‘ಬ್ರಾಹ್ಮಣ’ ಇದು ಯಾರ ಹೆಸರು ? (ಯಾರನ್ನು ಬ್ರಾಹ್ಮಣ ಎನ್ನಬೇಕು ?)

ಪೂ. ಅನಂತ ಆಠವಲೆ

ವಜ್ರಸೂಚಿಕೋಪನಿಷದ್‌ದಲ್ಲಿ ‘ಯಾರನ್ನು ಬ್ರಾಹ್ಮಣ ಎಂದು ಹೇಳಬೇಕು ?’ ಎಂಬ ಪ್ರಶ್ನೆಯನ್ನು ಉಪಸ್ಥಿತಗೊಳಿಸಿ ವಿವಿಧ ಸಾಧ್ಯತೆಗಳನ್ನು ಹೇಳಿ, ಅವುಗಳ ಪರಿಹಾರವನ್ನೂ ಹೇಳಲಾಗಿದೆ. ಕೊನೆಗೆ ಬ್ರಾಹ್ಮಣ ಇದು ಯಾರ ಹೆಸರು (ಯಾರಿಗೆ ಬ್ರಾಹ್ಮಣ ಎಂದು ಹೇಳಬೇಕು) ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಜಿಜ್ಞಾಸುಗಳಿಗಾಗಿ ಈ ಮಾಹಿತಿಯನ್ನು ಮುಂದೆ ಕೊಡಲಾಗಿದೆ.

ಮೂಲ ಸಂಸ್ಕೃತ ಮತ್ತು ಅದರ ಅರ್ಥವನ್ನು ಕೊಟ್ಟರೆ ಅದರ ವಿಸ್ತಾರ ಹೆಚ್ಚಾಗಬಹುದು, ಆದ್ದರಿಂದ ಈ ಮಾಹಿತಿಯನ್ನು ಮುಂದೆ ಕೇವಲ ಕನ್ನಡದಲ್ಲಿ ಮಾತ್ರ ಕೊಡಲಾಗಿದೆ. ಮೂಲ ಉಪನಿಷದ್‌ನ್ನು ಯಾವ ಪದ್ಧತಿಯಿಂದ ಬರೆಯಲಾಗಿದೆಯೋ, ಸಾಧಾರಣ ಅದೇ ಪದ್ಧತಿಯಿಂದ ಮುಂದೆ ಮಾಹಿತಿಯನ್ನು ಕೊಡಲಾಗಿದೆ. ಸ್ವಲ್ಪ ಸಂಕ್ಷಿಪ್ತ ಮಾಡಲಾಗಿದೆ. ಇದರಲ್ಲಿ ಪ್ರಸ್ತುತ ಪಡಿಸಿದವರ ವಿವೇಚನೆ ಇಲ್ಲ.

‘ನಾಲ್ಕು ವರ್ಣಗಳಲ್ಲಿ ಬ್ರಾಹ್ಮಣ ವರ್ಣ ಮುಖ್ಯವಾಗಿದೆ, ಎಂದು ವೇದ ಮತ್ತು ಸ್ಮೃತಿಯಲ್ಲಿಯೂ ಹೇಳಲಾಗಿದೆ. ಆದುದರಿಂದ ನಿರ್ದಿಷ್ಟವಾಗಿ ಯಾರನ್ನು ಬ್ರಾಹ್ಮಣ ಎನ್ನಬೇಕು ಎಂಬುದರ ಬಗ್ಗೆ ಅನುಮಾನ ಬರುತ್ತದೆ. ಜೀವ, ದೇಹ, ಜಾತಿ, ಜ್ಞಾನ, ಕರ್ಮ, ಧಾರ್ಮಿಕ (ವ್ಯಕ್ತಿ) ಇವುಗಳಲ್ಲಿ ಬ್ರಾಹ್ಮಣರು ಯಾರು ?’

ಜೀವ – ‘ಜೀವ ಬ್ರಾಹ್ಮಣವಿರಲು ಸಾಧ್ಯವಿಲ್ಲ, ಏಕೆಂದರೆ ಹಿಂದೆ ಆಗಿಹೋದ ಮತ್ತು ಮುಂದೆ ಆಗುವ ಅನೇಕ ಬೇರೆ ಬೇರೆ ಶರೀರಗಳಲ್ಲಿ ಅದೇ ಜೀವ ಇರುತ್ತದೆ. ಅದು ಕರ್ಮದಿಂದಾಗಿ ಅನೇಕ ದೇಹಗಳನ್ನು ಧರಿಸುತ್ತದೆ, ಆದರೆ ಎಲ್ಲ ಶರೀರದಲ್ಲಿ ಜೀವ ಒಂದೇ ಆಗಿರುತ್ತದೆ.’

