
ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಂ | ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್ |
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ | |
– ಗುರುಗೀತಾ, ಅಧ್ಯಾಯ ೨, ಶ್ಲೋಕ ೧೧೧ (ಸ್ಕಂದಪುರಾಣ, ಉತ್ತರಖಂಡ, ಉಮಾಮಹೇಶ್ವರ ಸಂವಾದ)
ಅರ್ಥ : ಬ್ರಹ್ಮಾನಂದದಲ್ಲಿ ಮಗ್ನರಾಗಿರುವ, ಪರಮೋಚ್ಚ ಸುಖದಾತಾ, ಕೇವಲ ಜ್ಞಾನಸ್ವರೂಪಿ, ಸುಖ-ದುಃಖಾದಿ ದ್ವಂದ್ವಗಳಿಲ್ಲದ, ಆಕಾಶದಂತೆ ನಿರಾಕಾರ, ‘ತತ್ತ್ವಮಸಿ’ ಮುಂತಾದ ಮಹಾವಾಕ್ಯಗಳ ಗುರಿ (‘ಆ (ಬ್ರಹ್ಮ) ನೀನೇ ಆಗಿರುವೆ’ ಎಂಬ ವೇದವಾಕ್ಯವು ಯಾರನ್ನು ಉದ್ದೇಶಿಸಿ ಇದೆಯೋ ಅವರು), ಏಕೈಕ, ನಿತ್ಯ, ವಿಮಲ, ನಿಶ್ಚಲ, ಸರ್ವಜ್ಞ, ಸರ್ವಸಾಕ್ಷಿ, ಭಾವಾತೀತ ಮತ್ತು ತ್ರಿಗುಣಾತೀತರಾಗಿರುವ ಸದ್ಗುರುಗಳಿಗೆ ನಾನು ನಮಸ್ಕರಿಸುತ್ತೇನೆ.

‘ವೈಶಾಖ ಕೃಷ್ಣ ಸಪ್ತಮಿ’ಯು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ದಿನ ! ಗುರುದೇವರ ಜನ್ಮೋತ್ಸವವು ಸಾಧಕರಿಗೆ ಅತ್ಯಂತ ಚೈತನ್ಯಮಯ, ದೈವೀ ಮತ್ತು ಅಲೌಕಿಕವಾದ ಆನಂದದಾಯಕ ಉತ್ಸವವಾಗಿರುತ್ತದೆ. ಸಪ್ತರ್ಷಿಗಳು ನಾಡಿಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ, ೨೦೨೨ ರಲ್ಲಿ ರಥೋತ್ಸವ, ೨೦೨೩ ರಲ್ಲಿ ಬ್ರಹ್ಮೋತ್ಸವ ಮತ್ತು ೨೦೨೫ ರಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಹೀಗೆ ಜನ್ಮೋತ್ಸವಕ್ಕೆ ಉತ್ತರೋತ್ತರ ವ್ಯಾಪಕರೂಪ ಬರುತ್ತಾ ಹೋಯಿತು. ಈ ಮಾಧ್ಯಮಗಳಿಂದ ನಾವು ಗುರುಕಾರ್ಯದ ಭವ್ಯ-ದಿವ್ಯ ರೂಪವನ್ನು ಅನುಭವಿಸಿದೆವು; ಆದರೆ ಗುರುದೇವರ ರೂಪವು ಅದರ ಆಚೆಗೆ ಇನ್ನಷ್ಟು ವ್ಯಾಪಕ ಅಂದರೆ ನಿರ್ಗುಣವಿದೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರ ೨೦೨೬ ರ ಜನ್ಮೋತ್ಸವದ ನಿಮಿತ್ತ, ಅವರ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮನ ಸಲ್ಲಿಸಿ, ಶಬ್ದಪುಷ್ಪಗಳನ್ನು ಅರ್ಪಿಸುತ್ತಿದ್ದೇನೆ…
