ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ಅಖಿಲ ಮನುಕುಲಕ್ಕೆ ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಸಿದ್ಧತೆಯ ಬಗ್ಗೆ ಮಾರ್ಗದರ್ಶನ ಮಾಡುವ ಏಕೈಕ ಪರಾತ್ಪರ ಗುರು ಡಾ. ಜಯಂತ ಆಠವಲೆ

ಸಂಕಲನ : ಪರಾತ್ಪರ ಗುರು ಡಾ. ಜಯಂತ ಆಠವಲೆ

ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಪೂರ್ವತಯಾರಿ

ಆಪತ್ಕಾಲದ ಲೇಖನ ಮಾಲೆಯ ಹಿಂದಿನ ವಾರದಲ್ಲಿ ನಾವು ಕೌಟುಂಬಿಕ ಸ್ತರದಲ್ಲಿ ಬೇಕಾಗುವ ನಿತ್ಯೋಪಯೋಗಿ ವಸ್ತುಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈ ನಾವು ಕೆಲವು ನಿತ್ಯೋಪಯೋಗಿ ವಸ್ತುಗಳ ಪರ್ಯಾಯದ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ. ಲೇಖನ – ೮

೧. ಆಪತ್ಕಾಲದ ದೃಷ್ಟಿಯಿಂದ ಶಾರೀರಿಕ ಸ್ತರದಲ್ಲಿ ಮಾಡಬೇಕಾದ ಸಿದ್ಧತೆಗಳು

೧ ಉ. ವಿವಿಧ ನಿತ್ಯೋಪಯೋಗಿ ವಸ್ತುಗಳ ಪರ್ಯಾಯಗಳ ವಿಚಾರವನ್ನು ಮಾಡಿಟ್ಟುಕೊಳ್ಳುವುದು : ಆಪತ್ಕಾಲದಲ್ಲಿ ಮಾರುಕಟ್ಟೆಯಲ್ಲಿ ಅನೇಕ ನಿತ್ಯೋಪಯೋಗಿ ವಸ್ತುಗಳ ಕೊರತೆಯುಂಟಾಗಬಹುದು ಅಥವಾ ಅವು ದುಬಾರಿಯಾಗಬಹುದು ಅಥವಾ ಅವು ಸಿಗದೇ ಇರಬಹುದು. ಇಂತಹ ಸಮಯದಲ್ಲಿ ಮುಂದಿನ ಪರ್ಯಾಯಗಳು ಉಪಯುಕ್ತವಾಗುವವು. ಇದರಲ್ಲಿನ ಸಾಧ್ಯವಿರುವಷ್ಟು ಪರ್ಯಾಯಗಳನ್ನು ಈಗಿನಿಂದಲೇ ಕೃತಿಯಲ್ಲಿ ತರುವ ಅಭ್ಯಾಸವನ್ನು ಮಾಡಬೇಕು.

೧ ಉ ೧. ಮಾರುಕಟ್ಟೆಯಲ್ಲಿ ದೊರಕುವ ದಂತಮಂಜನ (ಪುಡಿಯ ಸ್ವರೂಪದಲ್ಲಿರುವ) ಮತ್ತು ‘ಟೂತಪೇಸ್ಟ (ದಂತಲೇಪನ) ಇವುಗಳಿಗೆ ಪರ್ಯಾಯ

ಅ. ‘ಕಹಿಬೇವಿನ ಎಳೆ ಕೊಂಬೆಗಳ ಸಾಧಾರಣ ೧೫ ಸೆಂ.ಮೀ. ಉದ್ದದ ತುಂಡುಗಳನ್ನು (ಕಡ್ಡಿಗಳನ್ನು) ಹಲ್ಲುಜ್ಜಲು ಉಪಯೋಗಿಸಬೇಕು.

ಆ. ಅಡುಗೆಗೆ ಉಪಯೋಗಿಸುವ ಉಪ್ಪಿನ ಪುಡಿಯಿಂದ ಹಲ್ಲುಗಳನ್ನು ಉಜ್ಜಬೇಕು.- ಶ್ರೀ. ಅವಿನಾಶ ಜಾಧವ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೧.೫.೨೦೨೦)

ಇ. ‘೧೦ ಭಾಗ ಕಾವಿಮಣ್ಣು ಮತ್ತು ೧ ಭಾಗ ಉಪ್ಪು (ಸೈಂಧವ ಲವಣ ಇದ್ದರೆ ಉತ್ತಮ; ಇಲ್ಲದಿದ್ದರೆ ಹರಳುಪ್ಪನ್ನು ಪುಡಿ ಮಾಡಿ ಉಪಯೋಗಿಸಬಹುದು) ಇದರ ಮಿಶ್ರಣವನ್ನು ದಂತಮಂಜನವೆಂದು ಉಪಯೋಗಿಸಬಹುದು.

ಈ. ಮಾವು, ಸೀಬೆಹಣ್ಣು (ಪೇರಲೆಕಾಯಿ), ಕಹಿಬೇವು, ಎಕ್ಕೆ, ಆಲ, ಜಾಲಿ, ಹೊಂಗೆ ಮತ್ತು ಹೊಳೆಮತ್ತಿ ಇವುಗಳಲ್ಲಿ ಉಪಲಬ್ಧವಾಗುವಷ್ಟು ಗಿಡಗಳ ಒಣಗಿದ ಎಲೆಗಳನ್ನು ಅಥವಾ ಒಣಗಿದ ಚಿಕ್ಕ ಕೊಂಬೆಗಳನ್ನು ಸುಟ್ಟು ಅದರ ಬೂದಿಯನ್ನು ಮಾಡಬೇಕು. ಈ ಬೂದಿಯನ್ನು ಬಟ್ಟೆಯಿಂದ ಸೋಸಿಕೊಂಡು ದಂತಮಂಜನವೆಂದು ಉಪಯೋಗಿಸಬಹುದು. – ಪೂ. ವೈದ್ಯ ವಿನಯ ಭಾವೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೧೨.೨೦೧೯)

ಉ. ‘ಜಾಲಿ ಮರದ ಒಣಗಿದ ಕಾಯಿಗಳನ್ನು ಸುಟ್ಟು ಅದರ ಬೂದಿಯನ್ನು ಬಟ್ಟೆಯಿಂದ ಸೋಸಿಕೊಂಡು ದಂತಮಂಜನವೆಂದು ಉಪಯೋಗಿಸಬೇಕು.

