ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!

ಸಂಪ್ರದಾಯವಾದಿ ರಿಪಬ್ಲಿಕನ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕಂಡುಬಂದ ಬದಲಾವಣೆ

(ಜೆನ್-ಜ಼ಿ (Gen-Z) ಪೀಳಿಗೆ ಎಂದರೆ ೧೯೯೭ ರಿಂದ ೨೦೧೧ ರವರೆಗಿನ ೧೫ ವರ್ಷಗಳ ಅವಧಿಯಲ್ಲಿ ಜನಿಸಿದ ಮಕ್ಕಳು.)

ವಾಷಿಂಗ್ಟನ್ (ಅಮೆರಿಕ): ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಧಾರ್ಮಿಕರು ಎಂದು ಹೇಳಲಾಗುತ್ತದೆ; ಆದರೆ ಅಮೆರಿಕದಲ್ಲಿ ಈ ಪರಿಕಲ್ಪನೆ ಬದಲಾಗುತ್ತಿದೆ. ‘ಗ್ಯಾಲಪ್’ (Gallup) ಸಂಸ್ಥೆಯ ೨೦೨೪-೨೫ ರ ವಿಶ್ಲೇಷಣೆಯ ಪ್ರಕಾರ, ಧರ್ಮವು ತಮ್ಮ ಜೀವನದಲ್ಲಿ ‘ಬಹಳ ಮುಖ್ಯ’ ಎಂದು ಅಮೆರಿಕದ ಶೇ. ೪೨% ರಷ್ಟು ಯುವಕರು ಹೇಳಿದ್ದಾರೆ. ಇದೇ ಅವಧಿಯಲ್ಲಿ ಯುವತಿಯರ ಪ್ರಮಾಣ ಶೇ. ೨೯% ರಷ್ಟಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಈ ವಿಷಯದಲ್ಲಿ ಪುರುಷರು ಮಹಿಳೆಯರಿಗಿಂತ ಮುಂಚೂಣಿಯಲ್ಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈ ಬದಲಾವಣೆ ಮೊದಲ ಬಾರಿಗೆ ಕಂಡುಬರುತ್ತಿದೆ.

ಸಂಪ್ರದಾಯವಾದಿ ವಿಚಾರಧಾರೆ ಹೊಂದಿರುವ ರಿಪಬ್ಲಿಕನ್ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದಿರುವುದೇ ಇದಕ್ಕೆ ಪ್ರಮುಖ ಕಾರಣ. ಅವರ ‘ಮಾಗಾ’ (MAGA – ‘ಮೇಕ್ ಅಮೆರಿಕ ಗ್ರೇಟ್ ಅಗೇನ್’) ಅಭಿಯಾನವು ‘ಶ್ವೇತವರ್ಣೀಯ ಕ್ರಿಶ್ಚಿಯನ್ ಪ್ರಾಬಲ್ಯ’ದ ಸುತ್ತ ಸಾಗುತ್ತದೆ.

೧. ತಜ್ಞರ ಪ್ರಕಾರ, ಇದರ ಹಿಂದೆ ಕೇವಲ ಶ್ರದ್ಧೆ ಮಾತ್ರವಲ್ಲದೆ, ಅಸ್ಮಿತೆಯ ರಾಜಕೀಯ ಮತ್ತು ಸಾಂಪ್ರದಾಯಿಕ ಆಲೋಚನೆಗಳು ಕೂಡ ದೊಡ್ಡ ಕಾರಣವಾಗಿವೆ. ಪುರುಷರು ಧರ್ಮವನ್ನು ತಮ್ಮ ವೈಚಾರಿಕ ಅಸ್ಮಿತೆಯ ಭಾಗವೆಂದು ಪರಿಗಣಿಸುತ್ತಿದ್ದಾರೆ

೨. ‘ಪಬ್ಲಿಕ್ ರಿಲಿಜನ್ ರಿಸರ್ಚ್ ಇನ್‌ಸ್ಟಿಟ್ಯೂಟ್’ ಪ್ರಕಾರ, ೨೦೧೩ ರಲ್ಲಿ ಶೇ. ೨೯% ರಷ್ಟು ಯುವತಿಯರು ತಮ್ಮನ್ನು ತಾವು ಯಾವುದೇ ಧರ್ಮಕ್ಕೆ ಸೇರಿದವರಲ್ಲ ಎಂದು ಹೇಳಿದ್ದರು. ೨೦೨೫ ರಲ್ಲಿ ಈ ಪ್ರಮಾಣ ಶೇ. ೪೩% ಕ್ಕೆ ಏರಿಕೆಯಾಗಿದೆ. ಧಾರ್ಮಿಕ ಸಂಸ್ಥೆಗಳಲ್ಲಿನ ಪುರುಷ ಪ್ರಧಾನ ಆಲೋಚನೆ ಮತ್ತು ತಾರತಮ್ಯವೇ ಇದಕ್ಕೆ ಕಾರಣ.

೩. ಮಹಿಳೆಯರ ಪಾತ್ರದ ಕುರಿತಾದ ಹಳೆಯ ಆಲೋಚನಾ ಶೈಲಿ ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ಮಹಿಳೆಯರ ಸೀಮಿತ ಭಾಗವಹಿಸುವಿಕೆಯಂತಹ ಕಾರಣಗಳಿಂದಾಗಿ ಅನೇಕ ಯುವತಿಯರು ಧರ್ಮದಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದ್ದಾರೆ.

 ಭಾರತದಲ್ಲಿ ಶೇ. ೬೪% ರಷ್ಟು ಯುವತಿಯರೇ ಹೆಚ್ಚು ಧಾರ್ಮಿಕರು!

‘ಪ್ಯೂ ರಿಸರ್ಚ್ ಸೆಂಟರ್’ನ ೨೦೨೧ ರ ವರದಿಯ ಪ್ರಕಾರ, ಶೇ. ೬೪% ರಷ್ಟು ಭಾರತೀಯ ಮಹಿಳೆಯರು ಪ್ರತಿದಿನ ಪ್ರಾರ್ಥನೆ ಮಾಡುತ್ತಾರೆ, ಆದರೆ ಪುರುಷರಲ್ಲಿ ಈ ಪ್ರಮಾಣ ಶೇ. ೫೬% ರಷ್ಟಿದೆ.