ಆಪತ್ಕಾಲದಲ್ಲಿ ಮಹಾಯುದ್ಧ, ಭೂಕಂಪ, ಸುನಾಮಿ ಇವುಗಳಂತೆಯೇ ಉಷ್ಣಮಾರುತಗಳು ಬರುವ ಸಾಧ್ಯತೆಯೂ ಇರುತ್ತದೆ. ಸದ್ಯ ಭಾರತದಲ್ಲಷ್ಟೇ ಅಲ್ಲ, ಯುರೋಪ್‌ನಲ್ಲಿಯೂ ತಾಪಮಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗತೊಡಗಿದೆ. ತಾಪಮಾನದ ಹೆಚ್ಚಳದಿಂದ ಅಂಟಾರ್ಟಿಕ್ ಪ್ರದೇಶದಲ್ಲಿ ಹಿಮ ಕರಗುವ ಭಾಗವು ಅನೇಕ ವರ್ಷಗಳಿಂದ ನಡೆಯುತ್ತಿದೆ; ಆದರೆ ಪ್ರತ್ಯಕ್ಷದಲ್ಲಿ ಉಷ್ಣತೆಯಿಂದ ಅನೇಕ ರೋಗಗಳು ಆಗುತ್ತಿರುತ್ತವೆ. ಭಾರತದಲ್ಲಿ ಉಷ್ಣಾಘಾತದಿಂದ ನೂರಾರು ಜನರು ಸಾವನ್ನಪ್ಪಿದ್ದಾರೆ. ಉಷ್ಣಮಾರುತ (Heat Wave) ಮತ್ತು ಉಷ್ಣಾಘಾತ (Heat Stroke) ಎಂದರೇನು ? ಉಷ್ಣಮಾರುತಗಳ ಪರಿಣಾಮ, ಅದರಿಂದಾಗುವ ರೋಗಗಳು, ಹೊಸ ಮನೆಯನ್ನು ಕಟ್ಟುವಾಗ ಉಷ್ಣತೆಯಿಂದ ರಕ್ಷಣೆಯಾಗಲು ಏನು ಮಾಡಬೇಕು ? ಭವಿಷ್ಯದಲ್ಲಿ ವಿವಿಧ ಕಾರಣಗಳಿಂದ ಉಷ್ಣಮಾರುತಗಳು ಬಂದಾಗ ಏನೆಲ್ಲ ಉಪಾಯಯೋಜನೆಗಳನ್ನು ಮಾಡಬೇಕು ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡುವ ಪ್ರಯತ್ನವನ್ನು ಮಾಡಲಾಗಿದೆ.
೨ ಇ. ಉಷ್ಣ ಮಾರುತಗಳು
೨ ಇ ೧. ಉಷ್ಣ ಮಾರುತ ಎಂದರೇನು ? : ಭಾರತೀಯ ಹವಾಮಾನ ಇಲಾಖೆಗನುಸಾರ ಬಯಲು ಪ್ರದೇಶದಲ್ಲಿ ಯಾವುದಾದರೊಂದು ಸ್ಥಳದ ತಾಪಮಾನವು ೪೦ ಅಂಶ ಸೆಲ್ಸಿಯಸ್ ಅಥವಾ ಅದಕ್ಕಿಂತಲೂ ಹೆಚ್ಚು, ಸಮುದ್ರ ತೀರದಲ್ಲಿ ೩೭ ಅಂಶ ಸೆಲ್ಸಿಯಸ್ ಅಥವಾ ಅದಕ್ಕಿಂತಲೂ ಹೆಚ್ಚು ಮತ್ತು ಗುಡ್ಡಗಾಡು ಪ್ರದೇಶದಲ್ಲಿ ೩೦ ಅಂಶ ಸೆಲ್ಸಿಯಸ್ ಅಥವಾ ಅದಕ್ಕಿಂತಲೂ ಹೆಚ್ಚು ಇದ್ದರೆ ಮತ್ತು ತಾಪಮಾನದಲ್ಲಿ ಸರಾಸರಿ ತಾಪಮಾನಕ್ಕಿಂತ ೪.೫ ರಿಂದ ೬.೪ ಅಂಶ ಸೆಲ್ಸಿಯಸ್ ಹೆಚ್ಚಳವಾದರೆ, ಆಗ ಉಷ್ಣ ಮಾರುತಗಳು ಉತ್ಪನ್ನವಾಗುತ್ತವೆ. ಉಷ್ಣ ಮಾರುತಗಳಿಂದಾಗಿ ಮನುಷ್ಯನ ಶರೀರವು ತನ್ನ ತಾಪಮಾನವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಮತ್ತು ಆದ್ದರಿಂದಲೇ ಅದು ಅಪಾಯಕಾರಿಯಾಗುತ್ತದೆ.
೨ ಇ ೧ ಅ. ಉಷ್ಣ ಮಾರುತಗಳ ಪರಿಣಾಮ : ೨೦೦೩ ರಲ್ಲಿ ಬಂದ ಉಷ್ಣ ಮಾರುತಗಳಲ್ಲಿ ಅದಕ್ಕೂ ಮೊದಲು ಬಂದ ಮಾರುತಗಳಿಗಿಂತ ೭೦ ಸಾವಿರ ಜನರು ಉಷ್ಣಾಘಾತದಿಂದ ಮೃತಪಟ್ಟರು. ಇದ್ದಕ್ಕಿದ್ದಂತೆಯೇ ಬರುವ ನೆರೆ (ಫ್ಲ್ಯಾಶ್ ಫ್ಲಡ್ಸ್), ಕಾಡ್ಗಿಚ್ಚು, ವಿಮಾನಗಳ ಉಡ್ಡಾಣಗಳ ಮೇಲೆ ಪರಿಣಾಮ, ರೈಲು ಹಳಿಗಳು ಕರಗುವುದು ಇವು ಉಷ್ಣ ಮಾರುತಗಳ ಇತರ ಪರಿಣಾಮಗಳು..
