Bangladesh Reservation Protest : ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧದ ಪ್ರತಿಭಟನೆಯಲ್ಲಿ 6 ಜನರ ಸಾವು, 400 ಜನರಿಗೆ ಗಾಯ

ಅರ್ಹತೆಯ ಆಧಾರದಲ್ಲಿ ಉದ್ಯೋಗ ನೀಡುವಂತೆ ಬೇಡಿಕೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಮೀಸಲಾತಿಯನ್ನು ರದ್ದುಗೊಳಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ. ಜುಲೈ 17 ರಂದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಆರು ಜನರು ಸಾವನ್ನಪ್ಪಿದ್ದು, 400 ಕ್ಕೂ ಹೆಚ್ಚು ಯುವ ಆಂದೋಲನಕಾರರು ಗಾಯಗೊಂಡರು. ಮೃತರಲ್ಲಿ ಚಿಕ್ಕ ಬಾಲಕನೂ ಸೇರಿದ್ದಾನೆ. ಈ ಘಟನೆಯ ನಂತರ, ಜುಲೈ 18 ರಂದು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಲಾಯಿತು. ಮತ್ತೊಂದೆಡೆ, ಹಿಂಸಾಚಾರದ ನಂತರ, ಬಾಂಗ್ಲಾದೇಶದ ವಿವಿಧ ನಗರಗಳಲ್ಲಿನ ಶಿಕ್ಷಣ ಸಂಸ್ಥೆಗಳನ್ನು ಅನಿರ್ದಿಷ್ಟಾವಧಿಯವರೆಗೆ ಮುಚ್ಚಲಾಗಿದೆ.

1971ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಸೈನಿಕರ ಮಕ್ಕಳಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವುದನ್ನು ವಿರೋಧಿಸಿ ಈ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಾರದ ಹಿಂದೆ ಸರ್ವೋಚ್ಚ ನ್ಯಾಯಾಲಯವು ಸರಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ನಿಷೇಧಿಸಿತ್ತು; ಆದರೆ ಪ್ರಧಾನಿ ಶೇಖ್ ಹಸೀನಾ ಮಾತ್ರ ಈ ನಿರ್ಣಯವನ್ನು ಜಾರಿಗೊಳಿಸಲು ಅವಕಾಶ ನೀಡಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಶೇ. 30 ರಷ್ಟು ಉದ್ಯೋಗಗಳು ಯುದ್ಧಕಾಲದ ಸೈನಿಕರ ಮಕ್ಕಳಿಗೆ ಮೀಸಲಿಡಲಾಗಿದೆ. ‘ಅರ್ಹತೆಯ ಆಧಾರದ ಮೇಲೆ ಉದ್ಯೋಗ ನೀಡಬೇಕು’ ಎಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ.

ಪ್ರಧಾನಿ ಶೇಖ್ ಹಸೀನಾ ಅವರು ಜುಲೈ 17 ರಂದು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ಧರಣಿ ನಿರತ ವಿದ್ಯಾರ್ಥಿಗಳಿಗೆ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಡುವಂತೆ ಮನವಿ ಮಾಡಿದರು. ‘ವಿದ್ಯಾರ್ಥಿಗಳಿಗೆ ನ್ಯಾಯ ಸಿಗುತ್ತದೆ’, ಎಂದು ಅಭಯ ನೀಡಿದರು.

ಏನಿದು ಮೀಸಲಾತಿ ಪ್ರಕರಣ ?

ಪ್ರಧಾನಿ ಶೇಖ್ ಹಸೀನಾ ಅವರು 2018 ರಲ್ಲಿ ಹೊಸ ಮೀಸಲಾತಿ ನಿಯಮಗಳನ್ನು ಜಾರಿಗೆ ತಂದಿದ್ದರು. ಇದರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ಶೇ.30, ಹಿಂದುಳಿದ ಜಿಲ್ಲೆಗಳ ಜನರಿಗೆ ಶೇ.10, ಮಹಿಳೆಯರಿಗೆ ಶೇ.10, ಅಲ್ಪಸಂಖ್ಯಾತರಿಗೆ ಶೇ.5 ಮತ್ತು ವಿಶೇಷಚೇತನರಿಗೆ ಶೇ.1ರಷ್ಟು ಉದ್ಯೋಗಗಳನ್ನು ನೀಡಲಾಗಿದೆ. ಸರಕಾರಿ ಉದ್ಯೋಗಗಳಲ್ಲಿ ಶೇ 56ರಷ್ಟು ಮೀಸಲಾತಿ ಇದೆ. ಇದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

ಭಾರತೀಯರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ! – ಭಾರತೀಯ ಹೈಕಮಿಷನರರಿಂದ ನಾಗರಿಕರಿಗೆ ಸೂಚನೆ

ಢಾಕಾದಲ್ಲಿರುವ ಭಾರತೀಯ ಹೈಕಮಿಷನರ್ ಬಾಂಗ್ಲಾದೇಶದಲ್ಲಿರುವ ಭಾರತೀಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ತುರ್ತು ಸೂಚನೆ ಪ್ರಸಾರ ಮಾಡಿದ್ದಾರೆ. ಇದರಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಅಶಾಂತಿಯಿಂದಾಗಿ ಅನಗತ್ಯ ಪ್ರಯಾಣ ತಪ್ಪಿಸಿ, ಮನೆಯಿಂದ ಹೊರಗೆ ಹೋಗದಂತೆ ಸಲಹೆ ನೀಡಲಾಗಿದೆ.