ದೇಹ ‘ದೇಹ ಬ್ರಾಹ್ಮಣವಾಗಿರಲು ಸಾಧ್ಯವಿಲ್ಲ. ಎಲ್ಲ ಮನುಷ್ಯರ ದೇಹಗಳು ಪಂಚಮಹಾಭೂತಗಳಿಂದಲೇ ತಯಾ ರಾಗಿರುತ್ತವೆ ಮತ್ತು ಆ ದೇಹಗಳಿಗೆ ವೃದ್ಧಾಪ್ಯ, ಮೃತ್ಯು ಒಂದೇ ರೀತಿ ಬರುತ್ತವೆ. ಬ್ರಾಹ್ಮಣ ಬಿಳಿ, ಕ್ಷತ್ರೀಯ ಕೆಂಪು, ವೈಶ್ಯ ಹಳದಿ, ಶುದ್ರ ಕಪ್ಪಾಗಿಯೇ ಇರುತ್ತಾನೆ ಎಂಬ ಯಾವುದೇ ನಿಯಮ ಇಲ್ಲ. ದೇಹವನ್ನು ಬ್ರಾಹ್ಮಣ ಎಂದು ನಂಬಿದರೆ ತಂದೆಯ ಮೃತ ಶರೀರಕ್ಕೆ ಅಗ್ನಿ ಕೊಟ್ಟರೆ ಮಗನಿಗೆ ಬ್ರಹ್ಮಹತ್ಯೆ ಮಾಡಿದ ಪಾಪ ತಗಲುವ ಸಾಧ್ಯತೆ ಇರಬಹುದು.’

ಜಾತಿ – ‘ಜಾತಿ ಬ್ರಾಹ್ಮಣ’ವಾಗಿದೆ, ಎನ್ನಲೂ ಸಾಧ್ಯವಿಲ್ಲ. ವಿಭಿನ್ನ ಜಾತಿಗಳ ಪ್ರಾಣಿಗಳಿಂದ ಅನೇಕ ಜಾತಿಗಳ ಮಹರ್ಷಿಗಳು ಉತ್ಪನ್ನರಾಗಿದ್ದಾರೆ; ಚಿಗರೆಯಿಂದ ಋಷ್ಯಶೃಂಗ, ಕುಶ(ದರ್ಭ) ದಿಂದ ಕೌಶಿಕ, ಜಂಬುಕದಿಂದ (ನರಿಯಿಂದ) ಜಾಂಬುಕ, ಅಂಬಿಗನ ಮಗಳಿಂದ ವ್ಯಾಸ, ಮೊಲದ ಬೆನ್ನಿನಿಂದ ಗೌತಮ, ಊರ್ವಶಿಯಿಂದ ವಸಿಷ್ಠ, ಕಲಶದಿಂದ ಅಗಸ್ತ್ಯ ಉತ್ಪನ್ನ ರಾಗಿದ್ದಾರೆಂದು ಕೇಳಿದ್ದೇವೆ. ಇವರಲ್ಲಿನ ಬಹಳಷ್ಟು ಜನರು ಜಾತಿಯೇ ಇಲ್ಲದಿದ್ದರೂ ಸಂಪೂರ್ಣ ಜ್ಞಾನವಂತ ಋಷಿ ಗಳಾಗಿದ್ದಾರೆ. ಆದ್ದರಿಂದ ಜಾತಿ ಬ್ರಾಹ್ಮಣವಲ್ಲ’,

ಜ್ಞಾನ – ‘ಜ್ಞಾನ ಬ್ರಾಹ್ಮಣವಾಗಲು ಸಾಧ್ಯವಿಲ್ಲ. ಎಷ್ಟೋ ಜನ ಕ್ಷತ್ರೀಯರು (ಜನಕ, ಅಶ್ವಪತಿ) ಮುಂತಾದವರು ಸಹ ಪರಮಾರ್ಥವನ್ನು ತಿಳಿದುಕೊಂಡಿರುವ ತತ್ತ್ವಜ್ಞಾನಿಗಳಾಗಿದ್ದಾರೆ’,

ಕರ್ಮ – ‘ಕರ್ಮವು ಬ್ರಾಹ್ಮಣವಾಗಲು ಸಾಧ್ಯವಿಲ್ಲ. ಎಲ್ಲ ಪ್ರಾಣಿಗಳಲ್ಲಿ ಪ್ರಾರಬ್ಧ, ಸಂಚಿತ ಮತ್ತು ಕ್ರಿಯಮಾಣ ಕರ್ಮ ಇವು ಒಂದೇ ರೀತಿ ಆಗಿರುವುದು ಕಂಡುಬರುತ್ತದೆ ಮತ್ತು ಕರ್ಮಗಳಿಂದ ಪ್ರೇರಿತರಾಗಿ ಮನುಷ್ಯರು ಕ್ರಿಯೆಗಳನ್ನು ಮಾಡುತ್ತಾರೆ. ಆದುದರಿಂದ ಕರ್ಮವು ಬ್ರಾಹ್ಮಣ ಆಗಲಾರದು.’

ಧಾರ್ಮಿಕ – ‘ಧಾರ್ಮಿಕ (ಧಾರ್ಮಿಕನಾಗಿದ್ದೇನೆ ಇದರ ಆಧಾರದ ಮೇಲೆ ವ್ಯಕ್ತಿ) ಬ್ರಾಹ್ಮಣನಾಗಲು ಸಾಧ್ಯವಿಲ್ಲ. ಅನೇಕ ಕ್ಷತ್ರೀಯರು ಮುಂತಾದವರು ಸಹ ಚಿನ್ನವನ್ನು ದಾನ ಮಾಡಿದ್ದಾರೆ.’

