ದಾನವೇ ಮನುಷ್ಯ ಜೀವನದ ಆಶ್ರಯವಾಗಿದ್ದು ಅದನ್ನು ನಿರಪೇಕ್ಷವಾಗಿ ಮಾಡುವುದು ಮಹತ್ವದ್ದಾಗಿದೆ !

ಧರ್ಮದ ವಿಷಯದಲ್ಲಿ ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಅಮೂಲ್ಯ ಮಾರ್ಗದರ್ಶನ !

ಪ್ರಶ್ನೆ : ಕಿಂ ಸ್ವಿತ್‌ ಏಕಪದಂ ಯಶಃ ? ಕಿಂ ಸ್ವಿದ್‌ ಅಸ್ಯ ಪರಾಯಣಮ್‌ !

ಅರ್ಥ : ಯಶಸ್ಸು ಮತ್ತು ಕೀರ್ತಿಯ ಅಧಿಷ್ಠಾನ ಯಾವುದು ? ಮನುಷ್ಯನ ಜೀವನದ ಆಶ್ರಯ ಯಾವುದು ?

ಉತ್ತರ : ದಾನಮ್‌ |

೧. ದಾನ ನಿರಪೇಕ್ಷವಾಗಿರಬೇಕು !

ದಾನದಿಂದ ಕೀರ್ತಿ ಸಿಗುತ್ತದೆ, ಕೀರ್ತಿ ಹೆಚ್ಚಾಗುತ್ತದೆ ಇದು ನಿಜ, ಆದರೆ ಕೀರ್ತಿ ಸಿಗಬೇಕೆಂದು ದಾನ ಮಾಡುವುದು ಯೋಗ್ಯವಲ್ಲ. ಇಂತಹ ದಾನವು ಒಂದು ರೀತಿಯ ವ್ಯಾಪಾರವೇ ಆಗಬಹುದು. ದಾನವನ್ನು ನಿರಪೇಕ್ಷವಾಗಿ ಮಾಡಬೇಕು. ಯಾವುದಾದರೊಂದು ಸಂಸ್ಥೆಗೆ ಹೆಚ್ಚಿನ ಆದಾಯ ತೆರಿಗೆಯನ್ನು ಉಳಿಸಲು ದಾನ ಮಾಡಬೇಕಾದರೆ ಹಾಗೂ ‘ಅದರಲ್ಲಿಯೂ ತನ್ನ ಹೆಸರಿನ ಫಲಕ ಹಾಕಿಸುವ ಅಭಿಲಾಷೆಯಿದ್ದರೆ’ ಅದು ನಿಜವಾದ ದಾನವಾಗುವುದಿಲ್ಲ. ಆದಿ ಶಂಕರಾಚಾರ್ಯರು ‘ಕಿಂ’ ದಾನಮನಾಕಾಂಕ್ಷಮ್‌ |’, ಅಂದರೆ ‘ದಾನ ಹೇಗಿರಬೇಕು ?’, ಅದು ನಿರಪೇಕ್ಷ ಆಗಿರಬೇಕು’, ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಪ.ಪೂ. ಸ್ವಾಮಿ ವರದಾನಂದ ಭಾರತಿ

೨. ದಾನ ಮಾಡುವವರ ವೃತ್ತಿ ಹೇಗಿರಬೇಕು ?

ದಾನವೇ ಮನುಷ್ಯನ ವೈಶಿಷ್ಟ್ಯವಾಗಿದೆ. ಮನುಷ್ಯನಲ್ಲಿ ಸಂಗ್ರಹ ಪ್ರವೃತ್ತಿಯು ನೈಸರ್ಗಿಕವಾಗಿರುತ್ತದೆ, ಆದರೆ ಆ ಸಂಗ್ರಹವನ್ನು ದಾನಕ್ಕಾಗಿ ಮಾತ್ರ ಉಪಯೋಗಿಸಿದರೆ ಅದು ಮನುಷ್ಯನ ಜೀವನವಾಗು ತ್ತದೆ. ‘ಮನುಷ್ಯನ ಸಜ್ಜನತೆಯೇ ಅವನ ಮನುಷ್ಯತ್ವವಾಗಿದೆ.’ ಕೇವಲ ಶರೀರ ರಚನೆ ಹಾಗೂ ಶರೀರಕ್ರಿಯೆ ಮನುಷ್ಯನ ಹಾಗಿರುವುದು, ಇದು ಪ್ರಾಣಿ ಸಮಾನವೆನಿಸುತ್ತದೆ. ಮನುಷ್ಯತ್ವ ಇದಕ್ಕಿಂತ ಬೇರೆಯೇ ಆಗಿದೆ. ಸಜ್ಜನ ಮನುಷ್ಯ ಕೊಡಲು, ತ್ಯಾಗ ಮಾಡಲು ಹಾಗೂ ದಾನ ಮಾಡಲಿಕ್ಕಾಗಿ ಸಂಗ್ರಹ ಮಾಡುತ್ತಾನೆ. ಅವನ ವೃತ್ತಿ ಮೇಘಗಳ (ಮೋಡಗಳ) ಹಾಗಿರುತ್ತದೆ ಹಾಗೂ ಇರಬೇಕು.

