ಔದ್ಯೋಗೀಕರಣದ ಗಂಭೀರ ದುಷ್ಪರಿಣಾಮಗಳಿಗೆ ಪ್ರಾಚೀನ ಭಾರತೀಯ ಜೀವನಶೈಲಿಯೇ ಉಪಾಯವಾಗಿದೆ !

ಪ್ರತಿಯೊಂದು ವಿಷಯವನ್ನು ಹಣದೊಂದಿಗೆ ಹೋಲಿಸುವುದು ಆರ್ಥಿಕ ತಜ್ಞರೆನಿಸಿಕೊಳ್ಳುವವರ ವೈಶಿಷ್ಟ್ಯವಾಗಿದೆ. ಅರ್ಥವ್ಯವಸ್ಥೆಯ ಕೆಲವು ಸಮರ್ಥಕರು, ಕೊರೋನಾವನ್ನು ಹರಡಲು ಬಿಡಬೇಕು, ಆ ಮೇಲೆ ತಾನಾಗಿಯೇ ಯುವಕರಲ್ಲಿ ‘ಸಮೂಹ ಪ್ರತಿಕಾರಶಕ್ತಿ (ಹರ್ಡ್ ಇಮ್ಮ್ಯುನಿಟಿ) ಉತ್ಪತ್ತಿಯಾಗುತ್ತದೆ ಮತ್ತು ಕೊರೋನಾ ನಿಯಂತ್ರಣಕ್ಕೆ ಬರುತ್ತದೆ ಎಂಬ ಕಲ್ಪನೆ ಯನ್ನು ಮಂಡಿಸಿದ್ದಾರೆ. ಔದ್ಯೋಗೀಕರಣವೆಂದರೆ ನಮ್ಮ ಪ್ರಗತಿ, ಎಂಬುದು ಅತ್ಯಂತ ದೊಡ್ಡ ಮೂಢನಂಬಿಕೆಯಾಗಿದೆ. ಇಂದಿನ ಅರ್ಥಶಾಸ್ತ್ರವು ಯಾವುದೇ ಶಾಶ್ವತ ಅಡಿಪಾಯವಿಲ್ಲದ, ಅಸತ್ಯ, ಅವೈಜ್ಞಾನಿಕ, ತರ್ಕಹೀನ, ಅನೈತಿಕ ಹಾಗೂ ನಿರಾಧಾರ ವಿಷಯ ಮತ್ತು ಸಂಕಲ್ಪನೆ ಯಾಗಿದೆ. ‘ಭಾರತೀಯ ಜೀವನ ಮತ್ತು ಪೃಥ್ವಿರಕ್ಷಣಾ ಚಳುವಳಿಯ ನಿಮಂತ್ರಕರಾದ ವಕೀಲ ಗಿರೀಶ ರಾವುತ್ ಇವರು ಇವೆಲ್ಲ ವಿಷಯಗಳನ್ನು ವಿಶ್ಲೇಷಿಸುವ ಲೇಖನವನ್ನು ಬರೆದಿದ್ದು ಅದನ್ನು ನಾವು ನಮ್ಮ ವಾಚಕರಿಗಾಗಿ ಪ್ರಕಟಿಸುತ್ತಿದ್ದೇವೆ. (ಭಾಗ ೩)

ಭಾರತೀಯರು ಆಂಗ್ಲರನ್ನು ಹೊರದಬ್ಬಿದರೂ ಅವರ ಆಡಳಿತ ಮತ್ತು ಔದ್ಯೋಗೀಕರಣವನ್ನು ಅಂಗೀಕರಿಸಿದರು !

ಭಾರತೀಯ ಸಂಸ್ಕೃತಿಯ ಬಗ್ಗೆ ನಮಗೆ ಅಭಿಮಾನವೆನಿಸುವಂತಹ ವೈಶಿಷ್ಟ್ಯವೇನೆಂದರೆ ಅದು ನಮ್ಮ ಹಳ್ಳಿಗಳ ಮತ್ತು ಕೃಷಿಯ ಸಂಸೃತಿಯಾಗಿತ್ತು. ಅದು ಸಂಯಮ ಮತ್ತು ಸರಳತೆಯನ್ನು ಆಧರಿಸಿತ್ತು. ಈಗಲೂ ರೈತರು, ಆದಿವಾಸಿಗಳು ಮತ್ತು ಮೀನುಗಾರರು ಹಳ್ಳಿಯಲ್ಲಿ ಮತ್ತು ಅರಣ್ಯಗಳಲ್ಲಿ ಮುಕ್ತ ಮತ್ತು ನಿರ್ಭಯವಾಗಿ ಜೀವನವನ್ನು ಜೀವಿಸುತ್ತಿದ್ದಾರೆ. ಅವರು ಪ್ರಾಣಿ ಮತ್ತು ಪಕ್ಷಿಗಳ ಹಾಗೆ ಸ್ವಾತಂತ್ರ್ಯದ ಆನಂದವನ್ನು ಪಡೆಯುತ್ತಿದ್ದಾರೆ. ಮ. ಗಾಂಧಿ ಇವರು ‘ಹಿಂದ್ ಸ್ವರಾಜ್ಯ ಪುಸ್ತಕದಲ್ಲಿ ೧೧೨ ವರ್ಷಗಳ ಹಿಂದೆ ಹೀಗೆ ಹೇಳಿದ್ದಾರೆ, ‘ಉಗಿಬಂಡಿಯ ಹೊಗೆ ಎಲ್ಲಿ ತಲಪುವುದಿಲ್ಲವೋ, ಅಲ್ಲಿಯೂ ಸ್ವರಾಜ್ಯವಿದೆ. ನಿಮ್ಮ ಕಲ್ಪನೆಗಳನ್ನು ಅವರಿಗೆ ಹೇಳಬೇಡಿರಿ. ಏಕೆಂದರೆ ಅವರು ನಗಬಹುದು. ನಾವು ಆಂಗ್ಲರನ್ನು ಹೊರದಬ್ಬಿದರೂ ದುರ್ಭಾಗ್ಯದಿಂದ ಅವರ ಆಡಳಿತ ಮತ್ತು ಔದ್ಯೋಗೀಕರಣವನ್ನು ಅಂಗೀಕರಿಸಿದೆವು.

೧೫. ಕೊರೋನಾ ಮತ್ತು ಇತರ ವಿಷಾಣುಗಳಿಂದ ಬರುವ ಕಾಯಿಲೆಗಳು ಮತ್ತು ಅವುಗಳಿಗೆ ಇರುವ ಔದ್ಯೋಗೀಕರಣದ ಸಂಬಂಧ !

