NEET ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿನ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು! – ಪ್ರಧಾನಿ ಮೋದಿ

ನವ ದೆಹಲಿ – ‘ನೀಟ್’ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟರೆನ್ಸ್ ಟೆಸ್ಟ್, ಅಂದರೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದ 13 ಜನರನ್ನು ಬಂಧಿಸಲಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು, ಇದರಿಂದ ಭವಿಷ್ಯದಲ್ಲಿ ಯಾರೂ ಇಂತಹ ಕೆಲಸ ಮಾಡಲು ಧೈರ್ಯ ಮಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ನಡೆದ ಭಾಜಪ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಂಸದೀಯ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಪ್ರಧಾನಿ ಮೋದಿ ಅವರು, ಜವಾಬ್ದಾರಿಯುತ ಜನರನ್ನು ಬಂಧಿಸಿದ ನಂತರ ಸರಕಾರವು ಮತ್ತೆ ಪರೀಕ್ಷೆಯನ್ನು ನಡೆಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ಅತ್ಯಂತ ಭಯಾನಕ ಪಾಪವಾಗಿದೆ. ಇಂತಹ ಘಟನೆಗಳು ಭವಿಷ್ಯದಲ್ಲಿ ನಡೆಯದಂತೆ ತಡೆಯಲು ಎಲ್ಲಾ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ರಾಜ್ಯ ಸರಕಾರಗಳು ಪರೀಕ್ಷಾ ವ್ಯವಸ್ಥೆಯನ್ನು ಸುರಕ್ಷಿತಗೊಳಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಎಂದು ಹೇಳಿದರು.