ಅನುಪಮ ಪ್ರೀತಿಯಿಂದ ಎಲ್ಲರನ್ನೂ ಈಶ್ವರಪ್ರಾಪ್ತಿಯ ಒಂದೇ ದಾರದಲ್ಲಿ ಪೋಣಿಸಿರುವ ಪರಾತ್ಪರ ಗುರು ಡಾ. ಆಠವಲೆ !

‘ಸನಾತನದ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುತ್ತಿರುವ ಎಷ್ಟೋ ಜನ ಸಾಧಕರು ಪರಾತ್ಪರ ಗುರು ಡಾ. ಆಠವಲೆಯವರನ್ನು ಒಮ್ಮೆಯೂ ನೋಡಿಲ್ಲ. ಹೀಗಿದ್ದರೂ ಅವರೆಲ್ಲರೂ ಪರಾತ್ಪರ ಗುರು ಡಾಕ್ಟರರು ಹೇಳಿರುವ ಸಾಧನೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಹೊರಗೆ ಮೋಹಮಾಯೆಯ ಪ್ರಬಲ ಜಾಲಗಳಿರುವಾಗಲೂ ಕೇವಲ ಪರಾತ್ಪರ ಗುರು ಡಾ. ಆಠವಲೆಯವರ ಮೇಲಿನ ಶ್ರದ್ಧೆಯಿಂದಾಗಿ ಸನಾತನದ ಸಾಧಕರು ಎಲ್ಲ ಮೋಹಮಾಯೆಯನ್ನು ತ್ಯಜಿಸಿ ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡುತ್ತಿದ್ದಾರೆ. ಸಮಾಜದಲ್ಲಿ ಸಾಮ್ಯವಾದ, ಜಾತ್ಯತೀತತೆ, ನಾಸ್ತಿಕವಾದ ಇವುಗಳ ಅನುಕರಣೆ ಮಾಡುವುದು ಪ್ರತಿಷ್ಠೆಯ ವಿಷಯವೆಂದು ತಿಳಿದಿರುವಾಗ ಸನಾತನದ ಸಾಧಕರು ಸ್ವತಃ ಧರ್ಮನಿಷ್ಠರಾಗಿದ್ದು, ಸಮಾಜವನ್ನೂ ಧರ್ಮನಿಷ್ಠರನ್ನಾಗಿ ಮಾಡಲು ಮಾರ್ಗದರ್ಶನ ಮಾಡುತ್ತಿದ್ದಾರೆ. ಇದಕ್ಕಾಗಿ ನಾಸ್ತಿಕರು ಮತ್ತು ಪ್ರಗತಿಪರರ ವಿರೋಧವನ್ನು ಸಕ್ಷಮವಾಗಿ ಎದುರಿಸಲು ಕೂಡ ಅವರು ಸಿದ್ಧರಾಗಿದ್ದಾರೆ. ಸನಾತನದ ಸಂಪರ್ಕಕ್ಕೆ ಬರುವ ಮೊದಲು ಮಾಯೆಯ ವಿಶ್ವದ ಒಂದು ಘಟಕವಾಗಿದ್ದವರಿಗೆ, ಹೀಗೆ ಪ್ರವಾಹದ ವಿರುದ್ಧ ಈಜಲು ಯಾರು ಬಲವನ್ನು ಕೊಡುತ್ತಿದ್ದಾರೆ ?

