ಭಾರತದ ಉಜ್ವಲ ಭವಿಷ್ಯಕ್ಕಾಗಿ ಮತ್ತು ಧರ್ಮ ರಕ್ಷಣೆಗಾಗಿ ‘ಹಿಂದೂ ರಾಷ್ಟ್ರ’ದ ಸ್ಥಾಪನೆ ಅನಿವಾರ್ಯ! – ಶ್ರೀ ಚಂದ್ರಶೇಖರ, ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ತುಮಕೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ !

ವಕ್ತಾರರು ದೀಪ ಪ್ರಜ್ವಲನೆ ಮಾಡುತ್ತಿರುವುದು ಎಡಗಡೆಯಿಂದ ಸೌ. ಸಂಗೀತ ಶಶಿಧರ್ ಆಚಾರ್ಯ, ಶ್ರೀ ಮಹೇಂದ್ರ ಕುಮಾರ್ ವೈಷ್ಣವ್ ಮತ್ತು ಶ್ರೀ ಚಂದ್ರಶೇಖರ

ತುಮಕೂರು – ಸನಾತನ ಧರ್ಮವು ಕೇವಲ ಒಂದು ಪಂಥವಲ್ಲ, ಅದು ಇಡೀ ವಿಶ್ವದ ಕಲ್ಯಾಣವನ್ನು ಬಯಸುವ ಜೀವನ ಪದ್ಧತಿಯಾಗಿದೆ. ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರದ ಮೇಲೆ ಹಾರುತ್ತಿರುವ ಧರ್ಮಧ್ವಜವು 500 ವರ್ಷಗಳ ಸಂಘರ್ಷದ ವಿಜಯದ ಸಂಕೇತವಾಗಿದೆ; ಈಗ ಅದೇ ಕೇಸರಿ ಧ್ವಜವನ್ನು ಪ್ರತಿಯೊಬ್ಬ ಹಿಂದೂಗಳ ಮನಮನದಲ್ಲಿ ಹಾರಿಸಬೇಕಿದೆ. ಇಂದು ದೇಶದ ಏಕತೆಯನ್ನು ನಾಶಮಾಡಲು ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮತ್ತು ವಕ್ಫ್ ಬೋರ್ಡ್‌ನಂತಹ ಸವಾಲುಗಳು ಎದುರಾಗಿವೆ. ಈ ಅಧರ್ಮಕ್ಕೆ ತಡೆ ಹಾಕಲು ಮತ್ತು ನ್ಯಾಯಯುತವಾದ ಸುರಾಜ್ಯದ ನಿರ್ಮಾಣಕ್ಕಾಗಿ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ ಚಂದ್ರಶೇಖರ ಅವರು ಹೇಳಿದರು.

ಶ್ರೀ ಮಹೇಂದ್ರಕುಮಾರ್ ವೈಷ್ಣವ್, ಉದ್ಯಮಿ

ಹಿಂದೂಗಳ ಸಂಘಟನೆ ಮತ್ತು ರಾಷ್ಟ್ರ ಜಾಗೃತಿಯ ಪವಿತ್ರ ಉದ್ದೇಶದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ತುಮಕೂರಿನ ಗೋಕುಲ್ ಬಡಾವಣೆಯ ಟೂಡಾ ಲೇಔಟ್ ಉದ್ಯಾನವದಲ್ಲಿರುವ ಶ್ರೀ ಶಕ್ತಿಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆಯು’ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ಪವಿತ್ರ ದೀಪಪ್ರಜ್ವಲನೆ ಮತ್ತು ಶಂಖನಾದದೊಂದಿಗೆ ಶ್ರದ್ಧಾಪೂರ್ವಕವಾಗಿ ಪ್ರಾರಂಭಿಸಲಾಯಿತು. ಈ ಧರ್ಮಜಾಗೃತಿ ಸಭೆಯಲ್ಲಿ 60ಕ್ಕೂ ಹೆಚ್ಚು ಜಿಜ್ಞಾಸು ಹಿಂದೂ ಬಾಂಧವರು ಪಾಲ್ಗೊಂಡು ಧರ್ಮಕಾರ್ಯದ ಸಂಕಲ್ಪ ಮಾಡಿದರು.

