ಹಿಂದೂ ಕಾಲಗಣನೆಗನುಸಾರ ಯುಗಾದಿಯಿಂದಆರಂಭವಾಗಲಿರುವ ಕಲಿಯುಗ ವರ್ಷ ೫೧೨೮ ರ (ವರ್ಷ ೨೦೨೬ ರ) ಆಧ್ಯಾತ್ಮಿಕ ವೈಶಿಷ್ಟ್ಯಗಳು ಮತ್ತು ಅದರ ವಿವಿಧ ಮಹತ್ವಗಳು !

೧೯.೩.೨೦೨೬ ರಂದು ಯುಗಾದಿ ಹಬ್ಬವಿದ್ದು ಹಿಂದೂ ಕಾಲಗಣನೆಗನುಸಾರ ಕಲಿಯುಗ ವರ್ಷ ೫೧೨೮ ಪ್ರಾರಂಭವಾಗುತ್ತಿದೆ. ‘ಈ ಹೊಸ ವರ್ಷದ ಆಧ್ಯಾತ್ಮಿಕ ಮಹತ್ವವೇನು ?’ ಮತ್ತು ‘ವಿವಿಧ ದೃಷ್ಟಿಯಿಂದ ಈ ವರ್ಷವು ಹೇಗಿರಲಿದೆ ?’ ಎಂಬುದರ ಬಗ್ಗೆ ನನಗೆ ದೊರೆತಿರುವ ಸೂಕ್ಷ್ಮ ಜ್ಞಾನವನ್ನು ಇಲ್ಲಿ ನೀಡಲಾಗಿದೆ.

೧. ಕಲಿಯುಗ ವರ್ಷ ೫೧೨೮ ರ ಆಧ್ಯಾತ್ಮಿಕ ವೈಶಿಷ್ಟ್ಯಗಳು !

೧ ಅ. ‘ಲಯ’ ಪ್ರಧಾನ ಕಾಲಚಕ್ರವಾಗಿರುವುದರಿಂದ ಲಯಕ್ಕೆ ಸಂಬಂಧಿಸಿದ ವಿವಿಧ ಘಟನೆಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಲಿವೆ ! : ಪ್ರತಿಯೊಂದು ಕಾಲಚಕ್ರದಲ್ಲಿ ‘ಉತ್ಪತ್ತಿ, ಸ್ಥಿತಿ ಮತ್ತು ಲಯ’ಕ್ಕೆ ಸಂಬಂಧಿಸಿದ ಕ್ರಿಯೆಗಳು ಘಟಿಸುತ್ತಿರುತ್ತವೆ. ಕೆಲವು ನಿರ್ದಿಷ್ಟ ಕಾಲಚಕ್ರಗಳಲ್ಲಿ ಉತ್ಪತ್ತಿ ಮತ್ತು ಸ್ಥಿತಿಗೆ ಹೋಲಿಸಿದರೆ ಲಯದ ಪ್ರಮಾಣವು ಹೆಚ್ಚಿರುತ್ತದೆ. ಕಳೆದ ೫ ವರ್ಷಗಳ ಕಾಲಚಕ್ರಕ್ಕೆ ಹೋಲಿಸಿದರೆ, ಕಲಿಯುಗ ವರ್ಷ ೫೧೨೮ ರ ಕಾಲಚಕ್ರದಲ್ಲಿ ಲಯದ ಪ್ರಮಾಣವು ಶೇ. ೨೦ ರಷ್ಟು ಹೆಚ್ಚಿದೆ. ಆದ್ದರಿಂದ ಲಯಕ್ಕೆ ಸಂಬಂಧಿಸಿದ ವಿವಿಧ ವಿದ್ಯಮಾನಗಳು, ಉದಾಹರಣೆಗೆ ದೇಶಗಳ ನಡುವೆ ಯುದ್ಧ ಅಥವಾ ಆಂತರಿಕ ಗೃಹಯುದ್ಧ, ಸಾಂಕ್ರಾಮಿಕ ರೋಗಗಳು, ನೈಸರ್ಗಿಕ ವಿಕೋಪಗಳು, ಅಕಾಲಿಕ ಮಳೆ ಬೀಳುವುದುನಿಂತಹ ಘಟನೆಗಳು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಲಿವೆ !

೧ ಆ. ನ್ಯಾಯತತ್ತ್ವಪ್ರಧಾನ ವರ್ಷವಾಗಿರುವುದರಿಂದ ನ್ಯಾಯಕ್ಕೆ ಸಂಬಂಧಿಸಿದ ವಿವಿಧ ಘಟನೆಗಳು ಘಟಿಸುವವು ! : ಕಲಿಯುಗ ವರ್ಷ ೫೧೨೮ ರ ಕಾಲಚಕ್ರದ ಹೆಚ್ಚಿನ ಅವಧಿಯಲ್ಲಿ ಶನಿ ದೇವತೆಯ ಅಧಿಷ್ಠಾನವಿರಲಿದೆ. ಶನಿದೇವನನ್ನು ‘ನ್ಯಾಯದ ದೇವತೆ’ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ನ್ಯಾಯಕ್ಕೆ ಸಂಬಂಧಿತ ವಿವಿಧ ಘಟನೆಗಳು ಅಥವಾ ಆಧ್ಯಾತ್ಮಿಕ ನ್ಯಾಯಕ್ಕೆ ಸಂಬಂಧಿಸಿದ ತತ್ತ್ವಗಳನ್ನು ಸಮಾಜದ ಮನಸ್ಸಿನ ಮೇಲೆ ಬಿಂಬಿಸುವಂತಹ ಘಟನೆಗಳು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿವೆ !

೧ ಇ. ತೇಜತತ್ತ್ವಪ್ರಧಾನ ವರ್ಷವಾಗಿರುವುದರಿಂದ ಮತ್ತು ತೇಜತತ್ತ್ವವು ವಿವಿಧ ಘಟಕಗಳಲ್ಲಿ ಬದಲಾವಣೆ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಕಾಲ ಮತ್ತು ಸಮಾಜದಲ್ಲಿ ಕೆಲವು ಆಮೂಲಾಗ್ರ ಬದಲಾವಣೆಗಳಾಗಲಿವೆ ! : ಈ ವರ್ಷದಲ್ಲಿ ಪಂಚತತ್ತ್ವಗಳ ಪೈಕಿ ತೇಜತತ್ತ್ವದ ಪ್ರಮಾಣವು ಎಲ್ಲಕ್ಕಿಂತ ಹೆಚ್ಚಿದೆ. ತೇಜತತ್ತ್ವವಿರುವ ಸೂರ್ಯಪ್ರಕಾಶದಿಂದ ಹೂವು ಅರಳುವುದು, ಕಸ ವಿಘಟನೆಯಾಗುವುದು ಮುಂತಾದ ಪ್ರಕ್ರಿಯೆಗಳು ನಡೆಯುತ್ತವೆ. ತೇಜತತ್ತ್ವದ ಸಗುಣ ರೂಪವಾದ ಅಗ್ನಿಯ ಸ್ಪರ್ಶದಿಂದ ಆಹಾರವು ಬೇಯುತ್ತದೆ ಅಥವಾ ಲೋಹದ ಆಕಾರವನ್ನು ಬದಲಿಸಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ತೇಜತತ್ತ್ವಕ್ಕೆ ವಿವಿಧ ಘಟಕಗಳಲ್ಲಿ ಆಮೂಲಾಗ್ರ ಬದಲಾವಣೆ ತರುವ ಸಾಮರ್ಥ್ಯವಿದೆ. ಈ ವರ್ಷ ತೇಜತತ್ತ್ವವು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುವುದರಿಂದ ಕಾಲ ಮತ್ತು ಸಮಾಜ ಇವುಗಳಲ್ಲಿ ಕೆಲವು ಸಕಾರಾತ್ಮಕ ಹಾಗೂ ಕೆಲವು ನಕಾರಾತ್ಮಕ; ಆಮೂಲಾಗ್ರ ಬದಲಾವಣೆಗಳು ಸಂಭವಿಸಲಿವೆ.

೧ ಈ. ಧರ್ಮತತ್ತ್ವದ ಬೋಧನೆಯನ್ನು ನೀಡುವ ಕಾಲವಾಗಿರುವುದರಿಂದ ಸಮಾಜವು ಧರ್ಮಾಚರಣೆಯತ್ತ ಹೊರಳಲು ಪ್ರಯತ್ನಿಸುತ್ತದೆ ! : ಯಾವುದರಿಂದ ಸಾತ್ತ್ವಿಕತೆಯ ಸಂವರ್ಧನೆಯಾಗಿ ಗುಣವೃದ್ಧಿ ಮತ್ತು ಸ್ವಭಾವದೋಷಗಳ ನಿರ್ಮೂಲನೆಯಾಗುತ್ತದೆಯೋ, ಅದೇ ಧರ್ಮದ ತತ್ತ್ವ ಉದಾಹರಣೆಗೆ, ಸತ್ತ್ವ, ನಿಷ್ಠೆ ಇತ್ಯಾದಿ. ಭಗವಂತನು ‘ಪ್ರಸಂಗಗಳು, ಅನುಭವಗಳು ಮತ್ತು ಗುರುಗಳ (ಸಂತರ)’ ಮಾಧ್ಯಮದಿಂದ ಜೀವಗಳ ಮೇಲೆ ಕಾಲಾನುಸಾರ ಆವಶ್ಯಕವಿರುವ ಧರ್ಮತತ್ತ್ವಗಳ ಸಂಸ್ಕಾರವನ್ನು ಮಾಡುತ್ತಿರುತ್ತಾನೆ. ಯಾವಾಗ ಸಮಾಜವು ಸ್ವಭಾವದೋಷ ಮತ್ತು ಅಹಂ ಇವುಗಳಿಂದ ಈ ಧರ್ಮತತ್ತ್ವಗಳನ್ನು ನಿರ್ಲಕ್ಷಿಸುತ್ತದೆಯೋ, ಆಗ ಅಧರ್ಮಾಚರಣೆಯಿಂದಾಗಿ ‘ರೋಗ, ಪೀಡೆ ಮತ್ತು ಕಷ್ಟಗಳು’ ಉತ್ಪನ್ನವಾಗುತ್ತವೆ. ಅವುಗಳಿಂದ ಮುಕ್ತರಾಗಲು ಸಮಾಜವು ಪುನಃ ಧರ್ಮತತ್ತ್ವಗಳ ಆಚರಣೆ ಮಾಡಬೇಕಾಗುತ್ತದೆ. ಕಲಿಯುಗ ವರ್ಷ ೫೧೨೮ (ವರ್ಷ ೨೦೨೬) ರಲ್ಲಿ ಶನಿದೇವನ ಅಧಿಷ್ಠಾನವಿದೆ. ಹಾಗೆಯೇ ಈ ವರ್ಷ ತೇಜತತ್ತ್ವವು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿದೆ. ಆದ್ದರಿಂದ ಸಮಾಜಕ್ಕೆ ಅಧರ್ಮಾಚರಣೆ ಯಿಂದಾಗುವ ತೊಂದರೆಯ ಅರಿವು ತೀವ್ರವಾಗಿ ಉಂಟಾಗಲಿದೆ ಮತ್ತು ಸಮಾಜವು ಧರ್ಮಾಚರಣೆಯತ್ತ ಹೊರಳಲು ಪ್ರಯತ್ನಿಸಲಿದೆ.

೧ ಉ. ದೈವೀ ಸಹಾಯದಿಂದ ಜೀವವನ್ನು ಆತ್ಮನಿರ್ಭರತೆಯತ್ತ (ಸಾಧನೆಯತ್ತ) ಕೊಂಡೊಯ್ಯುವ ಕಾಲವಾಗಿರುವುದು : ‘ಆನಂದ’ ಇದು ಆತ್ಮದ ಮೂಲ ಗುಣಧರ್ಮವಾಗಿದೆ. ಆ ಆತ್ಮಾನಂದದ ಆಧಾರವನ್ನು ಪಡೆಯುವುದು, ಅಂದರೆ ಸಾಧನೆ ಮಾಡುವುದೇ ನಿಜವಾದ ಆತ್ಮನಿರ್ಭರತೆಯಾಗಿದೆ ! ಗುರುಗಳು ಶಿಷ್ಯನ ಲಿಂಗ ದೇಹದ ಮೇಲಿರುವ ಅಜ್ಞಾನದ ಆವರಣವನ್ನು ನಾಶಗೊಳಿಸಿ ಅವನನ್ನು ನಿಜವಾದ ಅರ್ಥದಲ್ಲಿ ಆತ್ಮನಿರ್ಭರ ಮಾಡುತ್ತಾರೆ. ಯಾವಾಗ ಸಮಾಜದ ಮನಸ್ಸಿನ ಮೇಲೆ ಮಾಯೆಯ ಪ್ರಭಾವವು ಹೆಚ್ಚಾಗುತ್ತದೆಯೋ, ಆಗ ದೈವೀ ಶಕ್ತಿಗಳು (ಸಂತರು, ಹಾಗೆಯೇ ಸೂಕ್ಷ್ಮದಲ್ಲಿರುವ ಋಷಿ-ಮಹರ್ಷಿಗಳು, ದೇವತೆಗಳು ಮುಂತಾದವರು) ಕಾರ್ಯನಿರತರಾಗಿ ವೈಶಿಷ್ಟ್ಯಪೂರ್ಣ ಘಟನೆಗಳ ಮೂಲಕ ಸಮಾಜಮನಸ್ಸನ್ನು ಆತ್ಮನಿರ್ಭರತೆಯತ್ತ (ಸಾಧನೆಯತ್ತ) ಹೊರಳಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ವ್ಯಕ್ತಿಯು ತನ್ನ ಪ್ರಕೃತಿಯಂತೆ ವಿವಿಧ ಮಾರ್ಗಗಳಲ್ಲಿ (ಉದಾ. ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಇತ್ಯಾದಿಗಳಲ್ಲಿ) ಒಂದನ್ನು ಆಯ್ದು ಸಾಧನೆಗಾಗಿ ಪ್ರಯತ್ನಿಸುತ್ತಾನೆ. ಕಳೆದ ಒಂದು ತಪದ (೧೨ ವರ್ಷಗಳ) ಅವಧಿಗೆ ಹೋಲಿಸಿದರೆ, ಕಲಿಯುಗ ವರ್ಷ ೫೧೨೮ ರಲ್ಲಿ ಮಾಯೆಯ ಅಧಿಪತ್ಯ(ಪ್ರಭಾವ) ಶೇ. ೩೦ ರಷ್ಟು ಹೆಚ್ಚಾಗಲಿದೆ. ಹಾಗಾಗಿ ಜೀವವನ್ನು ನಿಜವಾದ ಆತ್ಮನಿರ್ಭರತೆಯತ್ತ ಕೊಂಡೊಯ್ಯಲು ದೈವೀ ಶಕ್ತಿಗಳ ಸಹಾಯವೂ ದೊರೆಯಲಿದೆ.

ಶ್ರೀ. ನಿಷಾದ ದೇಶಮುಖ

೨. ಹಿಂದುತ್ವದ ದೃಷ್ಟಿಯಿಂದ ಕಲಿಯುಗ ವರ್ಷ ೫೧೨೮ (೨೦೨೬)

೨ ಅ. ಹಿಂದುತ್ವದ ಕಾರ್ಯ ಮಾಡುವವರಿಗೆ ತೀವ್ರ ವಿರೋಧ ವ್ಯಕ್ತವಾಗುವುದರಿಂದ ಕೆಲವರು ಆ ಕಾರ್ಯದಿಂದ ದೂರ ಸರಿಯುವರು; ಆದರೆ ಸಾಧನೆ ಮಾಡುವ ಹಿಂದುತ್ವನಿಷ್ಠರು ಹಿಂದೂ ಸಮಾಜವನ್ನು ಸಂಘಟಿಸಿ ವಿಜಯ ಸಾಧಿಸುವರು ! : ಈ ವರ್ಷದಲ್ಲಿ ಹಿಂದುತ್ವವನ್ನು ವಿರೋಧಿಸುವ ವಿವಿಧ ಘಟನೆಗಳು ನಡೆಯಲಿವೆ ! ಮೂಲತಃ ಹಿಂದೂ ಧರ್ಮದ ತತ್ತ್ವಗಳಿಗೆ ವಿರುದ್ಧವಾಗಿರುವ ಅನೇಕ ವಿಷಯಗಳನ್ನು ‘ಹಿಂದುತ್ವ’ ಎಂಬ ಹೆಸರಿನಲ್ಲಿ ಅಪಪ್ರಚಾರ ಮಾಡಲಾಗುವುದು. ವಿರೋಧ ಮತ್ತು ಅಪಪ್ರಚಾರದ ಕಾರಣದಿಂದ, ಹಾಗೆಯೇ ‘ವಿಕಲ್ಪ, ಬುದ್ಧಿಭ್ರಮಣೆ, ಅಹಂಕಾರ, ಪ್ರತಿಷ್ಠೆ ಕಾಪಾಡುವುದು’ ಮುಂತಾದ ದೋಷಗಳಿಂದ ಅನೇಕ ಪ್ರತಿಷ್ಠಿತ ಹಿಂದುತ್ವನಿಷ್ಠರು ಕೂಡ ಹಿಂದುತ್ವದ ಕಾರ್ಯವನ್ನು ಮಾಡುವುದನ್ನು ನಿಲ್ಲಿಸಬಹುದು. ಪರಿಸ್ಥಿತಿ ಹೀಗಿದ್ದರೂ, ಸೂಕ್ಷ್ಮ ದಿಂದ ಅನೇಕ ‘ಋಷಿ-ಮುನಿಗಳು, ದೇವಗಣರು ಮತ್ತು ಸಾತ್ತ್ವಿಕ ಜೀವಗಳು’ ಸಾಧನೆ ಮಾಡುವ ಹಿಂದುತ್ವನಿಷ್ಠರಿಗೆ ಸಹಾಯ ಮಾಡುವರು. ಇದರಿಂದ ಆ ಹಿಂದುತ್ವನಿಷ್ಠರಿಗೆ ಪ್ರತಿಕೂಲ ಸಂದರ್ಭಗಳನ್ನು ಎದುರಿಸಲು ಸಾಧ್ಯವಾಗುವುದು ಮತ್ತು ನಿರಂತರ ಕಾರ್ಯನಿರತರಾಗಿ ಹಿಂದೂ ಸಮಾಜವನ್ನು ಸಂಘಟಿಸಲು ಹಾಗೂ ಅಂತಿಮವಾಗಿ ಹಿಂದುತ್ವದ ವಿಜಯವನ್ನು ಸಾಧಿಸಲು ಆಗುವುದು !

೨ ಆ. ಧರ್ಮಾಚರಣೆಯ ಮಹತ್ವವು ಸಮಾಜದ ಮನಸ್ಸಿನ ಮೇಲೆ ಮೂಡಿ, ಧರ್ಮಾಚರಣೆ ಮಾಡುವ ಜೀವಗಳಿಗೆ ಹಿಂದೂ ಧರ್ಮದಲ್ಲಿನ ಅಧ್ಯಾತ್ಮಶಾಸ್ತ್ರದ ಅನುಭೂತಿ ಲಭಿಸುವುದು ! : ಪ್ರಸ್ತುತ ಕಾಲದಲ್ಲಿ ಪ್ರಚಲಿತವಿರುವ ಹಿಂದೂ ಧರ್ಮಶಾಸ್ತ್ರದ ವಿವಿಧ ಕೃತಿಗಳ ಹಿಂದೆ ಶೇ. ೫೦ ರಷ್ಟು ಅಧ್ಯಾತ್ಮಶಾಸ್ತ್ರವು ಅಡಗಿದೆ. ಇದರಿಂದಾಗಿ ಧರ್ಮಾಚರಣೆಯ ಮಾಧ್ಯಮದಿಂದ ಜೀವವು ಪರೋಕ್ಷವಾಗಿ ಅಧ್ಯಾತ್ಮವನ್ನು ಆಚರಿಸುತ್ತಿರುತ್ತದೆ ಮತ್ತು ಅದರಿಂದ ಅದಕ್ಕೆ ಸಹಜವಾಗಿ ಅನುಭೂತಿ ಪಡೆಯಲು ಸಾಧ್ಯವಾಗುತ್ತದೆ. ಸಮಷ್ಟಿ ಪ್ರಾರಬ್ಧಕ್ಕನುಸಾರ ಸಮಾಜಕ್ಕೆ ಶಿಕ್ಷೆ (ದಂಡ) ನೀಡುವ ಮೊದಲು, ದೇವರು ಸಮಷ್ಟಿ ಸಂತರ ಮಾಧ್ಯಮದಿಂದ ಯೋಗ್ಯ ಆಚರಣೆಯ ಬೋಧನೆಯನ್ನು (ಸಾಮ) ನೀಡುತ್ತಾನೆ. ಕಲಿಯುಗ ವರ್ಷ ೫೧೨೮ ಇದು ದೇವರು ಸಮಾಜಕ್ಕೆ ಬೋಧನೆ ನೀಡುವ ಕಾಲವಾಗಿದೆ. ಇದರಿಂದ ಈ ವರ್ಷದಲ್ಲಿ ಸಂತರು ಹೇಳಿದಂತೆ ತಳಮಳದಿಂದ ಧರ್ಮಾಚರಣೆ ಮಾಡುವ ಕೆಲವು ಅರ್ಹ ಜೀವಗಳಿಗೆ ಧರ್ಮಶಾಸ್ತ್ರದಲ್ಲಿ ಅಡಗಿದ ಅಧ್ಯಾತ್ಮಶಾಸ್ತ್ರದ ಅನುಭೂತಿಗಳು ಬರಲಿದ್ದು ಅವು ವ್ಯಾಪಕವಾಗಿ ಪ್ರಚಾರವಾಗಲಿವೆ. ಇದರಿಂದ ಹಿಂದೂ ಧರ್ಮದ ವಿವಿಧ ಅಧ್ಯಾತ್ಮಶಾಸ್ತ್ರೀಯ ಕೃತಿಗಳ ಬಗ್ಗೆ ದೇಶ-ವಿದೇಶಗಳಲ್ಲಿ ಚರ್ಚೆಯಾಗಿ, ಅನೇಕ ಸಾತ್ತ್ವಿಕ ಜನರು ಅವುಗಳನ್ನು ಆಚರಿಸುವ ಮೂಲಕ ಸಾಧನೆಯತ್ತ ಹೊರಳುವರು.

೨ ಇ. ಸಾತ್ತ್ವಿಕ ಮತ್ತು ಧರ್ಮಾಚರಣೆ ಮಾಡುವ ಜೀವಗಳು ಭೂಮಿಯ ಮೇಲಿನ ವಿಶಿಷ್ಟ ಸ್ಥಳಗಳಿಗೆ ಆಕರ್ಷಿತರಾಗುವರು ಮತ್ತು ಅವರ ಕೈಗೆ ಅಧಿಕಾರ ಬಂದು ಆ ಸ್ಥಳಗಳು ರಾಮರಾಜ್ಯದಂತೆ ಆದರ್ಶಪ್ರಾಯವಾಗಲಿವೆ ! : ವಿವಿಧ ಋಷಿಗಳು ಮತ್ತು ಸಮಷ್ಟಿ ಸಂತರು ಮಾಡುತ್ತಿರುವ ಸೂಕ್ಷ್ಮದಲ್ಲಿನ ಕಾರ್ಯದಿಂದಾಗಿ, ಈ ವರ್ಷ ಇಡೀ ಪೃಥ್ವಿಯ ಮೇಲಿನ ವಿವಿಧ ಸ್ಥಳಗಳಿಗೆ (ಉದಾ. ಯಾವುದಾದರೂ ಹಳ್ಳಿ, ಪುರಾತನ ಕಾಲದ ನಿರ್ಲಕ್ಷಿತ ದೇವಸ್ಥಾನ ಅಥವಾ ಪುರಾತನ ಕೆರೆ ಇತ್ಯಾದಿ ಸ್ಥಳಗಳಿಗೆ) ಸಾತ್ತ್ವಿಕ ಮತ್ತು ಧರ್ಮಾಚರಣೆ ಮಾಡುವ ಜೀವಗಳು ಆಕರ್ಷಿತರಾಗುವರು. ಅವರೆಲ್ಲರೂ ಒಂದೆಡೆ ಸೇರುವುದರಿಂದ ಆ ಭೂಪ್ರದೇಶದಲ್ಲಿ ಸಾತ್ತ್ವಿಕ ಜನರ ಒಂದು ಸಣ್ಣ ಸಂಘಟನೆ ನಿರ್ಮಾಣವಾಗುವುದು ! ಧರ್ಮಾಚರಣೆ ಮಾಡುವ ಅಥವಾ ಸಾತ್ತ್ವಿಕ ಜೀವಗಳ ಸಂಘಟನೆ ಯಿಂದಾಗಿ ಆ ಕ್ಷೇತ್ರದ ಕೆಲವು ಅಡಚಣೆಗಳು ದೂರವಾಗಲಿವೆ ಮತ್ತು ಕೆಲವೆಡೆ ದೇವರ ಕೃಪೆಯಿಂದ ಧರ್ಮಾಚರಣೆ ಮಾಡುವ ಹಿಂದೂಗಳು ಅಧಿಕಾರವನ್ನು ಪಡೆದು ಆ ಪ್ರದೇಶವನ್ನು ಆಂಶಿಕವಾಗಿ ರಾಮರಾಜ್ಯದಂತೆ ಆದರ್ಶಪ್ರಾಯವನ್ನಾಗಿ ಮಾಡುವರು !

೨ ಈ. ವಿವಿಧ ರಾಷ್ಟ್ರಗಳಲ್ಲಿನ ಯುವಕರ ಮೇಲಿರುವ ಕಪ್ಪು ಶಕ್ತಿಯ ಆವರಣವು ನಾಶವಾಗುವುದರಿಂದ ಅವರು ಹಿಂದೂ ಧರ್ಮದ ಬೋಧನೆಯ ಕಡೆಗೆ ಆಕರ್ಷಿತರಾಗುವರು ! : ಕಲಿಯುಗ ವರ್ಷ ೫೧೨೮ (ವರ್ಷ ೨೦೨೬) ರಲ್ಲಿ ತೇಜತತ್ತ್ವವು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿ ‘ಲಯ’ದ ಕಾರ್ಯವು ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿದೆ. ಇದರಿಂದಾಗಿ ವಿವಿಧ ರಾಷ್ಟ್ರಗಳಲ್ಲಿನ ಯುವಕರ ಮೇಲಿರುವ ಕಪ್ಪು ಶಕ್ತಿಯ ಆವರಣವು ಸ್ವಲ್ಪ ಕಡಿಮೆಯಾಗುವುದು. ಆವರಣವು ಕಡಿಮೆಯಾದ ಕಾರಣ ವಿವಿಧ ರಾಷ್ಟ್ರಗಳ ಯುವಕರು ಸಾತ್ತ್ವಿಕ ಕೃತಿಗಳನ್ನು ಮಾಡಲು ಪ್ರೇರೇಪಿತರಾಗುವರು ಮತ್ತು ಅವರು ಪರೋಕ್ಷವಾಗಿ ಹಿಂದೂ ಧರ್ಮದ ಆಚರಣೆಯನ್ನು ಪ್ರಾರಂಭಿಸುವರು ಅಥವಾ ಹಿಂದೂ ಧರ್ಮದ ಬೋಧನೆಗಳತ್ತ ಆಕರ್ಷಿತರಾಗಿ ಅವುಗಳನ್ನು ಆಚರಿಸಲು ಹಾಗೂ ಪ್ರಚಾರ ಮಾಡಲು ಪ್ರಾರಂಭಿಸುವರು !

೩. ಸಮಾಜದ ದೃಷ್ಟಿಯಿಂದ ಕಲಿಯುಗ ವರ್ಷ ೫೧೨೮ (ವರ್ಷ ೨೦೨೬)

೩ ಅ. ಸಾಧನೆ ಮಾಡದವರು ಗಂಭೀರ ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು; ಆದರೆ ಸಾಧನೆ ಮಾಡುವ ಜೀವಗಳಿಗೆ ಪ್ರತಿಕೂಲ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗುವುದು : ಸಮಾಜವು ಸಾಧನೆ ಮಾಡುವಂತದ್ದಾಗಿದ್ದರೆ, ಪ್ರತಿಕೂಲ ಪರಿಸ್ಥಿತಿಯನ್ನು ಸ್ವೀಕರಿಸಿ ಸ್ಥಿರವಾಗಿರುವುದು ಸುಲಭವಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಸಮಾಜವು ಸಾಧನೆ ಮಾಡದಿದ್ದರೆ, ಬದಲಾಗುವ ಕಾಲದ ಕಠಿಣ ಪರಿಸ್ಥಿತಿಗಳನ್ನು ಸ್ವೀಕರಿಸುವುದು ಕಷ್ಟವಾಗುತ್ತದೆ. ಪ್ರಸ್ತುತ ಕಾಲದಲ್ಲಿ ಪೃಥ್ವಿಯ ಮೇಲಿನ ಬಹುತೇಕ ಸಮಾಜವು ಸಾಧನೆ ಮಾಡುತ್ತಿಲ್ಲ. ಆದ್ದರಿಂದ ಕಾಲಾನುಸಾರ ಆಗುವ ಬದಲಾವಣೆಗಳನ್ನು ಸ್ವೀಕರಿಸುವುದು ಸಮಾಜಕ್ಕೆ ಕಷ್ಟವಾಗಲಿದ್ದು, ಇದರ ಪರಿಣಾಮವಾಗಿ ಜನರು ವಿವಿಧ ಗಂಭೀರ ಮಾನಸಿಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಅನೇಕ ಸಂದರ್ಭಗಳಲ್ಲಿ ‘ವರ್ಣಭೇದ, ಜಾತೀಯತೆ, ದುರ್ನಡತೆ’ ಮುಂತಾದವುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಇತರ ಕೆಲವು ಕಾರಣಗಳಿಂದಾಗಿ ಹಾಗೂ ಕಾರಣವಿಲ್ಲದಿದ್ದರೂ ಜನರ ಭಾವುಕತೆ ಹೆಚ್ಚಾಗುವುದು ಮತ್ತು ಜನರಲ್ಲಿ ಅತೃಪ್ತಿ ಉಂಟಾಗುವುದರಿಂದ ಅವರು ಮಾನಸಿಕ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ !

ಜನರ ವಿವಿಧ ಮಾನಸಿಕ ಸಮಸ್ಯೆಗಳು ಹೆಚ್ಚಾದಂತೆ ಅವರ ದೈಹಿಕ ಕಾಯಿಲೆಗಳೂ ಹೆಚ್ಚಾಗುತ್ತವೆ ಮತ್ತು ಅವರಿಗೆ ಆರ್ಥಿಕ ಸಮಸ್ಯೆಗಳೂ ಎದುರಾಗುತ್ತವೆ. ಕೆಲವು ರಾಷ್ಟ್ರಗಳಲ್ಲಿ ಆರ್ಥಿಕ ಸಮಸ್ಯೆಗಳು ಉಂಟಾಗಿ ಅದರಿಂದ ಇಡೀ ವಿಶ್ವದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮವಾಗಲಿದೆ. ಸಾಧನೆ ಮಾಡುವವರು ತಮ್ಮ ಪ್ರಯತ್ನಗಳನ್ನು ಹೆಚ್ಚಿಸುವ ಮೂಲಕ ಈ ಎಲ್ಲಾ ಪರಿಸ್ಥಿತಿಗಳಿಂದ ಹೊರಬರಲು ಸಾಧ್ಯವಾಗುತ್ತದೆ, ಆದರೆ ಸಾಧನೆ ಮಾಡದವರಿಗೆ ಪ್ರತಿಕೂಲ ಪ್ರಸಂಗಗಳನ್ನು ಎದುರಿಸುವುದು ಬಹಳ ಕಷ್ಟವಾಗಲಿದೆ !

೩ ಆ. ಸಮಾಜದ ಧ್ರುವೀಕರಣ ಮತ್ತು ಬುದ್ಧಿಭ್ರಮಣೆ ಉಂಟು ಮಾಡುವ ಘಟನೆಗಳಲ್ಲಿ ಹೆಚ್ಚಳವಾಗುವುದು; ಆದರೆ ಸಮಾಜ ಮತ್ತು ರಾಷ್ಟ್ರದ ರಕ್ಷಣೆಗಾಗಿ ಸಾತ್ತ್ವಿಕ ಜನರ ಸಂಘಟನೆಯೂ ಆಗುವುದು : ಈ ವರ್ಷ ‘ವ್ಯಕ್ತಿನಿಷ್ಠೆ, ಸ್ವಾರ್ಥ ಮತ್ತು ನಿರ್ದಿಷ್ಟ ಸಿದ್ಧಾಂತಗಳ ಹಠ’ದಿಂದಾಗಿ ಸಮಾಜ ಮತ್ತು ರಾಷ್ಟ್ರವನ್ನು ವಿಭಜಿಸುವ, ಬುದ್ಧಿ ಭ್ರಮಣೆ ಉಂಟು ಮಾಡಿ ಸಾಮಾಜಿಕ ಮತಭೇದವನ್ನುಂಟು ಮಾಡುವ ಹಾಗೂ ಸಮಾಜ ಅಥವಾ ರಾಷ್ಟ್ರದ ಧ್ರುವೀಕರಣ (ಬೇರೆ ಬೇರೆ ಗುಂಪುಗಳಾಗುವುದು) ಮಾಡುವ ಘಟನೆಗಳು ಹೆಚ್ಚಾಗಲಿವೆ. ಕೆಟ್ಟ ಶಕ್ತಿಗಳ ಸೂಕ್ಷ್ಮ ಆಕ್ರಮಣಗಳಿಂದಾಗಿ ಈ ಘಟನೆಗಳ ತೀವ್ರತೆಯು ಹೆಚ್ಚಾಗಿ ‘ಅಂತರ್ಯುದ್ಧಗಳು, ದಂಗೆಗಳು ಅಥವಾ ಕೆಲವು ದಿನಗಳ ಯುದ್ಧಗಳು ಪ್ರಾರಂಭವಾಗುವ’ ಹಂತದವರೆಗೆ ಪರಿಸ್ಥಿತಿ ತಲುಪಬಹುದು. ಇದರಿಂದ ಸಮಾಜ ಮತ್ತು ರಾಷ್ಟ್ರಕ್ಕೆ ತೊಂದರೆಯಾಗಲಿದೆ. ಹೀಗಿದ್ದರೂ, ಸಮಾಜ ಮತ್ತು ರಾಷ್ಟ್ರದ ರಕ್ಷಣೆಗಾಗಿ ಸಾತ್ತ್ವಿಕ ಮತ್ತು ತತ್ತ್ವನಿಷ್ಠ ಜನರು ಮುಂದೆ ಬಂದು ವಿವಿಧ ಕಾರ್ಯಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವರು ಮತ್ತು ಪೃಥ್ವಿಯಲ್ಲಿ ವಿವಿಧೆಡೆ ಸಾತ್ತ್ವಿಕ ಜನರ ಸಂಘಟನೆ ಪ್ರಾರಂಭವಾಗಲಿದೆ !

೪. ಸಾಧನೆಯ ದೃಷ್ಟಿಯಿಂದ ಕಲಿಯುಗ ವರ್ಷ ೫೧೨೮ (ವರ್ಷ ೨೦೨೬)

೪ ಅ. ‘ಗುರುಗಳ ಆಜ್ಞಾಪಾಲನೆ’ ಮತ್ತು ‘ಶರಣಾಗತಭಾವ’ ಇವು ಸಾಧನೆಯ ಪೂರಕ ಅಂಶಗಳಾಗಿದ್ದು, ಇವು ಸಂಕಟಗಳಿಂದ ಹೊರಬರಲು ‘ಗುರುಕೀಲಿಕೈ’ ಆಗಲಿವೆ : ಈ ಕಾಲವು ‘ಲಯ’ಕ್ಕೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಈ ಕಾಲದಲ್ಲಿ ಗುರುಗಳ ಆಜ್ಞಾಪಾಲನೆಗಾಗಿ ಪ್ರಯತ್ನಿಸಿದರೆ ಶೀಘ್ರವಾಗಿ ಮನೋಲಯವಾಗಿ ಆಧ್ಯಾತ್ಮಿಕ ಉನ್ನತಿ ಆಗಲು ಸಾಧ್ಯವಿದೆ. ಅದೇ ರೀತಿ ಈ ಕಾಲದಲ್ಲಿ ತೇಜತತ್ತ್ವವು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುವುದರಿಂದ ಸಂಘರ್ಷಮಯ ಪರಿಸ್ಥಿತಿ ಯನ್ನು ಎದುರಿಸುವಾಗ ‘ಶರಣಾಗತಭಾವ’ ಇಟ್ಟು ಕೊಂಡರೆ ಸಾಧಕನ ಮೇಲೆ ಕಾಲದ ಪರಿಣಾಮವು ಕಡಿಮೆಯಾಗಿ ಆ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗುತ್ತದೆ ! ಆದ್ದರಿಂದ ಈ ಇಡೀ ಕಾಲಾವಧಿಯಲ್ಲಿ ಅನುಕೂಲ ಅಥವಾ ಪ್ರತಿಕೂಲ ಪರಿಸ್ಥಿತಿಯಲ್ಲೂ ‘ಗುರುಗಳ ಆಜ್ಞಾಪಾಲನೆ’ ಮತ್ತು ‘ಶರಣಾಗತಭಾವ’ಕ್ಕಾಗಿ ಪ್ರಯತ್ನಿಸುವುದೇ ಎಲ್ಲಾ ಸಂಕಟಗಳನ್ನು ಎದುರಿಸಿ ಅವುಗಳಿಂದ ಹೊರಬರಲು ಹಾಗೂ ಆಧ್ಯಾತ್ಮಿಕ ಉನ್ನತಿ ಸಾಧಿಸಲು ಇರುವ ನಿಜವಾದ ಗುರುಕೀಲಿಕೈ ಆಗಿದೆ.೪ ಆ. ಆತ್ಮೋನ್ನತಿಗೆ ಇದು ಸುವರ್ಣಕಾಲವಾಗಿದ್ದರಿಂದ, ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಪ್ರಯತ್ನಗಳನ್ನು ಮುಂದುವರಿಸುವ ಸಾಧಕರ ಮೇಲೆ ದೇವರ ಕೃಪೆಯಾಗುವುದು ! : ಈಶ್ವರನು ಅನಂತಕೋಟಿ ಬ್ರಹ್ಮಾಂಡನಾಯಕನಾಗಿದ್ದಾನೆ. ಅನೇಕ ಬ್ರಹ್ಮಾಂಡಗಳ ಕೆಲವು ಪೃಥ್ವಿಗಳಲ್ಲಿ ಸತ್ಯಯುಗ, ಕೆಲವಡೆ ತ್ರೇತಾಯುಗ ಮತ್ತು ಇನ್ನು ಕೆಲವಡೆ ದ್ವಾಪರಯುಗ ನಡೆಯುತ್ತಿದೆ. ‘ಅನೇಕ ಜನ್ಮಗಳಿಂದ ಸಿಲುಕಿಕೊಂಡಿರುವ ಜೀವಗಳು ಸಮಷ್ಟಿ ಸಾಧನೆ ಮಾಡಿ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಲಿ’ ಎಂಬ ಉದ್ದೇಶದಿಂದಲೇ ದೇವರು ಈ ಕಲಿಯುಗದೊಳಗಿನ ಸಣ್ಣ ಕಲಿಯುಗವು ಕೊನೆಗೊಂಡು ಸಣ್ಣ ಸತ್ಯಯುಗವು ಆರಂಭವಾಗುವ ಪ್ರಸ್ತುತ ಸಂಧಿಕಾಲದಲ್ಲಿ ಪೃಥ್ವಿಯಲ್ಲಿ ಜನ್ಮ ನೀಡಿದ್ದಾನೆ. ಈ ಸಂಧಿ ಕಾಲದ ಅವಧಿಯಲ್ಲಿ ಈ ವರ್ಷವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷದಲ್ಲಿ ಎದುರಾಗುವ ವಿವಿಧ ಸಂಘರ್ಷಗಳನ್ನು ಎದುರಿಸಿ ಸಾಧಕರು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಪ್ರಯತ್ನಗಳನ್ನು ಮುಂದುವರಿಸುವ ಸಾಧಕರ ಮೇಲೆ ದೇವರ ಕೃಪೆಯಾಗಿ ಆತ್ಮೋನ್ನತಿಯಾಗುವುದು ! ವಿಶೇಷವಾಗಿ ಈ ವರ್ಷವು ಸಾಧನೆಗಾಗಿ ಸುವರ್ಣಕಾಲವಾಗಿರುವುದರಿಂದ, ಸಾಧನೆಗಾಗಿ ಪೂರ್ಣಾವಧಿ ಸಾಧಕರಾಗಿ ಪ್ರಯತ್ನಿಸಿದರೆ ಹೆಚ್ಚಿನ ಲಾಭ ಸಿಗಲಿದೆ.

೫. ಕೃತಜ್ಞತೆ ಮತ್ತು ಪ್ರಾರ್ಥನೆ !

 ಕಾಲದ ಸಾಮರ್ಥ್ಯವು ಅಪಾರವಾಗಿದೆ. ಪ್ರತಿಕೂಲ ಕಾಲದಲ್ಲಿ ಅತ್ಯಂತ ಬುದ್ಧಿಶಕ್ತಿ, ಸಾಮರ್ಥ್ಯ ಮತ್ತು ಕೀರ್ತಿ ಹೊಂದಿರುವ ವ್ಯಕ್ತಿಗಳೂ ಸೋಲನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ವಿರುದ್ಧ, ಗುರುಕೃಪೆ ಇದ್ದರೆ ಶಿಷ್ಯನು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಬಹುದು; ಗುರುಗಳು ಶಿಷ್ಯನಿಗೆ ಅಂತಹ ಶಕ್ತಿಯನ್ನು ಪ್ರದಾನಿಸುತ್ತಾರೆ. ಪ್ರತಿಕೂಲ ಭವಿಷ್ಯ ಕಾಲವನ್ನು ಎದುರಿಸುವುದು ಸಾಮಾನ್ಯ ಸಾಧಕನ ಸಾಮರ್ಥ್ಯಕ್ಕೆ ಮೀರಿದ ವಿಷಯವಾಗಿದೆ., ಶ್ರೀ ಗುರುಗಳು ಕಾಲಕ್ಕೆ ಅನುಗುಣವಾಗಿ ಸಾಧನೆಯ ಜ್ಞಾನ ನೀಡಿ ಸಾಧಕನನ್ನು ಉದ್ಧರಿಸುತ್ತಾರೆ. ಅಂತಹ ಶ್ರೀ ಗುರುಗಳ ಕೃಪೆಯ ಫಲವಾಗಿ ನನಗೆ ಈ ಜ್ಞಾನವು ಲಭಿಸಿದೆ. ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

– ಶ್ರೀ ನಿಷಾದ ದೇಶಮುಖ (ಸೂಕ್ಷ್ಮ ಜ್ಞಾನ ಪಡೆದ ಸಾಧಕರು, ಆಧ್ಯಾತ್ಮಿಕ ಮಟ್ಟ ಶೇ. ೬೩), ರಾಮನಾಥಿ, ಗೋವಾ. (ಜ್ಞಾನ ಲಭಿಸಿದ ದಿನಾಂಕ : ೨೯.೧.೨೦೨೬ ಮತ್ತು ಸಮಯ : ಬೆಳಗ್ಗೆ ೧೦.೪೦ (೧ ನಿಮಿಷ); ಜ್ಞಾನವನ್ನು ಬೆರಳಚ್ಚು ಮಾಡಿದ ದಿನಾಂಕ : ೧.೨.೨೦೨೬, ಸಮಯ : ಮಧ್ಯಾಹ್ನ ೩.೦೬ ರಿಂದ ೫.೩೧ ಮತ್ತು ಅವಧಿ : ೨ ಗಂಟೆ ೨೫ ನಿಮಿಷಗಳು)