ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ನಾಗರಿಕರಿಗಾಗಿ ಮಹತ್ವದ ಮಾಹಿತಿ

ಪ್ರವಾಹದ ದೃಷ್ಟಿಯಿಂದ ಭೌತಿಕ ಸ್ತರದಲ್ಲಿ ಏನೆಲ್ಲ ಪೂರ್ವಸಿದ್ಧತೆಗಳನ್ನು ಮಾಡಬೇಕು ?

ಮಳೆಗಾಲದಲ್ಲಿ ಅತಿವೃಷ್ಟಿಯಾದರೆ ಪ್ರವಾಹ (ನೆರೆ) ಬರುತ್ತದೆ. ಬೇರೆ ಋತುಮಾನಗಳಲ್ಲಿಯೂ ಮೇಘಸ್ಫೋಟದಿಂದ ಪ್ರವಾಹ ಬರಬಹುದು. ೨೦೧೯ ನೇ ಇಸವಿಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಅನೇಕ ನಗರಗಳು ಅತಿವೃಷ್ಟಿಯಿಂದ ಜಲಾವೃತ್ತಗೊಂಡಿದ್ದವು. ಬಹಳಷ್ಟು ಗ್ರಾಮಗಳನ್ನು ಜೋಡಿಸುವ ರಸ್ತೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಮತ್ತು ಹೆದ್ದಾರಿಗಳ ಮೇಲೆ ನೀರು ಬಂದಿದ್ದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಸಾವಿರಾರು ನಾಗರಿಕರ ಮನೆಗಳು ನೀರಿನಲ್ಲಿ ಮುಳುಗಿದ್ದವು. ಕೆಲವು ಸ್ಥಳಗಳಲ್ಲಿ ನೀರಿನ ಪ್ರವಾಹಕ್ಕೆ ಅದರಲ್ಲಿ ಕೆಲವು ಜನರು, ದನ-ಕರುಗಳು, ವಾಹನಗಳು ಕೊಚ್ಚಿ ಹೋದವು. ಪೆಟ್ರೋಲ್, ಡೀಝೇಲ್, ಹಾಲು ಇತ್ಯಾದಿ ಜೀವನಾವಶ್ಯಕ ವಸ್ತುಗಳು ದೊರೆಯುವುದು ದುರ್ಲಭವಾಗಿತ್ತು. ಅಕಸ್ಮಿಕವಾಗಿ ಉದ್ಭವಿಸಿದ ಈ ನೈಸರ್ಗಿಕ ವಿಪತ್ತಿನಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

‘ಭವಿಷ್ಯದಲ್ಲಿ ಇಂತಹ ಸ್ಥಿತಿ ಪುನಃ ಯಾವಾಗ ಉದ್ಭವಿಸಬಹುದು ?, ಎಂಬುದನ್ನು ಯಾರೂ ಹೇಳಲಾಗದು. ಆದುದರಿಂದ ‘ನೆರೆ ಪೀಡಿತ ಪ್ರದೇಶಗಳಲ್ಲಿನ ನಾಗರಿಕರು ಯಾವ ರೀತಿ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು ?, ಎನ್ನುವ ಬಗ್ಗೆ ಮಾರ್ಗದರ್ಶಕ ಅಂಶಗಳನ್ನು ಮುಂದೆ ನೀಡಲಾಗಿದೆ. ಹಿಂದಿನ ಲೇಖನದಲ್ಲಿ ನಾವು ‘ನೆರೆಪೀಡಿತ ಪ್ರದೇಶದಲ್ಲಿ ಹೊಸ ಮನೆಗಳ ನಿರ್ಮಾಣವನ್ನು ಮಾಡುವವರಿದ್ದರೆ ಏನು ಮಾಡಬೇಕು ?, ‘ಮಹತ್ವದ ಕಾಗದಪತ್ರಗಳು ಮತ್ತು ಬೆಲೆಬಾಳುವ ವಸ್ತುಗಳು ಸುರಕ್ಷಿತವಾಗಿರಲು ಏನು ಮಾಡಬೇಕು ?, ಇವುಗಳ ಮಾಹಿತಿಯನ್ನು ನೋಡಿದೆವು. ಈಗ ಮುಂದಿನ ಅಂಶಗಳನ್ನು ನೊಡೋಣ. (ಭಾಗ-೨)

೪. ‘ನೀರು, ಆಹಾರಧಾನ್ಯ ಇತ್ಯಾದಿಗಳ ಕೊರತೆಯಾಗಬಾರದು, ಇದಕ್ಕಾಗಿ ಏನು ಮಾಡಬೇಕು ?