೨ ಇ ೧ ಅ ೧. ಉಷ್ಣಮಾರುತಗಳಿಂದ ಉಷ್ಣಾಘಾತವಾಗುವ ಸಾಧ್ಯತೆ ಇರುತ್ತದೆ. ಉಷ್ಣಾಘಾತವೆಂದರೆ ತೀವ್ರ ಬಿಸಿಲಿನಲ್ಲಿ ಹೆಚ್ಚುಕಾಲ ತಿರುಗಾಡುವುದರಿಂದ ಅಥವಾ ತಾಪಮಾನದಲ್ಲಿ ಹೆಚ್ಚು ಬದಲಾವಣೆಯಾಗಿರುವ ಸ್ಥಳದಲ್ಲಿ ತಿರುಗಾಡುವುದರಿಂದ (ಉದಾ. ಹವಾನಿಯಂತ್ರಿತ ಕೋಣೆಯಿಂದ ತೀವ್ರ ಬಿಸಿಲಿನಲ್ಲಿ ಅಥವಾ ಅದರ ವಿರುದ್ಧ) ಆಗುವ ಕಾಯಿಲೆ. ಇದರಲ್ಲಿ ಇದ್ದಕ್ಕಿದ್ದಂತೆಯೇ ಶರೀರದ ತಾಪಮಾನವು ೧೦೪ ಫ್ಯಾರನ್‌ಹೈಟ್‌ಗಿಂತ ಹೆಚ್ಚಾಗುತ್ತದೆ. ಅದನ್ನು ನಿಯಂತ್ರಿಸದಿದ್ದರೆ ಮೃತ್ಯುವಾಗುತ್ತದೆ. ಇದಕ್ಕೆ ಆಂಗ್ಲ ಭಾಷೆಯಲ್ಲಿ ‘ಸನ್‌ಸ್ಟ್ರೋಕ್ ಅಥವಾ ‘ಹೀಟ್‌ಸ್ಟ್ರೋಕ್ ಎಂದು ಹೇಳುತ್ತಾರೆ.
೨ ಇ ೧ ಅ ೨. ಉಷ್ಣಾಘಾತದ ಭೀಕರತೆ : ೨೦೧೫ ರಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣಾ ರಾಜ್ಯಗಳಲ್ಲಿ ಉಷ್ಣಾಘಾತದಿಂದ ೧ ಸಾವಿರದ ೪೦೦ ಕ್ಕಿಂತ ಹೆಚ್ಚು ಜನರು ಮೃತ್ಯುವಿಗೀಡಾಗಿದ್ದರು.
೨ ಇ ೧ ಆ . ಮುಂಬರುವ ಆಪತ್ಕಾಲದಲ್ಲಿ ಉಷ್ಣ ಮಾರುತಗಳು ದೊಡ್ಡ ವಿಪತ್ತುಗಳಾಗಿ ಹೇಗೆ ಹೊರಹೊಮ್ಮಬಹುದು ? : ಜಾಗತಿಕ ಸ್ತರದಲ್ಲಿಯೇ ಹವಾಮಾನ ಬದಲಾವಣೆಯ ಪರಿಣಾಮವು ಕಂಡು ಬರುತ್ತಿದೆ. ಪೃಥ್ವಿಯ ತಾಪಮಾನದಲ್ಲಿ ಹೆಚ್ಚಳವಾಗುತ್ತಿದೆ. ಅಂಟಾರ್ಟಿಕ್ ಹಿಮವು ಕರಗುತ್ತಿದೆ. ಯುರೋಪ್‌ನಲ್ಲಿನ ತಾಪಮಾನವು ೩೦ ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿತ್ತು, ಭವಿಷ್ಯದಲ್ಲಿ ಇದರಲ್ಲಿ ಬೆಳವಣಿಗೆಯಾಗುವ ಸಾಧ್ಯತೆ ಇದೆ. ‘ಎನ್ವಿರಾನಮೆಂಟಲ್ ರಿಸರ್ಚ್ ಲೆಟರ್ ಈ ಜರ್ನನ್‌ನಲ್ಲಿ ಪ್ರಕಟಿಸಲಾದ ಸಂಶೋಧನಾ ಪ್ರಬಂಧಕ್ಕನುಸಾರ ೨೧೦೦ ರ ವರೆಗೆ ಪ್ರತಿ ವರ್ಷ ೧೨೦ ಕೋಟಿ ಜನರು ಉಷ್ಣಾಘಾತಕ್ಕೆ ಬಲಿಯಾಗಬಹುದು.
೨ ಇ ೧ ಇ. ಉಷ್ಣತೆಯಿಂದಾಗುವ ಕಾಯಿಲೆಗಳು : ‘ಬೇಸಿಗೆಯ ದಿನಗಳಲ್ಲಿ ಅಥವಾ ಅತಿಉಷ್ಣ ವಾತಾವರಣದಲ್ಲಿ ಅಥವಾ ಉಷ್ಣಮಾರುತಗಳಲ್ಲಿ ವ್ಯಕ್ತಿಯು ಉಷ್ಣತೆಗೆ ಸಂಬಂಧಿಸಿದ ಶಾರೀರಿಕ ವಿಷಮ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಇದರ ೩ ಹಂತಗಳು ಮುಂದಿನಂತಿವೆ.
೧. ಶಾಖ ಸೆಳೆತ (Heat Cramps)
೨. ಶಾಖ ಬಳಲಿಕೆ (Heat Exhaustion)
೩. ಉಷ್ಣಾಘಾತ (Heat Stroke)
ಶಾಖ ಸೆಳೆತಗಳು ಆಗತೊಡಗಿದ ನಂತರ ಯೋಗ್ಯ ಉಪಚಾರ ದೊರಕದಿದ್ದರೆ ಮೇಲಿನ ಕ್ರಮದಲ್ಲಿ ಮುಂದಿನ ಗಂಭೀರ ಸಂಕಟಗಳನ್ನು ಎದುರಿಸಬೇಕಾಗಬಹುದು. ಕೆಲವೊಮ್ಮೆ ಮೊದಲ ಅಥವಾ ಎರಡನೇ ಹಂತವನ್ನು ಅನುಭವಿಸದೇ, ನೇರವಾಗಿ ಶಾಖ ಬಳಲಿಕೆ ಅಥವಾ ಉಷ್ಣಾಘಾತವಾಗುವುದು ಹೀಗೂ ಸಂಭವಿಸಬಹುದು. ಈ ಮೂರೂ ಹಂತಗಳನ್ನು ಗಂಭೀರವಾಗಿ ಪರಿಗಣಿಸಬೇಕು. ವ್ಯಕ್ತಿಗೆ ವೈದ್ಯಕೀಯ ಸಹಾಯ ಸಿಗುವಂತೆ ಪ್ರಯತ್ನಿಸಬೇಕು. ವೈದ್ಯಕೀಯ ಸಹಾಯ ಸಿಗುವವರೆಗೆ ಸಾಧ್ಯವಾದ ಪ್ರಾಥಮಿಕ ಚಿಕಿತ್ಸೆಯನ್ನು ನೀಡಬೇಕು.
