ವೃದ್ಧಾಪ್ಯಕಾಲದಲ್ಲಿ ವೃದ್ಧರು ಹೇಗೆ ವರ್ತಿಸಬೇಕು ?, ಇದರ ಬಗೆಗಿನ ಕೆಲವು ಸುಲಭ ಅಂಶಗಳು

೨೧ ನೇ ಶತಮಾನದ ಕಡೆಗೆ ಮಾರ್ಗಕ್ರಮಣ ಮಾಡುತ್ತಿರುವಾಗ ಹೆಚ್ಚುಕಡಿಮೆ ಶೇ. ೮೦ ರಷ್ಟು ಮಕ್ಕಳು (ಹುಡುಗರು, ಹುಡುಗಿಯರು) ತಮಗೆ ಜನ್ಮ ನೀಡಿದ ತಾಯಿ-ತಂದೆಯರನ್ನು ದುರ್ಲಕ್ಷ ಮಾಡುತ್ತಾರೆ. ಯಾರು ನಮ್ಮನ್ನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ, ಚಿಕ್ಕವರಿಂದ ದೊಡ್ಡವರನ್ನಾಗಿ ಮಾಡಿದರೋ, ಅವರನ್ನೇ ನಾವು ದೊಡ್ಡವರಾದ ಮೇಲೆ ಅಥವಾ ವಿವಾಹವಾದ ಮೇಲೆ ದ್ವೇಷಿಸುತ್ತೇವೆ ಅಥವಾ ಅವರ ತಿರಸ್ಕಾರ ಮಾಡುತ್ತೇವೆ ಅಥವಾ ಅವರನ್ನು ಮರೆತು ಬಿಡುತ್ತೇವೆ, ಆದರೆ ಆಗ ‘ನಾವೂ ಒಂದು ದಿನ ವೃದ್ಧರಾಗುವವರಿದ್ದೇವೆ ?’ ಎಂಬುದನ್ನು ಮರೆತು ಬಿಡುತ್ತೇವೆ. ತಾಯಿ-ತಂದೆಯರಿಗೆ ವೃದ್ಧಾಪ್ಯದಲ್ಲಿ ಮಕ್ಕಳಿಂದ ಯಾವ ಅಪೇಕ್ಷೆಯಿರುತ್ತವೆಯೋ, ಅವು ಪೂರ್ಣವಾಗುವುದಿಲ್ಲ.

ಇನ್ನು ಮುಂದೆ ಯಾರು ತಾಯಿ-ತಂದೆಯಾಗಲಿರುವರೋ, ಯಾರು ಈಗಾಗಲೇ ಆಗಿರುವರೋ ಮತ್ತು ಯಾರ ಕೈಯಲ್ಲಿ ಇಲ್ಲಿಯವರೆಗೆ ಎಲ್ಲ ಅಧಿಕಾರಗಳು ಇವೆಯೋ, ಆ ತಾಯಿ-ತಂದೆಯರು ಮುಂದಿನ ಕಾಳಜಿಯನ್ನು ವಹಿಸಿದರೆ, ವೃದ್ಧಾಪ್ಯಕಾಲದಲ್ಲಿ ಯಾವ ಸಮಸ್ಯೆಗಳು ನಿರ್ಮಾಣವಾಗುತ್ತವೆಯೋ ಅವುಗಳ ಪರಿಹಾರ ತಾನಾಗಿಯೇ ಆಗುವುದು.

ವೃದ್ಧಾಪ್ಯಕಾಲದಲ್ಲಿ ಈ ರೀತಿ ವರ್ತಿಸಬೇಕು

೧. ಪ್ರತಿಯೊಂದು ವಿಷಯದ ಕಡೆಗೆ ಮತ್ತು ತಮ್ಮ ವೃದ್ಧತ್ವದ ಕಡೆಗೆ ತಟಸ್ಥ ಭೂಮಿಕೆಯನ್ನಿಟ್ಟುಕೊಳ್ಳಬೇಕು. ಮಾನಸಿಕ ವಿಚಾರಗಳನ್ನು ಆದಷ್ಟು ಕಡಿಮೆಗೊಳಿಸಲು ಪ್ರಯತ್ನಿಸಬೇಕು.

