‘ಭಾರತವು ಔಷಧಗಳ ಪೆಟ್ಟಿಗೆಯಲ್ಲಿ ಅಫ್ಘಾನಿಸ್ತಾನಕ್ಕೆ ಡ್ರೋನ್‌ಗಳನ್ನು ಕಳುಹಿಸಿದೆ!’(ಯಂತೆ)

ಅಫ್ಘಾನಿಸ್ತಾನವು ಪಾಕ್‌ನಲ್ಲಿನ ‘ಇಸ್ಲಾಮಿಕ್ ಸ್ಟೇಟ್’ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ ಪಾಕ್ ರಕ್ಷಣಾ ಸಚಿವರ ಆರೋಪ

ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್

ಇಸ್ಲಾಮಾಬಾದ್ (ಪಾಕಿಸ್ತಾನ) – ಕಳೆದ ವಾರ ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದ ಸೇನೆಯು ಪಾಕಿಸ್ತಾನದ ೨ ಪ್ರಾಂತ್ಯಗಳಲ್ಲಿನ ಇಸ್ಲಾಮಿಕ್ ಸ್ಟೇಟ್ ನೆಲೆಗಳ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿತ್ತು. ಈ ಯಶಸ್ವಿ ಡ್ರೋನ್ ದಾಳಿಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜನರು, ಭಾರತವು ಅಫ್ಘಾನಿಸ್ತಾನಕ್ಕೆ ಔಷಧಗಳ ಪೆಟ್ಟಿಗೆಯಲ್ಲಿ ಡ್ರೋನ್‌ಗಳನ್ನು ಇಟ್ಟು ಕಳುಹಿಸಿದೆ ಮತ್ತು ನಂತರ ಅವುಗಳನ್ನು ಪಾಕಿಸ್ತಾನದ ವಿರುದ್ಧ ಬಳಸಲಾಗಿದೆ ಎಂದು ಹೇಳುತ್ತಿದ್ದಾರೆ. ಈ ಕುರಿತು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರಿಗೆ ಪತ್ರಕರ್ತ ಅಬ್ಸಾರ್ ಆಲಂ ಅವರು ಕಾರ್ಯಕ್ರಮವೊಂದರಲ್ಲಿ ಪ್ರಶ್ನೆ ಕೇಳಿದಾಗ, “ಇದರಲ್ಲಿ ೧೦೦ ಪ್ರತಿಶತ ಸತ್ಯ ಇರಬಹುದು. ನನಗಂತೂ ಇದರಲ್ಲಿ ಯಾವುದೇ ಸಂಶಯವಿಲ್ಲ. ಅವರು (ಭಾರತ) ರಹಸ್ಯವಾಗಿಯಲ್ಲ, ಬದಲಿಗೆ ಬಹಿರಂಗವಾಗಿಯೇ ಅಫ್ಘಾನಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿರಬಹುದು ಎಂದು ನಾನು ಹೇಳುತ್ತೇನೆ” ಎಂದಿದ್ದಾರೆ.

ಕಳೆದ ವಾರ ಭಾರತವು ಅಫ್ಘಾನಿಸ್ತಾನಕ್ಕೆ ೫ ಟನ್ ಔಷಧಗಳನ್ನು ಕಳುಹಿಸಿದೆ. ಇದರಲ್ಲಿ ಹೊಸದೇನೂ ಇಲ್ಲ; ಏಕೆಂದರೆ ಭಾರತವು ಮಾನವೀಯ ಸಹಾಯದ ಭಾಗವಾಗಿ ಅಫ್ಘಾನಿಸ್ತಾನಕ್ಕೆ ಅಗತ್ಯವಿರುವ ಔಷಧಗಳನ್ನು ಕಳುಹಿಸುತ್ತಲೇ ಇರುತ್ತದೆ. ಇದೇ ಸರಣಿಯ ಭಾಗವಾಗಿ ಕಳೆದ ವಾರವೂ ಔಷಧಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿತ್ತು. ಭಾರತವು ಅಫ್ಘಾನಿಸ್ತಾನಕ್ಕೆ ಔಷಧಗಳನ್ನು ಕಳುಹಿಸಿದ ಮರುದಿನವೇ ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವಾ ಮತ್ತು ಬಲೂಚಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿಗಳನ್ನು ನಡೆಸಲಾಯಿತು. ಇದನ್ನೇ ನೆಪವಾಗಿಟ್ಟುಕೊಂಡು ಪಾಕಿಸ್ತಾನವು ಔಷಧ ಕಳುಹಿಸಿರುವುದಕ್ಕೂ ಮತ್ತು ಡ್ರೋನ್ ದಾಳಿಗೂ ನಂಟು ಕಲ್ಪಿಸಿದೆ.

ಸಂಪಾದಕೀಯ ನಿಲುವು

  • ಕಳೆದ ೩೫ ವರ್ಷಗಳಿಂದ ಭಾರತಕ್ಕೆ ಉಗ್ರರು, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಕಳುಹಿಸಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ಲಕ್ಷಾಂತರ ಜನರ ಪ್ರಾಣವನ್ನು ಬಲಿಪಡೆದ ಪಾಕಿಸ್ತಾನವು ಭಾರತದ ಮೇಲೆ ಇಂತಹ ಆರೋಪ ಮಾಡುವುದು ಹಾಸ್ಯಾಸ್ಪದವೇ ಸರಿ!
  • ಒಂದು ವೇಳೆ ಭಾರತವೇ ಡ್ರೋನ್‌ಗಳನ್ನು ಕಳುಹಿಸಿದ್ದು, ಅದರ ಬಳಕೆ ಇಸ್ಲಾಮಿಕ್ ಸ್ಟೇಟ್‌ನ ಉಗ್ರರ ವಿರುದ್ಧ ಆಗುತ್ತಿದ್ದರೆ, ಅದರಲ್ಲಿ ತಪ್ಪೇನಿದೆ?