ನಾಭಿ ಸಮತೋಲನ

ಊರ್ಜೆ ಸಂಚಾರ ಮಾಡುವ ನಾಭಿಚಕ್ರ !

ಪ್ರಾಣಾಯಾಮೇನ ಯುಕ್ತೇನಃ ಸರ್ವರೋಗಕ್ಷಯೋ ಭವೇತಃ |

ಅಯುಕ್ತಾಭ್ಯಾಸಯೋಗೇನಃ ಸರ್ವರೋಗಸಮುದ್ಭವಃ ||

ಅರ್ಥ : ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ಎಲ್ಲಾ ರೋಗಗಳು ನಾಶವಾಗುತ್ತವೆ. ಆದರೆ, ತಪ್ಪು ಪದ್ದತಿಯಿಂದ ಮತ್ತು ಅಯೋಗ್ಯ ಸಮಯದಲ್ಲಿ ಮಾಡಿದರೆ, ಅದು ಕಾಯಿಲೆಗಳಿಗೆ ಕಾರಣವಾಗಬಹುದು.

ಆರೋಗ್ಯಕರ ಶರೀರಕ್ಕಾಗಿ ನಾಭಿಚಕ್ರವು ಸಮತೋಲನದಲ್ಲಿರುವುದು ಆವಶ್ಯಕವಾಗಿದೆ. ಹೊಕ್ಕಳು ಹೊಟ್ಟೆಯ ಮಧ್ಯಭಾಗದಲ್ಲಿ ಮಧ್ಯದ ರೇಖೆಯ ಮೇಲಿದೆ. ಅದಕ್ಕೆ ಮರ್ಮ ಅಥವಾ ‘ಹೊಕ್ಕಳು ಎಂದು ಹೇಳುತ್ತಾರೆ. ಯೋಗ ವಿಜ್ಞಾನದ ಪ್ರಕಾರ, ದೇಹದಲ್ಲಿ ಒಂಬತ್ತು ದ್ವಾರಗಳಿವೆ. ಅವುಗಳಲ್ಲಿ ಮೂರು ದ್ವಾರಗಳು (ಚಕ್ರಗಳು) ಮಹತ್ವಪೂರ್ಣವಾಗಿವೆ. ಇದರಲ್ಲಿ ನಾಭಿಯ ಸ್ಥಾನವು ಮಣಿಪುರಚಕ್ರದಲ್ಲಿದೆ. ದೇಹದ ಮುಖ್ಯ ನಾಡಿಗಳ ಜಾಲಗಳು ೩ ಪ್ರಮುಖ ಸ್ಥಳಗಳಲ್ಲಿ ಒಟ್ಟುಗೂಡುತ್ತವೆ: ತಲೆ (ಮೆದುಳು), ಹೃದಯ ಮತ್ತು ಹೊಕ್ಕಳು. ಇವುಗಳಲ್ಲಿ ನಾಭಿಯು ಪ್ರಮುಖವಾಗಿದೆ. ದೇಹದಲ್ಲಿ ನಾಭಿಯ ಮೂಲಕವೇ ಊರ್ಜೆಯ ಸಂಚಾರವು ಆಗುತ್ತದೆ. ಕೆಲವು ವಿದ್ವಾಂಸರು ಇದನ್ನು ದೇಹದ ‘ಎರಡನೇ ಮೆದುಳು ಎಂದು ಕರೆದಿದ್ದಾರೆ.

(ಈ ಲೇಖನದ ಎಲ್ಲಾ ಬರಹಗಳು ಶ್ರೀ. ಅಕಲೇಶ ಜೈನ್ (ಆಧಾರ : ಮರಾಠಿ ಮಾಸಿಕ ‘ಯೋಗ ಸಂದೇಶ) ಇವರದ್ದಾಗಿದೆ.

ನಾಭಿ ಸಮತೋಲನದಲ್ಲಿದೆ ಎಂಬುದನ್ನು ಹೇಗೆ ಗುರುತಿಸುವಿರಿ ?

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೇರವಾಗಿ ಮಲಗಿ, ಒಂದು ವೇಳೆ ನಾಭಿಯನ್ನು (ಹೊಕ್ಕಳನ್ನು) ಬೆರಳು ಅಥವಾ ಹೆಬ್ಬೆರಳಿನಿಂದ ಒತ್ತಿದರೆ, ಅಲ್ಲಿ ಹೃದಯದ ಬಡಿತ ದಂತೆ ಸ್ಪಂದನದ (ಮಿಡಿತದ) ಅನುಭವವಾಗುತ್ತದೆ. ಇಂತಹ ಸ್ಪಂದನದ ಅನುಭವವಾದರೆ ನಾಭಿಚಕ್ರವು ತನ್ನ ಸಮತೋಲನ ಸ್ಥಿತಿಯನ್ನು ತೋರಿಸುತ್ತದೆ. ಒಂದು ವೇಳೆ ಈ ಸ್ಪಂದನ ತಿಳಿಯದೇ ಇದ್ದರೆ, ನಾಭಿಯು ಅಸಮತೋಲನದಲ್ಲಿದೆ (ಸ್ಥಳ ಬದಲಾಗಿದೆ) ಎಂದು ಅರ್ಥಮಾಡಿಕೊಳ್ಳಬೇಕು.

ನಾಭಿ ಅಸಮತೋಲನದ ಕಾರಣಗಳು !

ಅಸಮತೋಲನಕ್ಕೆ ಯಾವುದೇ ಒಂದು ಕಾರಣವಿರದೆ ಅನೇಕ ಕಾರಣಗಳಿರಬಹುದು; ಆದರೆ ನೇರವಾಗಿ ನಾಭಿಗೆ ಸಂಬಂಧಿಸಿದ ಕೆಲವು ಪ್ರಮುಖ ಕಾರಣಗಳು ಈ ಕೆಳಗಿನಂತಿವೆ,

೧. ವ್ಯಕ್ತಿಯ ಮೆದುಳಿನಲ್ಲಿ ಉಂಟಾಗುವ ಭಯದ ಹೆಚ್ಚಿನ ಪ್ರಭಾವವು ನಾಭಿಯ ಮೇಲೆ ಬೀಳುತ್ತದೆ. ಉದಾಹರಣೆಗೆ, ಯಾವುದಾದರೊಬ್ಬ ವ್ಯಕ್ತಿಗೆ ಕಾಡಿನಲ್ಲಿ ಹುಲಿ ಅಥವಾ ಇನ್ನಾವುದೇ ಪ್ರಾಣಿ ಕಂಡರೆ, ಅವನು ಭಯಭೀತನಾಗುತ್ತಾನೆ ಮತ್ತು ಅವನ ನಾಭಿ ಅಸಮತೋಲನಗೊಳ್ಳುತ್ತದೆ; ಆದ್ದರಿಂದ ನಾಭಿಗೆ ‘ಭಯದ ಕೇಂದ್ರವೆಂದು ಕರೆಯುತ್ತಾರೆ. ವ್ಯಕ್ತಿಯ ಮುಂದೆ ಭಯದ ಪರಿಸ್ಥಿತಿ ಎದುರಾದಾಗ, ಅದರ ಪ್ರತಿಕ್ರಿಯೆಯನ್ನು ಮೊತ್ತಮೊದಲು ನಾಭಿಚಕ್ರವೇ ಸಹಿಸ ಬೇಕಾ ಗುತ್ತದೆ. ಭಯದಿಂದಾಗಿ ವ್ಯಕ್ತಿಯು ಪದೇಪದೇ ನೀರು ಕುಡಿಯುವುದು, ಮಲ ವಿಸರ್ಜನೆ ಅಥವಾ ಮೂತ್ರ ವಿಸರ್ಜನೆ ಇವೆಲ್ಲವೂ ನಾಭಿ ಸಕ್ರಿಯವಾಗುವುದರಿಂದಲೇ ಸಂಭವಿಸುತ್ತವೆ.

೨. ಶರೀರದಲ್ಲಿ ಮೆದುಳು ಮತ್ತು ನಾಭಿಗೆ ಬಹಳಷ್ಟು ಸಂಬಂಧವಿದೆ. ವ್ಯಕ್ತಿಯು ಆಧುನಿಕ ಮತ್ತು ಭೌತಿಕವಾದಿ ಆಗುತ್ತಾ ಹೋಗುತ್ತಿರುವುದರಿಂದ ಮಾನಸಿಕ ಒತ್ತಡಗಳು ಹೆಚ್ಚಾಗಿರುವುದರಿಂದ ಅವನ ನಾಭಿಯು ಸಮತೋಲನ ಕಳೆದುಕೊಳ್ಳುತ್ತದೆ.

೩. ಆಟವಾಡುವುದು, ಭಾರವಾದ ವಸ್ತುಗಳನ್ನು ಎತ್ತುವುದು, ಅತೀ ಮಸಾಲೆಯುಕ್ತ ಆಹಾರ ಸೇವನೆ, ಹಠಾತ್ತನೇ ತಗ್ಗಿನಲ್ಲಿ ಕಾಲಿಡುವುದು ಮತ್ತು ನಾವು ಅಜಾಗರೂಕತೆಯಿಂದ ಮಾಡುವ ಕೆಲವು ಶಾರೀರಿಕ ಕ್ರಿಯೆಗಳಿಂದಾಗಿಯೂ ನಾಭಿಯು ತನ್ನ ಸಮತೋಲನವನ್ನು ಕಳೆದು ಕೊಳ್ಳುತ್ತದೆ.

– ಶ್ರೀ. ಅಕಲೇಶ ಜೈನ್