ಆಂಗ್ಲರು ಮತ್ತು ದತ್ತು ಸ್ವೀಕರಿಸುವುದು !

ಈ ಮೊದಲು ತಾವು ಎಂದಾದರೂ ‘ನಂದ ಪಂಡಿತ’ ಎಂಬ ಹೆಸರನ್ನು ಕೇಳಿದ್ದೀರಾ ? ಇಲ್ಲವೆಂದರೆ, ಕಡಿಮೆಪಕ್ಷ ‘ದೇವಾನಂದ ಭಟ್’ ಎಂಬ ಹೆಸರನ್ನಾದರೂ ಕೇಳಿದ್ದೀರಾ ?ಇಲ್ಲವೇ ? ಈ ಇಬ್ಬರ ಪರಿಚಯವೇ ಇಲ್ಲವೆಂದಾದಲ್ಲಿ ಅವರು ರಚಿಸಿದ ಸುಪ್ರಸಿದ್ಧ ಗ್ರಂಥಗಳ ಬಗ್ಗೆ ತಮಗೆ ಹೇಗೆ ತಾನೇ ತಿಳಿದಿರಲು ಸಾಧ್ಯ ?

ನಂದ ಪಂಡಿತರು ರಚಿಸಿದ ಸುಪ್ರಸಿದ್ಧ ಗ್ರಂಥವೆಂದರೆ ‘ದತ್ತಕ ಮೀಮಾಂಸ’ ಮತ್ತು ದೇವಾನಂದ ಭಟ್ ಇವರು ರಚಿಸಿದ ಸುಪ್ರಸಿದ್ಧ ಗ್ರಂಥವೆಂದರೆ ‘ದತ್ತಕ ಚಂದ್ರಿಕಾ’. ಈ ಹೆಸರುಗಳಿಂದಲೇ ನಿಮಗೆ ಈ ಎರಡೂ ಸಂಸ್ಕೃತ ಗ್ರಂಥಗಳು ಹಿಂದೂ ಧರ್ಮದ ದತ್ತು ಸ್ವೀಕರಿಸುವ ವಿಧಿಗಳ ಬಗ್ಗೆ ಇವೆ ಎಂದು ಗಮನಕ್ಕೆ ಬಂದಿರಬಹುದು. ಇಷ್ಟೇ ಅಲ್ಲದೆ, ದತ್ತು ಪುತ್ರನನ್ನು ಏಕೆ ತೆಗೆದುಕೊಳ್ಳಬೇಕು ? ಯಾರು ತೆಗೆದುಕೊಳ್ಳಬೇಕು ? ಹೇಗೆ ತೆಗೆದುಕೊಳ್ಳಬೇಕು ? ಹೇಗೆ ತೆಗೆದುಕೊಳ್ಳಬಾರದು ? ದತ್ತು ಪುತ್ರನ ಕರ್ತವ್ಯಗಳು ಮತ್ತು ಅಧಿಕಾರಗಳೇನು ? ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿಯಿದೆ. ಇದರೊಂದಿಗೆ ‘ಶೌನಕಸಂಹಿತೆ’ ಮತ್ತು ‘ಭೃಗುಸಂಹಿತೆ’ ಮೊದಲಾದ ಗ್ರಂಥಗಳಲ್ಲಿ ದತ್ತು ಸ್ವೀಕರಿಸುವ ಪ್ರಕ್ರಿಯೆಯ ಬಗ್ಗೆ ಇರುವ ಅಭಿಪ್ರಾಯಗಳ ಬಗ್ಗೆಯೂ ಸವಿಸ್ತಾರವಾದ ಚರ್ಚೆಯಿದೆ.