‘ಆದಾನಂ ಹಿ ವಿಸರ್ಗಾಯ ಸತಾಂ ವಾರಿಮುಚಾಮಿವ |’

(ರಘುವಂಶ, ಸಂಚಿಕೆ ೪, ಶ್ಲೋಕ ೮೬), ಅಂದರೆ ‘ಹೇಗೆ ಮೋಡ ನೀರನ್ನು ಸಂಗ್ರಹಿಸಿಡದೆ ಅದನ್ನು ವಿಸರ್ಜಿಸುತ್ತದೋ, ಅದೇ ರೀತಿ ಸಜ್ಜನರು ತಮಗೆ ಸಿಕ್ಕಿರುವುದನ್ನು ಸಂಗ್ರಹಿಸಿಡದೆ ಅದನ್ನು ಹಂಚುತ್ತಾರೆ’, ಎಂದು ಸಂತ ಕಾಳೀದಾಸರು ಹೇಳುತ್ತಾರೆ. ಧನಸಂಗ್ರಹದ ಬುದ್ಧಿ ಮತ್ತು ಕೌಶಲ್ಯ ಎಲ್ಲರಲ್ಲಿಯೂ ಇರುತ್ತದೆ, ಎಂದು ಹೇಳಲು ಸಾಧ್ಯವಿಲ್ಲ. ಯಾರಿಗೆ ಅದು ನೈಸರ್ಗಿಕವಾಗಿ ಬಂದಿದೆಯೋ ಅಥವಾ ಯಾರು ಅದನ್ನು ಅಭ್ಯಾಸ ಮಾಡಿ ಗಳಿಸಿದ್ದಾರೋ, ಅವರು ಶ್ರೀಮಂತರಾಗಲೇ ಬೇಕು; ಆದರೆ ಅದಕ್ಕೆ ಶೋಭಿಸುವಂತಹ ದಾನ ಧರ್ಮವನ್ನೂ ಮಾಡಬೇಕು; ಸ್ವಾರ್ಥಬುದ್ಧಿಯೇ ಜೀವನಾಧಾರವಾಗಿರಬಾರದು. ಔದಾರ್ಯ ಜೀವನಕ್ಕೆ ಆಧಾರವಾಗಿರಬೇಕು; ಆದ್ದರಿಂದ ದಾನವನ್ನು ಮನುಷ್ಯನ ‘ಪರಾಯಣ’, ‘ಪರಮಾಶ್ರಯ’, ಎಂದು ಹೇಳಲಾಗಿದೆ.

೩. ಧರ್ಮಶಾಸ್ತ್ರಕ್ಕನುಸಾರ ಉತ್ಪನ್ನದ ವಿಭಜನೆ

ಧರ್ಮಶಾಸ್ತ್ರದಲ್ಲಿ ಹೇಳಿದಂತೆ ಗಳಿಸುವ ಉತ್ಪನ್ನವನ್ನು ತನ್ನ ಸಂಸಾರ, ಸಮಾಜದಲ್ಲಿನ ಪ್ರತಿಷ್ಠೆ, ಆಪ್ತರಿಗೆ ಸಹಾಯ, ರಾಜನಿಗೆ ನೀಡುವ ತೆರಿಗೆ ಹಾಗೂ ದಾನಧರ್ಮ ಹೀಗೆ ೫ ಭಾಗ ಮಾಡಲಾಗಿದೆ.