ಇಲ್ಲಿ ಕೇವಲ ಕೊರೋನಾದ ಸಮಸ್ಯೆಯಲ್ಲ, ಅರ್ಬುದರೋಗ (ಕ್ಯಾನ್ಸರ್) ಮತ್ತು ತಾಪಮಾನ ಹೆಚ್ಚಳ ಸಮಸ್ಯೆ ಇದೆ. ೧೨ ಸಪ್ಟೆಂಬರ್ ೨೦೧೮ ರಂದು ಪ್ರಸಿದ್ಧವಾಗಿರುವ ವಿಶ್ವ ಆರೋಗ್ಯ ಸಂಘಟನೆಯ ವರದಿಯಲ್ಲಿ, ಸದ್ಯ ಜಗತ್ತಿನಲ್ಲಿ ಬದುಕಿರುವ ಮಾನವ ರಲ್ಲಿ ಪ್ರತಿ ೫ ಜನರಲ್ಲಿ ಒಬ್ಬನಿಗೆ ಅವನ ಜೀವನದಲ್ಲಿ ಅರ್ಬುದರೋಗ ಆಗುವ ಸಾಧ್ಯತೆಯಿದೆ. ೫ ವರ್ಷಗಳಲ್ಲಿ ಈ ಪ್ರಮಾಣವು ‘೩ ಜನರಲ್ಲಿ ಒಬ್ಬ ಹೀಗಾಗಬಹುದು. ಇದರ ಅರ್ಥ ಇಂದಿನ ೭೫೦ ಕೋಟಿ ಜನರಲ್ಲಿ ೧೫೦ ಕೋಟಿ ಜನರು ಹಾಗೂ ೫ ವರ್ಷಗಳ ನಂತರ ೨೫೦ ಕೋಟಿ ಜನರು ತಮ್ಮ ಜೀವಮಾನದಲ್ಲಿ ಅರ್ಬುದರೋಗಕ್ಕೆ ತುತ್ತಾಗುವರು ಎಂದು ಹೇಳಲಾಗಿದೆ. ಕೊರೋನಾ ಮತ್ತು ಇತರ ವಿಷಾಣುಗಳ ಹರಡುವಿಕೆ ಮತ್ತು ಇತರ ಕಾಯಿಲೆಗಳಿಗೆ ಔದ್ಯೋಗೀಕರಣದ ಸಂಬಂಧವಿದೆ; ಆದರೆ ಜೀವನಶೈಲಿಗಾಗಿ ಜೀವನವನ್ನು ಪಣಕ್ಕೊಡ್ಡಲು ಮನುಕುಲವು ಸಿದ್ಧವಾಗಿದೆ. ಇದಕ್ಕೆ ಏನು ಹೇಳಬೇಕು ?

೧೬. ೨೦೧೫ ರಿಂದ ಪೃಥ್ವಿಯ ತಾಪಮಾನದಲ್ಲಿ ಆಗುತ್ತಿರುವ ಮಹಾಸ್ಫೋಟಕ ಹೆಚ್ಚಳ !

ಡಿಸೆಂಬರ್ ೨೦೧೫ ರಲ್ಲಿ ಎಲ್ಲ ೧೯೬ ರಾಷ್ಟ್ರಗಳ ಪ್ರಮುಖರು ಮನುಕುಲವನ್ನು ರಕ್ಷಿಸಲು ಮೊದಲ ಬಾರಿಗೆ ಒಟ್ಟಾಗಿ ಪ್ಯಾರೀಸ್ ಒಪ್ಪಂದ ಮಾಡಿದರು ಅದರಲ್ಲಿ ಪೃಥ್ವಿಯ ಸರಾಸರಿ ತಾಪಮಾನವನ್ನು ೨ ಅಂಶ ಸೆಲ್ಸಿಯಸ್‌ಗಿಂತ ಹೆಚ್ಚಾಗದಂತೆ ನೋಡಿಕೊಳ್ಳಲು ಮಾಡಿದ ಷರತ್ತು ಪ್ರಸಕ್ತ ವರ್ಷದಲ್ಲಿ ಮುಗಿಯುತ್ತದೆ. ೨೦೧೫ ರಿಂದ ಪೃಥ್ವಿಯ ಸರಾಸರಿ ತಾಪಮಾನವು ಪ್ರತಿವರ್ಷ ಒಂದು ಪಂಚಮಾಂಶ ಸೆಲ್ಸಿಯಸ್‌ನಂತೆ ಪೃಥ್ವಿಯ ತಾಪಮಾನದ ಇತಿಹಾಸದಲ್ಲಿಯೇ ಮಹಾವಿಸ್ಫೋಟಕ ಅಭೂತಪೂರ್ವ ಹೆಚ್ಚಳವಾಗುತ್ತಿದೆ. ಜಾಗತಿಕ ಹವಾಮಾನ ಸಂಘಟನೆಯು ಪಶ್ಚಿಮ ಜರ್ಮನಿಯ ಬಾನ್ ನಗರದಲ್ಲಿ ೬ ನವೆಂಬರ ೨೦೧೭ ರಂದು ನಡೆದ ವಿಶ್ವಸಂಸ್ಥೆಯ ವಿಶೇಷ ಸಭೆಯಲ್ಲಿ ತಾಪಮಾನ ಹೆಚ್ಚಳವನ್ನು ತಡೆಗಟ್ಟುವ ಸ್ಥಿತಿಯನ್ನು (Irreversible) ಮೀರಿ ಹೋಗಿದ್ದೇವೆಂದು ಘೋಷಣೆ ಮಾಡಿದೆ. ಇದರ ಅರ್ಥ ಎಷ್ಟು ‘ಕಾರ್ಬನ್ ಡೈಆಕ್ಸೈಡ್ ವಾತಾವರಣದಲ್ಲಿದೆಯೋ, ಅಷ್ಟು ಅದು ತಾಪಮಾನವನ್ನು ಹೆಚ್ಚಿಸುತ್ತಿದ್ದು ಮನುಕುಲ ಮತ್ತು ಜೀವಸೃಷ್ಟಿಗಳನ್ನು ನಾಶ ಮಾಡಲು ಸಾಕಾಗುವಷ್ಟಿದೆ ಮತ್ತು ಅದು ಈಗ ಆರಂಭವಾಗಿದೆ.

೧೭. ಔದ್ಯೋಗೀಕರಣ, ನಗರೀಕರಣ ಮತ್ತು ಅರ್ಥವ್ಯವಸ್ಥೆಯನ್ನು ತಕ್ಷಣ ತಡೆಯುವುದು ಆವಶ್ಯಕ !

