ನೆತನ್ಯಾಹು ಅವರೊಂದಿಗೆ ಚರ್ಚಿಸಿ ಯುದ್ಧ ಕೊನೆಗೊಳಿಸುವ ನಿರ್ಧಾರ ತೆಗೆದುಕೊಳ್ಳುವೆ! – ಡೊನಾಲ್ಡ್ ಟ್ರಂಪ್

ನವದೆಹಲಿ / ಟೆಹ್ರಾನ್ (ಇರಾನ್) / ಪ್ಯಾರಿಸ್ (ಫ್ರಾನ್ಸ್) / ವಾಷಿಂಗ್ಟನ್ (ಅಮೆರಿಕ) – ಕೊಲ್ಲಿ ರಾಷ್ಟ್ರಗಳಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿರುವ ಯುದ್ಧದಿಂದಾಗಿ ಜಗತ್ತಿನಾದ್ಯಂತ ಆತಂಕ ಹೆಚ್ಚಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, “ನಾನು ಮತ್ತು ನೆತನ್ಯಾಹು ಇಲ್ಲದಿದ್ದರೆ ಇರಾನ್ ಇಸ್ರೇಲ್ ಅನ್ನು ಸಂಪೂರ್ಣವಾಗಿ ನಾಶಮಾಡುತ್ತಿತ್ತು. ಇರಾನ್ ಇಸ್ರೇಲ್ ಮತ್ತು ಸುತ್ತಮುತ್ತಲಿನ ದೇಶಗಳನ್ನು ನಾಶಮಾಡಲು ಸಿದ್ಧವಾಗಿತ್ತು. ನಾವು ಒಟ್ಟಾಗಿ ಕೆಲಸ ಮಾಡಿ ಇರಾನ್ ಅನ್ನು ತಡೆದಿದ್ದೇವೆ. ಈ ಯುದ್ಧವನ್ನು ಕೊನೆಗೊಳಿಸುವ ನಿರ್ಧಾರವನ್ನು ನಾನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳುತ್ತೇನೆ; ಆದರೆ ಎಲ್ಲಾ ವಿಷಯಗಳನ್ನು ಪರಿಗಣಿಸಲಾಗುವುದು. ಇದರರ್ಥ ಇಸ್ರೇಲ್ ಪ್ರಧಾನಿ ನೆತನ್ಯಾಹು ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾರೆ, ಆದರೆ ಅಂತಿಮ ನಿರ್ಧಾರ ನನ್ನದೇ ಆಗಿರುತ್ತದೆ,” ಎಂದು ಟ್ರಂಪ್ ತಿಳಿಸಿದ್ದಾರೆ.

ತೈಲ ಬೆಲೆ ಏರಿಕೆ ಜಗತ್ತಿನ ಶಾಂತಿಗಾಗಿ ತೆರಬೇಕಾದ ಸಣ್ಣ ಬೆಲೆ!

‘ಎಕ್ಸ್’ (ಟ್ವಿಟರ್) ಸಂದೇಶವೊಂದರಲ್ಲಿ ಟ್ರಂಪ್ ಅವರು, “ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳ ಭೀತಿ ಸಂಪೂರ್ಣವಾಗಿ ಕೊನೆಗೊಂಡ ನಂತರ ತೈಲ ಬೆಲೆಗಳು ಶೀಘ್ರದಲ್ಲೇ ಕಡಿಮೆಯಾಗಲಿವೆ. ಪ್ರಸ್ತುತ ಸ್ವಲ್ಪ ಕಾಲ ತೈಲ ಬೆಲೆಗಳು ಏರಿಕೆಯಾದರೂ, ಅದು ಅಮೆರಿಕ ಮತ್ತು ಜಗತ್ತಿನ ಸುರಕ್ಷತೆಗಾಗಿ ತೆರಬೇಕಾದ ಒಂದು ಸಣ್ಣ ಬೆಲೆಯಾಗಿದೆ. ಇದರ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವವರು ಮೂರ್ಖರು,” ಎಂದು ಟ್ರಂಪ್ ಟೀಕಿಸಿದ್ದಾರೆ.

ಯುದ್ಧದ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಭಾರತ ಸರ್ಕಾರ ಅತ್ಯಂತ ಗಂಭೀರವಾಗಿದೆ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಯುದ್ಧದ ಕಾರಣದಿಂದ ಕೊಲ್ಲಿ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಭಾರತೀಯರು, ಹಾಗೂ ಇಂಧನ ಬಿಕ್ಕಟ್ಟಿನ ಸಮಸ್ಯೆಗಳ ಕುರಿತು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದವು. ಅದೇ ವೇಳೆ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಯುದ್ಧದ ಪರಿಸ್ಥಿತಿಯ ಕುರಿತು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದರು. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಸರ್ಕಾರ ತುಂಬಾ ಗಂಭೀರವಾಗಿದೆ ಎಂದು ತಿಳಿಸಿದರು. ಭಾರತವು ಫೆಬ್ರವರಿ 20 ರಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಕಳವಳ ವ್ಯಕ್ತಪಡಿಸಿದೆ ಮತ್ತು ಎಲ್ಲಾ ಪಕ್ಷಗಳು ಸಂಯಮ ಕಾಯ್ದುಕೊಳ್ಳುವಂತೆ ಮನವಿ ಮಾಡಿದೆ.

ವಿದೇಶಾಂಗ ಸಚಿವ ಡಾ. ಜೈಶಂಕರ್ ಮಂಡಿಸಿದ ಪ್ರಮುಖ ಅಂಶಗಳು!

1. ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಬೆಳವಣಿಗೆಗಳ ಮೇಲೆ ಸೂಕ್ಷ್ಮವಾಗಿ ನಿಗಾ ಇಟ್ಟಿದ್ದಾರೆ. ಸಂಬಂಧಪಟ್ಟ ಸಚಿವಾಲಯಗಳು ಸೂಕ್ತ ಹೆಜ್ಜೆಗಳನ್ನು ಇಡಲು ಸಮನ್ವಯದಿಂದ ಕೆಲಸ ಮಾಡುತ್ತಿವೆ. ಈ ವಿವಾದ ಭಾರತಕ್ಕೆ ಅತ್ಯಂತ ಕಳವಳಕಾರಿ ವಿಷಯವಾಗಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಸುಮಾರು 1 ಕೋಟಿ ಭಾರತೀಯರು ವಾಸಿಸುತ್ತಿದ್ದಾರೆ. ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಇರಾನ್‌ನಲ್ಲಿಯೂ ಇದ್ದಾರೆ.

2. ಇರಾನ್ ಭಾರತದ ಇಂಧನ ಭದ್ರತೆಗೆ ಮುಖ್ಯವಾಗಿದೆ; ಏಕೆಂದರೆ ಇದು ತೈಲ ಮತ್ತು ಅನಿಲದ ಪ್ರಮುಖ ಪೂರೈಕೆ ಮಾಡುವ ದೇಶ. ಪೂರೈಕೆ ಸರಪಳಿಯಲ್ಲಿನ ವ್ಯತ್ಯಯ ಒಂದು ಗಂಭೀರ ವಿಷಯವಾಗಿದೆ. ವಿವಾದವು ನಿರಂತರವಾಗಿ ಹೆಚ್ಚುತ್ತಿದ್ದು, ಇದರಿಂದ ಆ ಪ್ರದೇಶದ ಭದ್ರತಾ ಪರಿಸ್ಥಿತಿ ಹದಗೆಟ್ಟಿದೆ. ಇದು ಸಾಮಾನ್ಯ ಜೀವನ ಮತ್ತು ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಿಕ್ಕಟ್ಟಿನಲ್ಲಿ ಭಾರತವು ಎರಡು ನಾವಿಕರನ್ನು ಕಳೆದುಕೊಂಡಿದೆ ಮತ್ತು ಒಬ್ಬ ನಾವಿಕ ಇನ್ನೂ ನಾಪತ್ತೆಯಾಗಿದ್ದಾನೆ.

3. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಸಹಾಯ ಮಾಡುತ್ತಿದೆ. ರಾಯಭಾರ ಕಚೇರಿ ಸಂಪೂರ್ಣ ಸಕ್ರಿಯವಾಗಿದ್ದು, ಹೈ-ಅಲರ್ಟ್‌ನಲ್ಲಿ ಕೆಲಸ ಮಾಡುತ್ತಿದೆ. ಇರಾನ್‌ನಲ್ಲಿರುವ ಭಾರತೀಯ ಉದ್ಯಮಿಗಳು ಅರ್ಮೇನಿಯಾ ಮಾರ್ಗವಾಗಿ ಭಾರತಕ್ಕೆ ಮರಳಲು ಸಹಾಯ ಮಾಡಲಾಗಿದೆ. ಇಲ್ಲಿಯವರೆಗೆ ಅಂದಾಜು 67,೦೦೦ ಭಾರತೀಯ ನಾಗರಿಕರು ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಮರಳಿದ್ದಾರೆ. ಭಾರತೀಯರನ್ನು ಮರಳಿ ಕರೆತರಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

4. ಪ್ರಸ್ತುತ ಹಿರಿಯ ಇರಾನಿ ನಾಯಕರನ್ನು ಸಂಪರ್ಕಿಸುವುದು ಕಷ್ಟವಾಗಿದೆ. ಆದಾಗ್ಯೂ, ಇರಾನ್ ವಿದೇಶಾಂಗ ಸಚಿವರು ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಭಾರತವು ಮಾನವೀಯತೆಯ ಆಧಾರದ ಮೇಲೆ ಇರಾನಿನ ಯುದ್ಧನೌಕೆ ‘ಲಾವನ್’ಗೆ ಕೊಚ್ಚಿ ಬಂದರಿನಲ್ಲಿ ನಿಲ್ಲಲು ಅನುಮತಿ ನೀಡಿದ್ದಕ್ಕಾಗಿ ಇರಾನ್ ಕೃತಜ್ಞತೆ ವ್ಯಕ್ತಪಡಿಸಿದೆ.

ದಾಳಿಯಲ್ಲಿ ಇರಾನ್‌ನ ನೂತನ ಪರಮೋಚ್ಚ ಧಾರ್ಮಿಕ ನಾಯಕ ಮೊಜ್ತಬಾ ಖಮೇನಿ ಗಾಯಗೊಂಡಿದ್ದಾರೆ! – ಇಸ್ರೇಲ್ ಹೇಳಿಕೆ

ಇಸ್ರೇಲಿ ಭದ್ರತಾ ಅಧಿಕಾರಿಗಳ ಪ್ರಕಾರ, ಇಸ್ರೇಲ್ ದಾಳಿಯಲ್ಲಿ ಹತರಾದ ಇರಾನ್‌ನ ಮಾಜಿ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರು ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಕ್ಕೂ ಮೊದಲು, ಮೊಜ್ತಬಾ ಅವರನ್ನು ಅವರ ತಂದೆಯ ಉತ್ತರಾಧಿಕಾರಿಯಾಗಿ, ಅಂದರೆ ಇರಾನ್‌ನ ಹೊಸ ಪರಮೋಚ್ಚ ನಾಯಕನಾಗಿ ‘ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್’ ಆಯ್ಕೆ ಮಾಡಿದೆ ಎಂದು ‘ಇರಾನ್ ಇಂಟರ್ನ್ಯಾಷನಲ್’ ಸುದ್ದಿವಾಹಿನಿ ಹೇಳಿತ್ತು.

