ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿಗಳ ಮೋಸ ಮಾಡಿ ಪರಾರಿಯಾಗಿರುವ ನೀರವ ಮೋದಿಯ ಹಸ್ತಾಂತರ ಪ್ರಕ್ರಿಯೆ ಮತ್ತು ನ್ಯಾಯಾಲಯದ ನಿಲುವು

‘ಪಂಜಾಬ ನ್ಯಾಶನಲ್ ಬ್ಯಾಂಕ್ ಸಹಿತ ಇತರ ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿಗಳನ್ನು ಮೋಸ ಮಾಡಿ ಇಂಗ್ಲೆಂಡಿಗೆ ಓಡಿ ಹೋಗಿರುವ ವಜ್ರಗಳ ವ್ಯಾಪಾರಿ ನೀರವ ಮೋದಿಯನ್ನು ಭಾರತಕ್ಕೆ ವಾಪಸ್ಸು ತರುವವರಿದ್ದಾರೆ. ಲಂಡನ್ನಿನ ವೆಸ್ಟ ಮಿನಿಸ್ಟರ್ ನ್ಯಾಯಾಲಯವು ಅವನನ್ನು ಹಸ್ತಾಂತರಿಸುವ ಮಾರ್ಗವನ್ನು ಇತ್ತೀಚೆಗಷ್ಟೇ ಸುಗಮಗೊಳಿಸಿದೆ. ನೀರವ ಮೋದಿ ಇವನು ಅಧಿಕಾರಿಗಳೊಂದಿಗೆ ಪರಸ್ಪರ ಸಹಕಾರದ ಒಪ್ಪಂದವನ್ನು ಮಾಡಿಕೊಂಡು ವಿವಿಧ ಬ್ಯಾಂಕುಗಳನ್ನು ವಂಚಿಸಿದ್ದಾನೆ. ಈ ಕೃತ್ಯದಲ್ಲಿ ಅವನ ಪತ್ನಿ, ಸಹೋದರ ಮತ್ತು ಭಾವಮೈದುನ ಇವರೂ ಆರೋಪಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಈ.ಡಿ)ಯವರು ವಿಚಾರಣೆ ಮಾಡಿ ಅಪರಾಧವನ್ನು ದಾಖಲಿಸಿದರು. ತದನಂತರ ನೀರವ ಮೋದಿ ೨೦೧೭ ನೇ ಇಸವಿಯ ಡಿಸೆಂಬರ್‌ನಲ್ಲಿ ಭಾರತದಿಂದ ಬ್ರಿಟನ್‌ಗೆ ಓಡಿ ಹೋದನು. ಈ ಸಂದರ್ಭದಲ್ಲಿನ ಘಟನಾವಳಿಗಳು ಮತ್ತು ಅವುಗಳ ಬಗ್ಗೆ ನ್ಯಾಯಾಲಯಗಳ ಪಕ್ಷವನ್ನು ಈ ಲೇಖನದ ಮೂಲಕ ಮಂಡಿಸುತ್ತಿದ್ದೇವೆ.

೧. ನೀರವ ಮೋದಿ ಪ್ರಕರಣವನ್ನು ವಿರೋಧ ಪಕ್ಷದವರು ರಾಜಕೀಯ ಬಂಡವಾಳವನ್ನಾಗಿ ಮಾಡಲು ಪ್ರಯತ್ನಿಸುವುದು

ನೀರವ ಮೋದಿ ಬ್ರಿಟನ್‌ಗೆ ಓಡಿ ಹೋದ ಬಳಿಕ ಇದನ್ನು ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಳ್ಳುವುದು ಪ್ರಾರಂಭವಾಯಿತು. ಮೋದಿ ಓಡಿ ಹೋಗಿರುವ ಬಗ್ಗೆ ವಿರೋಧಿ ಪಕ್ಷದವರು ಆಡಳಿತ ಪಕ್ಷದವರನ್ನು ದೋಷಿ ಎಂದು ನಿರ್ಧರಿಸಿದರು. ಈ ಪ್ರಕರಣದ ಬಗ್ಗೆ ಆಳವಾದ ತನಿಖೆಯನ್ನು ನಡೆಸಿದಾಗ ಅದರಲ್ಲಿ ಕಾಂಗ್ರೆಸ್ಸಿನ ಅಧಿಕಾರದ ಕಾಲಾವಧಿಯಲ್ಲಿ ಮತ್ತು ಅವರ ಆಶೀರ್ವಾದದಿಂದಲೇ ಇಷ್ಟು ದೊಡ್ಡ ಆರ್ಥಿಕ ಹಗರಣವಾಗಿರುವುದು ಕಂಡು ಬಂದಿತು. ಇದೇ ಕಾಲಾವಧಿಯಲ್ಲಿ ಮದ್ಯದೊರೆ ವಿಜಯ ಮಲ್ಯಾ ಕೂಡ ಸಾವಿರಾರು ಕೋಟಿ ರೂಪಾಯಿಗಳ ಹಗರಣ ಮಾಡಿ ವಿದೇಶಕ್ಕೆ ಪರಾರಿಯಾದನು. ಭಾರತದ ಹಿತಶತ್ರುಗಳು ಭಾರತದಲ್ಲಿ ವಿವಿಧ ಅಪರಾಧಗಳನ್ನು ಮಾಡಿ ಆರಾಮವಾಗಿ ವಿದೇಶಗಳಿಗೆ ಓಡಿ ಹೋಗುತ್ತಾರೆ ಎನ್ನುವುದನ್ನು ಗಮನಿಸಿದ ಮೋದಿ ಸರಕಾರವು ಅನೇಕ ದೇಶಗಳೊಂದಿಗೆ ಅವರನ್ನು ಹಸ್ತಾಂತರಿಸುವ ಬಗ್ಗೆ ಒಪ್ಪಂದವನ್ನು ಮಾಡಿಕೊಂಡಿದೆ, ಅಲ್ಲದೇ ಮೊದಲಿನ ಒಪ್ಪಂದದಲ್ಲಿಯೂ ಸುಧಾರಣೆಗಳನ್ನು ತಂದಿದೆ. ಇದರ ಪರಿಣಾಮದಿಂದ ಆರ್ಥಿಕ ಹಗರಣಗಳನ್ನು ಮಾಡಿರುವ ನೀರವ ಮೋದಿ ಮತ್ತು ಮಲ್ಯಾ ಇವರನ್ನು ಇಷ್ಟರಲ್ಲಿಯೇ ಭಾರತಕ್ಕೆ ವಾಪಸ್ಸು ತರಲಾಗುವುದು ಎನ್ನುವ ಆಶಾಕಿರಣ ಕಾಣಿಸುತ್ತಿದೆ.