ಊ. ಬೆರಣಿಗಳಿಂದ (ಸೆಗಣಿಯ) ತಯಾರಿಸಿದ ದಂತಮಂಜನ : ದಂತಮಂಜನವನ್ನು ತಯಾರಿಸಲು ಉಪಯೋಗಿಸುವ ಬೆರಣಿಗಳನ್ನು ತಯಾರಿಸುವಾಗ ಅವುಗಳ ಮೇಲೆ  ನೊಣಗಳು ಕುಳಿತು ಸೆಗಣಿಯಲ್ಲಿ ಹುಳುಗಳು ಆಗಬಾರದೆಂದು ಕಹಿಬೇವಿನ ತಾಜಾ ಎಲೆಗಳು ಮತ್ತು ಭತ್ತದ ಹೊಟ್ಟು ಸೆಗಣಿಯಲ್ಲಿ ಕಲಸಿ ತೆಳುವಾದ ಬೆರಣಿಗಳನ್ನು ತಟ್ಟಬೇಕು. ಕಹಿಬೇವಿನ ಎಲೆಗಳಿಂದಾಗಿ ನೊಣಗಳು ಹತ್ತಿರ ಬರುವುದಿಲ್ಲ. ಭತ್ತದ ಹೊಟ್ಟಿನಿಂದ ಬೆರಣಿಗಳು ಬೇಗನೆ ಸುಡಲು ಸಹಾಯವಾಗುತ್ತದೆ. ಬೆರಣಿಗಳನ್ನು ತೆಳ್ಳಗೆ ತಟ್ಟುವುದರಿಂದ ಅವು ಬೇಗನೆ ಒಣಗುತ್ತವೆ. ಈ ರೀತಿಯಿಂದ ಸಿದ್ಧಪಡಿಸಿದ ಬೆರಣಿಗಳ ಚಿಕ್ಕ ರಾಶಿಯನ್ನು ಮಾಡಬೇಕು. ರಾಶಿಯನ್ನು ಮಾಡುವಾಗಲೇ ರಾಶಿಯ ಒಳಗೆ ದೀಪವನ್ನು ಹಚ್ಚಿಡಲು ಬೇಕಾಗುವಷ್ಟು ಸ್ಥಳವನ್ನು ಬಿಡಬೇಕು. ರಾಶಿಯ ಒಳಗೆ ತುಪ್ಪದ ದೀಪವನ್ನು ಹಚ್ಚಿದಾಗ ಬೆರಣಿಗಳು ಹೊತ್ತಿಕೊಂಡು ಉರಿಯುತ್ತವೆ. ಕೆಲವು ಬೆರಣಿಗಳು ಉರಿಯತೊಡಗಿದ ಬಳಿಕ ತುಪ್ಪದ ದೀಪವನ್ನು ಹೊರಗೆ ತೆಗೆಯಬೇಕು. ಬೆರಣಿಗಳ ರಾಶಿಯು ಸಂಪೂರ್ಣ ಸುಟ್ಟ ಬಳಿಕ ಕೆಂಪಗೆ ಕಾಣಿಸತೊಡಗುತ್ತದೆ. ಆ ರಾಶಿ ಸಂಪೂರ್ಣವಾಗಿ ಸುಟ್ಟಿರುವುದನ್ನು ದೃಢಪಡಿಸಿಕೊಂಡು ಅದು ಸುಡುತ್ತಿರುವಾಗಲೇ ಸಂಪೂರ್ಣ ಮುಚ್ಚುವಂತೆ, ಒಂದು ದೊಡ್ಡ ಪಾತೇಲಿಯನ್ನು (ಅಥವಾ ಕಬ್ಬಿಣದ ಬುಟ್ಟಿಯನ್ನು) ಅದರ ಮೇಲೆ ಡಬ್ಬು ಹಾಕಬೇಕು. ಮುಚ್ಚಿರುವ ಪಾತ್ರೆಯ ಭೂಮಿಗೆ ತಾಗಿರುವ ಭಾಗವನ್ನು ಮಣ್ಣಿನಿಂದ ಮುಚ್ಚಬೇಕು (ಕೆಲವು ಕಡೆಗಳಲ್ಲಿ ಒಂದು ಚಿಕ್ಕ ತಗ್ಗನ್ನು ತೆಗೆದು ಅದರಲ್ಲಿ ಬೆರಣಿಗಳನ್ನು ಸುಡಲು ಇಡುತ್ತಾರೆ. ಅವು ಸುಟ್ಟು ಕೆಂಪಗಾದ ಬಳಿಕ ಅದರ ಮೇಲೆ ತಗಡನ್ನು ಮುಚ್ಚುತ್ತಾರೆ. ತಗಡಿನ ಭೂಮಿಗೆ ತಾಗಿದ ಭಾಗವನ್ನು ಮಣ್ಣಿನಿಂದ ಮುಚ್ಚುತ್ತಾರೆ.) ಇದರಿಂದ ಪಾತ್ರೆಯ ಒಳಗೆ ಸುಡುತ್ತಿರುವ ಬೆರಣಿಗಳಿಗೆ ಗಾಳಿಯಿಂದ ಪ್ರಾಣವಾಯು ಸಿಗದಿರುವುದರಿಂದ ಅವು ಆರುತ್ತವೆ. ಮರುದಿನ ಆ ಪಾತ್ರೆಯನ್ನು ಪಕ್ಕಕ್ಕೆ ಸರಿಸಿ ಒಳಗಿನ ಬೆರಣಿಗಳ ಇದ್ದಿಲುಗಳನ್ನು ಪುಡಿ ಮಾಡಿ ಬಟ್ಟೆಯಿಂದ ಸೋಸಬೇಕು.

ಬೆರಣಿಗಳ ಇದ್ದಿಲನ್ನು ಬಟ್ಟೆಯಿಂದ ಸೋಸಿದ ಪುಡಿ ೧೦ ಬಟ್ಟಲುಗಳಷ್ಟು ಇದ್ದರೆ ಅದರಲ್ಲಿ ೫ ಚಹಾ ಚಮಚಯಷ್ಟು (ಟೀಸ್ಪೂನ್) ಸೈಂಧವ ಲವಣ ಮತ್ತು ಅರ್ಧ ಚಮಚಯಷ್ಟು ಸ್ಪಟಿಕ ಪುಡಿಯನ್ನು ಹಾಕಿ ಆ ಮಿಶ್ರಣವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ದಂತಮಂಜನವೆಂದು ಉಪಯೋಗಿಸಬೇಕು. – ಶ್ರೀ. ಅವಿನಾಶ ಜಾಧವ (೨೧.೫.೨೦೨೦)

