್. ೧೯೭೦ ರ ದಶಕದಲ್ಲಿ ವೆನಿಜುವೆಲಾ ದೇಶ ಅಮೇರಿಕ ದೇಶದ ತಲಾದಾಯವನ್ನು ಸಹ ಹಿಂದಿಕ್ಕಿತ್ತು. ಆ ವರ್ಷದಲ್ಲಿ ಫಾರಿನ್‌ ಡೈರೆಕ್ಟ್ ಇನ್ವೆಸ್ಟ್ಮೆಂಟ್‌ (ವಿದೇಶಿ ನೇರ ಬಂಡವಾಳ) ಹೆಚ್ಚು ಹರಿದು ಬಂದದ್ದು ಅದಕ್ಕೆ ಕಾರಣವಾಗಿತ್ತು. ೨೦೧೯ ರ ಮಾರ್ಚ್‌ನಲ್ಲಿ ಅಮೇರಿಕದ ಜನರ ತಲಾದಾಯ ವಾರ್ಷಿಕ ೬೫ ಸಾವಿರ ಡಾಲರ್! ಅದೇ ವೆನಿಜುಯೆಲಾ ಪ್ರಜೆಗಳ ವಾರ್ಷಿಕ ತಲಾದಾಯ ೫ ಸಾವಿರ ಡಾಲರ್‌ಗೆ ಕುಸಿದು ಹೋಯ್ತು. ಅಂದರೆ ಗಮನಿಸಿ ೧೯೫೦ ರಲ್ಲಿ ಜನ ಎಷ್ಟು ಹಣ ಗಳಿಸುತ್ತಿದ್ದರೋ ಅದಕ್ಕಿಂತ ೪೦-೫೦ ಪ್ರತಿಶತ ಕಡಿಮೆ ಹಣವನ್ನು ಗಳಿಸುತ್ತಿದ್ದಾರೆ.

೧೯೫೦ ರಲ್ಲಿ ವೆನಿಜುವೆಲಾ ಜಪಾನಿಗಿಂತ ೪ ಪಟ್ಟು, ಚೀನಾಗಿಂತ ೧೨ ಪಟ್ಟು ಹೆಚ್ಚು ಶ್ರೀಮಂತ ರಾಷ್ಟ್ರವಾಗಿತ್ತು. ಇಂತಹ ಶ್ರೀಮಂತ ರಾಷ್ಟ್ರ ಇಂದು ಬಡತನದ ಕರಾಳ ಹಿಡಿತಕ್ಕೆ ಸಿಕ್ಕಿ ನಲುಗಿ ಹೋಗುತ್ತಿದೆ. ನಡು ಬೀದಿಯಲ್ಲಿ ಜನ ಹಸಿವಿನಿಂದ ಸಾಯುತ್ತಿದ್ದಾರೆ. ೨೦೨೫ರಲ್ಲಿ ಅಮೇರಿಕ ದೇಶದ ತಲಾದಾಯ ೮೯ ಸಾವಿರ ಡಾಲರ್‌ (೭೫ ಲಕ್ಷ ೬೫ ಸಾವಿರ ರೂಪಾಯಿ) ಆಗಿದೆ. ಅದೇ ವೆನಿಜುವೆಲಾ ತಲಾದಾಯ ಮತ್ತೆ ಕುಸಿತ ಕಂಡು ವಾರ್ಷಿಕ ೪ ಸಾವಿರ ಡಾಲರ್‌ಗೆ (೩ ಲಕ್ಷ ೪೦ ಸಾವಿರ ರೂಪಾಯಿಗಳಿಗೆ) ಇಳಿದಿದೆ.