ಅದರಲ್ಲಿ ಯಾರಿಗೆ ಏನು ಮತ್ತು ಎಷ್ಟು ಪ್ರಮಾಣದಲ್ಲಿ ಕೊಡಬೇಕೆಂದು ಹೇಳಲಾಗಿದೆ. ‘ಸಂಸಾರಕ್ಕೆ ಬೇಕಾಗುವಷ್ಟು ಖರ್ಚು ಅವಶ್ಯ ಮಾಡಬೇಕು. ಉತ್ಪನ್ನದ ಆರನೇ ಭಾಗ ರಾಜನಿಗೆ ತೆರಿಗೆಯೆಂದು ನೀಡಬೇಕು ಹಾಗೂ ಉಳಿದಿರುವುದನ್ನು ದಾನಧರ್ಮ ಮಾಡಬೇಕು’, ಎಂದು ಧರ್ಮಶಾಸ್ತ್ರ ಹೇಳುತ್ತದೆ. ಪರಿಸ್ಥಿತಿ ಹಾಗೂ ಉತ್ಪನ್ನದ ಪ್ರಮಾಣದಲ್ಲಿ ಇದು ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು; ಆದರೆ ಧೋರಣೆ ಹೀಗಿರಬೇಕು. ಸದ್ಯದ ಸ್ಥಿತಿಯಲ್ಲಿ ಹೀಗೆ ವರ್ತಿಸುವುದು ಅಸಾಧ್ಯವಾಗಿದೆ; ಏಕೆಂದರೆ, ಧರ್ಮಶಾಸ್ತ್ರಕ್ಕನುಸಾರ ರಾಜನ ೧/೬ ಭಾಗಾಕಾರ ಆಗುವುದಿಲ್ಲ. ಒಂದು ಷಷ್ಠಾಂಶ, ಅಂದರೆ ಶೇ. ೧೬ ರಿಂದ ೧೭ ರಷ್ಟು ಆಗುತ್ತದೆ. ಮೊದಲು ಪ್ರತ್ಯಕ್ಷ ತೆರಿಗೆಯ ಸ್ವರೂಪ ಇಷ್ಟೇ ಹಾಗೂ ಪರೋಕ್ಷ ತೆರಿಗೆಯಂತೂ ಇರಲೇ ಇಲ್ಲ. ದಾನಧರ್ಮಕ್ಕಾಗಿ ಹೆಚ್ಚಾಗಿ ಕಪ್ಪು ಹಣವನ್ನೇ ಉಪಯೋಗಿಸಲಾಗುತ್ತದೆ. ಜನರ ಜೀವನ ಪ್ರಾಮಾಣಿಕವಾಗಿ ನಡೆದರೆ, ಸರಕಾರದಲ್ಲಿಯೂ ಸುಧಾರಣೆಯಾಗಬಹುದು. ‘ಜನರಿಗೆ ಅವರ ಯೋಗ್ಯತೆಗನುಸಾರ ಆಡಳಿತ ಸಿಗುತ್ತದೆ’, ಎಂಬ ಆಂಗ್ಲ ಗಾದೆಯಿದೆ. ಇಂದಿನ ಆಡಳಿತ ಭ್ರಷ್ಟವಾಗಿದೆ, ಎಂಬುದರಲ್ಲಿ ಸಂಶಯವೇ ಇಲ್ಲ; ಆದರೆ ನಾವು ನಮ್ಮ ಜೀವನವನ್ನೂ ಪರೀಕ್ಷೆ ಮಾಡಿ ನೋಡಬೇಕು. ನಾವು ಸುಧಾರಿಸದೇ ಸಮಾಜ ಅಥವಾ ಆಡಳಿತ ಸುಧಾರಿಸುವ ಅಪೇಕ್ಷೆಯನ್ನಿಡುವುದು ಯೋಗ್ಯವಲ್ಲ.

ಧರ್ಮಶಾಸ್ತ್ರದಲ್ಲಿ ‘ಸಂಪತ್ತನ್ನು ೮ ಅಥವಾ ೧೨ ಭಾಗ ಮಾಡಲಾಗುತ್ತಿತ್ತು. ಅದರಲ್ಲಿ ಅರ್ಧ ಸಂಸಾರಕ್ಕಾಗಿ ಖರ್ಚು ಮಾಡುವುದು, ಬಾಕಿ ಭವಿಷ್ಯಕ್ಕಾಗಿ, ಆಪ್ತಮಿತ್ರರಿಗಾಗಿ, ಲೌಕಿಕ, ರಾಜನ ತೆರಿಗೆ ಮತ್ತು ದಾನಧರ್ಮ ಇತ್ಯಾದಿಗಾಗಿ ಸಮಾನವಾಗಿ ವಿಭಜಿಸಬೇಕು’, ಎಂದು ಹೇಳಲಾಗಿತ್ತು. ಇದೆಲ್ಲವನ್ನೂ ನಾವು ಆಚರಣೆಯಲ್ಲಿ ತಂದರೆ, ಆದಾಯ ತೆರಿಗೆ ವಿಭಾಗಕ್ಕೆ ಏನೂ ಕೆಲಸ ಉಳಿಯುವುದಿಲ್ಲ. ಇದು ಸಾಧ್ಯವಾಗಬೇಕಾದರೆ, ಒಳ್ಳೆಯ, ಸಕ್ಷಮ ಹಾಗೂ ಪ್ರಾಮಾಣಿಕ ಆಡಳಿತ ಅಧಿಕಾರಕ್ಕೆ ಬರಬೇಕು; ಆದರೆ ಸದ್ಯವಂತೂ ಸಾಧ್ಯವಿಲ್ಲ. ನಾವೇ ಒಳ್ಳೆಯ ರೀತಿಯಲ್ಲಿ ಜೀವಿಸೋಣ.

– ಪ.ಪೂ. ಸ್ವಾಮಿ ವರದಾನಂದ ಭಾರತಿ (ಆಧಾರ : ಗ್ರಂಥ ‘ಯಕ್ಷಪ್ರಶ್ನೆ’)