ಎ. ‘ಭತ್ತದ ಹೊಟ್ಟಿನ ರಾಶಿಯನ್ನು ಮಾಡಿ ಅದರ ಮೇಲೆ ಕೆಂಡಗಳನ್ನು ಇಡಬೇಕು. ಇದರಿಂದ ಹೊಟ್ಟು ಸುಡುತ್ತದೆ. ಈ ರಾಶಿ ಸಂಪೂರ್ಣ ಸುಟ್ಟ ಬಳಿಕ ಅದು ಬೂದಿಯಾಗುತ್ತದೆ. ತಣ್ಣಗಾದ ಬೂದಿಯನ್ನು ಬಟ್ಟೆಯಿಂದ ಸೋಸಿಕೊಳ್ಳಬೇಕು. (ಈ ರಾಶಿಯ ಹೊರಗಿನ ಕೆಲವು ಭಾಗ ಸುಡುವುದರಿಂದ ಕೇವಲ ಕಪ್ಪಗಾಗುತ್ತದೆ; ಆದರೆ ಅದರ ಬೂದಿಯಾಗುವುದಿಲ್ಲ. ಆ ಕಪ್ಪಗಾಗಿರುವ ಭಾಗವನ್ನು ಕೈಯಿಂದ ಸಾವಕಾಶ ಬದಿಗೆ ಸರಿಸಿ ಒಳಗಿನ ಬೂದಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.) ಈ ಬೂದಿಯನ್ನು ದಂತಮಂಜನವೆಂದು ಉಪಯೋಗಿಸಬಹುದು – ಪೂ. ವೈದ್ಯ ವಿನಯ ಭಾವೆ (೧೦.೧೨.೨೦೧೯)

ಎ. ‘ತೆಂಗಿನ ಚಿಪ್ಪುಗಳು ಅಥವಾ ಬದಾಮಗಳ ಮೇಲಿನ ಸೊಟ್ಟೆಗಳನ್ನು ಸುಟ್ಟಾಗ ತಯಾರಾಗುವ ಇದ್ದಿಲುಗಳನ್ನು ವಸ್ತ್ರದಲ್ಲಿ ಸೋಸಿ ಮಾಡಿರುವ ಪುಡಿಯನ್ನು ದಂತ ಮಂಜನವೆಂದು ಉಪಯೋಗಿಸಬೇಕು – ಶ್ರೀ.  ಅವಿನಾಶ ಜಾಧವ (೨೧.೫.೨೦೨೦)

ಮೇಲಿನ  ಉಪಅಂಶ ‘ಇ ದಿಂದ ಎಲ್ಲ ದಂತಮಂಜನಗಳನ್ನು ಪ್ಲಾಸ್ಟಿಕನ ಚೀಲದಲ್ಲಿ ಅಥವಾ ಚಿಕ್ಕ ಡಬ್ಬಿಯಲ್ಲಿ ಗಾಳಿಯಾಡದಂತೆ ಇಟ್ಟರೆ ಸಾಧಾರಣ ವರ್ಷವಿಡೀ ಬಾಳಿಕೆ ಬರುತ್ತದೆ.

೧ ಊ ೨. ಗಡ್ಡದ ಕ್ಷೌರಕ್ಕಾಗಿ ಬೇಕಾಗುವ ಸಾಬೂನು ಮತ್ತು ಲೇಪನ (ಶೇವಿಂಗ ಕ್ರೀಮ್) ಇವುಗಳಿಗೆ ಪರ್ಯಾಯ

ಅ. ‘ಕೆನ್ನೆಗಳಿಗೆ ಉಗುರು ಬೆಚ್ಚಗಿನ ನೀರನ್ನು ಉಜ್ಜಿ ಗಡ್ಡವನ್ನು ಮಾಡಿಕೊಳ್ಳಬಹುದು ಅಥವಾ ಬಿಸಿನೀರಿನಿಂದ ಸ್ನಾನ ಮಾಡಿದ ಬಳಿಕ ಕೂಡಲೇ ಗಡ್ಡವನ್ನು ಮಾಡಿಕೊಳ್ಳಬಹುದು.

ಆ. ಕೆನ್ನೆಗಳಿಗೆ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಹಚ್ಚಿ ಗಡ್ಡ ಮಾಡಿಕೊಳ್ಳಬಹುದು. ಮೇಲಿನ ಪರ್ಯಾಯಗಳಿಂದ ಸಾಧಾರಣ (ನಯವಾದ ಗಡ್ಡ ಅಲ್ಲ) ಗಡ್ಡವಾಗುತ್ತದೆ. ಈ ಪರ್ಯಾಯಗಳಿಂದ ಗಡ್ಡವನ್ನು ಮಾಡಿಕೊಳ್ಳುವಾಗ ತೊಂದರೆಯಾದರೆ ಈ ಪರ್ಯಾಯಗಳನ್ನು ಉಪಯೋಗಿಸಬಾರದು. – ಪೂ. ವೈದ್ಯ ವಿನಯ ಭಾವೆ (೧೦.೧೨.೨೦೧೯)

೧ ಊ ೩. ಮೈಸಾಬೂನಿಗೆ ಪರ್ಯಾಯ : ‘ಸ್ನಾನಕ್ಕಾಗಿ ಸಾಬೂನು ಇಲ್ಲದಿದ್ದರೆ ಕಡಲೆಹಿಟ್ಟು ಅಥವಾ ಚನ್ನಂಗಿ ಬೇಳೆಯ ಹಿಟ್ಟು, ಮುಲ್ತಾನಿ ಮಣ್ಣು, ಹುತ್ತದ ಮಣ್ಣು ಅಥವಾ ಒಳ್ಳೆಯ ಸ್ಥಳದ ಸೋಸಿದ ಯಾವುದೇ ಸ್ವಚ್ಛ ಮಣ್ಣನ್ನು (ಉದಾ. ಕಪ್ಪು ಮಣ್ಣು, ಕೆಂಪು ಮಣ್ಣು) ಉಪಯೋಗಿಸಬೇಕು. ಈ ವಸ್ತುಗಳನ್ನು ಮೊದಲು ಸ್ವಲ್ಪ ನೀರಿನಲ್ಲಿ ನೆನೆಸಿ ಬಳಿಕ ಉಟಣೆಯನ್ನು ಉಪಯೋಗಿಸುವಂತೆ ಉಪಯೋಗಿಸಬೇಕು. (ಕೆಲವೊಂದು ಸಲ ಹುತ್ತದ ಸ್ಥಳದಲ್ಲಿ ಸ್ಥಾನದೇವತೆಯ ವಾಸ್ತವ್ಯವಿರುತ್ತದೆ. ಆದುದರಿಂದ ಅಕ್ಕಪಕ್ಕದ ಜನರನ್ನು ವಿಚಾರಿಸಿ ‘ದೇವತೆಯ ಹುತ್ತ ಅಲ್ಲವಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಒಂದು ಉದ್ದನೆಯ ಕೋಲಿನಿಂದ ಹುತ್ತವನ್ನು ಒಡೆಯಬೇಕು ಮತ್ತು ಅದರ ಹೆಂಟೆಗಳನ್ನು (ಮಣ್ಣಿನ ಗಟ್ಟಿಯಾದ ತುಂಡುಗಳು) ಒಂದೆಡೆ ಸೇರಿಸಬೇಕು. ಆ ಹೆಂಟೆಗಳನ್ನು ಕುಟ್ಟಿ ಸಣ್ಣದಾಗಿ ಪುಡಿ ಮಾಡಿ ಆ ಮಣ್ಣನ್ನು ಸಣ್ಣ ಸಾಣಿಗೆಯಿಂದ ಸೋಸಿಕೊಳ್ಳಬೇಕು.)