೨. ಈಗ ಉಕ್ರೇನ್‌ ಮೇಲೆ ಕಣ್ಣು ಹಾಕಿರುವ ಅಮೇರಿಕ

ಅಮೇರಿಕ ಎನ್ನುವ ದೇಶದ ಕೆಟ್ಟ ಕಣ್ಣು ಬಿದ್ದರೆ, ಅಲ್ಲಿನ ದೇಶದ ರಾಜಕೀಯ ನಾಯಕರೂ ಬಿಕರಿಗೆ ಸಿಕ್ಕು ಬಿಟ್ಟರೆ ಏನಾಗಬಹುದು ಎನ್ನುವುದಕ್ಕೆ ವೆನಿಜುವೆಲಾ ಒಂದು ಜೀವಂತ ಉದಾಹರಣೆ. ಅಂತಹ ಅಮೇರಿಕದ ಕಣ್ಣು ಈಗ ಉಕ್ರೇನ್‌ ಮೇಲೆ ಬಿದ್ದಿದೆ. ಪುಟಿನ್‌ ಬಹಳ ಜಾಣ. ಯುದ್ಧವನ್ನು ಒಂದು ದಿನದಲ್ಲಿ ಗೆದ್ದು ಬಿಡುತ್ತೇನೆ ಎಂದುಕೊಂಡಿದ್ದವರಿಗೆ ಉಕ್ರೇನ್‌ ಸರಿಯಾದ ಪೆಟ್ಟು ಕೊಟ್ಟಿತು. ಇದರಿಂದ ಸಾಕಷ್ಟು ಹಾನಿ ಮಾಡಿಕೊಂಡ ಪುಟಿನ್‌ ಈಗ ಜಾಣ ನಡೆಯನ್ನು ಇಟ್ಟಿದ್ದಾರೆ. ಈ ಬಾರಿ ಟ್ರಂಪ್‌ ಅತಿ ಅಗ್ರೆಸ್ಸಿವ್‌ (ಆಕ್ರಮಣಕಾರಿ) ಆಗಿರುವುದನ್ನು ಮೊದಲೇ ಗ್ರಹಿಸಿ ಬಿಟ್ಟಿದ್ದಾರೆ. ‘ಟ್ರಂಪ್‌ ಅಧಿಕಾರದಲ್ಲಿ ಮುಂದುವರೆದಿದ್ದರೆ ರಷ್ಯಾ-ಉಕ್ರೇನ್‌ ವಾಗುತ್ತಲೇ ಇರಲಿಲ್ಲ’ ಎನ್ನುವ ಮೂಲಕ ಟ್ರಂಪ್‌ ಅವರ ಪ್ರಾಬಲ್ಯವನ್ನು ಒಪ್ಪಿಕೊಂಡಿದ್ದಾರೆ. ಇನ್ನೇನಿದ್ದರೂ ಉಕ್ರೇನ್‌ ಎನ್ನುವ ಕುರಿಯ ಮೇಲಿರುವ ಉಣ್ಣೆಯನ್ನು ಸರಿಯಾಗಿ ಬೋಳಿಸಿಕೊಳ್ಳುವ ಕೆಲಸ ಬಾಕಿಯಿದೆ. ಇತ್ತೀಚಿನ ಮಾತುಕತೆ ದೊಡ್ಡಣ್ಣ ತನ್ನ ಶಕ್ತಿಯನ್ನು ತೋರಿಸುವುದಕ್ಕೆ, ಹುಷಾರು ನಾನು ಯಾರನ್ನಾದರೂ ಮಟ್ಟ ಹಾಕಬಲ್ಲೆ ಎಂದು ತೋರಿಸುವುದಕ್ಕೆ ಮಾಡಿದಂತಿದೆ. ಜಾಗತಿಕ ಕಚ್ಚಾಟದಲ್ಲಿ ಸದ್ದಿಲ್ಲದೆ ಕರಗುತ್ತಿರುವ ಸಂಪತ್ತು, ನಿಧಾನವಾಗಿ ಜನರ ನೆಮ್ಮದಿಯನ್ನು ಕಸಿಯಲಿದೆ. ಈ ವರ್ಷ ಇನ್ನಷ್ಟು ಇಂತಹ ಉನ್ಮಾದಗಳಿಗೆ ಸಾಕ್ಷಿಯಾಗಲಿದೆ.

– ರಂಗಸ್ವಾಮಿ ಮೂಕನಹಳ್ಳಿ (ಕೃಪೆ : ದೈನಿಕ ‘ಹಿಂದುಸ್ಥಾನ’ ಟೈಮ್ಸ್‌, ಕನ್ನಡ)