೪ ಅ. ಶುದ್ಧ ನೀರಿನ ಕೊರತೆಯಾದರೆ ನೀರನ್ನು ಸಂಗ್ರಹಿಸಲು ಮಾಡಿ ಕೊಳ್ಳಬೇಕಾದ ಪರ್ಯಾಯ  ವ್ಯವಸ್ಥೆ ! : ಪ್ರವಾಹ ಬಂದಾಗ ವಿದ್ಯುತ್ ಟ್ರಾನ್ಸಫಾರ್ಮರ್‌ಗಳು ನೀರಿನಲ್ಲಿ ಮುಳುಗಿ ಹೋಗುವುದರಿಂದ ವಿದ್ಯುತ್ ಕೊರತೆ ನಿರ್ಮಾಣವಾಗುತ್ತದೆ. ವಿದ್ಯುತ್‌ದ ಅಭಾವದಿಂದ ಶುದ್ಧ ನೀರಿನ ಕೊರತೆ ಉಂಟಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ನೀರು ನಿಲ್ಲುವುದರಿಂದ ನೀರಿನ ಟ್ಯಾಂಕರ್‌ಗಳೂ ತಲುಪುವುದು ಕಠಿಣವಾಗುತ್ತದೆ. ಇದರ ಪರಿಣಾಮದಿಂದ ಕುಡಿಯುವ ನೀರು ದೊರೆಯುವುದಿಲ್ಲ. ಇದಕ್ಕಾಗಿ ಮುಂದಿನ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು.

೧. ಹೆಚ್ಚು ನೀರನ್ನು ಸಂಗ್ರಹಿಸಲು ದೊಡ್ಡ ಸಂಪು, ಪಾತ್ರೆ ಮತ್ತು ಕೊಳಾಯಿಗಳು ಇರಬೇಕು.

೨. ಅನೇಕ ಮನೆಗಳ ಮೇಲ್ಛಾವಣಿಯ ಮೇಲೆ ನೀರನ್ನು ಸಂಗ್ರಹಿಸಲು ಸಂಪು (ಟ್ಯಾಂಕಿ) ಇರುತ್ತದೆ. ಸಾಧ್ಯವಿದ್ದರೆ ಅದೇ ಸಂಪಿಗೆ ಹೆಚ್ಚುವರಿ ಸಂಪನ್ನು ಜೋಡಿಸಿ ನೀರನ್ನು ಸಂಗ್ರಹಿಸಬಹುದು, ಇದರಿಂದ ಅಧಿಕ ಕಾಲಾವಧಿಗಾಗಿ ನೀರು ಶೇಖರಣೆಗೊಳ್ಳಬಹುದು.

೩. ಮನೆಯ ಮೇಲ್ಛಾವಣಿಯಿಂದ ಮಳೆಯ ನೀರು ಕೆಳಗೆ ಬರುವಲ್ಲಿ ಮೇಲ್ಛಾವಣಿಗೆ ನೀರಿನ ಹರಿನಾಳವನ್ನು ಜೋಡಿಸಿ ಸ್ವಚ್ಛ ನೀರನ್ನು ಉಪಯೋಗಿಸಬಹುದು ಮತ್ತು ಸಂಗ್ರಹಿಸಿಟ್ಟುಕೊಳ್ಳಬಹುದು.

