ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್

ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಅತುಲ್ ಶ್ರೀಧರನ್

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗಿರುವುದು ಭಾರತೀಯ ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆಯಾಗಿದೆ. ಭ್ರಷ್ಟಾಚಾರದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಸರಕಾರ ಕಾನೂನಿನಲ್ಲಿ ತಿದ್ದುಪಡಿ ತರಬೇಕೆಂದು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಹೇಳಿದ್ದಾರೆ. ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿ ಶ್ರೀಧರನ್ ಅವರು ಈ ಟಿಪ್ಪಣಿ ಮಾಡಿದ್ದಾರೆ. ಈ ಪೀಠದಲ್ಲಿ ನ್ಯಾಯಮೂರ್ತಿ ಸಿದ್ಧಾರ್ಥ್ ನಂದನ್ ಅವರು ಕೂಡ ಉಪಸ್ಥಿತರಿದ್ದರು.

ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅವರು ಮಾತನಾಡಿ

1.ಶ್ರೀರಾಮ ಮಂದಿರದ ದೇಣಿಗೆ ಕಳುವಾದ ಬಳಿಕವೂ ಯಾರೊಬ್ಬರಿಗೂ ಏನೂ ವ್ಯತ್ಯಾಸವಾಗದಿದ್ದರೆ, ಅವರಿಗೆ ಯಾವುದರ ಬಗ್ಗೆಯೂ ನಾಚಿಕೆಯಿರಲು ಸಾಧ್ಯವಿಲ್ಲ.

2.ಸಾಮಾನ್ಯ ಭಾರತೀಯನಿಗೆ ಭ್ರಷ್ಟಾಚಾರ ಎಂಬುದು ‘ಸಾಮಾನ್ಯ’ ಎನಿಸಲು ಪ್ರಾರಂಭಿಸಿದೆ. ಭ್ರಷ್ಟಾಚಾರದ ಪ್ರಕರಣದಲ್ಲಿ ಯಾರನ್ನಾದರೂ ಬಂಧಿಸುವವರೆಗೆ, ಸಾಮಾನ್ಯ ವ್ಯಕ್ತಿ ಸಂಬಂಧಪಟ್ಟವರನ್ನು ತಪ್ಪಿತಸ್ಥರೆಂದು ಭಾವಿಸುವುದಿಲ್ಲ. ಪಾರದರ್ಶಕತೆಯ ಸೂಚ್ಯಂಕದಲ್ಲಿ ಭಾರತವು ವಿಶ್ವದ 182 ದೇಶಗಳಲ್ಲಿ 91 ನೇ ಸ್ಥಾನದಲ್ಲಿದೆ. ಆದರೂ ನಮಗೆ ನಾಚಿಕೆಯಾಗುತ್ತಿಲ್ಲ.

ದೇಣಿಗೆ ಕಳವು ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಲು ಸುಪ್ರೀಂ ಕೋರ್ಟ್ ಆದೇಶ

ಶ್ರೀರಾಮ ಮಂದಿರದ ದೇಣಿಗೆ ಕಳವು ಪ್ರಕರಣದಲ್ಲಿ ಜುಲೈ 20 ರಂದು ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡವನ್ನು (SIT) ರಚಿಸಲು ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಈ ಬಗ್ಗೆ ಮಾತನಾಡಿ, ‘‘ಹೊಸದಾಗಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು. ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಈ ತಂಡದ ನೇತೃತ್ವ ವಹಿಸಬೇಕು. ಹೀಗೆ ಮಾಡುವುದರಿಂದ ತನಿಖೆಯು ನಿರ್ಣಾಯಕ ಹಂತ ತಲುಪುತ್ತದೆ” ಎಂದರು.

ಮುಖ್ಯ ನ್ಯಾಯಮೂರ್ತಿಗಳು, ‘‘ನಾವು ಕೇವಲ ನಿಮಗೆ ಎಚ್ಚರಿಸಲು ಬಯಸುತ್ತೇವೆ, ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ. ಮೇಲ್ನೋಟಕ್ಕೆ ಇದು ಕಾನೂನಿನ ಅಡಿಯಲ್ಲಿ ಅಪರಾಧಿಕ ಪ್ರಕರಣವೆಂದು ತೋರುತ್ತದೆ. ಇದರ ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಂಪೂರ್ಣ ಪ್ರಾಮಾಣಿಕ ತನಿಖೆಯಾಗಬೇಕು. ಈ ತನಿಖೆ ತಾರ್ಕಿಕ ಅಂತ್ಯಕ್ಕೆ ತಲುಪಬೇಕು, ನಮ್ಮ ಆಶಯವಿಷ್ಟೇ” ಎಂದು ಹೇಳಿದರು.