ಮೇಲಿನವುಗಳಲ್ಲಿ ಯಾವುದೇ ವಸ್ತುಗಳು ಉಪಲಬ್ಧವಿಲ್ಲದಿದ್ದಲ್ಲಿ ಸ್ನಾನ ಮಾಡುವಾಗ ಕೇವಲ ಕೈಯಿಂದ ಮೈಯನ್ನು ತಿಕ್ಕಿಕೊಂಡರೂ ಆಗುತ್ತದೆ, – ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ಗೋವಾ (೧೩.೩.೨೦೧೯)

೧ ಊ ೪. ಕೂದಲುಗಳನ್ನು ತೊಳೆಯುವ ಸಾಬೂನು ಮತ್ತು ಮಾರುಕಟ್ಟೆಯಲ್ಲಿ ಸಿಗುವ ದ್ರವಸ್ವರೂಪ ಸಾಬೂನು (ಶ್ಯಾಂಪೂ) ಇವುಗಳಿಗೆ ಪರ್ಯಾಯ

೧ ಊ ೪ ಅ. ಸೀಗೆಕಾಯಿಯ ಪುಡಿಯನ್ನು ಮನೆಯಲ್ಲಿ ತಯಾರಿಸುವುದು : ‘ನೆಲ್ಲಿಕಾಯಿ ಪುಡಿ ೨ ಭಾಗ ಮತ್ತು ಸೀಗೆಕಾಯಿ ಹಾಗೂ ಅಂಟುವಾಳ ಕಾಯಿಪುಡಿ ಪ್ರತಿಯೊಂದು ೧ ಭಾಗದಷ್ಟು ತೆಗೆದುಕೊಂಡು ಎಲ್ಲವುಗಳ ಮಿಶ್ರಣ ಮಾಡಬೇಕು. ಇದರಲ್ಲಿನ ೨ ರಿಂದ ೪ ಚಮಚದಷ್ಟು ಚೂರ್ಣವನ್ನು ರಾತ್ರಿಯಿಡೀ ಕಬ್ಬಿಣದ ಕಾವಲಿಯಲ್ಲಿ ನೆನೆಯಲು ಇಡಬೇಕು. (ಕಬ್ಬಿಣದ ಬಾಣಲಿ ಇಲ್ಲದಿದ್ದರೆ ಈ ಮಿಶ್ರಣವನ್ನು ‘ಸ್ಟೀಲ್ ಪಾತ್ರೆಯಲ್ಲಿ ಹಾಕಿ ಅದರಲ್ಲಿ ಕಬ್ಬಿಣದ ತುಂಡುಗಳನ್ನು, ಉದಾ. ೪-೫ ಕಬ್ಬಿಣದ ಮೊಳೆಗಳನ್ನು ಹಾಕಬೇಕು. ಮರುದಿನ ಈ ಮಿಶ್ರಣವನ್ನು ಉಪಯೋಗಿಸುವ ಮೊದಲು ಮೊಳೆಗಳನ್ನು ತೆಗೆದಿಡಬೇಕು – ಸಂಕಲನಕಾರರು) ನೆಲ್ಲಿಕಾಯಿ ಮತ್ತು ಕಬ್ಬಿಣ ಇವುಗಳ ಸಂಯೋಗವಾಗುವುದರಿಂದ ಅದಕ್ಕೆ ಕಪ್ಪು ಬಣ್ಣ ಬರುತ್ತದೆ. ಇದರಿಂದ ಕೂದಲು ಕಪ್ಪಾಗಲು ಸಹಾಯವಾಗುತ್ತದೆ. ಬೆಳಗ್ಗೆ ಸ್ನಾನದ ಒಂದು ಗಂಟೆ ಮೊದಲು ನೆನಸಿದ ಪುಡಿಯಿಂದ ತಯಾರಿಸಿದ ತೆಳ್ಳನೆಯ ಪೇಸ್ಟನ್ನು ಕೂದಲಿಗೆ ಹಚ್ಚಬೇಕು ಮತ್ತು ಸ್ನಾನದ ಸಮಯದಲ್ಲಿ ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಬೇಕು. ವಾರದಲ್ಲಿ ೧-೨ ಸಲ ಹೀಗೆ ಮಾಡಿದರೆ ಕೂದಲಿನ ಆರೋಗ್ಯ ಚೆನ್ನಾಗಿ ಉಳಿಯುತ್ತದೆ ಮತ್ತು ಕೂದಲು ಕಪ್ಪಗೆ ಹಾಗೂ ಮೃದುವಾಗುತ್ತವೆ. – ವೈದ್ಯೆ (ಸೌ.) ಗಾಯತ್ರಿ ಸಂದೇಶ ಚವ್ವಾಣ, ಕುರ್ಲಾ, ಮುಂಬಯಿ (೨೦.೬.೨೦೨೦)

ಮೇಲಿನ ಪುಡಿಯಲ್ಲಿ ೨ ಭಾಗ ಮೆಂತೆ, ೧ ಭಾಗ ನಾಗರಮೋಥಿ, ೧ ಭಾಗ ಜಟಾಮಾಂಸಿ, ಹಾಗೆಯೇ ಉಪಲಬ್ಧತೆಗನುಸಾರ ದಾಸವಾಳದ ಹೂವು, ಬ್ರಾಹ್ಮೀ ಎಲೆ ಹಾಗೂ ಮೆಕ್ಕೆಯ ಜೋಳದ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಹಾಕಬಹುದು. ನೆಲ್ಲಿಕಾಯಿ, ಸೀಗೆಕಾಯಿ, ನಾಗರಮೋತಿ ಇತ್ಯಾದಿ ವಸ್ತುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅವುಗಳ ಪುಡಿಯನ್ನು ಗಾಳಿಯಾಡದ ಡಬ್ಬಿಯಲ್ಲಿ ತುಂಬಿಟ್ಟರೆ ಸಾಧಾರಣವಾಗಿ ೧ ವರ್ಷದ ವರೆಗೆ ಬಾಳಿಕೆ ಬರುತ್ತವೆ. ಈ ವಸ್ತುಗಳನ್ನು ಪುಡಿ ಮಾಡದೇ ಕಾಯಿಯ ಸ್ವರೂಪದಲ್ಲಿಯೇ ಬಿರು ಬಿಸಿಲಿನಲ್ಲಿ ಸರಿಯಾಗಿ ಒಣಗಿಸಿ ಗಾಳಿಯಾಡದ ಡಬ್ಬಿಯಲ್ಲಿ ಇಟ್ಟರೆ ಸಾಧಾರಣ ೩ ವರ್ಷದ ವರೆಗೆ ಬಾಳಿಕೆ ಬರುತ್ತವೆ. ಗಾಳಿಯಲ್ಲಿರುವ ಆರ್ದ್ರತೆಯಿಂದ ಈ ವಸ್ತುಗಳು ಮೆತ್ತಗಾದರೆ ಅವುಗಳನ್ನು ಪುನಃ ಬಿಸಿಲಿನಲ್ಲಿ ಒಣಗಿಸಿ ಉಪಯೋಗಿಸಬಹುದು. – ವೈದ್ಯ ಮೇಘರಾಜ ಪರಾಡಕರ (೨೦.೬.೨೦೨೦)