೪. ಉಪಲಬ್ಧವಿರುವ ನೀರನ್ನು ಮಿತವಾಗಿ ಬಳಸಬೇಕು. ನೀರನ್ನು ಮಿತವಾಗಿ ಬಳಸಲು ಊಟಕ್ಕೆ ತಟ್ಟೆ ಮತ್ತು ಬಟ್ಟಲುಗಳ ಬದಲು ಪತ್ರಾವಳಿ ಅಥವಾ ಕಾಗದದ (ಡಿಸ್ಪೋಸೆಬಲ್) ತಟ್ಟೆ, ಬಟ್ಟಲು, ಚಮಚ ಇತ್ಯಾದಿಗಳನ್ನು ಉಪಯೋಗಿಸಬೇಕು.

೪ ಆ. ನೀರನ್ನು ಶುದ್ಧಗೊಳಿಸುವ ಪದ್ಧತಿಗಳು

೧. ಮಳೆಗಾಲದಲ್ಲಿ, ಹಾಗೆಯೇ ಪ್ರವಾಹಗಳ ಪರಿಸ್ಥಿತಿಯಲ್ಲಿ ಕಲುಷಿತ ನೀರಿನ ಪೂರೈಕೆಯಾಗುತ್ತದೆ. ಆದುದರಿಂದ ನೀರನ್ನು ಕುದಿಸಿ, ಸೋಸಿ ಕುಡಿಯುವುದು, ಸ್ಫಟಿಕದ ಉಪಯೋಗ ಇತ್ಯಾದಿ ನೀರು ಶುದ್ಧಗೊಳಿಸುವ ದೇಶಿ ಪದ್ಧತಿಗಳನ್ನು ಉಪಯೋಗ ಮಾಡಬೇಕು.

೨. ತೆಂಗಿನಕಾಯಿಯ ಗೆರಟೆಗಳನ್ನು ಸುಟ್ಟ ನಂತರ ಅದರ ಸುಟ್ಟ ತುಂಡುಗಳು ಉಳಿಯುತ್ತವೆ. ಅವುಗಳನ್ನು ನೀರಿನಲ್ಲಿ ಹಾಕಿದರೆ ನೀರು ನೈಸರ್ಗಿಕ ರೀತಿಯಲ್ಲಿ ಶುದ್ಧವಾಗುತ್ತದೆ.

೩. ಅನೇಕ ಔಷಧಾಲಯಗಳಲ್ಲಿ ‘ವಾಟರ್ ಡಿಸ್‌ಇನ್ಫೆಕ್ಷನ್ ಟ್ಯಾಬಲೆಟ್ಸ್ (ನೀರು ಶುದ್ಧೀಕರಣದ ಮಾತ್ರೆಗಳು) ಸಿಗುತ್ತವೆ. ೨೦ ಲೀಟರ್ ನೀರಿಗೆ ಒಂದು ಮಾತ್ರೆ ಹಾಕಿದರೆ ಅರ್ಧ ಗಂಟೆಯಲ್ಲಿ ನೀರು ತನ್ನಷ್ಟಕ್ಕೆ ಶುದ್ಧವಾಗುತ್ತದೆ.

೪. ಸದ್ಯ ಮಾರುಕಟ್ಟೆಯಲ್ಲಿ ‘ಫಿಲ್ಟರ್ ವಾಟರ್ ಬಾಟಲಿಗಳು ಸಿಗುತ್ತವೆ. ಈ ಬಾಟಲಿಗಳಲ್ಲಿ ಅಳವಡಿಸಿದ ಫಿಲ್ಟರ್‌ಗೆ ೧ ಸಾವಿರ ಲೀಟರ್ ನೀರನ್ನು ಶುದ್ಧಗೊಳಿಸುವ ಕ್ಷಮತೆಯಿರುತ್ತದೆ. ಈ ಬಾಟಲಿಯಲ್ಲಿ ಅಶುದ್ಧ ನೀರನ್ನು ಹಾಕಿದಾಗ ಅದರಲ್ಲಿರುವ ಫಿಲ್ಟರಿನಿಂದಾಗಿ ನೀರಿನಲ್ಲಿರುವ ಜೀವ-ಜಂತುಗಳು, ಕ್ಷಾರ ಇತ್ಯಾದಿಗಳು ನಾಶವಾಗಿ ನೀರು ಶುದ್ಧವಾಗುತ್ತದೆ. ಆಪತ್ಕಾಲದ ಸ್ಥಿತಿಯಲ್ಲಿ ಕುಡಿಯುವ ನೀರು ಉಪಲಬ್ಧವಿಲ್ಲದಿದ್ದರೆ, ನೀರು ಶುದ್ಧೀಕರಣಗೊಳಿಸಲು ಈ ಪರ್ಯಾಯಗಳನ್ನು ಉಪಯೋಗಿಸಬಹುದು.

