ಬೆಂಗಳೂರು : ಬ್ರಾಹ್ಮಣ ಸಮಾಜಕ್ಕೆ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಅಧಿಕಾರಿಯು ನೀಡಿದ ಮಾಹಿತಿಗನುಸಾರ, ‘ರಾಜ್ಯದಲ್ಲಿ ೭ ಕೋಟಿ ಜನಸಂಖ್ಯೆಯಲ್ಲಿ ಕೇವಲ ಶೇ. ೩ ರಷ್ಟು ಮಾತ್ರ ಬ್ರಾಹ್ಮಣರಿದ್ದಾರೆ. ಜನಸಂಖ್ಯೆಯ ಬಗ್ಗೆ ಗಮನಿಸಿದರೆ ಬ್ರಾಹ್ಮಣ ಸಮಾಜವು ರಾಜ್ಯದಲ್ಲಿ ಅಲ್ಪಸಂಖ್ಯಾತರಿದ್ದಾರೆ. ಆದ್ದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಂತೆ ಬ್ರಾಹ್ಮಣ ಸಮಾಜಕ್ಕೂ ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಅಗತ್ಯವಿದೆ.
ಮಾರ್ಚ್ ೨೦೧೯ ರಲ್ಲಿ ಕರ್ನಾಟಕ ರಾಜ್ಯದಲ್ಲಿ ‘ಬ್ರಾಹ್ಮಣ ಅಭಿವೃದ್ಧಿ ಮಂಡಳಿ’ ಸ್ಥಾಪಿಸಲಾಗಿತ್ತು. ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಮಾತನಾಡುತ್ತಾ, “ಕೇಂದ್ರ ಸರಕಾರವು ಸರ್ಕಾರಿ ಉದ್ಯೋಗಗಳು ಮತ್ತು ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ನೀಡಿರುವ ಮೀಸಲಾತಿಯಂತೆಯೇ ರಾಜ್ಯ ಸರಕಾರವು ರಾಜ್ಯದಲ್ಲಿಯೂ ಆರ್ಥಿಕವಾಗಿ ಬಡವರಿಗೆ ಶೇ. ೧೦ ರಷ್ಟು ಮೀಸಲಾತಿ ಜಾರಿಯಾಗಬೇಕು’, ಎಂದು ನಾವು ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದೇವೆ” ಎಂದು ಹೇಳಿದರು.
ವರ್ಷಕ್ಕೆ ೮ ಲಕ್ಷ ರೂಪಾಯಿಗಿಂತ ಕಡಿಮೆ ಇರುವವರಿಗೆ ಲಾಭ ಸಿಗಲಿದೆ
‘ಬ್ರಾಹ್ಮಣ ವಿಕಾಸ ಮಂಡಳಿ’ಯ ಅಧಿಕೃತ ಜಾಲತಾಣವನ್ನು ಉದ್ಘಾಟಿಸುತ್ತಿರುವಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪರವರು ಈ ಬಗ್ಗೆ ಮಾತನಾಡುತ್ತಾ, “ಬ್ರಾಹ್ಮಣ ಸಮಾಜಕ್ಕೆ ಜಾತಿ ಪ್ರಮಾಣಪತ್ರಗಳನ್ನು ನೀಡಲು ರಾಜ್ಯ ಸರ್ಕಾರವು ವಿಚಾರ ಮಾಡಲಿದೆ, ಇದರಿಂದ ಅವರೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆಯಬಹುದು. ವಾರ್ಷಿಕ ೮ ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ ಬ್ರಾಹ್ಮಣ ಕುಟುಂಬಗಳು ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯಬಹುದು” ಎಂದು ಹೇಳಿದರು.