೧ ಊ ೪ ಆ. ಅಂಟುವಾಳ ಕಾಯಿ : ಅಂಟುವಾಳ ಕಾಯಿಗಳನ್ನು ಒಣಗಿಸಿಟ್ಟುಕೊಳ್ಳಬೇಕು. ೫-೬ ಅಂಟುವಾಳ ಕಾಯಿಗಳನ್ನು ಬಿಸಿ ನೀರಿನಲ್ಲಿ ರಾತ್ರಿಯಿಡೀ ನೆನೆಯಲು ಇಡಬೇಕು. ಬೆಳಗ್ಗೆ ಸ್ನಾನದ ಸಮಯದಲ್ಲಿ ಆ ನೀರನ್ನು ಕೂದಲಿಗೆ ತಿಕ್ಕಿ ಅದರಿಂದ ಕೂದಲುಗಳನ್ನು ತೊಳೆಯಬೇಕು.

೧ ಊ ೫. ಬಟ್ಟೆ ಒಗೆಯುವ ಸಾಬೂನು ಅಥವಾ ಸಾಬೂನಿನ ಪುಡಿ ಇವುಗಳಿಗೆ ಪರ್ಯಾಯ

೧ ಊ ೫ ಅ ಅಂಟುವಾಳ ಕಾಯಿ : ಅಂಟುವಾಳ ಕಾಯಿಗಳನ್ನು ಬಿರು ಬಿಸಲಿನಲ್ಲಿ ಒಣಗಿಸಬೇಕು. ಕೆಲವು ಸಲ ಅವು ಒಣಗಿದ ಬಳಿಕ ಒಡೆಯುತ್ತವೆ ಮತ್ತು ಅವುಗಳಲ್ಲಿರುವ ಬೀಜಗಳು ತಾನಾಗಿಯೇ ಹೊರಗೆ ಬರುತ್ತವೆ. ಬೀಜಗಳು ತಾನಾಗಿಯೇ ಹೊರಗೆ ಬರದಿದ್ದರೆ ಒಣಗಿದ ಅಂಟುವಾಳ ಕಾಯಿಗಳನ್ನು ಕುಟ್ಟಣಿಗೆಯಲ್ಲಿ (ಖಲಬತ್ತಿನಲ್ಲಿ) ಹಗುರವಾಗಿ ಕುಟ್ಟಿ ಅವುಗಳಲ್ಲಿನ ಬೀಜಗಳನ್ನು ಪಕ್ಕಕ್ಕೆ ತೆಗೆಯಬೇಕು. ಸಿಪ್ಪೆಗಳನ್ನು ಕುಟ್ಟಣಿಗೆಯಲ್ಲಿ ಸಣ್ಣಗೆ ಪುಡಿ ಮಾಡಿ ಅದನ್ನು ಮಿಕ್ಸರ ಅಥವಾ ಬೀಸುವ ಕಲ್ಲಿನಲ್ಲಿ ಪುಡಿ ಮಾಡಬೇಕು. ಈ ಪುಡಿಯನ್ನು ಸಾಬೂನಿನಂತೆ ಉಪಯೋಗಿಸುವಾಗ ಕೇವಲ ಅದು ಒದ್ದೆಯಾಗುವಷ್ಟು ಮಾತ್ರ ನೀರನ್ನು ಅದರ ಮೇಲೆ ಹಾಕಬೇಕು. ಒದ್ದೆಯಾದ ಪುಡಿಯನ್ನು ೨೦ ರಿಂದ ೨೫ ನಿಮಿಷಗಳವರೆಗೆ ಹಾಗೆಯೇ ಪಾತ್ರೆಯಲ್ಲಿ ಇಡಬೇಕು. ತದನಂತರ ಅದನ್ನು ಸಾಬೂನಿನಂತೆ ಹಸಿ ಬಟ್ಟೆಗಳ ಮೇಲೆ ತಿಕ್ಕಿ ಬಟ್ಟೆಗಳನ್ನು ಒಗೆಯಲು ಉಪಯೋಗಿಸಬೇಕು.

೧ ಊ ೫ ಆ. ಕಪ್ಪು ಮಣ್ಣು : ಈ ಮಣ್ಣಿನಿಂದ ಬಟ್ಟೆಗಳನ್ನು ತೊಳೆಯುವಾಗ ಅದನ್ನು ಸಾಬೂನಿನಂತೆ ಹಸಿ ಬಟ್ಟೆಗಳ ಮೇಲೆ ತಿಕ್ಕಬೇಕು ಮತ್ತು ಆ ಬಟ್ಟೆಗಳನ್ನು ಹರಿಯುವ ನೀರಿನಲ್ಲಿ ತೊಳೆಯಬೇಕು (ಬಟ್ಟೆಗಳನ್ನು ತೊಳೆಯಲು ಕೆಂಪು ಮಣ್ಣನ್ನು ಉಪಯೋಗಿಸಬಾರದು; ಏಕೆಂದರೆ ಬಟ್ಟೆಗಳ ಮೇಲೆ ಅದರ ಕಲೆಗಳು ಬೀಳುತ್ತವೆ) – ಶ್ರೀ. ಅವಿನಾಶ ಜಾಧವ (ಮೇ ೨೦೨೦)

೧ ಊ ೫ ಇ. ಬಾಳೆಯ ಎಲೆಗಳ ದಿಂಡುಗಳ ಬೂದಿ : ‘ಬಾಳೆಯ ಎಲೆಗಳ ದಿಂಡುಗಳನ್ನು ಒಣಗಿಸಬೇಕು. ತದನಂತರ ಅವುಗಳನ್ನು ಸುಟ್ಟು ಅವುಗಳ ಬೂದಿಯನ್ನು ತಯಾರಿಸಬೇಕು. ಈ ಬೂದಿಯಲ್ಲಿ ಕ್ಷಾರವಿರುವುದರಿಂದ ಆ ಬೂದಿಯನ್ನು ಸಾಬೂನಿನಂತೆ ಹಸಿ ಬಟ್ಟೆಗಳ ಮೇಲೆ ತಿಕ್ಕಿ ಬಟ್ಟೆಗಳನ್ನು ತೊಳೆಯಬಹುದು. (ಆಧಾರ ಗ್ರಂಥ:  ‘ವ್ಯಾಪಾರೋಪಯೋಗಿ ವನಸ್ಪತಿವರ್ಣನ(ಭಾಗ ೧) ಲೇಖಕರು-ಗಣೇಶ ರಂಗನಾಥ ದಿಘೆ, ೧೯೧೩ ನೇ ಇಸವಿ)