೨ ಇ ೧ ಇ ೧. ಶಾಖ ಸೆಳೆತಗಳು (Heat Cramps) : ಕೈಗಳ, ಪಿಂಡಿಕೆಗಳ, ಅಂಗಾಲುಗಳ, ಹೊಟ್ಟೆಯ ಸ್ನಾಯುಗಳಲ್ಲಿ ಸೆಳೆತ ಬರುವುದು, ಬಹಳಷ್ಟು ಬೆವರು ಬರುವುದು, ಇಂತಹ ಲಕ್ಷಣಗಳು ಕಂಡು ಬರುತ್ತವೆ. ಹೆಚ್ಚಿನ ಬಾರಿ ಶ್ರಮವಹಿಸಿ ಕೆಲಸ ಮಾಡುತ್ತಿರುವಾಗ ಅಥವಾ ಕೆಲಸ ಮಾಡಿದ ಕೆಲವು ಗಂಟೆಗಳ ನಂತರ ಇದು ಆಗಬಹುದು.
ವೈದ್ಯಕೀಯ ಸಹಾಯ ದೊರಕುವವರೆಗೆ ಇಂತಹ ರೋಗಿಯನ್ನು…
೧. ತಂಪು ವಾತಾವರಣವಿದ್ದಲ್ಲಿಗೆ ಸ್ಥಳಾಂತರಿಸಬೇಕು. ಅವನ ಮೇಲೆ ನೇರ ಸೂರ್ಯಪ್ರಕಾಶ ಬೀಳದಂತೆ, ಎಚ್ಚರ ವಹಿಸಬೇಕು.
೨. ಸೆಳೆತ ಬರುತ್ತಿರುವ ಸ್ನಾಯುವನ್ನು ಮೃದುವಾಗಿ ತಿಕ್ಕಬೇಕು. ಸೆಳೆತ ಬರುತ್ತಿರುವ ಸ್ನಾಯುವನ್ನು ನಿಧಾನವಾಗಿ ಜಗ್ಗಬೇಕು.
೩. ತಂಪು ನೀರು ಅಥವಾ ಆವಶ್ಯಕ ಲವಣಗಳನ್ನು ಬೆರೆಸಿದ ನೀರನ್ನು (ಇಲೆಕ್ಟ್ರಾಲ್) ಪ್ರತಿ ೧೫ ನಿಮಿಷಗಳಿಗೊಮ್ಮೆ ನೀಡಬೇಕು.
೨ ಇ ೧ ಇ ೨. ಶಾಖ ಬಳಲಿಕೆ (Heat Exhaustion) : ಇದರಲ್ಲಿ ಶರೀರದ ಒಳಗಿನ ತಾಪಮಾನ (Core temperature) ೧೦೧ ರಿಂದ ೧೦೪ ಡಿಗ್ರಿ ಫ್ಯಾರನಹೈಟ್‌ನಷ್ಟು ಹೆಚ್ಚಾಗಬಹುದು. ಬಹಳ ಬೆವರು ಬರುತ್ತದೆ. ಚರ್ಮವು ಬೆವೆತು ತಣ್ಣಗೆ ಮತ್ತು ಬಿಳಚಿಕೊಳ್ಳುತ್ತದೆ. ಚರ್ಮದ ಬಣ್ಣವು ಕಪ್ಪಾದರೆ, ಉಗುರುಗಳು, ತುಟಿಗಳು ಮತ್ತು ಕೆಳಗಿನ ರೆಪ್ಪೆಗಳನ್ನು ಜಗ್ಗಿ ನೋಡಿದರೆ ಅಲ್ಲಿನ ಚರ್ಮದ ಯಾವಾಗಲೂ ಇರುವ ಬಣ್ಣವು ಬದಲಾಗಿರುವುದು ಕಾಣಿಸುತ್ತದೆ. ತಲೆನೋವು, ಹೊಟ್ಟೆ ತೊಳೆಸುವುದು ಅಥವಾ ವಾಂತಿಯಾಗುವುದು, ಹಸಿವಾಗದಿರುವುದು, ಬಹಳಷ್ಟು ನೀರಡಿಕೆಯಾಗುವುದು, ನಿಶಕ್ತಿ, ನಿರುತ್ಸಾಹ, ಸ್ನಾಯುಗಳಲ್ಲಿ ವೇದನೆಯಾಗುವುದು ಅಥವಾ ಸ್ನಾಯುಗಳಲ್ಲಿ ಸೆಳೆತ ಬರುವುದು, ಕಿರಿಕಿರಿಯಾಗುವುದು, ಚಿಂತಾಕ್ರಾಂತನಾಗುವುದು, ಬವಳಿಕೆ ಬರುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ.
ವೈದ್ಯಕೀಯ ಸಹಾಯ ದೊರಕುವವರೆಗೆ ಇಂತಹ ರೋಗಿಯನ್ನು …
೧. ತಂಪು ವಾತಾವರಣವಿದ್ದಲ್ಲಿಗೆ ಸ್ಥಳಾಂತರಿಸಿಬೇಕು. ಅವನ ಮೇಲೆ ನೇರ ಸೂರ್ಯಪ್ರಕಾಶ ಬೀಳದಂತೆ, ಎಚ್ಚರ ವಹಿಸಬೇಕು.
೨. ಅವನ ಬಟ್ಟೆಗಳನ್ನು ಸಡಿಲಿಸಬೇಕು.
೩. ತಣ್ಣಗಿನ ಮತ್ತು ಒದ್ದೆ ಮಾಡಿದ ಟವೆಲ್ ಅಥವಾ ಅದಕ್ಕೆ ಸಮನಾದ ಬಟ್ಟೆಗಳನ್ನು ಮುಖ, ಕುತ್ತಿಗೆ, ಎದೆ, ಕಾಲು ಮುಂತಾದವುಗಳ ಮೇಲೆ ಹಾಕಬೇಕು.
೪. ಶರೀರದ ಮೇಲೆ ಗಾಳಿಯಾಡುವಂತೆ, ಪಂಖಾ (ಫ್ಯಾನ್) ಹಾಕಬೇಕು.
೫. ತಣ್ಣಗಿನ ನೀರು ಅಥವಾ ಆವಶ್ಯಕ ಲವಣಗಳನ್ನು ಬೆರೆಸಿದ ನೀರನ್ನು (೧ ಚಮಚ ಉಪ್ಪು ೫೦೦ ಮಿ.ಲೀ. ನೀರಿನಲ್ಲಿ) ಪ್ರತಿ ೧೫ ನಿಮಿಷಗಳಿಗೊಮ್ಮೆ ಕೊಡಬೇಕು. (ಒಂದೇ ಬಾರಿಗೆ ಬಹಳ ನೀರು ಕುಡಿಯಬಾರದು.)