ಸನಾತನದ ಕಠಿಣ ಕಾಲದಲ್ಲಿ ಸಮಾಜದಲ್ಲಿದ್ದು, ಸಾಧನೆ-ಸೇವೆಯನ್ನು ಮಾಡುವಾಗ ಸಮಾಜದ ಟೀಕೆ, ಪರಿಚಿತರ ಕೊಂಕುನುಡಿ, ಕೆಲವೊಮ್ಮೆ ಮನೆಯ ಸದಸ್ಯರ ವೈಚಾರಿಕ ವಿರೋಧವನ್ನು ಸಹಿಸಿಯೂ ಸಾಧಕರು ಸನಾತನ ಸಂಸ್ಥೆಯು ಹೇಳಿದ ಸಾಧನೆಯೊಂದಿಗೆ ಏಕನಿಷ್ಠರಾಗಿದ್ದಾರೆ. ಸಾಧಕರು ಸಾಧನೆಯನ್ನು ಮಾಡುತ್ತಿರುವುದರಿಂದ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳ ತೀವ್ರ ತೊಂದರೆಗಳನ್ನೂ ಭೋಗಿಸಬೇಕಾಗುತ್ತಿದೆ. ತೀವ್ರ ತೊಂದರೆಗಳನ್ನು ಭೋಗಿಸಿಯೂ ಸಾಧಕರು ಸಾಧನೆ ಮಾಡುವುದನ್ನು ಬಿಟ್ಟಿಲ್ಲ. ಬದಲಾಗಿ ತೊಂದರೆಗಳಲ್ಲಿಯೂ ಸಾಧಕರು ಶಕ್ತಿಸಾಮರ್ಥ್ಯದಿಂದ ಸಾಧನೆಯನ್ನು ಮಾಡುತ್ತಿದ್ದಾರೆ. ಇದೆಲ್ಲವೂ ಯಾವುದರಿಂದ ಸಾಧ್ಯವಾಗುತ್ತಿದೆ ? ಸಾಧಕರನ್ನು ಪರಾತ್ಪರ ಗುರು ಡಾಕ್ಟರರೊಂದಿಗೆ ಜೋಡಿಸಿಡುವ ಅಂತಹ ಯಾವ ಶಕ್ತಿಯಿದೆ ? ಸಾಧಕರನ್ನು ಸಾಧನೆಯೊಂದಿಗೆ ಜೋಡಿಸಿಡುವ, ಕಠಿಣಕಾಲದಲ್ಲಿ ಮನೋಬಲವನ್ನು ನೀಡುವ ಆ ಶಕ್ತಿ ಎಂದರೆ, ಪರಾತ್ಪರ ಗುರು ಡಾಕ್ಟರರಿಗೆ ಸಾಧಕರ ಮೇಲಿರುವ ಪ್ರೀತಿ. ಸಮಷ್ಟಿಯ ಬಗ್ಗೆ ಉಚ್ಚ ಮಟ್ಟದ ಪ್ರೀತಿ ಇರುವುದು, ಪರಾತ್ಪರ ಗುರು ಡಾಕ್ಟರರ ಒಂದು ವೈಶಿಷ್ಟ್ಯವೇ ಆಗಿದೆ. ಪರಾತ್ಪರ ಗುರು ಡಾ. ಆಠವಲೆ ಯವರಂತಹ ಅವತಾರಿ ಸಮಷ್ಟಿ ಸಂತರ ವಿಷಯದಲ್ಲಿ ಅವರ ಪ್ರತಿಯೊಂದು ಮಾತು, ಕೃತಿ, ವಿಚಾರಗಳಿಂದ ಸಮಷ್ಟಿ ಕಲ್ಯಾಣದ ತಳಮಳವು ತುಂಬಿ ತುಳುಕುವುದು ಕಂಡು ಬರುತ್ತದೆ. ಸಮಷ್ಟಿಯ ಬಗೆಗಿರುವ ಪ್ರೀತಿಯಿಂದಾಗಿ ಎಲ್ಲರಿಗೂ ವಾತ್ಸಲ್ಯಮಯ ಕೃಪಾಛತ್ರವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಇದೇ ಪ್ರೀತಿಯ ಚೈತನ್ಯಮಯ ದಾರದಿಂದ ಇಂದು ಸಂಪೂರ್ಣ ಸನಾತನ ಪರಿವಾರ ಗಟ್ಟಿಯಾಗಿ ಬಂಧಿಸಲ್ಪಟ್ಟಿದೆ. ೭೮ ನೇ ಜನ್ಮೋತ್ಸವದ ನಿಮಿತ್ತದಿಂದ ಪರಾತ್ಪರ ಗುರು ಡಾ. ಆಠವಲೆಯವರಿಗೆ ಸಮಷ್ಟಿ ಮೇಲಿರುವ ಪ್ರೀತಿಯ ಕಿರುಪರಿಚಯವನ್ನು ಓದುಗರಿಗೆ ಮಾಡಿಕೊಡುವ ಪ್ರಯತ್ನವನ್ನು ಮಾಡು ತ್ತಿದ್ದೇವೆ. ಶ್ರೀ ಗುರುಗಳ ಮಹಾನತೆಯನ್ನು ವರ್ಣಿಸಲು ಈಶ್ವರನೇ ಬುದ್ಧಿ ಮತ್ತು ಭಕ್ತಿಯನ್ನು ನೀಡಬೇಕು ಎಂದು ಅವನ ಚರಣಗಳಲ್ಲಿಯೇ ಪ್ರಾರ್ಥನೆ !

