ಗಾಂಧಿ, ಗೌರಿ ಮತ್ತು ಜಾರ್ಜ್ ಫ್ಲಾಯ್ಡ್ !

ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಹೋರಾಟದ ಶ್ರೇಷ್ಠ ನಾಯಕ, ಗೌರಿ ಲಂಕೇಶ ವಾರಪತ್ರಿಕೆಯ ಸಂಪಾದಕಿ ಮತ್ತು ಜಾರ್ಜ್ ಫ್ಲಾಯ್ಡ್ ಒಬ್ಬ ಕಪ್ಪು ವರ್ಣದ ಕುಖ್ಯಾತ ಅಪರಾಧಿ ! ಮೂವರೂ ವಿಭಿನ್ನ ಕ್ಷೇತ್ರಗಳನ್ನು ಹೊಂದಿದ್ದಾರೆ ! ಈ ಮೂವರಿಗೆ ಸಾಮ್ಯತೆ ಇರಬಹುದೇ ? ಖಂಡಿತವಾಗಿಯೂ ಅಲ್ಲ; ಆದರೆ ಅವರ ಸಾವಿನ ನಂತರದ ಘಟನೆಗಳು ಅವುಗಳ ಸಾಮ್ಯತೆಯನ್ನು ತೋರಿಸಿದವು. ಯಾರೊಬ್ಬರ ಸಾವು ಕೂಡ ಸಮುದಾಯದ ಸ್ವಾರ್ಥವನ್ನು ಸಾಧಿಸುವ ಒಂದು ಅವಕಾಶವಾಗಬಹುದು ! ಇದರ ವಿಶ್ಲೇಷಣೆ ಮಾಡುವ ಲೇಖನವನ್ನು ಕನ್ನಡ ‘ಹೊಸದಿಗಂತ’ ದಲ್ಲಿ ಪ್ರಕಟಿಸಲಾಗಿದೆ.

೧. ಗಾಂಧಿ, ಗೌರಿ ಮತ್ತು ಜಾರ್ಜ ಫ್ಲಾಯ್ಡ್ ಇವರಲ್ಲಿ ಸಾಮ್ಯತೆ !

ಪತ್ರಕರ್ತೆ ಗೌರಿ ಲಂಕೇಶ ಇವರು ಮೃತಪಟ್ಟಾಗ ಆಕೆಯ ಬಳಗದ ಹಲವಾರು ಜನ ಆಕೆಯನ್ನು ಗಾಂಧೀಜಿಯವರೊಂದಿಗೆ ಹೋಲಿಸಿದ್ದರು. ಮಹಾತ್ಮಾ ಗಾಂಧೀಜಿಯವರಿಗೆ ಹೋಲಿಸಿ ಚಿತ್ರಗಳನ್ನು ಬರೆದಿದ್ದರು, ಕಥೆ, ಕವನಗಳನ್ನು ಬರೆದಿದ್ದರು ! ಸತ್ಯ, ಶಾಂತಿ, ಅಹಿಂಸೆಗಳನ್ನೇ ಜೀವಮಾನದುದ್ದಕ್ಕೂ ಹೇಳಿಕೊಂಡು ಬಂದಿದ್ದ, ಮದ್ಯಪಾನವನ್ನು ಬಲವಾಗಿ ವಿರೋಧಿಸುತ್ತಿದ್ದ, ಮದ್ಯಪಾನದಿಂದ ಸರ್ವನಾಶ ಎನ್ನುತ್ತಿದ್ದ, ಸಾಯುವ ಸಮಯದಲ್ಲೂ ರಾಮ ನಾಮ ಜಪಿಸಿದ್ದ ಗಾಂಧೀಜಿಯವರೆಲ್ಲಿ ? ತನ್ನ ಪತ್ರಿಕೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಕ್ಸಲ್ ಮತ್ತು ಇತರ ಭಯೋತ್ಪಾದಕರಿಗೆ  ಪರೋಕ್ಷವಾಗಿ ತನ್ನ ಬರಹಗಳ ಮೂಲಕ ಬೆಂಬಲಿಸುತ್ತಿದ್ದ, ತನಗಾಗದವರ ವಿರುದ್ಧ ಹಲವಾರು ಸುಳ್ಳುಗಳನ್ನು ಹಂಚಿಕೊಳ್ಳುತ್ತಾ, ಸದಾ ದ್ವೇಷದ ಬರಹಗಳನ್ನೇ ಬರೆಯುತ್ತಾ ತನ್ನ ವಿರುದ್ಧ ಸಿದ್ಧಾಂತದವರ ತೇಜೋವಧೆ ಮಾಡುತ್ತಿದ್ದ ಗೌರಿಯವರೆಲ್ಲಿ ?

