ಯೋಗ ಮತ್ತು ಅದರಿಂದ ಆತ್ಮೋನ್ನತಿ !

ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಈ ಮೂರೂ ಸ್ತರಗಳಲ್ಲಿ ಲಾಭದಾಯಕವಾಗಿದೆ. ಮಾನವನ ಮನಸ್ಸು ಚಂಚಲವಾಗಿದ್ದು, ಅದು ಸದಾ ವಿಷಯಾಸಕ್ತವಾಗಿರುತ್ತದೆ. ಅದನ್ನು ನಿಯಂತ್ರಿಸಲು ಮತ್ತು ಏಕಾಗ್ರಗೊಳಿಸಲು ಆಚಾರ್ಯ ಪಾತಂಜಲಿ ಯವರು ‘ಅಷ್ಟಾಂಗಯೋಗವನ್ನು ಹೇಳಿದ್ದಾರೆ. ಅಷ್ಟಾಂಗಯೋಗವನ್ನು  ನಿರಂತರವಾಗಿ ಮಾಡಿದರೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಉನ್ನತಿಯಾಗಿ ಕೊನೆಗೆ ಕೈವಲ್ಯಪ್ರಾಪ್ತಿ (ಮೋಕ್ಷಪ್ರಾಪ್ತಿ) ಆಗುತ್ತದೆ. ಯೋಗ ಸಾಧನೆಗಾಗಿ ಮುಂದಿನ ೮ ಅಂಗಗಳನ್ನು ಕ್ರಮವಾಗಿ ಮಾಡುವುದು ಆವಶ್ಯಕವಾಗಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ ಮತ್ತು ಸಮಾಧಿ ಇವುಗಳಿಗೆ ‘ಅಷ್ಟಾಂಗ ಎಂದು ಕರೆಯುತ್ತಾರೆ.

ವೈದ್ಯೆ (ಸೌ.) ಮುಕ್ತಾ ಲೋಟಲೀಕರ

೧. ಯಮ

ಇದರ ಪಾಲನೆಯಿಂದ ರಜ ಮತ್ತು ತಮ ದೋಷಗಳು ದೂರವಾಗಿ ಮನಸ್ಸು ಸಾತ್ತ್ವಿಕ ಗುಣದಿಂದ ತುಂಬಿಕೊಳ್ಳುತ್ತದೆ. ನೈತಿಕ ಮತ್ತು ಸಾಮಾಜಿಕ ಆರೋಗ್ಯಕ್ಕಾಗಿ ಇದು ಉಪಯುಕ್ತವಾಗಿದೆ. ಇದರಲ್ಲಿ ಅಹಿಂಸೆ, ಸತ್ಯ, ಅಸ್ತೇಯ (ಕಳ್ಳತನ ಮಾಡದಿರುವುದು), ಬ್ರಹ್ಮಚರ್ಯ ಮತ್ತು ಅಪರಿಗ್ರಹ (ಸಂಗ್ರಹ ಮಾಡದಿರುವುದು)ಗಳ ಸಮಾವೇಶವಿದೆ. ಮೇಲಿನ ಆಚರಣೆಗಳಿಂದ ವ್ಯಕ್ತಿಯು ಸಾತ್ತ್ವಿಕ ಆಗುವುದರಿಂದ ವ್ಯವಹಾರದಲ್ಲಿ ಮತ್ತು ಸಮಾಜದಲ್ಲಿ ಸ್ಥಿರತೆಯು ನಿರ್ಮಾಣವಾಗುತ್ತದೆ.

೨. ನಿಯಮ

ತನ್ನ ಜೀವನವನ್ನು ಶಿಸ್ತುಬದ್ಧಗೊಳಿಸುವುದು ಮತ್ತು ಆರೋಗ್ಯಕ್ಕೆ ಪೂರಕವಾಗಿರುವ ಕರ್ತವ್ಯ  ಹಾಗೂ ಆರೋಗ್ಯಕ್ಕೆ ಪೂರಕವಾಗಿರುವ ಭಾವನೆಗಳಿಗೆ ನಿಯಮ ಎನ್ನುತ್ತಾರೆ.

