ಲಾಠಿಚಾರ್ಜ್‌ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!

ಜಂತರ್ ಮಂತರ್‌ನಲ್ಲಿ ಹಿಂಸಾತ್ಮಕ ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್ ವಿರುದ್ಧದ ಅರ್ಜಿಯ ವಿಚಾರಣೆ ವೇಳೆ ಸರ್ವೋಚ್ಛ ನ್ಯಾಯಾಲಯದಿಂದ ವಕೀಲರಿಗೆ ತರಾಟೆ

ನವದೆಹಲಿ – ನಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಮತ್ತು ನಿಮ್ಮ ಸಮಯವನ್ನೂ ವ್ಯರ್ಥ ಮಾಡಿಕೊಳ್ಳಬೇಡಿ. ನಮಗೆ ಲಾಠಿಚಾರ್ಜ್‌ನ ವೀಡಿಯೊಗಳಲ್ಲಿ ಯಾವುದೇ ಆಸಕ್ತಿಯಿಲ್ಲ. ನಮ್ಮ ಬಳಿ ಈ ವೀಡಿಯೊಗಳನ್ನು ನೋಡುತ್ತಾ ಕುಳಿತುಕೊಳ್ಳಲು ಸಮಯವೇ ಇಲ್ಲ ಎಂದು ಜಂತರ್ ಮಂತರ್‌ನಲ್ಲಿ ಹಿಂಸಾಚಾರ ನಡೆಸಿದ ಕಾಕ್ರೋಚ್ ಜನತಾ ಪಕ್ಷದ ಕಾರ್ಯಕರ್ತರ ಮೇಲಿನ ಲಾಠಿಚಾರ್ಜ್ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಛ ನ್ಯಾಯಾಲಯವು ಅರ್ಜಿದಾರರ ವಕೀಲರಿಗೆ ತರಾಟೆಗೆ ತೆಗೆದುಕೊಂಡಿತು.

ಅರ್ಜಿದಾರರ ವಕೀಲರು ಸರ್ವೋಚ್ಛ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಾ, ‘ವಿದ್ಯಾರ್ಥಿಗಳು ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಪರೀಕ್ಷೆ, ‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ’ಯಲ್ಲಿನ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ಸುಧಾರಣೆಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಂತಹ ಅತ್ಯಂತ ಪ್ರಮುಖ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಕುರಿತು ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಹೇಳಿದರು. ಈ ವೇಳೆ ವಕೀಲರ ಮಾತನ್ನು ಮಧ್ಯದಲ್ಲೇ ತಡೆದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ‘ತುಂಬಾ ತುಂಬಾ ಧನ್ಯವಾದಗಳು!’ ಎಂದರು. ತದನಂತರ ವಕೀಲರು ನ್ಯಾಯಾಲಯದಲ್ಲಿ ಪೋಲಿಸರ ದೌರ್ಜನ್ಯ ಮತ್ತು ಲಾಠಿಚಾರ್ಜ್‌ನ ವೀಡಿಯೊಗಳು ಲಭ್ಯವಿವೆ ಎಂದು ಹೇಳಲು ಪ್ರಯತ್ನಿಸಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು ವೀಡಿಯೊ ನೋಡಲು ಸಮಯವಿಲ್ಲ ಎಂದು ಹೇಳಿದರು.

ಈ ಹಿಂದೆಯೂ ದೆಹಲಿ ಹೈಕೋರ್ಟ್ ಸಹ ಈ ಪೊಲೀಸ್ ಕ್ರಮದ ವಿರುದ್ಧದ ಇಂತಹುದೇ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿತ್ತು. ‘ಈ ಇಡೀ ವಿಷಯದಲ್ಲಿ ನ್ಯಾಯಾಲಯವನ್ನು ಸುಮ್ಮನೆ ಎಳೆದು ತರಬೇಡಿ’ ಎಂದು ಹೈಕೋರ್ಟ್ ಹೇಳಿತ್ತು.

ಸಂಪಾದಕೀಯ ನಿಲುವು

ಲಾಠಿಚಾರ್ಜ್ ವಿರುದ್ಧ ನ್ಯಾಯಾಲಯದ ಮೊರೆ ಹೋಗುವವರು, ಲಾಠಿಚಾರ್ಜ್‌ಗೆ ಒಳಗಾದವರು ಮಾಡಿದ ಹಿಂಸಾಚಾರದ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಅವರಿಂದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯ ವಸೂಲಿ ಮಾಡುವ ಬಗ್ಗೆ ಏಕೆ ಮಾತನಾಡುತ್ತಿಲ್ಲ?