೧ ಊ ೬. ಪಾತ್ರೆಗಳನ್ನು ತೊಳೆಯುವ ಸಾಬೂನು, ಸಾಬೂನಿನ ಪುಡಿ ಇತ್ಯಾಗಳಿಗೆ ಪರ್ಯಾಯ

೧ ಊ ೬ ಅ. ಒಲೆಯ ಬೂದಿ : ‘ಒಲೆಯಲ್ಲಿನ ಬೂದಿಯನ್ನು ಹೊರಗೆ ತೆಗೆದು ಅದು ತಣ್ಣಗಾದ ಬಳಿಕ ಅದನ್ನು ಉಪಯೋಗವನ್ನು ಪಾತ್ರೆಗಳನ್ನು ಉಜ್ಜಲು (ತಿಕ್ಕಲು) ಉಪಯೋಗಿಸಬೇಕು.

೧ ಊ ೬ ಆ. ಮಣ್ಣು : ಬೂದಿ ಉಪಲಬ್ಧವಿಲ್ಲದಿದ್ದರೆ ಯಾವುದೇ ಮಣ್ಣಿನಿಂದ (ಉದಾ. ಕಪ್ಪು ಮಣ್ಣಿನಿಂದ, ಕೆಂಪು ಮಣ್ಣಿನಿಂದ) ಪಾತ್ರೆಗಳನ್ನು ತೊಳೆಯಬೇಕು. ಮಣ್ಣಿನಲ್ಲಿ ಕಲ್ಲುಗಳಿದ್ದರೆ ಪಾತ್ರೆಗಳಿಗೆ ಗೆರೆ ಬೀಳಬಹುದು. ಆದುದರಿಂದ ಪಾತ್ರೆಗಳನ್ನು ತೊಳೆಯುವ ಮಣ್ಣನ್ನು ಸೋಸಿಟ್ಟುಕೊಳ್ಳಬೇಕು.)

೧ ಊ ೭. ಕೈಗಳನ್ನು ತೊಳೆಯಲು ಬೇಕಾಗುವ ಸಾಬೂನು ಅಥವಾ ದ್ರವರೂಪ ಸಾಬೂನುಗಳಿಗೆ ಪರ್ಯಾಯ

೧ ಊ ೭ ಅ. ಒಲೆಯ ಬೂದಿ : ಒಲೆಯಲ್ಲಿನ ತಣ್ಣಗಾದ ಬೂದಿಯನ್ನು ಕೈಗಳಿಗೆ ಹಚ್ಚಿಕೊಂಡು ಕೈಗಳನ್ನು ತೊಳೆದುಕೊಳ್ಳಬೇಕು

೧ ಊ ೭ ಆ ಮಣ್ಣು : ಯಾವುದೇ ಪ್ರಕಾರದ ಮಣ್ಣನ್ನು ಕೈಗಳಿಗೆ ಹಚ್ಚಿ ಕೈಗಳನ್ನು ತೊಳೆದುಕೊಳ್ಳಬೇಕು.

– ಶ್ರೀ. ಅವಿನಾಶ ಜಾಧವ (ಮೇ ೨೦೨೦)

೧ ಊ ೮. ಕಡ್ಡಿ ಪೆಟ್ಟಿಗೆ ಅಥವಾ ಲೈಟರ್ ಇವುಗಳಿಗೆ ಪರ್ಯಾಯ :

೧ ಊ ೮ ಅ. ಸೂರ್ಯಪ್ರಕಾಶವಿರುವಾಗ ಅಗ್ನಿಯನ್ನು ಪ್ರಜ್ವಲಿಸಲು ಹೊರಬದಿಗೆ ಉಬ್ಬಿದ ಭೂತಗನ್ನಡಿಯನ್ನು (Convex lens ಅಥವಾ  Magnifying lens) ಉಪಯೋಗಿಸಬಹುದು. ಈ ಭೂತಗನ್ನಡಿ ಪ್ರಯೋಗಶಾಲೆಯ ವಸ್ತುಗಳು ದೊರೆಯುವ ಅಂಗಡಿಗಳಲ್ಲಿ ಸಿಗುತ್ತದೆ. ಈ ಭೂತಗನ್ನಡಿಯಲ್ಲಿ ಕೇಂದ್ರೀಕೃತಗೊಳ್ಳುವ ಸೂರ್ಯಕಿರಣಗಳು ಹತ್ತಿ, ತೆಂಗಿನ ನಾರು, ಒಣಗಿದ ಹುಲ್ಲು, ಒಣಗಿದ ಎಲೆಗಳು ಅಥವಾ ಕಾಗದದ ಮಡಿಕೆಗಳ ಮೇಲೆ ಸಾಧಾರಣವಾಗಿ ೧ ರಿಂದ ೫ ನಿಮಿಷ (ಈ ಕಾಲಾವಧಿಯು ಸೂರ್ಯಕಿರಣಗಳ ತೀವ್ರತೆಯನ್ನು ಅವಲಂಬಿಸಿರುತ್ತದೆ) ಸ್ಥಿರಗೊಳಿಸಿದರೆ ಅಗ್ನಿ ಪ್ರಜ್ವಲಿಸಿ ಹೊಗೆಬರಲು ಪ್ರಾರಂಭವಾಗುತ್ತದೆ.

೧ ಊ ೮ ಆ. ಒಲೆಯಲ್ಲಿನ ಬೆಂಕಿಯನ್ನು ಆರದಂತೆ ಇಟ್ಟುಕೊಳ್ಳುವುದು

೧. ‘ಒಲೆಯ ಮೇಲಿನ ಅಡುಗೆ ಇತ್ಯಾದಿ ಆದ ಬಳಿಕ ಒಲೆಯ ಕೆಂಡಗಳ ಮೇಲೆ ಸ್ವಲ್ಪ ಬೂದಿಯನ್ನು ಹಾಕಬೇಕು. ಇದರಿಂದ ಒಲೆಯಲ್ಲಿನ ಕೆಂಡಗಳು ಸಂಪೂರ್ಣವಾಗಿ ಆರಿಹೋಗದೇ ಹಾಗೆಯೇ ಇರುತ್ತವೆ. ಆ ಕೆಂಡಗಳ ಮೇಲೆ ೩-೪ ಗಂಟೆಗಳ ಬಳಿಕ ಕಾಗದ ಅಥವಾ ಒಣಗಿದ ಎಲೆಗಳನ್ನು ಹಾಕಿ ಊದುಗೋಲಿಯಿಂದ ಊದಿ ಅಗ್ನಿಯನ್ನು ಪುನಃ ಪ್ರಜ್ವಲಿಸಬೇಕು – ಶ್ರೀ. ಅವಿನಾಶ ಜಾಧವ (ಮೇ ೨೦೨೦)

೨. ‘ಎರಡು ಒಲೆಗಳನ್ನು ತಯಾರಿಸಬೇಕು. ಒಲೆಗಳ ಕೆಳಗಿನ ಭೂಮಿಯಲ್ಲಿ ಒಂದೊಂದು ಚಿಕ್ಕ ಗುಂಡಿಯನ್ನು ತೋಡಬೇಕು. ಒಂದು ಒಲೆಯ ಗುಂಡಿಯಲ್ಲಿ ಒಂದು ಸೆಗಣಿಯ ಮುದ್ದೆಯನ್ನು ಇಡಬೇಕು. ಅದರ ಮೇಲೆ ಬೂದಿಯನ್ನು ಹಾಕಬೇಕು ಮತ್ತು ಆ ಒಲೆಯಲ್ಲಿ ಎಂದಿನಂತೆ ಅಗ್ನಿಯನ್ನು ಪ್ರಜ್ವಲಿಸಬೇಕು. ಭೂಮಿಯಲ್ಲಿನ ಮಣ್ಣು ಸೆಗಣಿಯ ಮುದ್ದೆಯಲ್ಲಿನ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಒಲೆಯಲ್ಲಿನ ಅಗ್ನಿಯಿಂದ ಆ ಮುದ್ದೆ ಒಳಗಿಂದೊಳಗೆ ಹೊಗೆಯಾಡುತ್ತಿರುತ್ತದೆ. ಮರುದಿನ ಮತ್ತೊಂದು ಒಲೆಯನ್ನು ಉಪಯೋಗಿಸಬೇಕು. ಆ ಒಲೆಯ ಗುಂಡಿಯಲ್ಲಿಯೂ ಸೆಗಣಿಯ ಮುದ್ದೆಯನ್ನಿಟ್ಟು ಒಲೆಯನ್ನು ದಿನವಿಡೀ ಉಪಯೋಗಿಸಬೇಕು. ಮರುದಿನ ಮೊದಲನೇಯ ಒಲೆಯಲ್ಲಿನ ಸೆಗಣಿಯ ಮುದ್ದೆಯನ್ನು ಚಿಮಟದ ಸಹಾಯದಿಂದ ಗುಂಡಿಯಿಂದ ಹೊರಗೆ ತೆಗೆಯಬೇಕು. ಆ ಮುದ್ದೆಯಲ್ಲಿ ಅಗ್ನಿ ಹೊಗೆಯಾಡುತ್ತಿರುತ್ತದೆ. ಅದರ ಮೇಲೆ ಕಾಗದ ಅಥವಾ ಒಣಗಿದ ಎಲೆಗಳನ್ನು ಹಾಕಿ ಊದುಗೋಲಿನಿಂದ ಊದಿ ಅಗ್ನಿಯನ್ನು ಪ್ರಜ್ವಲಿಸಬೇಕು. ಈ ರೀತಿ ಎರಡೂ ಒಲೆಗಳನ್ನು ಒಂದಾದ ಮೇಲೆ ಒಂದರಂತೆ ಉಪಯೋಗಿಸಬೇಕು – ಶ್ರೀ. ವಿವೇಕ ನಾಫಡೆ, ಸನಾತನ ಆಶ್ರಮ, ದೇವದ, ಪನವೇಲ (ಮೇ ೨೦೨೦)

೧ ಊ ೮ ಇ. ಬೆಣಚುಕಲ್ಲುಗಳ ಸಹಾಯದಿಂದ ಅಗ್ನಿಯನ್ನು ಪ್ರಜ್ವಲಿಸುವುದು : ‘ಲಿಂಬೆಹಣ್ಣಿನ ಆಕಾರದ ೨ ಬೆಣಚುಕಲ್ಲುಗಳನ್ನು ಒಂದರ ಮೇಲೊಂದು ಉಜ್ಜಿ (ತಿಕ್ಕಿ)  ಹತ್ತಿಯ ಮೇಲೆ ಅದರ ಕಿಡಿಗಳನ್ನು ಬೀಳಿಸಬೇಕು. ಇದರಿಂದ ಹತ್ತಿ ಕೂಡಲೇ ಉರಿಯುತ್ತದೆ – ಶ್ರೀ. ಕೊಂಡಿಬಾ ಜಾಧವ, ಸನಾತನ ಆಶ್ರಮ, ರಾಮನಾಥಿ, ಗೋವಾ (೭.೧.೨೦೧೯)

೧ ಊ ೯. ಉಪ್ಪಿಗೆ ಪರ್ಯಾಯ : ‘ಬಾಳೆ ಎಲೆಗಳ ಒಣಗಿದ ದಿಂಡುಗಳನ್ನು ಸುಟ್ಟು ತಯಾರಿಸಿದ ಬೂದಿಯಲ್ಲಿ ಕ್ಷಾರವಿರುತ್ತದೆ. ಬಂಗಾಲದಲ್ಲಿ ಬಹಳಷ್ಟು ಬಡಜನರು ಉಪ್ಪಿಗೆ ಪರ್ಯಾಯವೆಂದು ಆ ಬೂದಿಯನ್ನೇ ಉಪಯೋಗಿಸುತ್ತಾರೆ. (ಆಧಾರ ಗ್ರಂಥ: ‘ವ್ಯಾಪಾರೋಪಯೋಗಿ ವನಸ್ಪತಿವರ್ಣನ (ಭಾಗ ೧) ಲೇಖಕರು – ಗಣೇಶ ರಂಗನಾಥ ದಿಘೆ, ೧೯೧೩ನೇ ಇಸವಿ)

೧ ಊ ೧೦. ಊಟದ ತಟ್ಟೆ ಮತ್ತು ಬಟ್ಟಲುಗಳಿಗೆ ಪರ್ಯಾಯ : ಊಟಕ್ಕಾಗಿ ಬಾಳೆಯ / ಕಾಡು ಬಾಳೆಯ ಎಲೆಗಳನ್ನು ಉಪಯೋಗಿಸಬೇಕು. ಹಾಗೆಯೇ ಆಲದ ಎಲೆಗಳಿಂದ ತಯಾರಿಸಿದ ಪತ್ರಾವಳಿ ಮತ್ತು ದೊನ್ನೆಗಳನ್ನು ಉಪಯೋಗಿಸಬೇಕು.