ಈಗ ಸ್ವಲ್ಪವೂ ಕಾರ್ಬನ್ ವಾಯು ವಾತಾವರಣದಲ್ಲಿ ಹೋಗದಂತೆ ಮತ್ತು ಹರಿತ್ತು ಸ್ವಲ್ಪವೂ ನಾಶವಾಗದಂತೆ ನೋಡಿಕೊಳ್ಳಬೇಕು. ಮರಗಳು, ಅರಣ್ಯ, ನದಿಗಳು ಮತ್ತು ಸಮುದ್ರದಲ್ಲಿನ ಹರಿತ್ತುಗಳು ರಭಸದಿಂದ ಹೆಚ್ಚಾದರೆ ಮಾತ್ರ ನಾವು ಬದುಕ ಬಹುದು. ಅದಕ್ಕಾಗಿ ತರ್ಕಬದ್ಧವಾದ ವೈಜ್ಞಾನಿಕ ವಿಚಾರವನ್ನು ಮಾಡಿದರೆ, ಮುಂಬರುವ ಸಂಕಟವನ್ನು ತಡೆಗಟ್ಟಲು ನಡೆಯುತ್ತಿರುವ ಔದ್ಯೋಗೀಕರಣ, ನಗರೀಕರಣ ಮತ್ತು ಅರ್ಥವ್ಯವಸ್ಥೆಯನ್ನು ತಕ್ಷಣ ತಡೆಯುವುದು ಅತೀ ಆವಶ್ಯಕವಾಗಿದೆ. ಕೊರೋನಾದಿಂದ ಮರಣ ಕಾಣಿಸಿದಾಗ ನಾವು ಅದನ್ನು ಸ್ವಲ್ಪ ದಿನ ನಿಲ್ಲಿಸಿದೆವು; ಆದರೆ ಅರ್ಬುದರೋಗವು ನಮ್ಮ ಪ್ರಿಯಜನರ ಬಲಿತೆಗೆದುಕೊಳ್ಳುತ್ತಿದೆ ಹಾಗೂ ಮುಂಬರುವ ೩೦ ವರ್ಷಗಳಲ್ಲಿ ಮನುಕುಲ ಮತ್ತು ಜೀವಸೃಷ್ಟಿಯು ಶಾಶ್ವತವಾಗಿ ನಾಶವಾಗಲಿದೆ ಎಂದು  ಹೇಳಿಲ್ಲ.

೧೮. ‘ಪೃಥ್ವಿ ಮತ್ತು ನಿಸರ್ಗವು ಕೋಟಿಗಟ್ಟಲೆ ವರ್ಷಗಳಿಂದ ಮನುಷ್ಯನನ್ನು ಕಾಪಾಡುತ್ತಿದೆ, ಇದು ಯಂತ್ರಯುಗದಲ್ಲಿ ಮುಚ್ಚಿಹೋದ ಸತ್ಯವಾಗಿದೆ

ಕೊರೋನಾ, ಅರ್ಬುದರೋಗ ಮತ್ತು ತಾಪಮಾನ ಹೆಚ್ಚಳ ಇವುಗಳ ಬಗ್ಗೆ ಒಟ್ಟಿಗೆ ವಿಚಾರ ಮಾಡಿದರೆ ಅರಿವಾಗುವುದೇನೆಂದರೆ, ಯಾವುದನ್ನು ನಾವು ವರದಾನವೆಂದು ತಿಳಿದುಕೊಂಡಿದ್ದೇವೆಯೋ, ಆ ತಂತ್ರಜ್ಞಾನ ಮತ್ತು ಅರ್ಥವ್ಯವಸ್ಥೆಯು ದೊಡ್ಡ ಶಾಪವಾಗಿದೆ. ಔದ್ಯೋಗೀಕರಣವು ಜನರನ್ನು ಬದುಕಿಸುವುದಿಲ್ಲ, ಎನ್ನುವ ಸತ್ಯ ಸಂಚಾರಸಾರಿಗೆಯ ನಿಷೇಧದಿಂದ ಬೆಳಕಿಗೆ ಬರುತ್ತಿದೆ, ಇದು ಆರ್ಥಿಕ ಬೆಂಬಲಿಗರಲ್ಲಿ ಭಯ ಉತ್ಪನ್ನ ಮಾಡುತ್ತಿದೆ. ಪೃಥ್ವಿ ಹಾಗೂ ನಿಸರ್ಗವು ಕೋಟಿಗಟ್ಟಲೆ ವರ್ಷಗಳಿಂದ ಯಾವುದೇ ನೌಕರಿಯೆಂಬ ಹೆಸರಿನ ಗುಲಾಮಗಿರಿಯನ್ನು ಮಾಡದೆ ಮನುಷ್ಯನನ್ನು ಕಾಪಾಡುತ್ತಿತ್ತು, ಈ ಸತ್ಯವನ್ನು ಯಂತ್ರಯುಗದಲ್ಲಿ ಅಡಗಿಸಿಡಲಾಗಿದೆ. ಅದು ಬೆಳಕಿಗೆ ಬರಬಾರದೆಂದು; ಸಂಚಾರಸಾರಿಗೆ ನಿಷೇಧವನ್ನು ತೆರೆಯುವ ಪ್ರಯತ್ನ ನಡೆಯುತ್ತಿದೆ. ಇದೊಂದು ಮನೋರೋಗಿಯ ಸ್ಥಿತಿಯಾಗಿದೆ. ವಾಹನಗಳು, ಕಲ್ಲಿದ್ದಲಿನಿಂದ ನಿರ್ಮಿಸುವ ವಿದ್ಯುತ್ ಉತ್ಪಾದನೆ ಮತ್ತು ಸಿಮೆಂಟ್ ನಿರ್ಮಾಣ ಇತ್ಯಾದಿಗಳಿಂದ ಸುಮಾರು ಶೇ. ೯೪ ರಷ್ಟು ಕಲುಷಿತ ವಾಯು ವಾತಾವರಣದೊಳಗೆ ಬಿಡಲಾಗುತ್ತದೆ. ಇವೆಲ್ಲವೂ ಯಂತ್ರಯುಗದಲ್ಲಿನ ಎಲ್ಲ ವಸ್ತುಗಳ ನಿರ್ಮಾಣ ಮತ್ತು ಉಪಯೋಗಕ್ಕೆ ಸಂಬಂಧಿಸಿವೆ. ಆದ್ದರಿಂದ ಕೊರೋನಾ, ಅರ್ಬುದರೋಗ ಮತ್ತು ತಾಪಮಾನ ಹೆಚ್ಚಳದಿಂದ ಮಾನವರನ್ನು ರಕ್ಷಿಸಬೇಕಾಗಿದ್ದರೆ, ಔದ್ಯೋಗೀಕರಣವನ್ನು ತಡೆಯಬೇಕು.

೧೯. ಭಾರತೀಯರಿಗೆ ಬಂದಿರುವ ನಿರ್ವಾಣದ ಕಾಲ !