ನೀರವ ಮೋದಿ

೨. ನೀರವ ಮೋದಿಯ ಹಸ್ತಾಂತರದ ಖಟ್ಲೆಯಲ್ಲಿ ಬಹಿರಂಗವಾಗಿರುವ ಅನೇಕ ಆಕ್ಷೇಪಾರ್ಹ ವಿಷಯಗಳು

೨೦೧೮ ರಲ್ಲಿ ನಿವೃತ್ತ ನ್ಯಾಯಮೂರ್ತಿ ಅಭಯ ಠಿಪಸೆಯವರು ಓರ್ವ ತಜ್ಞರೆಂದು ನೀರವ ಮೋದಿಯವರ ಪರವಾಗಿ ಮತ್ತು ಭಾರತ ಸರಕಾರದ ವಿರುದ್ಧ ಬ್ರಿಟನ್ನಿನ ವೆಸ್ಟ ಮಿನಿಸ್ಟರ್ ನ್ಯಾಯಾಲಯದಲ್ಲಿ ವರದಿಯನ್ನು ಸಲ್ಲಿಸಿದರು. ಈ ವರದಿಯಲ್ಲಿ ಕಾಂಗ್ರೆಸ್ಸಿನೊಂದಿಗೆ ಠಿಪಸೆಯವರ ರಾಜಕೀಯ ಸಂಬಂಧದ ಉಲ್ಲೇಖವಿರಲಿಲ್ಲ. ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದವರು ಮತ್ತು ನಿವೃತ್ತಿಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಅವರನ್ನು ಅಲಹಾಬಾದ ಉಚ್ಚ ನ್ಯಾಯಾಲಯಕ್ಕೆ ಸರಕಾರಿ ಕಾರ್ಯದ ನಿಮಿತ್ತ ವರ್ಗಾಯಿಸಲಾಗಿರುವ ಅಭಯ ಠಿಪಸೆಯವರು, ಆರ್ಥಿಕ ಹಗರಣದಲ್ಲಿ ಸಿಲುಕಿರುವ ಆರೋಪಿಗಾಗಿ ವರದಿಯನ್ನು ಸಲ್ಲಿಸಿದಾಗಲೇ, ಕೋಲಾಹಲ ಸೃಷ್ಟಿಯಾಗುವುದು ಅಪೇಕ್ಷಿತ ಇತ್ತು. ಆಗಿನ ಕಾನೂನು ಮಂತ್ರಿ ರವಿಶಂಕರ ಪ್ರಸಾದ ಇವರು ಪತ್ರಿಕಾಗೋಷ್ಠಿಯಲ್ಲಿ “ನಿವೃತ್ತಿಗೆ ಕೆಲವೇ ತಿಂಗಳು ಇರುವಾಗ ಅವರನ್ನು ವರ್ಗಾಯಿಸಲಾಯಿತು, ಇದರಿಂದಲೇ ಎಲ್ಲವೂ ಅರ್ಥವಾಗುತ್ತದೆ ಎಂದು ಠಿಪಸೆಯವರ ಬಗ್ಗೆ ಹೇಳಿದ್ದರು. ಕಾಂಗ್ರೆಸ್ಸಿನವರು ಹೇಳಿದಂತೆ ಠಿಪಸೆಯವರು ವರದಿಯನ್ನು ನೀಡಿದ್ದರು. ಬ್ರಿಟನ್ ನ್ಯಾಯಾಲಯದಲ್ಲಿ ಇವೆಲ್ಲ ವಿಷಯ ಬಹಿರಂಗವಾಯಿತು. ಆಗ ನ್ಯಾಯಾಲಯವು ಅವರ ಪುರಾವೆಗಳಿಗೆ ಅಥವಾ ವರದಿಗೆ ತಮ್ಮ ಆದೇಶದಲ್ಲಿ ಕವಡೆ ಕಾಸಿನ ಕಿಮ್ಮತನ್ನು ಕೊಡಲಿಲ್ಲ.

ನ್ಯಾಯಾಲಯವು ‘In relation to justice Thipse I attach no weight to his opinion set out in his reports and or in oral testimony’ ಎಂದು ಬರೆದಿದೆ. (ಅರ್ಥ: ನ್ಯಾಯ ಮೂರ್ತಿ ಠಿಪಸೆಯವರ ವರದಿಯ ಬಗ್ಗೆ ಅಥವಾ ಮೌಖಿಕ ಹೇಳಿಕೆಯ ಬಗ್ಗೆ ನಾನು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ) ಎಂದು ಷರಾ ಬರೆಯಿತು. ಮುಂದುವರಿದು  ನ್ಯಾಯಾಧೀಶರು  Over all these factors have effect, in my assessment, of nullifying any weight I would have attached to his evidence (ಅರ್ಥ:  ಅವರ ವರದಿಯಲ್ಲಿರುವ ವಿಷಯಗಳನ್ನು ಪರಿಗಣಿಸಿದಲ್ಲಿ, ನಾನು  ಪುರಾವೆಗಳಿಗೆ ಸಂಬಂಧಿಸಿದಂತೆ, ನ್ಯಾಯೋಚಿತ ತೀರ್ಪು ನೀಡುವಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ.) ಎಂದು ಬರೆಯಿತು. ಠಿಪಸೆಯವರ ಈ ವರದಿಯಿಂದ ನೀರವ ಮೋದಿಯವರಿಗೆ ಯಾವುದೇ ಉಪಯೋಗವಾಗಲಿಲ್ಲ.

೩. ನಿವೃತ್ತ ನ್ಯಾಯಮೂರ್ತಿ ಠಿಪಸೆಯವರ ಮೇಲೆ ಪಕ್ಷಪಾತ ನಿಲುವು ತಳೆದ ಆರೋಪ

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

ಜೂನ್ ೨೦೧೮ ರಲ್ಲಿ ರಾಹುಲ ಗಾಂಧಿಯವರು ಮುಂಬಯಿಗೆ ಭೇಟಿ ನೀಡಿದಾಗ, ನಿವೃತ್ತ ನ್ಯಾಯಮೂರ್ತಿ ಠಿಪಸೆಯವರು ಅವರನ್ನು ಭೇಟಿಯಾದರು. ತದನಂತರ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಠಿಪಸೆಯವರು ನ್ಯಾಯಮೂರ್ತಿಗಳಾಗಿದ್ದಾಗ ಅನೇಕ ಮಹತ್ವದ ಖಟ್ಲೆಗಳು ವಿಚಾರಣೆಗೆ ಬಂದಿದ್ದವು. ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿ ಅನೇಕ ಜನರನ್ನು ಹತ್ಯೆ ಮಾಡಿರುವ ಪ್ರಕರಣದಲ್ಲಿ ಸಲ್ಮಾನ ಖಾನ್ ದೋಷಿಯೆಂದು ತೀರ್ಮಾನಿಸಲಾಯಿತು. ಅದೇ ದಿನ ಕೆಲವು ಗಂಟೆಗಳಲ್ಲಿಯೇ ಜಾಮೀನಿನ ಮೇಲೆ ಸಲ್ಮಾನ ಖಾನ್ ಬಿಡುಗಡೆಗೊಂಡನು. ತದನಂತರ ಠಿಪಸೆಯವರ ಮೇಲೆ ಪಕ್ಷಪಾತ ನಿಲುವಿನ ಬಗ್ಗೆ ಟೀಕೆಗಳು ಮತ್ತು ಚರ್ಚೆಗಳಾದವು. ಸೋಹರಾಬುದ್ಧೀನ ಶೇಖ ಘರ್ಷಣೆಯಲ್ಲಿ ಮರಣ ಹೊಂದಿದ ಪ್ರಕರಣದಲ್ಲಿ ಸಾಕ್ಷೀದಾರರು ತಮ್ಮ ಹೇಳಿಕೆಯನ್ನು ಬದಲಾಯಿಸತೊಡಗಿದಾಗ ಠಿಪಸೆಯವರು ದುಃಖಿತರಾಗಿದ್ದರು. ಆದರೆ ನೀರವ ಮೋದಿ ಪ್ರಕರಣದಲ್ಲಿ ಬ್ರಿಟನ್ ನ್ಯಾಯಾಲಯದಲ್ಲಿ ಆಲಿಕೆ ನಡೆದಿರುವಾಗ, ಸರಕಾರಿ ಅಧಿಕಾರಿಗಳು ಮತ್ತು ಠಿಪಸೆಯವರು ಸುದ್ದಿವಾಹಿನಿಗಳೊಂದಿಗೆ ಮಾತನಾಡಿದರು. ಇದಕ್ಕೆ ನ್ಯಾಯಾಲಯ ಅಸಮಾಧಾನಗೊಂಡಿತು.

೪. ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಕಾಟ್ಜೂರವರು ನೀರವ ಮೋದಿಯವರ ಪರವಾಗಿ ಸಾಕ್ಷಿ ಹೇಳುವಾಗ ಭಾರತೀಯ ನ್ಯಾಯವ್ಯವಸ್ಥೆಯ ವಿರುದ್ಧ ಹರಿಹಾಯುವುದು

ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಕಾಟ್ಜೂರವರು ನೀರವ ಮೋದಿ ಪರವಾಗಿ ಅವನಿಗೆ ಸಹಾಯವಾಗುವಂತೆ ಸಾಕ್ಷ್ಯವನ್ನು ನೀಡಿದರು. ಈ ಸಾಕ್ಷಿಯಲ್ಲಿ ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಹರಿಹಾಯುತ್ತಾ, ಭಾರತದ ನ್ಯಾಯವ್ಯವಸ್ಥೆ ನೀರವ ಮೋದಿಗೆ ನ್ಯಾಯ ನೀಡಲಾರದು ಎಂದರು. ೨೦೧೪ ರ ನಂತರ ಭಾರತೀಯ ನ್ಯಾಯವ್ಯವಸ್ಥೆ ಮತ್ತು ವಿಶೇಷವಾಗಿ ಸರ್ವೋಚ್ಚ ನ್ಯಾಯಾಲಯವು ಸರಕಾರದ ಅಧೀನದಲ್ಲಿದ್ದು, ಅದು ಸರಕಾರಕ್ಕೆ ಅಪೇಕ್ಷಿತವಿರುವಂತಹ ತೀರ್ಪುಗಳನ್ನು ನೀಡುತ್ತಿದೆ ಎಂದು ಆರೋಪಿಸಿದರು. ಅವರು ನ್ಯಾಯಾಲಯದ ಪ್ರಶ್ನೆಗಳಿಗೆ ಉತ್ತರಿಸುವಾಗ ಮತ್ತು ಪಾಟಿಸವಾಲಿನಲ್ಲಿ ಭಾರತದಲ್ಲಿರುವ ಶೇ. ೫೦ ರಷ್ಟು ನ್ಯಾಯಮೂರ್ತಿಗಳು ಭ್ರಷ್ಟರಾಗಿದ್ದಾರೆ ಎಂದರು.

ಕಳೆದ ಕೆಲವು ವರ್ಷಗಳಿಂದ ಅನೇಕ ಮಹತ್ವದ ಖಟ್ಲೆಗಳನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಅಧೀನ ನ್ಯಾಯಮೂರ್ತಿಗಳಿಗೆ ಅಥವಾ ಸರಕಾರಕ್ಕೆ ಹತ್ತಿರವಿರುವ ನ್ಯಾಯಮೂರ್ತಿಗಳಿಗೆ ವಹಿಸುತ್ತಿರುವುದರಿಂದ, ಸರಕಾರದ ಪರವಾಗಿ ನಿರ್ಣಯಗಳು ಬರುತ್ತಿವೆ. ಹಾಗಾಗಿ ನೀರವ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬಾರದು ಎಂದರು. ಅಲ್ಲದೇ ಅವರು ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ನೇಮಕಾತಿಯ ಕುರಿತೂ ಟೀಕಿಸಿದರು.

೫. ನೀರವ ಮೋದಿಯವರನ್ನು ಸಮರ್ಥಿಸುತ್ತ ಪ್ರಧಾನಮಂತ್ರಿಗಳನ್ನು ಹಿಟ್ಲರ್ ಎಂದು ಸಂಬೋಧಿಸುವುದು

‘೨೦೧೪ ರಲ್ಲಿ ನಡೆದ ಆಡಳಿತದ ಬದಲಾವಣೆ ಮತ್ತು ಮೋದಿಯವರ ಆಡಳಿತ  ಹಿಟ್ಲರ್‌ಶಾಹಿಯಾಗಿದ್ದು, ನೀರವ ಮೋದಿಯನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ ಎಂದು ಕಾಟ್ಜೂ ಹೇಳಿದರು. ಯಾವ ರೀತಿ ನಾಝಿಗಳು ಜ್ಯೂ ಜನರನ್ನು ನಡೆಸಿಕೊಂಡರೋ, ಅದೇ ರೀತಿ ನೀರವ ಮೋದಿಯನ್ನು ಭಾರತ ಸರಕಾರ ನಡೆಸಿಕೊಳ್ಳುತ್ತಿದೆ. ಕೋವಿಡ್-೧೯ ರ ಬಳಿಕ ಭಾರತದ ಆರ್ಥಿಕ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಲಕ್ಷಾಂತರ ಜನರ ವ್ಯವಹಾರಗಳು ಮುಳುಗಿದ್ದು ಅನೇಕ ಜನರು ನೌಕರಿ ಕಳೆದುಕೊಂಡಿದ್ದಾರೆ. ಈ ಸೋಲನ್ನು ಮುಚ್ಚಿಕೊಳ್ಳಲು ಭಾರತ ಸರಕಾರವು ನೀರವ ಮೋದಿಯವರಿಗೆ ತೊಂದರೆಗಳನ್ನು ಕೊಡುತ್ತಿದೆ ಎಂದು ಹೇಳಿದರು. ನೀರವ ಮೋದಿಯವರ ಪರವಾಗಿ ಕಾಟ್ಜೂ ಆನ್‌ಲೈನ್ ಸಾಕ್ಷ್ಯವನ್ನು ನೀಡುವ ಮೊದಲೇ ಸುದ್ದಿವಾಹಿನಿಗಳೆದುರಿಗೆ ಇದನ್ನು ವಿವರಿಸಿದರು. ಕಾಟ್ಜೂ ಇವರ ನಡತೆ ಯಾವಾಗಲೂ ಆಕ್ಷೇಪಾರ್ಹವಾಗಿರುತ್ತದೆ. ಅವರು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ಮಾಡಿದ ಟೀಕೆಯಿಂದ ಅವರ ಮೇಲೆ ನ್ಯಾಯಾಂಗ ನಿಂದನೆಯ ದೂರು ಸಹ ದಾಖಲಾಗಿತ್ತು. ಆಗ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಕೈಮುಗಿದು ತಮ್ಮನ್ನು ಕ್ಷಮಿಸುವಂತೆ ಯಾಚಿಸಿ ಬಿಡುಗಡೆಗೊಳ್ಳಬೇಕಾಯಿತು. ಅನಂತರವೂ ಅವರಲ್ಲಿ ಬದಲಾವಣೆಯಾಗಿಲ್ಲ.

೬. ಕಾಟ್ಜೂರವರ ದ್ವಿಮುಖ ನಡವಳಿಕೆ

ಕಾಟ್ಜೂರವರ ದ್ವಿಮುಖ ನಡವಳಿಕೆ ಗಮನಾರ್ಹವಾಗಿದೆ. ೧೭ ಜೂನ್ ೧೯೮೬ ರಂದು ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ಬಿ.ಎ. ಮಾಸೋದಕರ ಇವರು ತಮ್ಮ ಹುದ್ದೆಯನ್ನು ತ್ಯಜಿಸಿ ಕಾಂಗ್ರೆಸ್ ಸೇರಿದರು ಮತ್ತು ರಾಜ್ಯ ಸಭೆಯ ಸದಸ್ಯರಾದರು. ತದನಂತದ ಮಾಜಿ ನ್ಯಾಯಮೂರ್ತಿ ಅಭಯ ಠಿಪಸೆ ಇವರು ೨೦೧೮ ರಲ್ಲಿ ಕಾಂಗ್ರೆಸ್ ಸೇರಿದರು. ಆಗ ಕಾಟ್ಜೂರವರಿಗೆ ತೊಂದರೆಯಾಗಲಿಲ್ಲ; ಆದರೆ ಮಾಜಿ ಸರ್ವೋಚ್ಚ ನ್ಯಾಯಾಧೀಶರಾದ ಗೊಗೊಯಿ ರಾಜ್ಯಸಭೆಯ ಸದಸ್ಯರಾದಾಗ ಅವರಿಗೆ ಬಹಳ ದುಃಖವಾಯಿತು. ಇದರಿಂದ ಅವರ ದ್ವಿಮುಖ ನಡವಳಿಕೆ ಕಂಡು ಬರುತ್ತದೆ.