೨ ಇ ೧ ಇ ೩. ಉಷ್ಣಾಘಾತ (Heat Stroke) : ಇದು ಉಷ್ಣತೆಯ ಕಾರಣದಿಂದ ಉತ್ಪನ್ನವಾದ ಆರೋಗ್ಯದ ವಿಷಮ ಪರಿಸ್ಥಿತಿಯಾಗಿದೆ. ಇಲ್ಲಿ ಅತ್ಯಂತ ತುರ್ತಾಗಿ ವೈದ್ಯಕೀಯ ಉಪಚಾರ ಸಿಗದಿದ್ದರೆ ರೋಗಿಯು ಸಾಯುತ್ತಾನೆ. ಇದರಲ್ಲಿ ರೋಗಿಯ ಶರೀರದ ಒಳಗಿನ ತಾಪಮಾನ (Core temperature) ೧೦೪ ಡಿಗ್ರಿ ಫ್ಯಾರನಹೈಟ್ ಅಥವಾ ಅದಕ್ಕಿಂತಲೂ ಹೆಚ್ಚಾಗಿರುತ್ತದೆ. ರೋಗಿಯು ತುಂಬಾ ಗೊಂದಲಕ್ಕೀಡಾಗುವುದು, ಅವನಿಗೆ ಸುತ್ತಮುತ್ತಲಿನ ಪರಿಸ್ಥಿತಿಯ ಅರಿವು ಇಲ್ಲದಿರುವುದು, ಅವನಿಗೆ ಆಭಾಸವಾಗುವುದು, ಚರ್ಮವು ಬಿಸಿ, ಕೆಂಪು ಮತ್ತು ಒಣಗಿರುವುದು, ಬೆವರು ಬಾರದಿರುವುದು, ನಾಡಿ ಬಡಿತ ತೀವ್ರಗೊಳ್ಳುವುದು, ರಕ್ತ ದೊತ್ತಡ ಕಡಿಮೆಯಾಗುವುದು, ಉಸಿರಾಟವು ವೇಗವಾಗಿ ಮತ್ತು ಮೇಲೆ ಮೇಲೆ ಆಗುವುದು, ಮೂರ್ಛೆರೋಗದ ಆಘಾತವಾಗುವುದು, ಎಚ್ಚರ ತಪ್ಪುವುದು ಇಂತಹ ಲಕ್ಷಣಗಳು ಕಂಡು ಬರುತ್ತವೆ.
ವೈದ್ಯಕೀಯ ಸಹಾಯ ಸಿಗುವವರೆಗೆ ಇಂತಹ ರೋಗಿಯನ್ನು…
೧. ತಂಪು ವಾತಾವರಣವಿದ್ದಲ್ಲಿಗೆ ಸ್ಥಳಾಂತರಿಸಬೇಕು. ಅವನ ಮೇಲೆ ನೇರ ಸೂರ್ಯಪ್ರಕಾಶವು ಬೀಳದಂತೆ ಎಚ್ಚರ ವಹಿಸಬೇಕು.
೨. ಅವನ ಬಟ್ಟೆಗಳನ್ನು ಸಡಿಲಗೊಳಿಸಬೇಕು.
೩. ತಣ್ಣಗಿನ ನೀರಿನಿಂದ ಒದ್ದೆ ಮಾಡಿದ ಟವೆಲ್ ಅಥವಾ ಅದಕ್ಕೆ ಸಮನಾದ ಬಟ್ಟೆಯನ್ನು ಮುಖ, ಕುತ್ತಿಗೆ, ಎದೆ, ಕಾಲು ಮುಂತಾದವುಗಳ ಮೇಲೆ ಹಾಕಬೇಕು. ಸಾಧ್ಯವಿದ್ದರೆ ಎಲ್ಲ ಅವಯವಗಳನ್ನು ತಣ್ಣೀರಿನಿಂದ ಒರೆಸಿಕೊಳ್ಳುತ್ತಿರಬೇಕು ಅಥವಾ ತಣ್ಣೀರಿನಿಂದ ಸ್ನಾನವನ್ನು ಮಾಡಿಸುತ್ತಿರಬೇಕು.
೪. ತಲೆಯ ಮೇಲೆ, ಹಣೆಯ ಮೇಲೆ, ತೊಡೆಗಳಲ್ಲಿ ಮಣಿಕಟ್ಟುಗಳ ಮೇಲೆ, ಕಂಕುಳಿನಲ್ಲಿ ಮಂಜುಗಡ್ಡೆಯನ್ನು ಇಡಬೇಕು.
೨ ಇ ೨. ಉಷ್ಣಾಘಾತದಿಂದ ರಕ್ಷಿಸಿಕೊಳ್ಳಲು ಮಾಡಬೇಕಾದ ಪೂರ್ವಸಿದ್ಧತೆ : ನಾವು ವಾಸಿಸುತ್ತಿರುವ ಪ್ರದೇಶಕ್ಕೆ ಉಷ್ಣಮಾರುತಗಳು ಬರುತ್ತಿದ್ದರೆ ಅಥವಾ ಅಲ್ಲಿ ಬಿಸಿಲು ತೀವ್ರವಾಗಿದ್ದರೆ, ಉಷ್ಣತೆಯಿಂದ ರಕ್ಷಣೆಯಾಗಲು ಮುಂದಿನ ಪೂರ್ವಸಿದ್ಧತೆಯನ್ನು ಮಾಡಬೇಕು.
೨ ಇ ೨ ಅ. ಮನೆಯ ಮೇಲ್ಛಾವಣಿ ಮತ್ತು ಗೋಡೆಯನ್ನು ತಂಪಾಗಿಡುವುದು : ‘ಮನೆಗೆ ಸ್ಲ್ಯಾಬ್‌ನ ಮೇಲ್ಛಾವಣಿ ಇದ್ದರೆ, ಅದನ್ನು ತಂಪಾಗಿಡುವ ಪದ್ಧತಿಗಳನ್ನು ಬಳಸಬಹುದು. ಮೇಲ್ಛಾವಣಿಯ ಮೇಲೆ ತರಕಾರಿಗಳನ್ನು ಅಥವಾ ಹೂವಿನ ಗಿಡಗಳನ್ನು ನೆಡಬಹುದು. ಅದಕ್ಕಾಗಿ ಕುಂಡಗಳನ್ನು ಮತ್ತು ಮಡಿಕೆಗಳನ್ನು ಉಪಯೋಗಿಸಬಹುದು. ಇದರಿಂದ ಬಿಸಿಲಿನ ತೊಂದರೆಯು ಕಡಿಮೆಯಾಗಲು ಸಹಾಯವಾಗುತ್ತದೆ. ಮನೆಯ ಗೋಡೆಗಳ ಮೇಲೆ ಬಳ್ಳಿಗಳನ್ನು ಬೆಳೆಸಬಹುದು. ಇದರಿಂದ ಗೋಡೆಗಳು ಸ್ವಲ್ಪ ಪ್ರಮಾಣದಲ್ಲಿ ತಂಪಾಗುತ್ತವೆ.