ಭಾರತೀಯ ತತ್ತ್ವಜ್ಞಾನವೇ ಇದರಿಂದ ರಕ್ಷಿಸಬಲ್ಲದು. ಆದಿಶಂಕರಾಚಾರ್ಯರು ೧೨ ಶತಮಾನಗಳ ಹಿಂದೆ ಕೆನೋಪನಿಷನ ಭಾಷ್ಯದಲ್ಲಿ, ‘ತಂತ್ರಬಲಕ್ಕಿಂತ ಆತ್ಮಬಲ ಶ್ರೇಷ್ಠವಾಗಿದೆ ಎಂದಿದ್ದರು. ನಾವು ತಂತ್ರಜ್ಞಾನದಿಂದ ಸಂಮ್ಮೋಹಿತ ಮತ್ತು ಭ್ರಮಿಷ್ಟ ಅವಸ್ಥೆಗೆ ಹೋಗಿದ್ದೇವೆಯೋ ಅಥವಾ ನಾವು ನಮ್ಮ ಬುದ್ಧಿವಂತ ಪೂರ್ವಜರ ವಂಶದವರಾಗಿದ್ದೇವೆಯೋ ?, ಎಂಬುದನ್ನು ನಿರ್ಧರಿಸುವ ಅಂತಿಮಕಾಲ ಬಂದಿದೆ ಎಂದು ಹೇಳಿದ್ದಾರೆ. ಮ. ಗಾಂಧಿ ‘ಹಿಂದ್ ಸ್ವರಾಜ್ಯ ದಲ್ಲಿ, ಯಂತ್ರಗಳಿಂದ ಯುರೋಪ್ ಹಾಳಾಯಿತು. ಭಾರತ ಯಂತ್ರಗಳನ್ನು ಸ್ವೀಕರಿಸಬಾರದು ಎಂದು ಹೇಳಿದ್ದಾರೆ. ಭಾರತೀಯರ ಪೂರ್ವಜರಿಗೆ ಸ್ವಯಂ ಚಾಲಿತ ಯಂತ್ರಗಳನ್ನು ತಯಾರಿಸಲು ಬರುತ್ತಿರಲಿಲ್ಲ, ಎಂದೇನಿಲ್ಲ; ಆದರೆ ಅವರು ಅದನ್ನು ನಿರಾಕರಿಸಿದರು. ಇದು ಅವರ ಬುದ್ಧಿವಂತಿಕೆಯಾಗಿದೆ. ಅವರು ಕೈ-ಕಾಲುಗಳಿಂದ ಮಾಡುವ ಕೆಲಸಗಳಲ್ಲಿಯೇ ಸುಖಪಟ್ಟರು. ಅವರು ತಮ್ಮ ಮಣ್ಣಿನ ಗುಡಿಸಲಿನಂತಹ ಮನೆಗಳನ್ನು ಹಾಗೆಯೇ ಇಟ್ಟರು. ರಸ್ತೆಗಳ ಅಭಾವ, ಇದು ಭಾರತೀಯರ ಹಿಂದುಳಿಯುವಿಕೆ ಆಗಿರಲಿಲ್ಲ, ಅದು ಬುದ್ಧಿವಂತಿಕೆಯಾಗಿತ್ತು. ಅದರಲ್ಲಿ ಸ್ವಯಂ ಪೂರ್ಣತೆ ಇತ್ತು. ಶೂನ್ಯದ ಸಂಕಲ್ಪನೆ, ದಶಮಾನ ಪದ್ಧತಿ ಮತ್ತು ಇತರ ಅನೇಕ ಶೋಧನೆಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಮಾಡಿರುವ ಭಾರತೀಯರ ಪೂರ್ವಜರಿಗೆ ಸ್ವಯಂಚಾಲಿತ ಯಂತ್ರಗಳನ್ನು ಕಂಡುಹಿಡಿಯಲು ಬರುತ್ತಿತ್ತು; ಆದರೆ ಅವರು ಅದನ್ನು ನಿರಾಕರಿಸಿದರು; ಏಕೆಂದರೆ ಅದರಲ್ಲಿ ಪೃಥ್ವಿಯ ಸ್ಥಿರತೆ, ಮೂಲಭೂತ ಸಂರಚನೆ ಮತ್ತು ಚಟುವಟಿಕೆಗಳು ಮೊಟಕಾಗುವ ಅಪಾಯ ಅವರಿಗೆ ತಿಳಿದಿತ್ತು.

೨೦. ಕೊರೋನಾ ಎಂದರೆ ವಿಕಾಸದಿಂದ ಅಂತ್ಯದ ಕಡೆಗೆ ಹೋಗುತ್ತಿರುವ ಪ್ರಯಾಣವನ್ನು ತಡೆಯುವ ಎಚ್ಚರಿಕೆ !

ಕೊರೋನಾ ವಿಷಾಣುಗಳ ಹರಡುವಿಕೆ, ಅಕಾಲದಲ್ಲಿ ಬೀಳುವ ಆಲಿಕಲ್ಲು, ಬಿರುಗಾಳಿ, ಉಷ್ಣತೆಯ ಅಲೆಗಳು, ಮರುಭೂಮಿಗಳು, ಬತ್ತಿಹೋಗುತ್ತಿರುವ ಭೂಜಲ ಮತ್ತು ಆಹಾರ ಉತ್ಪಾದನೆ ಇತ್ಯಾದಿ ಆಪತ್ತುಗಳಿಗಾಗಿ ನಿಸರ್ಗಕ್ಕೆ ಹಾನಿಯನ್ನುಂಟು ಮಾಡುವ, ನೌಕರಿಗಳನ್ನು ನೀಡುವ, ಉದ್ಯೋಗಗಳನ್ನು ನಡೆಸುವ ಔದ್ಯೋಗೀಕರಣವು ಕಾರಣವಾಗಿದೆ; ಆದರೆ ‘ಇವು ನಿಸರ್ಗ ತಂದಿರುವ ಸಂಕಟಗಳಾಗಿವೆ. ಇದರಿಂದ ನೌಕರಿ ನೀಡುವ ಔದ್ಯೋಗೀಕರಣಕ್ಕೆ ಅಡಚಣೆಯಾಗುತ್ತಿದೆ, ಎಂದು ಭ್ರಮೆಯನ್ನು ಮಾಡಲಾಗುತ್ತದೆ. ಚೀನಾ ಮತ್ತು ಭಾರತದಲ್ಲಿನ ಮುಖಂಡರು, ಕೊರೋನಾ ನಮ್ಮ ವಿಕಾಸದ ಪ್ರಯಾಣವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ನಗಬೇಕೋ, ಅಳಬೇಕೋ ತಿಳಿಯುವುದಿಲ್ಲ. ನಿಜವೇನೆಂದರೆ, ನೀವು ವಿಕಾಸದ ಮಾರ್ಗದಿಂದ ವಿನಾಶದ ಕಡೆಗೆ ಪ್ರಯಾಣಿಸುತ್ತಿದ್ದೀರಿ ಮತ್ತು ಕೊರೋನಾ ಅದನ್ನು ತಡೆಯುವ ಎಚ್ಚರಿಕೆಯನ್ನು ನೀಡುತ್ತಿದೆ. ಭಾರತವನ್ನೇ ನೋಡಿ. ಅವರ (ಆರ್ಥಿಕಬೆಂಬಲಿಗರ) ಭಾಷೆಯಲ್ಲಿ ಮಹಾರಾಷ್ಟ್ರ ಅತೀ ಹೆಚ್ಚು ವಿಕಸಿತವಾಗಿರುವ ರಾಜ್ಯವಾಗಿದೆ ! ಅಂದರೆ ಅತೀ ಹೆಚ್ಚು ಆಣೆಕಟ್ಟುಗಳು ಅಲ್ಲಿಯೇ ಇವೆ ಹಾಗೂ ನೀರಾವರಿಯ ಸಿಂಪಡಣೆಯ ಅತೀ ಹೆಚ್ಚು ಭೂಮಿಯೂ ಅಲ್ಲಿಯೇ ಇದೆ. ರೈತರ ಅತೀ ಹೆಚ್ಚು ಆತ್ಮಹತ್ಯೆಗಳು, ಭೂಜಲದ ಅತೀ ಹೆಚ್ಚು ಕುಸಿತ, ನೀರಿನ ಸಮಸ್ಯೆಯಿಂದ ಪೀಡಿತವಾಗಿರುವ ಊರುಗಳು, ಮರುಭೂಮಿ ಹಾಗೂ ಅತೀ ಹೆಚ್ಚು ಕೊರೋನಾದ ರೋಗಿಗಳು ಮತ್ತು ಮರಣಗಳು ಸಹ ಅಲ್ಲಿಯೇ ಆಗುತ್ತಿವೆ. ಹಾಗಾದರೆ ವಿಕಾಸ ಅಂದರೇನು ? ಇತ್ತೀಚೆಗಷ್ಟೆ ಛತ್ತೀಸಗಡದಲ್ಲಿ ಸಣ್ಣ ಕಲ್ಲಂಗಡಿ ಆಕಾರದ ಹಿಮದ ತುಂಡುಗಳ ಮಳೆಯಾಯಿತು. ಇದಕ್ಕೆ ಆಲಿಕಲ್ಲಿನ ಮಳೆಯೆನ್ನಲಾಗದು.