೨. ನಾವು ಇಲ್ಲಿಯವರೆಗೆ ನಡೆಸಿದ ಜೀವನದಲ್ಲಿನ ನಮ್ಮ ಅಧಿಕಾರ, ಮಾನ-ಸನ್ಮಾನಗಳನ್ನು ಇಳಿವಯಸ್ಸಿನಲ್ಲಿ ಇತರರ ಮೇಲೆ ಹೇರಬಾರದು. ಇದರಿಂದ ವಿನಾಕಾರಣ ಸಂಘರ್ಷ ಒತ್ತಡ ಹಾಗೂ ದುಃಖ ನಿರ್ಮಾಣವಾಗುತ್ತದೆ.

೩. ನಾವು ಕುಟುಂಬದಲ್ಲಿ ಇತರರ ಮೇಲೆ ಭಾರವಾಗಿ ಜೀವಿಸಬಾರದು. ನಮಗೆ ಸಾಧ್ಯವಿದ್ದಷ್ಟು, ಚಿಕ್ಕ-ದೊಡ್ಡ ಕೆಲಸಗಳನ್ನು ನಾವು ಸ್ವತಃ ಮಾಡಬೇಕು.

೪. ನಮ್ಮ ವರ್ತನೆಯಲ್ಲಿ ಒಂದು ರೀತಿಯ ಮೃದು ಧೋರಣೆಯನ್ನು ಇಟ್ಟುಕೊಳ್ಳಬೇಕು. ಎಲ್ಲ ರೀತಿಯ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಬೇಕು. ಮಕ್ಕಳು ಕೇಳಿದರೆ, ಮಾತ್ರ ಸಲಹೆ ನೀಡಬೇಕು. ಅನಾವಶ್ಯಕ ಸಲಹೆಗಳನ್ನು ನೀಡಬಾರದು.

೫. ತಮ್ಮ ಯವ್ವನದಲ್ಲಿ ಪಾಲಿಸಿರುವ ರೂಢಿಗಳನ್ನು, ತಿಳುವಳಿಕೆಗಳನ್ನು, ಸಂಸ್ಕಾರಗಳನ್ನು ವೃದ್ಧಾಪ್ಯದಲ್ಲಿ (ಪರಿವರ್ತನೆಗೊಂಡಿರುವ ಜೀವನದ ವಿಚಾರ ಮಾಡಿ) ಯುವಕರ ಮೇಲೆ ಹೇರಬಾರದು. ಹಾಗೆಯೇ ಹೊಸ ಪೀಳಿಗೆಗೆ ಟೀಕಿಸದೇ ಅವರೊಂದಿಗೆ ಸುಸಂವಾದ ಸಾಧಿಸಬೇಕು.

೬. ಎಷ್ಟೇ ಗಂಭೀರ ಪರಿಸ್ಥಿತಿ ನಿರ್ಮಾಣವಾದರೂ, ನಾವು ನಮ್ಮ ಕೂಡಿಟ್ಟ ಎಲ್ಲ ಹಣವನ್ನು ಮಕ್ಕಳಿಗೆ ಕೊಡಬಾರದು. ಈ ರೀತಿಯ ಔದಾರ್ಯವು ಮುಂದೆ ತ್ರಾಸದಾಯಕವಾಗಬಹುದು.

೭. ಇಂದಿಗೂ ಸಮಾಜದಲ್ಲಿ ತಾವು ಸ್ವತಃ ಗಳಿಸಿ ಹಣವನ್ನು ಮುಪ್ಪಿನಕಾಲಕ್ಕಾಗಿ ಸಂಗ್ರಹಿಸಿಡುವ ಸ್ತ್ರೀಯರು ಬಹಳ ಕಡಿಮೆಯಿದ್ದಾರೆ. ಆದುದರಿಂದ ಪತಿಯು ತನ್ನ ಎಲ್ಲ ಗಳಿಕೆಯನ್ನು ಮಕ್ಕಳಿಗೆ ನೀಡಿ ತನ್ನ ಪತ್ನಿಯನ್ನು ಆಶ್ರಿತಳನ್ನಾಗಿ ಮಾಡಬಾರದು.

