ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment

ನೌಕಾಪಡೆಯ ಧೈರ್ಯಶಾಲಿ ಕಾರ್ಯಾಚರಣೆಯಿಂದ ಆರೋಪಿಗಳ ಬಂಧನ

ಮುಂಬಯಿ – ಮುಂಬಯಿನ ವಿಶೇಷ ನ್ಯಾಯಾಲಯವು ಭಾರತದ ಸಮುದ್ರ ಸುರಕ್ಷತೆಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ಕೈಗೊಂಡಿದೆ. ನೌಕೆಯನ್ನು ವಶಕ್ಕೆ ತೆಗೆದುಕೊಳ್ಳುವುದು, ಹಾಗೆಯೇ ನಾವಿಕರನ್ನು ಒತ್ತೆಯಾಳಾಗಿರಿಸುವುದು ಮತ್ತು ಭಾರತೀಯ ನೌಕಾಪಡೆಯ ಮೇಲೆ ದಾಳಿ ಮಾಡುವುದು ಮುಂತಾದ ಗಂಭೀರ ಆರೋಪಗಳ ಅಡಿಯಲ್ಲಿ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಎಲ್ಲಾ 44 ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡರು. ತೀರ್ಪು ನೀಡುವಾಗ ನ್ಯಾಯಾಲಯವು ಭಾರತೀಯ ನೌಕಾಪಡೆಯ ಧೈರ್ಯಶಾಲಿ ಕಾರ್ಯಾಚರಣೆಯನ್ನು ಮತ್ತು ಅಂತಾರಾಷ್ಟ್ರೀಯ ಸಮುದ್ರ ಸುರಕ್ಷತೆಗೆ ನೀಡಿದ ಕೊಡುಗೆಯನ್ನು ವಿಶೇಷವಾಗಿ ಶ್ಲಾಘಿಸಿತು.

. ಮಾರ್ಚ್ 2024 ರಲ್ಲಿ ಏಡನ್ ಖಾರಿಯಲ್ಲಿ ಸೊಮಾಲಿಯಾದ 9 ನಾಗರಿಕರು ಇರಾನ್‌ನ ಮೀನುಗಾರಿಕಾ ನೌಕೆಯನ್ನು ಅಪಹರಿಸಿದ್ದರು. ಎಕೆ-47 ರೈಫಲ್‌ಗಳು ಮತ್ತು ಹ್ಯಾಂಡ್ ಗ್ರೆನೇಡ್‌ಗಳಿಂದ ಸಜ್ಜಾಗಿದ್ದ ಸೊಮಾಲಿಯಾದ ನಾಗರಿಕರು ನೌಕೆಯ ಮೇಲಿನ ಸಿಬ್ಬಂದಿಯನ್ನು 3 ದಿನಗಳ ಕಾಲ ಒತ್ತೆಯಾಳಾಗಿರಿಸಿಕೊಂಡಿದ್ದರು. ಭಾರತೀಯ ನೌಕಾಪಡೆಯ ‘ಐ.ಎನ್.ಎಸ್. ತ್ರಿಶೂಲ್’ ಮತ್ತು ‘ಐ.ಎನ್.ಎಸ್. ಸುಮೇಧಾ’ ಯುದ್ಧನೌಕೆಗಳು ಸ್ಥಳಕ್ಕೆ ತಲುಪಿದಾಗ ಸೊಮಾಲಿಯಾದ ನಾಗರಿಕರು ಗುಂಡಿನ ದಾಳಿ ನಡೆಸಿದರು. ನಂತರ ನೌಕಾಪಡೆಯು ಧೈರ್ಯಶಾಲಿ ಕಾರ್ಯಾಚರಣೆ ನಡೆಸಿ ಎಲ್ಲರನ್ನು ಬಂಧಿಸಿತು.

. ಡಿಸೆಂಬರ್ 2023 ರಲ್ಲಿ ಮಾಲ್ಟಾದ ‘ಎಂ.ವಿ. ರೂಎನ್’ ವ್ಯಾಪಾರಿ ನೌಕೆಯನ್ನು ಅಪಹರಿಸಲಾಗಿತ್ತು. ‘ಐ.ಎನ್.ಎಸ್. ಕೊಲಕಾತಾ’ ಕಾರ್ಯಾಚರಣೆ ನಡೆಸಿ 35 ಸೊಮಾಲಿಯಾ ನಾಗರಿಕರನ್ನು ಬಂಧಿಸಿತು. ಇವರೆಲ್ಲರ ಮೇಲೆ ಮೊಕದ್ದಮೆ ಹೂಡಲಾಯಿತು.

ಆರೋಪಿಗಳ ಕೃತ್ಯಗಳಿಂದಾಗಿ ಅವರ ಮೇಲೆ ಕರುಣೆ ತೋರಲು ನ್ಯಾಯಾಲಯದ ನಿರಾಕರಣೆ!

44 ಆರೋಪಿಗಳು ನ್ಯಾಯಾಲಯದ ಮುಂದೆ ಬಡತನ ಮತ್ತು ಕುಟುಂಬದ ಜವಾಬ್ದಾರಿಯನ್ನು ಉಲ್ಲೇಖಿಸಿ ಶಿಕ್ಷೆಯಲ್ಲಿ ವಿನಾಯಿತಿ ನೀಡುವಂತೆ ಕೋರಿದರು; ಆದರೆ ಆರ್ಥಿಕ ಪರಿಸ್ಥಿತಿ ಏನೇ ಇರಲಿ, ಶಸ್ತ್ರಾಸ್ತ್ರಗಳ ಬಲದಿಂದ ನೌಕೆಗಳ ಮೇಲೆ ನಿಯಂತ್ರಣ ಸಾಧಿಸುವುದು, ನಾವಿಕರನ್ನು ಒತ್ತೆಯಾಳಾಗಿರಿಸಿಕೊಳ್ಳುವುದು ಮತ್ತು ಕಪ್ಪ ಹಣಕ್ಕಾಗಿ ಅವರನ್ನು ಬಳಸುವುದು ಅತ್ಯಂತ ಗಂಭೀರ ಅಪರಾಧವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಆದ್ದರಿಂದ ಇಂತಹ ಕೃತ್ಯಗಳಲ್ಲಿ ಕರುಣೆ ತೋರಲು ಸಾಧ್ಯವಿಲ್ಲ. ನ್ಯಾಯಾಲಯದ ಈ ನಿರ್ಧಾರವನ್ನು ಸಮುದ್ರದ ನಾವಿಕರು ಸ್ವಾಗತಿಸಿದರು.

ಸಂಪಾದಕೀಯ ನಿಲುವು

ಮುಂಬಯಿನ ವಿಶೇಷ ನ್ಯಾಯಾಲಯದ ಪ್ರಶಂಸನೀಯ ತೀರ್ಪು!