೪ ಇ. ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಿಸಿ ಗಾಳಿಯಾಡದ ಪ್ಲಾಸ್ಟಿಕಿನ ಚೀಲಗಳಲ್ಲಿ ಇಡುವುದು : ಪ್ರವಾಹಗಳ ಸ್ಥಿತಿಯಲ್ಲಿ ತರಕಾರಿ, ಹಣ್ಣು ಇತ್ಯಾದಿ ಪೂರೈಕೆಯಾಗುವುದಿಲ್ಲ. ಆದುದರಿಂದ ಧಾನ್ಯ, ದ್ವಿದಳ ಧಾನ್ಯ ಇತ್ಯಾದಿಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳಬೇಕು. ಇದಕ್ಕಾಗಿ ಅವುಗಳನ್ನು ವ್ಯವಸ್ಥಿತವಾಗಿ ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಗಿಸಿಕೊಳ್ಳಬೇಕು. ‘ಧಾನ್ಯಗಳಿಗೆ ಹುಳ ಆಗಬಾರದು, ಎಂದು ಅವುಗಳಲ್ಲಿ ಔಷಧಿಯನ್ನು ಹಾಕಿ ಅದನ್ನು ಗಾಳಿಯಾಡದಂತಹ ಒಳ್ಳೆಯ ಪ್ಲಾಸ್ಟಿಕಿನ ಚೀಲಗಳಲ್ಲಿ ಹಾಕಬೇಕು. ಈ ಚೀಲಗಳನ್ನು ದೊಡ್ಡ ಡ್ರಮ್‌ನಲ್ಲಿ ಹಾಕಿ ಡ್ರಮ್‌ನ್ನು ಎತ್ತರದ ಸ್ಥಳದಲ್ಲಿ (ಉದಾ : ಮಾಳಿಗೆಯಲ್ಲಿ) ಇಡಬೇಕು. ಧಾನ್ಯದ ಡ್ರಮ್‌ನ್ನು ಪದೇ ಪದೇ ತೆರೆದರೆ ಔಷಧದ ಪರಿಣಾಮ ಉಳಿಯುವುದಿಲ್ಲ. ಹಾಗೆಯೇ ಹೊರಗಿನ ಗಾಳಿ ತಗಲಿ ಧಾನ್ಯ ಹಾಳಾಗುತ್ತವೆ. ಹಾಗಾಗಿ ಒಂದು ತಿಂಗಳಿಗೆ ಅಗತ್ಯವಿರುವ ಧಾನ್ಯಗಳನ್ನು ಒಂದೇ ಸಲ ತೆಗೆದಿಡಬೇಕು. ಹಿಟ್ಟಿನಲ್ಲಿ ಹುಳಗಳೂ ಆಗುತ್ತವೆ, ಆದುದರಿಂದ ಅದನ್ನು ಮೇಲೆ ಹೇಳಿದಂತೆ ಸಂಗ್ರಹಿಸಲು ಬರುವುದಿಲ್ಲ.

೪ ಈ. ತರಕಾರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು : ಪ್ರವಾಹದ ಸ್ಥಿತಿಯಲ್ಲಿ ಸಂಚಾರಸಾರಿಗೆ ವ್ಯತ್ಯಯಗೊಳ್ಳುವುದರಿಂದ ತರಕಾರಿ, ಹಾಲು, ಹಾಗೆಯೇ ಖಾದ್ಯಪದಾರ್ಥಗಳು ದೊರೆಯುವುದಿಲ್ಲ. ಆದುದರಿಂದ ಅವುಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳುವುದು ಆವಶ್ಯಕವಾಗಿದೆ.

