ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿ ಹೇಗೆ ಮಾಡಬೇಕು ?

ಔಷಧಿ ವನಸ್ಪತಿಗಳು ಬಹಳಷ್ಟಿವೆ, ಆದುದರಿಂದ ಮನೆಯಲ್ಲಿ ಯಾವ ವನಸ್ಪತಿಗಳನ್ನು ಬೆಳೆಸಬೇಕು ? ಎಂಬ ಪ್ರಶ್ನೆಯೂ ಬರುತ್ತದೆ. ಪ್ರಸ್ತುತ ಲೇಖನದಲ್ಲಿ ಕೆಲವು ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ?, ಎಂಬುದರ  ಮಾಹಿತಿಯನ್ನು ನೀಡಲಾಗಿದೆ. ಈ ವನಸ್ಪತಿಗಳನ್ನು ನೆಟ್ಟ ಸಾಧಾರಣ ೩ ನೆಯ ತಿಂಗಳಿನಿಂದ ಅವುಗಳನ್ನು ಔಷಧಿಗಳೆಂದು ಉಪಯೋಗಿಸ ಬಹುದು. ಸದ್ಯದ ಆಪತ್ಕಾಲವನ್ನು ಗಮನದಲ್ಲಿರಿಸಿಕೊಂಡು, ವೃಕ್ಷಗಳಂತಹ (ಗಿಡಗಳಂತಹ) ವನಸ್ಪತಿಗಳನ್ನು ಬೆಳೆಸುವುದಕ್ಕಿಂತ ಇಂತಹ ವನಸ್ಪತಿಗಳಿಗೆ ಪ್ರಾಧಾನ್ಯತೆಯನ್ನು ನೀಡಿದರೆ ಈ ವನಸ್ಪತಿಗಳು ನಮಗೆ ಬೇಗನೇ ಉಪಯುಕ್ತವಾಗಬಹುದು. ಔಷಧಿ ವನಸ್ಪತಿಗಳ ಸಸಿಗಳು ಸಹಜವಾಗಿ ಎಲ್ಲೆಡೆಗಳಲ್ಲಿ ಸಿಗುವುದಿಲ್ಲ. ಈ ಸಮಸ್ಯೆಗೆ ಪರಿಹಾರೋಪಾಯಗಳನ್ನು ಸಹ ಈ ಲೇಖನದಲ್ಲಿ ನೀಡಲಾಗಿದೆ. ವಾಚಕರು ಈ ಲೇಖನದಲ್ಲಿ ನೀಡಿದ ವನಸ್ಪತಿಗಳನ್ನು ಬಿಟ್ಟು ಇತರ ವನಸ್ಪತಿಗಳನ್ನೂ ಮನೆಯಲ್ಲಿಯೇ ಬೆಳೆಸಬಹುದು. ಈ ಲೇಖನದಲ್ಲಿ ನೀಡಿದ ಔಷಧಿ ವನಸ್ಪತಿಗಳನ್ನು ಔಷಧಗಳೆಂದು ಹೇಗೆ ಉಪಯೋಗಿಸಬೇಕು ? ಎಂಬುದರ ಮಾಹಿತಿಯನ್ನು ಸನಾತನದ ಗ್ರಂಥ ಸ್ಥಳದ ಲಭ್ಯತೆಗನುಸಾರ ಔಷಧಿ ವನಸ್ಪತಿಗಳ ತೋಟಗಾರಿಕೆ, ೧೧೬ ವನಸ್ಪತಿಗಳ ಔಷಧೀಯ ಗುಣಧರ್ಮಗಳು ಮತ್ತು ೯೫ ವನಸ್ಪತಿಗಳ ಔಷಧಿಯ ಗುಣಧರ್ಮಗಳು ಇದರಲ್ಲಿ ಕೊಡಲಾಗಿದೆ.

ಸಂಕಲನಕಾರರು : ಶ್ರೀ ಮಾಧವ ರಾಮಚಂದ್ರ ಪರಾಡಕರ ಮತ್ತು ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಮಾರ್ಗದರ್ಶಕರು : ಡಾ. ದಿಗಂಬರ ನಭು ಮೋಕಾಟ, ಸಹಾಯಕ ಪ್ರಾಧ್ಯಾಪಕರು, ವನಸ್ಪತಿಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ಪುಣೆ ವಿದ್ಯಾಪೀಠ, ಪುಣೆ ಮತ್ತು ಪ್ರಮುಖ ನಿರ್ದೇಶಕರು, ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ.

೧. ತುಳಸಿ

( ಕೃಷ್ಣ ತುಳಸಿ ಮತ್ತು ರಾಮ ತುಳಸಿ )

೧ ಅ. ಮಹತ್ವ : ತುಳಸಿಯ ಕಷಾಯವು ಎಲ್ಲ ಪ್ರಕಾರದ ಜ್ವರಗಳಲ್ಲಿ ಉಪಯುಕ್ತವಾಗಿದೆ. ತುಳಸಿಯ ಬೀಜಗಳು ತಂಪಾಗಿದ್ದು ಅವು ಮೂತ್ರರೋಗಗಳಿಗೆ ಉತ್ತಮ ಔಷಧಿಯಾಗಿದೆ. ಆದುದರಿಂದ ಮನೆಯ ಸುತ್ತಲೂ ತುಳಸಿಯ ಗಿಡಗಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ನೆಡಬೇಕು. ನಾವು ಅಡ್ಡಾಡುವ ದಾರಿಯ ಎರಡೂ ಬದಿಗಳಲ್ಲಿ ತುಳಸಿಯ ಸಸಿಗಳನ್ನು ನೆಡಬಹುದು. ಇದರಿಂದ ವಾತಾವರಣವು ಪ್ರಸನ್ನವಾಗಿರುತ್ತದೆ. ಕಪ್ಪು (ಕೃಷ್ಣ ತುಳಸಿ) ಅಥವಾ ಬಿಳಿ (ರಾಮ ತುಳಸಿ) ಈ ಎರಡೂ ರೀತಿಯ ತುಳಸಿಯನ್ನು ಬೆಳೆಸಬಹುದು.

೧ ಆ. ಬೀಜಗಳಿಂದ ತುಳಸಿಯನ್ನು ಬೆಳೆಸುವುದು: ತುಳಸಿಯ ಒಣಗಿದ ಮಂಜಿರಿಗಳನ್ನು ಕೈಯಲ್ಲಿ ತೆಗೆದುಕೊಂಡು ತಿಕ್ಕಿದರೆ ಅದರ ಚಿಕ್ಕ ಚಿಕ್ಕ ಬೀಜಗಳು ಹೊರಗೆ ಬರುತ್ತವೆ. ಈ ಬೀಜಗಳನ್ನು ಮೊಳಕೆಯೊಡೆಯಲು ಯಾವುದಾದರೊಂದು ಒಳ್ಳೆಯ ಫಲವತ್ತಾದ ಜಾಗದಲ್ಲಿ ಅಥವಾ ಕುಂಡದಲ್ಲಿ ಹಾಕಬೇಕು. ಬೀಜಗಳನ್ನು ಮೊಳಕೆಯೊಡೆಯಲು ಹಾಕುವ ಮೊದಲು ಅವುಗಳನ್ನು ಕೈಯಲ್ಲಿ ಸ್ವಲ್ಪ ತಿಕ್ಕಬೇಕು. ಹೀಗೆ ಮಾಡಿದರೆ ಬೀಜಗಳ ಮೇಲಿನ ಸಿಪ್ಪೆಯು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಮತ್ತು ಬೀಜಗಳು ಮೊಳಕೆಯೊಡೆಯುವ ಸಾಧ್ಯತೆಯು ಹೆಚ್ಚಾಗುತ್ತದೆ. ಸಾಧಾರಣ ಬೀಜಗಳು ಎಷ್ಟು ದಪ್ಪವಾಗಿರುತ್ತವೆಯೋ, ಅಷ್ಟೇ ದಪ್ಪ ಮಣ್ಣು ಬೀಜದ ಮೇಲಿರಬೇಕು, ಎಂಬ ಶಾಸ್ತ್ರವಿದೆ. ತುಳಸಿಯ ಬೀಜಗಳ ಆಕಾರವು ತೀರ ಚಿಕ್ಕದಾಗಿರುವುದರಿಂದ ಬೀಜಗಳ ಮೇಲೆ ಸ್ವಲ್ಪವೇ ಮಣ್ಣನ್ನು ಉದುರಿಸಬೇಕು. ಬೀಜಗಳನ್ನು ಮಣ್ಣಿನಲ್ಲಿ ಬಹಳ ಆಳದಲ್ಲಿ ಹಾಕಿದರೆ ಅವು ಅಂಕುರಿಸುವುದಿಲ್ಲ. ಬೀಜಗಳನ್ನು ಮಣ್ಣಿನಲ್ಲಿ ಹಾಕಿದ ನಂತರ ನೀರನ್ನು ಕಾಳಜಿಪೂರ್ವಕವಾಗಿ ಹಾಕಬೇಕು, ಇಲ್ಲದಿದ್ದರೆ ಬೀಜಗಳ ಮೇಲಿನ ಮಣ್ಣು ಪಕ್ಕಕ್ಕೆ ಸರಿದು ಬೀಜಗಳು ಹೊರಗೆ ಬರುವ ಸಾಧ್ಯತೆಯಿರುತ್ತದೆ. ಸಸಿಗಳು ೪ ರಿಂದ ೬ ಇಂಚುಗಳಷ್ಟು ಬೆಳೆದ ನಂತರ ಅವುಗಳನ್ನು ನಿಧಾನವಾಗಿ ತೆಗೆದು ಯೋಗ್ಯ ಜಾಗದಲ್ಲಿ ನೆಡಬೇಕು.