೭. ಬ್ರಿಟನ್ ನ್ಯಾಯಾಲಯವು ಭಾರತದ ಪರವಾಗಿ ನಿರ್ಣಯ ನೀಡಿ, ಕಾಟ್ಜೂರವರ ಸಾಕ್ಷ್ಯವನ್ನು ತಿರಸ್ಕರಿಸುವುದು

೨೦೧೬ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಕಾಟ್ಜೂರವರು ನ್ಯಾಯವ್ಯವಸ್ಥೆಯ ಬಗ್ಗೆ ಮಾಡಿದ ಟೀಕೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತ ಪಡಿಸಿತ್ತು. ಅದೇ ರೀತಿ ೫ ವರ್ಷಗಳ ಬಳಿಕ ಬ್ರಿಟನ್ನಿನ ವೆಸ್ಟ ಮಿನಿಸ್ಟರ್ ನ್ಯಾಯಾಲಯವು ಕಾಟ್ಜೂ ಇವರ ಹೇಳಿಕೆಯನ್ನು ತಿರಸ್ಕರಿಸಿತು. ವೆಸ್ಟ ಮಿನಿಸ್ಟರ ನ್ಯಾಯಾಲಯವು ೨೫.೨.೨೦೨೧ ರಂದು ನೀಡಿದ ತೀರ್ಪಿನಲ್ಲಿ ಕಾಟ್ಜೂರವರ ಹೇಳಿಕೆ ಮತ್ತು ಸಾಕ್ಷಿಯನ್ನು ತಿರಸ್ಕರಿಸಿತು ಮತ್ತು ‘ಭಾರತ ಸರಕಾರಕ್ಕೆ ನೀರವ ಮೋದಿಯವರನ್ನು ಹಸ್ತಾಂತರಿಸಬೇಕು ಎಂದು ಹೇಳಿತು. ಬ್ರಿಟನ್ ನ್ಯಾಯಾಲಯವು ಕಾಟ್ಜೂರ ಬಗ್ಗೆ, ನ್ಯಾಯವ್ಯವಸ್ಥೆಯ ಇಷ್ಟು ದೊಡ್ಡ ಹುದ್ದೆಯಲ್ಲಿದ್ದ ವ್ಯಕ್ತಿ ಈ ರೀತಿ ಹೇಳಿಕೆಯನ್ನು ನೀಡುತ್ತಿರುವುದನ್ನು ನೋಡಿ ದುಃಖ ಮತ್ತು ಆಶ್ಚರ್ಯವನ್ನು ವ್ಯಕ್ತಪಡಿಸುವುದರೊಂದಿಗೆ ಇದು ಅಯೋಗ್ಯವಾಗಿದೆ ಎಂದೂ ಬರೆಯಿತು.

ಕಾಟ್ಜೂರವರ ಸಾಕ್ಷ್ಯವನ್ನು ತಿರಸ್ಕರಿಸುವಾಗ ಭಾರತದ ಸವೋಚ್ಚ ನ್ಯಾಯಾಲಯದ ಮಹಾನ್ಯಾಯವಾದಿಗಳಾದ ತುಷಾರ ಮೆಹತಾ ಇವರು, ಭಾರತೀಯ ನ್ಯಾಯವ್ಯವಸ್ಥೆಯು ಸ್ವತಂತ್ರ, ನಿಷ್ಪಕ್ಷ ಮತ್ತು ನ್ಯಾಯವ್ಯವಸ್ಥೆ ಸ್ವತಂತ್ರವಾಗಿರಬೇಕೆಂಬುದನ್ನು ಬೆಂಬಲಿಸುತ್ತದೆ ಎಂದು ನೀಡಿದ ಹೇಳಿಕೆಯ ಬಗ್ಗೆ ಬ್ರಿಟನ್ ನ್ಯಾಯಾಲಯ ಸಮಾಧಾನ ವ್ಯಕ್ತ ಪಡಿಸಿತು. ನ್ಯಾಯಾಲಯದ ಎದುರಿಗೆ ಖಟ್ಲೆ ನಡೆದಿರುವಾಗ ಮತ್ತು ತಮ್ಮ ಸ್ವಂತದ ಸಾಕ್ಷ್ಯ ಆಗಬೇಕಾಗಿರುವಾಗ ಕಾಟ್ಜೂರವರು ಸುದ್ದಿ ವಾಹಿನಿಗಳ ಎದುರಿಗೆ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಈ ವಿಷಯದ ಬಗ್ಗೆಯೂ ನ್ಯಾಯಾಲಯ ಅಸಮಾಧಾನವನ್ನು ವ್ಯಕ್ತಪಡಿಸಿತು. ಈ ವರದಿಯಲ್ಲಿ ಕಾಟ್ಜೂರವರು ಹಸ್ತಾಂತರದ ವಿಷಯ ಅಥವಾ ಅರ್ಜಿ, ಅದರಲ್ಲಿರುವ ಗುಣಮಟ್ಟ, ಸತ್ಯಾಸತ್ಯತೆ, ನೈಜತೆ ಈ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಈ ಬಗ್ಗೆಯೂ ನ್ಯಾಯಾಲಯ ಆಶ್ಚರ್ಯ ವ್ಯಕ್ತಪಡಿಸಿತು. ಅಲ್ಲದೇ, ನಿವೃತ್ತಿಯ ಬಳಿಕ ಕಾಟ್ಜೂರವರು ‘ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಹುದ್ದೆಯನ್ನು ಹೊಂದಿರುವ ಬಗ್ಗೆಯೂ ನ್ಯಾಯಾಲಯ ಸಂಶಯವನ್ನು ವ್ಯಕ್ತಪಡಿಸಿತು.

೨೦ ವರ್ಷಗಳಿಗಿಂತ ಅಧಿಕ ಕಾಲ ನ್ಯಾಯ ಮೂರ್ತಿಗಳಾಗಿದ್ದ ವ್ಯಕ್ತಿಯು ನ್ಯಾಯವ್ಯವಸ್ಥೆ ಮತ್ತು ಒಂದು ಕಾಲದಲ್ಲಿನ ತಮ್ಮ ಸಹಕಾರಿ ಆಗಿರುವವರ ಬಗ್ಗೆ ಟೀಕೆಯನ್ನು ಮಾಡುತ್ತಾರೆ. ಈ ವಿಷಯದ ಬಗ್ಗೆ ನ್ಯಾಯಾಲಯವು His evidence in Court appeared tinged with resentment towards former senior judicial colleagues. It had hallmarks of an outspoken critic with his own personal agenda. (ಅರ್ಥ: ಪುರಾವೆಗಳಿಂದ ಅವರ ಹಿಂದಿನ ಹಿರಿಯ ಸಹಕಾರಿಯ ಬಗ್ಗೆ ಅಸಮಾಧಾನ ಕಂಡು ಬಂದಿತು. ಅದರಲ್ಲಿ ಅವರು ತಮ್ಮ ವೈಯಕ್ತಿಕ ಪ್ರಾಧ್ಯಾನ್ಯತೆಗನುಸಾರ ಸ್ಪಷ್ಟವಾಗಿ ಟೀಕಿಸುವ ವೈಶಿಷ್ಟ್ಯವಾಗಿದ್ದವು). ‘ಕಾಟ್ಜೂರವರ ಸಾಕ್ಷ್ಯವು ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಾಲಯ ಟಿಪ್ಪಣಿಯನ್ನು ಮಾಡಿತು.

ಕಳೆದ ೫ ರಿಂದ ೭ ವರ್ಷಗಳ ಕಾಲಾವಧಿಯಲ್ಲಿ ಭಾರತ ಸರಕಾರವು ದೇಶಹಿತದ ಅನೇಕ ಒಳ್ಳೆಯ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಭಾರತದ ಬಾಹ್ಯ ಮತ್ತು ಆಂತರಿಕ ಶತ್ರುಗಳು, ನಕ್ಸಲರು, ಜಿಹಾದಿಗಳು, ದೇಶದ್ರೋಹಿಗಳು, ಭಯೋತ್ಪಾದಕರು ಹಾಗೂ ಆರ್ಥಿಕ ಹಗರಣ ಮಾಡುವವರಿಗೆ ಕಠಿಣ ಉತ್ತರ ನೀಡಲು ಪ್ರಯತ್ನಿಸುತ್ತಿದೆ. ಇಂತಹ ಸಮಯದಲ್ಲಿ ಕಾಟ್ಜೂ ಮತ್ತು ಠಿಪಸೆಯಂತಹವರು ಅದರಲ್ಲಿ ಅಡಚಣೆಗಳನ್ನು ತಂದೊಡ್ಡುತ್ತಿದ್ದಾರೆ. ಇಂತಹ ನ್ಯಾಯಪ್ರೇಮಿ ನ್ಯಾಯಮೂರ್ತಿಗಳು ನ್ಯಾಯವ್ಯವಸ್ಥೆಯ ಎಲ್ಲ ಮಹತ್ವದ ಹುದ್ದೆಗಳನ್ನು ಉಪಭೋಗಿಸಿ ನ್ಯಾಯ ವ್ಯವಸ್ಥೆಯ ಬಗ್ಗೆ ಪ್ರಶ್ನೆಚಿಹ್ನೆಯನ್ನು ಮೂಡಿಸುತ್ತಿದ್ದಾರೆ. ನಿವೃತ್ತಿಯ ಬಳಿಕ ಇವರು ತೆರಿಗೆದಾರರ ಹಣದಿಂದ ನಿವೃತ್ತಿವೇತನವನ್ನು ಪಡೆಯುತ್ತಾರೆ. ಹಾಗೆಯೇ ಎಲ್ಲ ರೀತಿಯ ಅತ್ಯುತ್ತಮ ಸೌಲಭ್ಯಗಳನ್ನು ಅನುಭವಿಸುತ್ತಾರೆ. ಇವೆಲ್ಲವನ್ನು ಶೀಘ್ರವಾಗಿ ಸ್ಥಗಿತಗೊಳಿಸಬೇಕು. ಇದನ್ನು ಎಷ್ಟು ಕಾಲದವರೆಗೆ ಸಹಿಸುವುದು, ಇದಕ್ಕೂ ಒಂದು ಮಿತಿ ಇದೆ. ಆದುದರಿಂದ ನ್ಯಾಯವ್ಯವಸ್ಥೆ ಮತ್ತು ಸಂಸತ್ತಿಗೆ ಈ ವಿಷಯದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಕಾಲ ಈಗ ಕೂಡಿ ಬಂದಿದೆ.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧೀಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ (೨೮.೨.೨೦೨೧)


ಭಾರತದಲ್ಲಿ ಗಂಭೀರ ಅಪರಾಧಗಳನ್ನು ಮಾಡಿ ವಿದೇಶಗಳಿಗೆ ಪರಾರಿಯಾಗಿರುವವರನ್ನು ದೇಶಕ್ಕೆ ವಾಪಸ್ಸು ತರಲು ಪ್ರಯತ್ನಿಸದಿರುವ ಆಗಿನ ಆಡಳಿತಾಧಿಕಾರಿಗಳೇ ಇದಕ್ಕೆ ಜವಾಬ್ದಾರರು

೧. ಮುಂಬಯಿಯಲ್ಲಿ ಅನೇಕ ಬಾಂಬ್ ಸ್ಫೋಟಗಳನ್ನು ಮಾಡಿ ದಾವೂದ ಇಬ್ರಾಹಿಮ ವಿದೇಶಕ್ಕೆ ಪರಾರಿಯಾಗುವುದು ಮತ್ತು ಅವನನ್ನು ವಾಪಸ್ಸು ಕರೆ ತರಲು ಪ್ರಯತ್ನಗಳಾಗದೇ ಇರುವುದು

೧೯೯೩ ರಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ಸೇಡು ತೀರಿಸಿಕೊಳ್ಳಲು ಜಿಹಾದಿ ಭಯೋತ್ಪಾದಕರು ಅನೇಕ ಬಾಂಬ್ ಸ್ಫೋಟಗಳನ್ನು ನಡೆಸಿ ನೂರಾರು ಜನರ ಪ್ರಾಣವನ್ನು ತೆಗೆದುಕೊಂಡರು. ತದನಂತರ ಈ ಸ್ಫೋಟದ ರೂವಾರಿ ದಾವೂದ ಇಬ್ರಾಹಿಂ ಅತ್ಯಂತ ಸುಗಮವಾಗಿ ವಿದೇಶಕ್ಕೆ ಓಡಿ ಹೋದನು. ತದನಂತರ ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಅನೇಕ ಸರಕಾರಗಳು ಅಧಿಕಾರಕ್ಕೆ ಬಂದವು ಮತ್ತು ಹೋದವು. ಆದರೆ ಅವನನ್ನು ವಾಪಸ್ಸು ಕರೆ ತರುವ ಪ್ರಯತ್ನಗಳು ಮಾತ್ರ ಕೇವಲ ಕಾಗದದ ಮೇಲೆ ಉಳಿಯಿತು.

೨. ಭೋಪಾಲ ವಿಷ ಅನಿಲ ದುರ್ಘಟನೆಯ ಆರೋಪಿ ವಾರೆನ್ ಎಂಡರ್ಸನ್‌ನನ್ನು ರಕ್ಷಿಸಲು ಆಗಿನ ರಾಜಕಾರಣಿಗಳು ಮಾಡಿದ ಪ್ರಯತ್ನ

೧೯೮೪ ರ ೨ ಮತ್ತು ೩ ಡಿಸೆಂಬರ್ ಮಧ್ಯರಾತ್ರಿ ಭೋಪಾಲದಲ್ಲಿ ಅಮೇರಿಕನ್ ಕಂಪನಿ ‘ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ವಿಷಅನಿಲ ಸೋರಿಕೆಯಾಯಿತು. ಅದರಲ್ಲಿ ಸಾವಿರಾರು ಜನರು ಮರಣ ಹೊಂದಿದರು. ಸಾವಿರಾರು ಜನರು ತೊಂದರೆಗೀಡಾದರು ಮತ್ತು ನೂರಾರು ಜನರು ದೃಷ್ಟಿಹೀನರಾದರು. ವಿಷಅನಿಲದಿಂದ ಪೀಡಿತರ ಮನೆಯಲ್ಲಿ ಹುಟ್ಟುವ ಸಂತಾನದ ಮೇಲೆಯೂ ಪರಿಣಾಮವಾಯಿತು. ಸಾವಿರಾರು ಎಕರೆ ಭೂಮಿ ಬರಡಾಯಿತು. ಈ ಘಟನೆಯಿಂದ ದೇಶದಲ್ಲಿ ಹಾಹಾಕಾರವೆದ್ದಿತು. ಈ ಪ್ರಕರಣದಲ್ಲಿ ಸಿಬಿಐ ದೂರನ್ನು ದಾಖಲಿಸಿತು. ಕಾರ್ಖಾನೆಯ ಮುಖ್ಯಾಧಿಕಾರಿ ವಾರೆನ್ ಎಂಡರ್ಸನ್ ಭಾರತಕ್ಕೆ ಬಂದರು. ಆಗ ಅವರನ್ನು ಬಂಧಿಸಲಾಯಿತು ಮತ್ತು ಅವರಿಗೆ ಜಾಮೀನು ಕೂಡ ಸಿಕ್ಕಿತು. ಮುಂದೆ ೧ ಫೆಬ್ರುವರಿ ೧೯೯೨ ರಲ್ಲಿ ಅವರನ್ನು ‘ಪರಾರಿ ಎಂದು ಘೋಷಿಸಲಾಯಿತು. ಸರಕಾರವು ೨೦೦೩ ರಲ್ಲಿ ನ್ಯಾಯಾಧಿಕರಣವಾಗಿ ಹಸ್ತಾಂತರ ಪ್ರಕರಣವನ್ನು ದಾಖಲಿಸಿತು. ೨೦೦೯ ರಲ್ಲಿ ಅವರ ವಿರುದ್ಧ ವಾರಂಟ್ ಹೊರಡಿಸಲಾಯಿತು. ೨೯ ಸಪ್ಟೆಂಬರ್ ೨೦೧೪ ರಲ್ಲಿ ಅವರು ಮರಣ ಹೊಂದಿದರು. ಸಾಯುವವರೆಗೆ ಅವರು ಭಾರತೀಯ ನ್ಯಾಯ ವ್ಯವಸ್ಥೆಗೆ ಮೋಸ ಮಾಡುತ್ತಲೇ ಇದ್ದರು.

೩. ಕಾಂಗ್ರೆಸ್ಸಿನ ಆಗಿನ ಮುಖ್ಯಮಂತ್ರಿಗಳು ಎಂಡರ್ಸನರಿಗೆ ಪರಾರಿಯಾಗಲು ಸಹಾಯ ಮಾಡುವುದು

ಈ ಘಟನೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಸ್ವಯಂಪ್ರೇರಿತ ದೂರು ದಾಖಲಿಸಿತು. ಆ ಸಮಯದಲ್ಲಿ ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿಗಳು ಎಂಡರ್ಸನರನ್ನು ಸ್ವತಃ ವಿಮಾನದಲ್ಲಿ ಕುಳ್ಳಿರಿಸಿ ಅವರನ್ನು ದೆಹಲಿಗೆ ತಲುಪಿಸಿದರು. ತದನಂತರ ಅಲ್ಲಿಂದ ಅವರು ತಮ್ಮ ದೇಶಕ್ಕೆ ಓಡಿ ಹೋದರು ಎಂದು ಬಹಿರಂಗ ಚರ್ಚೆಗಳಾಗುತ್ತಿದ್ದವು. ಅಮೇರಿಕಾ ದೇಶವು ಆಗಿನ ಪ್ರಧಾನಮಂತ್ರಿ ರಾಜೀವಗಾಂಧಿಯವರ ಮೇಲೆ ಒತ್ತಡವನ್ನು ಹೇರಿ ಅವರನ್ನು ಬಿಡುಗಡೆಗೊಳಿಸುವಂತೆ ಮಾಡಿದರೆಂದು ಹೇಳಲಾಗುತ್ತದೆ. ಭಾರತವು ಅಮೇರಿಕಾದ ನ್ಯಾಯಾಲಯದಲ್ಲಿ ೩.೩ ಬಿಲಿಯನ್ ಡಾಲರ್ಸ ಹಾನಿ ಭರಿಸುವಂತೆ ದಾವೆಯನ್ನು ದಾಖಲಿಸಿತು. ತದನಂತರ ಅದು ಇಲ್ಲಿ ವರ್ಗಾವಣೆಯಾಯಿತು.

