‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)

ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಅವರ ಭಾರತ ವಿರೋಧಿ ಹೇಳಿಕೆ

ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್

ಢಾಕಾ (ಬಾಂಗ್ಲಾದೇಶ) – ಯಾವುದೇ ವ್ಯಕ್ತಿಗೆ ಅಕ್ರಮವಾಗಿ (ತಳ್ಳುವ ಮೂಲಕ / ‘ಪುಷ್-ಇನ್’) ಬಾಂಗ್ಲಾದೇಶಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿಲ್ಲ. ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ’ವು ಸ್ಥಳೀಯ ಜನರ ನೆರವಿನಿಂದ ಇದುವರೆಗೆ ಇಂತಹ ಎಲ್ಲಾ ಪ್ರಯತ್ನಗಳನ್ನು ಯಶಸ್ವಿಯಾಗಿ ವಿಫಲಗೊಳಿಸಿದೆ. ಕೆಲವು ಜನರು ಅಕ್ರಮವಾಗಿ ದೇಶವನ್ನು ತಲುಪಿದ್ದರು; ಆದರೆ ಅಧಿಕಾರಿಗಳು ಆ ಪ್ರಕರಣಗಳಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಮಾಹಿತಿ ನೀಡಿದ್ದಾರೆ. ಢಾಕಾದ ಪಿಲ್ಖಾನಾದಲ್ಲಿರುವ ಬಾರ್ಡರ್ ಗಾರ್ಡ್ ಬಾಂಗ್ಲಾದೇಶದ ಪ್ರಧಾನ ಕಚೇರಿಗೆ ಭೇಟಿ ನೀಡಿದ ನಂತರ ಅವರು ಮಾತನಾಡುತ್ತಿದ್ದರು. ಅವರು ಭಾರತದ ಉಲ್ಲೇಖದೊಂದಿಗೆ ಈ ಹೇಳಿಕೆ ನೀಡಿದ್ದಾರೆ. ಭಾರತದ ಕಡೆಯಿಂದ ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಭಾರತದ ಗಡಿಯಿಂದ ಬಾಂಗ್ಲಾದೇಶಿ ನುಸುಳುಕೋರರನ್ನು ಹಿಂತಿರುಗಿಸಲಾಗುತ್ತಿದೆ ಮತ್ತು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ ಅವರನ್ನು ತಡೆಯಲು ಯತ್ನಿಸುತ್ತಿದೆ.

‘ಭಾರತವು ನಮಗೆ ಪಟ್ಟಿ ನೀಡಲಿ!’(ಅಂತೆ)

ಗೃಹ ಸಚಿವ ಅಹ್ಮದ್ ಮಾತನಾಡಿ, ನಮ್ಮ ಸರಕಾರವು ಬೆಂಗಾಲ್‌ನ ಹೊಸದಾಗಿ ಆಯ್ಕೆಯಾದ ಸರಕಾರದ ‘ರಾಜಕೀಯ ನಡೆಗಳಿಗೆ’ ಉತ್ತರಿಸುವ ಬದಲು, ಈ ವಿಷಯದ ಕುರಿತು ಭಾರತದ ಕೇಂದ್ರ ಸರಕಾರದೊಂದಿಗೆ ಚರ್ಚಿಸಲಿದೆ. ಒಂದು ವೇಳೆ ಯಾವುದೇ ಬಾಂಗ್ಲಾದೇಶಿ ಪ್ರಜೆಯು ಭಾರತದಲ್ಲಿ ವಾಸಿಸುತ್ತಿದ್ದರೆ, ಭಾರತೀಯ ಅಧಿಕಾರಿಗಳು ನಿಗದಿತ ಪ್ರಕ್ರಿಯೆಯಂತೆ ವಿದೇಶಾಂಗ ಸಚಿವಾಲಯದ ಮೂಲಕ ಅವರ ಪಟ್ಟಿಯನ್ನು ನೀಡಬೇಕು. ನಾವು ಪೌರತ್ವವನ್ನು ಪರಿಶೀಲಿಸುತ್ತೇವೆ. ಹಕ್ಕು ಸಮಂಜಸವಾಗಿದೆ ಎಂದು ಕಂಡುಬಂದರೆ, ನಾವು ಆ ವ್ಯಕ್ತಿಯನ್ನು ಸರಿಯಾದ ಕಾನೂನು ಪ್ರಕ್ರಿಯೆಯ ಮೂಲಕ ಮರಳಿ ಕರೆತರುತ್ತೇವೆ. ನಾವು ಯಾರನ್ನೂ ಯಾವುದೇ ಇತರ ಮಾರ್ಗದಿಂದ ಒಳಗೆ ಬರಲು ಬಿಡುವುದಿಲ್ಲ ಎಂದು ಹೇಳಿದರು.

ಭಾರತ ಪಟ್ಟಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ!

ಭಾರತವು ೨ ಸಾವಿರದ ೬೮೦ ಕ್ಕೂ ಹೆಚ್ಚು ನುಸುಳುಕೋರ ಪ್ರಜೆಗಳ ಪಟ್ಟಿಯನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಿದೆ; ಆದರೆ ಬಾಂಗ್ಲಾದೇಶ ಸರಕಾರವು ಇದುವರೆಗೂ ಅವರ ಗುರುತನ್ನು ದೃಢಪಡಿಸಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯವು ಇತ್ತೀಚೆಗೆ ತಿಳಿಸಿತ್ತು. ಹಲವು ಪ್ರಕರಣಗಳಲ್ಲಿ ಪರಿಶೀಲನೆ ಪ್ರಕ್ರಿಯೆಯು ೫ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಬಾಕಿಯಿದೆ. ದ್ವಿಪಕ್ಷೀಯ ಒಪ್ಪಂದಗಳ ಆಧಾರದ ಮೇಲೆ ಈ ವಲಸಿಗರು ತಾಯ್ನಾಡಿಗೆ ಮರಳುವ ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸಲು ಬಾಂಗ್ಲಾದೇಶವು ಅವರ ರಾಷ್ಟ್ರೀಯತೆಯ ಪರಿಶೀಲನೆಯನ್ನು ಚುರುಕುಗೊಳಿಸಬೇಕು ಎಂದು ಸಚಿವಾಲಯವು ಮನವಿ ಮಾಡಿದೆ.

ಸಂಪಾದಕೀಯ ನಿಲುವು

ಭಾರತಕ್ಕೆ ಅಕ್ರಮವಾಗಿ ನುಸುಳುವ ತನ್ನ ದೇಶದ ಪ್ರಜೆಗಳನ್ನು ತಡೆಯುವ ಬದಲು, ಭಾರತಕ್ಕೇ ಬೆದರಿಕೆ ಹಾಕುವ ಬಾಂಗ್ಲಾದೇಶಕ್ಕೆ ಭಾರತವು ಕಠಿಣ ಶಬ್ದಗಳಲ್ಲಿ ತಕ್ಕ ಉತ್ತರ ನೀಡಬೇಕು!