೨೧. ಇದು ಅಸ್ತಿತ್ವದ ಹೋರಾಟವಾಗಿದೆ, ಇದನ್ನು ಮಾನವನು ಗುರುತಿಸುವುದು ಆವಶ್ಯಕವಾಗಿದೆ !

ಆರ್ಥಿಕ ವೃದ್ಧಿಯೆಂದರೆ ಜೀವನ ನಾಶ ! ಜೀವಸೃಷ್ಟಿಯನ್ನು ಹಣದಂತೆ ಮುದ್ರಿಸಲು ಆಗುವುದಿಲ್ಲ. ನಮ್ಮ ಕೈಯಲ್ಲಿನ ಸಂಚಾರಿವಾಣಿಯಿಂದ ಜೀವ ಸೃಷ್ಟಿ ಮತ್ತು ನಿಸರ್ಗಕ್ಕಾದ ಹಾನಿಯನ್ನು ತುಂಬಿಸಿಕೊಡಲು ಆಗುವುದಿಲ್ಲ. ಜೋಳ, ಭತ್ತ, ಕಡಲೆ, ಮಾವು, ಇವುಗಳ ಒಂದು ಬೀಜದಿಂದ ಸಾವಿರಾರು, ಲಕ್ಷಾವಧಿ ಬೀಜಗಳು ಮುಂದೆ ತಯಾರಾಗುತ್ತಿರುತ್ತವೆ. ಇದರಿಂದ ಭೂಮಿ ಕೋಟಿಗಟ್ಟಲೆ ವರ್ಷಗಳವರೆಗೆ ಫಲವತ್ತಾಗಿರಬಹುದು. ಇದು ನಿಜವಾದ ವಿಕಾಸವಾಗಿದೆ. ಇದನ್ನು ಕೇವಲ ಪೃಥ್ವಿಯೇ ಮಾಡಬಹುದು, ಅರ್ಥವ್ಯವಸ್ಥೆಯಲ್ಲ. ೧೫ – ೨೦ ವರ್ಷಗಳ ಶಿಕ್ಷಣದಿಂದ, ನಮಗೆ ತಿಳಿಯದೇ ಮನಸ್ಸಿನ ರಚನೆಯು ಔದ್ಯೋಗೀಕರಣದ ದಿಕ್ಕಿನತ್ತ ಆಗಿದೆ. ಆದ್ದರಿಂದ ವಿಚಾರಶೈಲಿ ಯಾವುದೇ ಆಗಿರಲಿ, ಮನುಷ್ಯನು ಶಾಕಾಹಾರಿ ಆಗಿದ್ದರೂ ಕಳೆದ ೧೦೦ ವರ್ಷಗಳಲ್ಲಿ ಶೇ. ೬೦ ರಿಂದ ೯೦ ರಷ್ಟು ಜೀವಸೃಷ್ಟಿಯನ್ನು ಕಳೆದುಕೊಂಡಿದ್ದರೂ, ಈ ವಿಧ್ವಂಸಕ ವಿಕಾಸದ ಸಮರ್ಥಕನಾಗುತ್ತಾನೆ. ಇದು ನಮ್ಮ ಮತ್ತು ಮುಂದಿನ ಪೀಳಿಗೆಯ ಅಸ್ತಿತ್ವದ ಹೋರಾಟವಾಗಿದೆ, ಇದನ್ನು ನಾವು ಈಗ ಗುರುತಿಸಬೇಕು. ಇದು ಮಾನವನು ಸ್ವಯಂಚಾಲಿತ ಯಂತ್ರಗಳೊಂದಿಗೆ ತಂದಿರುವ ಕೃತಕ ಜಗತ್ತಿನ ವಿರುದ್ಧದ, ಮನಸ್ಸಿನಲ್ಲಿ ಬರುವ ಪ್ರಲೋಭನೆಗಳ ವಿರುದ್ಧದ, ಪ್ರತಿಷ್ಠೆ, ಸುಖ ಸೌಲಭ್ಯಗಳ, ಆರಾಮ ಈ ಕಲ್ಪನೆಗಳ ವಿರುದ್ಧದ ಅಂತಿಮ ಹೋರಾಟವಾಗಿದೆ.

೨೨. ‘ಮಾನವನು ಪೃಥ್ವಿಯ ಮೇಲೆ ವಾಸಿಸಲು ಅರ್ಹನಲ್ಲ, ಎಂದು ನಿಸರ್ಗ ನಿಷ್ಕರ್ಷಕ್ಕೆ ಬಂದರೆ ಅದರಲ್ಲಿ ಆಶ್ಚರ್ಯವೇನಿದೆ ?

ಜನರು ಟಿ.ವಿ, ದಿನಪತ್ರಿಕೆ ಈ ಮಾಧ್ಯಮಗಳನ್ನು ಅವಲಂಬಿಸಿದ್ದಾರೆ. ಪತ್ರಕರ್ತರನ್ನು ಮುಂಬಯಿ ಸಮೀಪದ ಮಿಠೀ ನದಿಯ ಸಮೀಪ ಕರೆದುಕೊಂಡು ಹೋಗಿ ಔದ್ಯೋಗೀಕರಣದಿಂದ ಹೊರಬೀಳುವ ಕೋಟಿಗಟ್ಟಲೆ ಲೀಟರ್ ರಾಸಾಯನಿಕಗಳು, ಮಾಲಿನ್ಯಗಳು ಮತ್ತು ಮಲಮಿಶ್ರಿತ ನೀರು ಹರಿಯುತ್ತಿರುವುದನ್ನು ತೋರಿಸಲಾಯಿತು. ವಾಂದ್ರೇ-ಕುರ್ಲಾ ಬಡಾವಣೆಯಿಂದಾಗಿ ಮಿಠೀ ನದಿಯು ಹೇಗೆ ಹುಗಿದು ಹೋಗಿದೆ, ಎಂಬುದನ್ನು ತೋರಿಸಲಾಯಿತು. ಭೌತಿಕ ವಿಕಾಸ ಮತ್ತು ಅರ್ಥ ವ್ಯವಸ್ಥೆಯಿಂದ ನದಿಗಳು ಮರಣೋನ್ಮುಖ ಸ್ಥಿತಿಯಲ್ಲಿವೆ, ಎಂಬುದು ಸ್ಪಷ್ಟವಾಗಿ ಕಾಣಿಸಿದರೂ ಪತ್ರಕರ್ತರು, “ನದಿಗಳ ಮಾಲಿನ್ಯದಿಂದಾಗಿ ಅರ್ಥವ್ಯವಸ್ಥೆಯ ಮೇಲೆ ದುಷ್ಪರಿಣಾಮವಾಗುತ್ತಿದೆ, ಇದರಿಂದ ವಿಕಾಸವು ಕುಂಠಿತವಾಗಬಹುದು ಎಂದು ಬರೆಯುತ್ತಾರೆ, ಅಂದರೆ ಅವರ ಅಭಿಪ್ರಾಯದಲ್ಲಿ ಯಾವುದನ್ನು ಕಾಪಾಡಬೇಕು ? ಅರ್ಥವ್ಯವಸ್ಥೆಯನ್ನು, ನದಿಗಳನ್ನಲ್ಲ.

ಕೋಟಿಗಟ್ಟಲೆ ವರ್ಷಗಳಿಂದ ಈ ನದಿಗಳು ಜೀವನದ ಆಧಾರ ಹಾಗೂ ವಾಹಕಗಳಾಗಿವೆ. ಅವು ಜೀವನವನ್ನು ಅರಳಿಸಿವೆ; ಆದರೆ ಮಿಠೀ ನದಿಯಿಂದ ಹಿಡಿದು ಗಂಗಾ-ಯಮುನಾ ನದಿಗಳನ್ನು ನಾಶ ಮಾಡಲಾಗುತ್ತಿದೆ, ಅವುಗಳಲ್ಲಿ ವಿಷ ಮತ್ತು ಕಸಕಡ್ಡಿಗಳನ್ನು ಹಾಕಲಾಗುತ್ತಿದೆ. ಪೃಥ್ವಿಯ ಮೇಲಿನ ಅತೀ ದೊಡ್ಡ ಹಾಗೂ ಅದ್ಭುತ ‘ಅಮೇಝಾನ್ ನದಿಯ ಅರಣ್ಯವನ್ನು ಹಣಕ್ಕಾಗಿ ಸುಡಲಾಗುತ್ತಿದೆ. ನಿಸರ್ಗ ಅಥವಾ ಪೃಥ್ವಿಯು ‘ಮಾನವರು ಪೃಥ್ವಿಯ ಮೇಲೆ ವಾಸಿಸಲು ಅರ್ಹರಿಲ್ಲ, ಎಂಬ ನಿಷ್ಕರ್ಷಕ್ಕೆ ಬಂದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಒಂದು ವಿಷಯ ಮಾತ್ರ ಸತ್ಯವಾಗಿದೆ, ಕೊರೋನಾ ವಿಷಾಣುವು ಉನ್ಮತ್ತನಾಗಿರುವ ಮಾನವನಿಗೆ ನಿಸರ್ಗ ನೀಡಿದ ಅಂತಿಮ ಎಚ್ಚರಿಕೆ ಹಾಗೂ ೨೦೨೦ ಇದು ಕೊನೆಯ ಅವಕಾಶವಾಗಿದೆ. ೧೯೮೦ ರಲ್ಲಿ ಋತುಚಕ್ರ ವಿಫಲವಾಗಿತ್ತು. ೧೯೮೧ ರಲ್ಲಿ ಮಾನವನ ರೋಗನಿರೋಧಕ ಶಕ್ತಿಯನ್ನು ಮುಕ್ತಗೊಳಿಸುವ ಎಚ್.ಐ.ವಿ. ವಿಷಾಣು ಬಂದಿತು. ಲೈಂಗಿಕ ಸ್ವೇಚ್ಛಾಚಾರಕ್ಕೆ ಕಡಿವಾಣ ಬಂದಿತು. ಅಂದಿನಿಂದ ಹೊಸ ಹೊಸ ವಿಷಾಣುಗಳು ಬರುತ್ತಿವೆ. ಈಗ ಅದರ ಮುಂದಿನ ಮೆಟ್ಟಿಲು, ಮಾನವರು ಒಟ್ಟಿಗೆ ಬರಲಾರರು.ಉದ್ಯೋಗ ವ್ಯವಹಾರ ಮಾಡಲಾರರು. ಇದರ ಅರ್ಥ ಸ್ಪಷ್ಟವಾಗಿದೆ, ಮಾನವನು ಮಿತಿಯನ್ನು ದಾಟಿದ್ದಾನೆ. ಅರ್ಥವ್ಯವಸ್ಥೆ, ಔದ್ಯೋಗೀಕರಣ ಹಾಗೂ ನಗರೀಕರಣ ನಿಂತರೆ ಮಾತ್ರ ಅಸ್ತಿತ್ವ ಉಳಿಯುವುದು. ಮಾನವನಿಗೆ ಪೃಥ್ವಿಯ ಮೇಲೆ ಅದರ ವಿರುದ್ಧ ಜೀವಿಸಲು ಸಾಧ್ಯವಿಲ್ಲ, ಅಂದರೆ ಎಲ್ಲ ಪ್ರಾಣಿಮಾತ್ರರ ಹಾಗೆ ‘ಪೃಥ್ವಿಗೆ ಒಪ್ಪಿಗೆಯಿರುವ, ಹಾಗೆ ಜೀವಿಸಿರಿ !

೨೩. ಸಂಚಾರಸಾರಿಗೆಯ ಬಂಧನದಿಂದ ಆಗಿರುವ ಲಾಭ !

