ವಂಚಿಸುವ ‘ಡೇಟಿಂಗ್ ಆಪ್‌ಗಳು’ !

(ಯುವಕ-ಯುವತಿಯರು ಪರಸ್ಪರ ಹೊರಗೆ ಭೇಟಿಯಾಗಲು ಸೃಷ್ಟಿಸಲಾದ ಆಪ್‌ಗಳು)

ಎ.ಐ. ನಿರ್ಮಿತ ಚಿತ್ರ

ಕಳೆದ ಕೆಲವು ವರ್ಷಗಳಲ್ಲಿ ಪೊಲೀಸರು ನೀಡಿದ ಅಂಕಿಅಂಶಗಳಿಂದ ‘ಡೇಟಿಂಗ್ ಆಪ್‌ಗಳ’ ಮೂಲಕ ವಂಚನೆ ಮತ್ತು ‘ಬ್ಲ್ಯಾಕ್‌ಮೇಲಿಂಗ್’ (ವಂಚಿಸಿ ಹಣ ವಸೂಲಿ ಮಾಡುವುದು) ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ. ಈ ಪ್ರಕರಣಗಳಲ್ಲಿ ಯುವಕ-ಯುವತಿಯರನ್ನು ಆಕರ್ಷಿಸಿ ಅವರಿಂದ ವೈಯಕ್ತಿಕ ಮಾಹಿತಿ, ಛಾಯಾಚಿತ್ರ ಅಥವಾ ವಿಡಿಯೋಗಳನ್ನು ಪಡೆಯಲಾಗುತ್ತದೆ. ನಂತರ ಅವುಗಳನ್ನು ಬಳಸಿ ಬೆದರಿಕೆ ಹಾಕಿ ಹಣ ಲೂಟಿ ಮಾಡಲಾಗುತ್ತದೆ. ವಂಚಿಸುವ ಈ ಪದ್ಧತಿಯು ಅತ್ಯಂತ ಯೋಜನಾಬದ್ಧವಾಗಿರುತ್ತದೆ. ಮೊದಲು ಅಪರಾಧಿಗಳು ‘ಡೇಟಿಂಗ್ ಆಪ್’ನಲ್ಲಿ ಸುಳ್ಳು ‘ಪ್ರೊಫೈಲ್’ (ಪರಿಚಯ) ಸೃಷ್ಟಿಸುತ್ತಾರೆ. ಆಕರ್ಷಕ ಛಾಯಾಚಿತ್ರಗಳು, ಸುಳ್ಳು ಮಾಹಿತಿ ಮತ್ತು ಸಿಹಿ ಮಾತುಗಳ ಮೂಲಕ ಅವರು ಯುವತಿಯರನ್ನು ಸೆಳೆಯುತ್ತಾರೆ. ಆರಂಭದಲ್ಲಿ ಸಂವಾದ ನಡೆಸಲಾಗುತ್ತದೆ, ವಿಶ್ವಾಸ ಮೂಡಿಸಲಾಗುತ್ತದೆ ಮತ್ತು ನಂತರ ನಿಧಾನವಾಗಿ ವೈಯಕ್ತಿಕ ಮಾಹಿತಿ ಕೇಳುತ್ತಾರೆ. ಕೆಲವು ಬಾರಿ ವಿಡಿಯೋ ಕಾಲ್‌ನಲ್ಲಿ ಮಾತನಾಡಲು ಒತ್ತಾಯಿಸಲಾಗುತ್ತದೆ. ಈ ಸಂಪರ್ಕದ ಸಮಯದಲ್ಲಿ ‘ಸ್ಕ್ರೀನ್ ರೆಕಾರ್ಡಿಂಗ್’ ಮಾಡಿ ಸಂವೇದನಾಶೀಲ ದೃಶ್ಯಗಳನ್ನು ಸೆರೆಹಿಡಿಯುತ್ತಾರೆ. ಒಂದು ಸಲ ಈ ಮಾಹಿತಿ ಕೈಸೇರಿದ ನಂತರ ವಂಚನೆ ಆರಂಭವಾಗುತ್ತದೆ. ‘ನಿಮ್ಮ ಛಾಯಾಚಿತ್ರ ಅಥವಾ ವಿಡಿಯೋಗಳನ್ನು ಬಹಿರಂಗಗೊಳಿಸಲಾಗುವುದು’, ‘ನಿಮ್ಮ ಕುಟುಂಬದವರಿಗೆ ಕಳುಹಿಸಲಾಗುವುದು’, ‘ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತೇವೆ’, ಎಂದು ಬೆದರಿಕೆ ಹಾಕಲಾಗುತ್ತದೆ. ಇದರಿಂದ ಗಾಬರಿಗೊಂಡ ಯುವಕ-ಯುವತಿಯರಿಂದ ಹಣ ಬೇಡಲಾಗುತ್ತದೆ. ಕೆಲವು ಬಾರಿ ಈ ಬೇಡಿಕೆ ಸಾವಿರಾರು ರೂಪಾಯಿಗಳಿಂದ ಲಕ್ಷಾಂತರ ರೂಪಾಯಿಗಳ ವರೆಗೆ ತಲುಪುತ್ತದೆ. ಈ ರೀತಿ ವಂಚನೆಗೊಳಗಾದ ಯುವತಿಯರ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತದೆ. ಅವರ ಮನೋಬಲವು ಸಂಪೂರ್ಣವಾಗಿ ಕುಸಿಯುತ್ತದೆ; ಏಕೆಂದರೆ ಲಜ್ಜೆಯಿಂದಾಗಿ ಅವರು ಇದನ್ನು ಯಾರಿಗೂ ಹೇಳಿಕೊಂಡಿರುವುದಿಲ್ಲ. ವಂಚನೆಯ ಈ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಅನೇಕ ಯುವಕ-ಯುವತಿಯರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ, ಅಷ್ಟೇ ಅಲ್ಲದೆ ಕೆಲವರು ಆತ್ಮಹತ್ಯೆಯ ವಿಚಾರವನ್ನೂ ಮಾಡುತ್ತಾರೆ. ಆದ್ದರಿಂದ ಈ ಸಮಸ್ಯೆಯು ಕೇವಲ ಆರ್ಥಿಕ ವಂಚನೆಗೆ ಸೀಮಿತವಾಗಿರದೆ, ಸಾಮಾಜಿಕ ಮತ್ತು ಮಾನಸಿಕ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ.

