‘ತಂದೆ ‘ಐಫೋನ್’ ಕೊಡಿಸಲಿಲ್ಲ ಎಂದು ಮಗನು ಆತ್ಮಹತ್ಯೆ ಮಾಡಿಕೊಂಡನು’, ಎಂಬ ವಾರ್ತೆಯನ್ನು ಓದಿದೆನು. ಒಂದು ವಿಶ್ವವಿದ್ಯಾಲಯದಲ್ಲಿ ಕೆಲವು ಹುಡುಗಿಯರು ಏನೋ ಒಂದು ತಪ್ಪು ಮಾಡಿದರು; ಅವರಲ್ಲಿನ ಓರ್ವ ಹುಡುಗಿಯು ತನ್ನನ್ನು ವಿಶ್ವವಿದ್ಯಾಲಯದಿಂದ ಹೊರಗೆ ಹಾಕುತ್ತಾರೆ, ಎಂಬ ಭಯದಿಂದ ಆತ್ಮಹತ್ಯೆಯನ್ನು ಮಾಡಿಕೊಂಡಳು. ಹಾಗಾದರೆ ಜೀವನ ಇಷ್ಟು ಅಗ್ಗವಾಗಿದೆಯೇ ? ಒಂದೆಡೆಗೆ ಮಕ್ಕಳ ಬುದ್ಧಿವಂತಿಕೆ ಹೆಚ್ಚಾಗಿರುವ ಬಗ್ಗೆ ಕೇಳುತ್ತೇವೆ ಮತ್ತು ಇನ್ನೊಂದೆಡೆ ಮಕ್ಕಳ ವಿಚಾರ ಮಾಡುವ ಶಕ್ತಿ ನಾಶವಾಗುತ್ತಿರುವುದು ಕಂಡು ಬರುತ್ತಿದೆ. ಇದಕ್ಕೇನು ಪರಿಹಾರ ? ಮಕ್ಕಳಿಗೆ ಹುಟ್ಟಿನಿಂದಲೇ ಯೋಗ್ಯ ಧರ್ಮಸಂಸ್ಕಾರ ಸಿಗುತ್ತಿಲ್ಲ’, ಎಂದೆನಿಸುತ್ತದೆ. ಅವಿಭಕ್ತ ಕುಟುಂಬದ ವ್ಯವಸ್ಥೆ ನಶಿಸಿತು. ಪತಿ-ಪತ್ನಿಯರಿಬ್ಬರೂ ನೌಕರಿ ಮಾಡತೊಡಗಿದರು. ಮಕ್ಕಳಿಗೆ ಸಮಯ ನೀಡಿ ಅವರಿಗೆ ಸಂಸ್ಕಾರ ನೀಡಲು ಆಗುತ್ತಿಲ್ಲ. ಶಿಶುವಿಹಾರ ಕೇಂದ್ರದಲ್ಲಿ ಪ್ರತಿಯೊಬ್ಬ ಮಗುವಿಗೆ ಸಂಸ್ಕಾರಗಳು ಸಿಗುವುದು ಎಂದು ನಿರೀಕ್ಷಿಸುವುದು ತಪ್ಪು.
ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿ ದಾದಿಯನ್ನು ನೇಮಿಸಿದರೂ ಅವಳು ಮಗುವಿಗೆ ಸಂಸ್ಕಾರ ನೀಡಲಾರಳು. ಇಂತಹ ಮಕ್ಕಳು ಊಟ ಮಾಡುವುದಿಲ್ಲವೆಂದು ಪಾಲಕರು ಅವರಿಗೆ ಕೈಗೆ ಸಂಚಾರವಾಣಿ ಕೊಡುತ್ತಾರೆ. ಅದರಲ್ಲಿ ಕ್ಷಣಿಕ ಮನೋರಂಜನೆಯ ಕಾರ್ಯಕ್ರಮಗಳನ್ನು ನೋಡುವಲ್ಲಿ ಆ ಮಗುವನ್ನು ತೊಡಗಿಸುತ್ತಾರೆ. ಹಾಗಾದರೆ ಈ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಗಬೇಕು, ಅವರ ಮನಸ್ಸು-ಬುದ್ಧಿ ವಿಕಸನವಾಗಬೇಕು ಎಂದು ನಾವು ಏಕೆ ನಿರೀಕ್ಷಿಸಬೇಕು ? ಈ ಮಕ್ಕಳು ಸಂಕುಚಿತ ವಿಚಾರದವರು ಆಗುತ್ತಾರೆ, ಅವರಲ್ಲಿ ಪ್ರಬುದ್ಧತೆ ಬರುವುದಿಲ್ಲ. ವಿವೇಕವು ಅವರಿಂದ ದೂರವಾಗುತ್ತದೆ ಮತ್ತು ನಂತರ ಇಂತಹ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಕೊನೆಯ ನಿರ್ಣಯ ತೆಗೆದುಕೊಳ್ಳುತ್ತವೆ.