ಪಾತಂಜಲಿಯವರ ೫ ನಿಯಮಗಳು

ಅ. ಶೌಚ : ಇದರಲ್ಲಿ ದೈಹಿಕ ಮತ್ತು ಮಾನಸಿಕ ಶುದ್ಧಿ ಅಡಕವಾಗಿವೆ. ಪಂಚಕರ್ಮ ಚಿಕಿತ್ಸೆ, ಯೋಗಿಕ ಕ್ರಿಯೆಗಳಿಂದ (ಧೌತಿ, ನೇತಿ, ನೌಲಿ, ತ್ರಾಟಕ ಇತ್ಯಾದಿ) ದೈಹಿಕ ಶುದ್ಧಿಯಾಗುತ್ತದೆ, ಇನ್ನು ಸತ್ಯದ ಆಚರಣೆ, ಷಡ್ರಿಪುಗಳ ತ್ಯಾಗದಿಂದ ಮನಸ್ಸಿನ ಶುದ್ಧಿಯಾಗುತ್ತದೆ.

ಆ. ಸಂತೋಷ : ಸುಖ-ದುಃಖ, ಲಾಭ-ಹಾನಿ, ಅನುಕೂಲತೆ-ಪ್ರತಿಕೂಲತೆ ಎಂಬ ದ್ವಂದ್ವ ಸ್ಥಿತಿಯಲ್ಲಿಯೂ ಸಂತುಷ್ಟನಾಗಿರುವುದು ಎಂದರೆ ಸಂತೋಷ. ಮನಸ್ಸಿನಲ್ಲಿ ಸಮತ್ವದ ಭಾವನೆಯನ್ನು ಇಟ್ಟು ಕೊಳ್ಳುವುದು ಎಂದರೆ ಸಂತೋಷ.

ಇ. ತಪಸ್ಸು : ಮಂತ್ರ-ಜಪ, ಅನುಷ್ಠಾನ, ವ್ರತ-ವೈಕಲ್ಯಗಳು, ಉಪಾಸನೆಗಳನ್ನು ಮಾಡುವಾಗ ಆಚರಣೆಗಳು ಶುದ್ಧವಾಗಿರಬೇಕು. ಮನಸ್ಸಿನಲ್ಲಿ ಸದ್ಭಾವನೆ ಇರಬೇಕು. ಮಾನಸನ್ಮಾನದ ಉದ್ದೇಶದಿಂದ ಅಥವಾ ಡಾಂಭಿಕತನದಿಂದ ಮಾಡಿದ ತಪಸ್ಸು, ಹಾಗೆಯೇ ವಿಧಿ ರಹಿತ, ಇತರರ ನಾಶದ ಉದ್ದೇಶದಿಂದ ಮಾಡಿದ ತಪಸ್ಸು ರಾಜಸಿಕ ಮತ್ತು ತಾಮಸಿಕವಾಗಿರುತ್ತದೆ. ಮಹರ್ಷಿ ವ್ಯಾಸರ ಪ್ರಕಾರ ತಪಸ್ಸಿಲ್ಲದ ಮನುಷ್ಯನಿಗೆ ಯೋಗವು ಸಿದ್ಧವಾಗುವುದಿಲ್ಲ.

ಈ. ಸ್ವಾಧ್ಯಾಯ : ಇಷ್ಟದೇವತೆಯ ಉಪಾಸನೆ, ನಾಮಸ್ಮರಣೆ, ಸ್ತೋತ್ರ ಪಠಣ ಇತ್ಯಾದಿ ಸ್ವಾಧ್ಯಾಯದ ಸಿದ್ಧಿಯಾದರೆ ಇಷ್ಟದೇವತೆಯು ಪ್ರಸನ್ನಗೊಂಡು ದರ್ಶನ ನೀಡುತ್ತಾಳೆ. ಸಾಧಕನಿಗೆ ಅಂತಹ ಅನುಭೂತಿ ಬರುತ್ತವೆ.