ಪೊಲೀಸರ ತನಿಖೆಯಲ್ಲಿ, ಇಂತಹ ಅಪರಾಧಗಳ ಹಿಂದೆ ಅಂತಾರಾಷ್ಟ್ರೀಯ ತಂಡಗಳ ಹಸ್ತಕ್ಷೇಪ ಇರುವುದು ಬೆಳಕಿಗೆ ಬಂದಿದೆ. ಕೆಲವು ತಂಡಗಳು ವಿದೇಶಗಳಿಂದ ಕಾರ್ಯಾಚರಣೆ ನಡೆಸುತ್ತಿವೆ. ಭಾರತದ ಯುವಜನತೆಯನ್ನು ಗುರಿಯಾಗಿಸಿಕೊಂಡು ಅವರಿಂದ ಹಣವನ್ನು ಲೂಟಿ ಮಾಡಲಾಗುತ್ತದೆ. ‘ಡಿಜಿಟಲ್ ಪೇಮೆಂಟ್’, ‘ಕ್ರಿಪ್ಟೋಕರೆನ್ಸಿ’ (ವರ್ಚುವಲ್ ಕರೆನ್ಸಿ) ಮತ್ತು ಅಂತಾರಾಷ್ಟ್ರೀಯ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಈ ಹಣವನ್ನು ವಿದೇಶಕ್ಕೆ ಕಳುಹಿಸಲಾಗುತ್ತದೆ. ಅದರಿಂದ ತನಿಖೆ ಮತ್ತಷ್ಟು ಜಟಿಲವಾಗುತ್ತದೆ.

ವಿಭಕ್ತ ಕುಟುಂಬ ಪದ್ಧತಿಯಿಂದಾಗಿ ಏಕಾಂಗಿತನ ವನ್ನು ಅನುಭವಿಸುತ್ತಿರುವ ಮಕ್ಕಳು ಇಂತಹ ಬಲೆಗೆ ಸುಲಭವಾಗಿ ಬೀಳುತ್ತಿದ್ದಾರೆ; ಆದರೆ ಈಗ ಇಂತಹ ಆಪ್‌ಗಳನ್ನು ಬಳಸುವುದು ಯುವಜನತೆಯಲ್ಲಿ ಒಂದು ಫ್ಯಾಷನ್ ಆಗಿಬಿಟ್ಟಿದೆ. ಹುಡುಗಿಗೆ ‘ಸ್ನೇಹಿತ’ ಅಥವಾ ಹುಡುಗನಿಗೆ ‘ಸ್ನೇಹಿತೆ’ ಇಲ್ಲದಿದ್ದರೆ ಅವರಲ್ಲಿ ಏನೋ ಕೊರತೆ ಇದೆ ಎಂಬಂತೆ ಹೆಸರಿಡಲಾಗುತ್ತದೆ, ಈ ಕಾರಣದಿಂದಲೂ ಇಂತಹ ಆಪ್‌ಗಳ ಬಳಕೆ ಹೆಚ್ಚಾಗಿದೆ; ಆದರೆ ಮೂಲತಃ ‘ಡೇಟಿಂಗ್ ಆಪ್’ ಬಳಸುವುದು, ಭಾರತೀಯ ಸಂಸ್ಕೃತಿಯ ನೈತಿಕತೆಗೆ ಒಪ್ಪುವಂತಹದ್ದಲ್ಲ. ಆದ್ದರಿಂದ ಭಾರತೀಯರು ಎಷ್ಟು ಪಾಶ್ಚಾತ್ಯರ ಅಂಧಾನುಕರಣೆ ಮಾಡುತ್ತಾರೋ, ಅವರು ಅಷ್ಟು ಹೆಚ್ಚು ಪ್ರಪಾತಕ್ಕೆ ಬೀಳುತ್ತಾರೆ ಎಂಬುದು ಮಾತ್ರ ಖಚಿತ !

– ಶ್ರೀ. ಸಂದೀಪ ಕಾತೆ, ಮುಂಬಯಿ