೨ ಇ ೨ ಆ. ಕಿಟಕಿಗಳ ಗಾಜುಗಳಿಗೆ ತಾತ್ಕಾಲಿಕವಾಗಿ ಪರದೆಯನ್ನು ಹಾಕುವುದು ! : ಮನೆಯ ಕಿಟಕಿಗಳಿಂದ ಬಿರು ಬಿಸಿಲು ಮನೆಯೊಳಗೆ ಬರುವುದನ್ನು ತಡೆಗಟ್ಟಲು ಹೊರಗಿನಿಂದ ಲಾವಂಚದ ಪರದೆಯನ್ನು, ಕಾರ್ಡಬೋರ್ಡ್ ಮುಂತಾದವುಗಳನ್ನು ಬೇಸಿಗೆಗಾಲದ ಅವಧಿಯಲ್ಲಿ ಪರದೆಯೆಂದು ಹಾಕಬಹುದು. ಹಾಗೆಯೇ ಬಿಸಿಲನ್ನು ತಡೆಗಟ್ಟುವ ಗಾಜನ್ನೂ ಅಳವಡಿಸಿಕೊಳ್ಳಬಹುದು.
೨ ಇ ೨ ಇ. ಮನೆಯಲ್ಲಿ ಹವಾನಿಯಂತ್ರಕವನ್ನು ಅಳವಡಿಸುವುದು ! : ಉಷ್ಣಮಾರುತ ಬೀಸುವಾಗ ಮನೆಯಲ್ಲಿನ ವಾತಾವರಣವನ್ನು ತಂಪಾಗಿಡಲು ಸಾಧ್ಯವಿದ್ದರೆ ಹವಾನಿಯಂತ್ರಕವನ್ನು ಅಳವಡಿಸಿಕೊಳ್ಳಬಹುದು.
(ಆಧಾರ : ಪುಸ್ತಕ – ತೈಯಾರಿ ಮೆ ಹೀ ಸಮಝದಾರಿ : ಆಪದಾ ಸೆ ಬಚನೆ ಕೆ ಸರಲ ಉಪಾಯ)
೨ ಇ ೨ ಈ. ಹೊಸ ಮನೆಯನ್ನು ಕಟ್ಟುವಾಗ ಮುಂದಿನಂತೆ ಮಾಡಿರಿ : ‘ಹೊಸ ಮನೆಯನ್ನು ಕಟ್ಟುವಾಗ ಉಷ್ಣತೆಯಿಂದ ರಕ್ಷಿಸಿಕೊಳ್ಳಲು ಕೆಲವು ಉಪಾಯಗಳನ್ನು ಮಾಡಬಹುದು. ದಪ್ಪನೆಯ ಗೋಡೆಗಳನ್ನು ಕಟ್ಟಬೇಕು. ಇದಕ್ಕಾಗಿ ‘ಕ್ಯಾವಿಟಿ ವಾಲ್ನಿಂದ (ಇದರಲ್ಲಿ ಹೊರಗಡೆಯ ಗೋಡೆ ಮತ್ತು ಒಳಗಿನ ಗೋಡೆ ಹೀಗೆ ೨ ಸಮಾಂತರ ಗೋಡೆಗಳ ನಡುವೆ ಕೆಲವು ಇಂಚು ಜಾಗ ಬಿಟ್ಟು ಕಟ್ಟಲಾಗುತ್ತದೆ. ಇದರಿಂದ ಹೊರಗಡೆಯ ಗೋಡೆಯ ಮೇಲೆ ಬಿಸಿಲಿನ ಉಷ್ಣತೆಯಿಂದಾಗುವ ಪರಿಣಾಮವು ಮಧ್ಯದಲ್ಲಿ ತೆರವು ಇರುವುದರಿಂದ ಒಳಗಿನ ಗೋಡೆಯ ಮೇಲೆ ಆಗುವುದಿಲ್ಲ.) ಒಳಗಿನ ಗೋಡೆಯು ತಣ್ಣಗಿದ್ದು ಮಯು ತಂಪಾಗಿರುತ್ತದೆ. ಬಣ್ಣವನ್ನು ಕೊಡುವಾಗ, ಸುಣ್ಣ ಅಥವಾ ಮಣ್ಣು ಇವುಗಳ ಬಳಕೆ ಮಾಡಬೇಕು. ಹಿಂದಿನ ಕಾಲದಲ್ಲಿ ಮಣ್ಣಿನ ಮನೆಗಳಿರುತ್ತಿದ್ದವು. ಆದುದರಿಂದ ಮನೆಯು ತಂಪಾಗಿರುತ್ತಿತ್ತು. ಸಾಧ್ಯವಿದ್ದರೆ ಎಲ್ಲಿಯೂ ಗಾಜುಗಳ ಬಳಕೆ ಮಾಡಬಾರದು. ಮನೆಯನ್ನು ಕಟ್ಟುವಾಗ ಈ ಕ್ಷೇತ್ರದಲ್ಲಿ ತಜ್ಞರ ಸಲಹೆಯನ್ನು ಪಡೆಯಬಹುದು. – ವೈದ್ಯ ಮೇಘರಾಜ ಪರಾಡಕರ
೨ ಇ ೩. ಉಷ್ಣತೆಯಿಂದ ರಕ್ಷಣೆ ಪಡೆಯಲು ಇದನ್ನು ಮಾಡಿರಿ !
೨ ಇ ೩ ಅ. ಬೇಸಿಗೆಗಾಲದ ದಿನಗಳಲ್ಲಿ ಬಾಯಿ ಒಣಗುವ ಮೊದಲೇ ತಕ್ಷಣ ಆವಶ್ಯಕವಿದ್ದಷ್ಟು ನೀರನ್ನು ಕುಡಿಯಬೇಕು. ಪ್ರತಿಯೊಬ್ಬರ ಪ್ರಕೃತಿಗನುಸಾರ ನೀರಿನ ಪ್ರಮಾಣವು ಬೇರೆ ಇರುತ್ತದೆ. ನೀರು ಕುಡಿದು ಸಮಾಧಾನವಾಗುವ, ಬಾಯಾರಿಕೆ ಹೋಗುವ ಮತ್ತು ದಣಿವು ಆಗದಿರುವಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು.
