ಕೊರೋನಾ ಮಹಾಮಾರಿ ಮತ್ತು ಮರಣಪ್ರಾಯ ಅಪಪ್ರಚಾರ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ವಾರ್ತೆಗಳ ಅಪಪ್ರಚಾರವು ಕೊರೊನಾ ಮಹಾಮಾರಿಗಿಂತಲೂ ಹೆಚ್ಚು ಭಯಂಕರವಾಗಿರುವುದರಿಂದ ಸುಳ್ಳು ಸುದ್ಧಿಗಳ ಶಕ್ತಿಯನ್ನು ಕಡಿಮೆಗೊಳಿಸಲು ಜನರಲ್ಲಿ ಜಾಗೃತಿ ಮೂಡಿಸುವ ಆಂದೋಲನಗಳನ್ನು ಹಮ್ಮಿಕೊಳ್ಳಬೇಕು !

‘ಭಾರತದಲ್ಲಿ ಕೊರೊನಾದ ಹೊರತು ಇನ್ನೊಂದು ಮಹಾಮಾರಿ ಹರಡಿದೆ, ಅದೇ ಸುಳ್ಳು ವಾರ್ತೆಗಳ ಮಹಾಮಾರಿ ! ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಸುಳ್ಳು ಹಾಗೂ ಅಯೋಗ್ಯ ವಾರ್ತೆಗಳನ್ನು ಹಬ್ಬಿಸಲಾಗುತ್ತದೆ. ಆದ್ದರಿಂದ ಜನಸಾಮಾನ್ಯರು ಭಯಭೀತರಾಗಿದ್ದಾರೆ. ‘ಐ.ಸಿ.ಎಮ್.ಆರ್.ನ (ಭಾರತೀಯ ಆಯುರ್ವಿಜ್ಞಾನ ಅನುಸಂಧಾನ ಪರಿಷತ್ತಿನ) ವರದಿಯಲ್ಲಿ ಮುಂದಿನಂತೆ ಹೇಳಲಾಗಿದೆ, ಶೇ. ೯೦ ರಷ್ಟು ರೋಗಿಗಳಿಗೆ ಆಕ್ಸಿಜನ್‌ನ ಅವಶ್ಯಕತೆ ಇರುವುದಿಲ್ಲ. ಒಂದು ಇಂಜೆಕ್ಶನ್ ಗಾಗಿ ಜನರು ಒದ್ದಾಡುತ್ತಿದ್ದಾರೆ, ಅದರದ್ದೂ ಅವಶ್ಯಕತೆಯಿಲ್ಲ. ದಿನಪತ್ರಿಕೆಗಳಲ್ಲಿ ಪ್ಲಾಝ್ಮಾದ ವಿಷಯದಲ್ಲಿ ಚರ್ಚೆ ನಡೆಯುತ್ತಿತ್ತು, ಅದರದ್ದೂ ಅವಶ್ಯಕತೆಯಿಲ್ಲ. ಯಾರಿಗೆ ಯಾವುದು ಆವಶ್ಯಕವಾಗಿದೆ ಎಂಬುದನ್ನು ಆಧುನಿಕ ವೈದ್ಯರೆ (ಡಾಕ್ಟರರ) ನಿರ್ಧರಿಸಲು ಸಾಧ್ಯ.

ಯಾವಾಗ ನಾವು ಸ್ವತಃ ನಮ್ಮ ‘ಡಾಕ್ಟರ್ ಆಗುತ್ತೇವೋ ಆಗ ನಮಗೆ ತುಂಬ ಹಾನಿಯಾಗುತ್ತದೆ. ಸುಮಾರು ಶೇ. ೭೦ ರಿಂದ ೮೦ ರಷ್ಟು ಜನರು ಮನೆಯಲ್ಲಿದ್ದೆ ಗುಣಮುಖರಾಗಿದ್ದಾರೆ. ಭಾರತದಲ್ಲಿ ಸುಳ್ಳು ವಾರ್ತೆಗಳ ಅಪಪ್ರಚಾರವು ಚೀನಿ ವೈರಾಣುಗಿಂತಲೂ ಹೆಚ್ಚು ವೇಗದಲ್ಲಿ ಆಗುತ್ತಿದೆ. ಕೆಲವರು ಸುಳ್ಳು ಧ್ವನಿಚಿತ್ರ ಮುದ್ರಿಕೆಗಳನ್ನು ಪ್ರಸಾರ ಮಾಡುತ್ತಾರೆ, ಕೆಲವರು ಅರ್ಧಂಬರ್ಧ ಮಾಹಿತಿ ಇರುವ ತಥಾಕಥಿತ ತಜ್ಞರು ದೂರಚಿತ್ರವಾಹಿನಿಯಲ್ಲಿ ಏನಾದರೂ ಹೇಳಲು ಪ್ರಯತ್ನಿಸುತ್ತಾರೆ. ಅದರಿಂದ ಜನರಲ್ಲಿ ಗೊಂದಲವುಂಟಾಗುತ್ತದೆ. ಇದನ್ನು ತಡೆಗಟ್ಟಲು ಜನರಲ್ಲಿ ಜಾಗೃತಿ ಹುಟ್ಟಿಸಲು ಆಂದೋಲನಗಳನ್ನು ಹಮ್ಮಿಕೊಂಡು ಸುಳ್ಳು ವಾರ್ತೆಗಳ ಶಕ್ತಿಯನ್ನು ಕಡಿಮೆ ಮಾಡಬೇಕು. ಇಂದು ಭಾರತವು ಸುಳ್ಳು ವಾರ್ತೆಗಳ ಸಂಕಟದಿಂದ ಜಾಗೃತವಾಗದಿದ್ದರೆ, ಭವಿಷ್ಯದಲ್ಲಿ ನಮ್ಮ ದೇಶ ಮತ್ತು ಅದರ ಪ್ರಜಾಪ್ರಭುತ್ವದ ಮೇಲೆ ದುಷ್ಪರಿಣಾಮವಾಗಬಹುದು.