‘ಹಾಗಾದರೆ ಯಾರನ್ನು ಬ್ರಾಹ್ಮಣನೆಂದು ಹೇಳಬೇಕು’ ? ಯಾವನು ಅದ್ವಿತೀಯ ಆತ್ಮ, ಜಾತಿ, ಗುಣ ಮತ್ತು ಕ್ರಿಯೆ ಇಲ್ಲದವನಾಗಿದ್ದಾನೆಯೋ, ಆರು ಊರ್ಮಿಗಳು (ಟಿಪ್ಪಣಿ ೧)

ಮತ್ತು ಆರು ವಿಕಾರಗಳು (ಟಿಪ್ಪಣಿ ೨) ಇತ್ಯಾದಿ ಎಲ್ಲ ದೋಷರಹಿತನಾಗಿದ್ದಾನೆಯೋ, ಸತ್‌-ಚಿತ್‌-ಆನಂದ ಮತ್ತು ಆನಂದಸ್ವರೂಪ, ನಿರ್ವಿಕಲ್ಪನಾಗಿದ್ದು ಅನಂತ ಕಲ್ಪಗಳ ಆಧಾರ, ಅನಂತ ಪ್ರಾಣಿಗಳಲ್ಲಿ ಅಂತರ್ಯಾಮಿ ರೂಪದಿಂದಿರುವ, ನಿತ್ಯ ಅಸ್ತಿತ್ವವಂತ, ಆಕಾಶದಂತೆ ಎಲ್ಲರ ಒಳಗೆ-ಹೊರಗೆ ಪರಿಪೂರ್ಣ, ಅಖಂಡ ಆನಂದ ಸ್ವಭಾವದ, ಅಪ್ರಮೇಯ (ಇಂದ್ರಿಯಗಳಿಂದ ಮತ್ತು ಅಂತಃಕರಣದಿಂದ ಅರಿತುಕೊಳ್ಳಲು ಸಾಧ್ಯ ಇಲ್ಲದವನು),

ಕೇವಲ ಅನುಭವದಿಂದ ತಿಳಿದುಕೊಳ್ಳಲು ಯೋಗ್ಯ, ಪ್ರತ್ಯಕ್ಷ ಪ್ರಕಾಶಿತಗೊಳ್ಳುವ, ಅಂಗೈ ಮೇಲೆ ಇಟ್ಟಿರುವ ನೆಲ್ಲಿಕಾಯಿಯಂತೆ ಪರಮಾತ್ಮನ ಸಾಕ್ಷಾತ್ಕಾರವನ್ನು ಮಾಡಿಕೊಂಡು ಕೃತಾರ್ಥನಾಗಿರುವ, ಕಾಮ-ಅನುರಾಗ ಇತ್ಯಾದಿ ದೋಷಗಳಿಲ್ಲದ, ಶಮದಮಸಂಪನ್ನ, ಮತ್ಸರ, ಲೋಭ (ತೃಷ್ಣೆ), ಆಸೆ, ಮೋಹ ಇತ್ಯಾದಿಗಳು ಇಲ್ಲದವನು ಮತ್ತು ಯಾರ ಚಿತ್ತವು ಗರ್ವ, ಅಹಂಕಾರ ಇತ್ಯಾದಿ ದೋಷಗಳಿಂದ ಅಲಿಪ್ತವಾಗಿದೆಯೋ ಅವನೇ ನಿಜವಾದ ಬ್ರಾಹ್ಮಣನಾಗಿದ್ದಾನೆ ಎಂದು ಶ್ರುತಿ, ಸ್ಮೃತಿ, ಪುರಾಣ ಮತ್ತು ಇತಿಹಾಸದ ಅಭಿಪ್ರಾಯವಾಗಿದೆ. ಇದರ ಹೊರತು ಬೇರೆ ಯಾವುದೇ ರೀತಿ ಬ್ರಾಹ್ಮಣತ್ವವು ಸಿದ್ಧವಾಗುವುದಿಲ್ಲ.’

ಟಿಪ್ಪಣಿ ೧ – ಆರು ಊರ್ಮಿಗಳು : ಬಾಯಾರಿಕೆ-ಹಸಿವು, ದುಃಖ-ಮೋಹ, ವೃದ್ಧಾಪ್ಯ-ಮೃತ್ಯು.

ಟಿಪ್ಪಣಿ ೨ – ಆರು ವಿಕಾರಗಳು : – ಉತ್ಪತ್ತಿ, ವೃದ್ಧಿ, ಸ್ಥಿತಿ, ಪರಿವರ್ತನೆ, ಅವನತಿ, ನಾಶ.

ಪ್ರಸ್ತುತಪಡಿಸಿದವರು – ಅನಂತ ಆಠವಲೆ. ೪.೫.೨೦೨೩

|| ಶ್ರೀಕೃಷ್ಣಾರ್ಪಣಮಸ್ತು ||