೧. ಚೆನ್ನಾಗಿ ಒಣಗಿದ ಈರುಳ್ಳಿ, ಬೆಳ್ಳುಳ್ಳಿ, ಸುವರ್ಣಗೆಡ್ಡೆ ಇತ್ಯಾದಿ ತರಕಾರಿಗಳು ೧-೨ ತಿಂಗಳುಗಳವರೆಗೆ ಚೆನ್ನಾಗಿ ಉಳಿಯುತ್ತವೆ. ಈ ತರಕಾರಿಗಳನ್ನು ಒಣಗಿದ ಸ್ಥಳದಲ್ಲಿ ಇಡಬೇಕು.

೨. ಬದನೆಕಾಯಿ, ಗೋರಿಕಾಯಿ, ಕೊತ್ತಂಬರಿ, ಕರಿಬೇವು, ಹಸಿಮೆಣಸಿನ ಕಾಯಿ, ಮೆಂತೆ ಸೊಪ್ಪು ಇತ್ಯಾದಿ ತರಕಾರಿಗಳನ್ನು ಉರಿ ಬಿಸಿಲಿನಲ್ಲಿಟ್ಟು ಒಣಗಿಸಿಕೊಳ್ಳಬೇಕು. ಅವುಗಳಲ್ಲಿರುವ ನೀರಿನ ಅಂಶ ಸಂಪೂರ್ಣ ಹೋಗಲು ಅವುಗಳನ್ನು ೫-೬ ದಿನಗಳವರೆಗೆ ಬಿಸಿಲಿನಲ್ಲಿ ಇಡಬೇಕಾಗುತ್ತದೆ. ತದನಂತರ ಈ ತರಕಾರಿಗಳನ್ನು ಒಣಗಿದ ಜಾಗದಲ್ಲಿ ಇಡಬೇಕು. ಅವುಗಳನ್ನು ಶೀತಕಪಾಟಿನಲ್ಲಿ ಇಡುವ ಅವಶ್ಯಕತೆಯಿಲ್ಲ. ಇಂತಹ ಒಣಗಿದ ತರಕಾರಿಗಳು ೧-೨ ತಿಂಗಳುಗಳವರೆಗೆ ಚೆನ್ನಾಗಿ ಇರುತ್ತವೆ. ಈ ತರಕಾರಿಗಳನ್ನು ಉಪಯೋಗಿಸುವ ಮೊದಲು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಇಟ್ಟರೆ ತರಕಾರಿಗಳು ನೀರನ್ನು ಹೀರಿಕೊಂಡು ಸ್ವಲ್ಪಮಟ್ಟಿಗೆ ಮೊದಲಿನಂತೆ  ನಳನಳಿಸುತ್ತವೆ.

೩. ಹಾಗಲಕಾಯಿ ಮತ್ತು ಬಟಾಟೆಗಳನ್ನು ತೆಳುವಾಗಿ ಗೋಲಾಕಾರದಲ್ಲಿ ಕತ್ತರಿಸಿ, ಅವುಗಳಿಗೆ ಉಪ್ಪು ಹಚ್ಚಿ ಬಿಸಿಲಿನಲ್ಲಿ ಒಣಗಿಸಬೇಕು. ಹೀಗೆ ಮಾಡಿದರೆ ಅವು ಕೆಲವು ತಿಂಗಳುಗಳವರೆಗೆ ಬಾಳಿಕೆ ಬರುತ್ತವೆ.

೪. ಬೂದುಗುಂಬಳಕಾಯಿ, ಹಾಲು ಕುಂಬಳಕಾಯಿ ಇತ್ಯಾದಿ ತರಕಾರಿಗಳನ್ನು ಒಣಗಿಸಿ ಅವುಗಳ ಸಂಡಿಗೆಗಳನ್ನು ಮಾಡಿಟ್ಟುಕೊಳ್ಳಬೇಕು. ಮುಂದೆ ಈ ಸಂಡಿಗೆಗಳ ಪಲ್ಯ ಅಥವಾ ಸಾರು ಮಾಡಿಕೊಳ್ಳಬಹುದು.

೪ ಉ. ಒಣ ಮತ್ತು ಬಹಳ ದಿನಗಳವರೆಗೆ ಬಾಳಿಕೆ ಬರುವ ತಿನಿಸುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ! : ಉಪ್ಪಿನಕಾಯಿ, ಚಟ್ನಿಪುಡಿ, ಮೊರಬ್ಬಾ ಇತ್ಯಾದಿ ಬಹುದಿನ ಬಾಳಿಕೆ ಬರುವ ಪದಾರ್ಥಗಳನ್ನು, ಹಾಗೆಯೇ ಮಸಾಲೆ, ಎಣ್ಣೆ ಇತ್ಯಾದಿಗಳನ್ನು ಗಾಳಿಯಾಡದ (ಏರ್ ಟೈಟ್) ಡಬ್ಬಿಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಇದರೊಂದಿಗೆ ಹಾಲಿನ ಪುಡಿ, ಹಾಗೆಯೇ ಒಣ ಮತ್ತು ಬಹಳ ದಿನಗಳವರೆಗೆ ಬಾಳಿಕೆ ಬರುವ ತಿಂಡಿ ತಿನಿಸುಗಳನ್ನು ಮನೆಯಲ್ಲಿ ಇಡಬೇಕು. ಕಚೇರಿಗೆ ಅಥವಾ ಬೇರೆ ಸ್ಥಳಗಳಿಗೆ ಹೋಗುವಾಗಲೂ ಜೊತೆಯಲ್ಲಿ ತಿಂಡಿತಿನಿಸುಗಳನ್ನು ಒಯ್ಯಬೇಕು. ವಿಷಮ ಪರಿಸ್ಥಿತಿಯ ಸಂದರ್ಭದಲ್ಲಿ ಮನೆ ತಲುಪಲು ತೊಂದರೆಯಾಗುತ್ತಿದ್ದರೆ, ಕನಿಷ್ಠಪಕ್ಷ ಈ ತಿನಿಸುಗಳನ್ನು ತಿಂದು ಸ್ವಲ್ಪ ಹೊತ್ತಿನವರೆಗಾದರೂ ಹಸಿವೆಯನ್ನು ನೀಗಿಸಿಕೊಳ್ಳಬಹುದು.

೫. ನಿಯಮಿತವಾಗಿ ತೆಗೆದುಕೊಳ್ಳುವ ಔಷಧಿಗಳನ್ನು ಸ್ವಲ್ಪ ಸಂಗ್ರಹಿಸಿ ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಳ್ಳಬೇಕು

ಔಷಧಿಗಳು ಮುಗಿದರೆ ಅವು ನಮಗೆ ಬೇಕಾಗಿರುವ ಸಮಯದಲ್ಲಿ ದೊರೆಯಲು ಅನೇಕ ಅಡಚಣೆಗಳು ಬರಬಹುದು. ನಿತ್ಯ ಉಪಯೋಗಿಸುವ ಔಷಧಿಗಳನ್ನು (ಉದಾ : ರಕ್ತದೊತ್ತಡದ ಮಾತ್ರೆಗಳು, ಸಕ್ಕರೆ ರೋಗದ ಔಷಧಿಗಳು, ಜ್ವರ, ನೆಗಡಿ, ಕೆಮ್ಮು, ಸಂಧಿನೋವು ಇವುಗಳ ಔಷಧಿ) ಸ್ವಲ್ಪ ಹೆಚ್ಚುಪ್ರಮಾಣದಲ್ಲಿ ಇಟ್ಟುಕೊಂಡರೆ, ಅವುಗಳನ್ನು ಹೆಚ್ಚು ಕಾಲದವರೆಗೆ ಉಪಯೋಗಿಸಬಹುದು.  ಈ ದೃಷ್ಟಿಯಿಂದ ತುಂಬಾ ಸಮಯದ ನಂತರ ಕಾಲಬಾಹಿರವಾಗುವ (ಲಾಂಗ್ ಎಕ್ಸಪಾಯರಿ) ಔಷಧಿಗಳ ಸಂಗ್ರಹವನ್ನು ಇಟ್ಟುಕೊಳ್ಳಬೇಕು.