ಸಂಚಾರಸಾರಿಗೆಯ ಬಂಧನದಿಂದ ಜೀವನ ಪುನಃ ಅರಳುತ್ತಿದೆ. ಯಾವ ಭೌಗೋಲಿಕ ಕ್ಷೇತ್ರದಲ್ಲಿ ಈಗಲೂ ನೈಸರ್ಗಿಕ ಪರಿಸರ ಉಳಿದುಕೊಂಡಿದೆಯೋ, ಅಲ್ಲಿ ಮೀನುಗಳು ತುಂಬಾ ಚೆನ್ನಾಗಿ ಬೆಳೆಯುತ್ತಿವೆ. ಮುಂಬಯಿ, ದುಬಯಿ, ನ್ಯೂಯಾರ್ಕ್‌ಗಳಿಗೆ ಹಣ್ಣುಗಳನ್ನು ಕಳುಹಿಸದಿರುವುದರಿಂದ ಅವು ಸಂಪೂರ್ಣ ಹಣ್ಣಾಗುತ್ತಿವೆ. ತರಕಾರಿಗಳು ಚೆನ್ನಾಗಿ ಬೆಳೆಯುತ್ತಿವೆ. ಕೆಲವನ್ನು ಮಾರಾಟ ಮಾಡದಿರುವುದರಿಂದ ೪೦ ರಿಂದ ೬೦ ವರ್ಷಗಳ ಹಿಂದಿನ ಹಾಗೆ ರೈತರು, ಮೀನುಗಾರರು ಮತ್ತು ಆದಿವಾಸಿಗಳ ನಡುವೆ ಧಾನ್ಯ, ಮೀನು, ಹಣ್ಣುಗಳು, ಗೆಡ್ಡೆಗೆಣಸು ಇತ್ಯಾದಿಗಳ ಕೊಡುಕೊಳ್ಳುವಿಕೆಯು ಪುನಃ ಆರಂಭವಾಗಿದೆ. ಸಾವಿರಾರು ವರ್ಷಗಳ ಹಿಂದಿನ ನಿಜವಾದ ಜೀವನ ಪದ್ಧತಿಯು ಪುನಃ ಆರಂಭವಾಗಿದೆ. ಮಾನವರು ಪರಸ್ಪರ ಪ್ರೇಮದಿಂದ ವರ್ತಿಸಲು ಆರಂಭಿಸಿದ್ದಾರೆ.

೨೪. ಸಂಚಾರಸಾರಿಗೆ ನಿಷೇಧವನ್ನು ತೆರವುಗೊಳಿಸಿದರೆ ಆಗುವ ಹಾನಿ !

ಅರ್ಥವ್ಯವಸ್ಥೆಯ ಒತ್ತಡದಿಂದ ಸಂಚಾರ ನಿಷೇಧವನ್ನು ತೆರವುಗೊಳಿಸಿದರೆ ಆರ್ಥಿಕ ನಷ್ಟವನ್ನು ತುಂಬಿಸಿಕೊಳ್ಳಲು ಉದ್ಯೋಗಗಳ ಅತಿರೇಕವಾಗುವುದು. ಪುನಃ ನದಿಗಳಲ್ಲಿನ ವಿಷಯುಕ್ತ ರಾಸಾಯನಿಕಗಳು ದೊಡ್ಡಪ್ರಮಾಣದಲ್ಲಿ ಸಮುದ್ರಕ್ಕೆ ಸೇರುವವು ಹಾಗೂ ಮೀನುಗಳ ಎಳೆಯ ಮರಿಗಳು ಸಾಯುವವು. ಅರಣ್ಯಗಳಲ್ಲಿನ ರಸ್ತೆಗಳಲ್ಲಿ ಸ್ವಚ್ಛಂದವಾಗಿ ತಿರುಗಾಡುವ ಪ್ರಾಣಿಗಳು ವಾಹನಗಳ ಅಡಿಗೆ ಬಿದ್ದು ಸಾಯುವವು. ರೈಲ್ವೆ ಮಾರ್ಗಗಳಲ್ಲಿ ಪುನಃ ಪ್ರಾಣಿಗಳ ಆಹುತಿ ಆರಂಭವಾಗುವುದು. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಆಗುವ ಮಾನವನ ಸಂಹಾರವು ಪುನಃ ಆರಂಭವಾಗುವುದು. ಪುನಃ ಖನಿಜಕ್ಕಾಗಿ ಸುಣ್ಣದ ಕಲ್ಲುಗಳು, ಇತರ ಕಲ್ಲುಗಳು ಮತ್ತು ಟೈಲ್ಸ್‌ಗಳಿಗಾಗಿ ಗುಡ್ಡಗಳನ್ನು ಅಗೆಯಲಾಗುವುದು. ಕಟ್ಟಿಗೆಗಾಗಿ ಅರಣ್ಯಗಳನ್ನು ಕಡಿದು ತಮ್ಮ ಚಿತೆಯನ್ನು ಕಟ್ಟುವೆವು. ವಾಯುಮಾಲಿನ್ಯ ಮತ್ತು ರೇಡಿಯೇಶನ್ ನಿಂದ ಲಕ್ಷಗಟ್ಟಲೆ, ಕೋಟಿಗಟ್ಟಲೆ ಮಾನವರು ಸಾವಿನ ಕಡೆಗೆ ಮಾರ್ಗಕ್ರಮಣ ಮಾಡುವರು. ಆದ್ದರಿಂದ ಅರಣ್ಯದೊಳಗಿನಿಂದ ಹೋಗುವ ರಸ್ತೆಗಳನ್ನು ಮತ್ತು ರೈಲ್ವೆ ಮಾರ್ಗಗಳನ್ನು ಈಗ ಶಾಶ್ವತವಾಗಿ ರದ್ದುಪಡಿಸಬೇಕು. ಪೃಥ್ವಿಯು ಕೇವಲ ಕೆಲವೇ ಜನರಿಗಾಗಿ ಇಲ್ಲ ! ಔದ್ಯೋಗೀಕರಣ ಮತ್ತು ಅರ್ಥವ್ಯವಸ್ಥೆಯನ್ನು ಶಾಶ್ವತವಾಗಿ ಮುಚ್ಚಬೇಕು. ರಸ್ತೆಗಳ ನಿರ್ಮಾಣ, ಸಿಮೆಂಟ್, ವಿದ್ಯುತ್ ನಿರ್ಮಾಣ, ತೈಲಶುದ್ಧೀಕರಣ, ವಾಹನಗಳ ನಿರ್ಮಾಣ, ಬಂದರು, ವಿಮಾನ ನಿಲ್ದಾಣ ಇತ್ಯಾದಿ ನಿರ್ಮಾಣ ಕಾರ್ಯಗಳನ್ನು ನಿಲ್ಲಿಸಿ ಅವುಗಳನ್ನು ರದ್ದುಪಡಿಸಬೇಕು.

೨೫. ಮಾನವನು ಅತ್ಯಂತ ಅಪಾಯಕಾರಿ ಕಾಲಖಂಡವನ್ನು ಪ್ರವೇಶ ಮಾಡಿದ್ದಾನೆ !