ನಮ್ಮ ಮಾನ್ಯತೆಯಿಲ್ಲದೆ ನಿರ್ಧರಿಸಲ್ಪಟ್ಟ ನಾಯಕ ಹೆಚ್ಚು ಕಾಲ ಉಳಿಯುವುದಿಲ್ಲ! – ಟ್ರಂಪ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ನಿರ್ಧಾರವನ್ನು ‘ಅಸ್ವೀಕಾರಾರ್ಹ’ ಎಂದು ಕರೆದಿದ್ದಾರೆ. ‘ಹೊಸ ನಾಯಕನಿಗೆ ನಮ್ಮಿಂದ ಮಾನ್ಯತೆ ಸಿಗದಿದ್ದರೆ, ಆತ ಹೆಚ್ಚು ಕಾಲ ಉಳಿಯುವುದಿಲ್ಲ’ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಅಲಿ ಖಮೇನಿ ಅವರ ಮರಣದ ನಂತರ ಇಸ್ರೇಲ್ ಮತ್ತು ಅಮೆರಿಕದ ಅನುಮತಿಯಿಲ್ಲದೆ ಪರಮೋಚ್ಚ ನಾಯಕರಾಗಿ ಆಯ್ಕೆಯಾಗುವ ಯಾರನ್ನಾದರೂ ಹುಡುಕಿ ಕೊಲ್ಲಲಾಗುವುದು ಎಂದು ಬೆದರಿಕೆ ಹಾಕಲಾಗಿದೆ.

ಇರಾನ್‌ನ ತೈಲ ನಿಕ್ಷೇಪಗಳೇ ಈ ಯುದ್ಧಕ್ಕೆ ಕಾರಣ! – ಅಮೆರಿಕದ ಸಂಸದರ ದಾವೆ

ಇರಾನ್ ಮೇಲೆ ಮಾಡಲಾದ ಮಿಲಿಟರಿ ಕಾರ್ಯಾಚರಣೆ ಕೇವಲ ಪರಮಾಣು ಶಸ್ತ್ರಾಸ್ತ್ರಗಳನ್ನು ತಡೆಯುವುದಕ್ಕಾಗಿ ಮಾತ್ರವಲ್ಲ. ಇರಾನ್‌ನ ನೈಸರ್ಗಿಕ ಸಂಪನ್ಮೂಲಗಳ ಮೇಲೆ, ವಿಶೇಷವಾಗಿ ಅಪಾರ ಕಚ್ಚಾ ತೈಲ ನಿಕ್ಷೇಪಗಳ ಮೇಲೆ ಅಮೆರಿಕದ ಕಣ್ಣಿದೆ. ವೆನೆಜುವೆಲಾದಲ್ಲಿ ಮಧ್ಯಪ್ರವೇಶಿಸಿ ಅಲ್ಲಿನ ತೈಲ ಕ್ಷೇತ್ರದ ಮೇಲೆ ನಿಯಂತ್ರಣ ಸಾಧಿಸಲು ನಾವು ಹೇಗೆ ಪ್ರಯತ್ನಿಸಿದೆವೋ, ಅದೇ ರೀತಿ ಇರಾನ್‌ನಲ್ಲಿಯೂ ಆಗುವ ಸಾಧ್ಯತೆಯಿದೆ ಎಂದು ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಹೇಳಿಕೆ ನೀಡಿದ್ದು, ಇದರಿಂದ ಜಾಗತಿಕ ರಾಜಕಾರಣದಲ್ಲಿ ಸಂಚಲನ ಮೂಡಿದೆ.

ಫ್ರಾನ್ಸ್ ಈ ಯುದ್ಧದಲ್ಲಿ ಯಾವುದೇ ಕಾರಣಕ್ಕೂ ಪಾಲ್ಗೊಳ್ಳುವುದಿಲ್ಲ! – ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ‘ಇನ್ಸ್ಟಾಗ್ರಾಮ್’ನಲ್ಲಿ ಯುದ್ಧವನ್ನು ತಪ್ಪಿಸಲು ವಿನಂತಿಸಿದ ಯುವತಿಯೊಬ್ಬಳಿಗೆ ಉತ್ತರಿಸುತ್ತಾ, ‘ನಾನು ನಿಮ್ಮ ಕಾಳಜಿಯನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ಫ್ರಾನ್ಸ್ ಯುದ್ಧದಲ್ಲಿ ಖಂಡಿತವಾಗಿಯೂ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದು ಹೇಳಿದ್ದಾರೆ. ಮತ್ತೊಂದೆಡೆ ಅಬುಧಾಬಿಯಲ್ಲಿರುವ ಫ್ರಾನ್ಸ್‌ನ ನೌಕಾ ನೆಲೆಯ ಮೇಲೆ ಡ್ರೋನ್ ದಾಳಿಯಾದ ನಂತರ, ಫ್ರಾನ್ಸ್ ತನ್ನ ರಫೇಲ್ ಯುದ್ಧವಿಮಾನಗಳು ಮತ್ತು ವಿಮಾನವಾಹಕ ಯುದ್ಧನೌಕೆ ‘ಚಾರ್ಲ್ಸ್ ಡಿ ಗೌಲ್’ ಅನ್ನು ಮೆಡಿಟರೇನಿಯನ್ ಸಮುದ್ರಕ್ಕೆ ಕಳುಹಿಸಿದೆ.

ನಮಗೆ ಯುದ್ಧದಲ್ಲಿ ಪಾಲ್ಗೊಳ್ಳುವ ಇಚ್ಛೆಯಿಲ್ಲ! – ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಇರಾನಿನ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ರಕ್ಷಣೆ ಪಡೆಯಲು ಪರ್ಷಿಯನ್ ಕೊಲ್ಲಿ ದೇಶಗಳಲ್ಲಿ ವಾಯು ರಕ್ಷಣಾ ಪಡೆಗಳನ್ನು ನಿಯೋಜಿಸಲು ಒಪ್ಪಿಗೆ ನೀಡಿದ್ದಾರೆ. ಅಮೆರಿಕದ ವಿಮಾನಗಳಿಗೆ ಅಲ್ಲಿನ ಇಟಲಿ ನೆಲೆಗಳನ್ನು ಬಳಸಲು ಸಹ ಅನುಮತಿ ನೀಡಿದ್ದಾರೆ; ಆದರೆ ತಾವು ನೇರವಾಗಿ ಯುದ್ಧದಲ್ಲಿ ಭಾಗವಹಿಸುವುದಿಲ್ಲ ಎಂದು ಮೆಲೋನಿ ಘೋಷಿಸಿದ್ದಾರೆ.

ಅಂತರರಾಷ್ಟ್ರೀಯ ಕಾನೂನುಗಳನ್ನು ಯಾರೂ ಪಾಲಿಸುತ್ತಿಲ್ಲ! – ರಷ್ಯಾ

ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಮತ್ತು ‘ಕ್ರೆಮ್ಲಿನ್’ (ರಷ್ಯಾ ಅಧ್ಯಕ್ಷರ ಕಚೇರಿ) ವಕ್ತಾರ ಡಿಮಿಟ್ರಿ ಪೆಸ್ಕೋವ್ ಈ ಯುದ್ಧದ ಬಗ್ಗೆ ಮಾತನಾಡುತ್ತಾ, ಅಂತರರಾಷ್ಟ್ರೀಯ ಕಾನೂನು ಅಸ್ತಿತ್ವದಲ್ಲಿದೆ; ಆದರೆ ವಾಸ್ತವದಲ್ಲಿ ಅದು ಕಾರ್ಯನಿರ್ವಹಿಸುತ್ತಿಲ್ಲ ಎಂದಿದ್ದಾರೆ. ಈ ಕಾನೂನು ಸಂಪೂರ್ಣ ಅಪಾಯದಲ್ಲಿದೆ. ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸುವಂತೆ ನಾವು ಯಾರಿಗೂ ಹೇಳಲು ಸಾಧ್ಯವಿಲ್ಲ; ಆದರೆ ಯಾವ ಕಾನೂನನ್ನು ಪಾಲಿಸಬೇಕು? ಇಂದು ಯಾರೂ ಇದನ್ನು ಸ್ಪಷ್ಟವಾಗಿ ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿಯ ಕೆಳಗಿವೆ ಇಂಟರ್ನೆಟ್‌ನ ‘ಸಬ್‌ಮರೀನ್ ಫೈಬರ್ ಆಪ್ಟಿಕ್ ಕೇಬಲ್‌ಗಳು’!

ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ಈ ಜಲಸಂಧಿಯನ್ನು ಇಂಟರ್ನೆಟ್ ಸೌಲಭ್ಯಕ್ಕಾಗಿಯೂ ಬಳಸಲಾಗುತ್ತದೆ. ಈ ಸಮುದ್ರದ ಕೆಳಗೆ ‘ಸಬ್‌ಮರೀನ್ ಫೈಬರ್ ಆಪ್ಟಿಕ್ ಕೇಬಲ್‌ಗಳ’ ಜಾಲ ಹರಡಿದೆ. ಇದರಿಂದಾಗಿ ಪ್ರಪಂಚದಾದ್ಯಂತದ ಇಂಟರ್ನೆಟ್ ಡೇಟಾ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತಲುಪುತ್ತದೆ. ತಜ್ಞರ ಪ್ರಕಾರ, ಈ ಪ್ರದೇಶದಲ್ಲಿ ಸಂಘರ್ಷ ಅಥವಾ ಯಾವುದೇ ರೀತಿಯ ಅಡಚಣೆ ಉಂಟಾದರೆ, ಅದರ ಪರಿಣಾಮವು ಕೇವಲ ತೈಲ ಮಾರುಕಟ್ಟೆಯ ಮೇಲೆ ಮಾತ್ರವಲ್ಲದೆ, ಇಂಟರ್ನೆಟ್ ಸೇವೆಗಳ ಮೇಲೂ ಆಗಬಹುದು.

ಭಾರತದ ಪಶ್ಚಿಮ ದಿಕ್ಕಿಗೆ ಹೋಗುವ ‘ಇಂಟರ್ನೆಟ್ ಟ್ರಾಫಿಕ್’ನ ಸುಮಾರು ಮೂರನೇ ಒಂದು ಭಾಗವು ಈ ಪ್ರದೇಶದ ಮೂಲಕವೇ ಹಾದುಹೋಗುತ್ತದೆ. ಇದರರ್ಥ ಭಾರತದಿಂದ ವಿದೇಶಕ್ಕೆ ಹೋಗುವ ದೊಡ್ಡ ಡೇಟಾ ಟ್ರಾಫಿಕ್ ಇದೇ ಮಾರ್ಗವನ್ನು ಅವಲಂಬಿಸಿದೆ. ಈ ಡೇಟಾ ಟ್ರಾಫಿಕ್ ನಮ್ಮ ಪ್ರಮುಖ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಇದರಲ್ಲಿ ‘ಕ್ಲೌಡ್ ಕಂಪ್ಯೂಟಿಂಗ್ ಪ್ಲಾಟ್‌ಫಾರ್ಮ್‌ಗಳು’, ‘ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಹಣಕಾಸು ಜಾಲಗಳು’, ‘ಬಹುರಾಷ್ಟ್ರೀಯ ಕಂಪನಿಗಳ ಡಿಜಿಟಲ್ ಕಾರ್ಯಾಚರಣೆಗಳು’, ಸಾಮಾಜಿಕ ಮಾಧ್ಯಮಗಳು ಮತ್ತು ಸ್ಟ್ರೀಮಿಂಗ್ ಸೇವೆಗಳು ಸೇರಿವೆ.

ಟೆಹ್ರಾನ್‌ನಲ್ಲಿ ‘ಕಪ್ಪು ವಿಷಕಾರಿ ಮಳೆ’!

ಇಸ್ರೇಲ್ ಇರಾನ್‌ನ ತೈಲ ಸಂಸ್ಕರಣಾ ಕ್ಷೇತ್ರಗಳ ಮೇಲೆ ನಡೆಸಿದ ಭೀಕರ ದಾಳಿಯ ನಂತರ, ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ‘ಕಪ್ಪು ವಿಷಕಾರಿ ಮಳೆ’ ಸುರಿದ ಘಟನೆ ನಡೆದಿದೆ. ಈ ಮಾಲಿನ್ಯದಿಂದಾಗಿ ನಗರದಲ್ಲಿ ಆರೋಗ್ಯ ಮತ್ತು ಪರಿಸರ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.

ಇಸ್ರೇಲಿ ದಾಳಿಯಿಂದ ಇರಾನ್‌ನ ಪ್ರಮುಖ ತೈಲ ನಿಕ್ಷೇಪಗಳು ಮತ್ತು ಸಂಸ್ಕರಣಾ ಕ್ಷೇತ್ರಗಳು ಸುಟ್ಟು ಬೂದಿಯಾಗಿವೆ. ಈ ಬೆಂಕಿಯಿಂದ ಉಂಟಾದ ಬೃಹತ್ ಕಪ್ಪು ಹೊಗೆ, ಬೂದಿ ಮತ್ತು ಮಾರಕ ರಾಸಾಯನಿಕಗಳು ಆಕಾಶದಲ್ಲಿನ ಮೋಡಗಳಲ್ಲಿ ಬೆರೆತಿವೆ. ಟೆಹ್ರಾನ್‌ನಲ್ಲಿ ಮಳೆಯಾದಾಗ, ಆ ಮಳೆಯು ಕಪ್ಪು ಬಣ್ಣದಲ್ಲಿತ್ತು ಮತ್ತು ಅಂಟು ಅಂಟಾಗಿತ್ತು. ಈ ಮಳೆಯಲ್ಲಿ ಹೆಚ್ಚಿನ ಪ್ರಮಾಣದ ಹೈಡ್ರೋಕಾರ್ಬನ್‌ಗಳು ಮತ್ತು ವಿಷಕಾರಿ ಕಣಗಳಿವೆ ಎಂದು ತಜ್ಞರು ಹೇಳುತ್ತಾರೆ. ಈ ವಿಷಕಾರಿ ಮಳೆಯಿಂದಾಗಿ ಟೆಹ್ರಾನ್ ನಾಗರಿಕರಿಗೆ ಉಸಿರಾಟದ ತೊಂದರೆ, ಕಣ್ಣಿನ ಉರಿ ಮತ್ತು ಚರ್ಮ ರೋಗಗಳು ಬರಲಿವೆ. ನಾಗರಿಕರು ಮನೆಯಿಂದ ಹೊರಬರದಂತೆ ಆಡಳಿತ ಮಂಡಳಿ ಮನವಿ ಮಾಡಿದೆ. ಅಲ್ಲದೆ, ಈ ಮಳೆಯಿಂದಾಗಿ ಕುಡಿಯುವ ನೀರಿನ ಮೂಲಗಳು ಮತ್ತು ಕೃಷಿಗೆ ಅಪಾರ ಹಾನಿಯಾಗುವ ಭೀತಿ ವ್ಯಕ್ತವಾಗಿದೆ.

