Balgladesh Riots : ಬಾಂಗ್ಲಾದೇಶದಲ್ಲಿನ ಹಿಂಸಾಚಾರದಲ್ಲಿ ಇದುವರೆಗೆ 300 ಜನರ ಸಾವು !

ದೇಶದಲ್ಲಿ ಅನಿರ್ದಿಷ್ಟ ಅವಧಿಗೆ ಕರ್ಫ್ಯೂ ಜಾರಿ !

ಢಾಕಾ (ಬಾಂಗ್ಲಾದೇಶ) – ಮೀಸಲಾತಿಗಾಗಿ ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದ್ದು ಆಗಸ್ಟ್ 4ರಂದು ನಡೆದ ಹಿಂಸಾಚಾರದಲ್ಲಿ 91 ಜನರು ಸಾವನ್ನಪ್ಪಿದ್ದು ಇಲ್ಲಿಯವರೆಗೆ 300ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಈ ಹಿಂಸಾಚಾರದಲ್ಲಿ 14 ಪೊಲೀಸರೂ ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರದಿಂದಾಗಿ ದೇಶದಲ್ಲಿ ಅನಿರ್ದಿಷ್ಟ ಅವಧಿಯವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ ಜೊತೆಗೆ ಇಂಟರ್ನೆಟ್ ಕೂಡ ಸ್ಥಗಿತಗೊಂಡಿದೆ. ಇದಲ್ಲದೇ ಮೂರು ದಿನಗಳ ರಜೆ ಕೂಡ ಘೋಷಿಸಲಾಗಿದೆ. ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಭಾರತವು ಬಾಂಗ್ಲಾದೇಶದಲ್ಲಿರುವ ಭಾರತೀಯ ನಾಗರಿಕರಿಗಾಗಿ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದ್ದು ತಮ್ಮ ಮನೆಗಳಿಂದ ಹೊರಬರದಂತೆ ಭಾರತೀಯರಿಗೆ ಸೂಚಿಸಿದೆ.

ವಿರೋಧ ಪಕ್ಷ ಬಿ.ಎನ್.ಪಿ. ಮತ್ತು ಜಮಾತ್-ಎ-ಇಸ್ಲಾಮಿ ಕಾರ್ಯಕರ್ತರ ನಡುವೆ ಹಿಂಸಾಚಾರ

ನರಸಿಂಗಡಿ ಜಿಲ್ಲೆಯಲ್ಲಿ ಪ್ರತಿಭಟನಾಕಾರರು 6 ಆವಾಮಿ ಲೀಗ್ ಕಾರ್ಯಕರ್ತರ ಹತ್ಯೆ ಮಾಡಿದರು. ಬಾಂಗ್ಲಾದೇಶದಲ್ಲಿ ಒಟ್ಟು 64 ಜಿಲ್ಲೆಗಳಿದ್ದು ಅದರಲ್ಲಿನ 50 ಜಿಲ್ಲೆಗಳಲ್ಲಿರುವ ಆವಾಮಿ ಲೀಗ್ ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ. ಸಚಿವ ಮೊಹಿಬುಲ್ ಹಸನ್ ಮತ್ತು ರೆಜುಲ್ ಅವರ ಮನೆಗಳಿಗೆ ಬಿ.ಎನ್‌.ಪಿ. ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ. ಆವಾಮಿ ವಿದ್ಯಾರ್ಥಿ ಸಂಘಟನೆಯಾದ ಬಿ.ಎನ್.ಪಿ. ನಾಯಕ ಅಮೀರ್ ಖುಸ್ರೋ ಮನೆ ಮೇಲೆ ಕೂಡ ದಾಳಿ ನಡೆದಿದೆ. ಪ್ರತಿಭಟನಾಕಾರರು ಪೊಲೀಸ್ ಠಾಣೆಗಳು, ಆಡಳಿತ ಪಕ್ಷದ ಕಚೇರಿಗಳು ಮತ್ತು ಪಕ್ಷದ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಬಾಂಗ್ಲಾದೇಶ ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಾಧೀಶರ ವಾಹನಗಳ ಮೇಲೂ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಅವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ. ನ್ಯಾಯಾಧೀಶರನ್ನು ಪೊಲೀಸ್ ಭದ್ರತೆಯಲ್ಲಿ ಮನೆಗೆ ಕರೆದುಕೊಂಡು ಹೋಗಲಾಗಿದ್ದು, ನ್ಯಾಯಾಧೀಶರು, ಸಚಿವರು ಹಾಗೂ ಇತರ ಗಣ್ಯರ ನಿವಾಸಗಳಿಗೆ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದೆ. ಇದುವರೆಗೆ 11 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಆಗಸ್ಟ್ 4ರಂದು ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಅವರು, ಪ್ರತಿಭಟನಾಕಾರರು ಚರ್ಚೆಗೆ ಮುಂದಾಗಬೇಕು. ಈ ಪ್ರತಿಭಟನೆಯ ಹಿಂದೆ ಪ್ರತಿಪಕ್ಷಗಳು ಹಿಂಸಾಚಾರ ಮಾಡುತ್ತಿವೆ ಎಂದು ಆರೋಪಿಸಿದರು.

ಮತಾಂಧ ಮುಸ್ಲಿಮರಿಂದ ಇಸ್ಕಾನ್ ಮತ್ತು ಕಾಳಿ ದೇವಸ್ಥಾನದ ಮೇಲೆಯೂ ದಾಳಿ

ಆಂದೋಲನಕಾರರಲ್ಲಿ ಮತಾಂಧ ಮುಸ್ಲಿಮರು ಹಿಂದೂಗಳ ಮನೆಗಳು ಮತ್ತು ಅವರ ದೇವಾಲಯಗಳ ಮೇಲೆಯೂ ದಾಳಿ ಮಾಡಿದ್ದಾರೆ. ಢಾಕಾದಲ್ಲಿರುವ ಇಸ್ಕಾನ್ ಮತ್ತು ಕಾಳಿ ದೇವಸ್ಥಾನಗಳು ಸೇರಿದಂತೆ ಹಿಂದೂ ಮನೆಗಳ ಮೇಲೂ ದಾಳಿ ನಡೆಸಲಾಗಿದೆ.

ಇದಕ್ಕೂ ಮೊದಲು ಬಾಂಗ್ಲಾದೇಶದಲ್ಲಿ ಮಿಲಿಟರಿ ಸರ್ವಾಧಿಕಾರವಿತ್ತು

1971ರಲ್ಲಿ ಬಾಂಗ್ಲಾದೇಶ ಸ್ಥಾಪನೆಯಾದ ನಂತರ, 1975 ರಿಂದ 1991ರವರೆಗೆ ಜಿಯಾ ಉರ್ ರೆಹಮಾನ್, ಇರ್ಷಾದ್ ಮೊದಲಾದ ಮಿಲಿಟರಿ ಅಧಿಕಾರಿಗಳ ಸರ್ವಾಧಿಕಾರಿ ಸರಕಾರವಿತ್ತು. ಅದರ ನಂತರ, ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಮತ್ತೆ ಸರಕಾರವನ್ನು ಸ್ಥಾಪಿಸಲಾಯಿತು.