ಶೈಕ್ಷಣಿಕ ಕ್ಷೇತ್ರವೂ ಸ್ವಾರ್ಥ ಮತ್ತು ಭ್ರಷ್ಟಾಚಾರಗಳಿಂದ ನಲುಗಿರುವುದು ಗಮನಕ್ಕೆ ಬರುತ್ತದೆ. ಆಂಗ್ಲರು ಹೋದರು; ಆದರೆ ‘ಹೀನ ಆಂಗ್ಲ ಶಿಕ್ಷಣದ ಬದಲಾಗಿ ಮಕ್ಕಳಿಗೆ ಭಾರತೀಯ ಸಂಸ್ಕೃತಿಯನ್ನು ಕಲಿಸಬೇಕು’, ಎಂಬ ವಿಚಾರ ಇಂದಿನ ವರೆಗೆ ಬೇರೂರಿಲ್ಲ. ಆದುದರಿಂದ ಅನೇಕ ಪೀಳಿಗೆಗಳು ನಿಜವಾದ ಜ್ಞಾನವನ್ನು ಪಡೆಯುವ ಬದಲು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಹೆಚ್ಚು ಸಂಬಳವಿರುವ ನೌಕರಿಯನ್ನು ಗಿಟ್ಟಿಸಿಕೊಡುವ ಪರೀಕ್ಷೆಗಳ ಹಿಂದೆ ಬಿದ್ದಿವೆ. ಧರ್ಮಾಚರಣೆಯನ್ನು ಮರೆತಿವೆ. ಪರಸ್ಪರರಿಗೆ ಮೋಸ ಮಾಡಿ ಸ್ವಾರ್ಥ ಸಾಧಿಸುವಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ಧನ್ಯರೆಂದು ತಿಳಿಯತೊಡಗಿದರು. ಸದ್ಯ ವಿವೇಕ ಮತ್ತು ವ್ಯಕ್ತಿ ಇದರ ನಡುವೆ ಬಹಳ ಅಂತರವಿರುವುದು ಕಾಣಿಸುತ್ತದೆ. ಒಂದು ಕಚೇರಿಯ ಕೆಲಸ ಮಾಡಿಸಿಕೊಳ್ಳಲು ಅಲ್ಲಿನ ಸಂಬಂಧಿತರಿಗೆ ವಿವಿಧ ಆಮಿಷಗಳನ್ನು ತೋರಿಸಿ ಮಾಡಿಸಿಕೊಳ್ಳಬೇಕಾಗುತ್ತದೆ. ಆ ಕಚೇರಿಯ ಜನರೂ ಕಡಿಮೆ ಮೊತ್ತಕ್ಕಾಗಿ ತಪ್ಪು ಕಾರ್ಯಗಳನ್ನು ಮಾಡಲು ಧೈರ್ಯ ತೋರಿಸುತ್ತಾರೆ. ಆಗ ‘ನಾವು ಅನುಚಿತ ಮತ್ತು ತಪ್ಪು ಕೃತಿ ಮಾಡುತ್ತಿದ್ದೇವೆ’, ಎಂಬ ವಿಚಾರ ಅವರ ಮನಸ್ಸಿನಲ್ಲಿ ಬರುವುದಿಲ್ಲ. ಅವರಿಗೆ ಲಂಚದ ರೂಪದಲ್ಲಿ ನೀಡಲಾಗುವ ಹಣ ಅಥವಾ ಇತರ ಆಮಿಷಗಳಷ್ಟೇ ಕಾಣಿಸುತ್ತವೆ. ಅವರ ಬುದ್ಧಿ ಕೆಲಸ ಮಾಡುವುದಿಲ್ಲ. ವಿವೇಕವು (ಆತ್ಮಸಾಕ್ಷಿಯು) ಸ್ವಾರ್ಥದ ಮುಸುಕಿನಿಂದ ಮುಚ್ಚಲ್ಪಡುತ್ತದೆ. ಸಮಾಜಕ್ಕೆ ಧರ್ಮಾಚರಣೆ ಕಲಿಸುವುದೇ ಇದಕ್ಕೆಲ್ಲ ಸೂಕ್ತ ಪರಿಹಾರ. ಎಲ್ಲರೂ ಧರ್ಮಾಚರಣೆಯ ಕೃತಿಯನ್ನು ನಿತ್ಯ ಜೀವನದಲ್ಲಿ ಮಾಡಿದರೆ ಅವರಿಗೆ ದೇವರ ಚೈತನ್ಯ ದೊರಕುವುದು ಮತ್ತು ಅವರ ವಿವೇಕಬುದ್ಧಿಯು ಕಾರ್ಯನಿರತವಾಗಿ ನೈತಿಕತೆಯು ಹೆಚ್ಚಾಗುತ್ತದೆ, ನಿರ್ಣಯಕ್ಷಮತೆ ಹೆಚ್ಚಾಗುತ್ತದೆ ಮತ್ತು ಸಮಾಜವ್ಯವಸ್ಥೆಯು ಸುಗಮವಾಗಿ ನಡೆಯುತ್ತದೆ.
– ಶ್ರೀ. ಅಶೋಕ ಲಿಮಕರ, ಸನಾತನ ಆಶ್ರಮ, ಪನವೇಲ.