ಸಮರ್ಥ ರಾಮದಾಸ ಸ್ವಾಮಿಗಳು ಬಯಸಿದ ಭಾರತದಲ್ಲಿನ ಅದ್ವಿತೀಯ ದೇವಸ್ಥಾನಗಳ ಸಂಸ್ಕೃತಿ !

೧. ಭಕ್ತಿಯ ನಂತರ ನಡೆದ ದೇವಸ್ಥಾನಗಳ ನಿರ್ಮಾಣ !

‘ವೈದಿಕ ಕಾಲದ ಯಜ್ಞ ಸಂಸ್ಥೆಯಲ್ಲಿ ಭಾರತೀಯ ಸಂಸ್ಕೃತಿಯು ಪ್ರಾರಂಭವಾಯಿತು. ಅನೇಕ ಕಾರಣಗಳಿಂದ ಅದು ಕ್ಷೀಣಿಸಿದ ನಂತರ, ಭಾರತೀಯ ಸಂಸ್ಕೃತಿಯು ಮಠಗಳು ಮತ್ತು ದೇವಾಲಯಗಳ ಸುತ್ತ ಕೇಂದ್ರೀಕೃತವಾಯಿತು. ಋಗ್ವೇದದ ಪುರುಷಸೂಕ್ತದಲ್ಲಿ ನಾರಾಯಣ ಋಷಿಗಳು ಈಶ್ವರನನ್ನು ಮನುಷ್ಯ ರೂಪದಲ್ಲಿ ಕಂಡರು. ಮನುಷ್ಯ ರೂಪದ ಈಶ್ವರನೊಂದಿಗೆ ಬೆಸೆದ ಮಾನವಪ್ರೇಮ ಸಂಬಂಧಗಳಿಂದ ಭಕ್ತಿಯು ಜನಿಸಿತು. ಭಕ್ತಿಯ ನಂತರವೇ ದೇವಸ್ಥಾನಗಳ ನಿರ್ಮಾಣವಾಯಿತು; ಆದ್ದರಿಂದ ವೈದಿಕರ ಯಜ್ಞ ಮಂಟಪಗಳಿಗಿಂತ ಹೆಚ್ಚು ಸ್ಥಿರ, ಹೆಚ್ಚು ಅನುಕೂಲಗಳಿಂದ ಸಮೃದ್ಧ, ಹೆಚ್ಚು ಸುರಕ್ಷಿತ, ಸುಂದರ ಮತ್ತು ಭವ್ಯವಾದ ದೇವಸ್ಥಾನಗಳು ನಿರ್ಮಾಣಗೊಂಡವು.

೨. ದೇವಸ್ಥಾನ ಸಂಸ್ಕೃತಿಯನ್ನು ನಾಶ ಮಾಡಲು ಮುಸಲ್ಮಾನ ಆಡಳಿತಗಾರರ ಭಾರಿ ಪ್ರಯತ್ನ !

ಭಾರತದ ಕೆಲವು ದೇವಸ್ಥಾನಗಳು ಎಷ್ಟು ಭವ್ಯವಾಗಿದ್ದವೆಂದರೆ, ಅವುಗಳ ಶಿಲ್ಪ ಸೌಂದರ್ಯವು ಎಷ್ಟು ಸಮೃದ್ಧವಾಗಿದ್ದವೆಂದರೆ, ಅವುಗಳ ಸುತ್ತ ನಗರಗಳು ಬೆಳೆದವು ಮತ್ತು ಅವುಗಳಿಗೆ ಪವಿತ್ರ ತೀರ್ಥಕ್ಷೇತ್ರದ ಸ್ವರೂಪ ಬಂದಿತು. ಭಾರತೀಯರ ದೇವಸ್ಥಾನ ಸಂಸ್ಕೃತಿಯು ಈಶ್ವರಕೇಂದ್ರಿತವಾಗಿತ್ತು. ‘ದೇವಸ್ಥಾನಗಳನ್ನು ನಾಶ ಮಾಡಿದರೆ, ಆ ಸಂಸ್ಕೃತಿಯೇ ಸತ್ತು ಹೋಗುತ್ತದೆ ಎಂಬ ಹುಚ್ಚು ಕಲ್ಪನೆಯಿಂದ ಮುಸಲ್ಮಾನ ಆಡಳಿತಗಾರರು ಅದರ ಮೇಲೆ ಬಲವಂತವಾಗಿ ಪ್ರಹಾರ ಮಾಡಿದರು. ಆ ಪ್ರಹಾರಗಳನ್ನು ಯಶಸ್ವಿಯಾಗಿ ಎದುರಿಸುವ ಮಾರ್ಗವನ್ನು ಕಂಡುಕೊಂಡವರು ಅಂದಿನ ಭಾರತದಲ್ಲಿ ಶ್ರೀ ಸಮರ್ಥರು ಏಕೈಕ ಪುರುಷರಾಗಿದ್ದರು.

ಮಹಾರಾಷ್ಟ್ರದ ಮಾಸೂರ ಎಂಬಲ್ಲಿ ಸಮರ್ಥರು ಸ್ಥಾಪಿಸಿದ ಮಾರುತಿ

ಇಂದಿಗೂ ಪ್ರಸ್ತುತ ಕಾಲದಲ್ಲಿ, ‘ದೇವಸ್ಥಾನಗಳ ಮಹತ್ವ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಅವುಗಳ ಸ್ಥಾನವನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಾಮ ಮಂದಿರವಾಗಿರಲಿ, ಕಾಶಿ ವಿಶ್ವನಾಥ ಮಂದಿರವಾಗಿರಲಿ ಅಥವಾ ಮಹಾಕಾಳೇಶ್ವರನ ಕಾರಿಡಾರ್ (ಸುಸಜ್ಜಿತ ಹೆದ್ದಾರಿ)ಆಗಿರಲಿ, ಇವೆಲ್ಲ ಪುನರುತ್ಥಾನಗೊಳಿಸುವ ಉದ್ದೇಶವು ಒಂದೇ ಆಗಿರುವುದು ಕಂಡುಬರುತ್ತದೆ.

೩. ದೇವಸ್ಥಾನಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಜಾಗೃತಗೊಳಿಸಿದ ಏಕೈಕ ಸಮರ್ಥರು !

ಜನಸಾಮಾನ್ಯರನ್ನು ನಿರ್ಭೀತರನ್ನಾಗಿಸಿ ಅವರಿಗೆ ಅನ್ಯಾಯವನ್ನು ಪ್ರತಿರೋಧಿಸುವ ಪ್ರೇರಣೆ ನೀಡಲು ಸಮರ್ಥರು ಬಯಸಿದ್ದರು; ಅದಕ್ಕಾಗಿಯೇ ಸಮರ್ಥರು ಎಲ್ಲರಿಗೂ ಸಹಜವಾಗಿ ಪ್ರಿಯವಾದ ಮೂರ್ತಿಪೂಜೆಯ ಆಶ್ರಯ ಪಡೆದರು. ಭಗವಂತನ ಮೂರ್ತಿಯು ಆತ್ಮಶುದ್ಧಿಯ ಸಾಧನವಾಗಿದೆ ಹೊರತು, ಸಾಧ್ಯವಲ್ಲ. ‘ಧರ್ಮವು ವೈಯಕ್ತಿಕ ಜೀವನಕ್ಕೆ ಮಾತ್ರ ಸೀಮಿತವಾಗಿರದೇ, ದೇವಸ್ಥಾನಗಳು ಸಮಾಜದ ಅಸ್ಮಿತತೆಯ ಪ್ರತೀಕಗಳಾಗುತ್ತವೆ ಎಂಬುದನ್ನು ತಿಳಿದು ಸಮರ್ಥರು ಎಲ್ಲೆಡೆ ಶ್ರೀರಾಮ ಮತ್ತು ಮಾರುತಿ ದೇವಸ್ಥಾನಗಳನ್ನು ಸ್ಥಾಪಿಸಿ, ಅಲ್ಲಿನ ಉತ್ಸವಗಳು ವ್ಯವಸ್ಥಿತವಾಗಿ, ಆದರೆ ವಿಜೃಂಭಣೆಯಿಂದ ಮತ್ತು ನಿರ್ಭಯವಾಗಿ ನಡೆಯುವಂತೆ ಎಚ್ಚರ ವಹಿಸಿದರು.