೮. ತಮ್ಮ ಕಡಿಮೆ ನಿದ್ದೆಯ ಬಗ್ಗೆ, ಹಾಗೆಯೇ ಹೊರಗಡೆ ಹೆಚ್ಚುತ್ತಿರುವ ಗತಿಮಾನ ಜೀವನದ ಬಗ್ಗೆ ಹಾಗೂ ಕುಟುಂಬದಲ್ಲಿನ ಚಿಕ್ಕ ದೊಡ್ಡ ವ್ಯಕ್ತಿಗಳ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಚಿಂತೆಯನ್ನು ಮಾಡಬಾರದು.

೯. ಮನೆಯಲ್ಲಿನ ಇತರರಿಗೆ ತಮ್ಮಿಂದ ಯಾವುದೇ ಅಡಚಣೆಯಾಗಬಾರದೆಂದು ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಸಮಯಬಂದರೆ ಸಂಪೂರ್ಣ ಬದಲಾಯಿಸುವ ಮಾನಸಿಕ ಸಿದ್ಧತೆಯನ್ನು ಮಾಡಿಟ್ಟು ಕೊಳ್ಳಬೇಕು.

೧೦. ನಿಸರ್ಗದ ಸೌಂದರ್ಯದಲ್ಲಿ ಸುಖಪಡುವುದನ್ನು ಕಲಿಯಬೇಕು. ಪ್ರತಿದಿನ ಬೆಳಗ್ಗೆ ಎದ್ದು ಸ್ವಚ್ಛ ಗಾಳಿಯಲ್ಲಿ ತಿರುಗಾಡಲು ಹೋಗಬೇಕು. ಇದರಿಂದ ಮಾನಸಿಕ ಆನಂದ ಹಾಗೂ ವ್ಯಾಯಾಮ ಎರಡನ್ನೂ ಸಾಧಿಸಬಹುದು.

೧೧. ದಿನದಲ್ಲಿನ ಬಹಳಷ್ಟು ಸಮಯವನ್ನು ಆಧ್ಯಾತ್ಮಿಕ ವಾಚನ, ಮನನ, ಚಿಂತನ ಹಾಗೂ ಧ್ಯಾನ ಮತ್ತು ನಾಮಜಪಕ್ಕಾಗಿ ಕೊಡಬೇಕು. ಇತರ ವಿಷಯಗಳಿಗೆ ಕಡಿಮೆ ಮಹತ್ವ ನೀಡಬೇಕು.

೧೨. ಸತತವಾದ ಧ್ಯಾನದಿಂದ, ನಾಮಜಪದಿಂದ ಆತ್ಮಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸಬೇಕು.

೧೩. ಭೋಜನದಲ್ಲಿ ಸಿಹಿ ಎಣ್ಣೆಯುಕ್ತ ಪದಾರ್ಥಗಳ ಪ್ರಮಾಣವನ್ನು ಕಡಿಮೆಮಾಡಿ ಸಾಧ್ಯವಿದ್ದಷ್ಟು ಅನ್ನ, ಚಪಾತಿ, ರೊಟ್ಟಿ, ತರಕಾರಿ, ಕೊಸಂಬರಿ, ಹಣ್ಣು, ಹಾಲು, ಮಜ್ಜಿಗೆ, ಮೊಸರು ಇವುಗಳ ಪ್ರಮಾಣವನ್ನು ಹೆಚ್ಚಿಸಬೇಕು.

೧೪. ಶಾರೀರಿಕ ಸ್ವಚ್ಛತೆ, ಮಾನಸಿಕ ಹಾಗೂ ಭಾವನಿಕ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬೇಕು.

೧೫. ಗಿಡದ ಮೇಲೆ ಹೊಸ ಹೊಸ ಅಂಕುರಿಸುವ ಹಸಿರು ಚಿಗುರುಗಳನ್ನು ನೆನಪಿಸುಕೊಂಡು ಮನಸ್ಸನ್ನು ಆನಂದದಲ್ಲಿಡಬೇಕು. ಹಣ್ಣಾದ ಎಲೆಗಳು ಒಂದು ದಿನ ಉದರಲೇಬೇಕು.

– ಶ್ರೀ. ದಿಲೀಪ ಹಿರಾಲಾಲ ಹೆಡಾ, ಸಟಾಣಾ, ಜಿಲ್ಲಾ ನಾಶಿಕ. (ಆಧಾರ : ಅಕ್ಕಲಕೋಟ ಸ್ವಾಮಿದರ್ಶನ)