ನವ ದೆಹಲಿ – ದೇಶದಲ್ಲಿ ೨೬/೧೧ ನಂತಹ ದೊಡ್ಡ ಭಯೋತ್ಪಾದಕ ದಾಳಿ ನಡೆಸುವ ಸಂಚು ರೂಪಿಸಲಾಗುತ್ತಿದೆ, ಎಂಬ ಮಾಹಿತಿಯನ್ನು ನೀಡುವ ದೂರವಾಣಿ ಕರೆ ಬಂದಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.)ವು ಹೇಳಿದೆ. ಹಾಗಾಗಿ ಈ ಪ್ರಕರಣದಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ದೂರವಾಣಿ ಕರೆಯು ಬಂಗಾಳದ ರಣಘಾಟ್‍ನಿಂದ ಬಂದಿರುವುದು ಬೆಳಕಿಗೆ ಬಂದಿದೆ. ಈ ದಾಳಿಗೆ ಸಂಬಂಧಿಸಿದಂತೆ ಗುಂಡುಗಳು (ಸ್ಟೀಲ ಬುಲೆಟ್) ಮತ್ತು ಬಾಂಬ್‍ಗಳನ್ನು ನೇಪಾಳ ಮತ್ತು ಬಾಂಗ್ಲಾದೇಶದ ಮೂಲಕ ಕಳ್ಳಸಾಗಣೆ ಮಾಡಿ ತರಲಾಗಿದೆ ಎಂದು ದೂರವಾಣಿ ಕರೆ ಮಾಡಿದವರು ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ೨೦ ರಂದು ಇದೇ ರೀತಿಯ ದೂರವಾಣಿ ಕರೆ ಬಂದಿತ್ತು. ಆ ಸಮಯದಲ್ಲಿ ಕರೆ ಮಾಡಿದವರು ತಾನು ಪಾಕಿಸ್ತಾನದ ಕರಾಚಿಯಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದು ಮುಂಬಯಿ ವಿಮಾನ ನಿಲ್ದಾಣ ಮತ್ತು ಪೊಲೀಸ್ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದನು.