ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ತಮ್ಮ ಮಾರ್ಗದರ್ಶನದಲ್ಲಿ ಹೇಳಿದ ಕೆಲವು ಭಕ್ತರ ಉಚ್ಚ ಕೋಟಿಯ ಭಕ್ತಿಯನ್ನು ತೋರಿಸುವ ಪ್ರಸಂಗಗಳು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

೧. ಸಾಧನೆ ಮತ್ತು ಭಕ್ತಿಯಿಂದಾಗಿ ಪ್ರಹ್ಲಾದನ ಬುದ್ಧಿ ತೀಕ್ಷ್ಣವಾಗುವುದು

ರಾಕ್ಷಸರಾಜ ಹಿರಣ್ಯಕಶ್ಯಪು ಇವನು ತನ್ನ ೮ ವರ್ಷದ ಪುತ್ರ ಪ್ರಹ್ಲಾದನನ್ನು ಕೊಲ್ಲಲು ಮುಂದಾಗಿದ್ದನು. ಆಗ ಪ್ರಹ್ಲಾದನ ಮೊರೆಗೆ ಓಗೊಟ್ಟು ಭಗವಾನ ಶ್ರೀಹರಿ ವಿಷ್ಣುವು ನೃಸಿಂಹರ ರೂಪದಲ್ಲಿ ಪ್ರತ್ಯಕ್ಷನಾದನು. ಪ್ರತ್ಯಕ್ಷನಾದ ಕೂಡಲೇ ಅವನು ಪ್ರಹ್ಲಾದನನ್ನು, ”ನಾನು ಬರಲು ತಡವಾಗಲಿಲ್ಲವಲ್ಲ ?” ಎಂದು ಕೇಳಿದನು. ಭಗವಂತನ ವಿನಮ್ರತೆ ಎಷ್ಟಿದೆ ಎಂದರೆ, ಅವನು, ನಾನು ಬರಲು ತಡವಾಯಿತೇ ?’ ಎಂದು ಭಕ್ತನನ್ನೇ ಕೇಳುತ್ತಿದ್ದಾನೆ. ಅದಕ್ಕೆ ಪ್ರಹ್ಲಾದನು, ”ಭಗವಂತಾ, ನೀವು ಎಲ್ಲೆಡೆ ಇರುವಿರಿ”, ಎಂದು ಉತ್ತರ ನೀಡಿದನು.

ನಂತರ ಭಗವಾನ ನೃಸಿಂಹನು ರೌದ್ರ ರೂಪ ತಾಳಿ ರಾಕ್ಷಸರಾಜ ಹಿರಣ್ಯಕಶ್ಯಪುನನ್ನು ವಧಿಸಿದನು. ಅನಂತರ ಅವನು ಪ್ರಹ್ಲಾದನಿಗೆ, ”ನೀನು ನಿನ್ನ ತಂದೆಯ ಸಾವಿಗೆ ಕಾರಣನಾಗಿರುವೆ. ಆದ್ದರಿಂದ ಪಿತೃಹತ್ಯೆಯ ಪಾಪಕ್ಕಾಗಿ ನಾನು ನಿನಗೆ ದಂಡ ವಿಧಿಸುತ್ತೇನೆ”, ಎಂದು ಹೇಳಿದನು. ಅದಕ್ಕೆ ಪ್ರಹ್ಲಾದನು, ”ಭಗವಂತಾ, ನೀವು ನನಗೆ ಯಾವ ಶಿಕ್ಷೆ ನೀಡಿದರೂ ನಾನು ಅದನ್ನು ಚಾಚೂ ತಪ್ಪದೆ ಪಾಲಿಸುತ್ತೇನೆ”, ಎಂದು ಹೇಳಿದನು. ಭಗವಾನ ನೃಸಿಂಹನು, ”ನೀನು ನರಕಕ್ಕೆ ಹೋಗಬೇಕಾಗುತ್ತದೆ”, ಎಂದು ಹೇಳಿದನು. ಆಗ ಪ್ರಹ್ಲಾದನು, ”ನಾನು ನರಕದಲ್ಲೂ ‘ನಾರಾಯಣ, ನಾರಾಯಣ’ ಎಂದೇ ನಾಮಜಪ ಮಾಡುತ್ತೇನೆ. ಆದ್ದರಿಂದ ನೀವು ಅಲ್ಲಿಗೂ ಬರಬೇಕಾಗುತ್ತದೆ. ನಿಮ್ಮ ಆಗಮನದಿಂದ ಆ ನರಕ ಕೂಡ ಸ್ವರ್ಗವಾಗಿ ಬದಲಾಗುತ್ತದೆ”, ಎಂದು ಹೇಳಿದನು. ಇದರಿಂದ ‘ಸಾಧನೆ ಮತ್ತು ಭಕ್ತಿಯಿಂದ ಕೇವಲ ೮ ವರ್ಷಗಳ ಬಾಲ ಪ್ರಹ್ಲಾದನ ಬುದ್ಧಿ ಎಷ್ಟು ತೀಕ್ಷ್ಣವಾಗಿತ್ತು’ ಎಂಬುದು ಗಮನಕ್ಕೆ ಬರುತ್ತದೆ.

೨. ಶ್ರೀರಾಮನ ಬಗ್ಗೆ ಸುಮಿತ್ರಾ ಮಾತೆಯ ದೃಢ ಶ್ರದ್ಧೆ

ರಾಮ ಮತ್ತು ರಾವಣರ ನಡುವಿನ ಯುದ್ಧದ ಸಮಯದಲ್ಲಿ ಮಾರಣಾಂತಿಕ ಬಾಣ ತಗುಲಿ ಲಕ್ಷ್ಮಣನು ಮೂರ್ಛೆ ಹೋದನು. ಅವನ ಪ್ರಾಣವನ್ನು ಉಳಿಸಲು ಹನುಮಂತನು ಸಂಜೀವನಿ ಮೂಲಿಕೆಯನ್ನು ತೆಗೆದುಕೊಂಡು ಲಂಕೆಯ ಕಡೆಗೆ ಹೋಗುತ್ತಿದ್ದನು. ಆಕಾಶಮಾರ್ಗವಾಗಿ ಅಯೋಧ್ಯೆಯ ಮೂಲಕ ಹೋಗುವಾಗ ಭರತನು ಅವನನ್ನು ಸಾಮಾನ್ಯ ವಾನರನೆಂದು ಭಾವಿಸಿ ಹಿಡಿದನು. ಭರತನು ತನ್ನನ್ನು ಅಷ್ಟು ಬೇಗ ಬಿಡುವುದಿಲ್ಲ ಎಂದು ಅರಿತ ಹನುಮಂತನು ಭರತನಿಗೆ, ‘ಸುಮಿತ್ರಾ ಮಾತೆಯನ್ನು ಇಲ್ಲಿಗೆ ಕರೆಸಬೇಕು’ ಎಂದು ವಿನಂತಿಸಿಕೊಂಡನು.

ಸುಮಿತ್ರಾ ಮಾತೆಯು ಬಂದ ನಂತರ ಹನುಮಂತನು ಅವರಿಗೆ, ”ಲಕ್ಷ್ಮಣನಿಗೆ ಬಾಣ ತಗುಲಿದೆ ಮತ್ತು ಅವನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಅವನ ಪ್ರಾಣ ಉಳಿಸಲು ನಾನು ಸಂಜೀವಿನಿ ಮೂಲಿಕೆಯನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ದಯವಿಟ್ಟು ನನ್ನನ್ನು ಅಲ್ಲಿಗೆ ಶೀಘ್ರವಾಗಿ ಹೋಗಲು ಬಿಡಿ’, ಎಂದು ಹೇಳಿದನು. ಆಗ ಸುಮಿತ್ರಾ ಮಾತೆಯು, ‘ಹನುಮಂತನೇ, ನೀನು ಎರಡು ದಿನ ಅಯೋಧ್ಯೆಯಲ್ಲೇ ವಿಶ್ರಮಿಸು. ನಮ್ಮ ಅತಿಥಿ ಸತ್ಕಾರವನ್ನು ಸ್ವೀಕರಿಸಿ ನಂತರ ಮುಂದೆ ಹೋಗು’, ಎಂದು ಹೇಳಿದಳು. ಸುಮಿತ್ರಾ ಮಾತೆಯ ಈ ಮಾತಿನಿಂದ ಹನುಮಂತನಿಗೆ ಅತೀವ ಆಶ್ಚರ್ಯವಾಯಿತು. ಹನುಮಂತನು, ‘ಮಾತೆ, ನಿಮ್ಮ ಮಗನಿಗೆ ಮಾರಣಾಂತಿಕ ಬಾಣ ತಗುಲಿದೆ. ಅವನು ಪ್ರತಿಕ್ಷಣ ಸಾವಿನ ದವಡೆಯತ್ತ ಸಾಗುತ್ತಿದ್ದಾನೆ ಮತ್ತು ನೀವು ಹೀಗೆ ಹೇಳುತ್ತಿರುವಿರಲ್ಲ ?’ ಎಂದು ಹೇಳಿದನು. ಅದಕ್ಕೆ ಸುಮಿತ್ರಾ ಮಾತೆಯು, ‘ಹನುಮಂತಾ, ನೀನು ಸ್ವಲ್ಪವೂ ಚಿಂತಿಸಬೇಡ. ಲಕ್ಷ್ಮಣನಿಗೆ ಏನೂ ಆಗುವುದಿಲ್ಲ. ಅವನು ಸಾಕ್ಷಾತ್‌ ಪರಬ್ರಹ್ಮ ಶ್ರೀರಾಮನ ಮಡಿಲಲ್ಲಿ ಮಲಗಿದ್ದಾನೆ. ಅವನಿಗೆ ಇಂತಹ ಅವಕಾಶ ಮತ್ತೆ ಯಾವಾಗ ಸಿಗಲು ಸಾಧ್ಯ ? ಆದ್ದರಿಂದಲೇ ನಾನು ಹೇಳುತ್ತಿದ್ದೇನೆ, ಅವನು ಎರಡು ದಿನಗಳ ಕಾಲ ಪರಬ್ರಹ್ಮ ಪ್ರಭುವಿನ ಮಡಿಲಲ್ಲಿ ವಿಶ್ರಾಂತಿ ಪಡೆಯಲಿ’, ಎಂದು ಹೇಳಿದಳು. ಶ್ರೀರಾಮನ ಬಗ್ಗೆ ಸುಮಿತ್ರಾ ಮಾತೆಯ ಶ್ರದ್ಧೆ ಎಷ್ಟು ದೃಢವಾಗಿತ್ತು ! ಇಂತಹ ದೃಢವಾದ ಶ್ರದ್ಧೆ ಮತ್ತು ಉಚ್ಚ ಮಟ್ಟದ ಭಕ್ತಿ ಇದ್ದರೆ, ಈಶ್ವರನು ನಮ್ಮ ಕಲ್ಯಾಣ ಮಾಡುವುದಿಲ್ಲವೇ ?

೩. ಸೀತಾಮಾತೆಯು ಭಕ್ತಿಯ ಬಲದಿಂದ ನಿರ್ಜೀವ ಖಡ್ಗಕ್ಕೆ ಪ್ರಾರ್ಥಿಸಿದಾಗ, ಆ ಖಡ್ಗವು ಧರ್ಮದ ಪರವಾಗಿ ಕಾರ್ಯ ಮಾಡುವುದು

ರಾವಣನು ಸೀತಾಮಾತೆಯನ್ನು ಅಶೋಕ ವನದಲ್ಲಿ ಕೂಡಿಟ್ಟಿದ್ದನು. ಅವನು ಅವಳಿಗೆ ಬೇರೆ ಬೇರೆ ಆಮಿಷಗಳನ್ನು ತೋರಿಸುತ್ತಿದ್ದನು. ‘ನೀನು ನನ್ನವಳಾದರೆ, ನಾನು ನಿನ್ನನ್ನು ನನ್ನ ಪಟ್ಟದ ರಾಣಿಯನ್ನಾಗಿ ಮಾಡುತ್ತೇನೆ. ನಿನಗೆ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ’, ಎಂದು ಹೇಳುತ್ತಿದ್ದನು. ಆದರೆ ಪ್ರತಿ ಬಾರಿಯೂ ಸೀತಾ ಮಾತೆಯು ಅವನ ಪ್ರಸ್ತಾವನೆಯನ್ನು ತಿರಸ್ಕರಿಸುತ್ತಿದ್ದಳು. ಕೊನೆಗೆ ರಾವಣನು ಸಿಟ್ಟಿಗೆದ್ದು ಸೀತೆಗೆ, ‘ನೀನು ನನ್ನವಳಾಗು, ಇಲ್ಲದಿದ್ದರೆ ನಾನು ನಿನ್ನನ್ನು ಕೊಲ್ಲುತ್ತೇನೆ’, ಎಂದು ಕೊನೆಯ ಬೆದರಿಕೆ ನೀಡಿದನು. ಅವನು ಸಿಟ್ಟಿನಿಂದ ಭಗವಾನ ಶಿವನು ಅವನಿಗೆ ನೀಡಿದ್ದ ‘ಚಂದ್ರಹಾಸ’ ಖಡ್ಗವನ್ನು ಹೊರತೆಗೆದನು. ಆಗ ಸೀತಾ ಮಾತೆಯು ಆ ಖಡ್ಗಕ್ಕೆ, ‘ಹೇ ಖಡ್ಗವೇ, ನೀನೇ ನಿರ್ಧಾರ ಮಾಡು. ನೀನು ಧರ್ಮದ ಪರವಾಗಿದ್ದೀಯೋ ಅಥವಾ ಅಧರ್ಮದ ಪರವಾಗಿ ? ನೀನೇನಾದರೂ ರಾವಣನನ್ನು ಸಮರ್ಥಿಸಿದರೆ, ನೀನು ಅಧರ್ಮವನ್ನು ಸಮರ್ಥಿಸಿದಂತೆ ಆಗುತ್ತದೆ. ನೀನು ನನ್ನನ್ನು ಕೊಂದರೆ ನಿನಗೆ ದೊಡ್ಡ ಕಳಂಕ ಅಂಟಿಕೊಳ್ಳುತ್ತದೆ. ಈಗ ನೀನೇ ನಿರ್ಧರಿಸು, ನಿನಗೆ ಏನು ಮಾಡಬೇಕೆಂದು ?’ ಎಂದು ಹೇಳಿದಳು. ಇದನ್ನು ಕೇಳಿದ ತಕ್ಷಣ ಆ ಖಡ್ಗವು ನಿಷ್ಕ್ರಿಯಗೊಂಡು ಕೆಳಗೆ ಬಿದ್ದಿತು. ಸೀತಾಮಾತೆಯು ಖಡ್ಗದಂತಹ ನಿರ್ಜೀವ ವಸ್ತುವಿನಲ್ಲಿರುವ ದೇವತ್ವಕ್ಕೆ ಪ್ರಾರ್ಥನೆ ಮಾಡಿದಳು. ಹೀಗಿರುವಾಗ, ನಾವು ಸಜೀವ ವಸ್ತುಗಳಲ್ಲಿ ಅಥವಾ ಸಾಧಕರಲ್ಲಿ ಎಷ್ಟು ದೇವತ್ವವನ್ನು ಕಾಣಬಹುದು ?

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಭಾಗ್ಯನಗರ (೨೬.೧೧.೨೦೨೫)