ಆದರೆ ಒಂದು ಬಾರಿ ಹೋಲಿಸಲೇಬೇಕೆಂದು ನಿರ್ಧರಿಸಿಬಿಟ್ಟರೆ ‘ಆನೆಗೂ ನಾಲ್ಕು ಕಾಲು ಮತ್ತು ಒಂದು ಬಾಲವಿದೆ, ನರಿಗೂ ನಾಲ್ಕು ಕಾಲು ಮತ್ತು ಒಂದು ಬಾಲವಿದೆ’ ಎನ್ನುವ ಮೂಲಕ ನರಿಯನ್ನು ಬೇಕಾದರೂ ಆನೆಯೊಂದಿಗೆ ಹೋಲಿಸಿ ಬಿಡಬಹುದು. ಅದೇ ರೀತಿ ಅವರ ಬಳಗದವರು ಗಾಂಧೀಜಿಯವರೊಂದಿಗೆ ಆಕೆಯನ್ನು ಹೋಲಿಸಲೇಬೇಕು ಎಂದು ಬಲವಾಗಿ ನಿರ್ಧರಿಸಿ ಬಿಟ್ಟಿದ್ದಿರಬಹುದು. ಗೌರಿ ಲಂಕೇಶ ಅವರನ್ನು ಗಾಂಧೀಜಿಯವರೊಂದಿಗೆ ಹೋಲಿಸುವುದೇ ಆದರೆ, ಅವರಿಬ್ಬರ ಜೊತೆಗೆ ಇನ್ನೊಬ್ಬ ವ್ಯಕ್ತಿಯನ್ನೂ ಹೋಲಿಸ ಬಯಸುತ್ತೇನೆ. ಆ ವ್ಯಕ್ತಿಯ ಹೆಸರು ಜಾರ್ಜ್ ಫ್ಲಾಯ್ಡ್ !

ಈ ಮೂವರನ್ನೂ ಹೋಲಿಸಲು ಹೇಗೆ ಸಾಧ್ಯ ಎಂದು ನೀವು ಕೇಳಬಹುದು. ಗೌರಿ ಲಂಕೇಶ ಬದುಕಿದಷ್ಟು ದಿನವೂ ಆಕೆಯನ್ನು ಹೇಗೆ ಯಾರೂ ಗಾಂಧೀಜಿಯವರಿಗೆ ಹೋಲಿಸಿರಲಿಲ್ಲವೋ, ಹಾಗೆಯೇ ಜಾರ್ಜ್ ಫ್ಲಾಯ್ಡ್‌ನನ್ನು ಕೂಡಾ ಬದುಕಿದ್ದಾಗ ಇವರಿಬ್ಬರಿಗೂ ಹೋಲಿಸುವುದು ಸಾಧ್ಯವಿಲ್ಲದ ಮಾತಾಗಿತ್ತು. ಆದರೆ ಗಾಂಧಿ, ಗೌರಿ ಮತ್ತು ಜಾರ್ಜ್ ಫ್ಲಾಯ್ಡ್ ಮೂವರೂ ಮೃತಪಟ್ಟ ನಂತರದ ಘಟನೆಗಳ ಮೂಲಕ ಆ ಮೂವರನ್ನೂ ಹೋಲಿಕೆ ಮಾಡಲು ಸಾಧ್ಯವಿದೆ.

೨. ಪೊಲೀಸರು ಅಮಾನವೀಯವಾಗಿ ಹತ್ಯೆ ಮಾಡಿದ ಜಾರ್ಜ ಫ್ಲಾಯ್ಡ್ ಒಬ್ಬ ಅಪರಾಧಿ !