೧. ಪರಾತ್ಪರ ಗುರುಗಳ ಪ್ರೀತಿಯ ವೈಶಿಷ್ಟ್ಯಗಳು

೧ ಅ. ಕೆಲವೇ ಕ್ಷಣಗಳ ಸಹವಾಸದಿಂದಲೂ ಇತರರನ್ನು ತಮ್ಮವರನ್ನಾಗಿ ಮಾಡಿಕೊಳ್ಳುವುದು

ಪರಾತ್ಪರ ಗುರು ಡಾಕ್ಟರರ ಕೇವಲ ಒಮ್ಮೆ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಯೂ ಅವರವರೊಂದಿಗೆ ಆತ್ಮೀಯವಾದ ಅನುಭವವನ್ನು ಸಾಧಕರಷ್ಟೇ ಅನುಭವಿಸಿದ್ದಾರೆ ಎಂದೇನಿಲ್ಲ, ಸಮಾಜದಲ್ಲಿನ ಧರ್ಮಾಭಿಮಾನಿಗಳು, ಇತರ ಸಂಪ್ರದಾಯದ ಸಂತರು ಕೂಡ ಅನುಭವಿಸಿದ್ದಾರೆ. ಜಿಜ್ಞಾಸುಗಳಿಗೆ, ಸಾಧಕರಿಗೆ, ಧರ್ಮಾಭಿಮಾನಿಗಳಿಗೆ ಅವರು ತಮ್ಮ ಸಹವಾಸದಲ್ಲಿ ಎಷ್ಟು ಪ್ರೇಮವನ್ನು ಕೊಡುತ್ತಾರೆ ಮತ್ತು ಅವರೊಂದಿಗೆ ಎಷ್ಟು ತಮ್ಮವರಂತೆ ವರ್ತಿಸುತ್ತಾರೆಂದರೆ, ನಾವು ಯಾವಾಗ ಅವರೊಂದಿಗೆ ಆತ್ಮೀಯರಾದೆವು ಎಂಬುದು ನಮಗೆ ತಿಳಿಯುವುದೇ ಇಲ್ಲ. ಹೊರಗಿನ ಕೆಲವು ಸಂತರಿಗೆ ಮತ್ತು ಧರ್ಮಾಭಿಮಾನಿಗಳಿಗೆ ಸಹ ರಾಮನಾಥಿ ಆಶ್ರಮಕ್ಕೆ ಬಂದಾಗ ಅವರಿಗೆ ತವರುಮನೆಗೆ ಬಂದಂತೆ ಅನಿಸುತ್ತದೆ. ಇದರ ಕಾರಣವೆಂದರೆ ಆಶ್ರಮದಲ್ಲಿ ಪ್ರತಿಯೊಂದು ಸ್ಥಳದಲ್ಲಿಯೂ ಪರಾತ್ಪರ ಗುರು ಡಾಕ್ಟರರು ಬಿತ್ತಿರುವ ಪ್ರೀತಿ ಇದೆ. ನಿಜ ಹೇಳಬೇಕೆಂದರೆ ಪರಾತ್ಪರ ಗುರು ಡಾಕ್ಟರರ ಪ್ರೀತಿಯ ಸ್ಪಂದನಗಳು ಇಡೀ ಆಶ್ರಮದಲ್ಲಿ ಅರಿವಾಗುತ್ತವೆ, ಅವು ಹೊರಗಿನ ಸಂತರು ಮತ್ತು ಧರ್ಮಾಭಿಮಾನಿಗಳಲ್ಲಿ ಆಶ್ರಮದ ಬಗ್ಗೆ ಆತ್ಮೀಯತೆಯನ್ನು ನಿರ್ಮಾಣ ಮಾಡುತ್ತವೆ.