೧ ಆ ೧. ಇರುವೆಗಳು ಬರಬಾರದೆಂದು ಮಾಡಬೇಕಾದ ಉಪಾಯ : ತುಳಸಿಯ ಬೀಜಗಳಿಗೆ ಬೇಗನೇ ಇರುವೆಗಳು ಬರುತ್ತವೆ. ಇರುವೆಗಳು ಬರಬಾರದೆಂದು, ಯಾವ ಕುಂಡದಲ್ಲಿ ಬೀಜಗಳನ್ನು ಮೊಳಕೆ ಒಡೆಯಲು ಹಾಕಲಾಗಿದೆಯೋ, ಆ ಕುಂಡವನ್ನು ನೀರಿನಲ್ಲಿಡಬೇಕು. ಇದಕ್ಕಾಗಿ ಬಣ್ಣದ (ಪೇಂಟ್) ಡಬ್ಬದ ಪ್ಲಾಸ್ಟಿಕ್ ಮುಚ್ಚಳವನ್ನು ತೆಗೆದುಕೊಂಡು ಅದರಲ್ಲಿ ನೀರನ್ನು ಹಾಕಬೇಕು ಮತ್ತು ಮುಚ್ಚಳದ ಮಧ್ಯಭಾಗದಲ್ಲಿ ಕುಂಡವನ್ನಿಡಬೇಕು. ಕುಂಡದ ಸುತ್ತಲೂ ಯಾವಾಗಲೂ ನೀರು ಇರುವಂತೆ ನೋಡಿ ಕೊಳ್ಳಬೇಕು. ಇಲ್ಲದಿದ್ದರೆ ಕುಂಡದ ಸುತ್ತಲೂ ನೀರಿಲ್ಲದಿರುವಾಗ ಇರುವೆಗಳು ಕುಂಡದೊಳಗೆ ಬಂದು ಬೀಜಗಳನ್ನು ತಿನ್ನಬಹುದು. ಇರುವೆಗಳನ್ನು ತಡೆಗಟ್ಟಲು ಕುಂಡದ ಸುತ್ತಲೂ ಕರ್ಪೂರ, ಫಿನೈಲ್ ಇವುಗಳ ಪೈಕಿ ಯಾವುದಾದರೊಂದನ್ನು ಸ್ವಲ್ಪ ಹಾಕಿಡಬಹುದು. ಬೀಜಗಳಿಂದ ಮೊಳಕೆಯೊಡೆದು ಬಂದ ಸಸಿಗಳನ್ನು ತೆಗೆದು ಭೂಮಿಯಲ್ಲಿ ನೆಡಬಹುದು.

೧ ಇ. ಮಳೆಗಾಲದಲ್ಲಿ ತಾವಾಗಿಯೇ ಹುಟ್ಟುವ ಸಸಿಗಳನ್ನು ತೆಗೆದು ಯೋಗ್ಯ ಸ್ಥಳದಲ್ಲಿ ನೆಡುವುದು :

ಮಳೆಗಾಲದಲ್ಲಿ ಮೊದಲೇ ಬಿದ್ದಿರುವ ಬೀಜಗಳಿಂದ ಗಿಡಗಳ ಕೆಳಗಡೆ ತಾವಾಗಿಯೇ ಸಸಿಗಳು ಹುಟ್ಟಿಕೊಳ್ಳುತ್ತವೆ. ಈ ಸಸಿಗಳನ್ನು ಮೃದುವಾಗಿ ಬೇರುಸಹಿತ ತೆಗೆದು ಯೋಗ್ಯ ಸ್ಥಳದಲ್ಲಿ ನೆಡಬೇಕು.