೨. ಸುಳ್ಳು ವಾರ್ತೆಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ !

ಭಾರತದಲ್ಲಿ ಚೀನಿ ವೈರಾಣುವಿನ ರೋಗಿಗಳು ಹೆಚ್ಚುತ್ತಾ ಹೋದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ರೀತಿಯ ವಾರ್ತೆಗಳೂ ಹರಡಲು ಆರಂಭವಾದವು. ತಥಾಕಥಿತ ತಜ್ಞರು ಹಾನಿಕರ ಉಪಾಯಗಳನ್ನು ಹೇಳಿದರು. ಇಂಜೆಕ್ಶನ್ ಅಥವಾ ಆಕ್ಸಿಜನ್‌ಗಾಗಿ ದೊಡ್ಡ ಸರತಿಸಾಲಿನಲ್ಲಿ ನಿಂತಿರುವ ಛಾಯಾಚಿತ್ರ ಗಳನ್ನು ಮಾಧ್ಯಮಗಳು ತೋರಿಸಿದವು. ಆದ್ದರಿಂದ ಜನರ ಮನಸ್ಸಿನಲ್ಲಿ ಭಯ ಉತ್ಪನ್ನವಾಯಿತು. ಯಾರಿಗೆ ಇಂಜೆಕ್ಶನ್ ಮತ್ತು ಆಕ್ಸಿಜನ್‌ನ ಅವಶ್ಯಕತೆಯಿರಲಿಲ್ಲವೋ, ಅವರ ಸಂಬಂಧಿಕರೂ ಸಾಲಿನಲ್ಲಿ ನಿಲ್ಲಲು ಆರಂಭಿಸಿದರು. ಆದ್ದರಿಂದ ರೋಗ ಹಬ್ಬಲು ಚಾಲನೆ ಸಿಕ್ಕಿತು. ಸುಳ್ಳು ವಾರ್ತೆಗಳನ್ನು ಹಬ್ಬಿಸುವುದು, ಇದೊಂದು ಭಾರತಕ್ಕೆ ಹಿಡಿದ ಗಂಭೀರ ಕಾಯಿಲೆಯಾಗಿದೆ. ದುರ್ಭಾಗ್ಯವೆಂದರೆ, ಇಂತಹ ವಾರ್ತೆಗಳನ್ನು ನಿಯಂತ್ರಿಸಲು ಯಾವುದೇ ಕಠೋರ ಕಾನೂನು ಅಥವಾ ವ್ಯವಸ್ಥೆ ಇಲ್ಲ. ರಾಜಕೀಯ ಪಕ್ಷಗಳೂ ಯೋಗ್ಯವಾದುದನ್ನು ಮಾಡುವ ಬದಲು ಬೆಂಕಿಗೆ ಎಣ್ಣೆ ಸುರಿಯುವ ಕಾರ್ಯ ಮಾಡಿದವು. ಆದ್ದರಿಂದ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿಯನ್ನು ಹಬ್ಬಿಸುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು.

೩. ‘ಐ.ಸಿ.ಎಮ್.ಆರ್.ನ ವಕ್ತಾರರು ಪ್ರತಿದಿನ ಮಾಧ್ಯಮಗಳ ಮುಂದೆ ಬಂದು ಸುಳ್ಳು ವಾರ್ತೆಗಳ ಸತ್ಯಾಂಶವನ್ನು ಜನರ ಮುಂದೆ ಹೇಳಿದರೆ ಭಯದ ಪ್ರಮಾಣ ಕಡಿಮೆಯಾಗಬಹುದು !