೧. ದತ್ತು ಸ್ವೀಕರಿಸುವ ವಿಧಿಗಳಲ್ಲಿನ ವಿರೋಧಾಭಾಸವನ್ನು ಜೇಮ್ಸ್ ಚಾರ್ಲ್ಸ್ ಕೋಲಬ್ರೊಕ್ ಸದರ್ಲ್ಯಾಂಡ್ ಇವರು ಬಹಿರಂಗಪಡಿಸುವುದು

ನಮ್ಮಲ್ಲಿ ಈ ಗ್ರಂಥಗಳಲ್ಲಿನ ಜ್ಞಾನವು ಮೌಖಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ತಲೆಮಾರುಗಳಿಂದ ಬಂದಿತ್ತು ಮತ್ತು ಅದಕ್ಕನುಸಾರವೇ ದತ್ತು ಸ್ವೀಕರಿಸುವ ವಿಧಿಗಳು ನಡೆಯುತ್ತಿದ್ದವು; ಆದರೆ ಈ ಗ್ರಂಥಗಳ ಮೇಲೆ ಟೀಕೆಗಳನ್ನು ಬರೆಯುವವರು ಯಾರೂ ಇರಲಿಲ್ಲ. ಈ ಎರಡೂ ಗ್ರಂಥಗಳಲ್ಲಿರುವ ಮಾಹಿತಿ ಪರಸ್ಪರ ತಾಳೆಯಾಗುತ್ತದೆಯೇ ? ಧರ್ಮದಿಂದ ಹಿಂದೂಗಳೇ ಆದರೂ ಬೇರೆ ಬೇರೆ ಭೌಗೋಳಿಕ ಭಾಗಗಳಲ್ಲಿನ ಹಿಂದೂಗಳ ದತ್ತು ಸ್ವೀಕರಿಸುವ ಪದ್ಧತಿಗಳು ಒಂದೇ ಆಗಿದ್ದವೇ ? ವ್ಯತ್ಯಾಸಗಳು ಏನಿದ್ದವು ? ಎಂಬುದರ ಅಧ್ಯಯನ ಮಾಡುವ ಗೋಜಿಗೆ ಭಾರತೀಯರು ಎಂದಿಗೂ ಹೋಗಲೇ ಇಲ್ಲ. ಆ ಅಭ್ಯಾಸವನ್ನು ಒಬ್ಬ ಬ್ರಿಟಿಷನು ಮಾಡಿದನು ಮತ್ತು ಅದು ಕೂಡ ಸುಮಾರು ೧೮೧೯ ರ ಸುಮಾರಿಗೆ. ೧೮೨೧ ರಲ್ಲಿ ಆ ಸಂಶೋಧನಾ ಅಭ್ಯಾಸದ ಪುಸ್ತಕವನ್ನು ಅವನು ಅಂದಿನ ಕಲಕತ್ತಾದಲ್ಲಿ ಮುದ್ರಿಸಿದನು ಈ ಅಭ್ಯಾಸಿ ವ್ಯಕ್ತಿಯೇ ಜೇಮ್ಸ್ ಚಾರ್ಲ್ಸ್ ಕೋಲಬ್ರೊಕ್ ಸದರ್ಲ್ಯಾಂಡ್ ಆಗಿದ್ದನು !

ಶ್ರೀ. ಸಂಕೇತ ಕುಲಕರ್ಣಿ

ಆ ಸಮಯದಲ್ಲಿ ಬಂಗಾಳದ ಆಡಳಿತವನ್ನು ಈಸ್ಟ್ ಇಂಡಿಯಾ ಕಂಪನಿಯು ನೋಡಿಕೊಳ್ಳುತ್ತಿತ್ತು ಅವರ ರಾಜಧಾನಿಯಾಗಿದ್ದ ಕಲಕತ್ತಾದ ಸಿವಿಲ್ ನ್ಯಾಯಾಲಯದಲ್ಲಿ ಆಸ್ತಿಗೆ ಸಂಬಂಧಿಸಿದ ಅನೇಕ ವಿವಾದಗಳು ಮತ್ತು ಪ್ರಕರಣಗಳು ಬರುತ್ತಿದ್ದವು. ಇದರಲ್ಲಿ ಸದರ್ಲ್ಯಾಂಡ್‌ರಿಗೆ ಇದರಲ್ಲಿನ ಹೆಚ್ಚಿನ ವಿವಾದಗಳು ದತ್ತು ಸ್ವೀಕರಿಸುವ ಬಗ್ಗೆ ಇವೆ ಎಂದು ತಿಳಿಯಿತು. ಅವರು ಬಹಳಷ್ಟು ಸಂಶೋಧನೆ ನಡೆಸಿ, ಹಿಂದೂಗಳ ದತ್ತು ಸ್ವೀಕರಿಸುವ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡುವ ಕೇವಲ ೨ ಮುಖ್ಯ ಗ್ರಂಥಗಳಿವೆ ಎಂಬುದನ್ನು ಕಂಡುಕೊಂಡರು. ಆ ಎರಡೂ ಗ್ರಂಥಗಳನ್ನು ಅವರು ಪಡೆದುಕೊಂಡರು, ಓದಿದರು, ಅವುಗಳ ಟಿಪ್ಪಣಿಗಳನ್ನು ಸಿದ್ಧಪಡಿಸಿದರು. ನಂತರ, ಈ ಗ್ರಂಥಗಳು ಬಹುತೇಕ ಸಮಾನವಾಗಿದ್ದರೂ ಕೆಲವು ಸೂತ್ರಗಳು ಎರಡೂ ಗ್ರಂಥಗಳಲ್ಲಿ ಭಿನ್ನವಾಗಿವೆ ಎಂದು ಅವರಿಗೆ ತಿಳಿಯಿತು. ಉದಾಹರಣೆಗೆ ನಂದ ಪಂಡಿತರು, ‘ವಿಧವೆಗೆ ದತ್ತು ತೆಗೆದುಕೊಳ್ಳುವ ಅಧಿಕಾರವೇ ಇಲ್ಲ; ಏಕೆಂದರೆ ಸ್ತ್ರೀಯರಿಗೆ ಹೋಮ ಹವನಗಳ ಅಧಿಕಾರವೇ ಇಲ್ಲ’, ಎಂದು ಬರೆದಿದ್ದಾರೆ, ಆದರೆ ದೇವಾನಂದ ಭಟ್ಟರು, ‘ಪತಿಯ ಆಜ್ಞೆಗನುಸಾರ ವಿಧವೆಗೆ ದತ್ತಕ ಮಗುವನ್ನು ಪಡೆಯುವ ಅಧಿಕಾರವಿದೆ’, ಎಂದು ಬರೆಯುತ್ತಾರೆ. ಬಂಗಾಳ ಮತ್ತು ಕಾಶಿಯಲ್ಲಿ ಈ ಕಾಯಿದೆಯನ್ನು ಪಾಲಿಸಲಾಗುತ್ತಿತ್ತು ಇದಕ್ಕಿಂತ ಮುಂದೆ ಹೋಗಿ ವಸಿಷ್ಠ ಸಂಸ್ಮೃತಿಯ ಆಧಾರದ ಮೇಲೆ ಮಹಾರಾಷ್ಟ್ರದಲ್ಲಿ ಎಂತಹ ಪದ್ಧತಿಯಿತ್ತೆಂದರೆ, ಪತಿಯ ಆಜ್ಞೆ ಇಲ್ಲದಿದ್ದರೂ ಮೃತ ಪತಿಯ ಕುಟುಂಬದವರ ಅನುಮತಿಯಿಂದ ವಿಧವೆಯು ದತ್ತು ತೆಗೆದುಕೊಳ್ಳಬಹುದು. (ಅಂದರೆ ಮೃತ ಪತಿಯ ಕುಟುಂಬದವರ ಅನುಮತಿಯಿಂದ ಪಡೆದ ದತ್ತು ಸ್ವೀಕಾರ ಮಹಾರಾಷ್ಟ್ರದಲ್ಲಿ ಕಾನೂನುಬದ್ಧವಾಗಿದ್ದರೆ ಅದೇ ದತ್ತು ಸ್ವೀಕಾರ ರಜಪೂತರಲ್ಲಿ ಕಾನೂನುಬಾಹಿರವಾಗಿತ್ತು; ಏಕೆಂದರೆ ಅಲ್ಲಿ ವಿಧವೆಯರಿಗೆ ದತ್ತು ಪಡೆಯುವ ಅಧಿಕಾರವೇ ಇರಲಿಲ್ಲ !)

೨. ದತ್ತು ಸ್ವೀಕಾರವನ್ನು ಅಮಾನ್ಯಗೊಳಿಸಲು ಕಾರಣಗಳು

ಇದೆಲ್ಲವನ್ನೂ ಓದಿದ ನಂತರ ಸದರ್ಲ್ಯಾಂಡ್‌ರಿಗೆ ಗಮನಕ್ಕೆ ಬಂದ ಅಂಶವೆಂದರೆ, ಈ ದತ್ತು ನಿಯಮಗಳಲ್ಲಿ ಎಲ್ಲಿಯೂ ಒಮ್ಮತವಿಲ್ಲ ಮತ್ತು ಇದರ ಸಂಪೂರ್ಣ ಲಾಭವನ್ನು ಈಸ್ಟ್ ಇಂಡಿಯಾ ಕಂಪನಿ ಪಡೆಯಬಹುದು; ಏಕೆಂದರೆ ದತ್ತು ಸ್ವೀಕಾರವನ್ನು ನಿರಾಕರಿಸಿದರೆ ಆಸ್ತಿ ಅಥವಾ ಅದರ ಸ್ವಲ್ಪ ಭಾಗವು ಸರಕಾರಕ್ಕೆ ಸೇರುತ್ತದೆ ಎಂಬುದು ಸರಳ ನಿಯಮವಾಗಿತ್ತು ದತ್ತು ಸ್ವೀಕಾರವನ್ನು ಅಮಾನ್ಯಗೊಳಿಸಲು ಯಾವೆಲ್ಲ ವಿಭಿನ್ನ ಕಾರಣಗಳಿರಬಹುದು ಎಂಬುದರ ಸಂಪೂರ್ಣ ಪಟ್ಟಿಯನ್ನೇ ಅವರು ಈ ೨ ಗ್ರಂಥಗಳಿಂದ ಹುಡುಕಿದರು.

೩ ಆಂಗ್ಲರು ಭಾರತದ ಅನೇಕ ಸಂಸ್ಥಾನಗಳನ್ನು ವಶಪಡಿಸಿಕೊಳ್ಳುವುದು

ಮುಂದೆ ಬ್ರಿಟಿಷರು ‘ದತ್ತು ಸ್ವೀಕಾರ ನಿರಾಕರಣೆ’ ಎಂಬ ‘ಶಸ್ತ್ರ’ವನ್ನು ಎಲ್ಲೆಡೆ ಬಳಸಿ ಅನೇಕ ಸಂಸ್ಥಾನಗಳನ್ನು ಮತ್ತು ಸಂಸ್ಥಾನಿಕರನ್ನು ವಶಪಡಿಸಿಕೊಂಡರು. ಈ ಪ್ರಕರಣಗಳು ಸಿವಿಲ್ ನ್ಯಾಯಾಲಯಕ್ಕೆ ಬಂದಾಗ ಕಂಪನಿ ಸರಕಾರದ ನ್ಯಾಯವಾದಿಗಳ ಬಳಿ ಹಿಂದೂಗಳ ದತ್ತು ನಿಯಮಗಳ ಬಗ್ಗೆ ಸರಿಯಾದ ಮತ್ತು ನಿಖರವಾದ ಮಾಹಿತಿ ಇರುತ್ತಿತ್ತು; ಆದರೆ ಈ ಅಧ್ಯಯನದ ನಿಜವಾದ ಪ್ರವರ್ತಕನೆಂದರೆ ಈ ಗ್ರಂಥಗಳ ಬಗ್ಗೆ ಅತ್ಯಂತ ಆಳವಾದ ಮತ್ತು ತುಲನಾತ್ಮಕ ಅಧ್ಯಯನ ಮಾಡಿದ ಸದರ್ಲ್ಯಾಂಡ್. ಅವನು ೧೮೨೧ ರಲ್ಲಿ ಬರೆದ ಪುಸ್ತಕದ ಪ್ರತಿಯನ್ನು ಬ್ರಿಟಿಷ್ ಲೈಬ್ರರಿಯಲ್ಲಿ ಇಂದಿಗೂ ಸಂರಕ್ಷಿಸಿಡಲಾಗಿದೆ

– ಶ್ರೀ. ಸಂಕೇತ ಕುಲಕರ್ಣಿ, ಲಂಡನ್