೧. ಗುರುಗಳ ನಿರ್ಗುಣ, ಸರ್ವವ್ಯಾಪಿ ರೂಪ
ಸಾಧನಾ ಪ್ರವಾಸದ ಆರಂಭದಲ್ಲಿ ನಾವು ಗುರುಗಳನ್ನು ಮಾನವ ದೇಹದಲ್ಲಿ ನೋಡುತ್ತೇವೆ; ಆದರೆ ಸಾಧನೆಯು ನಮ್ಮ ಅಂತರಂಗದಲ್ಲಿ ಮೊಳಕೆಯೊಡೆಯತೊಡಗಿದಂತೆ, ಗುರುಗಳ ವ್ಯಾಪಕತೆಯು ನಮಗೆ ಅರ್ಥವಾಗತೊಡಗುತ್ತದೆ. ಗುರುಗಳ ನಿಜವಾದ ಸ್ವರೂಪವು ಕೇವಲ ಅವರ ಮಾನವ ಅಥವಾ ಸಗುಣ ದೇಹಕ್ಕೆ ಸೀಮಿತವಾಗಿರುವುದಿಲ್ಲ. ಗುರುಗಳು ಮೂಲತಃ ಒಂದು ‘ನಿರ್ಗುಣ’ತತ್ತ್ವವಾಗಿದ್ದಾರೆ. ನಿರ್ಗುಣ ರೂಪದಲ್ಲಿ ಗುರುಗಳು ಆಕಾಶದಂತೆ ಅಗಾಧ, ಅನಂತ ಮತ್ತು ಸರ್ವವ್ಯಾಪಿ ಆಗಿದ್ದಾರೆ. ಅವರಿಗೆ ಸ್ಥಳ, ಕಾಲ ಅಥವಾ ಸಮಯದ ಬಂಧನಗಳಿಲ್ಲ. ನಾವು ಎಲ್ಲಿ ನೋಡುತ್ತೇವೋ ಅಲ್ಲಿ ಗುರುತತ್ತ್ವವು ಅಸ್ತಿತ್ವದಲ್ಲಿದೆ. ಚರಾಚರಗಳಲ್ಲಿ, ಕಣಕಣಗಳಲ್ಲಿ ಮತ್ತು ಕ್ಷಣಕ್ಷಣಗಳಲ್ಲಿ ಗುರುಗಳೇ ಇದ್ದಾರೆ.
೨. ‘ಶ್ರೀ ಗುರುಗೀತೆ’ಯಲ್ಲಿ ವರ್ಣಿಸಲಾದ ಗುರುಮಹಾತ್ಮೆ !
ಗುರುಗಳ ಈ ಅಲೌಕಿಕ ಸ್ವರೂಪ ಮತ್ತು ಅವರ ಅಗಾಧ ಮಹಾತ್ಮೆಯನ್ನು ಆದಿಗುರು ಭಗವಾನ ಶಿವನು ಶ್ರೀ ಗುರುಗೀತೆಯ ಒಂದು ಶ್ಲೋಕದಲ್ಲಿ ಅತ್ಯಂತ ಸುಂದರವಾಗಿ ಹೆಣೆದಿದ್ದಾನೆ
ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್ |
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ || – ಗುರುಗೀತಾ, ಅಧ್ಯಾಯ ೨, ಶ್ಲೋಕ ೧೧೧
(ಸ್ಕಂದಪುರಾಣ, ಉತ್ತರಖಂಡ, ಉಮಾಮಹೇಶ್ವರ ಸಂವಾದ) (ಈ ಶ್ಲೋಕವನ್ನು ಅರ್ಥಸಹಿತ ಮೇಲ್ಭಾಗದಲ್ಲಿ ಪ್ರಕಟಿಸಲಾಗಿದೆ.)
೩. ಮೇಲಿನ ಶ್ಲೋಕದ ಪ್ರತಿಯೊಂದು ಶಬ್ದಕ್ಕೂ ಹೊಂದಿಕೆಯಾಗುವ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಮಹಿಮೆ !
ಈ ಶ್ಲೋಕದಲ್ಲಿನ ಪ್ರತಿಯೊಂದು ಶಬ್ದವು ಗುರುತತ್ತ್ವದ ಮಹಾನ ರಹಸ್ಯವನ್ನು ಬಹಿರಂಗ ಪಡಿಸುತ್ತದೆ. ‘ಇದರಲ್ಲಿನ ಪ್ರತಿಯೊಂದು ಶಬ್ದವು ಸಚ್ಚಿದಾನಂದ ಪರಬ್ರಹ್ಮ ಗುರುದೇವರಿಗೆ ಅಕ್ಷರಶಃ ಹೇಗೆ ಅನ್ವಯಿಸುತ್ತದೆ ?’, ಎಂಬುದನ್ನು ಮುಂದೆ ಕೊಡಲಾಗಿದೆ.

೩ ಅ. ಬ್ರಹ್ಮಾನಂದಂ : ಈಶ್ವರನು ಅನಾದಿ ಮತ್ತು ಅವನು ಸ್ಥಳ, ಕಾಲ ಹಾಗೂ ದೇಹದ ಆಚೆಗಿದ್ದಾನೆ. ಅವನು ನಿರಂತರ ಸತ್-ಚಿತ್-ಆನಂದ ಸ್ವರೂಪನಾಗಿದ್ದಾನೆ. ಬ್ರಹ್ಮಸ್ಥಿತಿಯು ಆನಂದಮಯವಾಗಿರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಗುರು ದೇವರು ಓರ್ವ ಅವತಾರಿ ಗುರು ಗಳಾಗಿರುವುದರಿಂದ, ಅವರು ಮಾನವ ದೇಹದಲ್ಲಿದ್ದರೂ ನಿರಂತರ ಬ್ರಹ್ಮಾನಂದದಲ್ಲಿ ಮಗ್ನ ರಾಗಿರುತ್ತಾರೆ. ಅವರು ಸಾಕ್ಷಾತ್ ಈಶ್ವರ ಸ್ವರೂಪರಾಗಿರುವುದರಿಂದ ಅವರ ಸ್ಥಿತಿಯೂ ‘ಅನಾದಿ’ಯಾಗಿದೆ.
೩ಆ.ಪರಮಸುಖದಂ : ಐಹಿಕ ಜಗತ್ತಿನಲ್ಲಿನ ಸುಖಗಳು ಕ್ಷಣಿಕ ಮತ್ತು ದುಃಖಾಶ್ರಿತವಾಗಿರುತ್ತವೆ; ಆದರೆ ಗುರುಗಳು ‘ಪರಮಸುಖದ’ರಾಗಿದ್ದಾರೆ. ಪರಮ ಎಂದರೆ ಸರ್ವೋಚ್ಚ ! ಸಾಧಕರಿಗೆ ಎಂದಿಗೂ ಮುಗಿಯದ ‘ಪರಮ ಸುಖ’ ಎಂದರೆ ಶಾಶ್ವತ ಆನಂದವನ್ನು ಪ್ರದಾನಿಸಲೆಂದೇ ಗುರುದೇವರು ‘ಆನಂದಪ್ರಾಪ್ತಿಗಾಗಿ ಸಾಧನೆ’ ಯನ್ನು ಕಲಿಸಿದ್ದಾರೆ. ಈ ಮೂಲಕ ಅವರು ಸ್ವತಃ ಆನಂದಿಯಾಗಿದ್ದು ಸಾಧಕರನ್ನು ಸಹ ಅದೇ ಪರಮಾನಂದದ ಶಿಖರಕ್ಕೆ ಕೊಂಡೊಯ್ಯುತ್ತಿದ್ದಾರೆ. ಅವರ ಸ್ವತಃ ಆನಂದ ಸ್ಥಿತಿಯಲ್ಲಿರುವುದರಿಂದಲೇ ಸಾಧಕರಿಗೆ ಅವರಿಂದ ಆ ಆನಂದವು ಸಿಗುತ್ತದೆ.
೩ ಇ. ಕೇವಲಂ ಜ್ಞಾನಮೂರ್ತಿಂ : ನಿಜವಾದ ಜ್ಞಾನವು ಮನಸ್ಸು ಮತ್ತು ಬುದ್ಧಿಯ ಆಚೆ ಗಿನದ್ದಾಗಿದೆ. ಅಂತಃಕರಣದಲ್ಲಿನ (ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂ ಇವುಗಳಲ್ಲಿನ) ದೋಷಗಳು ದೂರವಾಗಿ ಗುಣಾತೀತ ಸ್ಥಿತಿಗೆ ತಲುಪುವುದೆಂದರೆ ನಿರ್ಗುಣ ಸ್ಥಿತಿಯಾಗಿದೆ. ಗುರುದೇವರು ಈ ನಿರ್ಗುಣ ಸ್ಥಿತಿಯನ್ನು ಸಾಧಿಸಿ ರುವುದರಿಂದ, ಹಾಗೆಯೇ ಅವರ ಮನಸ್ಸು ಮತ್ತು ಬುದ್ಧಿಯು ಅನುಕ್ರಮವಾಗಿ ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯೊಂದಿಗೆ ಏಕರೂಪವಾಗಿರುವುದರಿಂದ ಅವರಿಗೆ ಎಲ್ಲಾ ರೀತಿಯ ಜ್ಞಾನವಿದೆ. ೧೯೮೬ ರಿಂದ ‘ಅಧ್ಯಾತ್ಮಶಾಸ್ತ್ರದ ಜ್ಞಾನದ ಸಂಕಲನ ಅಥವಾ ಗ್ರಂಥ ಬರವಣಿಗೆ ಮಾಡುವುದು’, ಈ ಕಾರ್ಯವನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ. ‘ಗ್ರಂಥಗಳಲ್ಲಿನ ಜ್ಞಾನದ ಮೂಲಕ ಜಿಜ್ಞಾಸುಗಳ ಮತ್ತು ಸಾಧಕರ ಸಂದೇಹಗಳು ನಿವಾರಣೆಯಾಗಿ ಅವರ ಸಾಧನೆಗೆ ವೇಗ ಬರಬೇಕು, ಹಾಗೆಯೇ ಮುಂದಿನ ಪೀಳಿಗೆಗಳಿಗೂ ಈ ಜ್ಞಾನದ ಲಾಭವಾಗಬೇಕು’, ಎಂಬುದೇ ಅದರ ಹಿಂದಿನ ಉದ್ದೇಶವಾಗಿದೆ. ಆದ್ದರಿಂದ ‘ಜ್ಞಾನಮೂರ್ತಿ’ ಎಂಬ ಬಿರುದು ಅವರಿಗೆ ಎಲ್ಲ ರೀತಿಯಿಂದ ಅನ್ವಯಿಸುತ್ತದೆ. ಸಾಧಕರಿಗೆ ಜ್ಞಾನ ಮತ್ತು ಪರಮಾನಂದ ಈ ಎರಡನ್ನೂ ದೊರಕಿಸಿ ಕೊಡುವ ಅವರು ಒಬ್ಬ ಮಹಾನ ಯುಗಪ್ರವರ್ತಕ ಗುರುಗಳಾಗಿದ್ದಾರೆ.
