ಪ್ರತಿ ವರ್ಷ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಈ ವರ್ಷ ಕೊರೊನಾ ಮಹಾಮಾರಿಯಿಂದ ಬಂದೆರಗಿರುವ ಆಪತ್ಕಾಲದಲ್ಲಿ ಒಟ್ಟಿಗೆ ಸೇರುವುದು ಸಮಂಜಸವಲ್ಲ. ಆದುದರಿಂದ ನಾವೆಲ್ಲರೂ ನಮ್ಮ ಮನೆಯಲ್ಲೇ ಇದ್ದು ಭಕ್ತಿಭಾವದಿಂದ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಹೇಗೆ ಆಚರಿಸಬಹುದು ಎಂದು ನೋಡೋಣ.
೧. ಶ್ರೀಕೃಷ್ಣನಿಗೆ ಯಾವ ಸಮಯದಲ್ಲಿ ಪೂಜೆ ಮಾಡಬೇಡು ?
ಮಧ್ಯರಾತ್ರಿ ೧೨ ಗಂಟೆಗೆ ಶ್ರೀಕೃಷ್ಣನ ಜನ್ಮವಾಯಿತು. ಆದುದರಿಂದ ಅದಕ್ಕಿಂತ ಮೊದಲೇ ಪೂಜೆಯ ತಯಾರಿಯನ್ನು ಮಾಡಿಟ್ಟುಕೊಳ್ಳಿ. ರಾತ್ರಿ ೧೨ ಗಂಟೆಗೆ ಸರಿಯಾಗಿ ಶ್ರೀಕೃಷ್ಣನಿಗೆ ಜೋಗುಳವನ್ನು ಹಾಡಿ.
೨ . ಶ್ರೀಕೃಷ್ಣನಿಗೆ ಪೂಜೆಯನ್ನು ಹೇಗೆ ಸಲ್ಲಿಸುವುದು ?
ಶ್ರೀಕೃಷ್ಣನಿಗೆ ಜೋಗುಳ ಹಾಡಿದ ನಂತರ ಶ್ರೀಕೃಷ್ಣನ ವಿಗ್ರಹ ಅಥವಾ ಚಿತ್ರಕ್ಕೆ ಪೂಜೆಯನ್ನು ಸಲ್ಲಿಸಬೇಕು.
೨ ಅ. ಶ್ರೀಕೃಷ್ಣನ ಪೂಜೆ
೨ ಅ ೧. ಷೋಡಶೋಪಚಾರ ಪೂಜೆ : ಯಾರಿಗೆ ಶ್ರೀಕೃಷ್ಣನಿಗೆ ‘ಷೋಡಶೋಪಚಾರ ಪೂಜೆ’ಯನ್ನು ಮಾಡಲು ಸಾಧ್ಯವಿದೆಯೋ, ಅವರು ಷೋಡಶೋಪಚಾರ ಪೂಜೆಯನ್ನು ಮಾಡಬೇಕು.
೨ ಅ ೨ . ಪಂಚೋಪಚಾರ ಪೂಜೆ : ಯಾರಿಗೆ ಶ್ರೀಕೃಷ್ಣನಿಗೆ ‘ಷೋಡಶೋಪಚಾರ ಪೂಜೆ’ಯನ್ನು ಮಾಡಲು ಸಾಧ್ಯವಿಲ್ಲ, ಅಂತಹವರು ‘ಪಂಚೋಪಚಾರ ಪೂಜೆ’ಯನ್ನು ಮಾಡಬೇಕು. ಇದರಲ್ಲಿ ಗಂಧ, ಅರಿಶಿಣ-ಕುಂಕುಮ, ಹೂವು, ಧೂಪ, ದೀಪ ಮತ್ತು ನೈವೇದ್ಯಗಳನ್ನು ಈ ಕ್ರಮದಿಂದ ಅರ್ಪಿಸುವಾಗ ‘ಸಪರಿವಾರಾಯ ಶ್ರೀಕೃಷ್ಣಾಯ ನಮಃ |’ ಎಂಬ ಮಂತ್ರವನ್ನು ಉಚ್ಚರಿಸಬೇಕು. ಶ್ರೀಕೃಷ್ಣನಿಗೆ ಮೊಸರವಲಕ್ಕಿ ಮತ್ತು ಬೆಣ್ಣೆಯ ನೈವೇದ್ಯವನ್ನು ಅರ್ಪಿಸಿ ನಂತರ ಆರತಿಯನ್ನು ಬೆಳಗಬೇಕು.
೩. ಶ್ರೀಕೃಷ್ಣನ ಮಾನಸ ಪೂಜೆ
ಕಾರಣಾಂತರಗಳಿಂದ ಶ್ರೀಕೃಷ್ಣನಿಗೆ ಪ್ರತ್ಯಕ್ಷವಾಗಿ ಪೂಜೆ ಸಲ್ಲಿಸಲು ಆಗದಿದ್ದರೆ ಮಾನಸ ಪೂಜೆಯನ್ನು ಕೂಡ ಮಾಡಬಹುದು. ಇದರಲ್ಲಿ ಮನಸ್ಸಿನಲ್ಲಿಯೇ ಸಾಕ್ಷಾತ್ ದೇವರು ನಮ್ಮ ಮುಂದಿದ್ದಾರೆ ಎಂದು ಭಾವಿಸಿ ಪ್ರತ್ಯಕ್ಷ ಪೂಜೆಯಲ್ಲಿ ಮಾಡುವ ಪ್ರತಿಯೊಂದು ಉಪಚಾರವನ್ನು ಮಾಡಬಹುದು. ಇದಕ್ಕೆ ಯಾವುದೇ ಬಂಧನಗಳಿರುವುದಿಲ್ಲ.
೪. ಪೂಜೆಯಾದ ನಂತರ ನಾಮಜಪ ಮಾಡಿ !
ಶ್ರೀಕೃಷ್ಣನ ಜನ್ಮಾಷ್ಟಮಿಯ ಪೂಜೆಯಾದ ನಂತರ ಮನೆಯವರೆಲ್ಲರೂ ಸೇರಿ “ನಮೋ ಭಗವತೇ ವಾಸುದೇವಾಯ ನಮಃ |’ ನಾಮ ಜಪಿಸಿ.
೫. ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡುವುದು
ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವ ‘ನ ಮೇ ಭಕ್ತಃ ಪ್ರಣಶ್ಯತಿ |’ (ನನ್ನ ಭಕ್ತರ ನಾಶವಾಗುವುದಿಲ್ಲ) ವಾಕ್ಯವನ್ನು ಸ್ಮರಿಸಿ, ನಮ್ಮಲ್ಲಿ ‘ಅರ್ಜುನನಂತಹ ಅಪರಿಮಿತ ಭಕ್ತಿಯು ಮೂಡಲಿ’ ಎಂದು ಆರ್ತತೆಯಿಂದ ಪ್ರಾರ್ಥನೆಯನ್ನು ಮಾಡಬೇಕು.
– ಶ್ರೀ. ಸಿದ್ಧೇಶ ಕರಂದೀಕರ್, ಸನಾತನ ಪುರೋಹಿತ ಪಾಠಶಾಲೆ, ರಾಮನಾಥಿ, ಗೋವಾ.