೧ ಊ ೧೧. ಸೊಳ್ಳೆಗಳನ್ನು ಓಡಿಸುವ ಮಾರುಕಟ್ಟೆಯಲ್ಲಿನ ಊದುಬತ್ತಿ, ದ್ರಾವಣ (ಲಿಕ್ವಿಡ್) ಇತ್ಯಾದಿಗಳಿಗೆ ಪರ್ಯಾಯ

೧ ಊ ೧೧ ಅ. ‘ಸೊಳ್ಳೆಗಳನ್ನು ಓಡಿಸುವ ಕಡ್ಡಿಗಳನ್ನು ಮನೆಯಲ್ಲಿ ತಯಾರಿಸುವುದು : ‘ ಸುಮಾರು ೧ ಕಿಲೋದಷ್ಟು ತಾಜಾ ಆಕಳ ಸೆಗಣಿಯನ್ನು ತೆಗೆದುಕೊಳ್ಳಬೇಕು. ಸುಮಾರು ೧ ಮುಷ್ಟಿಯಷ್ಟು ತಮಾಲಪತ್ರಿ (ಒಂದು ರೀತಿಯ ಮಸಾಲೆ ವನಸ್ಪತಿ), ೨ ಮುಷ್ಟಿಯಷ್ಟು ಕಹಿಬೇವಿನ ಎಲೆಗಳು, ಅರ್ಧಮುಷ್ಟಿಯಷ್ಟು ಪುದೀನಾ, ಅರ್ಧಮುಷ್ಟಿಯಷ್ಟು ತುಳಸಿಯ ಎಲೆಗಳನ್ನು ಒಟ್ಟಿಗೆ ಮಾಡಿ ಸಣ್ಣಗೆ ಅರೆಕಲ್ಲಿನ ಮೇಲೆ ಅರೆದುಕೊಳ್ಳಬೇಕು. ಈ ಅರೆದ ಮಿಶ್ರಣದಲ್ಲಿ ೨ ಚಹಾ ಚಮಚಾದಷ್ಟು ಕಹಿಬೇವಿನ ಎಣ್ಣೆ ಮತ್ತು ಅರ್ಧ ಚಮಚ ಕರ್ಪೂರದ ಪುಡಿಯನ್ನು  ಹಾಕಿ ಈ ಮಿಶ್ರಣವನ್ನು ಸೆಗಣಿಯಲ್ಲಿ ಸರಿಯಾಗಿ ಕಲಸಿ ಒಂದು ಮಾಡಬೇಕು. ಈ ಮಿಶ್ರಣಕ್ಕೆ ಕೈಯಿಂದ ಧೂಪದ ಕಡ್ಡಿಗಳಂತೆ ಆಕಾರವನ್ನು ನೀಡಿ ಆ ಕಡ್ಡಿಗಳನ್ನು ಒಣಗಿಸಿಟ್ಟುಕೊಳ್ಳಬೇಕು.

೧ ಊ ೧೧ ಆ. ಇತರ ಪರ್ಯಾಯಗಳು

೧ ಕೋಣೆಯಲ್ಲಿರುವ ಸೊಳ್ಳೆಗಳನ್ನು ಓಡಿಸಲು –

ಅ. ‘ಮ್ಯಾಟ್ (ಸೊಳ್ಳೆ ನಿರೋಧಕ ಕಾಗದದ ಚೌಕಾಕಾರ ತುಂಡು)ನ್ನು ಬಿಸಿ ಮಾಡುವ ಯಂತ್ರದಲ್ಲಿ ‘ಮ್ಯಾಟನ ಬದಲು ಬೆಳ್ಳುಳ್ಳಿಯ ಎಸಳುಗಳನ್ನು ಇಟ್ಟು ಯಂತ್ರವನ್ನು ಪ್ರಾರಂಭಿಸಬೇಕು. ಒಂದು ಎಸಳನ್ನು ೧-೨ ದಿನಗಳ ವರೆಗೆ ಉಪಯೋಗಿಸಬಹುದು.

ಆ. ಕಹಿಬೇವಿನ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದರ ಮಿಶ್ರಣವನ್ನು ಮಾಡಿ ಕೋಣೆಯಲ್ಲಿ ಅದರ ದೀಪವನ್ನು ಹಚ್ಚಿಡಬೇಕು.

ಇ. ಕಹಿಬೇವಿನ ಎಲೆಗಳನ್ನು ಕೆಂಡಗಳ ಮೇಲೆ ಹಾಕಿ ಹೊಗೆ ಮಾಡಬೇಕು. ಎಲೆಗಳು ಒಣಗಿದ್ದರೆ, ಅವುಗಳನ್ನು ಸ್ವಲ್ಪ ಹಸಿ ಮಾಡಿಕೊಂಡು ಕೆಂಡಗಳ ಮೇಲೆ ಹಾಕಬೇಕು; ಅಂದರೆ ಅವು ತಕ್ಷಣ ಉರಿಯುವುದಿಲ್ಲ.

ಈ. ಮುಷ್ಟಿಯಷ್ಟು ಕಿತ್ತಳೆ ಹಣ್ಣಿನ ಒಣಗಿದ ಸಿಪ್ಪೆಗಳನ್ನು ಕೆಂಡಗಳ ಮೇಲೆ ಹಾಕಿ ಹೊಗೆ ಮಾಡಬೇಕು.

೨. ಕಹಿಬೇವಿನ ಎಲೆಗಳ ರಸ ಮತ್ತು ಪುದೀನಾ ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅವುಗಳ ಮಿಶ್ರಣವನ್ನು ಶರೀರದ ಬಟ್ಟೆಗಳ ಹೊರಗಿರುವ ಭಾಗಗಳಿಗೆ ಹಚ್ಚಬೇಕು. ಹೀಗೆ ಮಾಡುವುದರಿಂದ ಸೊಳ್ಳೆಗಳು ಹತ್ತಿರ ಬರುವುದಿಲ್ಲ.

೩. ಸೊಳ್ಳೆಗಳ ಪ್ರಮಾಣ ಕಡಿಮೆಯಾಗಲು ಮನೆಯ ಪರಿಸರದಲ್ಲಿ ಚೆಂಡು ಹೂವಿನ ಗಿಡಗಳನ್ನು ನೆಡಬೇಕು.

– ಶ್ರೀ. ಅವಿನಾಶ ಜಾಧವ (೧೬.೬.೨೦೨೦)  (ಮುಂದುವರಿಯುವುದು)

(ಆಧಾರ : ಸನಾತನದ ಮುಂಬರುವ ಗ್ರಂಥ ಮಾಲಿಕೆ ‘ಆಪತ್ಕಾಲದಲ್ಲಿ ಜೀವರಕ್ಷಣೆಗಾಗಿ ಮಾಡಬೇಕಾದ ಪೂರ್ವ ಸಿದ್ಧತೆ)

(ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆಯ ಬಳಿಯಿದೆ.)

(ಈ ಲೇಖನವನ್ನು www.sanatan.org ಈ ಜಾಲತಾಣದಲ್ಲಿ ಓದಿರಿ.)