ಉ. ಈಶ್ವರಪ್ರಣಿಧಾನ : ಕರ್ಮದ ಫಲದ ಅಪೇಕ್ಷೆ ಇಟ್ಟುಕೊಳ್ಳದೆ ಈಶ್ವರನಿಗೆ ಅರ್ಪಿಸುವುದು, ಅಂದರೆ ಮಾಡುವವನು ಮತ್ತು ಮಾಡಿಸಿಕೊಳ್ಳುವವನು ಈಶ್ವರನೇ ಎಂಬ ಭಾವನೆಯೇ ಈಶ್ವರಪ್ರಣಿಧಾನ.

೩. ಆಸನ

ಸ್ಥಿರತೆ ಮತ್ತು ಸುಖದ ಅನುಭೂತಿಯೇ ಆಸನದ ನಿಜವಾದ ಸ್ವರೂಪವಾಗಿದೆ. ವ್ಯಾಧಿಗಳ ಪ್ರತಿಬಂಧಕ್ಕಾಗಿ ಆಸನಗಳಿಗೆ ವಿಶೇಷ ಮಹತ್ವವಿದೆ. ಆಸನಗಳ ಅಭ್ಯಾಸವನ್ನು ತಜ್ಞ ವ್ಯಕ್ತಿಗಳಿಂದ ಕಲಿತುಕೊಂಡೇ ಮಾಡಬೇಕು.

೪. ಪ್ರಾಣಾಯಾಮ

ಶ್ವಾಸೋಚ್ಛ್ವಾಸವು ಶರೀರದಲ್ಲಿನ ಮಹತ್ವದ ಕ್ರಿಯೆಯಾಗಿದ್ದು, ಅದರ ಯೋಗ್ಯಾಯೋಗ್ಯತೆಯ ಮೇಲೆಯೇ ಆರೋಗ್ಯವು ಅವಲಂಬಿಸಿರುತ್ತದೆ. ಭೋಜನ, ನಿದ್ರೆ, ನಡೆದಾಟ, ಪರಿಶ್ರಮ ಮುಂತಾದವುಗಳ ನಮ್ಮ ಶ್ವಾಸೋಚ್ಛ್ವಾಸದ ಮೇಲೆ ಪರಿಣಾಮ ಬೀರುತ್ತವೆ. ಈ ಕ್ರಿಯೆಗಳ ಸಮಯದಲ್ಲಿ ಪ್ರಾಣಶಕ್ತಿಯ ಅಪವ್ಯಯ ಆಗುತ್ತಿರುತ್ತದೆ. ಆ ಅಪವ್ಯಯವನ್ನು ತಡೆಯಲು ಪ್ರಾಣಾಯಾಮವು ಉತ್ತಮ ಯೋಗಿಕ ಕ್ರಿಯೆಯಾಗಿದೆ. ಶ್ವಾಸೋಚ್ಛ್ವಾಸದ ಮೇಲೆ ನಿಯಂತ್ರಣವನ್ನಿಟ್ಟು ಪ್ರಾಣಶಕ್ತಿಯನ್ನು ವಶಪಡಿಸಿಕೊಳ್ಳಬಹುದು. ಅದು ಪ್ರಾಣಾಯಾಮದಿಂದ ಸಾಧ್ಯವಾಗುತ್ತದೆ; ಆದ್ದರಿಂದ ಆಸನಗಳ ಜೊತೆಗೆ ಪ್ರಾಣಾಯಾಮ ವನ್ನು ತಪ್ಪದೇ ಮಾಡಬೇಕು.