೩ ಈ. ದ್ವಂದ್ವಾತೀತಂ (ದ್ವಂದ್ವಗಳಿಗೂ ಮೀರಿದವರು) : ‘ಪರಬ್ರಹ್ಮನನ್ನು ವರ್ಣಿಸುವಾಗ ವೇದಗಳೂ ‘ನೇತಿ ನೇತಿ’ (‘ಇದಲ್ಲ, ಇದೂ ಅಲ್ಲ’ ಅಥವಾ ‘ಇಷ್ಟಲ್ಲ, ಇಷ್ಟೂ ಅಲ್ಲ’) ಎಂದು ಹೇಳುತ್ತಾ ಸುಸ್ತಾಗುತ್ತವೆ’, ಎಂಬುದು ಹೇಗೆ ತ್ರಿಕಾಲ ಸತ್ಯವೋ, ಹಾಗೆಯೇ ಗುರುದೇವರ ಆಧ್ಯಾತ್ಮಿಕ ಸ್ಥಿತಿಯು ಎಷ್ಟು ಸರ್ವೋಚ್ಚವಾಗಿದೆ ಎಂದರೆ, ನಮ್ಮ ಮಿತಿಯುಳ್ಳ ಮಾನವ ಬುದ್ಧಿಯಿಂದ ನಾವು ಅವರನ್ನು ಎಂದಿಗೂ ಸಂಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ‘ಅವರ ಈ ಅಗಾಧ ಸ್ವರೂಪವು ನಮ್ಮ ಗ್ರಹಣ ಶಕ್ತಿಯ ಆಚೆಗಿನದ್ದಾಗಿದೆ’, ಇದರಲ್ಲಿ ಯಾವುದೇ ದ್ವಂದ್ವ (ವಿರೋಧಾಭಾಸ) ಇಲ್ಲ.
೩ ಉ. ಗಗನಸದೃಶಂ : ಆಕಾಶವು ಹೇಗೆ ನಿರಾಕಾರವಾಗಿದೆಯೋ, ಅದರ ಅಂತ್ಯ ಕಂಡು ಹಿಡಿಯಲು ಸಾಧ್ಯವಿಲ್ಲವೋ, ಅದು ಸರ್ವವ್ಯಾಪಿಯಾಗಿದೆಯೋ, ಅದೇ ರೀತಿ ಗುರುದೇವರ ಸ್ವರೂಪವು ವಿಶಾಲ ಮತ್ತು ಸರ್ವವ್ಯಾಪಿಯಾಗಿದೆ. ಆದ್ದರಿಂದಲೇ ಸನಾತನದ ಸಾಧಕರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ, ಆಕಾಶದಂತೆ ಶ್ರೀ ಗುರುಗಳ ಕೃಪಾಛತ್ರವನ್ನು ಸದಾ ಅನುಭವಿಸುತ್ತಿರುತ್ತಾರೆ.
೩ ಊ. ತತ್ತ್ವಮಸ್ಯಾದಿಲಕ್ಷ್ಯಮ್ : ‘ತತ್ತ್ವಮಸಿ’ (ಆ (ಬ್ರಹ್ಮ) ನೀನೇ ಆಗಿರುವೆ)’, ಎಂಬ ವೇದವಾಕ್ಯವನ್ನು ಯಾರನ್ನು ಉದ್ದೇಶಿಸಿ ಹೇಳಲಾಗಿದೆಯೋ, ಅವರೇ ಗುರು ! ಗುರುದೇವರು ಪರಬ್ರಹ್ಮನ ಸಗುಣ ಮತ್ತು ನಿರ್ಗುಣ ಸ್ವರೂಪವಾಗಿದ್ದಾರೆ. ಗುರುದೇವರು ಯಾವ ರೀತಿ ಆಕಾಶದಂತೆ ವ್ಯಾಪಕರಾಗಿದ್ದಾರೆಯೋ, ಅದೇ ರೀತಿ ಅವರು ಸೂಕ್ಷ್ಮತಿಸೂಕ್ಷ್ಮವೂ ಆಗಿದ್ದಾರೆ; ಹಾಗಾಗಿ ಗುರುದೇವರ ವಿಷಯದಲ್ಲಿ ‘ತತ್ತ್ವಮಸಿ’ ಎಂದು ಹೇಳಬೇಕೆನಿಸುತ್ತದೆ !
೩ ಎ. ಏಕಂ ನಿತ್ಯಂ ವಿಮಲಮಚಲಂ : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಯಾವಾಗಲೂ ಸತ್-ಚಿತ್-ಆನಂದ ಈ ಸ್ಥಿತಿಯಲ್ಲಿರುತ್ತಾರೆ. ಆದ್ದರಿಂದ ಅವರಿಗೆ ತಮ್ಮ ಸ್ಥೂಲದೇಹದ ಅರಿವು ಇರುವುದಿಲ್ಲ. ಅವರಿಗೆ ಕೇವಲ ಚೈತನ್ಯದ ಅರಿವು ಇರುತ್ತದೆ. ‘ದೇಹಬುದ್ಧಿ’ಯು ನಾಶವಾಗಿರುವುದರಿಂದ ಅವರು ವಿಮಲ (ಪರಮ ಶುದ್ಧ) ಸ್ಥಿತಿಯನ್ನು ತಲುಪಿದ್ದಾರೆ. ಹೇಗೆ ಪರಮೇಶ್ವರನ ಸ್ಥಾನವು ಅಚಲವಾಗಿದೆಯೋ, ಅದೇ ರೀತಿ ಗುರುದೇವರ ಸ್ಥಾನವೂ ಅಚಲವಾಗಿದೆ. ಅವರಂತೆ ಯಾರೂ ಇರಲು ಸಾಧ್ಯವಿಲ್ಲ; ಆದುದರಿಂದ ಅವರು ಅದ್ವಿತೀಯರಾಗಿದ್ದಾರೆ.
೩ ಏ. ಸರ್ವಧೀಸಾಕ್ಷಿಭೂತಂ : ಗುರುದೇವರಲ್ಲಿ ಹೆಚ್ಚುತ್ತಿರುವ ನಿರ್ಗುಣ ತತ್ತ್ವದಿಂದಾಗಿ ಅವರಲ್ಲಿ ವ್ಯಾಪಕತೆ ಬಂದಿದೆ. ಎಲ್ಲ ಕಡೆಗೆ ತತ್ತ್ವರೂಪದಿಂದ ಅವರೇ ವ್ಯಾಪಿಸಿಕೊಂಡಿದ್ದಾರೆ; ಆದ್ದರಿಂದ ಅವರದ್ದು ಎಂದು ಹೇಳಿಕೊಳ್ಳಲು ಈಗ ಅಲ್ಲಿ ಏನೂ ಉಳಿದಿಲ್ಲ. ಪರಿಣಾಮವಾಗಿ ಗುರುದೇವರ ‘ಸ್ವ’ ವಿಷಯದಲ್ಲಿ ಅರಿವಾಗುವ ಸಂವೇದನೆಗಳು ಕಡಿಮೆಯಾಗಿವೆ. ಇದರ ಒಂದು ಉದಾಹರಣೆಯೆಂದರೆ ವರ್ಷ ೨೦೧೭ ರಲ್ಲಿ ಒಂದು ಬಾರಿ ಗುರುದೇವರು ಹೇಳಿದ್ದರು, “ನಾನು ಕೋಣೆಯಲ್ಲಿ ಓಡಾಡುವಾಗಲೂ ‘ಬೇರೆಯವರ ಮನೆಯಲ್ಲಿ ಅಥವಾ ಹೊಟೇಲ್ ಕೋಣೆಯೊಂದರಲ್ಲಿ ವಾಸಿಸುತ್ತಿದ್ದೇನೆ’, ಎಂದು ನನಗೆ ಅನಿಸುತ್ತದೆ. ‘ಇದು ನನ್ನ ಕೋಣೆ’, ಎಂದು ನನಗೆ ಅನಿಸುವುದಿಲ್ಲ. ಇದೇ ವಿಚಾರ ಬಟ್ಟೆಗಳು, ಚಪ್ಪಲಿ ಇತ್ಯಾದಿ ಎಲ್ಲ ವಿಷಯಗಳಲ್ಲಿಯೂ ಬರುತ್ತದೆ. ಇಷ್ಟೇ ಅಲ್ಲದೇ, ‘ದೇಹವೂ ನನ್ನದಲ್ಲ’, ಎಂಬ ವಿಚಾರ ಬರುತ್ತದೆ. ಈ ವಿಚಾರಗಳಿಂದ ‘ಇದಂ ನ ಮಮ |’, ಎಂದರೆ ‘ಇದು ನನ್ನದಲ್ಲ’, ಎಂಬ ಸಂಸ್ಕೃತ ವಚನವನ್ನು ನಾನು ಹಿಂದೆ ಬುದ್ಧಿಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ, ಆದರೆ ಅದರ ಸಾರ್ಥಕತೆಯನ್ನು ಈಗ ನಾನು ಅನುಭವಿಸುತ್ತಿದ್ದೇನೆ. ಇದರಿಂದ ‘ಮಾಯೆಯಿಂದ ಹಂತಹಂತವಾಗಿ ಹೇಗೆ ಮುಕ್ತರಾಗಬಹುದು ?’, ಎಂಬುದೂ ನನಗೆ ಅನುಭವಿಸಲು ಸಾಧ್ಯವಾಗುತ್ತಿದೆ.” ಇದರಿಂದ ‘ಗುರುದೇವರು ತಮ್ಮ ದೇಹದ ಕಡೆಗೂ ಎಷ್ಟು ಸಾಕ್ಷಿಭಾವದಿಂದ ನೋಡುತ್ತಾರೆ ಮತ್ತು ಅವರು ಅನುಭವಿಸುವ ನಿರ್ಗುಣ ಸ್ಥಿತಿ ಎಷ್ಟು ಉಚ್ಚ ಮಟ್ಟದ್ದಾಗಿದೆ !’, ಎಂಬುದು ತಿಳಿಯುತ್ತದೆ.
೩ ಐ. ಭಾವಾತೀತಂ ತ್ರಿಗುಣರಹಿತಂ : ತ್ರಿಗುಣಾತೀತ ಸ್ಥಿತಿಗೆ ತಲುಪಿದ ಜೀವವು ತನ್ನ ಬಗ್ಗೆ ಹಾಗೂ ಇತರರ ಬಗ್ಗೆ ನಡೆಯುವ ಘಟನೆಗಳನ್ನು ಸಾಕ್ಷಿಭಾವದಿಂದ ನೋಡುತ್ತಿರುತ್ತದೆ. ‘ಸಾಕ್ಷಿಭಾವ’ವೇ ಅದರ ಸ್ಥಾಯಿಭಾವವಾಗಿರುವುದರಿಂದ ಅದು ಸಂಪೂರ್ಣ ಜೀವನವನ್ನು ಈಶ್ವರೇಚ್ಛೆಯಂತೆ ಕಳೆಯುತ್ತಿರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತ್ರಿಗುಣಾತೀತ ಸ್ಥಿತಿಯನ್ನು ತಲುಪಿದ್ದಾರೆ. ಅವರು ಅಖಂಡ ಶಿವಾತ್ಮಾ ದಶೆಯಲ್ಲಿದ್ದು ಮೋಕ್ಷದ ಸ್ಥಿತಿಯನ್ನು ಅಖಂಡವಾಗಿ ಅನುಭವಿಸುತ್ತಿರುತ್ತಾರೆ. ತ್ರಿಗುಣಾತೀತ ಸ್ಥಿತಿಯಿಂದಾಗಿ ಪ.ಪೂ. ಭಕ್ತರಾಜ ಮಹಾರಾಜರ ‘ಭಾವವೂ ಇಲ್ಲ, ಭಾವನೆಯೂ ಇಲ್ಲ |’ ಎಂಬ ಭಜನೆಯ ಸಾಲಿನಂತೆ ಅವರ ಸ್ಥಿತಿಯೂ ಭಾವಾತೀತವಾಗಿದೆ.
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !