ಕೃತಕ ಬುದ್ಧಿಮತ್ತೆಯ ಮಿತಿ !

ಇಂದು ವೇಗವಾಗಿ ಆಗುತ್ತಿರುವ ತಂತ್ರಜ್ಞಾನದ ವಿಸ್ತರಣೆಯು ಮಾನವ ಜೀವನವನ್ನು ಸುಲಭಗೊಳಿಸುತ್ತಿದ್ದರೂ, ಅದರ ಅತಿಯಾದ ಅವಲಂಬನೆ ಮತ್ತು ಅಂಧಾನುಕರಣೆಯು ಮಾನವ ಅಸ್ತಿತ್ವದ ಮುಂದೆ ಹೊಸ ಸವಾಲುಗಳನ್ನು ತಂದೊಡ್ಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ‘ಕೃತಕ ಬುದ್ಧಿಮತ್ತೆ (ಎಐ – ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನದ ಪ್ರಶಂಸೆ ನಡೆಯುತ್ತಿದೆ. ‘ಮಾನವನ ಮೆದುಳಿನ ಸ್ಥಾನವನ್ನು ಈಗ ಕಂಪ್ಯೂಟರ್ ವ್ಯವಸ್ಥೆಯು ತೆಗೆದುಕೊಳ್ಳಲಿದೆ, ಎಂಬ ಭರಾಟೆಯಲ್ಲಿ ಅನೇಕ ಜಾಗತಿಕ ಸಂಸ್ಥೆಗಳು ಮಾನವಶಕ್ತಿಯನ್ನು ಕಡೆಗಣಿಸಿ ‘ಎಐ ಮೇಲೆ ಬಿಲಿಯನ್‌ಗಟ್ಟಲೆ ರೂಪಾಯಿಗಳನ್ನು ಹೂಡಿಕೆ ಮಾಡಿದವು; ಆದರೆ ಕೆಲವೇ ದಿನಗಳಲ್ಲಿ ಈ ತಂತ್ರಜ್ಞಾನದ ಮಿತಿಗಳು, ಅಪಾಯಗಳು ಮತ್ತು ಲೋಪದೋಷಗಳು ಮುನ್ನೆಲೆಗೆ ಬರಲಾರಂಭಿಸಿವೆ. ಭಾರತದ ಸರ್ವೋಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ‘ಎಐ ಮೂಲಕ ಸೃಷ್ಟಿಸಲಾದ ನಕಲಿ ಅಥವಾ ಕಾಲ್ಪನಿಕ ಕಾನೂನು ಉದಾಹರಣೆಗಳನ್ನು ಬಳಸುವುದು ಭೋಪಾಲ ಅನಿಲ ದುರಂತದ ವಿಷಾನಿಲ ಸೋರಿಕೆಯಷ್ಟೇ ಅಪಾಯಕಾರಿ ಎಂದು ಹೇಳಿದೆ. ಅಮೆರಿಕದ ‘ಫೋರ್ಡ್ ಸಂಸ್ಥೆಯು ಮತ್ತೊಮ್ಮೆ ಮಾನವ ಎಂಜಿನಿಯರ್‌ಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ತೆಗೆದುಕೊಂಡ ನಿರ್ಧಾರ, ಇವೆರಡೂ ‘ಎಐನ ಮಿತಿ ಮತ್ತು ಅದರ ಭೀಕರ ಬಿಕ್ಕಟ್ಟುಗಳನ್ನು ತೋರ್ಪಡಿಸುತ್ತದೆ.

ಅನಿಯಂತ್ರಿತ ತಂತ್ರಜ್ಞಾನ ಮತ್ತು ಗುಪ್ತ ಯುದ್ಧದ ಸಾಧನ

ಇಂದು ಜಗತ್ತಿನೆದುರು ಇರುವ ದೊಡ್ಡ ಸವಾಲೆಂದರೆ, ‘ಎಐಅನ್ನು ನಿಯಂತ್ರಿಸಲು ಯಾವುದೇ ಜಾಗತಿಕ ನೀತಿಸಂಹಿತೆ ಅಥವಾ ಕಟ್ಟುನಿಟ್ಟಾದ ಕಾನೂನು ಚೌಕಟ್ಟು ಸಂಪೂರ್ಣವಾಗಿ ಸಿದ್ಧವಾಗಿಲ್ಲ. ತಂತ್ರಜ್ಞಾನವು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆಯೋ, ಅಷ್ಟು ವೇಗವಾಗಿ ಕಾನೂನುಗಳು ರೂಪುಗೊಳ್ಳುತ್ತಿಲ್ಲ. ಇದನ್ನು ದುರುಪಯೋಗಿಸಿ ಭಯೋತ್ಪಾದಕ ಸಂಘಟನೆಗಳು, ದೇಶವಿರೋಧಿ ಶಕ್ತಿಗಳು ಮತ್ತು ಅಪರಾಧಿಗಳು ‘ಎಐ ಬಳಸಿ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರಬಹುದು. ಮಾಹಿತಿ ಯುದ್ಧ ಮತ್ತು ಸುಳ್ಳು ಪ್ರಚಾರವು ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಭೀಕರ ಸಮಸ್ಯೆಯನ್ನು ನಿವಾರಿಸಲು ಸಮಾಜ, ಸಂಸ್ಥೆಗಳು ಮತ್ತು ಸರಕಾರ ಮೂರೂ ಮಟ್ಟದಲ್ಲಿ ವ್ಯಾಪಕ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.

ಏನು ಮಾಡಬೇಕು ?

ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಯಾವುದೇ ಮಾಹಿತಿ, ವೀಡಿಯೊ ಅಥವಾ ಆಡಿಯೊ ನಿಜವೇ ಅಥವಾ ‘ಎಐ ನಿರ್ಮಿತವೇ?, ಎಂಬುದನ್ನು ಖಚಿತಪಡಿಸಿಕೊಳ್ಳದೆ ಅದನ್ನು ನಂಬಬೇಡಿ. ಕೇವಲ ‘ಎಐ ಅಥವಾ ‘ಗೂಗಲ್ ಮೇಲೆ ಅವಲಂಬಿತರಾಗದೆ ನಿಮ್ಮ ಸ್ವಂತ ವಾಚನ, ಚಿಂತನೆ ಮತ್ತು ವಿವೇಚನೆಯನ್ನು ಜಾಗೃತವಾಗಿಡಿ. ‘ಎಐ ಕೇವಲ ‘ಮಾಹಿತಿ ನೀಡಬಲ್ಲದು, ‘ಜ್ಞಾನ ಅಲ್ಲ ಎಂಬುದನ್ನು ನೆನಪಿನಲ್ಲಿಡಿ. ಬುದ್ಧಿಯನ್ನು ಸ್ಥಿರವಾಗಿ ಮತ್ತು ಸಾತ್ತ್ವ್ವಿಕವಾಗಿಡಲು ತಂತ್ರಜ್ಞಾನವನ್ನು ಸೀಮಿತವಾಗಿ ಬಳಸಿ. ಮನಸ್ಸು ಮತ್ತು ಬುದ್ಧಿಯ ಶುದ್ಧಿಗಾಗಿ ಅಧ್ಯಾತ್ಮ ಮತ್ತು ಸಾಧನೆ ಅವಶ್ಯಕವಾಗಿದೆ, ಇದು ಯಾವುದೇ ತಂತ್ರಜ್ಞಾನಕ್ಕಿಂತ ಶ್ರೇಷ್ಠವಾಗಿದೆ. ಉದ್ಯೋಗಿಗಳನ್ನು ನೌಕರಿಯಿಂದ ತೆಗೆದುಹಾಕುವ ಬದಲು ಅವರಿಗೆ ‘ಎಐಅನ್ನು ಸರಿಯಾಗಿ ಬಳಸುವುದು ಹೇಗೆ ? ಎಂಬ ತರಬೇತಿಯನ್ನು ನೀಡಬೇಕು. ‘ಎಐ ಇದು ಉದ್ಯೋಗಿಗಳಿಗೆ ಪರ್ಯಾಯವಾಗದೆ ಅವರ ಸಾಧನವಾಗಬೇಕು. ‘ಎಐ ಸಾಫ್ಟ್‌ವೇರ್ ಕಂಪನಿಗಳು ತಾವು ಬಳಸಿದ ಮಾಹಿತಿಯ ಮೂಲವನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಬೇಕು,

ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವನ ಕಲ್ಯಾಣಕ್ಕಾಗಿ ಸೃಷ್ಟಿಯಾಗಿದೆ, ಮಾನವ ತಂತ್ರಜ್ಞಾನದ ಗುಲಾಮನಾಗಲು ಅಲ್ಲ. ಸಮಯಕ್ಕೆ ಸರಿಯಾಗಿ ‘ಎಐ ಬಳಕೆಯ ಮೇಲೆ ‘ಮಾನವ ವಿವೇಚನೆ ಮತ್ತು ‘ಕಾನೂನಿನ ನಿಯಂತ್ರಣವನ್ನು ಹೇರದಿದ್ದರೆ, ಈ ತಂತ್ರಜ್ಞಾನವು ಮಾನವ ನಾಗರಿಕತೆಯ ವಿನಾಶಕ್ಕೆ ಕಾರಣ ಆಗಬಹುದು. ಕೊನೆಯದಾಗಿ, ಯಂತ್ರಕ್ಕೆ ಎಷ್ಟೇ ಕಲಿಸಿದರೂ ಅದು ‘ಯಂತ್ರವಾಗಿಯೇ ಉಳಿಯುತ್ತದೆ; ಅದಕ್ಕೆ ‘ಆತ್ಮ ಮತ್ತು ‘ವಿವೇಚನೆ ಇರುವುದಿಲ್ಲ. ಆದ್ದರಿಂದಲೇ ‘ಎಐ ಬಳಕೆಯನ್ನು ಸೀಮಿತವಾಗಿಟ್ಟುಕೊಂಡು ಮಾನವನ ಶ್ರೇಷ್ಠತೆಯನ್ನು ಉಳಿಸಿಕೊಳ್ಳುವುದರಲ್ಲಿಯೇ ಇಡೀ ಮಾನವಕುಲದ ಹಿತವಿದೆ !