ಈ ಜಾರ್ಜ್ ಫ್ಲಾಯ್ಡ್ ಎಂದರೆ ಯಾರು ಎನ್ನುವುದು ತಿಳಿಯದವರಿಗೆ ಒಂದು ಸಣ್ಣ ಪರಿಚಯ. ಜಾರ್ಜ್ ಫ್ಲಾಯ್ಡ್ ಒಬ್ಬ ಕಪ್ಪು ವರ್ಣದ ಅಮೇರಿಕಾದ ಪ್ರಜೆ. ಅಲ್ಲಿನ ನ್ಯಾಯಾಲಯಗಳ ದಾಖಲೆಗಳ ಪ್ರಕಾರ ಆತ ದರೋಡೆ, ಮಾದಕ ದ್ರವ್ಯ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಅನೇಕ ಬಾರಿ ಸಿಕ್ಕಿಬಿದ್ದು ಮತ್ತೆ ಅದೇ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದ ಒಬ್ಬ ವೃತ್ತಿಪರ ಅಪರಾಧಿ. ನಕಲಿ ನೋಟನ್ನು ಚಲಾಯಿಸುತ್ತಿದ್ದಾನೆ ಎನ್ನುವ ದೂರಿನ ಮೇಲೆ ಪೊಲೀಸರು ಆತನನ್ನು ಹಿಡಿಯಲು ಹೋಗುತ್ತಾರೆ. ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಆ ದೈತ್ಯ ದೇಹಿ ಕಳ್ಳನ ಕುತ್ತಿಗೆಯ ಮೇಲೆ ಆವೇಶಕ್ಕೊಳಗಾಗಿದ್ದ ಪೊಲೀಸ್ ಅಧಿಕಾರಿ ತನ್ನ ಮೊಣಕಾಲನ್ನು ಸುಮಾರು ಎಂಟು ನಿಮಿಷಗಳಿಗೂ ಹೆಚ್ಚು ಕಾಲ ಒತ್ತಿ ಹಿಡಿದ ಪರಿಣಾಮ ಆತ ಸಾವನ್ನಪ್ಪುತ್ತಾನೆ.

೩. ಗಾಂಧಿ ಮತ್ತು ಗೌರಿ ಇವರ ಮೃತ್ಯುವಿನ ನಂತರದ ಘಟನೆಗಳೊಂದಿಗೆ ಸಾಮ್ಯತೆ ಇರುವ ಜಾರ್ಜ ಫ್ಲಾಯ್ಡ್ ಇವರ ಮೃತ್ಯುವಿನ ನಂತರದ ಲೂಟಿ !

ಜಾರ್ಜ ಮೇಲಾದ ಅನ್ಯಾಯವನ್ನು ಪ್ರತಿಭಟಿಸುವ ನೆಪದಲ್ಲಿ ಲೆಕ್ಕವಿಲ್ಲದ್ದಷ್ಟು ಜನ ಬೀದಿಬೀದಿಗಳಲ್ಲಿ ಠಳಾಯಿಸಿ ಬಿಡುತ್ತಾರೆ. ತಮ್ಮ ಮನಸ್ಸಿನೊಳಗೆ ಎಷ್ಟೊಂದು ಕೊಳಕಿದೆ ಎನ್ನುವುದನ್ನು ಹೊರಹಾಕುವ ಅಂಥದ್ದೊಂದು ಸದವಕಾಶಕ್ಕಾಗಿಯೇ ಕಾಯುತ್ತಿ ದ್ದರೇನೋ ಎನ್ನುವಂತೆ, ಬಾಯಿ ಬಿಟ್ಟು ಹೇಳಲೂ ಅಸಹ್ಯವೆನಿಸುವಷ್ಟು ಅಸಹ್ಯಕರ ರೀತಿಯಲ್ಲಿ ವರ್ತಿಸುತ್ತಾರೆ. ಅದಕ್ಕಿಂತಲೂ ಪ್ರಮುಖವಾಗಿ, ಪ್ರತಿಭಟನೆಯ ನೆಪದಲ್ಲಿ ಅಂಗಡಿಗಳನ್ನು ದೋಚುತ್ತಾರೆ. ಚಪ್ಪಲಿಗಳನ್ನು, ಬೂಟುಗಳನ್ನು, ಬಟ್ಟೆಗಳನ್ನು ತಮ್ಮ ಕೈಗೆ ಸಿಕ್ಕಿದಷ್ಟು ದೋಚಿ ಕಾರಿಗೆ ತುಂಬಿಸಿ ಕೊಂಡು ಕೇಕೆ ಹಾಕುತ್ತಾ ಮನೆಯ ಕಡೆಗೆ ಹೊರಡುತ್ತಾರೆ. ಮದ್ಯದಂಗಡಿಗಳಿಗೆ ನುಗ್ಗಿ, ಸಿಕ್ಕ ಸಿಕ್ಕ ಬಾಟಲಿಗಳನ್ನು ಎಷ್ಟು ಸಾಧ್ಯವೋ ಅಷ್ಟು ದೋಚಿಕೊಂಡು ಓಡುತ್ತಾರೆ ! ಆ ಸಮಯದಲ್ಲಿ ಅವರೆಲ್ಲರ ಮುಖದಲ್ಲೂ ಜಾರ್ಜ್ ಫ್ಲಾಯ್ಡ್‌ನ ಸಾವಿನ ದುಃಖಕ್ಕಿಂತಲೂ, ಎಂದೂ ಸಾಧ್ಯವಾಗದ್ದೇನೋ ಸಾಧಿಸಿಬಿಟ್ಟ ಸಂಭ್ರಮ ಎದ್ದು ಕಾಣಿಸುತ್ತಿರುತ್ತದೆ. ಹೀಗೆ ಆ ಒಬ್ಬನ ಸಾವು ಅಲ್ಲಿನ  ಲೆಕ್ಕವಿಲ್ಲದಷ್ಟು ಜನರಿಗೆ ಪೊಲೀಸರನ್ನು ಮತ್ತು ಆಡಳಿತವನ್ನು ಅತ್ಯಂತ ಹೀನಾಯವಾಗಿ ನಿಂದಿಸಲು ಮತ್ತು ಅಂಗಡಿ-ಮುಂಗಟ್ಟುಗಳನ್ನು ದೋಚಲು ಅವಕಾಶ ಮಾಡಿಕೊಡುತ್ತದೆ !

ಜಾರ್ಜ್ ಫ್ಲಾಯ್ಡ್ ಎನ್ನುವವನ ಮರಣವಾಗಿದೆ. ಆತನ ಮರಣಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ಕಾನೂನಿನನ್ವಯ ಶಿಕ್ಷೆಯೂ ಆಗಿಯೇ ಆಗುತ್ತದೆ. ಆದರೆ ಅದರ ನಡುವೆ ಆತನ ಸಾವಿನ ಕಾರಣವನ್ನು ಮುಂದಿಟ್ಟುಕೊಂಡು ದೋಚಿದ ಪ್ರಕರಣವಿದೆಯಲ್ಲಾ, ಅದು ನಿಜಕ್ಕೂ ಮೇಲೆ ಹೆಸರಿಸಲ್ಪಟ್ಟ ಇನ್ನಿಬ್ಬರ ಸಾವಿನ ನಂತರದ ಪ್ರಕರಣಗಳಿಗೂ ಹೋಲಿಕೆಯಾಗುತ್ತದೆ.

೪. ಗೌರಿ ಲಂಕೇಶ ಇವರ ಮೃತ್ಯುವನ್ನು ಬಂಡವಾಳ ಮಾಡಿಕೊಂಡು ತಮ್ಮ ಮೊಸಳೆಕಣ್ಣೀರಿಡುವ ಅವರ ಬಳಗದವರು

ಗೌರಿ ಲಂಕೇಶ ಅವರ ಹತ್ಯೆಯಾಯಿತು. ಆದರೆ ಆ ಹತ್ಯೆಯ ನಂತರ ಆಕೆಯ ಬಳಗದವರೆಂದು ಹೇಳಿಕೊಂಡವರು ಏನೆಲ್ಲಾ ಮಾಡಿದರು ಎಂದರೆ, ‘ಇದು ನಿಜಕ್ಕೂ ಹೇಗೆ ಸಾಧ್ಯ’ ಎನ್ನುವ ಆಶ್ಚರ್ಯವೂ ನಮ್ಮಂತಹ ಸಾಮಾನ್ಯರಿಗಾಗುತ್ತದೆ. ಆಕೆಯ ಹತ್ಯೆಯ ನಂತರ ಆಕೆಯ ಬಳಗದವರು ತಮಗಾಗದವರ ಎಲ್ಲರನ್ನೂ ಮುಕ್ತವಾಗಿ ನಿಂದಿಸಲಾರಂಭಿಸಿದರು. ಆದರೆ ಅದಕ್ಕಿಂತಲೂ ಮುಖ್ಯವಾಗಿ ಆಕೆಯ ಹೆಸರಿನಲ್ಲಿ ಆಕೆಯ ಬಳಗದವರೇ ರಾಜ್ಯದ ಮೂಲೆಮೂಲೆಗಳಿಂದ ಸಾಕಷ್ಟು ಹಣವನ್ನು ಸಂಗ್ರಹ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಂಡರು. ಆಕೆಯ ಹೆಸರಿನಲ್ಲಿ ಚಲೋಗಳನ್ನು, ಸಮಾವೇಶಗಳನ್ನು ಮಾಡಿ ತಮ್ಮ ಬ್ಯಾಂಕ್ ಖಾತೆಗೆ ದುಡ್ಡು ತುಂಬಿಸಿಕೊಂಡರು.ಆಕೆಯ ಹೆಸರಿನಲ್ಲಿ ಆಕೆಯ ಕುಟುಂಬದವರಿಗೇ ತಿಳಿಯದಂತೆ ಟ್ರಸ್ಟ್ ಸ್ಥಾಪಿಸಿ, ಸುಮಾರು ಏಳು ಕೋಟಿ ರೂಪಾಯಿಗಳಷ್ಟು ವಸೂಲಿ ಮಾಡಿ ಐಷಾರಾಮಿ ಜೀವನ ನಡೆಸತೊಡಗಿದರು. ಈ ನಡುವೆ ಆಕೆಯ ಹೆಸರಿನಲ್ಲಿ ಎತ್ತಿದ ಚಂದಾ ವಿಚಾರವಾಗಿಯೇ ಪರಸ್ಪರ ಕಿತ್ತಾಟಗಳೂ ನಡೆದವು ! ಗೌರಿ ಲಂಕೇಶ ಇವರ ಮರಣವಾಗಿದೆ. ಅವರ ಮರಣಕ್ಕೆ ಕಾರಣರಾದವರ ಬಗ್ಗೆ ತನಿಖೆ ನಡೆದಿದೆ. ಸಂವಿಧಾನದಡಿಯ ಕಾನೂನಿನನ್ವಯ ಆರೋಪಿಗಳಿಗೆ ಶಿಕ್ಷೆಯೂ ಆಗಿಯೇ ಆಗುತ್ತದೆ. ಆದರೆ ಅದರ ನಡುವೆ ಆಕೆಯ ಸಾವಿನ ಕಾರಣವನ್ನು ಮುಂದಿಟ್ಟುಕೊಂಡು ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ ಪ್ರಕರಣವಿದೆಯಲ್ಲಾ, ಅದು ನಿಜಕ್ಕೂ ಮೇಲೆ ಹೆಸರಿಸಲ್ಪಟ್ಟ ಇನ್ನಿಬ್ಬರ ಸಾವಿನ ನಂತರದ ಪ್ರಕರಣಗಳಿಗೂ ಹೋಲಿಕೆಯಾಗುತ್ತದೆ.

೫. ಒಬ್ಬನ ಮೃತ್ಯು ಸ್ವಾರ್ಥ ಸಾಧಿಸಲು ಅವಕಾಶವನ್ನೂ ನೀಡುತ್ತದೆ ಎಂಬುದರ ಸಾಕ್ಷಿ ನೀಡುವ ಮೂವರ ಮೃತ್ಯು ನಂತರದ ಘಟನೆಗಳು !