೧ ಈ. ಸಸಿಗಳ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿ : ತುಳಸಿ ಸಸಿಗಳಿಗೆ ನಿಯಮಿತ ನೀರು ಹಾಕಬೇಕು. ಮಂಜರಿಗಳು ಒಣಗಿದಾಗ ಅವುಗಳನ್ನು ಕೀಳಬೇಕು.

೨. ಆಡುಸೋಗೆ

ಆಡುಸೋಗೆಯ ಎಲೆ ಮತ್ತು ಹೂವು

೨ ಅ. ಮಹತ್ವ : ಆಡುಸೋಗೆಗೆ ವೈದ್ಯರ ತಾಯಿ ಎಂದು ಹೇಳಲಾಗಿದೆ. ಅನೇಕ ರೋಗಗಳಿಗೆ ಇದು ಉಪಯುಕ್ತವಾಗಿದೆ. ಆಡುಸೋಗೆಯು ಸೋಂಕು ರೋಗಗಳಿಗೆ ತುಂಬಾ ಉಪಯುಕ್ತವಾಗಿದೆ. ದಡಾರ, ಸಿಡುಬುಗಳಂತಹ ಸಾಂಕ್ರಾಮಿಕರೋಗಗಳಾದಾಗ ಆಡುಸೋಗೆಯನ್ನು ಹೊಟ್ಟೆಗೆ ಸೇವಿಸಲು, ಹಾಗೆಯೇ ಸ್ನಾನದ ನೀರಿನಲ್ಲಿ ಹಾಕಿ ಸ್ನಾನಕ್ಕಾಗಿ ಉಪಯೋಗಿಸುತ್ತಾರೆ. ಇದರ ಎಲೆಗಳಲ್ಲಿ ತರಕಾರಿ ಮತ್ತು ಹಣ್ಣು ಇತ್ಯಾದಿಗಳನ್ನಿಟ್ಟರೆ ಅವು ಹೆಚ್ಚು ದಿನ ಉಳಿಯುತ್ತವೆ. ಆಡುಸೋಗೆಯನ್ನು ನಮ್ಮ ಮನೆಯ ಸುತ್ತಮುತ್ತಲೂ ಆದಷ್ಟು ಹೆಚ್ಚು ಪ್ರಮಾಣದಲ್ಲಿ ನೆಡಬೇಕು. ಜಾಗದ ಬೇಲಿಗಾಗಿ ಆಡುಸೋಗೆಯ ಗಿಡಗಳನ್ನು ನೆಡಬೇಕು.

೨ ಆ. ಗುರುತು ಮತ್ತು ದೊರಕುವ ಸ್ಥಳ : ಈ ವನಸ್ಪತಿಯು ನಗರಗಳಲ್ಲಿಯೂ ಕಂಡುಬರುತ್ತದೆ. ಕೆಲವು ಸ್ಥಳಗಳಲ್ಲಿ ಈ ವನಸ್ಪತಿಯು ಬಹಳ ದೊಡ್ಡ ಪ್ರಮಾಣದಲ್ಲಿ ಸಿಗುತ್ತದೆ, ಉದಾ. ಗೋವಾದ ಫೊಂಡಾದ ತಿಸ್ಕದಿಂದ ರಾಮನಾಥಿಗೆ ಹೋಗುವಾಗ ದಾಗದಲ್ಲಿನ ಸರಸ್ವತಿ ಮಂದಿರದ ಎದುರಿನ ರಸ್ತೆಯ ಎಡಗಡೆಗೆ ಬಹಳ ದೊಡ್ಡ ಪ್ರಮಾಣದಲ್ಲಿ ಆಡುಸೋಗೆಯು ಬೆಳೆದಿದೆ. ಈ ವನಸ್ಪತಿಯ ಎಲೆಗಳು ಹಚ್ಚಹಸಿರು ಮತ್ತು ಬರ್ಚಿಯಂತೆ ಚೂಪಾಗಿರುತ್ತವೆ. ಹಣ್ಣಾದ ಎಲೆಗಳು ಹಳದಿ ಬಣ್ಣದ್ದಾಗಿರುತ್ತವೆ. ಎಲೆಗಳಿಗೆ ವಿಶಿಷ್ಟ ಗಂಧವಿರುತ್ತದೆ. (ಛಾಯಾಚಿತ್ರ ಕ್ರ. ೧) ಡಿಸೆಂಬರ್‌ನಿಂದ ಫೆಬ್ರುವರಿಯವರೆಗೆ ಹೂವುಗಳು ಬಿಡುತ್ತವೆ. ಹೂವುಗಳು ಬಿಳಿ ಬಣ್ಣದ್ದಾಗಿರುತ್ತವೆ. ಹೂವಿನ ಆಕಾರವು ಬಾಯಿತೆರೆದ ಸಿಂಹದ ಮುಖದಂತೆ ಇರುತ್ತದೆ. ಆದುದರಿಂದ ಇದಕ್ಕೆ ಸಿಂಹಾಸ್ಯ ಎಂಬ ಸಂಸ್ಕೃತ ಹೆಸರು ಸಹ ಇದೆ. ಸಿಂಹಾಸ್ಯಎಂದರೆ ಸಿಂಹದ ಮುಖದ ಆಕಾರವಿರುವ ಎಂದಾಗಿದೆ. (ಛಾಯಾಚಿತ್ರ ಕ್ರ. ೨)