ಹಿಂದೂ ಜನಜಗೃತಿ ಸಮಿತಿಯ ವಕ್ತಾರರಾದ ಶ್ರೀ ಚಂದ್ರಶೇಖರ್

ಮುಂದೆ ಮಾತನಾಡುತ್ತ ಶ್ರೀ ಚಂದ್ರಶೇಖರ ಅವರು ಬ್ರಿಟಿಷರ ಶಿಕ್ಷಣ ನೀತಿಯಿಂದಾಗಿ ಹಿಂದೂಗಳಲ್ಲಿ ನಿರ್ಮಾಣವಾಗಿರುವ ಕೀಳರಿಮೆಯನ್ನು ಬಿಟ್ಟು, ಜ್ಞಾನ-ವಿಜ್ಞಾನದಲ್ಲಿ ಶ್ರೇಷ್ಠವಾಗಿದ್ದ ಭಾರತದ ಭವ್ಯ ಇತಿಹಾಸವನ್ನು ಅರಿಯಬೇಕು. ಲವ್ ಜಿಹಾದ್ ಮತ್ತು ಮತಾಂತರದಂತಹ ಸಂಕಟಗಳನ್ನು ಕಾನೂನಾತ್ಮಕವಾಗಿ ಎದುರಿಸಲು ಪ್ರತಿಯೊಬ್ಬ ಹಿಂದೂವೂ ಸನ್ನದ್ಧರಾಗಬೇಕು. ವಿಚಾರಗಳಿಂದ ಧರ್ಮ ರಕ್ಷಣೆ ಸಾಧ್ಯವಿಲ್ಲ; ಯಾವಾಗ ನಾವು ವೈಚಾರಿಕ ಹಿಂದುತ್ವದಿಂದ ಕೃತಿಶೀಲ ಹಿಂದುತ್ವಕ್ಕೆ ಬರುತ್ತೇವೆಯೋ, ಆಗ ಮಾತ್ರ ಅಧರ್ಮಕ್ಕೆ ತಡೆ ಬೀಳುತ್ತದೆ ಎಂದು ಹೇಳಿದರು.

ದೈನಂದಿನ ಜೀವನದಲ್ಲಿ ಧರ್ಮಾಚರಣೆ ಅಳವಡಿಸಿಕೊಳ್ಳುವುದು ಕಾಲದ ಅವಶ್ಯಕತೆ – ಸೌ. ಸಂಗೀತ ಶಶಿಧರ್ ಆಚಾರ್ಯ, ಸನಾತನ ಸಂಸ್ಥೆ

ಸನಾತನ ಸಂಸ್ಥೆಯ ವಕ್ತಾರರಾದ ಸೌ. ಸಂಗೀತ ಶಶಿಧರ್ ಆಚಾರ್ಯ ಅವರು ಮಾತನಾಡಿ, “ಹಿಂದೂ ರಾಷ್ಟ್ರವು ಕೇವಲ ರಾಜಕೀಯ ಪರಿಕಲ್ಪನೆಯಲ್ಲ, ಇದು ಈಶ್ವರ ಸಂಕಲ್ಪಿತ ಅತ್ಯುತ್ತಮ ಸಾಮಾಜಿಕ ವ್ಯವಸ್ಥೆಯಾಗಿದೆ. ಇಂದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದಾಗಿ ನಮ್ಮ ಯುವ ಪೀಳಿಗೆಯು ಧರ್ಮಾಚರಣೆಯಿಂದ ದೂರವಾಗುತ್ತಿರುವುದು ವಿಷಾದನೀಯ. ಸನಾತನ ಧರ್ಮದ ಪ್ರತಿಯೊಂದು ಕೃತಿಯ ಹಿಂದೆ ಆಳವಾದ ವಿಜ್ಞಾನ ಮತ್ತು ಆಧ್ಯಾತ್ಮಿಕ ಸೂತ್ರಗಳಿವೆ. ನಮ್ಮ ಹೆಣ್ಣುಮಕ್ಕಳು ಲವ್ ಜಿಹಾದ್‌ನಂತಹ ಮೋಸದ ಬಲೆಗೆ ಬೀಳದಂತೆ ಅವರಿಗೆ ಧರ್ಮಶಿಕ್ಷಣ ನೀಡುವುದು ಮತ್ತು ಸದಾಚಾರದ ಜೀವನ ನಡೆಸುವುದೇ ಸಂಸ್ಕೃತಿಯ ರಕ್ಷಾಕವಚವಾಗಿದೆ” ಎಂದು ಕರೆ ನೀಡಿದರು.

ಧರ್ಮನಿಷ್ಠ ಜೀವನ ಮತ್ತು ಸದಾಚಾರವೇ ಸಂಸ್ಕೃತಿಯ ರಕ್ಷಾಕವಚ – ಶ್ರೀ. ಮಹೇಂದ್ರ ಕುಮಾರ ವೈಷ್ಣವ್, ರಾಜ್ಯ ಪ್ರಭಾರಿಗಳು, ಕರಪಾತ್ರಿ ಗೋ ಸಂಕ್ಷೇಮ ಸಂವರ್ಧನ ಸಮಿತಿ

ಕ್ಯಾತ್ಸಂದ್ರದ ಉದ್ಯೋಗಪತಿಗಳು ಹಾಗೂ ಕರಪಾತ್ರಿ ಗೋ ಸಂಕ್ಷೇಮ ಸಂವರ್ಧನ ಸಮಿತಿಯ ರಾಜ್ಯ ಪ್ರಭಾರಿಗಳಾದ ಶ್ರೀ. ಮಹೇಂದ್ರ ಕುಮಾರ್ ವೈಷ್ಣವ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, “ಧರ್ಮದ ಹಾದಿಯಲ್ಲಿ ನಡೆಯುವುದು ಮತ್ತು ಅದನ್ನು ಇತರರಿಗೆ ಪ್ರೇರೇಪಿಸುವುದು ನಮ್ಮ ಪರಮ ಕರ್ತವ್ಯವಾಗಿದೆ. ದೇಶಪ್ರೇಮ ಮತ್ತು ಶ್ರೇಷ್ಠ ನಾಯಕರು ನಮ್ಮ ಸಂಸ್ಕಾರದಿಂದಲೇ ಬೆಳೆಯಬೇಕು; ಕೇವಲ ಉಪದೇಶದಿಂದ ಧರ್ಮ ರಕ್ಷಣೆಯಾಗದು, ನಾವು ಧರ್ಮದಂತೆ ನಡೆದು ಇತರರಿಗೂ ಮಾದರಿಯಾಗಬೇಕು. ನಮ್ಮ ಪ್ರತಿಯೊಂದು ಕಾರ್ಯವು ಆತ್ಮೋದ್ಧಾರ ಮತ್ತು ಮೋಕ್ಷ ಪ್ರಾಪ್ತಿಯ ಉದ್ದೇಶವನ್ನು ಹೊಂದಿರಲಿ. ಸದಾಚಾರದಿಂದ ಮನುಷ್ಯ ಏನನ್ನಾದರೂ ಸಾಧಿಸಬಹುದು, ಆದ್ದರಿಂದ ನಾವು ಧರ್ಮದ ಹಾದಿಯನ್ನು ಎಂದಿಗೂ ಬಿಡಬಾರದು” ಎಂದು ಮಾರ್ಮಿಕವಾಗಿ ನುಡಿದರು.