೧೯೪೮ ರಲ್ಲಿ ಗಾಂಧಿಜಿಯವರ ಹತ್ಯೆಯಾಯಿತು. ಇಡೀ ವಿಶ್ವ ಕಣ್ಣೀರಿಟ್ಟಿತು. ಆದರೆ ಅವರ ಸಾವಿನ ನಂತರ ಅವರ ಅನುಯಾಯಿಗಳೆಂದು ಕರೆಸಿಕೊಂಡಿದ್ದವರು ಏನೆಲ್ಲಾ ಮಾಡಿದರು ಎಂದರೆ, ‘ಇದು ನಿಜಕ್ಕೂ ಹೇಗೆ ಸಾಧ್ಯ ?’ ಎನ್ನುವ ಆಶ್ಚರ್ಯವೂ ನಮ್ಮಂತಹ ಸಾಮಾನ್ಯರಿಗಾಗುತ್ತದೆ. ಅವರು ಹತ್ಯೆಯಾದ ಕೂಡಲೇ ಅವರ ಅನುಯಾಯಿಗಳೆಂದು ಕರೆಸಿಕೊಂಡ ಸಾವಿರಾರು ಜನ ಮಹಾರಾಷ್ಟ್ರದಿಂದ ಮೊದಲ್ಗೊಂಡು ಬೀದಿಗಿಳಿದರು. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಿಕೊಂಡು ದಾಳಿ ನಡೆಸಿದರು. ಆ ಸಮುದಾಯದವರ ಲೆಕ್ಕವಿಲ್ಲದ್ದಷ್ಟು ಮನೆಗಳನ್ನು, ಅಂಗಡಿಗಳನ್ನು, ಉದ್ದಿಮೆಗಳನ್ನು ಸುಟ್ಟು ಹಾಕಿದರು. ಅತ್ಯಾಚಾರ ನಡೆಸಿದರು. ಕೈಗೆ ಸಿಕ್ಕಿದ್ದನ್ನು ದೋಚಿದರು. ಈ ಹಿಂಸೆ, ಅತ್ಯಾಚಾರ ಮತ್ತು ದೋಚುವಿಕೆ ಕೇವಲ ಅಲ್ಲಿಗೇ ನಿಲ್ಲಲಿಲ್ಲ. ಕರ್ನಾಟಕವೂ ಸೇರಿದಂತೆ ಎಲ್ಲ ಕಡೆಗೂ ವಿಸ್ತರಿಸಿತು. ಇದೆಲ್ಲಕ್ಕೂ ದಾಖಲೆಗಳು ಬೇಕೆಂದಿದ್ದರೆ ನೀವು ಸರ್ಕಾರವನ್ನೇ ಕೇಳಬೇಕು. ಏಕೆಂದರೆ ಭಾರತೀಯ ಇತಿಹಾಸದ ಇಷ್ಟು ದೊಡ್ಡ ಘಟನೆಯೊಂದು ಎಲ್ಲೂ ಸರಿಯಾಗಿ ದಾಖಲಾಗಿಲ್ಲ.ಏಕೆಂದರೆ ಆಗ ಅಧಿಕಾರದಲ್ಲಿದ್ದವರೂ ಗಾಂಧೀಜಿ ಯವರ ಮಾನಸಪುತ್ರರೇ !

ಅದೇನೇ ಇರಲಿ, ಗಾಂಧಿಜಿಯವರ ಹತ್ಯೆ ಯಾಯಿತು. ಅವರ ಹತ್ಯೆಗೆ ಕಾರಣರಾದವರಿಗೆ ಶಿಕ್ಷೆಯೂ ಆಯಿತು.ಆದರೆ ಅದರ ನಡುವೆ ಅವರ ಸಾವಿನ ಕಾರಣವನ್ನು ಮುಂದಿಟ್ಟುಕೊಂಡು ಸಾವಿರಾರು ಜನರ ಪ್ರಾಣ ತೆಗೆದು ಕೈಗೆ ಸಿಕ್ಕಿದ್ದನ್ನು ದೋಚಲಾಯಿತು ! ಒಬ್ಬರ ಸಾವು ಅವರ ಹಿಂಬಾಲಕರಲ್ಲಿ ಕೇವಲ ದುಃಖವನ್ನು ಮಾತ್ರ ತರಿಸುವುದಿಲ್ಲ. ಸಾವಿಗೆ ಕಾರಣವಾದವರ ವಿರುದ್ಧ ಕೋಪವನ್ನು ಮಾತ್ರ ತರಿಸುವುದಿಲ್ಲ. ಸಿಕ್ಕಸಿಕ್ಕಿದ್ದನ್ನು ದೋಚುವ, ಹಣ ಮಾಡುವ ಒಂದು ಅಪೂರ್ವ ಅವಕಾಶವನ್ನೂ ಒದಗಿಸುತ್ತದೆ ಎನ್ನುವುದಕ್ಕೆ ಗಾಂಧಿ, ಗೌರಿ ಮತ್ತು ಜಾರ್ಜ್ ಫ್ಲಾಯ್ಡ್‌ನ ಮರಣಾನಂತರದ ಘಟನೆಗಳೇ ಸಾಕ್ಷಿ. – ಶ್ರೀ. ಪ್ರವೀಣ ಕುಮಾರ ಮಾವಿನಕಾಡು

(ಆಧಾರ : ದೈನಿಕ ‘ಹೊಸದಿಗಂತ’, ೯.೬.೨೦೨೦)