‘ಈ ಔಷಧಿಗಳು ಸುರಕ್ಷಿತವಾಗಿ ಉಳಿಯಲು ಅವುಗಳನ್ನು ಪ್ಲಾಸ್ಟಿಕ್‌ನ ಚೀಲಗಳಲ್ಲಿ ಹಾಕಿ ಎತ್ತರದ ಸ್ಥಳದಲ್ಲಿ ಇಡಬೇಕು. ಹೀಗೆ ಮಾಡುವಾಗ ‘ಅವುಗಳ ಮೇಲೆ ನೇರವಾಗಿ ಸೂರ್ಯಕಿರಣಗಳು ಬೀಳದಂತೆ, ಜಾಗ್ರತೆ ವಹಿಸಬೇಕು. ಔಷಧಿಯು ಇಂಜೆಕ್ಷನ್‌ನ ಮೂಲಕ (‘ಉದಾ:‘ಇನ್ಸುಲಿನ್) ತೆಗೆದುಕೊಳ್ಳುವಂತಹದಾಗಿದ್ದರೆ ಅದನ್ನು ಶೀತಕಪಾಟಿನಲ್ಲಿ ಇಡುವುದು ಅವಶ್ಯಕವಾಗಿರುತ್ತದೆ. ಶೀತಕಪಾಟವಿಲ್ಲದೇ ಔಷಧಿಗಳು ಬಾಳಿಕೆ ಬರ ಬೇಕಾದರೆ ಅವುಗಳನ್ನು (‘ಐಸ್ ಬ್ಯಾಗ್ನಲ್ಲಿ, ಅಂದರೆ ಮಂಜುಗಡ್ಡೆ (ಬರ್ಫನ) ಚೀಲದಲ್ಲಿ) ಇಡಬೇಕು. ಒಟ್ಟಾರೆ ಆಪತ್ಕಾಲೀನ ಸ್ಥಿತಿಯಲ್ಲಿ ಮನೆಯಿಂದ ಹೊರಗೆ ಹೋಗಬೇಕಾಗಿದ್ದರೆ, ಸ್ವಲ್ಪ ಕಾಲಾವಧಿಯವರೆಗಾದರೂ ಅವು ಬಾಳಿಕೆ ಬರಬಹುದು. (ಮುಂದುವರಿಯುವುದು)

(ಪ್ರಸ್ತುತ ಲೇಖನಮಾಲಿಕೆಯ ಸ್ವಾಮಿತ್ವ (ಕ್ವಾಪಿರೈಟ) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆಯ ಬಳಿ ಸಂರಕ್ಷಿಸಲ್ಪಟ್ಟಿದೆ)

‘ಸನಾತನ ಪ್ರಭಾತದಲ್ಲಿನ ಮಾರ್ಗದರ್ಶನಕ್ಕನುಸಾರ ಮುಂಬರುವ ಆಪತ್ಕಾಲದ ದೃಷ್ಟಿಯಿಂದ ಪೂರ್ವಸಿದ್ಧತೆಯನ್ನು ಮಾಡಿದ ಫರೀದಾಬಾದ (ಹರಿಯಾಣಾ) ನ ವೈದ್ಯರಾದ ಭೂಪೇಶ ಶರ್ಮಾ !

‘ಸರ್ವಜ್ಞ ಮತ್ತು ದಾರ್ಶನಿಕ ಪರಾತ್ಪರ ಗುರು ಡಾಕ್ಟರ ಆಠವಲೆಯವರು ಕೆಲವು ವರ್ಷಗಳ ಹಿಂದೆಯೇ ಸಂಪೂರ್ಣ ಮನುಕುಲಕ್ಕೆ ಭಾವಿ ಭೀಕರ ಆಪತ್ಕಾಲದ ಅರಿವನ್ನು ಮೂಡಿಸಿ, ಅದಕ್ಕಾಗಿ ಪರಿಣಾಮಕಾರಿ ಉಪಾಯಗಳನ್ನು ಹೇಳಿದ್ದಾರೆ. ‘ಆಪತ್ಕಾಲದ ಪರಿಸ್ಥಿತಿಯನ್ನು ಎದುರಿಸಲು ಯಾವ ರೀತಿ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು ?, ಈ ವಿಷಯದಲ್ಲಿ ಅವರು ಮಾಡಿರುವ ಅಮೂಲ್ಯ ಮಾರ್ಗದರ್ಶನವನ್ನು ‘ಸನಾತನ ಪ್ರಭಾತ ಪತ್ರಿಕೆಯಲ್ಲಿ ಆಗಾಗ ಪ್ರಕಟಿಸಲಾಗುತ್ತದೆ.