೪. ಆವಶ್ಯಕ ಪುರಾವೆಗಳ ಅಭಾವದಿಂದ ಬೊಫೋರ್ಸ್ ಪ್ರಕರಣದ ಆರೋಪಿ ಒಟಾವಿಓ ಕ್ವಟ್ರೋಚಿ ಹಸ್ತಾಂತರಗೊಳ್ಳದಿರುವುದು

ಆಗಿನ ರಾಜೀವ ಗಾಂಧಿಯವರ ಆಡಳಿತಾವಧಿಯಲ್ಲಿ ಬೊಫೋರ್ಸ ಪ್ರಕರಣ ತುಂಬಾ ಪ್ರಸಿದ್ಧಿ ಪಡೆಯಿತು.  ಅದೇ ೧೯೯೯ ನೇ ಇಸವಿಯಲ್ಲಿ ಸಿಬಿಐ ಒಟಾವಿಓ ಕ್ವಟ್ರೋಚಿಯ ಮೇಲೆ ಆರೋಪಪತ್ರವನ್ನು ದಾಖಲಿಸಿತು. ಕಾಂಗ್ರೆಸ್ಸಿನ ಆಡಳಿತಾವಧಿಯಲ್ಲಿ ಒಟಾವಿಓ ಕ್ವಟ್ರೋಚಿ ಭಾರತದಿಂದ ಓಡಿ ಹೋದನು. ಸುಮ್ಮನೆ ತೋರಿಕೆಗೆಂದು ೨೦೦೩ ರಲ್ಲಿ ಅವನ ವಿರುದ್ಧ ಹಸ್ತಾಂತರದ ಖಟ್ಲೆಯನ್ನು ದಾಖಲಿಸಲಾಯಿತು. ೨೦೦೬ ರಲ್ಲಿ ಅವನ ೨ ಬ್ಯಾಂಕ್ ಖಾತೆಗಳನ್ನು ಫ್ರೀಜ ಮಾಡಲಾಯಿತು. ಆದರೆ ಭಾರತೀಯ ವಿಧಿ ಖಾತೆಯು ಸಿಬಿಐನ ಸಮ್ಮತಿ ಇಲ್ಲದೇ ಅವರ ಖಾತೆಗಳನ್ನು ‘ರಿಲೀಜ್ ಮಾಡುವ ಆದೇಶವನ್ನು ನೀಡಿತು. ಫೆಬ್ರುವರಿ ೨೦೦೭ ರಲ್ಲಿ ಅರ್ಜೆಂಟಿನಾ ಒಟಾವಿಓ ಕ್ವಟ್ರೋಚಿಯನ್ನು ಬಂಧಿಸಿತು, ಆದರೆ ಆಗಿನ ಕಾಂಗ್ರೆಸ್ ಸರಕಾರ ಹಸ್ತಾಂತರದ ಖಟ್ಲೆಯಲ್ಲಿನ ಆವಶ್ಯಕ ಪುರಾವೆಗಳನ್ನು ನೀಡಲಿಲ್ಲ. ಇದರಿಂದ ಕ್ವಟ್ರೋಚಿ ಹಸ್ತಾಂತರಗೊಳ್ಳಲಿಲ್ಲ. ಜೂನ್ ೨೦೦೭ ರಲ್ಲಿ ಅರ್ಜೇಂಟಿನಾದ ನ್ಯಾಯಾಧೀಶರು India did not even present proper legal documents, consequently India was asked to pay Quattrochi’s legal expenses.’ (ಇದುವರೆಗೂ ಭಾರತವು ಸೂಕ್ತ ಕಾನೂನಾತ್ಮಕ ಕಾಗದಪತ್ರಗಳನ್ನು ಕೂಡ ಹಾಜರು ಪಡಿಸಲಿಲ್ಲ. ಇದರ ಪರಿಣಾಮವೆಂದು ಕ್ವಟ್ರೋಚಿಯ ಕಾನೂನಿನ ವೆಚ್ಚವನ್ನು ಭರಿಸುವಂತೆ ಭಾರತಕ್ಕೆ ಹೇಳಲಾಯಿತು) ಅರ್ಥಾತ್ ಭಾರತದ ಹಸ್ತಾಂತರದ ಖಟ್ಲೆಯನ್ನು ತಿರಸ್ಕರಿಸಲಾಯಿತು. ‘ಕ್ವಟ್ರೋಚಿಗೆ ಗಾಂಧಿ ಕುಟುಂಬದವರೊಂದಿಗೆ ಹತ್ತಿರದ ಸಂಬಂಧವಿತ್ತು ಎಂದು ಹೇಳಲಾಗುತ್ತದೆ ಗಾಂಧಿ ಕುಟುಂಬವು ದೇಶಹಿತವನ್ನು ಕಾಪಾಡುವುದಕ್ಕಿಂತ ದೇಶಕ್ಕೆ ಮೋಸವನ್ನೇ ಮಾಡಿತು. ೧೩ ಜುಲೈ ೨೦೧೩ರಲ್ಲಿ ಒಟಾವಿಓ ಕ್ವಟ್ರೋಚಿ ಮರಣ ಹೊಂದಿದನು. ಆಗಿನ ಆಡಳಿತಾಧಿಕಾರಿಗಳಿಗೆ ಮೇಲೆ ಉಲ್ಲೇಖಿಸಿದ ಒಬ್ಬರನ್ನೂ ಆರೋಪಿಯೆಂದು ಭಾರತಕ್ಕೆ ವಾಪಸ್ಸು ಕರೆತರಲು ಸಾಧ್ಯವಾಗಲಿಲ್ಲ.