ಮಾಹಿತಿಯ ಈ ಹಾವಳಿ ಕೇವಲ ಭಾರತದಲ್ಲಿ ಮಾತ್ರವಲ್ಲ, ಸಂಪೂರ್ಣ ಜಗತ್ತಿನಲ್ಲಿದೆ. ಇಂದು ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ಪ್ರಮಾಣ ತುಂಬಾ ಹೆಚ್ಚಾಗಿದೆ. ಇಂದು ಶೇ. ೬೦ ರಿಂದ ೭೦ ರಷ್ಟು ಭಾರತೀಯರು ಒಂದಲ್ಲ ಒಂದು ಸಾಮಾಜಿಕ ಮಾಧ್ಯಮವನ್ನು ಉಪಯೋಗಿಸುತ್ತಾರೆ. ನಮ್ಮ ದೇಶದಲ್ಲಿ ವಿವಿಧ ಭಾಷೆ ಮತ್ತು ಪಂಥಗಳ ಜನರಿದ್ದಾರೆ. ಆದ್ದರಿಂದ ಅಪಪ್ರಚಾರ ಮಾಡಲು ಸುಲಭವಾಗುತ್ತದೆ. ಫೇಸ್‌ಬುಕ್ ಮತ್ತು ಟ್ವಿಟರ್ ಇದರ ಹಾವಳಿ ಎಷ್ಟು ದೊಡ್ಡದಿದೆಯೆಂದರೆ, ಅದರ ಮೇಲೆ ಭೌತಿಕದೃಷ್ಟಿಯಲ್ಲಿ ಗಮನವಿಡುವುದು ಕಠಿಣವಾಗಿರುತ್ತದೆ. ಆದ್ದರಿಂದ ಜಾಗರೂಕ ನಾಗರಿಕರು ಸಂಶಯಾಸ್ಪದ ವಾರ್ತೆಗಳನ್ನು ಮುಂದೆ ಪ್ರಸಾರ ಮಾಡುವ ಬದಲು ಅದನ್ನು ‘ಏಜನ್ಸಿಗೆ (ವಾರ್ತಾಸಂಸ್ಥೆಗೆ) ತಲುಪಿಸಬೇಕು. ಅದರಿಂದ ಆ ವಾರ್ತೆ ನಿಜವೋ ಅಥವಾ ಸುಳ್ಳೋ ಎಂಬುದು ತಿಳಿಯುವುದು.

ಭಾರತೀಯ ವೈದ್ಯಕೀಯ ಕ್ಷೇತ್ರದಲ್ಲಿ ‘ಐ.ಸಿ.ಎಮ್.ಆರ್. ಇದು ಎಲ್ಲಕ್ಕಿಂತ ದೊಡ್ಡ ಸಂಸ್ಥೆಯಾಗಿದೆ. ಅದರ ವಕ್ತಾರರು ಪ್ರತಿದಿನ ಮಾಧ್ಯಮಗಳಲ್ಲಿ ಮುಂದೆ ಬಂದು ಸುಳ್ಳು ವಾರ್ತೆಗಳ ಸತ್ಯ ವಿಷಯಗಳನ್ನು ಜನರಿಗೆ ಹೇಳಬೇಕು. ಹಾಗೆ ಮಾಡಿದರೆ ಜನರಲ್ಲಿ ಭಯ ಉತ್ಪನ್ನವಾಗಲಿಕ್ಕಿಲ್ಲ.

ಸದ್ಯ ‘ಇನ್ಫರ್ಮೇಶನ್ ಟೆಕ್ನಾಲಾಜಿ ಆಕ್ಟ್ ೨೦೦೦ ಈ ಕಾನೂನು ಹೆಚ್ಚು ಪ್ರಮಾಣದಲ್ಲಿ ಉಪಯೋಗವಾಗುವುದಿಲ್ಲ. ಆದ್ದರಿಂದ ಈ ಕಾನೂನನ್ನು ಹೆಚ್ಚು ಕಠಿಣಗೊಳಿಸಬೇಕು. ಅನೇಕ ಬಾರಿ ದೂರಚಿತ್ರವಾಹಿನಿಯಲ್ಲಿ ಆಯಾಯ ವಿಷಯಗಳ ತಜ್ಞರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಆದರೆ ಅವರು ಹೇಳುವುದು ಎಲ್ಲವೂ ಸರಿಯಾಗಿರುತ್ತದೆ, ಎಂದು ಹೇಳಲು ಸಾಧ್ಯವಿಲ್ಲ. ಯಾವಾಗ ಶೇ. ೭೦ ರಿಂದ ೮೦ ರಷ್ಟು ಆಧುನಿಕ ವೈದ್ಯರು ಯಾವುದಾದರೂ ಒಂದು ಉಪಚಾರವನ್ನು ನಿರ್ಧರಿಸುವರೊ, ಆಗ ಆ ಉಪಚಾರವನ್ನು ಒಪ್ಪಿಕೊಳ್ಳಬೇಕು. ಚೀನಾವು ತನ್ನ ದೇಶದಲ್ಲಿ ಫೇಸ್‌ಬುಕ್ ಅಥವಾ ಟ್ವಿಟರ್‌ಗೆ ಸ್ವಲ್ಪವೂ ಮಹತ್ವ ನೀಡುವುದಿಲ್ಲ. ಅಲ್ಲಿ ಅವರು ತಯಾರಿಸಿದ ಮಾಧ್ಯಮಗಳ ಮೂಲಕವೇ ಪ್ರಸಾರವು ನಡೆಯುತ್ತದೆ.

