ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs

ಭಾರತೀಯ ಸಂಸ್ಥೆಗಳಿಗೆ ದೊಡ್ಡ ಹಾನಿಯ ಸಾಧ್ಯತೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕದ ರಾಷ್ಟ್ರಾಧ್ಯಕ್ಷರಾದ ಡೊನಲ್ಡ್ ಟ್ರಂಪ್ ರವರು ಅಮೇರಿಕಕ್ಕೆ ಆಮದು ಮಾಡಿಕೊಳ್ಳಲಾಗುವ ಜೆನೆರಿಕ್ ಔಷಧಗಳ ಮೇಲೆ ಹಂತ-ಹಂತವಾಗಿ ಬರೋಬ್ಬರಿ ಶೇ.೨೦೦ ರ ವರೆಗೆ ಆಮದು ಸುಂಕ ಅಂದರೆ ಟ್ಯಾರಿಫ್ ಹೇರುವುದಾಗಿ ಘೋಷಿಸಿದ್ದಾರೆ. ಅಮೇರಿಕದ ಈ ನಿರ್ಧಾರದಿಂದಾಗಿ ಜಗತ್ತಿನ ಪ್ರಮುಖ ಔಷಧಿ ರಫ್ತುದಾರ ಎಂದು ಗುರುತಿಸಿಕೊಂಡಿರುವ ಭಾರತದ ಔಷಧಿಯ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

​ಆಗಸ್ಟ್ ೧, ೨೦೨೬ ರಿಂದ ಈ ಹೊಸ ನೀತಿಯನ್ನು ಜಾರಿಗೆ ತರಲಾಗುವುದು. ಮೊದಲ ೨ ವರ್ಷಗಳು ( ೨೦೨೬-೨೦೨೮ ವರ್ಷಗಳು) ಅಮೇರಿಕಕ್ಕೆ ಆಮದಾಗುವ ಎಲ್ಲಾ ಜೆನೆರಿಕ್ ಔಷಧಿಗಳ ಮೇಲೆ ಶೇ. ೦ ಯಷ್ಟು ಸುಂಕವಿರುತ್ತದೆ. ಮೂರನೇ ವರ್ಷದಲ್ಲಿ ( ೨೦೨೮-೨೯ ವರ್ಷಗಳು) ಜೆನೆರಿಕ್ ಔಷಧಗಳ ಮೇಲಿನ ಆಮದು ಸುಂಕವನ್ನು ನೇರವಾಗಿ ಶೇ.೧೦೦ ರಷ್ಟು ಮಾಡಲಾಗುವುದು, ಹಾಗೂ ನಾಲ್ಕನೇ ವರ್ಷದಲ್ಲಿ ( ೨೦೨೯ ರ ನಂತರ) ಈ ಸುಂಕವನ್ನು ಹೆಚ್ಚಿಸಿ ಶೇ.೨೦೦ ರಷ್ಟು ಮಾಡಲಾಗುವುದು ಎಂದು ಟ್ರಂಪ್ ರವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

ಅಮೇರಿಕದಲ್ಲಿ ಜೆನೆರಿಕ್ ಔಷಧಗಳ ಉತ್ಪಾದನೆಯು ಪುನಃ ಆರಂಭವಾಗಲು ಟ್ರಂಪ್ ರಿಂದ ಈ ನಿರ್ಧಾರ

ಅಮೇರಿಕದಲ್ಲಿ ಜೆನೆರಿಕ್ ಔಷಧಿಗಳ ಉತ್ಪಾದನೆ ಮತ್ತೆ ಪ್ರಾರಂಭವಾಗಬೇಕು ಎನ್ನುವುದೇ ಈ ನೀತಿಯ ಮುಖ್ಯ ಉದ್ದೇಶವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ನೀಡಲಾದ ಕಾಲಮಿತಿಯೊಳಗೆ ಯಾವ ಸಂಸ್ಥೆಗಳು ಅಮೇರಿಕದಲ್ಲಿ ತಮ್ಮ ಯೋಜನೆಗಳು ಮತ್ತು ಯಂತ್ರೋಪಕರಣಗಳನ್ನು ಸ್ಥಾಪಿಸುವುದಿಲ್ಲವೋ, ಅವುಗಳು ಈ ದಂಡವನ್ನು ಎದುರಿಸಬೇಕಾಗುತ್ತದೆ. ಅಮೇರಿಕನ್ ಜನತೆಯ ಹಿತರಕ್ಷಣೆಗಾಗಿ ಮಾತ್ರವೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಭಾರತದ ಮೇಲೆ ಏನು ಪರಿಣಾಮ ಬೀರಲಿದೆ?

ಅಮೇರಿಕದಲ್ಲಿ ಬಳಸಲಾಗುವ ಒಟ್ಟು ಜೆನೆರಿಕ್ ಔಷಧಗಳ ಪೈಕಿ ಸುಮಾರು ಶೇ. ೪೦ ರಷ್ಟು ಔಷಧಿಗಳನ್ನು ಭಾರತವೊಂದರಿಂದಲೇ ಪೂರೈಸಲಾಗುತ್ತದೆ. ಅಮೇರಿಕದಲ್ಲಿ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಖಿನ್ನತೆ, ಸಾಂಕ್ರಾಮಿಕ ರೋಗಗಳು ಮತ್ತು ಮಾನಸಿಕ ಆರೋಗ್ಯಕ್ಕಾಗಿ ಭಾರತೀಯ ಜೆನೆರಿಕ್ ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆಮದು ಸುಂಕದಿಂದ ತಪ್ಪಿಸಿಕೊಳ್ಳಲು ಭಾರತೀಯ ಔಷಧಿ ತಯಾರಕರು ಈಗ ಅಮೇರಿಕದಲ್ಲೇ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕಾಗುತ್ತದೆ ಅಥವಾ ಅಮೇರಿಕನ್ ಮಾರುಕಟ್ಟೆಯಲ್ಲಿ ಔಷಧಿಗಳ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಬೇಕಾಗುತ್ತದೆ. ಇದರಿಂದ ನೇರವಾಗಿ ಅಮೇರಿಕನ್ ಗ್ರಾಹಕರ ಜೇಬಿನ ಮೇಲೆಯೂ ಹೊರೆ ಬೀಳಬಹುದು.