೧ ಆ. ತಮ್ಮಂತಹ  ಪ್ರೀತಿಯನ್ನು ಇತರರಲ್ಲಿಯೂ ಬಿತ್ತುವುದು

ಪರಾತ್ಪರ ಗುರು ಡಾಕ್ಟರರ ವೈಶಿಷ್ಟ್ಯವೆಂದರೆ ಅವರು ಅವರಲ್ಲಿರುವ ಪ್ರೀತಿಯನ್ನು ಸನಾತನದ ಸಾವಿರಾರು ಸಾಧಕರಲ್ಲಿಯೂ ಬಿತ್ತಿದ್ದಾರೆ. ತಮ್ಮ ಮೂಲ ನಿವಾಸದಿಂದ ಎಷ್ಟೋ ಕಿಲೋಮೀಟರ್‌ಗಳಷ್ಟು ದೂರ ಹೋಗಿ ಸೇವೆಯನ್ನು ಮಾಡುವ ಸನಾತನದ ಸಾಧಕರು ಇಂದು ಅಮೂಲ್ಯ ಕೌಟುಂಬಿಕ ಭಾವದಿಂದ ಪರಸ್ಪರ ಜೊತೆಗಿದ್ದಾರೆ. ಸದ್ಯದ ಕಾಲದಲ್ಲಿ ಇಬ್ಬರು ಸ್ವಂತ ಅಣ್ಣ ತಮ್ಮಂದಿರಿಗೇ ಹೊಂದಾಣಿಕೆಯಾಗುವುದಿಲ್ಲ. ಇಂತಹ ಕಾಲದಲ್ಲಿ ಸನಾತನದ ಆಶ್ರಮದಲ್ಲಿ ನೂರಾರು ಸಾಧಕರು ಹೊಂದಾಣಿಕೆಯಿಂದ ಪ್ರೀತಿಯಿಂದ ಒಟ್ಟಿಗಿರುತ್ತಾರೆ. ಇದರ ಕಾರಣ ಪರಾತ್ಪರ ಗುರು ಡಾಕ್ಟರರಲ್ಲಿರುವ ಪ್ರೀತಿಯ ಅಂಶವನ್ನು ಅವರು ಸಾಧಕರಲ್ಲಿಯೂ ಬಿತ್ತಿರುವುದೇ ಆಗಿದೆ. ಕಳೆದ ಅನೇಕ ವರ್ಷಗಳಿಂದ ಪರಾತ್ಪರ ಗುರು ಡಾಕ್ಟರರು ತಮ್ಮ ಕೋಣೆಯಿಂದ ಹೊರಗೂ ಬಂದಿಲ್ಲ.

ಇಂತಹ ಸಮಯದಲ್ಲಿ ಅವರು ಆಯಾ ಕಾಲಕ್ಕೆ ಹೇಳಿದ ಸಾಧನೆಯ ಅಂಶಗಳ ಆಧಾರದಲ್ಲಿ ಸನಾತನದ ಮಾರ್ಗದರ್ಶಕ ಸಾಧಕರು ಮತ್ತು ಸಂತರು ಎಲ್ಲೆಡೆಯ ಸಾಧಕರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ಎಲ್ಲ ಮಾಧ್ಯಮಗಳಿಂದಲೂ ಸಾಧಕರು ಪರಾತ್ಪರ ಗುರು ಡಾಕ್ಟರರ ಪ್ರೀತಿಯನ್ನು ಅನುಭವಿಸುತ್ತಿದ್ದಾರೆ. ಅವರ ಪ್ರೀತಿಗೆ ಸ್ಥಳ-ಕಾಲದ ಬಂಧನವಿಲ್ಲ.

ಪರಾತ್ಪರ ಗುರು ಡಾಕ್ಟರರು ಯಾವ ರೀತಿ ಸಂತರು, ಸಾಧಕರು, ಧರ್ಮಾಭಿಮಾನಿಗಳು, ಸಮಾಜ ಹೀಗೆ ಎಲ್ಲರ ಮೇಲೆಯೂ ಪ್ರೀತಿಯನ್ನು ಮಾಡುತ್ತಾರೆಯೋ, ಅದೇ ರೀತಿ ಈಗ ಸಾಧಕರೂ ಸಮಾಜದಲ್ಲಿ ಪ್ರಸಾರ ಮಾಡುವಾಗ ಪ್ರೇಮಭಾವದಿಂದ ಎಲ್ಲರನ್ನು ತಮ್ಮವರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

೧ ಇ. ತಮ್ಮ ಸರ್ವಸ್ವವನ್ನೂ ಸಾಧಕರಿಗಾಗಿಯೇ ಸಮರ್ಪಿಸಿದ್ದರೂ, ಸಾಧಕರನ್ನು ತಮ್ಮಲ್ಲಿ ಸಿಲುಕಿಸದೇ ಈಶ್ವರೀತತ್ತ್ವದೊಂದಿಗೆ ಏಕರೂಪವಾಗಲು ಕಲಿಸುವುದು