೪. ಜನರು ಸಕಾರಾತ್ಮಕ ವಿಷಯವನ್ನು ಪ್ರಸಾರ ಮಾಡಿದರೆ ದೇಶದಲ್ಲಿ ಮಹಾಮಾರಿಯನ್ನು ಗೆಲ್ಲಲು ಸುಲಭವಾಗಬಹುದು !

ಭಾರತದಲ್ಲಿ ಅನೇಕ ಜನರು ವಿದೇಶದ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಗಳನ್ನು ಪ್ರಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಇತರ ಭಾರತೀಯರಿಗೆ ಆ ವಾರ್ತೆಗಳು ಸತ್ಯವೆಂದು ಅನಿಸುತ್ತದೆ. ನ್ಯೂಯಾರ್ಕ್ ಟೈಮ್ಸ್, ವಾಶಿಂಗ್ಟನ್ ಪೋಸ್ಟ್ ಅಥವಾ ಗಾರ್ಡಿಯನ್ ಇತ್ಯಾದಿ ಮಾಧ್ಯಮಗಳಲ್ಲಿ ಮಹಾಮಾರಿಯ ವಿಷಯದಲ್ಲಿ ತಪ್ಪು ಮಾಹಿತಿಗಳು ಪ್ರಸಾರವಾಗುತ್ತಿದ್ದರೆ, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಈ ವಿಷಯದಲ್ಲಿ ಸರಕಾರದ ಪ್ರಯತ್ನ ತುಂಬಾ ಕಡಿಮೆಯಾಗುತ್ತದೆ. ಭಾರತವಿರೋಧಿ ತತ್ತ್ವ ಇರುವವರೆಗೆ ಇಂತಹ ಅಯೋಗ್ಯ ವಾರ್ತೆಗಳನ್ನು ಹಬ್ಬಿಸುತ್ತಾರೆ. ದೇಶದ ವಿರುದ್ಧ ಯಾವುದೇ ವಾರ್ತೆ ಪ್ರಸಾರವಾಗಬಾರದೆಂದು ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸುವ ಅವಶ್ಯಕತೆಯಿದೆ. ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ವಿಷಯದಲ್ಲಿ ತರಬೇತಿ ಕಡಿಮೆಯಿದೆ. ಸಾಮಾಜಿಕ ಮಾಧ್ಯಮಗಳನ್ನು ಹೇಗೆ ಉಪಯೋಗಿಸ ಬೇಕು, ಎನ್ನುವ ಜ್ಞಾನ ಜನರಲ್ಲಿರಬೇಕು. ಯಾವುದೇ ಅಯೋಗ್ಯ ವಾರ್ತೆ ಕಾಣಿಸಿದರೆ, ಅದನ್ನು ನೇರವಾಗಿ ಸೈಬರ್ ಪೊಲೀಸರಿಗೆ ಕಳುಹಿಸಬೇಕು. ಇಂತಹ ಸಂಕಟಗಳ ಸಮಯದಲ್ಲಿಯೂ ದೇಶ ಒಗ್ಗಟ್ಟಾಗದಿದ್ದರೆ, ಇನ್ನು ಯಾವಾಗ ಆಗುವುದು ? ಸಂಪೂರ್ಣ ದೇಶ ಒಗ್ಗಟ್ಟಾಗಿ ಈ ಮಹಾಮಾರಿಯನ್ನು ಒಂದು ಅವಕಾಶ ವೆಂದು ತಿಳಿಯಬೇಕು. ಜನರು ಸಕಾರಾತ್ಮಕ ವಿಚಾರ ಮಾಡಿ ಒಳ್ಳೆಯ ವಿಷಯಗಳನ್ನು ಪ್ರಸಾರ ಮಾಡಬೇಕು. ಆದ್ದರಿಂದ ಚೀನಾ ವೈರಾಣುವಿನ ಮಹಾಮಾರಿಯನ್ನು ಗೆಲ್ಲಲು ನಮಗೆ ಸುಲಭವಾಗುವುದು.

– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