ಯುದ್ಧವು ಕೇವಲ ಪ್ರಾಣಹಾನಿ ಮಾತ್ರವಲ್ಲದೆ ಪ್ರಕೃತಿಯ ದೊಡ್ಡ ವಿನಾಶಕ್ಕೂ ಕಾರಣವಾಗುತ್ತದೆ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ಟೆಹ್ರಾನ್‌ನಲ್ಲಿ ಸುರಿದ ಈ ಕಪ್ಪು ಮಳೆಯನ್ನು ಜಾಗತಿಕ ಪರಿಸರಕ್ಕೆ ಅಪಾಯದ ಗಂಟೆ ಎಂದು ಪರಿಗಣಿಸಲಾಗಿದೆ.

ನಮ್ಮ ಮೇಲೆ 234 ಕ್ಷಿಪಣಿಗಳು ಮತ್ತು 422 ಡ್ರೋನ್‌ಗಳನ್ನು ಹಾರಿಸಲಾಗಿದೆ! – ಕುವೈತ್

ಕಳೆದ 9 ದಿನಗಳಲ್ಲಿ ನಮ್ಮ ಮೇಲೆ 234 ಕ್ಷಿಪಣಿಗಳು ಮತ್ತು 422 ಡ್ರೋನ್‌ಗಳನ್ನು ಹಾರಿಸಲಾಗಿದೆ ಎಂದು ಕುವೈತ್ ಹೇಳಿದೆ. ಈ ಮಾಹಿತಿಯನ್ನು ಕುವೈತ್‌ನ ವಿದೇಶಾಂಗ ಸಚಿವಾಲಯ ನೀಡಿದೆ.

ಇರಾನ್‌ನಲ್ಲಿ ಇದುವರೆಗೆ 10,೦೦೦ ಸಾರ್ವಜನಿಕ ಕಟ್ಟಡಗಳು ಧ್ವಂಸ

ಅಮೆರಿಕ ಮತ್ತು ಇಸ್ರೇಲ್ ನಮ್ಮ ಮೇಲೆ ನಡೆಸಿದ ದಾಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕ ಕಟ್ಟಡಗಳು ನಾಶವಾಗಿವೆ ಎಂದು ಇರಾನ್‌ನ ಪರಿಹಾರ ಸಂಸ್ಥೆ ‘ಇರಾನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ’ ಹೇಳಿದೆ. ಸಂಸ್ಥೆಯ ಪ್ರಕಾರ, ಇಲ್ಲಿಯವರೆಗೆ 9,669 ನಾಗರಿಕ ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿವೆ. ಹಾಗೆಯೇ 7,943 ವಸತಿ ಕಟ್ಟಡಗಳು ಮತ್ತು 1,617 ವಾಣಿಜ್ಯ ಕಟ್ಟಡಗಳು ಸಹ ನಾಶವಾಗಿವೆ.

ಉತ್ತರ ಸೈಪ್ರಸ್‌ನಲ್ಲಿ ‘ಎಫ್-16’ ಯುದ್ಧ ವಿಮಾನಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಿದ ಟರ್ಕಿ

ಟರ್ಕಿಯ ಗಣರಾಜ್ಯವಾಗಿರುವ ಉತ್ತರ ಸೈಪ್ರಸ್‌ನಲ್ಲಿ 6 ‘ಎಫ್-16’ ಯುದ್ಧ ವಿಮಾನಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ತಿಳಿಸಿದೆ. ಬದಲಾಗುತ್ತಿರುವ ಪರಿಸ್ಥಿತಿಗಳು ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ಇರಾನ್ ಮೇಲಿನ ದಾಳಿಯನ್ನು ತಡೆಯಲು ನ್ಯೂಯಾರ್ಕ್‌ನಲ್ಲಿ ಪ್ರತಿಭಟನೆಗಳು

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಪ್ರತಿಭಟನಾಕಾರರು ವಿರೋಧಿಸಿದರು. ಈ ದಾಳಿಗಳು ಹಾಗೂ ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.