ತಾಪಮಾನ ಹೆಚ್ಚಳದ ಬಗ್ಗೆ ವಿಶ್ವ ಹವಾಮಾನ ಸಂಘಟನೆಯ ೨೩ ಮಾರ್ಚ್ ೨೦೧೭ ರ ‘ಜಾಗತಿಕ ಹವಾಮಾನ ದಿನದ ವಿಶೇಷ ವರದಿಯಲ್ಲಿ, ನಮ್ಮ ಬದಲಾಗುವ ಹವಾಮಾನದ ವಿಷಯದಲ್ಲಿ ತಿಳಿದುಕೊಳ್ಳುವುದು ಈಗ ಮುಗಿದಿದೆ ಹಾಗೂ ನಿಜವಾಗಿಯೂ ನಾವು ಅಜ್ಞಾತ ಪ್ರದೇಶವನ್ನು ಪ್ರವೇಶಿಸಿದ್ದೇವೆ ಎಂದು ಹೇಳಲಾಗಿದೆ. ಈಗ ‘ಅಸಾಮಾನ್ಯದಿಂದ ಸಾಮಾನ್ಯ ಆಗಿದೆ. ಈಗ ನಾವು ಅತ್ಯಂತ ಅಪಾಯ ಕಾರಿ ಕಾಲಖಂಡದಲ್ಲಿದ್ದೇವೆ. ಯಂತ್ರಗಳು ಬಂದ ಮೇಲೆ ಮತ್ತು ವಿಶೇಷವಾಗಿ ೧೯೯೦ ರಿಂದ ದೇಶದಲ್ಲಿ ಇಂತಹ ಚಿತ್ರಣವೇ ಇದೆ. ನಿಸರ್ಗದೊಂದಿಗಿನ ವಿಕೃತ ಅಸಾಧಾರಣ ವರ್ತನೆ ಈಗ ಸರ್ವಸಾಧಾರಣ ಆಗಿದೆ; ಆದ್ದರಿಂದ ೨೦೧೬ ರಿಂದ ಪ್ರತಿವರ್ಷ ವಾಯುಮಾಲಿನ್ಯದಿಂದ ಅಂದರೆ, ನಮ್ಮ ವರ್ತನೆಯಿಂದ ೨೦ ರಿಂದ ೨೫ ಲಕ್ಷ ಜನರು ಅಕಾಲ ಮರಣವನ್ನಪ್ಪುತ್ತಿದ್ದಾರೆ ಮತ್ತು ನಮಗೆ ಅದರಿಂದ ಏನೂ ಅನ್ನಿಸುವುದಿಲ್ಲ. ನಮ್ಮ ಔದ್ಯೋಗಿಕ ಜೀವನಶೈಲಿಯೆ ಅದಕ್ಕೆ ಕಾರಣವಾಗಿದೆ.

೨೬. ಭಾರತೀಯತ್ವವೇ ಜಗತ್ತನ್ನು ರಕ್ಷಿಸುವುದು !

‘ಜೀವೋ ಜೀವಸ್ಯ ಜೀವನಮ್ |, ಈ ನ್ಯಾಯಕ್ಕನುಸಾರ ಕೇವಲ ಬದುಕಲು ‘ಅನ್ನ ವೆಂದು ಜೀವಸೃಷ್ಟಿಯ ಸೀಮಿತ ನೈಸರ್ಗಿಕ ಉಪಭೋಗಗಳನ್ನು ಪಡೆಯಬೇಕು; ಜೀವನಶೈಲಿಗಾಗಿ ಸಂಹಾರ ಮತ್ತು ಅನಿರ್ಬಂಧ ಉಪಭೋಗವನ್ನು ನಿಸರ್ಗ ಸಹಿಸುವುದಿಲ್ಲ. ಅದು ಪೃಥ್ವಿಗೆ ಎಂದಿಗೂ ಅಪೇಕ್ಷೆ ಇರಲಿಲ್ಲ. ಒಂದು ವರದಿಗನುಸಾರ ಪೃಥ್ವಿಯ ಸುಮಾರು ಶೇ. ೯೩ ರಷ್ಟು ಭಾಗದ ಮೇಲೆ ಮಾನವನ ಅನಿಷ್ಟ ಹಸ್ತಕ್ಷೇಪ, ಅಂದರೆ ಅವನು ದೌರ್ಜನ್ಯ ಮಾಡಿದ್ದಾನೆ. ‘ಅರ್ಬುದರೋಗ ಬೇಡ; ಆದರೆ ಗುಟ್ಖಾವನ್ನು ಬಿಡುವುದಿಲ್ಲ, ಇದು ಸಾಧ್ಯವಿಲ್ಲ. ಜೀವನ ಉಳಿಯಬೇಕಾದರೆ, ಅರ್ಥವ್ಯವಸ್ಥೆಯನ್ನು ಬಿಡಲೇ ಬೇಕಾಗುವುದು. ಅದು ಕೂಡ ತಕ್ಷಣ !

ಮಾನವನ ಅಸ್ತಿತ್ವದ ಈ ಹೋರಾಟವನ್ನು ನಮ್ಮ ಮನಸ್ಸಿನ ವಿರುದ್ಧ ಹಾಗೂ ಪೃಥ್ವಿಯ ವಿರೋಧಿ ಕಲ್ಪನೆಯ ವಿರುದ್ಧ ಹೋರಾಡಬೇಕಾಗಿದೆ. ಭಾರತೀಯ ತತ್ತ್ವಜ್ಞಾನ ನಮಗೆ ಮಾರ್ಗದರ್ಶನ ಮಾಡಿ ನಮ್ಮನ್ನು ರಕ್ಷಿಸಲು ಸಾಧ್ಯವಿದೆ. ಪರಂಪರಾಗತ ಸಾವಯವ ಹಾಗೂ ನೈಸರ್ಗಿಕ ಕೃಷಿಯಿಂದ ಅನ್ನ, ಚರಕ ಕೈಮಗ್ಗದ ವಸ್ತ್ರಗಳು, ಮಣ್ಣು-ಬಿದಿರುಗಳ ಮನೆ ಹೀಗೆ ಸಂಯಮ ಹಾಗೂ ಸರಳಮಾರ್ಗವನ್ನು ಆಧರಿಸಿದ ೧೦ ಸಾವಿರ ವರ್ಷಗಳ ಶಾಶ್ವತ ನಿರಂತರ ಹಸಿರಾಗಿರುವ ಕೃಷಿಯುಗವನ್ನು ತಂದು ಮನುಕುಲ ಮತ್ತು ಜೀವಸೃಷ್ಟಿಯ ರಕ್ಷಣೆ ಮಾಡೋಣ. ಭಾರತೀಯತ್ವವು ಜಾಗೃತವಾದರೆ ಅದು ಜಗತ್ತನ್ನು ರಕ್ಷಿಸುವುದು.  – ನ್ಯಾಯವಾದಿ ಗಿರೀಶ ರಾವುತ್, ನಿಮಂತ್ರಕ, ಭಾರತೀಯ ಜೀವನ ಹಾಗೂ ಪೃಥ್ವಿರಕ್ಷಣ ಚಳುವಳಿ (೨೮.೪.೨೦೨೦)