ಹರಿಯಾಣಾದ ಫರೀದಾಬಾದನಲ್ಲಿನ, ವೈದ್ಯರಾದ ಭೂಪೇಶ ಶರ್ಮಾ ಇವರು ‘ಸನಾತನ ಪ್ರಭಾತದಲ್ಲಿ ನೀಡಲಾದ ಈ ಸೂಚನೆಗಳನ್ನು ಪಾಲಿಸುತ್ತಾ ತಮ್ಮ ಮನೆಯ ಕುಂಡಗಳಲ್ಲಿ ೬೦ ರಿಂದ ೭೦ ವನೌಷಧಿಯ ಗಿಡಗಳನ್ನು ನೆಟ್ಟಿದ್ದಾರೆ. ಅವರು ಧಾನ್ಯಗಳನ್ನು ಬೀಸಲು ಬೀಸುವ ಕಲ್ಲು, ಹಾಗೆಯೇ ಅರೆಗಲ್ಲನ್ನು ಊರಿನಿಂದ ತರಿಸಿದ್ದಾರೆ.

‘ಸನಾತನ ಪ್ರಭಾತದ ಮಾರ್ಗದರ್ಶನದಂತೆ ಮುಂಬರುವ ಆಪತ್ಕಾಲಕ್ಕಾಗಿ ಪೂರ್ವಸಿದ್ಧತೆಯನ್ನು ಮಾಡುವ ವೈದ್ಯ ಶರ್ಮಾ ಇವರು ತತ್ಪರತೆಯಿಂದ ಮಾಡಿದ ಕೃತಿಯು ಎಲ್ಲರಿಗೂ ಅನುಕರಣೀಯವಾಗಿದೆ. ಅವರಂತೆ ಸಾಧಕರು, ಹಾಗೆಯೇ ಓದುಗರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳೂ ಪೂರ್ವಸಿದ್ಧತೆಯನ್ನು ಮಾಡಿಟ್ಟುಕೊಂಡು  ಆಪತ್ಕಾಲವನ್ನು ಎದುರಿಸಲು ಸಿದ್ಧರಾಗಬೇಕು! – ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೭.೭.೨೦೨೦)

ಓದುಗರಿಗೆ  ಕರೆ !

ಪ್ರವಾಹದ (ನೆರೆಯ) ದೃಷ್ಟಿಯಿಂದ ಕೆಲವು ಮಾರ್ಗದರ್ಶಕ ಅಂಶಗಳನ್ನು ಇಲ್ಲಿ ನೀಡಲಾಗಿದೆ. ಓದುಗರಿಗೆ, ಈ ವಿಷಯಕ್ಕೆ ಸಂಬಂಧಿಸಿದ ಇತರ ಇನ್ನೂ ಏನಾದರೂ ಅಂಶಗಳನ್ನು ಸೂಚಿಸುವುದಿದ್ದರೆ, ಅವರು ಅವುಗಳನ್ನು ವಿವರವಾಗಿ ಬರೆದು ಕೆಳಗಿನ ಗಣಕೀಯ ವಿಳಾಸಕ್ಕೆ ಅಥವಾ ಅಂಚೆ ವಿಳಾಸಕ್ಕೆ ಕಳುಹಿಸಬೇಕು, ಎಂದು ವಿನಂತಿ. ಇದರಿಂದ ಈ ವಿಷಯವನ್ನು ಸಮಾಜದ ಎದುರಿಗೆ ವಿವರವಾಗಿ ಮಂಡಿಸಲು ಸಹಾಯವಾಗುವುದು.

ಸಂಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ  ಸಾವಂತ, ‘ಸನಾತನ ಆಶ್ರಮ, 24/B,

ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್- 403401