೫. ಪ್ರತ್ಯಾಹಾರ

ಇಂದ್ರಿಯಗಳನ್ನು (ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು) ಅವುಗಳ ವಿಷಯಗಳಿಂದ ಅಲಿಪ್ತವಾಗಿಟ್ಟು ಚಿತ್ತದ ಸ್ವರೂಪಕ್ಕೆ ಅನುಸಾರವಾಗಿರುವುದು ಅಂದರೆ ಪ್ರತ್ಯಾಹಾರ. ಪ್ರತ್ಯಾಹಾರದಿಂದ ಮನಸ್ಸಿಗೆ ಸ್ಥಿರತೆ ಪ್ರಾಪ್ತವಾಗುತ್ತದೆ. ಮನಸ್ಸಿನ ವಿವಿಧ ವಿಷಯಗಳಲ್ಲಿನ ಆಸಕ್ತಿಯು ಕಡಿಮೆಯಾಗತೊಡಗುತ್ತದೆ. ಮನಸ್ಸಿನ ಚಂಚಲತೆಯು ನಾಶವಾಗುತ್ತದೆ. ಬೇಕು-ಬೇಡಗಳು ಇಲ್ಲವಾಗುತ್ತವೆ. ಸತ್ತ್ವಗುಣ ವೃದ್ಧಿಯಾಗಿ ಮಾನಸಿಕ ಕಾಯಿಲೆಗಳು ನಿಧಾನವಾಗಿ ಇಲ್ಲವಾಗುತ್ತವೆ.

೬. ಧಾರಣಾ

ಚಿತ್ತವನ್ನು ನಿರ್ದಿಷ್ಟ ಸ್ಥಾನದ ಮೇಲೆ ಸ್ಥಿರಗೊಳಿಸುವುದು ಎಂದರೆ ಧಾರಣಾ. ದೇವತೆಯ ಚಿತ್ರ ಅಥವಾ ಭ್ರೂಮಧ್ಯದ ಸ್ಥಳದಲ್ಲಿ ಅಥವಾ ಮೂಗಿನ ತುದಿಯ ಮೇಲೆ ಚಿತ್ತವನ್ನು ಏಕಾಗ್ರಗೊಳಿಸಿ ನಾಮಜಪ ಮಾಡುವುದು. ಇದನ್ನು ಮಾಡುವಾಗ ಸಾಧಕನು ದೇಹಬುದ್ಧಿಯನ್ನು ಮರೆತು ತಲ್ಲೀನನಾಗುತ್ತಾನೆ. ಅದರಿಂದ ಮನಸ್ಸಿನ ವಿಚಾರಗಳ ಮೇಲೆ ನಿಯಂತ್ರಣ ಬರುತ್ತದೆ ಮತ್ತು ಮನಸ್ಸು ಏಕಾಗ್ರವಾಗುತ್ತದೆ.

೭. ಧ್ಯಾನ

ಯಾವುದಾದರೂ ವಸ್ತುವಿನ ಮೇಲೆ ಮನಸ್ಸನ್ನು ಕೇಂದ್ರಿಕರಿಸಿ ಚಿತ್ತವನ್ನು ಏಕಾಗ್ರಗೊಳಿಸಿದಾಗ ಅದೇ ಸ್ಥಳದಲ್ಲಿ ಅದರ ಏಕತೆಯಾಗುವುದು, ಅಂದರೆ ಸತತ ಅದೇ ವಸ್ತುವಿನ ಚಿಂತನೆ ಮಾಡುವುದು, ಇದಕ್ಕೆ ‘ಧ್ಯಾನ’ ಎನ್ನುತ್ತಾರೆ. ಈಶ್ವರನ ನಿರಂತರ ನಾಮಸ್ಮರಣೆ ಮಾಡುವ ಹಂಬಲ ಉಂಟಾಗುವುದೆಂದರೆ ‘ಧ್ಯಾನ’.

ಈ ರೀತಿ ಯೋಗ, ಪ್ರಾಣಾಯಾಮಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉಪಯುಕ್ತವಾಗಿವೆ; ಆನಂದಪ್ರಾಪ್ತಿಗಾಗಿ ಕೇವಲ ದೈಹಿಕ ಮತ್ತು ಮಾನಸಿಕ ಆರೋಗ್ಯವು ಚೆನ್ನಾಗಿದ್ದರೆ ಸಾಲದು, ಅದಕ್ಕೆ ಅಧ್ಯಾತ್ಮದ ಜೊತೆಯನ್ನೂ ನೀಡುವುದು ಆವಶ್ಯಕವಾಗಿದೆ.’

