ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses

  • ಹಿಂಸಾಚಾರ ನಡೆಸುವ ಕಾಕ್ರೋಚ ಜನತಾ ಪಕ್ಷದ ಕಾರ್ಯಕರ್ತರ ಮೇಲಿನ ಲಾಠಿ ಬೀಸಿದ ಪ್ರಕರಣ​

  • ಕಪ್ಪು ಬಟ್ಟೆ ಧರಿಸಿ ಆಗಮಿಸಿದ ಕಾಂಗ್ರೆಸ್ ಸಂಸದರು

ನವದೆಹಲಿ – ಸಂಸತ್ತಿನ ಮುಂಗಾರು ಅಧಿವೇಶನದ ಮೂರನೇ ದಿನದಂದು ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದವು. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಆಗಮಿಸಿದರು. ಅವರು ಜಂತರ್ ಮಂತರ್‌ ನಲ್ಲಿ ಜುಲೈ ೨೦ ರಂದು ಕಾಕ್ರೋಚ ಜನತಾ ಪಕ್ಷದ ಹಿಂಸಾಚಾರಿ ಕಾರ್ಯಕರ್ತರ ಮೇಲೆ ಸರಕಾರಿ ಪೊಲೀಸರು ನಡೆಸಿದ ಲಾಠಿಪ್ರಹಾರ ಮತ್ತು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ ಈ ವಿಷಯದ ಕುರಿತು ಚರ್ಚೆಗೆ ಒತ್ತಾಯಿಸಿದರು. ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳು ಬೆಳಿಗ್ಗೆ ೧೧ ಗಂಟೆಗೆ ಆರಂಭವಾದವು; ಆದರೆ ಗಲಾಟೆಯ ಕಾರಣದಿಂದ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ ೧೨ ಗಂಟೆಯವರೆಗೆ ಮತ್ತು ರಾಜ್ಯಸಭೆಯ ಕಲಾಪವನ್ನು ಮಧ್ಯಾಹ್ನ ೨ ಗಂಟೆಯವರೆಗೆ ಮುಂದೂಡಲಾಯಿತು.

ಲೋಕಸಭೆಯಲ್ಲಿ ಕೇವಲ ಒಂದು ನಿಮಿಷ ಮಾತ್ರ ಕಲಾಪ ನಡೆಯಿತು. ಲೋಕಸಭೆಯ ಕಲಾಪ ಮಧ್ಯಾಹ್ನ ೧೨ ಗಂಟೆಗೆ ಪುನಃ ಆರಂಭವಾಯಿತು. ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಸದನದಲ್ಲಿ ಮಾತನಾಡಿ, ‘ಸರಕಾರ ಚರ್ಚೆಗೆ ಸಿದ್ಧವಾಗಿದೆ. ಎಲ್ಲಾ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ದೀಪೇಂದರ ಹೂಡಾ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಚರ್ಚೆ ನಡೆಸುವುದಿಲ್ಲ’, ಎಂದು ಹೇಳಿದರು. ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಮತ್ತು ಸಂಸದ ಸಯ್ಯದ್ ನಾಸಿರ್ ಹುಸೇನ್ ರಾಜ್ಯಸಭೆಯಲ್ಲಿ ಕಲಾಪ ತಡೆ ನಿರ್ಣಯದ ಪ್ರಸ್ತಾವನೆಯ ನೋಟಿಸ್ ನೀಡಿದರು. ವಿದ್ಯಾರ್ಥಿಗಳ ಮೇಲಿನ ಸರಕಾರಿ ಪೊಲೀಸ್ ಕ್ರಮ ಮತ್ತು ದೇಶದ ಪರೀಕ್ಷಾ ಪದ್ಧತಿಯ ಕುರಿತು ಚರ್ಚೆಯಾಗಬೇಕು ಎಂದು ಅವರು ಆಗ್ರಹಿಸಿದರು. ಕಾಂಗ್ರೆಸ್ ಸಂಸದರು ಈ ವಿಷಯಗಳ ಕುರಿತು ಸದನದಲ್ಲಿ ತಕ್ಷಣವೇ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಸೋನಮ್ ವಾಂಗಚುಕ್ ಅವರ ಬೆಂಬಲಕ್ಕೆ ಅಮೆರಿಕ, ಬ್ರಿಟನ್ ಮತ್ತು ಐರ್ಲೆಂಡ್‌ ನಲ್ಲಿ ಪ್ರತಿಭಟನೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗಚುಕ್ ಅವರ ಬೆಂಬಲಕ್ಕಾಗಿ ಮತ್ತು ಭಾರತೀಯ ವಿದ್ಯಾರ್ಥಿಗಳ ತಥಾಕಥಿತ ಹಕ್ಕುಗಳಿಗಾಗಿ ಅಮೆರಿಕ, ಬ್ರಿಟನ್ ಮತ್ತು ಐರ್ಲೆಂಡ್‌ ನಲ್ಲಿ ಅಲ್ಲಿನ ಭಾರತೀಯ ಸಮುದಾಯದಿಂದ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಅಮೆರಿಕದ ‘ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್’ ಎಂಬ ಸಾಮಾಜಿಕ ಸಂಸ್ಥೆಯ ನೇತೃತ್ವದಲ್ಲಿ ನ್ಯೂಯಾರ್ಕ್‌ ನ ಐತಿಹಾಸಿಕ ಯೂನಿಯನ್ ಸ್ಕ್ವೇರ್‌ ನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯ ಬಳಿ ಮತ್ತು ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಲಂಡನ್‌ ನಲ್ಲಿರುವ ಭಾರತೀಯ ಹೈಕಮಿಷನ್ ಮತ್ತು ಐರ್ಲೆಂಡ್ ರಾಜಧಾನಿ ಡಬ್ಲಿನ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗೂ ನಾಗರಿಕರು ಒಂದೆಡೆ ಸೇರಿ ಮೌನ ಪ್ರತಿಭಟನೆಯ ಮೂಲಕ ತಮ್ಮ ವಿರೋಧವನ್ನು ದಾಖಲಿಸಿದರು.

ಸಂಪಾದಕೀಯ ನಿಲುವು

ಪೊಲೀಸರ ಮೇಲೆ ದಾಳಿ ಮಾಡುವವರ ವಿರುದ್ಧ ಕಾಂಗ್ರೆಸ್ ಏಕೆ ಮಾತನಾಡುತ್ತಿಲ್ಲ? ಕಾಂಗ್ರೆಸ್ ಆಡಳಿತಾವಧಿಯಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಯೋಗಋಷಿ ರಾಮದೇವಬಾಬಾ ಅವರ ಪ್ರತಿಭಟನೆಯ ಮೇಲೆ ರಾತ್ರೋರಾತ್ರಿ ಸರಕಾರಿ ಪೊಲೀಸರಿಂದ ಲಾಠಿಪ್ರಹಾರ ನಡೆಸಲಾಗಿತ್ತು. ಇದರಲ್ಲಿ ರಾಜ್‌ ಬಾಲಾ ಎಂಬ ಮಹಿಳೆ ಮೃತಪಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಎಂದಾದರೂ ಕ್ಷಮೆ ಕೇಳಿತ್ತೇ?