ಆಪತ್ಕಾಲದ ಸ್ಥಿತಿಯಲ್ಲಿ ‘ನಾಗರಪಂಚಮಿ ಪೂಜೆಯನ್ನು ಹೇಗೆ ಮಾಡಬೇಕು ?

ಕೊರೊನಾ ವಿಷಾಣುಗಳ ಹಾವಳಿಯಿಂದ ಉದ್ಭವಿಸಿರುವ ಆಪತ್ಕಾಲದ ಸ್ಥಿತಿಯಲ್ಲಿ ‘ನಾಗರಪಂಚಮಿ’ ಪೂಜೆಯನ್ನು ಹೇಗೆ ಮಾಡಬೇಕು ?

‘ನಮ್ಮ ಕುಟುಂಬವು ಸದಾಸರ್ವಕಾಲ ನಾಗ ಭಯದಿಂದ ಮುಕ್ತವಾಗಬೇಕು, ಹಾಗೆಯೇ ನಾಗ ದೇವತೆಯ ಕೃಪಾಶೀರ್ವಾದವು ಪ್ರಾಪ್ತವಾಗಬೇಕು’, ಎಂದು ಪ್ರತಿವರ್ಷ ಶ್ರಾವಣ ಶುಕ್ಲ ಪಕ್ಷ ಪಂಚಮಿ ಅಂದರೆ ನಾಗರ ಪಂಚಮಿಯಂದು ನಾಗಪೂಜೆಯನ್ನು ಮಾಡಲಾಗುತ್ತದೆ. ಈ ವರ್ಷ ೧೩.೮.೨೦೨೧ ರಂದು ನಾಗಪಂಚಮಿ ಇದೆ. ಈ ದಿನದಂದು ಕೆಲವು ಸ್ಥಳಗಳಲ್ಲಿ ಮಣ್ಣಿನ ನಾಗನನ್ನು ತಂದು ಅದರ ಪೂಜೆಯನ್ನು ಮಾಡುತ್ತಿದ್ದರೆ, ಕೆಲವು ಸ್ಥಳದಲ್ಲಿ ಹುತ್ತದ ಪೂಜೆಯನ್ನು, ನಾಗದೇವತೆಯ ಕಲ್ಲಿನ ಪ್ರತಿಮೆಯ ಪೂಜೆಯನ್ನೂ ಮಾಡಲಾಗುತ್ತದೆ. ಆಪತ್ಕಾಲದ ಸ್ಥಿತಿಯಲ್ಲಿ ‘ನಾಗಪಂಚಮಿ’ ಪೂಜೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ?

೧. ನಾಗದೇವತೆಯ ಪೂಜೆ

೧ ಅ. ನಾಗದೇವತೆಯ ಚಿತ್ರವನ್ನು ಬಿಡಿಸುವುದು : ಅರಿಶಿಣಮಿಶ್ರಿತ ಚಂದನದಿಂದ ಗೋಡೆಯ ಮೇಲೆ ಅಥವಾ ಮಣೆಯ ಮೇಲೆ ನಾಗನ ಚಿತ್ರವನ್ನು ಬಿಡಿಸಬೇಕು (ಅಥವಾ ಒಂಬತ್ತು ನಾಗಗಳ ಚಿತ್ರಗಳನ್ನು ಬಿಡಿಸಬೇಕು.) ಮತ್ತು ಆ ಸ್ಥಳದಲ್ಲಿ ನಾಗದೇವತೆಯ ಪೂಜೆಯನ್ನು ಮಾಡಬೇಕು. ‘ಸಪತ್ನೀಕನಾಗದೇವತಾಭ್ಯೋ ನಮಃ |’

ಈ ನಾಮಮಂತ್ರವನ್ನು ಹೇಳುತ್ತ ಪೂಜೆಯನ್ನು ಮಾಡಬೇಕು.

೧ ಆ. ಷೋಡಶೋಪಚಾರ ಪೂಜೆ : ಯಾರಿಗೆ ನಾಗದೇವತೆಯ ‘ಷೋಡಶೋಪಚಾರ ಪೂಜೆ‘ಯನ್ನು ಮಾಡಲು ಸಾಧ್ಯವಿದೆಯೋ, ಅವರು ಷೋಡಶೋಪಚಾರ ಪೂಜೆಯನ್ನು ಮಾಡಬೇಕು.

೧ ಇ. ಪಂಚೋಪಚಾರ ಪೂಜೆ : ಯಾರಿಗೆ ನಾಗದೇವತೆಯ ‘ಷೋಡಶೋಪಚಾರ ಪೂಜೆ’ಯನ್ನು ಮಾಡಲು ಸಾಧ್ಯವಿಲ್ಲ, ಅಂತಹವರು ‘ಪಂಚೋಪಚಾರ ಪೂಜೆಯನ್ನು ಮಾಡಬೇಕು ಮತ್ತು ಹಾಲು, ಸಕ್ಕರೆ, ಅರಳು ಇವುಗಳ, ಹಾಗೆಯೇ ಕುಲದ ಪರಂಪರೆಗನುಸಾರ ಪಾಯಸ ಇತ್ಯಾದಿ ಪದಾರ್ಥಗಳ ನೈವೇದ್ಯವನ್ನು ತೋರಿಸಬೇಕು. (ಪಂಚೋಪಚಾರ ಪೂಜೆ : ಗಂಧ, ಅರಿಶಿಣ-ಕುಂಕುಮ, ಪುಷ್ಪ, ಧೂಪ, ದೀಪ ಮತ್ತು ನೈವೇದ್ಯ ಈ ಕ್ರಮದಿಂದ ಪೂಜೆಯನ್ನು ಮಾಡಬೇಕು.)

೨. ಪೂಜೆಯ ನಂತರ ನಾಗದೇವತೆಯಲ್ಲಿ ಮಾಡುವ ಪ್ರಾರ್ಥನೆ !

‘ಹೇ ನಾಗದೇವತೆ, ಶ್ರಾವಣ ಶುಕ್ಲ ಪಕ್ಷ ಪಂಚಮಿಯಂದು ನಾನು ಮಾಡಿದ ಈ ನಾಗಪೂಜೆಯಿಂದ ನೀವು ಪ್ರಸನ್ನರಾಗಿ ನನಗೆ ಸದಾಕಾಲ ಸುಖವನ್ನು ಕರುಣಿಸಿ. ಹೇ ನಾಗದೇವತೆ, ನಾನು ಮಾಡಿದ ಪೂಜೆಯಲ್ಲಿ ಅಜ್ಞಾನದಿಂದ ಮತ್ತು ತಿಳಿಯದೇ ಏನಾದರೂ ಹೆಚ್ಚು-ಕಡಿಮೆಯಾಗಿದ್ದರೆ ನನ್ನನ್ನು ಕ್ಷಮಿಸಿ. ನಿಮ್ಮ ಕೃಪೆಯಿಂದಾಗಿ ನನ್ನ ಎಲ್ಲ ಮನೋಕಾಮನೆಗಳು ಪೂರ್ತಿಯಾಗಲಿ. ನನ್ನ ಕುಲದಲ್ಲಿ ನಾಗವಿಷದ ಭಯ ಎಂದಿಗೂ ಉತ್ಪನ್ನವಾಗದಿರಲಿ’, ಎಂದು ತಮ್ಮ ಚರಣಗಳಲ್ಲಿ ಪ್ರಾರ್ಥನೆ.’

– ಶ್ರೀ. ದಾಮೋದರ ವಝೆಗುರುಜಿ, ಸಂಚಾಲಕರು, ಸನಾತನ ಪುರೋಹಿತರ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೭.೨೦೨೦)