ಸಮಷ್ಟಿ ಕಲ್ಯಾಣದ ಕಾರ್ಯವನ್ನು ಆರಂಭಿಸಿರುವುದರಿಂದ ಪರಾತ್ಪರ ಗುರು ಡಾಕ್ಟರರ ಮೇಲೆ ಕೆಟ್ಟ ಶಕ್ತಿಗಳ ಅನೇಕ ಆಕ್ರಮಣಗಳೂ ಆಗುತ್ತಿರುತ್ತವೆ. ಅವರ ದೇಹವು ದೇವಾಸುರ ಯುದ್ಧದ ಯುದ್ಧಭೂಮಿಯೇ ಆಗಿದೆ. ಸ್ಥೂಲದಿಂದ ಮತ್ತು ಸೂಕ್ಷ್ಮದಿಂದಲೂ ಎಲ್ಲ ರೀತಿಯಿಂದಲೂ ಸಾಧಕರ ಕಾಳಜಿಯನ್ನು ವಹಿಸುತ್ತಿರುವಾಗ ಮತ್ತು ತಮ್ಮ ಸರ್ವಸ್ವವನ್ನು ಸಾಧಕರ ಕಲ್ಯಾಣಕ್ಕಾಗಿಯೇ ಪಣಕ್ಕೆ ಹಚ್ಚಿದ್ದರೂ ಅವರು ಸಾಧಕರಿಗೆ ‘ನನ್ನಲ್ಲಿ ಸಿಲುಕದೇ ಕೃಷ್ಣನ ಬಳಿ ಹೋಗಿ, ಎಂದು ಹೇಳುತ್ತಾರೆ. ಅವರಿಗೆ ಸಾಧಕರ ಮೇಲೆ ಪ್ರೀತಿಯಿದ್ದರೂ, ‘ಸಾಧಕರು ಮಾತ್ರ ತತ್ತ್ವದೊಂದಿಗೆ ಏಕರೂಪವಾಗಬೇಕು, ಸರ್ವವ್ಯಾಪಿ ಈಶ್ವರ ನನ್ನು ಭಜಿಸಬೇಕು, ಎನ್ನುವುದು ಅವರ ಬೋಧನೆಯಾಗಿದೆ. ಅರ್ಥಾತ್ ಸಾಧಕರಿಗೂ ‘ಗುರುಗಳು ಪ್ರಾಣಕ್ಕಿಂತಲೂ ಪ್ರಿಯರಾಗಿದ್ದಾರೆ, ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

೨. ಪ್ರೀತಿಗೆ ಇತರ ವೈಶಿಷ್ಟ್ಯಗಳ ಸುಂದರ ಜೋಡಣೆ

೨ ಅ.  ಸಾಧಕರ ಸಾಧನೆಯ ಹಾನಿಯನ್ನು ದೂರಗೊಳಿಸಲು ಅವಲಂಬಿಸಿರುವ ತತ್ತ್ವನಿಷ್ಠೆ

ಯಾವುದಾದರೊಬ್ಬ ಸಾಧಕನ ಸ್ವಭಾವದೋಷಗಳಿಂದ ಅಥವಾ ಅಹಂನಿಂದಾಗಿ ಅವನಿಂದ ಸಾಧನೆಯಲ್ಲಿ ತಪ್ಪುಗಳಾಗುತ್ತಿದ್ದರೆ ಮತ್ತು ಅವನು ಈಶ್ವರನಿಂದ ದೂರ ಹೋಗುತ್ತಿದ್ದರೆ, ಅವರು ಆ ಸಮಯದಲ್ಲಿ ಕಠೋರತೆಯಿಂದ ಸ್ವಭಾವದೋಷಗಳೊಂದಿಗೆ ಹೋರಾಡಲು ಅವನಿಗೆ ಅರಿವು ಮಾಡಿ ಕೊಡುತ್ತಾರೆ. ಒಂದೇ ರೀತಿಯ ತಪ್ಪುಗಳು ಮೇಲಿಂದ ಮೇಲೆ ಆಗುತ್ತಿದ್ದರೆ, ಪರಾತ್ಪರ ಗುರು ಡಾಕ್ಟರರು ಸಂಬಂಧಿತ ಸಾಧಕನಿಗೆ ಆಶ್ರಮದ ಫಲಕದಲ್ಲಿ ತಪ್ಪುಗಳನ್ನು ಬರೆದು ಪ್ರಾಯಶ್ಚಿತ್ತ ತೆಗೆದುಕೊಳ್ಳಲು ಹೇಳುತ್ತಾರೆ. ಪರಾತ್ಪರ ಗುರು ಡಾಕ್ಟರರು ಆಗಾಗ ನೀಡಿರುವ ‘ಫಲಕ/ಪ್ರಾಯಶ್ಚಿತ್ತ ಈ ಸಂದೇಶವು ದೋಷಗಳನ್ನು ದೂರಗೊಳಿಸಲು ವರದಾನವೇ ಆಗಿರುತ್ತದೆ; ಏಕೆಂದರೆ ಆ ತಪ್ಪುಗಳ ಸಂದರ್ಭದಲ್ಲಿ ಗಾಂಭೀರ್ಯದಿಂದ ಪ್ರಕ್ರಿಯೆಯನ್ನು ಮಾಡಿದ ಬಳಿಕ ಪುನಃ ಅಂತಹ ತಪ್ಪುಗಳು ಆಗುವುದಿಲ್ಲ.

