ಉಪನದಿಗಳಿಂದ ಕಲುಷಿತ ನೀರನ್ನು ನರ್ಮದೆಗೆ ಹರಿಯುವಂತೆ ಮಾಡುವುದು ದೇಶಕ್ಕೆ ಅಪಾಯಕಾರಿ ! – ಜ್ಯೋತಿಷ ಪೀಠ ಮತ್ತು ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ

ನರ್ಮದೆಗೆ ಅಣೆಕಟ್ಟು ನಿರ್ಮಾಣಕ್ಕೆ ಶಂಕರಾಚಾರ್ಯರಿಂದ ವಿರೋಧ ! ಇದನ್ನು ಶಂಕರಾಚಾರ್ಯರಿಗೆ ಏಕೆ ಹೇಳಬೇಕಾಗುತ್ತಿದೆ ? ಇದು ಸರಕಾರ ಮತ್ತು ಆಡಳಿತದ ಗಮನಕ್ಕೆ ಏಕೆ ಬರುವುದಿಲ್ಲ ?

ಜಬಲ್ಪುರ್ (ಮಧ್ಯಪ್ರದೇಶ) – ನರ್ಮದಾ ನದಿಗೆ ಉಪನದಿಗಳ ಮೂಲಕ ಕಲುಷಿತ ನೀರನ್ನು ಹರಿಯುಬಿಡಲಾಗುತ್ತಿದೆ. ಅದನ್ನು ನಿಲ್ಲಿಸಬೇಕಿದೆ. ನದಿಗಳಲ್ಲಿ ಚರಂಡಿ ನೀರು ಸೇರುವುದು ದೇಶಕ್ಕೆ ಅಪಾಯಕಾರಿ ಎಂದು ದ್ವಾರಕಾ ಮತ್ತು ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ಹೇಳಿದ್ದಾರೆ. ಈ ಸಮಯದಲ್ಲಿ ಶಂಕರಾಚಾರ್ಯರು ನರ್ಮದಾ ನದಿಯ ಮೇಲೆ ಅಣೆಕಟ್ಟು ನಿರ್ಮಿಸುವುದನ್ನು ವಿರೋಧಿಸಿದರು. ಅಣೆಕಟ್ಟು ನೀರನ್ನು ಕಡಿಮೆ ಮಾಡುತ್ತದೆ ಮತ್ತು ತಾಪಮಾನವು ಹೆಚ್ಚಾಗುತ್ತದೆ, ಇದರಿಂದ ಭೂಕಂಪವಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅವರು ಹೇಳಿದರು. (ಹಿಂದೂ ರಾಷ್ಟ್ರದಲ್ಲಿ ಅಣೆಕಟ್ಟುಗಳ ಬದಲಿಗೆ ಕೆರೆಗಳು ಮತ್ತು ಕೊಳಗಳನ್ನು ನಿರ್ಮಿಸಲಾಗುವುದು ! – ಸಂಪಾದಕರು)

ಶಂಕರಾಚಾರ್ಯರು ಮುಂದುವರಿಸುತ್ತಾ ಹೀಗೆಂದರು –

೧. ಹಿರನ್ ನದಿಯ ಕೊಳಕು ನೀರನ್ನು ನರ್ಮದಾ ನದಿಗೆ ಬಿಡಲಾಗುತ್ತಿದೆ. ನಗರಗಳ ಚರಂಡಿಗಳ ನೀರು ನದಿಗೆ ಬರದಂತೆ ತಡೆಯಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದು ಸರಕಾರ ಮತ್ತು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿರಬೇಕು. ನಾವು ನರ್ಮದಾ ನದಿಯನ್ನು ತಾಯಿ ಎಂದು ಪರಿಗಣಿಸುತ್ತೇವೆ ಮತ್ತು ಪ್ರತಿಯೊಬ್ಬರಿಗೂ ಅವಳ ಮೇಲೆ ಶ್ರದ್ಧೆಯಿದೆ.

೨. ಜನಸಂಖ್ಯೆಯ ಹೆಚ್ಚಳದಿಂದಾಗಿ, ಚರಂಡಿಗಳ ಸಂಖ್ಯೆಯೂ ಹೆಚ್ಚುತ್ತಿದೆ ಮತ್ತು ಅವುಗಳಿಂದ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಇದನ್ನು ತಡೆಗಟ್ಟಲು, ಕೊಳಕು ನೀರು ನದಿಗೆ ಹರಿಯದಂತೆ ಮತ್ತು ನದಿ ನೀರು ಕಲುಷಿತವಾಗದಂತೆ ತ್ಯಾಜ್ಯ ವಿಲೇವಾರಿ ಯೋಜನೆಗಳನ್ನು ಜಾರಿಗೆ ತರಬೇಕು. ನೀರು ಕಲುಷಿತಗೊಂಡರೆ, ಒಬ್ಬ ವ್ಯಕ್ತಿಯು ಉತ್ತಮ ಜೀವನ ಮತ್ತು ಆಹಾರವನ್ನು ಹೇಗೆ ಹೊಂದಬಹುದು ? ನದಿಗಳನ್ನು ಸ್ವಚ್ಛವಾಗಿಡುವುದು ಎಲ್ಲರ ಜವಾಬ್ದಾರಿಯಾಗಿದೆ.

ಮುಖ್ಯಮಂತ್ರಿಗಳೊಂದಿಗೆ ಪುನಃ ಚರ್ಚಿಸುತ್ತೇವೆ !

ನರ್ಮದಾ ನದಿಯಲ್ಲಿ ಚರಂಡಿಗಳ ನೀರನ್ನು ಬೆರೆಸಲಾಗುತ್ತಿದೆ ಎಂದು ನಾನು ಮುಖ್ಯಮಂತ್ರಿಗೆ ತಿಳಿಸಿದ್ದೆ. ನಂತರ ಅವರು ಶುದ್ಧೀಕರಣ ಯೋಜನೆ ಸ್ಥಾಪಿಸಲು ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರು. ಅಂದಿನಿಂದ ಆ ದಿಕ್ಕಿನಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ. ಇದು ಗಂಭೀರ ವಿಷಯ. ಚರಂಡಿಗಳಿಂದ ನೀರು ನದಿಗೆ ಹರಿಯದಂತೆ ತಡೆಯಲು ನಾನು ಪುನಃ ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ.