ಉತ್ತರಪ್ರದೇಶದಲ್ಲಿ ಮತಾಂತರವು ಭಯೋತ್ಪಾದಕರೊಂದಿಗೆ ಸಂಬಂಧಿಸಿದೆ ಮತ್ತು ರಾಷ್ಟ್ರವ್ಯಾಪಿ ಇರುವುದರಿಂದ, ತನಿಖೆಯನ್ನು ‘ಎನ್‌ಐಎ’ಗೆ ಹಸ್ತಾಂತರಿಸಿ ! – ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆ

ದೆಹಲಿ, ಮಹಾರಾಷ್ಟ್ರ, ಹರಿಯಾಣ ಮತ್ತು ಕೇರಳ ಈ ರಾಜ್ಯಗಳಲ್ಲಿಯೂ ಮತಾಂತರದ ಜಾಲ !

ಶ್ರೀ. ರಮೇಶ ಶಿಂದೆ

ಇತ್ತೀಚೆಗೆ ಉತ್ತರಪ್ರದೇಶದ ಒಂದು ಸಾವಿರ ಹಿಂದೂಗಳನ್ನು ಮತಾಂತರಗೊಳಿಸಿದ ಇಬ್ಬರು ಮೌಲ್ವಿಗಳನ್ನು ಬಂಧಿಸಿದ ನಂತರ, ಅವರಿಗೆ ಪಾಕಿಸ್ತಾನದ ‘ಐ.ಎಸ್.ಐ.’ ಈ ಗೂಢಚಾರ ಸಂಘಟನೆಯಿಂದ ಹಣಕಾಸು ಒದಗಿಸಲಾಗುತ್ತಿದೆ ಎಂಬುದು ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿದೆ. ಅದೇರೀತಿ ಈ ಮತಾಂಧರ ಜಾಲವು ಉತ್ತರಪ್ರದೇಶದ ಜೊತೆಗೆ ದೆಹಲಿ, ಮಹಾರಾಷ್ಟ್ರ, ಹರಿಯಾಣಾ ಮತ್ತು ಕೇರಳದ ರಾಜ್ಯದಲ್ಲಿಯೂ ಹರಡಿರುವುದು ಬಹಿರಂಗಗೊಂಡಿದೆ. ಕೇರಳದ ನಾಲ್ಕು ಮಹಿಳೆಯರು ಸೇರಿದಂತೆ ಕೆಲವು ಪುರುಷರು ‘ಐಸಿಸ್’ಗೆ ಸೇರಿದ್ದರು, ಇವರೆಲ್ಲರೂ ಮತಾಂತರಗೊಂಡವರಾಗಿದ್ದರು. ಒಟ್ಟಾರೆ ಈ ದೇಶದಾದ್ಯಂತದ ಮತಾಂತರವು ಭಯೋತ್ಪಾದಕ ಕೃತ್ಯಗಳೊಂದಿಗೆ ಮತ್ತು ‘ಐ.ಎಸ್.ಐ.’ ನೊಂದಿಗೆ ಸಂಬಂಧಿಸಿದೆ. ಇದರ ಬಗ್ಗೆ ಕೂಲಂಕಶವಾದ ತನಿಖೆಯು ‘ರಾಷ್ಟ್ರೀಯ ತನಿಖಾ ದಳ’ (ಎನ್.ಐ.ಎ.) ದಿಂದಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಒತ್ತಾಯಿಸಿದೆ. ಇದಕ್ಕೂ ಮುನ್ನ ಕೇಂದ್ರ ಸರಕಾರವು ನಿರ್ಬಂಧ ಹೇರಿರುವ ಮುಂಬಯಿಯ ಡಾ. ಝಾಕಿರ್ ನಾಯಿಕ್‌ನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ನ ಇಬ್ಬರು ಸದಸ್ಯರನ್ನು ಭಯೋತ್ಪಾದನಾ ವಿರೋಧಿ ದಳವು ಬಂಧಿಸಿದ ನಂತರ ಅವರು 700 ಹಿಂದೂಗಳನ್ನು ಮತಾಂತರಗೊಳಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಅವರು ಆಮಿಷವೊಡ್ಡಿ ಹಾಗೂ ಬ್ರೈನ್ ವಾಷ ಮಾಡಿ ಮತಾಂತರಗೊಳಿಸಿದ್ದರು. ಇಂದು, ದೇಶದ ಅನೇಕ ರಾಜ್ಯಗಳು ಮತಾಂತರ ನಿಷೇಧ ಕಾನೂನುಗಳನ್ನು ಜಾರಿಗೆ ತಂದಿವೆ; ಆದರೂ, ಮತಾಂತರದ ಮೂಲಕ ರಾಷ್ಟ್ರ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದರೆ ಮತ್ತು ಭಯೋತ್ಪಾದನೆ ಹರಡುತ್ತಿದ್ದರೆ, ಅದನ್ನು ತಡೆಯಲು ಮೋದಿ ಸರಕಾರವು ರಾಷ್ಟ್ರಮಟ್ಟದಲ್ಲಿ ಕಠಿಣವಾದ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರಬೇಕು.

ಮತಾಂತರದ ಕಾರಸ್ತಾನದಲ್ಲಿ ಭಾಗಿಯಾಗಿರುವವರಿಗೆ ‘ಐ.ಎಸ್.ಐ.’ನಿಂದ ಹಾಗೆಯೇ ದೇಶ – ವಿದೇಶಗಳಿಂದ ಹಣ ಸಿಗುತ್ತ್ತಿತ್ತು. ಇಂತಹ ಎಲ್ಲ ವ್ಯಕ್ತಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿ ಅವರ ಮೇಲೆ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ಯಡಿ ಕ್ರಮ ಕೈಗೊಳ್ಳುವುದಾಗಿ ಉತ್ತರಪ್ರದೇಶ ಸರಕಾರ ಘೋಷಿಸಿದೆ. ನಾವು ಅದನ್ನು ಸ್ವಾಗತಿಸುತ್ತೇವೆ. ಇದೇ ರೀತಿ ಕೇಂದ್ರ ಸರಕಾರವು ರಾಷ್ಟ್ರಮಟ್ಟದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಒತ್ತಾಯಿಸಿದ್ದಾರೆ.