ಸಾಧಕರ ಸಾಧನೆಯ ಹಾನಿಯನ್ನು ದೂರಗೊಳಿಸಲು ಆ ಸಂದರ್ಭದಲ್ಲಿ ಗುರುಗಳು ಮಾತನಾಡಿರುವ ಕಠೋರ ಶಬ್ದಗಳು ಕೂಡ ಆ ಸಾಧಕನ ಮೇಲಿರುವ ಗುರುಗಳ ಪ್ರೀತಿಯೇ ಆಗಿದೆ. ಪರಾತ್ಪರ ಗುರುದೇವರು ಹೇಳಿರುವ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ಮಾಡಿ ಇಂದು ಎಷ್ಟೋ ಸಾಧಕರಲ್ಲಿ ಜೀವನವನ್ನು ನೋಡುವ ದೃಷ್ಟಿಕೋನವೇ ಸಕಾರಾತ್ಮಕ ಮತ್ತು ಆನಂದಿಯಾಗಿದೆ.

೨ ಆ. ಅಖಿಲ ಮನುಕುಲದ ಮೂಲಭೂತ ಒಳಿತನ್ನು ಮಾಡುವ ತಳಮಳ

ಮಾನವನ ಜೀವನದಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ. ಸದ್ಯದ ಸ್ಥಿತಿಯಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆಯೂ ಅನೇಕ ಸಮಸ್ಯೆಗಳಿವೆ. ಹೀಗಿರುವಾಗಲೂ ಒಂದೊಂದೇ ಸಮಸ್ಯೆಯ ಮೇಲೆ ಯಾವ ಉಪಾಯವನ್ನು ಮಾಡಬೇಕು ಎನ್ನುವುದರ ಬಗ್ಗೆ ಸಮಯವನ್ನು ವ್ಯರ್ಥಗೊಳಿಸದೇ ಸಾಧನೆಯನ್ನು ಮಾಡುವುದರಿಂದಲೇ ವ್ಯಕ್ತಿಯ ಮೂಲಭೂತ ಒಳಿತಾಗಲಿದೆ, ಎಂದು ಪರಾತ್ಪರ ಗುರು ಡಾಕ್ಟರರು ಮೇಲಿಂದ ಮೇಲೆ ಎಲ್ಲರ ಮನಸ್ಸಿನ ಮೇಲೆ ಬಿಂಬಿಸುತ್ತಾರೆ. ಅಖಿಲ ಮನುಕುಲಕ್ಕೆ ಮುಂದಿನ ಸಾವಿರಾರು ವರ್ಷಗಳವರೆಗೆ ಮಾರ್ಗದರ್ಶನ ಮಾಡಲು ಅವರು ಸತತವಾಗಿ ಗ್ರಂಥಗಳ ಲೇಖನದ ಕಾರ್ಯವನ್ನು ಮಾಡುತ್ತಿದ್ದಾರೆ. ಪ್ರಾಣಶಕ್ತಿ ಅತ್ಯಲ್ಪವಿದ್ದರೂ ಅವರು ಅಂತಹ ಸ್ಥಿತಿಯಲ್ಲಿಯೂ ಗ್ರಂಥಗಳ ಲೇಖನದ ಕಾರ್ಯವನ್ನು ಪೂರ್ಣಗೊಳಿಸಲು ಪ್ರಾಧಾನ್ಯತೆಯನ್ನು ನೀಡುತ್ತಾರೆ. ವಾಸ್ತವದಲ್ಲಿ ಅವರಷ್ಟು ಉಚ್ಚ ಆಧ್ಯಾತ್ಮಿಕ ಸ್ಥಿತಿ ಪ್ರಾಪ್ತವಾಗಿರುವ ಅಧ್ಯಾತ್ಮದ ಅಧಿಕಾರಿ ವ್ಯಕ್ತಿಗೆ ಇಷ್ಟೊಂದು ಕಠಿಣ ಸ್ಥಿತಿಯಲ್ಲಿ ಸೇವೆಯನ್ನು ಮಾಡುವ ಅವಶ್ಯಕತೆ ಏನಿದೆ ? ಆದರೆ ಅಖಿಲ ಮನುಕುಲಕ್ಕೆ ಒಳ್ಳೆಯದಾಗಬೇಕೆಂದು ಅವರು ಇಂದಿಗೂ ಗ್ರಂಥಲೇಖನವನ್ನು ಮಾಡುತ್ತಿದ್ದಾರೆ. ಅವರ ಈ ಪ್ರೀತಿಗೆ ಉಪಮೆಯೇ ಇಲ್ಲ !