೨ ಇ. ಆಡುಸೋಗೆಯ ರೆಂಬೆಗಳನ್ನು ನೆಡುವುದು : ಆಡುಸೋಗೆಯ ಬೂದು ಬಣ್ಣದ ಪರಿಪಕ್ವ ಕೊಂಬೆಗಳನ್ನು ಕೊಯ್ದು ನೆಡಬೇಕು. ಕೊಂಬೆಗಳನ್ನು ಕೊಯ್ಯುವಾಗ ಗೆಣ್ಣುಗಳ ಸ್ವಲ್ಪ ಕೆಳಗೆ ಕೊಯ್ಯಬೇಕು. (ಗೆಣ್ಣು ಎಂದರೆ ಕಾಂಡಕ್ಕೆ ಎಲ್ಲಿ ಎಲೆಗಳು ಬಂದಿರುತ್ತವೆಯೋ, ಆ ಭಾಗ,) ಯಾವ ಭಾಗವನ್ನು ಮಣ್ಣಿನಲ್ಲಿ ಹೂಳ ಬೇಕಾಗಿದೆಯೋ, ಗೆಣ್ಣಿನ ಆ ಭಾಗದಲ್ಲಿರುವ ಎಲ್ಲ ಎಲೆಗಳನ್ನು ಕತ್ತರಿಸಬೇಕು. ಆ ಸ್ಥಳದಲ್ಲಿಯೇ ಬೇರುಗಳು ಒಡೆಯುತ್ತವೆ. ಎಲೆಗಳಿಂದ ನೀರಿನ ಬಾಷ್ಪೀಭವನವಾಗುತ್ತದೆ, ಹಾಗೆಯೇ ಎಲೆಗಳಿಂದ ಗಿಡಕ್ಕೆ ತನ್ನ ಆಹಾರವನ್ನು ತಯಾರಿಸಲು ಬರುತ್ತದೆ. ಬೇಸಿಗೆಯಲ್ಲಿ ಗಿಡಗಳನ್ನು ನೆಡುವುದಿದ್ದರೆ ರೆಂಬೆಗಳಲ್ಲಿನ ನೀರಿನ ಭಾಷ್ಪೀಭವನ ಹೆಚ್ಚಾಗಬಾರದು, ಆದರೆ ರೆಂಬೆಗೆ ತನ್ನ ಆಹಾರ ವನ್ನು ತಯಾರಿಸಲೂ ಆಗಬೇಕೆಂದು, ಮೇಲಿನ ಬದಿಯ ಎಲೆಗಳನ್ನು ಅರ್ಧದಷ್ಟು ಕತ್ತರಿಸಬೇಕು. ಮಳೆಗಾಲದಲ್ಲಿ ಈ ಗಿಡಗಳನ್ನು ಬೆಳೆಸುವಾಗ ಮೇಲಿನ ಎಲೆಗಳನ್ನು ಕತ್ತರಿಸುವ ಆವಶ್ಯಕತೆ ಇರುವುದಿಲ್ಲ. ಆಡುಸೋಗೆಯ ರೆಂಬೆಗಳನ್ನು ನೆಟ್ಟ ನಂತರ ಅವುಗಳಿಗೆ ಸಾಧಾರಣ ೧೫ ದಿನಗಳಲ್ಲಿ ಬೇರುಗಳು ಒಡೆಯುತ್ತವೆ. ಮೊದಲಿನ ಎಲೆಗಳು ಉದುರಿ ಹೊಸ ಎಲೆಗಳು ಬರುತ್ತವೆ.