೨ ಇ ೩ ಆ. ಶೀತಕಪಾಟಿನ ನೀರು ಕುಡಿಯಬಾರದು : ಶೀತಕಪಾಟಿನ ನೀರು ಕುಡಿಯದೇ ಮಡಕೆಯ ನೀರು, ಹಾಗೆಯೇ ಲಾವಂಚ, ಗುಲಾಬಿ ಹೂವಿನ ಪಕಳೆಗಳನ್ನು ಹಾಕಿ ನೈಸರ್ಗಿಕವಾಗಿ ತಂಪು ಮಾಡಿದ ನೀರನ್ನು ಕುಡಿಯಬೇಕು. ಶೀತಕಪಾಟಿನ ಅಥವಾ ಕೂಲರ್‌ಗಳ ತಂಪು ನೀರನ್ನು ಕುಡಿಯುವುದರಿಂದ ಗಂಟಲು, ಹಲ್ಲು ಮತ್ತು ಕರುಳುಗಳ ಮೇಲೆ ದುಷ್ಪರಿಣಾಮವಾಗುತ್ತದೆ, ಆದ್ದರಿಂದ ಸಾದಾ ಅಥವಾ ಮಡಕೆಯ ನೀರನ್ನು ಕುಡಿಯಬೇಕು. ಸೌತೆಕಾಯಿ, ಖರಬೂಜ, ಕಲ್ಲಂಗಡಿ, ದಾಳಿಂಬೆಗಳಂತಹ ಕಾಲೋಚಿತ ಹಣ್ಣುಗಳನ್ನು ತಿನ್ನಬೇಕು.
೨ ಇ ೩ ಇ. ದ್ರವಪದಾರ್ಥಗಳನ್ನು ಆವಶ್ಯಕವಿರುವ ಪ್ರಮಾಣದಲ್ಲಿ ಸೇವಿಸಬೇಕು ! : ಲಿಂಬೆ ಹಣ್ಣಿನ ಶರಬತ್ತು, ಪಾನಕಗಳು, ಲಸ್ಸಿ, ಮಜ್ಜಿಗೆ, ಅಕ್ಕಿಯ ಗಂಜಿಯ ನೀರು. ಓ.ಆರ್.ಎಸ್. (ಓರಲ್ ಡಿಹೈಡ್ರೆಶನ್ ಸೊಲ್ಯೂಶನ್), ಎಳನೀರು, ಕೊಕಮ್ ಶರಬತ್ತು, ಹಣ್ಣುಗಳ ರಸ ಮುಂತಾದ ದ್ರವಪದಾರ್ಥಗಳನ್ನು ಆವಶ್ಯಕವಿದ್ದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಯಾರಿಗೆ ವೈದ್ಯರು ಕಾರಣಾಂತರಗಳಿಂದ ಹೆಚ್ಚು ದ್ರವಪದಾರ್ಥವನ್ನು ತೆಗೆದುಕೊಳ್ಳಬಾರದು ಎಂಬ ಸಲಹೆ ನೀಡಿದ್ದಾರೆಯೋ ಅವರು ಅಥವಾ ಪಿತ್ಥಜನಕಾಂಗದ ಕಾಯಿಲೆ, ಹೃದ್ರೋಗ, ಫಿಟ್ಸ್ ಬರುವುದು ಮುಂತಾದ ಕಾಯಿಲೆಗಳು ಇರುವವರು ವೈದ್ಯರ ಸಲಹೆಯನ್ನು ಪಡೆಯಬೇಕು.
೨ ಇ ೩ ಈ. ಲಾವಂಚದ ನೀರನ್ನು ಕುಡಿಯುವುದು : ಲಾವಂಚದ ಬೇರುಗಳ ೨ ಕಟ್ಟುಗಳನ್ನು ಜೊತೆಗೆ ಇಟ್ಟುಕೊಳ್ಳಬೇಕು. ಒಂದು ಕಟ್ಟನ್ನು ಕುಡಿಯುವ ನೀರಿನಲ್ಲಿ ಹಾಕಬೇಕು ಮತ್ತು ಇನ್ನೊಂದನ್ನು ಬಿಸಿಲಿನಲ್ಲಿ ಒಣಗಿಸಲು ಇಡಬೇಕು. ಮರುದಿನ ಬಿಸಿಲಿನಲ್ಲಿ ಒಣಗಿಸಿದ ಕಟ್ಟನ್ನು ಕುಡಿಯುವ ನೀರಿನಲ್ಲಿ ಮತ್ತು ನೀರಿನಲ್ಲಿಟ್ಟಿದ್ದ ಕಟ್ಟನ್ನು ಬಿಸಿಲಿನಲ್ಲಿಡಬೇಕು. ಇದರಂತೆ ಪ್ರತಿದಿನ ಮಾಡಬೇಕು. ಈ ಲಾವಂಚದ ನೀರು ಉಷ್ಣತೆಯ ಕಾಯಿಲೆಯನ್ನು ದೂರಮಾಡುತ್ತದೆ.
೨ ಇ ೩ ಉ. ಗಾಢವಾದ ಬಣ್ಣವು ಉಷ್ಣತೆಯನ್ನು ಸೆಳೆದುಕೊಳ್ಳುತ್ತದೆ. ಆದ್ದರಿಂದ ಗಾಢ ಬಣ್ಣ ಇರದ ಹತ್ತಿಯ ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಬೇಕು.
೨ ಇ ೩ ಊ. ಮನೆಯ ಹೊರಗೆ ಹೋಗುವವರಿದ್ದರೆ, ತಲೆಯ ಮೇಲೆ ಟೊಪ್ಪಿಗೆ, ಬಟ್ಟೆಯನ್ನು ಕಟ್ಟಿಕೊಳ್ಳಬೇಕು ಅಥವಾ ಛತ್ರಿಯನ್ನು ತೆಗೆದುಕೊಳ್ಳಬೇಕು. ಹಾಗೆಯೇ ಬಿಸಿಲಿನಿಂದ ಕಣ್ಣುಗಳ ರಕ್ಷಣೆಯಾಗಲು ಕನ್ನಡಕ (ಗಾಗಲ್), ಹಾಗೆಯೇ ಚರ್ಮಕ್ಕಾಗಿ ಸನ್‌ಸ್ಕ್ರೀನ್ ಕ್ರೀಮ್ ಬಳಸಬೇಕು.
೨ ಇ ೩ ಎ. ಚಿಕ್ಕ ಮಕ್ಕಳು, ರೋಗಿಗಳು, ಸ್ಥೂಲಕಾಯದವರು ಮತ್ತು ವೃದ್ಧರು ಈ ಸಮಯದಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಈ ವ್ಯಕ್ತಿಗಳಿಗೆ ಉಷ್ಣತೆಯನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಉಷ್ಣತೆಯಿಂದ ಇವರಿಗೆ ಅಸ್ವಸ್ಥವೆನಿಸತೊಡಗುತ್ತದೆ. ಆದ್ದರಿಂದ ಅವರಿಗೆ ಉಷ್ಣತೆಯ ಕಾವು ತಾಗದಂತೆ ಕಾಳಜಿ ವಹಿಸಬೇಕು.
೨ ಇ ೩ ಏ. ಹೊರಗೆ ಕೆಲಸ ಮಾಡುವವರು ತೀವ್ರ ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ತಪ್ಪಿಸಬೇಕು. ಆ ಸಮಯದಲ್ಲಿ ವಿಶ್ರಾಂತಿಯನ್ನು ಪಡೆಯಬೇಕು.
೨ ಇ ೩ ಐ. ಉಷ್ಣಾಘಾತದ ತೊಂದರೆಯಾದ ವ್ಯಕ್ತಿಯ ಶರೀರದಲ್ಲಿನ ತಾಪಮಾನವನ್ನು ಕಡಿಮೆ ಮಾಡಲು ಹಣೆಯ ಮೇಲೆ ತಣ್ಣೀರಿನಲ್ಲಿ ಅದ್ದಿ ತೆಗೆದ ಬಟ್ಟೆಯ ಪಟ್ಟಿಯನ್ನು ಇಡಬೇಕು. ಅದನ್ನು ಸತತವಾಗಿ ಒದ್ದೆ ಮಾಡುತ್ತಿರಬೇಕು. ಬವಳಿಕೆ ಬರುತ್ತಿದ್ದರೆ ಅಥವಾ ಅಸ್ವಸ್ಥವೆನಿಸುತ್ತಿದ್ದರೆ, ತಕ್ಷಣ ಡಾಕ್ಟರರನ್ನು ಸಂಪರ್ಕಿಸಬೇಕು.
(ಆಧಾರ : ಪುಸ್ತಕ – ತೈಯಾರಿ ಮೆ ಹಿ ಸಮಝದಾರಿ : ಆಪದಾ ಸೆ ಬಚನೆ ಕೆ ಸರಲ ಉಪಾಯ)
೨ ಇ ೩ ಒ. ‘ಬೆಳಗ್ಗೆ ಹಲ್ಲುಗಳನ್ನು ತಿಕ್ಕಿದ ನಂತರ ಆಕಳ ತುಪ್ಪದ ಅಥವಾ ಕೊಬ್ಬರಿ ಎಣ್ಣೆಯ ೨-೨ ಹನಿಗಳನ್ನು ಮೂಗಿನಲ್ಲಿ ಹಾಕಬೇಕು. ಇದಕ್ಕೆ ‘ನಸ್ಯವೆಂದು ಹೇಳುತ್ತಾರೆ. ಇದರಿಂದ ತಲೆ ಮತ್ತು ಕಣ್ಣುಗಳಲ್ಲಿನ ಉಷ್ಣತೆಯು ಕಡಿಮೆಯಾಗುತ್ತದೆ.
೨ ಇ ೩ ಓ. ಉಷ್ಣ ವಾತಾವರಣದಿಂದ ತಂಪು ವಾತಾವರಣಕ್ಕೆ ಬಂದ ನಂತರ ತಕ್ಷಣ ನೀರು ಕುಡಿಯಬಾರದು. ೧೦-೧೫ ನಿಮಿಷಗಳ ನಂತರವೇ ನೀರು ಕುಡಿಯಬೇಕು.
೨ ಇ ೩ ಔ. ಪಾದಕ್ಕೆ ಛಿದ್ರ ಬೀಳುವುದು ಮತ್ತು ಉಷ್ಣತೆಯ ತೊಂದರೆಗಳಾಗುತ್ತಿದ್ದರೆ ಕೈಕಾಲುಗಳಿಗೆ ಮೆಹಂದಿ ಹಚ್ಚಬೇಕು.
– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೪.೨೦೧೪)
೨ ಇ ೪. ಉಷ್ಣತೆಯಿಂದ ರಕ್ಷಣೆ ಪಡೆಯಲು ಇವುಗಳನ್ನು ಮಾಡುವುದನ್ನು ತಪ್ಪಿಸಿ !
೨ ಇ ೪ ಅ. ‘ಮನೆಯಿಂದ ಹೊರಗೆ ಹೋಗುವುದನ್ನು ಆದಷ್ಟು ತಡೆಗಟ್ಟಬೇಕು. ಪಾದರಕ್ಷೆಗಳಿಲ್ಲದೆ ಹೊರಗೆ ಹೋಗಬಾರದು. ವಿಶೇಷವಾಗಿ ಮಧ್ಯಾಹ್ನ ೧೨ ರಿಂದ ೩ ಈ ಸಮಯದಲ್ಲಿ ಹೊರಗೆ ಹೋಗಬಾರದು.
೨ ಇ ೪ ಆ. ಮಧ್ಯಾಹ್ನದ ಸಮಯದಲ್ಲಿ ಭೋಜನ ಅಥವಾ ಇತರ ಯಾವುದೇ ಪದಾರ್ಥವನ್ನು ಬೇಯಿಸಬಾರದು. ಇದರಿಂದ ಮನೆಯಲ್ಲಿನ ಉಷ್ಣತೆ ಹೆಚ್ಚಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ. ಅಡುಗೆಮನೆಯಲ್ಲಿ ಆಹಾರವನ್ನು ಬೇಯಿಸುವಾಗ ಕಿಟಕಿಗಳನ್ನು ತೆರೆದಿಡಬೇಕು.
೨ ಇ ೪ ಇ. ಚಹಾ, ಕಾಫಿ, ಮದ್ಯ ಕುಡಿಯುವುದನ್ನು ತಡೆಗಟ್ಟಬೇಕು.
೨ ಇ ೪ ಈ. ಹೆಚ್ಚು ಉಷ್ಣತೆಯನ್ನು ಪ್ರಕ್ಷೇಪಿಸುವ ಹೆಚ್ಚು ವ್ಯಾಟ್‌ನ ದೀಪಗಳನ್ನು, ಹ್ಯಾಲೋಜಿನ್ ಹಚ್ಚುವುದನ್ನು ತಡೆಗಟ್ಟಬೇಕು.
(ಆಧಾರ : ಪುಸ್ತಕ – ತೈಯಾರಿ ಮೆ ಹಿ ಸಮಝದಾರಿ : ಆಪದಾ ಸೆ ಬಚನೆ ಕೆ ಸರಲ ಉಪಾಯ)
೨ ಇ ೪ ಉ. ಹೆಚ್ಚು ವ್ಯಾಯಾಮ, ಹೆಚ್ಚು ಪರಿಶ್ರಮ, ಹೆಚ್ಚು ಉಪವಾಸ, ಬಿಸಿಲಿನಲ್ಲಿ ತಿರುಗಾಡುವುದು ಮತ್ತು ನೀರಡಿಕೆ-ಹಸಿವು ಇವುಗಳನ್ನು ತಡೆಹಿಡಿಯುವುದು ಇತ್ಯಾದಿಗಳನ್ನು ತಡೆಗಟ್ಟಬೇಕು.
೨ ಇ ೪ ಊ. ರುಚಿಕರ, ಒಣ, ಹಳಸಿದ, ಉಪ್ಪು, ಅತಿ ಖಾರ, ಮಸಾಲೆಯುಕ್ತ ಮತ್ತು ಕರಿದ ಪದಾರ್ಥಗಳು, ಹಾಗೆಯೇ ಆಮಚೂರ, ಉಪ್ಪಿನಕಾಯಿ, ಹುಣಸೆಹಣ್ಣು ಇತ್ಯಾದಿ ಹುಳಿ ಪದಾರ್ಥಗಳಿಂದ ಪಿತ್ತವು ಹೆಚ್ಚಾಗುತ್ತದೆ. ಪಿತ್ತವು ಹೆಚ್ಚಾಗುವುದರಿಂದ ಉಷ್ಣತೆಯ ತೊಂದರೆಯು ಹೆಚ್ಚಾಗುತ್ತದೆ. ಆದುದರಿಂದ ಈ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು.
೨ ಇ ೪ ಎ. ತಂಪು ಪಾನಿಯಗಳು (cold drinks), ಐಸ್‌ಕ್ರೀಮ್, ಮುಂತಾದ ಬಂದ್ ಬಾಟಲಿಗಳಲ್ಲಿರುವ ರಸಾಯನಿಕಗಳನ್ನು ಬಳಸಿ ತಯಾರಿಸಿದ ಹಣ್ಣುಗಳ ರಸಗಳನ್ನು ಸೇವಿಸಬಾರದು. ಈ ಪದಾರ್ಥಗಳು ಪಚನಶಕ್ತಿಯನ್ನು ಕೆಡಿಸುತ್ತವೆ. ಇವುಗಳ ಅತಿಸೇವನೆಯಿಂದ ರಕ್ತಧಾತು ಕಲುಷಿತವಾಗಿ ಚರ್ಮರೋಗವು ಬರುತ್ತದೆ.
೨ ಇ ೪ ಏ. ಈ ಋತುವಿನಲ್ಲಿ ಮೊಸರು ತಿನ್ನಬಾರದು. ಅದರ ಬದಲು ಸಕ್ಕರೆ ಮತ್ತು ಜೀರಿಗೆಯನ್ನು ಹಾಕಿ ಸಿಹಿ ಮಜ್ಜಿಗೆಯನ್ನು ಕುಡಿಯಬಹುದು.
೨ ಇ ೪ ಐ. ಕಡು ಬಿಸಿಲಿನಲ್ಲಿ ಹೋಗುವುದಿದ್ದರೆ, ನೀರು ಕುಡಿದು ಹೋಗಬೇಕು. ತಲೆ ಮತ್ತು ಕಣ್ಣುಗಳನ್ನು ಬಿಸಿಲಿನಿಂದ ರಕ್ಷಿಸಲು ಟೊಪ್ಪಿಗೆ ಮತ್ತು ಗಾಗಲ್‌ಗಳನ್ನು ಬಳಸಬೇಕು. ಪ್ಲಾಸ್ಟಿಕ್ ಚಪ್ಪಲಿಗಳನ್ನು ಧರಿಸಬಾರದು.
೨ ಇ ೪ ಒ. ಮೈಥುನ ಮಾಡುವುದನ್ನು ತಪ್ಪಿಸಬೇಕು. ಮಾಡುವುದಿದ್ದರೆ ೧೫ ದಿನಗಳಿಗೊಮ್ಮೆ ಮಾಡಬೇಕು.
೨ ಇ ೪ ಓ. ತಡರಾತ್ರಿಯವರೆಗೆ ಎಚ್ಚರವಾಗಿರುವುದು ಮತ್ತು ಬೆಳಗ್ಗೆ ಸೂರ್ಯೋದಯದ ನಂತರವೂ ಮಲಗುವುದನ್ನು ತಡೆಗಟ್ಟಬೇಕು.
– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೪.೨೦೧೪)
೨ ಇ ೫. ಸಾಕುಪ್ರಾಣಿಗಳ ಸಂರಕ್ಷಣೆಗಾಗಿ ಇವನ್ನು ಮಾಡಿರಿ !
೨ ಇ ೫ ಅ. ಪಶುಗಳನ್ನು ನೆರಳಿನಲ್ಲಿ ಕಟ್ಟಿ ಹಾಕಬೇಕು ಮತ್ತು ಅವುಗಳಿಗೆ ಕುಡಿಯಲು ಸ್ವಚ್ಛ, ತಂಪಾದ ಮತ್ತು ಸಾಕಷ್ಟು ನೀರನ್ನು ಕೊಡಬೇಕು.
೨ ಇ ೫ ಆ. ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೪ ರ ಸಮಯದಲ್ಲಿ ಅವುಗಳಿಂದ ಕೆಲಸವನ್ನು ಮಾಡಿಸಿಕೊಳ್ಳಬಾರದು ಅಥವಾ ಹೊರಗೆ ಬಿಡಬಾರದು.
೨ ಇ ೫ ಇ. ಗೋಶಾಲೆ ಇದ್ದರೆ ಅಥವಾ ಪಶುಗಳಿಗಾಗಿ ಚಪ್ಪರವಿದ್ದರೆ ಅದರ ಮೇಲ್ಛಾವಣಿಯನ್ನು ತಂಪಾಗಿರಿಸಲು ಪ್ರಯತ್ನಿಸಬೇಕು. ಮೇಲ್ಛಾವಣಿಯ ಮೇಲೆ ತೆಂಗಿನಗರಿಗಳು, ಹಸಿ ಹುಲ್ಲನ್ನಿಟ್ಟು ಅದನ್ನು ನೀರಿನಿಂದ ತೋಯಿಸಿದರೆ ಮೇಲ್ಛಾವಣಿಯು ತಂಪಾಗಿರುತ್ತದೆ.
೨ ಇ ೫ ಈ. ಸಾಧ್ಯವಿದ್ದರೆ ಅಲ್ಲಿ ಪಂಖಾ ಮತ್ತು ಕೂಲರ್ ಹಚ್ಚಬಹುದು.
೨ ಇ ೫ ಉ. ಉಷ್ಣತೆಯು ಹೆಚ್ಚಾದರೆ ಪ್ರಾಣಿಗಳ ಮೈ ಮೇಲೆ ನೀರನ್ನು ಸಿಂಪಡಿಸಬೇಕು.
(ಆಧಾರ : ಪುಸ್ತಕ – ತೈಯಾರಿ ಮೆ ಹಿ ಸಮಝದಾರಿ : ಆಪದಾ ಸೆ ಬಚನೆ ಕೆ ಸರಲ ಉಪಾಯ)