ಇಂತಹ ಹಾಗೂ ಇದೇ ರೀತಿಯ ಅನೇಕ ದೈವೀ ಗುಣ ವೈಶಿಷ್ಟ್ಯಗಳ ಸಮುಚ್ಚಯ ಅವರಲ್ಲಿದೆ. ಈ ಎಲ್ಲ ದೈವೀ ಲಕ್ಷಣಗಳ ಮೆರುಗು ಅವರ ಪ್ರೀತಿಗೆ ಇದೆ. ಇದರಿಂದಲೇ ಅವರಿಗೆ ಎಲ್ಲರೂ ತಮ್ಮವರೆಂದು ಅನಿಸುತ್ತದೆ ಮತ್ತು ಎಲ್ಲರಿಗೂ ಪರಾತ್ಪರ ಗುರು ಡಾಕ್ಟರರು ತಮ್ಮವರೆಂದು ಅನಿಸುತ್ತದೆ. ಇದುವೇ ಈ ಗುರು-ಶಿಷ್ಯರ ಪ್ರೀತಿಯ ಅಮೂಲ್ಯ ಕೊಡು-ಕೊಳ್ಳುವಿಕೆಯಾಗಿದೆ. ಕಳೆದ ಅನೇಕ ವರ್ಷಗಳಿಂದ ನಾವು ಸಾಧಕರು ಶ್ರೀಗುರುಗಳ ಪ್ರೀತಿಯ ಸಾಗರ ದಲ್ಲಿದ್ದೇವೆ. ಈ ಸಾಗರದ ಕೆಲವು ಮುತ್ತುಗಳ ಬಗ್ಗೆ ಇಲ್ಲಿ ಹೇಳಲು ಸಾಧ್ಯವಾಯಿತು. ನಮ್ಮ ಮೇಲೆ ಶಬ್ದಗಳಾಚೆಯ ಕೃಪೆಯ ವರ್ಷ ಧಾರೆಯನ್ನು ಮಾಡುವ ಶ್ರೀಗುರುಗಳ ಮಹಾನತೆಯನ್ನು ವರ್ಣಿಸಲು ನಮ್ಮ ವಾಣಿ ಅಸಮರ್ಥವಾಗಿದೆ. ಅವರ ಕೃಪಾಛತ್ರ ದಲ್ಲಿ ಸಾಧನೆಯನ್ನು ಮಾಡಿ ಆ ಪ್ರೀತಿಯ ವರ್ಷಧಾರೆಯ ಅನುಭೂತಿಯನ್ನು ಪಡೆಯುವುದು ಇದೇ ಅವರನ್ನು ಅರಿಯುವುದಾಗಿದೆ !

ಸಂಕಲನಕಾರರು : ಕು. ಸಾಯಲಿ ಡಿಂಗರೆ, ಸನಾತನ ಆಶ್ರಮ, ರಾಮನಾಥಿ, ಗೋವಾ (೪.೫.೨೦೨೦)