‘ದೇವರನ್ನು ತಲೆಯ ಮೇಲೆ ಧರಿಸ ಬೇಕು. ಎಲ್ಲೆಡೆ ಕ್ರಾಂತಿ ಮಾಡಬೇಕು. ಪಾಪಿ ಔರಂಗಜೇಬನು ನಾಶವಾಗಬೇಕು. ಮ್ಲೇಚ್ಛರ (ವಿದೇಶಿ ಆಕ್ರಮಣಕಾರರ) ಸಂಹಾರವಾಗಬೇಕು, ಇದನ್ನು ನೋಡುವುದು ಸಮರ್ಥರ ಜೀವನದ ಕನಸಾಗಿತ್ತು. ಅದನ್ನು ಅವರು ತಮ್ಮ ಜೀವನದಲ್ಲಿ ಪೂರ್ಣಗೊಂಡಿರುವುದನ್ನು ಕಂಡರು. ಈ ಕನಸನ್ನು ನನಸಾಗಿಸಲು ಸಮರ್ಥರು ಶಕೆ ೧೫೬೭ ರಲ್ಲಿ ಮಸೂರ್‌ನಲ್ಲಿ ರಾಮನವಮಿಯ ಉತ್ಸವವನ್ನು ಆಚರಿಸಿದರು. ನಂತರ ಚಾಫಳ್‌ದಲ್ಲಿ ಶ್ರೀರಾಮನನ್ನು ಸ್ಥಾಪಿಸಿ ಶಕೆ ೧೫೭೦ ರಲ್ಲಿ ರಾಮನವಮಿಯ ಉತ್ಸವವನ್ನು ಆಚರಿಸಿದರು.

ಈ ಉತ್ಸವಗಳ ನಿಮಿತ್ತ ಸಮರ್ಥರು ಜನಭಾವನೆಗಳನ್ನು ಅರಿತುಕೊಂಡರು. ಅದರಿಂದ ಸಾರ್ವಜನಿಕ ದೇವಸ್ಥಾನಗಳು ಜನರು ಸೇರುವ ಪವಿತ್ರ ಸ್ಥಳಗಳಾದವು. ಅತ್ಯಂತ ದೊಡ್ಡ ಸಕಾರಾತ್ಮಕ ಅಂಶವೆಂದರೆ, ಮನುಷ್ಯನು ಸ್ವಾರ್ಥವನ್ನು ಬದಿಗಿಡಲು ಕಲಿತನು. ‘ಇದು ನನ್ನ ಸಮಾಜ, ‘ಇದು ನನ್ನ ರಾಷ್ಟ್ರ ಎಂಬ ಭಾವನೆಗಳು ಬೇರೂರಲು ಪ್ರಾರಂಭವಾಯಿತು.

ಈ ಭಾವನೆಗೆ ದೃಢ ಸ್ವರೂಪ ಬರಲು ಮತ್ತು ಸಮುದಾಯ ಸಂಘಟನೆಗಾಗಿಯೇ ಸಂಪ್ರದಾಯವನ್ನು ನಿರ್ಮಿಸಲಾಯಿತು. ಸಂಪ್ರದಾಯದ ಮೂಲಕ ಭಾರತದಾದ್ಯಂತ ಮಠಗಳನ್ನು ಸ್ಥಾಪಿಸಲಾಯಿತು. ಈ ಮಠಗಳಲ್ಲಿ ೧೧ ಮಾರುತಿ ದೇವಸ್ಥಾನಗಳು ನೆಲೆಗೊಂಡವು. ಊರಿನ ಹೊರ ಬಾಗಿಲಿನಲ್ಲಿದ್ದ ಮಾರುತಿಯನ್ನು ಸಮರ್ಥರು ಹಳ್ಳಿಯ/ಪಟ್ಟಣದ ಕೇಂದ್ರಕ್ಕೆ ತಂದರು ಮತ್ತು ದೇವಸ್ಥಾನದ ಸುತ್ತಲೂ ಭಾರತೀಯ ಸಂಸ್ಕೃತಿಯನ್ನು ಜಾಗೃತಗೊಳಿಸಿದರು – ಇದೇ ಸಮರ್ಥರ ದೇವಸ್ಥಾನ ಸಂಸ್ಕೃತಿಯಾಗಿದೆ.

– ಡಾ. (ಸೌ.) ಪ್ರಜ್ಞಾ ಪ್ರಕಾಶ ಪುಸದಕರ್ (ಆಧಾರ : ದೀಪಾವಳಿ ಮಂದಿರ ವಿಶೇಷಾಂಕ, ವರ್ಷ ೨೦೨೪)