– ವೈದ್ಯೆ (ಸೌ.) ಮುಕ್ತಾ ಲೋಟಲೀಕರ

ಯೋಗವೆಂದರೆ ಜೀವನಶೈಲಿ !

ಜೀವನದ ಅವಿಭಾಜ್ಯ ಅಂಗವೆಂದು ಯೋಗವನ್ನು ಸ್ವೀಕರಿಸುವಾಗ ಯೋಗಾಚಾರ ಧರ್ಮದ, ಅಂದರೆ ಯೋಗಾನುಕೂಲ ಆಹಾರ, ವಿಹಾರ, ಆಚಾರ, ವಿಚಾರ ಮತ್ತು ಉಚ್ಚಾರ ಎಂಬ ಪಂಚಾಂಗ ಸಾಧನೆಯ ತೀವ್ರ ವಿಚಾರವಾಗಬೇಕು.

– ಸೌ. ಅಪರ್ಣಾ ಎಲಕುಂಚವಾರ

ಯಮ-ನಿಯಮಗಳನ್ನು ಪಾಲಿಸುವುದರಿಂದಲೇ ಯೋಗಾಭ್ಯಾಸದಲ್ಲಿ ಯಶಸ್ಸು ಸಿಗುವುದು !

ಯಮ ಮತ್ತು ನಿಯಮಗಳ ಮೇಲೆಯೇ ಯೋಗಾಭ್ಯಾಸದ ಯಶಸ್ಸು ಅವಲಂಬಿಸಿದೆ. ಯೋಗದ ಅಂತಿಮ ಧ್ಯೇಯವನ್ನು ಸಾಧಿಸಲು ರಜ-ತಮ ಗುಣಗಳನ್ನು ಕ್ಷೀಣಗೊಳಿಸಿ ಸತ್ತ್ವಗುಣದ ವೃದ್ಧಿಯಾಗುವುದು ಆವಶ್ಯಕವಾಗಿದೆ ಮತ್ತು ಅದರ ಮುಂದೆ ತ್ರಿಗುಣಗಳ ಆಚೆಗೆ ಹೋದಾಗ ಮಾತ್ರ ಅಂತಿಮ ಧ್ಯೇಯದ ವರೆಗೆ ತಲುಪಲು ಸಾಧ್ಯವಾಗುತ್ತದೆ. ಆದ್ದರಿಂದ ಬಿಡುವಿನ ವೇಳೆಯಲ್ಲಿ ನಾವು ಆಲಸ್ಯ ಮತ್ತು ಚಂಚಲತೆಯನ್ನು ಕಡಿಮೆ ಮಾಡಿ ಸಾತ್ತ್ವಿಕ ಮನೋವೃತ್ತಿ ಉಂಟಾಗುವಂತಹ ಕೆಲಸಗಳನ್ನು ಮಾಡಿದರೆ ಮಾತ್ರ ಅದು ಯೋಗಾನುಕೂಲ ವಿಹಾರವಾಗುತ್ತದೆ.

– ಡಾ. ಮುಕುಂದ ರಾಮಚಂದ್ರ ಭಿಡೆ

ಯೋಗಾಭ್ಯಾಸದಲ್ಲಿ ಮನಸ್ಸನ್ನು ಶಾಂತಗೊಳಿಸಿ ಮನೋವಿಕಾರಗಳನ್ನು ದೂರ ಮಾಡುವುದು ಆವಶ್ಯಕ !

ಯೋಗಾಭ್ಯಾಸದಲ್ಲಿ ಶಾಸ್ತ್ರಶುದ್ಧ ಶವಾಸನ, ಯೋಗನಿದ್ರಾ ಇವುಗಳನ್ನು ಜೋಡಿಸಿದರೆ ಮನಸ್ಸು ಮತ್ತು ವಿಚಾರಗಳು ಶಾಂತವಾಗುತ್ತವೆ. ‘ಶಶಾಂಕಾಸನ’ ಮಾಡುವುದು ಆವಶ್ಯಕವಾಗಿದೆ. ಈ ಆಸನದಲ್ಲಿ ಮೆದುಳಿಗೆ ಶುದ್ಧ ರಕ್ತಪ್ರವಾಹ ಹೆಚ್ಚಾಗಿ ಮನಸ್ಸು ಶಾಂತ ಮತ್ತು ಬುದ್ಧಿ ಪರಿಪಕ್ವವಾಗುತ್ತಾ ಹೋಗುತ್ತದೆ. ಮನಸ್ಸಿನಲ್ಲಿನ ಅಶುದ್ಧ ವಿಚಾರಗಳಿಗೆ ‘ರೋಗಗ್ರಸ್ತ’ ಎನ್ನುವುದೇ ಯೋಗ್ಯವಾಗಿದೆ ಮತ್ತು ಈ ಮನೋವಿಕಾರಗಳನ್ನು ದೂರ ಮಾಡಲು ಶಾಸ್ತ್ರಶುದ್ಧ ಉಪಾಯಗಳನ್ನು ಮಾಡಬೇಕು. ಮಾನವೀಯ ವ್ಯವಹಾರದ ಮೇಲೆ ತ್ರಿಗುಣಗಳ ದಟ್ಟ ನೆರಳಿದೆ. ಆದ್ದರಿಂದ ನಮ್ಮ ವಿಚಾರಗಳು ಸತ್ತ್ವಪ್ರಧಾನವಾಗಿರಬೇಕು.

– ಶ್ರೀ. ಸತೀಶ ಎಲಕುಂಚವಾರ (ಆಧಾರ : ಮಾಸಿಕ ‘ಯೋಗಪ್ರಕಾಶ’, ದೀಪಾವಳಿ ವಿಶೇಷಾಂಕ)

ಯಮ-ನಿಯಮಗಳ ಲಾಭ ಕೇವಲ ವೈಯಕ್ತಿಕ ಮಾತ್ರವಲ್ಲ, ಸಮಾಜಕ್ಕೂ ಇದೆ !

ಭಗವಾನ ಪಾತಂಜಲಿಯವರು ರಚಿಸಿರುವ ಅಷ್ಟಾಂಗ ಯೋಗದ ಮೊದಲ ಅಂಗವೇ ‘ಯಮ’ ಆಗಿದೆ. ಪಾತಂಜಲಿ ಮುನಿಗಳು ಯಮದ ಆಚರಣೆಯನ್ನು ‘ಸಾರ್ವಭೌಮ ಮಹಾವ್ರತ’ ಎಂದು ಕರೆದಿದ್ದಾರೆ. ಯಮ, ನಿಯಮಗಳ ಪಾಲನೆಯಿಂದ ಕೇವಲ ವೈಯಕ್ತಿಕ ಲಾಭ ಮಾತ್ರವಲ್ಲ, ಸಮಾಜದ ಮೇಲೆಯೂ ಅದರ ಪರಿಣಾಮ ಆಗುತ್ತದೆ. ಯೋಗಶಾಸ್ತ್ರದ ಗ್ರಂಥವಾಗಿರುವ ಶ್ರೀಮದ್ಭಗವದ್ಗೀತೆಯ ೧೬ ನೇ ಅಧ್ಯಾಯದಲ್ಲಿ ‘ದೈವಾಸುರಸಂಪದ್ವಿಭಾಗಯೋಗ’ ಭಾಗದಲ್ಲಿ ಭಗವಂತನು ಯಾವ ದೈವೀ ಗುಣಗಳನ್ನು ವರ್ಣಿಸಿದ್ದಾನೋ, ಅದೇ ಆಚಾರ ರಸಾಯನ ಮತ್ತು ಯಮ-ನಿಯಮಗಳಲ್ಲಿ ಕಂಡುಬರುತ್ತದೆ.

– ಡಾ. (ಸೌ.) ಮೇಘಾ ಕುಲಕರ್ಣಿ (ಆಧಾರ : ಮಾಸಿಕ ‘ಯೋಗಪ್ರಕಾಶ’, ದೀಪಾವಳಿ ವಿಶೇಷಾಂಕ)